ಅಂಕಣ

ನೆಲಸಂಪಿಗೆ

(ನಾಲ್ಕನೇ ಕಂತು)

ನಮ್ಮ ನಡುವಿನ  ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು  ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ

ಉಮ್ಮಲ್ತಿ – ಬೊಬ್ಬರ್ಯ ನಡೆದಾಡಿದ ಜಾಗದಲ್ಲಿ

**

ʼಮೊದಲನೆಯ ಕಂತಿನಲ್ಲಿ ಪ್ರಸ್ತಾಪಿಸಿದ ನಿಮ್ಮ ಹಳ್ಳಿಯ ಜನಜೀವನ ಮತ್ತು ಕಾಡಿನ ಅನುಭವಗಳನ್ನು ಮುಂದುವರಿಸಿ ಬರೆಯಿರಿʼ ಎಂದು ಹೆಚ್ಚಿನ ಓದುಗರು ಸೂಚಿಸಿದ್ದರಿಂದ ಈ ಸಲ ಆ ಪ್ರಯತ್ನ.

ನಮ್ಮನೆಯಿಂದ ಎರಡನೇ ಹೆಜ್ಜೆಯೇ ಗದ್ದೆ- ಉದ್ದಾನುದ್ದಕ್ಕೆ ಹರಡಿಕೊಂಡ ದೊಡ್ಡದಾದ ಗದ್ದೆಬಯಲು. ಇದನ್ನೇ ‘ಮುದೂರಿ ಬೈಲ್’ ಎಂದು ಕರೆಯುತ್ತೇವೆ. ಗದ್ದೆಗಳ ತುದಿಯಲ್ಲಿ ಹಬ್ಬಿ ಹರಿಯುವ ತೋಡು, ಅಲ್ಲಿಂದ ಮೇಲ್ಭಾಗದಲ್ಲಿ ಕಾಡುಗಳು. ಕಾಡಿನಲ್ಲಿ ಓಡಾಡುವುದು, ಆಡುವುದೆಂದರೆ ಮನೆ ಅಂಗಳದಂತೆಯೇ ಸಲೀಸು. ಏಳನೇ ಕ್ಲಾಸಿಗೆ ಹೋಗುವಲ್ಲಿಯವರೆಗೂ ಕಾಲಿಗೆ ಚಪ್ಪಲಿ ಹಾಕದೆ ತಿರುಗಾಡುತ್ತಿದ್ದೆವು. ಕಾಡಿಗೆ ಹೋಗುವಾಗ ಕೂಡಾ ಮೆಟ್ಟು ಹಾಕುತ್ತಿರಲಿಲ್ಲ. ಆಗ ಎಲ್ಲರೂ ಹಾಗೇ. ನಿಜವೆಂದರೆ ಮೆಟ್ಟು ಹಾಕಿಕೊಂಡು ಶಾಲೆಗೆ ಹೋಗಲು ಮುಜುಗರ, ನಾಚಿಕೆಯಾಗುತ್ತಿತ್ತು! ನಡುನಡುವೆ ಒಂದೊಂದು ದಿನ ತೊಟ್ಟು ಹೋಗಿ ಕಳಚಿಟ್ಟು, ತಿಂಗಳಾನುಗಟ್ಟಲೆ ಮುಟ್ಟದೆ ಕೊನೆಗೆ ಹೈಸ್ಕೂಲಿಗೆ ಹೋಗುವಾಗ ಒತ್ತಾಯಪೂರ್ವಕವಾಗಿ ಈ ಅಭ್ಯಾಸವನ್ನು ರೂಢಿಸಿಕೊಂಡೆ! ಹೀಗಾಗಿಯೋ ಏನೋ ಇವತ್ತಿಗೂ ಇಡೀ ಕಾಲು ಮುಚ್ಚುವ ಚಪ್ಪಲಿ ಮತ್ತು ಶೂ; ಬೆಲ್ಟ್ ಇರುವ ಅಥವಾ ಹೈಹೀಲ್ಡ್ ಚಪ್ಪಲಿ, ಫ್ಯಾಷನೇಬಲ್-ನಾಜೂಕಾಗಿರುವ ಮೆಟ್ಟುಗಳನ್ನು ಧರಿಸಲಾಗುವುದೇ ಇಲ್ಲ. ನನ್ನ ಪಾದವನ್ನು ಕಂಡರೆ ಚಪ್ಪಲಿಗಳಿಗೂ ಅದೇನೋ ದ್ವೇಷ(ಪ್ರೀತಿ?). ಕಾಲು ಕಚ್ಚಿ ಗಾಯ, ಕಲೆ ಮಾಡಿ ಇಡುತ್ತವೆ!

ಚಪ್ಪಲಿ ಹಾಕದೆ ಹಾಡಿ-ಹಕ್ಕಲುಗಳಲ್ಲಿ ಓಡಾಡುವುದು, ನೆಗೆಯುವುದು, ದರೆ-ಗುಡ್ಡಗಳನ್ನು ಹತ್ತಿಳಿಯುವುದು, ಹೂ ಹಣ್ಣು ಕೊಯ್ಯಲು ಮರ ಹತ್ತುವುದು, ಬೇಲಿ, ಅಗಳು(ಸಣ್ಣ ಕಂದಕ) ಹಾರುವುದು… ಬೀಳುವುದು, ಏಳುವುದು! ಆಗ ನಮ್ಮನ್ನು ಕಂಡವರು ‘ಮಂಗನಿಂದ ಮಾನವ’ ಅನ್ನುವುದಕ್ಕಿಂತಲೂ ‘ಮಾನವನಿಂದ ಮಂಗ’ ಎನ್ನುವುದೇ ಸರಿಯೆಂದು ತೀರ್ಮಾನ ಕೊಡುತ್ತಿದ್ದುದು ಗ್ಯಾರಂಟಿ. ಏನಾದರೇನು, ಒಮ್ಮೊಮ್ಮೆ ಜಾಗ್ರತೆ ತಪ್ಪಿ ಬಿದ್ದು ಗಾಯ ಮಾಡಿಕೊಂಡು ಅಳುತ್ತಿದ್ದುದೂ ಉಂಟು. ಆದರೆ ಜೋರಾಗಿ ಅಳದೆ ಬಾಯಿ ಒತ್ತಿ ಹಿಡಿದುಕೊಂಡು ರಕ್ತ ಸುರಿಯುತ್ತಿದ್ದರೂ ಮನೆಯವರಿಗೆ ಹೇಳದೇ ಚೆನ್ನಾಗಿ ತೊಳೆದುಕೊಂಡು ಗುಟ್ಟು ಗುಟ್ಟಿನಲ್ಲಿ ನಾವು ಮಕ್ಕಳೇ ಮ್ಯಾನೇಜ್ ಮಾಡುತ್ತಿದ್ದುದೇ ಹೆಚ್ಚು! ಹಿರಿಯರಿಗೆ ತಿಳಿದರೆ ಕೋಲು ಕೈಗೆ ಬರುತ್ತದೆಂದು ಗೊತ್ತಿತ್ತು. ಆಗ ಮಾಡುತ್ತಿದ್ದ ಔಷಧವೆಂದರೆ ಕಾಫಿಪುಡಿ ಅಥವಾ ತೆಂಗಿನ ಸಸಿಯ ಎಳೆ ಗರಿಗಳ ಹೊರಭಾಗದಲ್ಲಿ ಅಂಟಿಕೊಂಡಿರುವ ಒಂದು ಬಗೆಯ ಪುಡಿ. ಅದನ್ನು ಕೆರೆಸಿ ತೆಗೆದು ಗಾಯಕ್ಕೆ ಹಚ್ಚಿದರೆ ಕೂಡಲೇ ರಕ್ತ ಕಟ್ಟಿಹೋಗಿ ಗುಣವಾಗುತ್ತದೆ ಎಂದು ಕಂಡುಕೊಂಡಿದ್ದೆವು! ಅಂಗಾಲಿಗೆ ಮುಳ್ಳು ಹೆಟ್ಟುತ್ತಿದ್ದುದಂತೂ ಮಾಮೂಲಿ. ಅದೆಷ್ಟು ಮುಳ್ಳುಗಳು ನಮ್ಮಂಥಾ ಮಕ್ಕಳ ಕಾಲಿಗೆ ಹೆಟ್ಟಿ, ಗೆಲುವಿನ ನಗೆ ಬೀರಿದವೋ ಏನೋ! ಆದರೆ ನಾವೇನೂ ಕಮ್ಮಿಯವರಲ್ಲ; ಮುಳ್ಳೆಂಬ ಮುಳ್ಳೇ ಭಯಪಡುವಂತೆ ಏನೇನೋ ಪೀಕಲಾಟ ಮಾಡಿ ಪಿನ್ನು, ಸೂಜಿಯಲ್ಲಿ ಕುತ್ತಿ ಹೊರತೆಗೆದು ‘ಹೋಗಾಚೆ’ ಎಂದು ಆ ಪುಟಾಣಿಗೆ ಚಾಳಿಸಿ ದೂರ ಎಸೆಯುತ್ತಿದ್ದೆವು. ನಮ್ಮ ಪ್ರಯತ್ನಗಳೆಲ್ಲ ಕೈಮೀರಿ, ಮುಳ್ಳು ಹೊರಬರಲು ಒಪ್ಪದೇ ಮೊಂಡು ಹಿಡಿದು ಒಳಗೇ ಕುಳಿತು ದೊಡ್ಡ ನೋವಾಗಿ ಹಾರಿ ಹಾರಿ ನಡೆಯುವಾಗ ಮನೆಯವರಿಗೆ ತಾನಾಗೇ ವಿಷಯ ತಿಳಿದು ‘ಹುಣ್ಸಿ ಅಡ್ರ್’ ಬೆನ್ನಿನ ಮೇಲೆ ಕುಣಿಯುತ್ತಿತ್ತು! “ಇವತ್ತ್ ನಾನ್ ಬೆನ್ನಿಗೆ ಹಾಳಿ ಕಟ್ಕಣ್ಕ್” ಎಂದು ಹೊಡೆತದ ತೀವ್ರತೆಯನ್ನು ವರ್ಣಿಸುತ್ತಾ ಸಮಾಧಾನ ಮಾಡಿಕೊಳ್ಳುತ್ತಿದ್ದೆವು! ಹೀಗೆ ಅನೇಕ ಸಲ ಮುಳ್ಳು ಹೆಟ್ಟಿ ವಿಷಯ ‘ಪಬ್ಲಿಕ್’ ಆಗಿತ್ತು. ಆಗೆಲ್ಲ ಅಮ್ಮಮ್ಮ, ಅಮ್ಮನಿಗೆ ಬಹಳ ಸಿಟ್ಟು ಬರುತ್ತಿತ್ತು. ಎಷ್ಟು ಹೇಳಿದರೂ ಕೇಳದೇ ‘ಕೊಣಿಯುದ್’ ಬಿಡುದಿಲ್ಲ ಅಲ್ವಾ ಈ ಮಕ್ಕಳು ಅಂತ ಸರಿಯಾಗಿ ‘ಪೂಜೆ’ ಮಾಡುತ್ತಿದ್ದರು. ರಾತ್ರಿ ಊಟವಾದ ಮೇಲೆ ಎಳೆದುಕೊಂಡು ಹೋಗಿ ಅಡುಗೆ ಮನೆಯ ಒಲೆಯೆದುರು ಕೂರಿಸುತ್ತಿದ್ದರು. ಉಳಿದ ಹುಳಿ ಅಥವಾ ಹುರುಳಿ ಸಾರು ಏನನ್ನಾದರೂ ಕುದಿಸುತ್ತ ನಿಗಿನಿಗಿಯೆನ್ನುವ ಒಲೆ ಅಡುಗೆಮನೆಯನ್ನು ಬೆಚ್ಚಗಿಟ್ಟಿರುತ್ತಿತ್ತು. ದೊಡ್ಡಬೆಕ್ಕು ಮತ್ತದರ ಮರಿಗಳು ಒಲೆಯ ಸುತ್ತಮುತ್ತ ಮುರುಟಿ ಮಲಗಿ ಆಕಳಿಸುತ್ತಿರುತ್ತಿದ್ದವು. ಹೊಗೆ ಹಿಡಿದು ಕಪ್ಪಾದ ಬಿಸ್ಕಲ್ ಹಲಗೆ, ಅದರ ಮೇಲಿನ ಡಬ್ಬಗಳು, ಕೋಡೊಲೆ ಎಲ್ಲವನ್ನೂ ದಿಟ್ಟಿಸುತ್ತ ಕುಳಿತಾಗ ಅಮ್ಮ ಸುಣ್ಣದ ಕರಡಿಗೆ ಹಿಡಿದು ಬಂದು ಮುಳ್ಳಿನ ಜಾಗ ತೋರಿಸಲು ಹೇಳಿ ಗೊಣ ಗೊಣ ಎನ್ನುತ್ತ ಸುಣ್ಣ ಹಚ್ಚುತ್ತಿದ್ದರು. ಗಾಯದ ಬಾಯಿಯನ್ನು ಬಿಟ್ಟು ಸುತ್ತಲೂ ಸುಣ್ಣ ಹಚ್ಚಬೇಕು. ಬೆರಳನ್ನು ಸುತ್ತು ಬರಿಸಿ ಲೇಪಿಸಬಾರದು. ಹಾಗೆ ಮಾಡಿದರೆ ಸುತ್ತು ಬರಿಸಿದಷ್ಟೂ ಜಾಗಕ್ಕೆ ಗಾಯ ಹರಡಿ ದೊಡ್ಡದಾಗುತ್ತದಂತೆ! ಯಾವ ಗಾಯವಾದರೂ ಹೀಗೇ; ಸುಣ್ಣ, ಸೊಪ್ಪಿನ ರಸ, ತೈಲ, ಮುಲಾಮು ಏನನ್ನೇ ಹಚ್ಚುವಾಗಲೂ ಸುತ್ತು ಬರಿಸುವಂತಿಲ್ಲ ಮತ್ತು ಗಾಯದ ಬಾಯಿ ಮುಚ್ಚಿ ಹೋಗುವಂತಿಲ್ಲ. ಸುಣ್ಣ ಹಚ್ಚಿಯಾದ ಮೇಲೆ ಪಾದವನ್ನು ಬಿಸಿ ಬಿಸಿ ಕಾಯುತ್ತಿರುವ ಒಲೆದಂಡೆಯ ಮೇಲಿಡಬೇಕು. ಮೊದಲಿಗೆ ‘ಚುಂಯ್ಕ’ ಎಂಬ ಅನುಭವ, ಹಿಂಜರಿಕೆ! ಅಮ್ಮಾ, ಅಬ್ಬಾ ಎಂದು ಉದ್ಗರಿಸುತ್ತ, ನಿಧಾನಕ್ಕೆ ಒಲೆದಂಡೆಯ ಬಿಸಿಗೆ ಕಾಲು ಹೊಂದಿಕೊಂಡಂತೆ ಖುಷಿಯ ನೋವು! ಒಂದು ಕಡೆ ಬಿಸಿಯ ಹಿತ, ಇನ್ನೊಂದೆಡೆ ಗಾಯದ ನೋವನ್ನು ಒಲೆಯೊಳಗಿನ ಕೆಂಡಗಳು ಹೀರಿ ತೆಗೆದ ಅನಿಸಿಕೆ. ಅಂತೂ ಸುಮಾರು ಹೊತ್ತು ಕಾಲನ್ನು ಹೀಗೆ ಒಲೆದಂಡೆಯ ಮೇಲೆ ಇಟ್ಟು, ತೆಗೆದು ಮಾಡಿ ಸಾಕಷ್ಟು ಶಾಖ ತಾಗಿದ ಮೇಲೆ ಕುಂಟುತ್ತಾ ನಡೆದು ಹಾಸಿಗೆಗೆ ಹೋಗಿ ಮುಚ್ಹಾಕಿಕೊಂಡು ಮಲಗುವುದು. ನೋವಿಗೆ ಜ್ವರವೂ ಬಂದಿದ್ದರೆ, ಹಣೆ ಮುಟ್ಟಿ ನೋಡಿ ಮೆಣಸಿನ ಕಾಳಿನ ಕಷಾಯ ಮಾಡಿಕೊಟ್ಟು, “ಕುಡಿ, ಗುಣ ಆತ್ತ್” ಎಂದು ಅಮ್ಮ ಉಪಚಾರ ಮಾಡುತ್ತಿದ್ದರು. ಅಮ್ಮನ ಸ್ಪರ್ಶ ಸುಖಕ್ಕಾಗಿಯಾದರೂ ‘ನಾಲ್ಕು ದಿನ ಜ್ವರ ಬರಲಿ ದೇವರೇ’ ಎಂದು ಬೇಡಿಕೊಳ್ಳುತ್ತಿದ್ದೆ! ಹೀಗೆ ಐದಾರು ರಾತ್ರಿ ಒಲೆ ದಂಡೆಯ ಆವರ್ತನವಾದ ನಂತರ ಗಾಯ ಹಣ್ಣಾಗಿ ಮುಳ್ಳು ತೆಗೆಯಲು ಸುಲಭವಾಗುತ್ತದೆ. ಈ ನಡುವೆ ಹಗಲು ಹೊತ್ತಿನಲ್ಲಿ ತೋಟಕ್ಕೆ ಹೋಗಿ ಹಳದಿ ಹೂ ಬಿಡುವ ‘ಕಡ್ಲಂಗಡ್ಲೆ’ ಸೊಪ್ಪನ್ನು ತಂದು, ರಸ ತೆಗೆದು ಹಚ್ಚುತ್ತಿದ್ದರು ಅಮ್ಮ. ಇಷ್ಟೆಲ್ಲಾ ಆದ ಮೇಲೆ ದೊಡ್ಡ ದಬ್ಬಣದಂಥಾ ಸೂಜಿಯಿಂದ ಗಾಯ ಬಿಡಿಸಿ ಮುಳ್ಳು ತೆಗೆಯುವುದು. ನಾನಂತೂ ಗಾಯವನ್ನು ಮುಟ್ಟುವ ಮೊದಲೇ ಹೆದರಿಕೆಯಿಂದ ಏಂಕಿ ಏಂಕಿ ಮರ್ಕಿ (ಮರ್ಕು-ಅಳು) ಒಂದೆರಡು ಗುದ್ದೂ ತಿನ್ನುತ್ತಿದ್ದೆ. ಅಂತೂ ನನ್ನ ಎಲ್ಲಾ ರಗಳೆಯನ್ನು ಸಹಿಸಿಕೊಂಡು ಅಮ್ಮ ಮುಳ್ಳು ತೆಗೆಯುತ್ತಿದ್ದರು. ಒಂದು ವೇಳೆ ಅಮ್ಮನಿಗೆ ಆಗದಿದ್ದರೆ ನೆರೆಮನೆಯ ಕರ್ಕುಹಾಂಡ್ತಿ ಅಥವಾ ಕಂಬಳಗದ್ದೆ ಮನೆಯ ಶೇಷಿಬಾಯಿ, ಅಕ್ಕುಬಾಯಿ ಯಾರಾದರೂ ಬಂದು ಮುಳ್ಳು ತೆಗೆದು ಉಪಕಾರ ಮಾಡುತ್ತಿದ್ದರು. ಆರನೇ ಕ್ಲಾಸಿನಲ್ಲಿದ್ದಾಗ ಹೀಗೊಮ್ಮೆ ಗರ್ಚನ ಹಣ್ಣು (ಕರಂಡೆ) ಕೊಯ್ಯಲು ಹೋಗಿ ಅದರ ಬಲವಾದ ಮುಳ್ಳು ಕಾಲಿಗೆ ಹೆಟ್ಟಿ ತಿಂಗಳ ಕಾಲ ಹಾಸಿಗೆ ಹಿಡಿಯುವಂತಾಗಿತ್ತು. ಏನೇ ಪ್ರಯತ್ನಪಟ್ಟರೂ ಮುಳ್ಳು ಹೊರಬರದೆ ಬಾವು ದೊಡ್ಡದಾಗಿ ರಶಿಗೆ(ಕೀವು) ತುಂಬಿಕೊಂಡು ಕಡೆಗೆ ಕಂಬಳಗದ್ದೆಯ ಶೇಷಿಬಾಯಿ ಬಂದು ಚಾಕಚಕ್ಯತೆಯಿಂದ ಹೇಗೋ ಮುಳ್ಳು ತೆಗೆದಿದ್ದರು. ಆಗ ಒಂದು ಲೋಟದಷ್ಟು ರಶಿಗೆಯ ಜೊತೆಗೆ ದೊಡ್ಡದೊಂದು ಕಳ್ಳ ಮುಳ್ಳು ಹೊರಬಂದಿತ್ತು! ನಾನು ಅತ್ತು ಕರೆದು ಗೋಳಾಡಿದ್ದು ಸ್ವಲ್ಪವಲ್ಲ; ಅಂಗಾಲಲ್ಲಿ ದೊಡ್ಡದೊಂದು ಗಾಯವೇ ಆಗಿಹೋಗಿತ್ತು. ಆಗ ಇನ್ನು ಇಂಥಾ ಮುಳ್ಳಿನ ತಳ್ಳಿ(ಸಹವಾಸ) ಬೇಡವೆಂದು ತೀರ್ಮಾನಿಸಿ ಖಾಯಂ ಆಗಿ ಮೆಟ್ಟುಹಾಕಿಕೊಳ್ಳಲು ಪ್ರಯತ್ನಿಸಿ ಸಫಲಳಾದೆ!

     ಮೆಟ್ಟು ಧರಿಸಿ ಗದ್ದೆ ಕಂಟದಲ್ಲಿ ನಡೆಯುವುದೂ ಕಷ್ಟವೇ. ಸ್ವಲ್ಪ ಆಚೀಚೆಯಾದರೂ ಕೆಸರು ಗದ್ದೆಗೆ ಬೀಳಬೇಕಾಗುತ್ತದೆ. ಹಾಗೊಮ್ಮೆ ಅಂಚಿನ ಮೇಲೆ ಪೇರಿಸಿದ್ದ ನಾಟಿ ಮಾಡುವ ಬತ್ತದ ಸಸಿಯ ಸೂಡಿಗಳ ರಾಶಿಯ ಮೇಲೆ ಕಾಲಿಡುವುದನ್ನು ತಪ್ಪಿಸಲು ಹೋಗಿ ಬದಿ ಬದಿಗೆ ಕಾಲಿಟ್ಟು ಧಡಾರನೆ ಕೆಸರು ಗದ್ದೆಗೆ ಬಿದ್ದಿದ್ದೆ! ಅಂಗಿ, ಚೀಲ ಎಲ್ಲವೂ ಕೆಸರುಮಯ. ಎಂಟನೆ ಕ್ಲಾಸಿನ ನಾನು ಆವತ್ತು ಅಪ್ಪಯ್ಯ ತಂದುಕೊಟ್ಟ ಹಳದಿ ಬಣ್ಣದ ಮಿಡಿ ಹಾಕಿಕೊಂಡಿದ್ದೆ. ಏನು ಮಾಡುವುದೆಂದೇ ತೋಚದೇ ಕಣ್ಣೀರು ಬಂದಿತ್ತು. ಜೊತೆಯಲ್ಲಿದ್ದ ಇಬ್ಬರು ಗೆಳತಿಯರು ತೋಡಲ್ಲಿ ಚೆನ್ನಾಗಿ ತೊಳೆದು ಶಾಲೆಗೆ ಹೋಗೋಣವೆಂದರು. ಹೌದು, ಮರಳಿ ಮನೆಗೆ ಹೋಗಿ ಜಾಗ್ರತೆ ತಪ್ಪಿ ʼಗೋಂಸ್ರ್ ಗ್ಯದ್ದಿಗೆʼ ಬಿದ್ದೆ ಎನ್ನುವ ಧೈರ್ಯವಾಗಲೀ, ಇತ್ತ ಹೇಳದೇ ಕೇಳದೆ ಶಾಲೆಗೆ ರಜೆ ಮಾಡುವ ಗಟ್ಟಿತನವಾಗಲಿ ಇರಲಿಲ್ಲ. ಅರ್ಧಂಬರ್ಧ ಕೆಸರನ್ನು ತೋಡಿನ ನೀರಿನಲ್ಲಿ ತೊಳೆದುಕೊಂಡು, ಒಂದು ಬಸ್ಸು ತಪ್ಪಿಸಿಕೊಂಡು ಹೇಗೋ ಶಾಲೆಗೆ ತಲುಪಿದ್ದಾಯಿತು. ಜಡಿ ಮಳೆ ಸುರಿಯುತ್ತಿದ್ದ ಆ ದಿನವಿಡೀ ಒಂದು ಕಡೆ ಚಳಿ, ಅದಕ್ಕಿಂತ ಹೆಚ್ಚಾಗಿ ಕೆಸರು- ಚಂಡಿಮಯವಾದ ನನ್ನ ಅಂಗಿಯನ್ನು ಕಂಡು ಯಾರು ನಗುತ್ತಿದ್ದಾರೋ ಎಂಬ ತಳಮಳ! ಯಾರೊಂದಿಗೂ ಮಾತಾಡದೆ, ತಲೆಯೆತ್ತಿ ನೋಡದೆ ಹೇಗೋ ಆ ದಿನವನ್ನು ಕಳೆದೆ!

      ಇನ್ನೊಮ್ಮೆ ಅಮ್ಮನ ಹೊಸಾ ಮೆಟ್ಟನ್ನು ಆಸೆಯಿಂದ ಹಾಕಿಕೊಂಡು ಹೋದ ದಿನವೇ ತಂಟೇರ್ ಮನೆಯ ಹತ್ತಿರದ ತೋಡಿನಲ್ಲಿ ಒಂದು ಮೆಟ್ಟು ಬಳಿದೇಹೋಗಿತ್ತು. ಆವತ್ತು ಕೆನ್ನೀರ ಪ್ರವಾಹ ತುಂಬಿದ ತೋಡು ರಭಸವಾಗಿ ಹರಿಯುತ್ತಿತ್ತು. ಗಾಬರಿ, ಭಯದಿಂದ ಸುಮಾರು ದೂರದವರೆಗೆ ತೋಡಿನಲ್ಲಿ ನಡೆದಾಡುತ್ತಾ ಕಾಲಂದಾಜಿನಲ್ಲಿ ಮೆಟ್ಟು ಹುಡುಕಾಡತೊಡಗಿದ್ದೆವು. ಗೆಳತಿಯರು ಸಮಾಧಾನಿಸಿದರೂ ಬಿಕ್ಕಳಿಗೆ ನಿಲ್ಲುತ್ತಿರಲಿಲ್ಲ. ನಮ್ಮ ಗೊಂದಲವನ್ನು ಕಂಡು ನಟ್ಟಿ ನಡುತ್ತಿದ್ದ ಹೆಂಗಸರು ವಿಚಾರಿಸಿ, “ಉಳ್ದ್ ಮೆಟ್ಟನ್ನ ಅಲ್ಲೇ ಹಳ್ಕಟ್ಟಿಗ್ ಹಾಕಿ ಹೋಯ್ನಿ. ಕಡಿಗೆ ಬೈಸರಿಗೆ ಹುಡ್ಕ್ಲಕ್ಕ್. ಈಗ ಶಾಲಿಗ್ ಹೋಯ್ನಿ” ಎಂದು ಸಂತೈಸಿದ್ದರು. ಅವರೆಂದಂತೆ ಮಾಡಿ ಶಾಲೆಯಲ್ಲಿ ಸಂಜೆಯವರೆಗೆ ಚಿಂತಿಸುತ್ತಾ ಕುಳಿತು ವಾಪಸ್ಸು ಬಂದು ನೋಡಿದಾಗ ಪ್ರವಾಹ ಇಳಿದಿತ್ತು. ಮೆಟ್ಟು ಸಿಕ್ಕುವ ಯಾವ ಭರವಸೆ ಇಲ್ಲದಿದ್ದರೂ ಸಮಾಧಾನಕ್ಕೆ ಮತ್ತೊಮ್ಮೆ ನೋಡಿ ಬರುವ ಎಂದು ತೋಡಿನುದ್ದಕ್ಕೂ ಹೋದಾಗ ಸುಮಾರು ದೂರದಲ್ಲಿ ಮುಂಡ್ಕನ ಬಲ್ಲೆಯೊಂದಕ್ಕೆ ನಿಜಕ್ಕೂ ಮೆಟ್ಟು ಸಿಕ್ಕಿ ಹಾಕಿಕೊಂಡಿತ್ತು! ಆ ಕ್ಷಣದ ಸಂತಸ, ಬೆರಗು ಈಗ ಊಹಿಸಲೂ ಅಸಾಧ್ಯ. ಮನೆಯಲ್ಲಿ ಬಯ್ಯುತ್ತಾರೆಂಬ ಆತಂಕ ದೂರಾಗಿ ಮನಸ್ಸು ಹತ್ತಿಯಂತೆ ಹಗುರಾಗಿತ್ತು!

      ಮಳೆಗಾಲದಲ್ಲಿ ತುಂಬಿ ಹರಿಯುವ ಸಾರ, ಸಂಕವನ್ನು ದಾಟುವಾಗಂತೂ ಚಪ್ಪಲಿಯೊಂದಿಗೆ ಜೀವವನ್ನೂ ಕೈಯ್ಯಲ್ಲಿ ಹಿಡಿದುಕೊಳ್ಳಬೇಕು! ಜೋರು ನೆರೆ ಬಂದಾಗ ಕೊಯ್ಕಾಡಿಯ ದೊಡ್ಡ ತೋಡು ತುಂಬಿ ಸಂಕದ ಮೇಲೇ ನೀರು ಬರುತ್ತಿತ್ತು. ಇದು ಹೊಳೆ ಎಂದು ಕರೆಯಬಹುದಾದಷ್ಟು ದೊಡ್ಡ ನೀರಿನ ಹರಹು. ಆದರೆ ಆಗ ಸೇತುವೆ ಇರಲಿಲ್ಲ. ಸಪೂರ, ಉದ್ದದ ತುಸು ಅಲುಗುವ ಮರದ ಸಂಕವಿತ್ತು. ಬೇಸಗೆಯ ದಿನಗಳಲ್ಲಾದರೆ ಅಡ್ಡಿಲ್ಲ. ಸುಮಾರಿಗೆ ನೀರಿದ್ದಾಗಲೂ ಜಾಗ್ರತೆಯಿಂದಲೇ ಹೋಗಬೇಕು. ಕೆಲವೊಮ್ಮೆ ಸಂಕದ ಮಧ್ಯಕ್ಕೆ ಹೋದಾಗ ಕೆಳಗಿನ ನೀರು ಕಾಣುತ್ತಾ ಕೈ ಕಾಲು ನಡುಗಿ ಮುಂದೆ ಹೋಗಲೂ ಆಗದೆ, ಹಿಂದೆ ಬರಲೂ ಆಗದೆ ಎದೆ ಢವಢವ ಬಡಿದುಕೊಳ್ಳುವುದಿದೆ! ಆದರೆ ಪ್ರವಾಹ ಸಂಕಕ್ಕೆ ಮುಟ್ಟಿದಾಗ, ಸಂಕದ ಮೇಲೇ ಹರಿದು ಬಂದಾಗಲಂತೂ ‘ಹೃದಯವೇ ಬಾಯಿಗೆ ಬಂದಂತೆ’ ಎನ್ನುತ್ತಾರಲ್ಲ ಹಾಗೆ!  ಏನು ಮಾಡೋಣ, ಸಂಕ ದಾಟಿ ಶಾಲೆಗೆ ಹೋಗಬೇಕಾದದ್ದು ಅನಿವಾರ‍್ಯ.  ವಿಚಿತ್ರವೆಂದರೆ; ಏನೇ ಆಗಲಿ, ಹೋಗಲಿ ಶಾಲೆಗೆ ರಜೆ ಮಾಡುವ ಪ್ರಶ್ನೆಯೇ ಆಗೆಲ್ಲ ನಮ್ಮ ತಲೆಯಲ್ಲಿರಲಿಲ್ಲ. ರಜೆ ಮಾಡುವುದೆಂದರೆ ಕಳ್ಳತನ, ದರೋಡೆ ಮಾಡಿದಷ್ಟು ಅಪರಾಧ ಎಂದುಕೊಂಡಿದ್ದೆವು! ಚಪ್ಪಲಿ, ಚೀಲ ಎಲ್ಲವನ್ನೂ ಬರಗಿ ಕೈಯ್ಯಲ್ಲಿ ಹಿಡಿದು ಪ್ರವಾಹವನ್ನು ನೋಡದೆ ಸಂಕ ಮಾತ್ರ ಕಾಣುತ್ತ ನಿಧಾನವಾಗಿ ಹೆಜ್ಜೆ ಕಿತ್ತಿಟ್ಟು ಒಂದೇ ಮನದಿಂದ ದಾಟಿದೆವೋ ಸರಿ; ಇಲ್ಲವಾದರೆ ಏನಾದರೊಂದು ಅನಾಹುತ ಕಟ್ಟಿಟ್ಟ ಬುತ್ತಿ!  ನಿಜವೆಂದರೆ, ಈ ಸಂಕ ದಾಟುವಾಗಿನ ಏಕಾಗ್ರತೆ ಬದುಕಿನ ಬೇರಾವ ಸಂದರ್ಭದಲ್ಲೂ ಇರುವುದಿಲ್ಲವೇನೋ!  ನನಗೆ ಕನಸಲ್ಲಿ ಸಂಕ, ನೆರೆ ಆಗಾಗ ಬಂದು ಹೆದರಿಸುತ್ತಿದ್ದವು! ಇನ್ನೊಂದು ದೊಡ್ಡ ಸಂಕ ಮುದೂರಿ ಬೈಲಿನ ತುದಿಯಲ್ಲಿತ್ತು. ಮಳೆ ಜೋರಾದಾಗ ಇದರ ಮೇಲೂ ನೀರು ಬರುತ್ತಿತ್ತು. ಮೊನ್ನೆ ಮೊನ್ನೆ ಕೂಡಾ ಈ ಸಾರ ಹೆದರಿಸಲೆಂದು ಕನಸಲ್ಲಿ ಒಂದು ಹೋಗಿತ್ತು!

       ಹಾಡಿಗೆ ಜುಳ್ಕನ ಹಣ್ಣು ಕೊಯ್ಯಲು ಹೋದಾಗ ಅಲ್ಲೊಂದು ಉಮ್ಮಲ್ತಿ ಗುಡಿ. ಉಮ್ಮಲ್ತಿ ಮತ್ತು ಬೊಬ್ಬರ್ಯನ ಮರದ ಉರಗಳು ಅಲ್ಲಿವೆ. ದೊಡ್ಡ ಕಣ್ಣುಗಳು, ದಷ್ಟಪುಷ್ಟ ದೇಹ, ಕೈಯ್ಯಲ್ಲಿ ಹಿಡಿದ ಭರ್ಜಿಯಂಥಾ ಆಯುಧ ಇವುಗಳ ಮುಖ್ಯ ಸ್ವರೂಪ. ಪ್ರತಿ ಸಲವೂ ಭಯಮಿಶ್ರಿತ ಕುತೂಹಲದಿಂದ ಕೈ ಮುಗಿದು ಬರುತ್ತಿದ್ದೆವು. ಉಮ್ಮಲ್ತಿಯ ಗಂಡ ಬೊಬ್ಬರ್ಯ ಎನ್ನುತ್ತಿದ್ದರು ಜನರು. ಇವರಿಬ್ಬರು ಅವಿಭಜಿತ ದಕ್ಷಿಣ ಕನ್ನಡದ ಜನಪದ ದೈವಗಳು. ಜಾನುವಾರುಗಳಿಗೆ ರಕ್ಷಣೆ ಒದಗಿಸುವ ದೈವವಾಗಿ ಬೊಬ್ಬರ್ಯ ಪ್ರಸಿದ್ಧ. ಶಾಲೆಯಲ್ಲಿ ಒಬ್ಬಳು ಹುಡುಗಿ ಸದಾ ಉಮ್ಮಲ್ತಿಯ ಕತೆ ಹೇಳುತ್ತಿದ್ದಳು. ಅವರ ಮನೆಯಂಗಳಕ್ಕೆ ಬಂದು ಆಗಾಗ ಉಮ್ಮಲ್ತಿ ಕಸ ಗುಡಿಸುತ್ತದಂತೆ! ರಾತ್ರಿ ಇವಳಿಗೆ ಫಕ್ಕನೆ ಎಚ್ಚರವಾಗಿ ನೋಡುವಾಗ ಸರಬರ ಸಪ್ಪಳಿಸುತ್ತ ದರ್ಲೆ ಗುಡಿಸುತ್ತಿರುತ್ತದಂತೆ. ಕೆಲವು ಸಲ ಉಮ್ಮಲ್ತಿಗೆ ಸಿಟ್ಟು ಬಂದು ಮನೆಯ ಮೇಲೆ ಹೊಯಿಗೆ ಬಿಸಾಡುವುದೂ ಇದೆ! ಇದೆಲ್ಲ ನಿಜವೋ, ಸುಳ್ಳೋ; ಇವಳ ಮನೆಯಲ್ಲಿ ಕಸಗುಡಿಸುವ ಕರ್ಮ ಉಮ್ಮಲ್ತಿಗೆ ಯಾಕೋ ಎಂಬೆಲ್ಲ ಪ್ರಶ್ನೆಗಳು ಗುಟ್ಟಿನಲ್ಲಿ ಎದ್ದರೂ ಗಮನಿಸದೆ ಹೂಂಗುಡುತ್ತಿದ್ದೆವು. ಹುಡುಗನೊಬ್ಬ ಹೇಳುವಂತೆ ರಾತ್ರಿಕಟ್ಟಿ ಬೊಬ್ಬರ್ಯ ಸೂಡಿ ಹಿಡಿದುಕೊಂಡು ಅವರ ಮನೆಯ ಬೈಲುಗದ್ದೆಯಲ್ಲಿ ತಿರುಗುತ್ತಿರುತ್ತಾನೆ! ಅವನು ಬಟ್ಟೆ ಹಾಕಿರುವುದಿಲ್ಲ; ಆ ಸ್ಥಿತಿಯಲ್ಲಿ ಅವನನ್ನು ಕಂಡವರು ಕಲ್ಲಾಗಿ ಹೋಗುತ್ತಾರೆ! ನಮ್ಮೂರ ಶಿವ ದೇವಸ್ಥಾನದ ಹೊರ ಸುತ್ತಿನಲ್ಲಿ ಒಂದು ಕಲ್ಲು ದೈವವಿದೆ, ಅದೇ ಬೊಬ್ಬರ್ಯ. ದನಕರುಗಳಿಗೆ ಹುಷಾರಿಲ್ಲದಾಗ ಹೇಳಿಕೊಂಡ ಹಣ್ಣುಕಾಯಿಯ ಹರಕೆಯನ್ನು ಊರಿನ ಜನರು ಸೋಣೆಯಾರತಿಯ ದಿನ ಬೊಬ್ಬರ್ಯನಿಗಿ ಒಪ್ಪಿಸುತ್ತಾರೆ. ಬೊಬ್ಬರ್ಯ, ಉಮ್ಮಲ್ತಿಯರ ಕುರಿತಾದ ಐತಿಹ್ಯಗಳ ಪ್ರಕಾರ ಇವರಿಬ್ಬರು ಪ್ರೇಮಿಗಳು. ಎಲ್ಲಾ ಜಾನಪದ ದೈವಗಳಂತೆ ಇವರೂ ಕೂಡಾ ಸಮಾಜದ ಬಹಿಷ್ಕಾರ, ತರತಮಗಳಿಗೆ ಒಳಗಾಗಿ ದಮನಿಸಲ್ಪಟ್ಟು ಮರಣ ಹೊಂದಿದ ವ್ಯಕ್ತಿಗಳು. ಉಮ್ಮಲ್ತಿ ರಾತ್ರಿಯ ಹೊತ್ತು ಎದೆಯಲ್ಲಿ ಹಾಲು ಸುರಿಸುತ್ತ ತಿರುಗಾಡುತ್ತಿರುತ್ತಾಳೆ; ಅವಳು ಸಂಚರಿಸುವ ಜಾಗದಲ್ಲಿ ಓಡಾಡುವುದು ಅಪಾಯ ಎಂಬ ಪ್ರತೀತಿಯಿದೆ. ಉಮ್ಮಲ್ತಿ, ಮದುವೆಯಾಗದೆ ಗರ್ಭಿಣಿಯಾಗಿ ದುರ‍್ಮರಣ ಹೊಂದಿದವಳು. ಸಂಶೋಧಕರ ಅಭಿಪ್ರಾಯದಂತೆ ʼಬೊಬ್ಬು ಬ್ಯಾರಿʼಯೇ ಬೊಬ್ಬರ್ಯ. ಇವನು ಆರ್ಥಿಕವಾಗಿ ನಷ್ಟಕ್ಕೆ ಒಳಗಾಗಿ ತನ್ನ ಏಳು ಮಂದಿ ಸಹೋದರರೊಂದಿಗೆ ಹಡಗಿನಲ್ಲಿ ವ್ಯಾಪಾರಕ್ಕೆಂದು ಹೋಗಿ ಹಡಗು ಮುಳುಗಿ ಇನ್ನಿಲ್ಲವಾದವನು. ಬಹುಶಃ ಉಮ್ಮಲ್ತಿ ಬೊಬ್ಬರ್ಯರ ಪ್ರೇಮ ಸಮಾಜದ ಕೆಂಗಣ್ಣಿಗೆ ಗುರಿಯಾಗಿರಬೇಕು. ವ್ಯವಸ್ಥೆ ವಿಧಿಸಿದ ಕ್ರೂರ ನಿಯಮಗಳ ಕಟ್ಟಿಗೆ ಸಿಕ್ಕಿ ಬದುಕಿ ಬಾಳಲಾಗದೆ ಸತ್ತ ಇವರು ದೈವಗಳಾಗಿ ಪೂಜೆ ಸ್ವೀಕರಿಸಿ ಜನ ಮಾನಸದಲ್ಲಿ ನೆಲೆ ನಿಲ್ಲಲೆಂದು ಅಂದಿನ ಒಳ್ಳೆಯ ಮನಸ್ಸುಗಳು ಆಶಿಸಿರಬೇಕು. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕೃತಿಯಲ್ಲಿ ಮದುಮಗಳು ಚಿನ್ನಮ್ಮ ಮತ್ತು ಪೀಂಚಲು ಹುಲಿಕಲ್ಲು ಗುಡ್ಡಕ್ಕೆ ರಾತ್ರಿ ಹೊತ್ತು ಹೊರಟಾಗ, ತಾನು ಒಲಿದವನೊಂದಿಗೆ ಬಾಳಲು ಇಡೀ ಕರ‍್ಮಠ ಸಮಾಜವನ್ನು ಎದುರು ಹಾಕಿಕೊಂಡ ಹಳ್ಳಿಯ ಮುಗ್ಧೆ ಚಿನ್ನಮ್ಮ ಮಾರಮ್ಮನ ಗುಡಿಯಲ್ಲಿ ಮಿಣುಕು ದೀಪದ ಮುಂದೆ ಮಂಡಿಯೂರಿ ಕುಳಿತ ಸನ್ನಿವೇಶ ಬಂದಾಗೆಲ್ಲ ನನಗೆ ನೆನಪಾಗುವುದು ನಮ್ಮೂರ ಉಮ್ಮಲ್ತಿ-ಬೊಬ್ಬರ್ಯರ ಗುಡಿ, ಸುತ್ತಲಿನ ಕಾಡು, ಮರಗಳು… ಅಲ್ಲಿ ಉರಿಯುವ ನಂದಾದೀಪ.

     ಉಮ್ಮಲ್ತಿ ಗುಡಿಯ ಹಿಂಭಾಗದಲ್ಲಿ ಹಾಗೇ ಕಾಡಿನಲ್ಲಿ ನಡೆದುಹೋದರೆ ಚೋರಾಡಿಗೆ ಹೋಗುವ ದಾರಿ ಸಿಗುತ್ತದೆ. ಈಚೆಯಿಂದ ನಮ್ಮನೆ ಹಕ್ಕಲು ಹತ್ತಿ ಹೋದರೆ ಎತ್ತರದ ಜಾಗದಲ್ಲಿ ರುಕ್ಮಿಣಿಬಾಯಿಯ ಮನೆ. ಅಲ್ಲಿಂದ ಇನ್ನೊಂದು ಬದಿಗೆ ಇಳಿದರೆ ಚೋರಾಡಿಗೆ ಪ್ರಯಾಣಿಸುವ ಅದೇ ಕಾಲುದಾರಿಗೇ ಸೇರುತ್ತದೆ. ರುಕ್ಮಿಣಿಬಾಯಿಯ ಮನೆ ಗುಡ್ಡದ ಮೇಲಿರುವ ದರ್ಖಾಸು ಮನೆ. ಸುಮಾರು ವರ್ಷ ಬೇರೆಯವರ ಜಾಗದಲ್ಲಿ ಸಣ್ಣ ಮಣ್ಣಿನ ಮನೆ ಕಟ್ಟಿಕೊಂಡು ವಾಸ ಮಾಡಿ ಕಡೆಗೆ ಗುಡ್ಡದ ತುದಿಯಲ್ಲಿ ಒಂದು ಕೊಗಳು ಕಟ್ಟಿಕೊಂಡು ಕೂತ ಕುಟುಂಬ ಅವರದ್ದು. ಕೂಲಿ, ಶ್ರಮದ ಕೆಲಸ ಮಾಡುತ್ತ ರುಕ್ಮಿಣಿಬಾಯಿಯ ಇಡೀ ಬದುಕು ಕಳೆದಿದೆ. ಸ್ವಂತಕ್ಕೆ ಅಂಗೈಯ್ಯಗಲದ ಜಾಗವೂ ಇಲ್ಲದಿರುವುದರಿಂದ ಕೂಲಿ ಕೆಲಸ ಮಾಡಿಯೇ ದಿನ ತೆಗೆದದ್ದು. ನಟ್ಟಿ ನಡುವುದು, ಗದ್ದೆ ಕೊಯ್ಲು, ಹುಲ್ಲು ಜಪ್ಪುವುದು, ಕಳೆ ತೆಗೆಯುವುದು, ಸೊಪ್ಪು- ದರ್ಲೆ ತರುವುದು ಹೀಗೆ ಮಾಡದ, ಗೊತ್ತಿಲ್ಲದ ಕೆಲಸಗಳೇ ಇಲ್ಲ. ಆದರೆ ಎಲ್ಲವೂ ಬೇರೆಯವರ ಗದ್ದೆ, ತೋಟ, ಹಾಡಿಗಳಲ್ಲಿ. ರುಕ್ಮಿಣಿಬಾಯಿ ಮತ್ತು ನಮ್ಮೂರ ಇತರ ಶ್ರಮಜೀವರ ಕುರಿತು ಸಣ್ಣ ಇರುವಾಗ ಏನೂ ಗೊತ್ತಾಗುತ್ತಿರಲಿಲ್ಲ. ಕ್ರಮೇಣ ಒಂದೊಂದೇ ನೋವಿನ ಎಳೆಗಳು ಅರ್ಥವಾಗುತ್ತಾ ಒಳ ಸೇರಿದವು. ಕರಾವಳಿಯ ಜಡಿಮಳೆ, ಸುಡುಬಿಸಿಲಿನಲ್ಲಿ ಕೆಲಸ ಮಾಡಿ ಮಾಡಿ ದಣಿದ ರುಕ್ಮಿಣಿಬಾಯಿಯದ್ದು ಈಗ ಬಲವಂತದ ವಿಶ್ರಾಂತ ಜೀವನ. ಆದರೆ ಮನೆ ಬದಿಯ ಸಣ್ಣ ಪುಟ್ಟ ಕೆಲಸಗಳನ್ನಾದರೂ ಮಾಡದೆ ಮನಸ್ಸು ಕೇಳುವುದಿಲ್ಲ.ಚೂರೂ ದುಡಿಮೆ ಮಾಡದೆ ಕೂತು ತಿನ್ನುವುದು ಹೇಗೆ ಎಂದು ಈ ಎಪ್ಪತ್ತೈದರ ಇಳಿವಯಸ್ಸಿನಲ್ಲೂ ಯೋಚನೆ. ದೇಹ ನಿತ್ರಾಣವಾಗಿದೆ…. ನಾಲ್ಕು ಮಕ್ಕಳನ್ನು ಹೆತ್ತು ಸಲಹಿದ್ದು; ಬಸುರಿ, ಬಾಣಂತಿಯಿರುವಾಗಲೂ ನಿರಂತರ ದುಡಿದದ್ದು ಈಗ ಕನಸಾಗಿ ಕಾಣುತ್ತದೆ. ಹೆರುವ ದಿನವೂ ಸೊಪ್ಪು ತಂದು ಹಟ್ಟಿಗೆ ಹಾಕಿದ್ದು, ಹೆತ್ತು ಹನ್ನೆರಡರ ‘ಅಮೆ’ ಕಳೆದೊಡನೆ ನಟ್ಟಿ ಗದ್ದೆಯ ಕೆಸರಿನಲ್ಲಿ ಬೆಳಗಿಂದ ಬೈಗಿನವರೆಗೆ ನೆಟ್ಟು, ಮಜೂರಿ ಸಿಕ್ಕಿದ ಅಕ್ಕಿಯನ್ನು ಸೆರಗಿನಲ್ಲಿ ಕಟ್ಟಿಕೊಂಡು ಹೋಗಿ ಗಂಜಿ ಬೇಯಿಸಿದ್ದು…! ಈಗ ಮಕ್ಕಳು ದೊಡ್ಡವರಾಗಿ ಸೊಸೆ, ಮೊಮ್ಮಕ್ಕಳು, ಎಲ್ಲರೂ ಸೇರಿ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ; ಅಲ್ಲದೆ ತಾವೀಗ ಒಂದೆರಡು ಗದ್ದೆಯನ್ನೂ ಕೊಂಡುಕೊಂಡಿದ್ದೇವೆ; ಗೇಣಿಗೂ ಮಾಡುತ್ತಿದ್ದೇವೆ ಎನ್ನುವ ನೆಮ್ಮದಿಯೇ ಆ ಜೀವಕ್ಕೆ ಆಧಾರವಾಗಿದೆ. ವಿಚಿತ್ರವೆಂದರೆ ಲಾರ ಇಂಗಲ್ಸ್ ವೈಲ್ಡರ್ ಪುಸ್ತಕದಲ್ಲಿ ಅವರ ದಿಮ್ಮಿಯ ಮನೆಯ ಸುತ್ತ ತೋಳಗಳು ಮುತ್ತಿಕೊಂಡ ಬೆಳದಿಂಗಳ ರಾತ್ರಿಯ ಕುರಿತು ಓದುವಾಗೆಲ್ಲ ರುಕ್ಮಿಣಿಬಾಯಿಯ ಮನೆ ಪರಿಸರ ಕಣ್ಮುಂದೆ ಕಟ್ಟುತ್ತದೆ. ಪುಟ್ಟ ಹುಡುಗಿ ಲಾರ, ಊಳಿಡುತ್ತಿದ್ದ ತೋಳಗಳನ್ನು ಹೆದರಿಕೆಯಿಂದಲೇ ಕಿಟಕಿಯಲ್ಲಿ ಇಣುಕಿ ನೋಡಿದ್ದು, ಒಳಗೆ ಕಾವಲಿಗಿದ್ದ ಜಾಕ್‌ನಾಯಿ, ದಿಮ್ಮಿ ಮನೆಯೊಳಗಿನ ಸುರಕ್ಷತೆ ಎಲ್ಲ ಚಿತ್ರಣವೂ ಹಕ್ಕಲಿನ ಗುಡ್ಡದ್ದೇ ಎಂದೆಣಿಸುತ್ತದೆ! ರುಕ್ಮಿಣಿಬಾಯಿಯ ಮನೆಯ ಸುತ್ತಲೂ ಕಾಡಿದೆ. ಕಾವಲು ನಾಯಿಗಳೂ ಇವೆ. ಆದರೀಗ ಕುರ್ಕ ಅವುಗಳನ್ನು ಕಚ್ಚಿ ಒಯ್ಯುವುದರಿಂದ ರಾತ್ರಿ ಗೂಡೊಳಗೆ ಹಾಕಿಡಬೇಕಾದ ಅನಿವಾರ‍್ಯತೆ ಎದುರಾಗಿದೆ. ಬೈಗು ಕಪ್ಪಾದೊಡನೆ ಬೆಕ್ಕುಗಳನ್ನೂ ಕೋಣೆಗೆ ಹಾಕಿಡುತ್ತಾರಂತೆ ಕುರ್ಕನಿಗೆ ಹೆದರಿ! ಇಲ್ಲಿಂದ ಕೆಳಗಿಳಿದು ಚೋರಾಡಿಗೆ ಹೋಗುವ ದಾರಿ ಸೇರಿದರೆ ಎದುರಿನಲ್ಲೇ ಸೊಪ್ಪಿನಣೆ, ಮಗ್ಗುಲಲ್ಲೇ ಬ್ವಾಳೆಗುಡ್ಡ. ನಾನು ಹೈಸ್ಕೂಲಿಗೆ ಹೋಗುವ ಆ ದಿನಗಳಲ್ಲೇ ಅಷ್ಟು ಎತ್ತರದ ಬ್ವಾಳೆಗುಡ್ಡೆಯ ಮೇಲೆ ಬೆಳ್ಳನಾಯ್ಕ ಎಂಬ ವ್ಯಕ್ತಿ ಸಣ್ಣ ಮಣ್ಣಿನ ಮನೆ ಕಟ್ಟಿಕೊಳ್ಳುವ ಸಾಹಸ ಮಾಡಿದ್ದು ಈಗ ನೆನೆದರೆ ಅಚ್ಚರಿಯೆನಿಸುತ್ತದೆ. ನಾವು ದೇವಸ್ಥಾನ ಗುಡ್ಡ ಹತ್ತಿ ನೋಡಿದಾಗೆಲ್ಲ ದೂರ, ಎತ್ತರದಲ್ಲಿ ಬ್ವಾಳೆಗುಡ್ಡೆ ಅಸ್ಪಷ್ಟವಾಗಿ ಕಾಣುತ್ತಿತ್ತು…. ಗುಡ್ಡದ ತುದಿಯಲ್ಲಿನ ಸಣ್ಣಮನೆ, ಅಲ್ಲಿಗೆ ಪಯಣಿಸುವ ಅಂಕುಡೊಂಕು ದಾರಿ! ಆ ಮನೆಯವರೂ ಶ್ರಮಿಕರು. ಸರ್ಕಾರದ ಬರಡು ಭೂಮಿಯಲ್ಲಿ ಇರಲೊಂದು ನೆರಳು ಕಟ್ಟಿಕೊಂಡದ್ದು.  ಉಣ್ಣಲು, ಉಡಲು ಕೂಲಿಯೇ ಆಧಾರ. ಸ್ವಂತ ಭೂಮಿ ಕಾಣಿ ಇರುವ ಮನೆಗಳು ಮೆರೆಯಲು ಸಾಧ್ಯವಾದದ್ದು ಇಂತವರ ಗೆಯ್ಮೆಯಿಂದಲೇ. ಬೆಂಕಿಪೊಟ್ಟಣದಿಂದ ಹಿಡಿದು ದಿನನಿತ್ಯದ ಬಳಕೆಯ ನೀರಿನವರೆಗೆ ಕೆಳಗಿನಿಂದ ಹೊತ್ತೇ ಸಾಗಿಸಬೇಕಿತ್ತು ಬ್ವಾಳೆಗುಡ್ಡೆಗೆ. ದಿನಸಿ ಸಾಮಾನು, ಅಕ್ಕಿ ಎಲ್ಲವನ್ನೂ ಎರಡೂವರೆ ಮೈಲಿ ದೂರದ ಹಾಲಾಡಿ ಪೇಟೆಯಿಂದ ತಂದು ಮತ್ತೆ ಗುಡ್ಡದ ಮೇಲಕ್ಕೆ ಒಯ್ಯಬೇಕು! ಅಲ್ಲಂತೂ ಏನೂ ಇರಲಿಲ್ಲ. ಹೆಸರಿಗೆ ತಕ್ಕಂತೆ ಬೋಳು ಗುಡ್ಡೆಯೇ. ಆದರೆ ಅಲ್ಲೂ ಬಾವಿತೋಡಿ, ಸಣ್ಣ ತೋಟ ಮಾಡಿ, ಬದುಕಿನ ಶ್ರದ್ಧೆಯನ್ನು ಕಾಣಿಸಿದ್ದು ಬೆಳ್ಳನಾಯ್ಕರ ಮನೆಮಂದಿ!

       ನಮ್ಮ ಹಳ್ಳಿಯಲ್ಲಿ ಇಂತಹ ಶ್ರಮಜೀವರ ಕಡು ಕಷ್ಟದ ಬದುಕು ಇಂದಿಗೂ ಹೀಗೇ ಸಾಗುತ್ತಿದೆ. ಬ್ವಾಳೆಗುಡ್ಡೆ ಮತ್ತು ಹತ್ತಿರದ ಸೊಪ್ಪಿನಣೆಯಲ್ಲಿ ಚಿರತೆ, ಹುಲಿಗಳು ತಿರುಗಾಡುತ್ತವೆ ಎಂಬ ಮಾತುಗಳು ನನ್ನ ಬಾಲ್ಯದ ದಿನಗಳಲ್ಲಿ ಕೇಳಿಬರುತ್ತಿತ್ತು. ಈಗಲೂ ಮತ್ತೆ ಚಿರತೆ, ಹುಲಿಗಳು ಬಂದಿವೆ. ಹಾಗಾಗಿ ಜೀವಾದಿಗಳ ಹೆದರಿಕೆ, ಅಪಾಯದ ಮಧ್ಯೆಯೇ ಬದುಕು ಸಾಗಿದೆ. ಸೊಪ್ಪಿನ ಅಣೆಗೆ ಹೆಸರು ಬಂದದ್ದು ಗಂಟಿ ಕಾಲಡಿಗೆ ಹಾಕಲು ಅಲ್ಲಿಂದ ಸೊಪ್ಪು ತರುತ್ತಿದ್ದುದರಿಂದ. ಆದರೆ ಆ ಗುಡ್ಡದ ಆಚೆ ಬದಿ ಏನೇನೋ ಬೇಡದ ವಿಷಯಗಳಿವೆ, ಅಲ್ಲಿಗೆ ಹೋಗಬಾರದು ಎಂದು ನಮಗೆ ಮಕ್ಕಳಿಗೆ ಹಿರಿಯರು ತಾಕೀತು ಮಾಡಿದ್ದರು. ಗಂಟಿ ಬಿಟ್ಟುಕೊಂಡು ಹೋದಾಗ ದನಕರುಗಳ ಹಿಂದೆ ಅನಿವಾರ‍್ಯವಾಗಿ ಸೊಪ್ಪಿನಣೆ ಹತ್ತಿಳಿದಿದ್ದಿದೆಯಾದರೂ ಗುಡ್ಡದ ತುದಿಗೆ ಮತ್ತು ಹಿಂಬದಿಗೆ ಎಂದೂ ಕಾಲು ಹಾಕಲಿಲ್ಲ. ನಮ್ಮೂರಿನ ಸುತ್ತ ಮುತ್ತಿಕೊಂಡಿರುವ ಹರಿನ್‌ಗುಡ್ಡೆ, ದೇವಸ್ಥಾನ ಗುಡ್ಡೆ, ಸೊಪ್ಪಿನಣೆ, ಬ್ವಾಳೆಗುಡ್ಡೆ, ತುಂಬಾ ದೂರದಲ್ಲಿ ಕಾಣುವ ʼಕೊಡಚಾದ್ರಿಯ ಸಾಲುʼ ಎಂದು ಹೇಳಲಾಗುವ ಬೆಟ್ಟಗಳು ಎಲ್ಲವೂ ಆಗಾಗ ಕನಸಿಗೆ ಬರುತ್ತಿರುತ್ತವೆ. ಅಲ್ಲೆಲ್ಲ ಸುಳಿದಾಡಿದಂತೆ, ಹುಲಿ ಚಿರತೆಗಳನ್ನು ಕಂಡು, ತೊರೆಯ ನೀರನ್ನು ಕುಡಿದು ಕಾಡು ಹೂಗಳನ್ನು ಮೂಸುತ್ತ ರಾತ್ರಿ ಮಿಣುಕುಹುಳುಗಳ ವಿಸ್ಮಯ ಜಗದಲ್ಲಿ ಸುತ್ತಿಬಂದಂತೆ ಭ್ರಮೆಯಾಗುತ್ತದೆ!  ವಾಸ್ತವದ ಸುಡುಸತ್ಯಗಳಿಂದ ಚೂರಾದರೂ ಬಿಡಿಸಿಕೊಳ್ಳಲು ಮೆದುಳು ಹೀಗೆಲ್ಲ ಆಟ ಹೂಡುತ್ತದೋ ಏನೋ!

     ಹರಿನ್‌ಗುಡ್ಡೆಯ ದಟ್ಟ ಕಾಡಿನಲ್ಲಿ ಕಳೆದುಹೋದದ್ದನ್ನು ಇನ್ನೊಮ್ಮೆ ಬರೆಯುತ್ತೇನೆ.

***********************

ಫೋಟೊ ಆಲ್ಬಂ

ವಿಜಯಶ್ರೀ ಹಾಲಾಡಿ

ಹುಟ್ಟೂರು: ಮುದೂರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಬಳಿ ಗ್ರಾಮ..ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಸೇವೆ ಮಾಡಿದ್ದಾರೆ.  ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ..ಆಸಕ್ತಿಯ ಕ್ಷೇತ್ರಗಳು:ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ,  ಕಾಡಿನ ತಿರುಗಾಟ ಮುಂತಾದವು.ಕೃತಿಗಳು :ಬೀಜ ಹಸಿರಾಗುವ ಗಳಿಗೆ,ಓತಿಕ್ಯಾತ ತಲೆಕುಣ್ಸೆ,ಅಲೆಮಾರಿ ಇರುಳು,  ಪಪ್ಪುನಾಯಿಯ ಪೀಪಿ,  ಸೂರಕ್ಕಿ ಗೇಟ್,  ಜಂಬಿಕೊಳ್ಳಿ ಮತ್ತು ಪುಟ್ಟವಿಜಿ,ಸಾಕು ಬೆಳಕಿನ ಮಾತು , ಪ್ರಕಟಿತ ಕೃತಿಗಳು.ಪಪ್ಪುನಾಯಿಯ ಪೀಪಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.ಜಿ.ಬಿ. ಹೊಂಬಳ ಸಾಹಿತ್ಯ ಪುರಸ್ಕಾರ, ಡಿಸೋಜ- ಎಚ್ಚೆಸ್ವಿ ಪುಟಾಣಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ , ಶಾರದಾ ರಾವ್ ದತ್ತಿನಿಧಿ ಬಹುಮಾನ ಇನ್ನಿತರ ಕೆಲ ಪ್ರಶಸ್ತಿಗಳು ಬಂದಿವೆ. ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ, ಲೇಖನಗಳು ಪ್ರಕಟವಾಗಿವೆ.ಎರಡು ಮಕ್ಕಳ ಕವಿತೆಗಳು ಸಿಬಿಎಸ್ ಸಿ  ಸಿಲೆಬಸ್ ಲ್ಲಿ ಪಠ್ಯವಾಗಿದ್ದವು.ಈಗ ಏಳನೇ ತರಗತಿ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಮಕ್ಕಳ ಪದ್ಯವೊಂದು ಪಠ್ಯವಾಗಿದೆ.

Leave a Reply

Back To Top