ಶಾಂಭವಿ, ಬಣ್ಣ, ಜಾತಿ ಮುಂತಾಗಿ..

ಸಣ್ಣಕಥೆ

ಶಾಂಭವಿ, ಬಣ್ಣ, ಜಾತಿ ಮುಂತಾಗಿ..

ಡಾ. ಅರಕಲಗೂಡು ನೀಲಕಂಠ ಮೂರ್ತಿ

100+ Aeroplane Pictures | Download Free Images on Unsplash

–01–

ಮೊಬೈಲ್  ವಾಟ್ಸ್ಯಾಪ್ ರಿಂಗಾದಾಗ ಸುಮಾರು ರಾತ್ರಿ ಹತ್ತು ಗಂಟೆಯ ಸಮಯ. ಊಟ ಮುಗಿಸಿ, ಪಾತ್ರೆ ತೊಳೆಯುವುದು ಇನ್ನೂ ಬಾಕಿ. ಅಷ್ಟರಲ್ಲಿ ಫೋನ್. ಉದ್ದ ರಿಂಗ್ ಆದಾಗಲೇ ಬಹುಶಃ ಇದು ಭಾರತದ್ದಲ್ಲ ಅನ್ನಿಸಿತು. ನಿರಂಜನ್ ತಮ್ಮ ಆಫೀಸಿನ ಫೈಲ್ ಹಿಡಿದು ಮಗ್ನರಾಗಿದ್ದರು. ಇಂತಹ ಫೋನ್ ಕಾಲ್ ಗಳು ಬರುವುದೇ ಅವರಿಗೆ. ಹಾಗಿದ್ದರೂ ಸುಮ್ಮನೆ ಫೈಲೊಳಗೇ ಇಳಿದಿದ್ದಾರೆ. ನಾನು ಕಿಚನ್ನಿನಲ್ಲಿದ್ದೇನೆ, ಹಾಲ್ನಲ್ಲಲ್ಲ, ಅಂತ ಅರಿತೂ ಸಹ. ಪಾಪು ಗಾಢ ನಿದ್ದೆಯಲ್ಲಿದ್ದಳು. ಯಾರಿರಬಹುದು? ಉದ್ದವಾದ ರಿಂಗ್ ಬೇರೆ. ವಿದೇಶದ್ದೇ ಅನ್ನಿಸಿತು. “ತಮ್ಮದೇ ಕಾಲ್, ಅವರೇ ಎದ್ದು ನೋಡಬಹುದು, ಆದರೂ ನೋಡು,ಅವರನ್ನ”, ಅನ್ನಿಸಿತು. ಕೊನೆಗೆ ನಾನೇ  ಓಡಿದೆ. ನನ್ನದೇ  ಫೋನ್. ನನಗೆ ಈ ಫೋನಿನ, ಆ ಫೋನಿನ ಅಂತ  ‘ಕರೆಯ ರಿಂಗ್’ ಗಳನ್ನು ಕೇಳಿ ಗುರುತು ಹೀಡಿಯೋದು ಸ್ವಲ್ಪ ಕಷ್ಟವೇ. ಆದರೆ, ಈಗ ಆಶ್ಚರ್ಯ ಕಾದಿತ್ತು. ನನಗೆ ವಾಸ್ತವವಾಗಿ ವಿದೇಶೀ ಫೋನ್ ಬಂದದ್ದೇ ಇಲ್ಲ – ಶಾಂಭವಿ  ಹೋದ ಹೊಸದರಲ್ಲಿ ಮಾಡಿದ್ದು ಬಿಟ್ಟು. ಅವಳಲ್ಲದೆ ನನ್ನವರು ಅಂತ ವಿದೇಶದಲ್ಲಿ ಯಾರಿದ್ದಾರೆ? ಶಾಂಭವಿ! ಹೌದು, ಶಾಂಭವಿಯ ಫೋನ್, ಅಮೇರಿಕಾದಿಂದ! ನನ್ನ ಖುಷಿ ನಾನೇ ಅಮೇರಿಕಕ್ಕೆ ಒಮ್ಮೆಲೇ ಹಾರಿದಂತೆ. ನನ್ನ ಆತ್ಮೀಯ  ಗೆಳತಿಯಿಂದ. ಅವಳೂ ಅರ್ಜೆಂಟ್ನಲ್ಲಿದ್ದಳು, ಅನ್ನಿಸಿತು; ಆತುರಾತುರವಾಗೇ  ಮಾತು ಮುಗಿಸಿಬಿಟ್ಟಳು. ಮೂರ್ನಾಲ್ಕು ನಿಮಿಷಗಳು ಅಷ್ಟೇ. ಆದರೆ, ಮುಖ್ಯ ಸುದ್ದಿಯೆಂದರೆ, ಅವಳು ನಾಳೆಯೇ ಅಲ್ಲಿಂದ ಹೊರಟು  ರಜೆಗೆ ಬರುವವಳಿದ್ದಾಳೆ! ಇಷ್ಟು ತಿರುಳು…ಶಾಂಭವಿ  ನನ್ನ ಆಪ್ತ ಗೆಳತಿ. ಅವಳು ಮತ್ತು ವೈಶಾಲಿ ಇಬ್ಬರೇ ನನ್ನ ಆತ್ಮೀಯ ಗೆಳತಿಯರು .

ಶಾಂಭವಿ  ನಿಜಕ್ಕೂ ಗಿಣಿಯೇ. ಅದೂ ಬಿಳೀ ಗಿಣಿ! ನಮ್ಮ ಕಾಲೇಜಿನಲ್ಲಿ ಅವಳಷ್ಟು ಬೆಳ್ಳಗಿದ್ದವರು, ಎಲ್ಲ ಕ್ಲಾಸ್ ನವರನ್ನೂ ಸೇರಿಸಿ ಹುಡುಕಿದರೂ, ಸಿಗುವುದೇ, ಬಹುಶಃ ಒಂದಿಬ್ಬರು. ಹಾಗಾಗಿ ಅವಳು ನಮ್ಮ ಬಿಳಿ ಗಿಣಿ. ಅಂದಾಕ್ಷಣ,  ಖಂಡಿತ ಗಿಣಿ ಮೂತಿಯವಳಂತೂ ಅಲ್ಲ!ಶಾಂಭವಿ ನನ್ನ ಆಪ್ತ ಗೆಳತಿ, ಆದುದರಿಂದ, ಈ ಹೊಗಳಿಕೆ, ಅಂತೇನೂ ಅಲ್ಲ. ಅವಳು ನೈಜ ಶ್ವೇತದ ಗೊಂಬೆ. ಕೇವಲ ಬಿಳಿ ಬಣ್ಣ ಮಾತ್ರವಲ್ಲ, ಸುಂದರಿಯೂ ಹೌದು! ಸಿನಿಮಾ ನಟಿಯರೂ ನಾಚುವಷ್ಟು! ಇಡೀ ಕಾಲೇಜೇನು, ಕಾಲೇಜಿನ ಪ್ರತಿ ಇಟ್ಟಿಗೆಯೂ, ಬಹುಶಃ ಅವಳ ಮೇಲೆ ಕಣ್ಣಿಟ್ಟಿತ್ತು ಅಂದರೆ ಅತಿಶಯವಲ್ಲ! ಹೌದು, ಇದೂ ವಾಸ್ತವ – ಸುಂದರಿಯರೆಲ್ಲರೂ ನಟಿಯರಾಗಿಲ್ಲ; ನಟನೆಯಲ್ಲಿ ಸಾಕಷ್ಟು  ನುರಿತಿದ್ದರೂ ಸಹ! ಹಲ್ಲು ಮತ್ತು ಕಡ್ಲೆ ಕಥೆ…ಬದುಕಿನ ಕಟು ಸತ್ಯ!

ಅಷ್ಟೇ ಅಲ್ಲ; ಶಾಂಭವಿ ಇಂಟೆಲಿಜಂಟ್ ಕೂಡ. ವೆರಿ ಮಚ್! ಬ್ರಹ್ಮದೇವ ಎಲ್ಲರಿಗೂ ಇಂಥ ತಥಾಸ್ತು ಹೇಳುವುದು ಅಸಾಮಾನ್ಯ.ವೈಶಾಲಿ ಕೂಡ ಬಹಳ ಬುದ್ಧಿವಂತೆ. ಅವಳೂ ಸಹ ನನಗಿಂತ ಚೆನ್ನಾಗಿದ್ದಳು. ಹಾಗಾದರೆ, ನಾನು? ಅದನ್ನ ಅವರಿಬ್ಬರಲ್ಲಿ ಯಾರೋ ಒಬ್ಬರಾದರೂ ಹೇಳಬೇಕು ಅಲ್ಲವೇ-“ಲೇ,ನೀರಜ, ನೀನೂ ಚೆನ್ನಾಗಿದ್ದೀಯ” ಅಂತ…

ನಾವು ಮೂವರು ಕೂಡ ಈಗ, ನಮ್ಮ ನಮ್ಮ  ಮದುವೆಯ ನಂತರ ಬೇರೆ ಬೇರೆ ದಿಕ್ಕು. ವೈಶಾಲಿ ಬೆಳಗಾವಿಯಲ್ಲಿ, ಶಾಂಭವಿ ಅಮೆರಿಕದ ಫ್ಲಾರಿಡದಲ್ಲಿ ಮತ್ತು ನಾನು ಬೆಂಗಳೂರಿನ  ಮಲ್ಲೇಶ್ವರದ ಹತ್ತಿರ.  ಶಾಂಭವಿಯ ಪತಿ ಬೆಂಗಳೂರಲ್ಲೇ ಸೆಟ್ಲಾಗುವ ಐಡಿಯಾದಿಂದ ಅಲ್ಲೇ ಕೋರಮಂಗಲದ ಹತ್ತಿರ ಮನೆ ಮತ್ತು ಸಾಕಷ್ಟು ಇತರ ಆಸ್ತಿ ಮಾಡಿಟ್ಟಿದ್ದಾರೆ.

ನಾವು ಮೂವರು ಇಷ್ಟೊಂದು ಗಾಢ ಸ್ನೇಹಿತರು, ನಿಜ. ಆದರೂ ಸಹ, ‘ಎಲ್ಲರ ಬಗ್ಗೆ ಯಾರಿಗೂ ಅಥವಾ ಎಲ್ಲರಿಗೂ, ಒಬ್ಬೊಬ್ಬರ ವೈಯಕ್ತಿಕವಾದ ಸಂಪೂರ್ಣ ಅರಿವಿರುವುದಿಲ್ಲ’ ಅನ್ನುವುದೂ ಅಷ್ಟೇ ಸತ್ಯ! ಹಾಗೆಯೇ ಶಾಂಭವಿಯ ವಿಷಯದಲ್ಲೂ, ಅವಳ ಆತ್ಮೀಯ ಗೆಳೆತಿಯಾದ ನೀರಜ, ಅಂದರೆ ನನಗೂ ಸಹ ಸಂಪೂರ್ಣ ಮಾಹಿತಿ ಇರಲಿಲ್ಲ ಅಂತ ಅನ್ನಿಸುತ್ತೆ…ಅದೂ ಸಹ ಶಾಂಭವಿಯ ಮದುವೆಯ ನಂತರದ ಬದುಕಿನ ಬಗ್ಗೆ. ಕಾರಣ ಮದುವೆಯ ಹೊಸ್ತಿಲಿನಿಂದಲೇ ಅನ್ನಿಸುವಂತೆ, ಅವಳು ತರಾತುರಿಯಿಂದ ಗಂಡನ ಜೊತೆ ಅಮೆರಿಕದ ವಿಮಾನ ಏರಿಬಿಟ್ಟಿದ್ದಳು. ಆಮೇಲೆ ಕಷ್ಟ-ಸುಖ ಅಂತಿರಲಿ, ಹೆಚ್ಚು ಫೋನ್ ಕೂಡ ಇಲ್ಲ. ವಾಟ್ಸ್ಯಾಪ್ ಇನ್ನೂ ಉಗಮ ಆಗದಿದ್ದ ಕಾಲದಲ್ಲಿ, ಫೋನಿನಲ್ಲಿ, ಅದೂ ಅಷ್ಟು ದೂರದ ಕರೆಗಳಲ್ಲಿ ಏನೇನು ಅಂತ ಮಾತಾಡಲು ಸಾಧ್ಯ? ಅವಳ ಅಪ್ಪ ಅಮ್ಮ ನನ್ನ ಜೊತೆ ಸಲಿಗೆಯಿಂದ ಇದ್ದರೂ, ಸುಮಾರು ಬಾರಿ ಫೋನ್ ಮಾಡಿದ್ದರೂ ಸಹ, ಎಲ್ಲ ರೀತಿಯ ವಿಚಾರ ವಿನಿಮಯ ಅವರೊಂದಿಗೆ ನನಗೆ ಸಾಧ್ಯವೇ? ಅವರೇನು ನನ್ನ ಓರಗೆಯವರೇ?

ಶಾಂಭವಿಯ ಮದುವೆ,  ನನ್ನ ಮತ್ತು ವೈಶಾಲಿಯ ಮದುವೆಯಾಗಿ ಬರೋಬ್ಬರಿ ಎರಡೂವರೆ ವರ್ಷದ ನಂತರ, ಆದದ್ದು. ಅದಕ್ಕೆ ಕಾರಣವೂ, ಇಲ್ಲದಿಲ್ಲ. ನನಗೆ ಗೊತ್ತಿರುವುದು ಅಷ್ಟಿಷ್ಟು ಮಾತ್ರ;  ಶಾಂಭವಿ ಮಧ್ಯೆಮಧ್ಯೆ ಹೇಳುತ್ತಿದ್ದಷ್ಟು. ನಮ್ಮ ಎಜುಕೇಷನ್ ಮುಗಿದ ಮೇಲಂತೂ, ನಾನು ಮಲ್ಲೇಶ್ವರದಲ್ಲಿ, ಅವಳು ಕೆಂಗೇರಿಯಲ್ಲಿ; ಆಗಾಗ ಫೋನ್ ಕರೆ ಬಿಟ್ಟು, ಪರಸ್ಪರ ಹೋಗೋದು ಬರೋದು ಅಂತಲೂ ಇರಲಿಲ್ಲ. ಇನ್ನೆಲ್ಲಿಯ ವಿಚಾರ ವಿನಿಮಯ? ಮದುವೆಯ ನಂತರ ಅಂತೂ ಏನೇನು ಗೊತ್ತಿಲ್ಲ. ಪೂರ್ತಿ ಮಾಹಿತಿಯಂತೂ ಇಲ್ಲವೇ ಇಲ್ಲ. ಹಾಗಾಗಿ, ಅದರ ಬಗೆಗೆ…..

–02–

ನಾವೀಗ ಬೆಂಗಳೂರು ನಗರದ ಹೊರವಲಯದಲ್ಲಿ ವಾಸವಿದ್ದೇವೆ – ಕೆಂಗೇರಿಯಲ್ಲಿ. ನಾನು ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ರಿಟೈರ್ ಆಗಿ, ಸರಿ ಸುಮಾರು ಹತ್ತು ವರ್ಷಗಳೇ ಸಂದಿವೆ. ನನ್ನದು ಅಂತರ್ಜಾತೀಯ ವಿವಾಹ. ನಾನಾಗ ಲೆಕ್ಚರರ್ ಆಗಿದ್ದಾಗಿನಿಂದ ನನ್ನ ಪ್ರೇಮಕಥಾ ಪ್ರಸಂಗ ಆರಂಭ. ನನಗೆ ಡೆಪ್ಯೂಟೇಶನ್ ಮೇಲೆ ಚಿತ್ರದುರ್ಗಕ್ಕೆ ಎರಡು ತಿಂಗಳ ಕಾಲ ಕಳಿಸಿದ್ದರು. ಆಗ ಒಂದು ದಿನ ಲೈಬ್ರರಿಯಲ್ಲಿ ಯಾವುದೋ ಪುಸ್ತಕದ ಶಿಕಾರಿಯಲ್ಲಿ ಬಿಜಿಯಾಗಿದ್ದಾಗ, ಬಹುಶಃ ನನ್ನ ಕಷ್ಟ ನೋಡಲಾರದೆ ಇವಳು, ಪ್ರಭ – (ಹೌದು, ಈಗಿನ ಈ ಇವಳು, ಪ್ರಭ; ಆಗ ಇವಳಾಗಿರಲಿಲ್ಲ ಅಥವಾ ಪ್ರಭ ಕೂಡ ಆಗಿರಲಿಲ್ಲ; ಬದಲಿಗೆ, ಅವಳು ಮತ್ತು ಪ್ರಭಾಮಣಿ ಆಗಿದ್ದಾಗಿನ ಕಾಲ), – ತಾನೆ ಖುದ್ದು ಬಂದು, “ಎನಿ ಹೆಲ್ಪ್ ನೀಡೆಡ್” ಅಂತ ಕೇಳಿದ್ದಳು, ಕೇಳಿ ಒಂದು ಹೊಸ ಅಧ್ಯಾಯದ ಆರಂಭಕ್ಕೆ ಕಾರಣವಾಗಿ ಆಶ್ಚರ್ಯ ಮೂಡಿಸಿದ್ದಳು! ಹಾಗೆ ಪರಿಚಯವಾಗಿ, ಅಲ್ಲಿದ್ದ ಆ ಎರಡು ತಿಂಗಳ ಅವಧಿಯಲ್ಲಿ, ಅದು ಪ್ರೀತಿ- ಪ್ರೇಮ ಅಂತಲೂ ತಿರುವು ಪಡೆದು, ‘ನಮ್ಮ ಕಥೆ ನಾವೇ ದಿಗ್ಧರ್ಶಿಸಿಕೊಂಡ  ಹಾಗೆ’ ಡೆಪ್ಯೂಟೇಶನ್ ಮುಗಿಸಿ ವಾಪಸ್ ಆದ ಎರಡು ವರ್ಷಗಳ ನಂತರ ತಾಳಿ ಅಂತ ಭದ್ರ ಬಿಗಿದದ್ದು!

ನಮ್ಮ ಆ ಬೆಚ್ಚನೆಯ ಭಾವನಾ ಬದುಕಿನ, ಕೆಚ್ಚಿನ ಸಮಯದಲ್ಲಿ, (ಮತ್ತು ಆಮೇಲೆ ಹಾಗೂ ಈಗ ಕೂಡ, ಅಥವ ಎಂದೆಂದಿಗೂ-ಬಹುಶಃ ನಾವು ಬದುಕಿರುವವರೆಗೂ) ನಮ್ಮ ಬಗ್ಗೆ ಯಾರು ಯಾರು ಏನೇನು ಕಥೆ ಹೆಣೆದಿದ್ದಾರೆ, ಏನೇನು ಹಿಂದೆಮುಂದೆ, ಸುತ್ತ ಮುತ್ತ ತಿವಿದು ತಿವಿದು ಅಣಕಿಸಿದ್ದಾರೆ, ಅದೆಲ್ಲ ಆಗಲೂ ನಮಗೆ ಮುಖ್ಯವಾಗಿರಲಿಲ್ಲ, ಹಾಗೂ ಈಗಲೂ ಇಲ್ಲ! ಆದರೆ…ನನ್ನ ಪ್ರೀತಿಯ ಅಪ್ಪ ಅಮ್ಮ? ಅವರಾದರೂ, ನನ್ನ ‘ಭುಜದೊಡನೆ ಭುಜವಾಗಿ’ ನಿಂತಿದ್ದರೆ, ಆ ದಿನಗಳಲ್ಲಿ, ಆನಂದ ಹಾಗೂ ಹಿಂಸೆಗಳ ದ್ವಂದ್ವ ಪರಿಸ್ಥಿತಿಯ ಆ ದಿನಗಳಲ್ಲಿ, ಮುಖ್ಯವಾಗಿ ಮದುವೆಯಾದ ತಕ್ಷಣದ ಕಾಲದಲ್ಲಿ,

“ನಾವಿರುವೆವು ನಿಮ್ಮೊಂದಿಗೆ” ಅಂದಿದ್ದರೆ, ಅಷ್ಟಕ್ಕೇ ನಾನು ‘ಕೆಚ್ಚೆದೆಯಾಗಿರುತ್ತಿದ್ದೆ’!

… ಆದರದು ಹಾಗಾಗಲೇ ಇಲ್ಲ. ಎಣಿಕೆಯೇ ಬೇರೆ, ನಡೆಯುವುದೇ ಬೇರೆ…!

ಹಾಗಂತ ನಾನು ಹೇಡಿಯಾದೆ ಅಂತಲೂ ಅಲ್ಲ. ಹಾಗಾದರೆ ನನ್ನ ಹೆತ್ತವರನ್ನು ನಾನು ದೂಷಿಸಬಹುದೇ? ಅಕಸ್ಮಾತ್ ನಾನೇ ಅವರ ಸ್ಥಾನದಲ್ಲಿ ಇದ್ದಿದ್ದರೆ; ಆಗ ನನ್ನ ಯೋಚನೆಗಳು ಯಾವ ಕೋನದತ್ತ ತಿರುಗುತ್ತಿದ್ದವು? ಮೇಲಾಗಿ,  ಮನೆಗೆ ನಾನೇ ಹಿರಿಯನಾಗಿದ್ದೆ; ಆದರೆ ನನ್ನ ನಂತರ ಹೆಣ್ಣು ಮಕ್ಕಳು ಅಂತಲೂ ಇರಲಿಲ್ಲ. ಇದ್ದವರಿಬ್ಬರೂ ಅವಳಿ ತಮ್ಮಂದಿರು. ಈ ದಿಕ್ಕಿನಲ್ಲಿ ಯೋಚಿಸುವುದೂ ಸಹ ತಪ್ಪಾಗಿ, ನನ್ನ ಮೂತಿ ನೇರಕ್ಕೆ ನನ್ನದೇ ಮಾತಾದಂತೆ,  ಆಗಬಿಡಬಹುದು ಅಲ್ಲವೇ? ಹೌದು, ಜಾತಿ! ಹ್ಞೂ, ಜಾತಿ ಅನ್ನುವುದು  ಎಷ್ಟು ಕಠೋರ. ಇದು ಯಾವ ಬೇತಾಳ-ಸೃಷ್ಟಿ ಅನ್ನಿಸಿಬಿಡುತ್ತದೆ! ಕನಿಷ್ಠ ವಿಷಮ ಘಳಿಗೆಗಳಲ್ಲಿ…

ನನ್ನ ಮೊದಲ ಮಗಳು, ಶಕುಂತಲ ಹುಟ್ಟಿದ ನಂತರ, ಏಳು ವರ್ಷಗಳು ಮಕ್ಕಳೇ ಆಗಿರಲಿಲ್ಲ. ವಾಸ್ತವವಾಗಿ, ನಮ್ಮಿಬ್ಬರಿಗೇ ಬೇಡ ಅನ್ನಿಸಿ, ಒಂದೇ ಸಾಕು, ಅವಳನ್ನೇ ಚೆನ್ನಾಗಿ ಸಾಕಿ ಸಲಹಿ, ಉತ್ತಮ ವಿದ್ಯಾವಂತಳನ್ನಾಗಿ ಬೆಳೆಸಿದರಾಯಿತು, ಅಂದುಕೊಂಡು ಸುಮ್ಮನಿದ್ದೆವು. ಶಕ್ಕುವಿನ  (ಶಕುಂತಲೆಯನ್ನು ನಾವು ಕರೆಯುವ ಹ್ರಸ್ವ ಹೆಸರು), ಆರನೇ ಹುಟ್ಟು ಹಬ್ಬದ ನಂತರ, ಅಥವಾ ಅಷ್ಟರಲ್ಲಿ, ಇದ್ದಕ್ಕಿದ್ದಂತೆ ಪ್ರಭಾಳಿಗೆ, ಇನ್ನೊಂದು  ಮಗು, ಗಂಡುಮಗು, ಬೇಕೆಂಬ ಹೆಬ್ಬಯಕೆ ಉಂಟಾಗಿ, ಮತ್ತು ತನ್ನ ಮೊದಲ ಮಗಳು ಮದುವೆಯಾಗಿ ಗಂಡನ ಮನೆ ಸೇರಿದ ಮೇಲೆ, ಈ ನಮ್ಮ ಮನೆ ಭಣಗುಡುವುದಲ್ಲ, ಅನ್ನುವ ಭ್ರಮೆ ಅಥವಾ ಭಯ ಕಾಡಲು ಆರಂಭಿಸಿ, ಹಠ ಹಿಡಿದ ಕಾರಣ ಬಂದವಳೇ ಈ ನಮ್ಮ ಶಾಂಭವಿ! ಪ್ರಭಾಳ ದುರದೃಷ್ಟ, ಗಂಡಾಗಲೇ ಇಲ್ಲ!

ನಮ್ಮ ಶಕುಂತಲೆಯ ಮದುವೆ ಬಹಳವೇ ಕೆಟ್ಟಕಾಲದಂತೆ ಕಾಡಿ, ನಮ್ಮನ್ನು ಹಿಂಸಿಸಿ ಹಿಂಡಿಬಿಟ್ಟಿತ್ತು. ಯಾರು ಬಂದರೂ, ಹುಡುಗಿ ಒಪ್ಪಿಗೆಯಾಗಿದೆ, ತೀರ್ಮಾನ ಮಾಡಿ ತಿಳಿಸುವೆವು ಅಂತ ಹೇಳಿ ಹೋಗುತ್ತಿದ್ದರು; ಕ್ರಮೇಣ ಬ್ರೋಕರ್ ಮೂಲಕವೋ, ಇನ್ನಾರದೋ, ಅಥವ ಇನ್ನಾವುದೋ  ಮುಖಾಂತರವೋ, ಈಗಲೇ ಮದುವೆ ಮಾಡಲ್ಲ ಅಂತಲೋ, ಬೇರೊಂದು ಕಾರಣವನ್ನೋ, ಅಥವಾ  ಕಾರಣವೇ ಇಲ್ಲದ ಕಾರಣವೊಂದನ್ನು  ತೂರಿ, ನಿರ್ಗಮಿಸುತ್ತಿದ್ದರು. ಸತ್ಯ ಅಂದರೆ ನಮ್ಮಿಬ್ಬರ ಅಂತರ್ಜಾತಿ ಅಡ್ಡಲಾಗಿ ನಿಂತ  ಮುಳ್ಳು ಅಂತ ನಮಗೆ ಅರಿವಂತೂ ಆಗಿಬಿಡುತ್ತಿತ್ತು; ಈ ತೆರನಾದ   ಅನುಭವಗಳು ವಿಪುಲವಾಗಿ  ನಮ್ಮಿಬ್ಬರನ್ನೂ ಹೈರಾಣಾಗಿಸಿದ್ದವು..

ಅಂತಹ ಸಂದರ್ಭಗಳಲ್ಲಿ ಪ್ರಭ ಬೆಡ್ ರೂಮಿನಲ್ಲಿ  ಬಳ್ಳಗಟ್ಟಲೆ ಕಣ್ಣೀರು ಹರಿಸಿದ್ದಳು.

ಕೊನೆಗೆ, “ಯಾವುದೇ ಕಾರ್ಯ ಆಗುವ ಹಾಗಿದ್ದರೆ, ಯಾವ ಪ್ರಚೋದನೆ ಇಲ್ಲದೆಯೂ, ಆಗಿಯೇ ತೀರುತ್ತದೆ, ಆ ಸುವರ್ಣ ಸಮಯಕ್ಕೆ ಸರಿಯಾಗಿ”, ಅನ್ನುವಂತೆ ನಮ್ಮ ಪಾಲಿನ ಭಗವಂತ ಒಮ್ಮೆ ಕಣ್ತೆರೆದೇಬಿಟ್ಟ! ನನ್ನ ಹಳೆಯ ಕೊಲೀಗ್ ಒಬ್ಬರ ಮೂಲಕ…ಅವರ ಆಪ್ತರ ಮಗ, ಫಿಸಿಕ್ಸ್ ಲೆಕ್ಚರರ್, ಶಶಾಂಕ್ ಎಂಬೊಬ್ಬರು ಒಪ್ಪಿ ಮದುವೆ ಅಂತ ಆಯಿತು! ಶಕುಂತಲೆಯ ರೂಪ ಕೂಡ ತೆಗೆದುಹಾಕುವ ಹಾಗೇನಿರಲಿಲ್ಲ. ಶಾಂಭವಿಯಷ್ಟು ಬಣ್ಣ ಮತ್ತು ಸೌಂದರ್ಯ  ಇಲ್ಲದಿದ್ದರೂ ಸಹ. ಆದರೂ ಸಹ, ನಮ್ಮ ಶಾಂಭವಿ ಬಹಳವೇ ರೂಪವಂತೆ ಆಗಿದ್ದುದರಿಂದ, ಯಾರೇ ಶಕುಂತಲೆಯನ್ನು ನೋಡಲು ಬಂದಾಗ, ಶಾಂಭವಿಯನ್ನು ಹೊರಗೆ ಏಲ್ಲಾದರೂ ಕಳಿಸಿ, ಅವಳು ಕಾಲೇಜಿಗೆ ಹೋಗಿದ್ದಾಳೆ, ಎಂದು ಕೇಳಿದವರಿಗೆ ಸುಳ್ಳು ಹೇಳುತ್ತಿದ್ದೆವು. ಇಷ್ಟಕ್ಕೂ ಈ ಜಾತಿ! ಜಾತಿ ಯಾರ ಅಪ್ಪನ ಮನೆ ಸ್ವತ್ತು, ಅಲ್ಲವೇ…!

ನನ್ನ ಅಳಿಯ, ಶಶಾಂಕ್ ಕೂಡ, ಅಂತರ್ಜಾತೀಯ ತಾಯಿತಂದೆಯ ಮಗನೇ ಆಗಿದ್ದರು. ಅದೇ ನಮಗೆ ವರಪ್ರದಾಯವಾದದ್ದು!

ಆಗ ನನಗೆ ಅನಿಸಿದ್ದು ಹೀಗೆ ಮತ್ತು ಇಷ್ಟು: ನಾನು ಮತ್ತು ಪ್ರಭಾಮಣಿ ಮಾತ್ರ ಈ ಪರಿಸ್ಥಿತಿಯ “ಯಜ್ಞಪಶು”ಗಳಾಗಿರಲಿಲ್ಲ”, ಬದಲಿಗೆ ನಮ್ಮಂಥಹವರು ಈ ಜಗತ್ತಿನಲ್ಲಿ, ಕನಿಷ್ಠ ನನ್ನ ಸುತ್ತಮುತ್ತಲಿನ ಜಗತ್ತಿನಲ್ಲಿ, ಅನೇಕ-

ರಿದ್ದಾರೆ ಅನ್ನಿಸಿ ಸಮಾಧಾನ ಆಗಿತ್ತು! “ಅಯ್ಯಾ, ಗೆದ್ದುಬಿಟ್ಟೆಕಣೋ, ಮನೋಹರ!” ಅಂದುಕೊಂಡು ಸಮಾಧಾನ ಪಟ್ಟಿಕೊಂಡು , ಪ್ರಭಾಳಿಗೂ ಬೆನ್ನು ತಟ್ಟಿದ್ದೆ…ಆದರೆ, ಇನ್ನೂ ಮುಂದೆ ಮುಂದೆ ಬೃಹತ್ತಾಗಿ, ಬೆನ್ನುಫಣಿಯ ಹಾಗೆ ಅದೇ ಸಾಂಕ್ರಾಮಿಕ, ಅವಳ ತಂಗಿಯ ಮೂಲಕ, ಶಾಂಭವಿಯ ಮದುವೆ

ಮೂಲಕ, ಕಾಡಬಹುದು ಅನ್ನಿಸಿರಲಿಲ್ಲ…

ನಮ್ಮಪ್ಪ ಅಮ್ಮನಿಗೆ ನನ್ನ ನಂತರ ಹುಟ್ಟಿದ್ದು ನನ್ನ ಇಬ್ಬರು ತಮ್ಮಂದಿರು, ಅವಳಿ ಎಂದು ಆಗಲೇ ಹೇಳಿದ್ದೇನೆ. ಆದರೂ, ಅಷ್ಟಕ್ಕೇ ಅವರಿಗೆ ನನ್ನ ಅಂತರ್ಜಾತಿ ವಿವಾಹದ ‘ಭಯಂಕರ ಭೂತ’ ಹೊಕ್ಕಂತೆ ಜಿಗುಪ್ಸೆ ಕಾಡತೊಡಗಿ,  ನನ್ನನ್ನು ದೂರ ತಳ್ಳಿದಹಾಗೆ, ಈಗಿನ ನಮ್ಮ ಕೆಂಗೇರಿ ಮನೆ ಮತ್ತು ಹದಿನೈದು ಲಕ್ಷ ರೂಪಾಯಿ ಹಣದ ಜೊತೆಗೆ, ಅತ್ಯಂತ ಅಲ್ಪ ಅನ್ನಿಸುವಷ್ಟು, ಚಿನ್ನವನ್ನೂ ಸೇರಿಸಿ ಕೊಟ್ಟು, ತಿಲಾಂಜಲಿ ಬಿಟ್ಟು ಕಳಿಸಿದ್ದರು! ನಮ್ಮಪ್ಪನಿಗೆ ನಾನು ಕಂಡಂತೆ ಜಾತಿಯ ‘ದುರಭಿಮಾನ’ ತುಸು ಹೆಚ್ಚೇ. ಅವರೊಬ್ಬ “ಫೆನಾಟಿಕ್”! ಅವರೇ ಭಗವಂತನ ತುಂಡು ಅನ್ನೋ ಥರ! ಅಲ್ಲಿಗೆ ಸಂಬಂಧವನ್ನೇ ಕಚಕ್ಕನೆ ಕತ್ತರಿಸಿಬಿಟ್ಟಿದ್ದರು. ಹೋದರೆ ಮಾತೂ ಇಲ್ಲ; ಆದರೆ ತಾಯಿ! ನನ್ನಮ್ಮ ಮತ್ತು ತಮ್ಮಂದಿರ ತಲೆಗಳನ್ನು ಕೂಡ, ಅರೆದೂ ಅರೆದು  “ರಿಪೇರಿ” ಮಾಡಿಟ್ಟಿದ್ದರು ಅಪ್ಪ ಅನ್ನಿಸಿಕೊಂಡವರು!…ಇದೆಂಥ ದ್ವೇಷ! ಅಥವಾ ಜಾತಿ-ಕುಲವೆಲ್ಲವೂ ಇಷ್ಟೊಂದು ಕಠೋರವೇ? ಅನ್ನಿಸಿತ್ತು. ಅತಿಯಾದ, ಇನ್ನೊಂದು ಆಶ್ಚರ್ಯ ಎಂದರೆ, ನನ್ನ ತಮ್ಮಂದಿರಿಬ್ಬರಿಗೂ ಒಂದೊಂದು ಗಂಡು. ಹೆಣ್ಣಿಲ್ಲ. ಆದರೂ, ನನ್ನ ಮತ್ತು ಪ್ರಭಾಮಣಿಯ ಈ ಎರಡು ಹೆಣ್ಣು ಜೀವಿಗಳನ್ನೂ ನೋಡುವ ಆಸೆ, ಕನಿಷ್ಠ ನನ್ನ ಅಮ್ಮನಿಗಾದರೂ ಬರುವುದೇ ಇಲ್ಲವೇ? ತಾವೇ ಹೆತ್ತ ಮಗ ನಾನಾಗಿಯೂ ಸಹ! ಮಲತಾಯಿಯ ಮಗನಾಗಿದ್ದರೆ, ಇನ್ನೇನು ಗತಿಯೋ ಏನೋ…?

ನಮ್ಮ ಶಾಂಭವಿ ಮದುವೆ ಹೊಸ್ತಿಲಿಗೆ ಬಂದು ನಿಂತಿದ್ದೇ, ನಮ್ಮಿಬ್ಬರ ದುಗುಡ ಕೂಡ ಘಂಟೆ ಬಾರಿಸಿತು! ಆದರೂ, ಶಾಂಭವಿ ರೂಪವಂತೆ ಅಷ್ಟೇ ಅಲ್ಲ, ಶ್ವೇತ ವರ್ಣದ ಹೊಳಪು…ನಮ್ಮ ಹಳ್ಳಿಕಡೆ ‘ಕೈ ತೊಳ್ಕೊಂಡ್ ಮುಟ್ಬೇಕು’ ಅಂತಾರಲ್ಲ ಹಾಗೆ! ಈ ಲೆಕ್ಕಾಚಾರದಲ್ಲಿ ಅಷ್ಟೇನೂ ಕಷ್ಟ ಆಗಲಾರದು ಅನ್ನಿಸುತ್ತಿತ್ತು ಒಳಗೆಲ್ಲೋ; ನಿಜ! ಏನೇ ಇದ್ದರೂ, ಅನುಭವದ ಕಹಿ ಇತಿಹಾಸ ಇದ್ದೇ ಇದೆಯಲ್ಲ. ಆದಂತಹ ಅಧ್ಯಾಯವೇ ಬೇರೆ…

ಮುಂದೆ…

–03–

“ಅಮೆರಿಕ”! ಹೌದು, ಅಮೆರಿಕ ಅನ್ನುವ, ಜಗತ್ತನ್ನೇ ಮಂತ್ರಮುಗ್ಧಗೊಳಿಸುವ ಹೆಸರಿನಲ್ಲಿ ಅದೆಂಥ ಆಯಸ್ಕಾಂತತೆ ತುಂಬಿದೆಯೋ ಏನೋ, ಆ ಭಗವಂತನೇ ಬಲ್ಲ! ಆದರೆ, ಅಮೆರಿಕದ ಕನಸು ಕಾಣುವ ಜಗತ್ತಿನ ಬೆರಗು, ವಿಸ್ಮಯ ಏನೇ, ಎಷ್ಟೇ ಇದ್ದರೂ ಇರಲಿ… ಇರಲೂಬಹುದು…ಹಾಗೆಯೇ, ಇಲ್ಲಿನ ಧಾವಂತವೂ ಕೂಡ ಅಷ್ಟೇ ಬೆರಗಿನದ್ದೇ, ವಿಸ್ಮಯದ್ದೇ! ಈ ರೀತಿಯ ಅಮೆರಿಕದ  ಕನಸು ಕಾಣುವ ಹೊರ ಪ್ರಪಂಚಕ್ಕೆ ಈ ಧಾವಂತದ ಬಗ್ಗೆ ಅದೆಷ್ಟು ಅರಿವಿದೆಯೋ ಏನೋ ತಿಳಿಯದು;

ಆದರೆ…ನೋಡಿ, ಇದೀಗ ಇಲ್ಲಿ ಐದು ಘಂಟೆಯ ಅಲಾರಾಂ ನಮ್ಮ ನಿದ್ದೆಗಣ್ಣುಗಳನ್ನು ಕುಟ್ಟಿದೆ; ಮತ್ತು ಏಳದಿದ್ದರೆ ಕುಟ್ಟುತ್ತಲೇ ಇರುತ್ತದೆ,  ತಲೆಯ ಮೇಲೆ ಬಡಿದು ನಿಲ್ಲಿಸುವ ತನಕ. ಅಲಾರಾಂ ಜೊತೆಗೇ ಎದೆಯಲ್ಲಿ ತಕಧಿಮಿತ…

ತಿಂಡಿ, ಊಟ ಎಲ್ಲ ತಯಾರಿಯಾದ ನಂತರ, ಪ್ರೇಮಸಾಗರ್ (ನನಗೆ, ‘ಸಾಗರ್’ಅಂತ ಮಾತ್ರ,  ಪ್ರೀತಿಯಿಂದ) ಬಾಕ್ಸಿಗೆ, ಮತ್ತು ನನ್ನದಕ್ಕೆ ಮಧ್ಯಾಹ್ನದ ವರೆಗೂ ಆಗುವಷ್ಟು ತುರುಕಿ, ಕಾಲು ಕಿತ್ತರಾಯ್ತು…ನನ್ನನ್ನ  ಡ್ರಾಪ್ ಮಾಡಿದ್ದೇ, ಸೂಪರ್ ಸಾನಿಕ್ ಸ್ಪೀಡ್ ನಲ್ಲಿ ಹೊರಟು ಬಿಡುತ್ತಾರೆ, ಹೆಚ್ಚುಕಮ್ಮಿ ಇಪ್ಪತ್ತು ಮೈಲಿನಷ್ಟು ದೂರದ ತಮ್ಮ ವಿಜ್ಞಾನ ಭವನದತ್ತ…

ಇದು ನಮ್ಮ ಅಮೇರಿಕದ ದಿನನಿತ್ಯದ ಡೈರಿ. ಶನಿವಾರ ಮತ್ತು ಭಾನುವಾರ ರಜ. ಆದ್ದರಿಂದ, ಒಂದೊಂದು ವಾರ ಒಂದೊಂದು ರೀತಿ ಪ್ರೋಗ್ರಾಮ್ ಸಾಮಾನ್ಯವಾಗಿ  ಇದ್ದೇ ಇರುತ್ತದೆ. ಮೇಲಾಗಿ, ನಮ್ಮಿಬ್ಬರಿಗೆ ಇನ್ನೂ ಮಕ್ಕಳು ಬೇರೆ ಇರಲಿಲ್ಲ. ಹಾಗಾಗಿ ಸಾಗರ್ ಅವರೇ,” ಈಗತಾನೆ ಅಮೇರಿಕಕ್ಕೆ ಬಂದಿದೀಯ, ಸ್ವಲ್ಪ ಲೈಫ್ ಎಂಜಾಯ್ ಮಾಡು” ಅಂತ ತಡೆ ಹಿಡಿದಿದ್ದರು…ಆದ್ದರಿಂದ ಸೀಸೈಡ್ಗೋ, ಅಥವ ಬೇರೆ ಕುಟುಂಬದವರ ಜೊತೆಗೆ ಪಿಕ್ನಿಕ್ಕೋ ಅಥವ ಯಾವುದಾದರೂ ಒಳ್ಳೆಯ ಸಿನಿಮಾ ಇದ್ದರೆ ಅದಕ್ಕೋ ಹೀಗೆ, ಕಾಲ ಕಳೆದು ಹೋಗುತ್ತಿತ್ತು.

ವಾಸ್ತವವಾಗಿ, ಸಾಗರ್ ಅಂತಹ ವ್ಯಕ್ತಿ ನನಗೆ ಗಂಡನಾಗಿದ್ದು ನನ್ನ ಅದೃಷ್ಟ ಅಂತಾನೇ ಹೇಳ್ಕೋತೀನಿ. ಕಷ್ಟ ಪಟ್ಟವರಿಗೆ ಜೀವನದಲ್ಲಿ ಸುಖ-ಸಂತೋಷ ಕಟ್ಟಿಟ್ಟ ಬುತ್ತಿ ಅನ್ನಿಸೋ ಹಾಗೆ! ನಮಗೆ ಅಷ್ಟು ದುರ್ಲಭದ ಅನುಭವ ಆದದ್ದು ಒಳ್ಳೆಯದೇ ಆಗಿತ್ತು! ಅಪ್ಪ- ಅಮ್ಮನಿಗೆ  ನಾನು ಹುಟ್ಟಿದ್ದೇ ನರಕವಾಯ್ತೋ ಏನೋ

 ಅನ್ನಿಸುವಷ್ಟು ಸಂಕಷ್ಟಗಳ ನಡುವೆಯೂ, ಮತ್ತು ಅನಂತ ದುಗುಡದ ಗುಂಡಿಗೆ ಭಾರ ಹೊತ್ತು,  ಹುಡುಕಾಡಿದ್ದೂ,  ಕಾಯುವಿಕೆಯೂ ಸಹ ಸಾರ್ಥಕ ಅನ್ನಿಸಿತ್ತು.

ಅಕ್ಕ, ಶಕುಂತಲೆಯ ಮದುವೆಗಿಂತಲೂ, ನನ್ನ ಮದುವೆಯ ಹುಡುಕಾಟ ಅವರನ್ನು ತುಂಬ ದಿಕ್ಕು ಕೆಡಿಸಿತ್ತು. ಅನೇಕ  ವರಗಳೂ ಬಂದವು; ಇಲ್ಲ ಅಂತಲ್ಲ.  ಬಂದವರೆಲ್ಲ (ಅಕ್ಕನ ಸಮಯದಲ್ಲಿ ಏನೇನು ಆಗಿತ್ತೋ ಹಾಗೆಯೇ),

ಹುಡುಗಿ ಚೆನ್ನಾಗಿದ್ದಾಳೆ,  ಬೆಳ್ಳಗೂ ಇದಾಳೆ ಅಂತೆಲ್ಲ ಹೊಗಳಿ ಹೋಗಿ, ಕೊನೆಗೆ “ಹೊನ್ನ ಶೂಲ” ತೋರಿಸಿ ನಡೆದುಬಿಡುತ್ತಿದ್ದರು!

ಆದರೆ…ಸದ್ಯಕ್ಕೆ, ಆ ನನ್ನ ಅದೃಷ್ಟಕ್ಕೆ, ಯಾರೂ ವರದಕ್ಷಿಣೆ ಹುಚ್ಚರು ಬಂದಿರಲಿಲ್ಲ! ಏನು ಮಾಡೋದು, ಹೆತ್ತವರಿಗೆ ಜಾತಿ ಕುಲಾನೇ ಇಲ್ಲವಲ್ಲ!  ಆಹಾ…ಎಂತಹ ಅದ್ಭುತ ಸರ್ಟಿಫಿಕೇಟ್! ನನ್ನಂಥಹವರ ಪರಿಸ್ಥಿತಿಗೆ ಇದಕ್ಕಿಂತ ಯಾವ ಸಾಕ್ಷ್ಯ ತಾನೆ ಬೇಕಾಗಿತ್ತು ಹೇಳಿ! ಕೆಲವು ಜೀವಿಗಳ ಕಣ್ಣೀರಿಗೆ ಧೂಳಕಣದಷ್ಟು ಬೆಲೆಯೂ ಇರದೇನೋ; ಹಾಗೆಯೇ ನನ್ನದೂ ಆದದ್ದು. ಸುರಿದಷ್ಟೂ ಚರಂಡಿಗೇ ಬಿದ್ದ ಮಳೆ…

ಹೀಗಿರುವಾಗ ಪರಮೇಶ್ವರನೇ ಸ್ವತಃ, ತಪಸ್ಸಿಲ್ಲದೇ ಪ್ರತ್ಯಕ್ಷ ಆದ ಹಾಗೇ ಆಗಿ ಬಿಟ್ಟಿತ್ತು!–ನಾವು ಹೈರಾಣಾಗಿ, ಮದುವೆ ಕಾಲಮ್ಮಿನಲ್ಲಿ ಹಾಕಿ ಕಾಯತೊಡಗಿದ್ದ  ಆ ಒಂದು ದಿನ–

ಹೌದು, ಆ ಒಂದು ದಿನ, ಪ್ರೇಮಸಾಗರ್ ಅವರ ಸ್ನೇಹಿತರೊಬ್ಬರು, ನಮ್ಮ ಪೇಪರ್ ಜಾಹೀರಾತು ನೋಡಿ, ಸಾಗರ್ ಅವರಿಗೆ ಹೇಳಿ, ಬಲವಂತದಿಂದ ಎಳೆದುಕೊಂಡು ಬಂದಿದ್ದರು. ಏಕೆಂದರೆ, ಸಾಗರ್ ಅವರಿಗೆ ಜಾಹೀರಾತು ನೋಡಿ ಹೆಣ್ಣಿಗಾಗಿ ಬರುವುದು ಇಷ್ಟ ಇರಲಿಲ್ಲವಂತೆ.  ನಂತರ, ನಮ್ಮಪ್ಪ, ಅಲ್ಲಿ ಇಲ್ಲಿ ಸ್ವಲ್ಪ ವಿಚಾರ ಅಂತ ಮಾಡಿ, ಒಪ್ಪಿಗೆ ಕೊಟ್ಟೇ ಬಿಟ್ಟಿದ್ದರು. ಸದ್ಯಕ್ಕೆ,  ನಮ್ಮ ಸ್ಥಿತಿ,’ ರಾತ್ರಿ ಕಂಡ ಗುಂಡಿಗೆ ಹಗಲು ಬಿದ್ದರು’, ಎಂಬಂತೆ ಆಗಲಿಲ್ಲ – ‘ದೇವರು ದೊಡ್ಡವನು’!- ಅಂದಂತೆ.

ವಾಸ್ತವವಾಗಿ, ಸಾಗರ್ ಅವರು ಅನಾಥ ಅಂತಲೇ ಹೇಳಬಹುದು. ಅವರು ಬೆಳೆದದ್ದು ದತ್ತು ಮನೆಯಲ್ಲಿ. ಅವರ ಬೈಯಲಾಜಿಕಲ್ ಅಪ್ಪ ಅಮ್ಮಂದಿರು ಯಾರೆಂದು, ಅವರಿಗೆ ಇನ್ನೂ ತಿಳಿದಿಲ್ಲ. ದತ್ತು ತಂದೆ ಚಿಕ್ಕಂದಿನಲ್ಲೇ ತೀರಿಕೊಂಡಿದ್ದರು. ಅಮ್ಮ, ಇವರು ಪಿ ಹೆಚ್ ಡಿ ಥೀಸೀಸ್ ಮಾಡುವ ಸಮಯದಲ್ಲಿ ತೀರಿ ಹೋಗಿದ್ದರು.

ಸಾಗರ್ ಒಬ್ಬ ಫೂಡ್ ಸೈಂಟಿಸ್ಟ್. ಇಲ್ಲಿ, ಅಮೆರಿಕದಲ್ಲಿ, ರಿಸರ್ಚ್ ಪ್ರಾಜೆಕ್ಟ್ ನಲ್ಲಿ ಡೆಪ್ಯುಟಿ ಹೆಡ್ ಆಗಿದ್ದರು. ರಿಸರ್ಚ್  ಅಂದ ಮೇಲೆ, ಅವರ ಜಗತ್ತೇ ಬೇರೆ ಆಗಿರುತ್ತದೆ.  ಹಾಗಾಗಿ, ಮನೆಯಲ್ಲಿ ಕೂಡ ಅವರು ಸೈಂಟಿಸ್ಟೇ!–ಒಂಥರಾ, ಹೌದು; ಇಲ್ಲಿ ಸಹ ರಿಸರ್ಚ್ ಸೈಂಟಿಸ್ಟೇ, ಹೆಂಡತಿ ಮುಂದೂ!… ನನ್ನದು ಹಾಗಲ್ಲ; ಕಡ್ಡಿ ತುಂಡಾದಂಥ ಸಮಯದ ಕೆಲಸ. ಹೋಗುವುದು-ಬರುವುದು, ಎರಡೂ ಠಾಕೋಠೀಕ್. ಆದರೆ ಸಾಗರ್ ಟೈಮ್ ಟೇಬಲ್ಲೇ ಬೇರೆ ಥರ!  ಆದ್ದರಿಂದ,  ಒಮ್ಮೊಮ್ಮೆ ಸಾಗರ್ ಪಿಕ್ ಮಾಡೋದು ಸಹ, ಅಲ್ಲೋಲಕಲ್ಲೋಲ ಆದಾಗ, ಆಫೀಸಿನಲ್ಲೇ ಕಾಯುವಿಕೆಯ ಕಾಯಕ… ಎಂಜಿನಿಯರಿಂಗ್ ಡಿಗ್ರಿ, ನನಗೆ ಆಟೋ ಉದ್ಯಮಕ್ಕಾಗಿ ಬಿಡಿ ಭಾಗ ತಯಾರಿ ಮಾಡುವ ಕಂಪೆನಿಯಲ್ಲಿ ಉದ್ಯೋಗ ಕೊಡಿಸಿತ್ತು. ಅಂತೂ ಇಬ್ಬರ ಗಳಿಕೆ ನನಗೆ ಹೊಸ ಅನುಭವ ನೀಡಿತ್ತು. ಅಲ್ಲದೆ ಪ್ರಪ್ರಥಮವಾಗಿ, ನಾನೂ ಸಂಬಳ ನನ್ನ ಕೈಲೂ ನೋಡುತ್ತಿದ್ದೆ!

 ಭಾರತದಲ್ಲಿ ನನ್ನ ಅಪ್ಪ ಅಮ್ಮ ಅಲ್ಲದೆ, ಶಕುಂತಲಕ್ಕ (ನನಗೆ ಶಕ್ಕು ಅಕ್ಕ; ಒಮ್ಮೊಮ್ಮೆ ಕೋಪ ಬಂದಾಗ ಮಾತ್ರ, ಬರೀ ‘ಶಕ್ಕು!), ಭಾವ, ಅವರ ಪುತ್ರ, ಪ್ರಮುಖ್, ಮತ್ತು ನನ್ನ ಆತ್ಮೀಯ ಗೆಳತಿಯರಾದ ವೈಶಾಲಿ, ನೀರಜ, ಇವರಿಷ್ಟೆ: ನನ್ನ ಸುತ್ತ ಹಬ್ಬಿದ್ದ ಬಳ್ಳಿಗಳು; ಮತ್ತು, ಸದಾ ಸುತ್ತ  ಗಿರಕಿ ಹೊಡೆಯುತ್ತಾ ಇದ್ದವರು! – ಅಷ್ಟೊಂದು ‘ಪಾಪ್ಯುಲೇಶನ್’ನ ಮಹಾಸಾಗರದಂಥ ದೇಶದಲ್ಲಿ ಸಹ!

ನಾವು ಅಮೆರಿಕದತ್ತ ಬಂದು ಸುಮಾರು ಮೂರುವರೆ ವರ್ಷಗಳೇ ಸಂದಿದ್ದವು. ನನಗೂ ಫ್ಯಾಮಿಲಿ ಸಿಕ್ನೆಸ್ ಅಂತ ಶುರುವಾಗಿತ್ತು. ಆದರೂ ನಾನು, ಸಾಗರ್ ಅವರಿಗೆ ಹೇಳಿಕೊಂಡಿರಲಿಲ್ಲ. ಅವರು ನನ್ನನ್ನ ವೀಕ್ ಅಂದ್ಕೊಳ್ಳೋದ್ ಸಹ ನನಗೆ ಸುತರಾಂ ಇಷ್ಟ ಇರಲಿಲ್ಲ. ಆದರೂ, ನನ್ನ ಚಲನವಲನ ಗಮನಿಸಿಯೇ ತೀರ್ಮಾನಿಸಿದವರ ಹಾಗೆ (ನಾನಂತೂ ಯಾವುದೇ ಕ್ಲೂ ಕೂಡ ಇಲ್ಲದಂತೆಯೇ ಇದ್ದೆ), ಅಂತೂ ಒಂದು ದಿನ, ಸಾಗರ್ ಅವರು ಸಂಜೆ ಕಾಫಿ ನಂತರ ವಾಕಿಂಗ್ ಹೋಗೋಣ ಅಂದರು. ಆವಾಗ, ವಾಕ್ ಮಾಡ್ತಾ ಮಾಡ್ತಾ,  ಅವರೇ ಕ್ಲೂ ಬಿಟ್ಟರು! “ಲೇ, ಶಾಂಭವಿ” – (ಯಾವಾಗಲೂ ನನ್ನ ಪೂರ್ಣ ಹೆಸರನ್ನೇ, ಪ್ರೀತಿಯಿಂದಲೇ ಕರೆಯುತ್ತಿದ್ದುದು), ಪೀಠಿಕೆ…ಕ್ರಮೇಣ…”ನನಗೂ ನಿನ್ನ ಥರಾನೇ ಬೋರ್ ಬೋರ್ ಆಗ್ತಿದೆ ಕಣೇ…” ಇವ್ರಿಗೆ ಯಾವಾಗ ಹೇಳಿದ್ನೋ ಅಂತ ಕೇಳ್ಬೇಕು ಅನ್ನಿಸ್ತು. ಆದರೆ, ಏನು ಬರುತ್ತೋ ನೋಡೋಣ ಅಂತ ಕೇಳದೆ ಕಾಯ್ದೆ. “ನೀನು ಕೂಡ ಅಪ್ಪ ಅಮ್ಮನ್ನ

 ನೋಡ್ಬೇಕು ಅಂತಿದ್ದಲ್ಲ…ಆಯ್ತು, ಒಂದೇ ಒಂದು ತಿಂಗಳ ಮಟ್ಟಿಗೆ ಊರಿನ ಕಡೆ ಹೋಗೋಣ…” ಅಂದಾಗ, ಅಲ್ಲೇ, ಆ ಕ್ಷಣದಲ್ಲೇ, ವಾಕ್ ಬದಲು ಡಾನ್ಸ್  ಮಾಡಲಾ ಅನ್ನಿಸಿತ್ತು! ದೂಸರಾ ಮಾತೇ ಆಡಲಿಲ್ಲ. ಈಗ, ಖುಷಿ ಸಮಾಚಾರ ಇದ್ದಮೇಲೆ ಬೇರೆ ಥರ ಮಾತೇಕೆ?

ಅಂತೂ ಇಂತೂ, ಅಮೆರಿಕದಲ್ಲಿ ವಿಂಟರ್ ಛಳಿ ಮತ್ತು ಥ್ಯಾಂಕ್ಸ್ ಗಿವಿಂಗ್ ಬರುವ ಸಮಯ ನೋಡಿ, ರಿಸರ್ವ್ ಮಾಡಿಸೇ ಬಿಟ್ಟರು. ದಿನ ಹತ್ತಿರ ಆದಂತೆ ಶಾಪಿಂಗ್ ಶುರು. ಅದಕ್ಕೆ ಥ್ಯಾಂಕ್ಸ್ ಗಿವಿಂಗ್ ಸಹ ಸಹಾಯ ಆಯ್ತು; ಯಾಕಂದರೆ, ಆ ಸಮಯದಲ್ಲಿ ಬೆಲೆಗಳು ಕೂಡ ಸಾಕಷ್ಟು ಕಡಿಮೆ ಆಗುತ್ತವೆ. ಅದರೂ ಸಹ ಬಹಳ ಕನ್ಫ್ಯೂಸ್. ಯಾರಾರಿಗೆ ಏನೇನು ಕೊಂಡಕೊಳ್ಳೋದು ಅಂತ. ಕೊನೆಗೆ ಅದೂ ಆಯ್ತು. ಸರ್ಪ್ರೈಸ್ ಕೊಡೋಣ ಅಂತ ಕೊನೆ ಕ್ಷಣಕ್ಕೆ ಕಾಯ್ದು, ಹೊರಡಲು ಇನ್ನೆರಡು ದಿನ ಇದೆ ಅನ್ನೋವಾಗ ಎಲ್ಲರಿಗೂ ಬಿತ್ತರಿಸಿ, ಒಮ್ಮೆಲೇ ಖುಷಿ  ಕೊಟ್ಟೆವು…

ನನ್ನ ಮತ್ತು ಸಾಗರ್ ಅವರ ಬಣ್ಣದ ವಿರುದ್ಧ ದಿಕ್ಕುಗಳ ಬಗ್ಗೆ, ಅನೇಕ ಮಹನೀಯರಿಗೆ, ನಮ್ಮ ಮದುವೆ ದಿನವೇ ಅಲ್ಲದೆ, ನಂತರವೂ ಬಹಳ “ತುರಿತ” ಆಗಿದ್ದಿರಬಹುದು! ಹಾಗೂ ಈಗಲೂ ಆಗುತ್ತಿರಬಹುದು; ಮಂದೆಯೂ ಆಗುತ್ತಾ ಇರುತ್ತದೆ, ಬಹುಶಃ…! ಸಾಗರ್ ಅವರು ಸ್ವಲ್ಪ ಕಪ್ಪು ಶೇಡ್, ನಿಜ; ಹಾಗಂತ, ಇದ್ದಿಲಂತೂ ಅಲ್ಲ…ಅವರ ಹೆಂಡತಿ ಆದ್ದರಿಂದ ಹೀಗೆ ಹೇಳೋದು ಅಂತಲ್ಲ — ಕಪ್ಪು ಹೌದು, ಮತ್ತು ಇದ್ದಿಲ ಬಣ್ಣವಂತೂ ಅಲ್ಲವೇ ಅಲ್ಲ; ಇದು  ಅಪ್ಪಟ ಸತ್ಯ!

ನನಗೂ ಸಹ ಆರಂಭದಲ್ಲಿ ಸ್ವಲ್ಪ ಕಸಿವಿಸಿ ಆಗಿತ್ತು. ಸ್ವಲ್ಪ ಯಾಕೆ, ಜಾಸ್ತಿನೇ ಅಂದರೂ ಅದು ನನ್ನ ಅಂತಃಸಾಕ್ಷಿ ಒಪ್ಪುವಂಥ ಹೇಳಿಕೆ! ಆದರೆ…ಹುಟ್ಟು! ಹೌದು, ನನ್ನದೂ ಎಡವಟ್ಟು , ಒಂದು ರೀತಿ ಸಾಗರ್ ಅವರದ್ದೂ ಎಡವಟ್ಟೇ!  ನನ್ನದೋ, ಜೊತೆಗೆ, ಹಾಳು ಜಾತಿ ಬೇರೆ…ಜಾತಿಯೇ ಇಲ್ಲದ ಜಾತಿಯಾದ ಸ್ಥಿತಿ ಗತಿ; ಇನ್ನು,ಅವರದ್ದು – ಮೊದಲೇ ಅನಾಥರು.ಇನ್ನು ಜಾತಿ ಅಂತ ಕೇಳೋದು ಯಾರನ್ನ? ಆಂಗ್ಲ ಭಾಷೆ  ಹೇಳಿಕೇನೆ ಇಲ್ಲವೇ, “ಬೆಗ್ಗರ್ಸ್ ಆರ್ ನಾಟ್ ಚೂಸರ್ಸ್”(ಭಿಕ್ಷುಕರು ಆಯ್ಕೆಗೆ ಅರ್ಹರಲ್ಲ), ಅನ್ನುವ ಕಟು ವಾಸ್ತವ! ಅಂದಾಕ್ಷಣ, ನನ್ನದೇನೂ ನಕಾರಾತ್ಮಕ ಚಿಂತನೆ ಖಂಡಿತ ಅಲ್ಲ!

ಹೌದು, ತೊಗಲು ಕಪ್ಪು ಅಂದ ಮಾತ್ರಕ್ಕೆ ಆ ತೊಗಲಿನವರ ಗುಂಡಿಗೆ ಕಪ್ಪೇ, ಅವರ ಆ ಗುಂಡಿಗೆಯ ಸ್ರಾವ ಕಪ್ಪೇ…! ಆದರೆ…ಇದೆಲ್ಲ ಯಾರು ಕೇಳುತ್ತಾರೆ; ನಿಜ ಏನೆಂದರೆ, ಇಂಥ ಲಹರಿಯೇ ವ್ಯರ್ಥ; ಬಿಡಿ!

ಹ್ಞಾ, ಸಾಗರ್ ಅವರ ಗುಣ. ಅನ್ವರ್ಥ ಅನ್ನಿಸುವಂತೆ, ಅವರು ನಿಜ “ಪ್ರೇಮಸಾಗರ”! ಯೋಗಿಯೊಬ್ಬ ಅವರೊಳಗೆ

ಬಂದು ನೆಲೆಸಿದಂಥ ಮನಸ್ಸು…ಇದು ನನ್ನ ಬದುಕಲ್ಲಿ ಅನೂಹ್ಯ ಪ್ರಭೆಯೊಂದು ನಡೆಸಿದ ಪವಾಡ ಅನ್ನಿಸಿದೆ! ಎಷ್ಟೇ ಸೆಂಟಿಮೆಂಟಲ್ ಬಡಬಡಿಕೆ ಇದು ಅಂತ ಅನೇಕರು ಅಂದುಕೊಂಡರೂ     ಸಹ…ಇದೆಂದೆಂದೂ ನನ್ನ ಪಾಲಿನ ವೈಯಕ್ತಿಕ ಸತ್ಯ. ಪಡಬಾರದ್ದು ಪಟ್ಟಿದ್ದು ನಾನು ತಾನೆ…ಒಟ್ಟಿನಲ್ಲಿ ನಾನು ಧನ್ಯೆ!

…ಹೀಗೂ ಕೂಡ ಯೋಚಿಸಿದರೆ ಅದೂ ಸತ್ಯಕ್ಕೆ ದೂರ ಅಲ್ಲ, ಅಲ್ಲವೇ: ಕಪ್ಪಾದವರೆಲ್ಲರ ಗುಂಡಿಗೆಯೂ ಹೊಳೆವ ಬಿಳಿ ಎಂದೇನೂ ಅಲ್ಲವಲ್ಲ. ಗುಂಡಿಗೆ, ಅದರ ಒಳಗೆ ಹರಿವ ನೆತ್ತರು, ಎಲ್ಲ ಕರ್ರಗೆ, ಅಪ್ಪಟ ಕರಿಯಾಗಿ, ಅವರ ಹಾಗೆಯೇ  ಇರುವವರೂ ಇಲ್ಲದೇ ಇಲ್ಲ! ಕಠೋರ ಕಪ್ಪು ಎದೆಯ ಜನ ಕೂಡ  ಇಲ್ಲವೇ ಇಲ್ಲ ಎಂದೂ ಅಲ್ಲ; ಇದ್ದೇ ಇದಾರೆ, ಎಂದೆಂದೂ ಇರುವರು. ಈ ಜಗತ್ತು ಎಲ್ಲ ರೀತಿಯ “ಕಲರ್”ಗಳನ್ನೂ ಮಾರಾಟ ಮಾಡುವ ಪ್ರಳಯಾಂತಕ ಸಂತೆ!

ನಾನು ಮದುವೆ ಹೊಸ್ತಿಲಿಗೆ ಬಂದು ನಿಂತದ್ದೇ ತಡ, ಎಲ್ಲ ಬಗೆಯ  ಹಾಗಲಕಾಯಿಗಳನ್ನೂ ಸಿಗಿಸಿಗಿದು ಸೀಳಿ ಭರ್ರನೆ  ನುಂಗಿ ಬಿಡುವ ಅನನ್ಯ ಅನುಭವಗಳನ್ನೂ ಕಲಿಸಿ ಬಿಟ್ಟಿತ್ತು-ಈ ಮದುವೆ ಅನ್ನುವ ಮಾಯಾಜಾಲ! ಅಪ್ಪ ಅಮ್ಮ ಇಬ್ಬರೂ, ತಾವು ಹೆಣ್ಣು ಮಕ್ಕಳಿಗಾಗಿ ಪಡುತ್ತಿದ್ದ ಬವಣೆ, ನನಗೆ ಮತ್ತು ಅಕ್ಕನಿಗೆ, ಅರಿವಾಗಿಸಿಲ್ಲ ಅನ್ನುವ  ಭ್ರಮೆಗೆ ಬಿದ್ದಿದ್ದರು. ಆದರೆ, ಅವರು ಪಡುತ್ತಿದ್ದ ಹಿಂಸೆಯನ್ನು ನಾವೇ ನೋಡಿದ್ದೇವೆ; ಅಸಹಾಯಕರಾಗಿ ಭಾಗಿಯಾಗಿದ್ದೇವೆ…

ಅಮೆರಿಕಾಕ್ಕೆ ಬಂದಮೇಲೆ,  ಇಲ್ಲಿಯ ಕಪ್ಪು ಜನರು ಬದುಕುವ ಅನೇಕ ‘ಘೆಟ್ಟೋ’ಗಳನ್ನು ನೋಡಿ, ಬಹಳ  ಕಸಿವಿಸಿಯಾಗಿದೆ. ನಾವು ನೋಡಿ ತಿಳಿಯುವ ಇಚ್ಚೆಯಿಂದಲೇ ಅಂಥ ಕಡೆಗೆಲ್ಲ ಹೋಗಿ ಬಂದಿದ್ದೇವೆ. ಅವರ

ಬದುಕಿನ ಜೊತೆಗೆ ನಮ್ಮ ಬದುಕನ್ನು, ನಾವು ಪಟ್ಟಿದ್ದನ್ನು, ತಾಳೆಹಾಕಿ ನೋಡಿ, ಕಹಿ ಕಂಡು ಕುಡಿದಿದ್ದೇವೆ ಇಲ್ಲೂ!

ಈ ಪ್ರಪಂಚದ ಯಾವುದೇ ಮೂಲೆ ಹೊಕ್ಕರೂ ಮನುಷ್ಯ ಮನುಷ್ಯನೇ! ಅವನ ಸ್ವಭಾವವೆಲ್ಲ ಒಂದೇ  — ಯಾಚಿತರನ್ನ, ಅಸ್ವಾಭಾವಿಕರನ್ನ, ಬಿಳಿಯರಲ್ಲದವರನ್ನ; ಎತ್ತರವಿರುವವರು ಕುಳ್ಳರನ್ನ, ಬುದ್ಧಿವಂತರು ದಡ್ಡರನ್ನ, ರೂಪವಿರುವವರು ಇಲ್ಲದವರನ್ನ, ಹೀಗೆ ಏನೆಲ್ಲ ತಮಗೆ ಆಗದೋ ಅದನ್ನೆಲ್ಲವನ್ನೂ ಹೇಯವಾಗಿ, ಹೀಯಾಳಿಸಿ, ತುಳಿದು ಮತ್ತು ಬೀಭತ್ಸವಾಗಿ  ಕಾಣುತ್ತಾ, ನಡೆಸಿಕೊಳ್ಳುತ್ತಾ ಸಾಗುವುದೇ ಈ ನರಜಾತಿಯ ನೀತಿ, ಬದುಕು! ಅಲ್ಲವೇ? ವಿದ್ಯಾವಂತರಲ್ಲೂ ಸಹ ಅಮಾನುಷರೇ ಅವರವರೊಳಗೇ ಕೆಲವರಾದರೂ, ಅನಿಸುವುದೂ ಸಹ ಎಂಥ ಸುಡುಸುಡು ತುತ್ತು…ಹೌದಲ್ಲವೇ…?

–4–

ಭಾರತಕ್ಕೆ ನಿನ್ನೆ ತಾನೇ ಬಂದಿಳಿದ ಹಾಗಿದೆ. ಆಗಲೇ ಹೊರಡುವ ಸಮಯ! ಕಾಲವೇ ಹೀಗೆ…ಇಳಿಜಾರಿನಲ್ಲಿ ಬ್ರೇಕಿಲ್ಲದ ಗಾಡಿ!

ಅಪ್ಪ ಅಮ್ಮನ ಮನೆಗೇ ಶಕುಂತಲ ಪ್ರಮುಖನನ್ನೂ ಕರೆದುಕೊಂಡು ಬಂದವಳು, ನಮ್ಮ ಜೊತೆಗೇ ಇದ್ದುಬಿಟ್ಟಿದ್ದಳು. ಭಾವ ಆಗಾಗ ಬಂದು ಹೋಗುತ್ತಿದ್ದರು. ಈ ನಡುವೆ, ಒಮ್ಮೆ ಮಾತ್ರ ನೀರಜ ಮನೆಗೆ ನಾವು  ಹೋಗಿದ್ದು. ಒಂದೇ ತಿಂಗಳ ರಜೆಯಲ್ಲಿ ಯಾವುದಕ್ಕಾದರೂ ಬಿಡುವೆಲ್ಲಿ ತರುವುದು? ಅವಳೂ ಕೂಡ ಒಮ್ಮೆ ಮಾತ್ರ, ನನ್ನದೇ ಟೈಮ್ ಅಡ್ಜಸ್ಟ್ ಮಾಡಿಕೊಂಡು ಬಂದು ಹೋಗಿದ್ದಳು, ಪಾಪ, ಮಗು ಮತ್ತು ಅವಳು ಇಬ್ಬರೇ, ಮಲ್ಲೇಶ್ವರದಿಂದ.ಗಂಡ ಊರಲ್ಲಿ ಇರಲಿಲ್ಲ ಎಂದು. ಇನ್ನು, ವೈಶಾಲಿ ಇರೋದು ಬೆಳಗಾವಿಯಲ್ಲಿ. ಅಲ್ಲಿಗೆ ಹೋಗುವ ಪ್ರಮೇಯ ಅಂತೂ ಬರೋದೇ  ಇಲ್ಲ ಬಿಡಿ. ಹಾಗೂ ಅವಳೂ ಸಹ; ಬರೇ ಟೆಲಿಫೋನ್ ಟಾಕ್; ಅಷ್ಟಕ್ಕೇ ಸೀಮಿತವಾದ ಈ ಬಾರಿಯ, ನನ್ನ-ವೈಶಾಲಿಯ ನಂಟು…

ಹೊರಡುವ ಮುನ್ನ ಖಂಡಿತ ಊಟಕ್ಕೆ ಬರಲೇಬೇಕು ಎಂದು ಅಡ್ವಾನ್ಸ್ ಆಹ್ವಾನ ಕೊಟ್ಟಿದ್ದಳು, ನೀರಜ. ಕೊನೆಗೆ ಆ ದಿನ ಸಹ ಬಂದು ಬಿಟ್ಟಿದೆ…

ನನಗೇ ಆಶ್ಚರ್ಯ. ಅಮ್ಮನ ಜೊತೆ ಏನೇನೂ ಮಾತೇ ಆಡಲಿಲ್ಲ ಅನ್ನಿಸಿದೆ; ವಾಸ್ತವವಾಗಿ ಹೆಚ್ಚು ಹೆಚ್ಚು ಮಾತಾಡಿದ್ದು, ಕೂತಿದ್ದು, ನಿಂತಿದ್ದು ಎಲ್ಲ ಅಮ್ಮ-ಅಕ್ಕ ಅವರೊಡನೆ! ಅದು ಯಾವಾಗಲೂ ಹೀಗೇ ಅನ್ನಿಸೋದು, ಅಲ್ಲವೇ…ಇನ್ನು ಅಪ್ಪ…?  ಅವರೊಂದಿಗೆ ನಾವು ಬೆಳೆಯುತ್ತಿದ್ದಾಗ, ಅಷ್ಟು ಸಂಕಷ್ಟಗಳ ಮಧ್ಯೆಯೂ ಅವರು ನನ್ನನ್ನ, ಅಕ್ಕನನ್ನ, ನಮಗೆ ಅದು ಅರಿವೆಲ್ಲ ಎಂಬ ಭ್ರಮೆಯಲ್ಲೇ ಇದ್ದರು ಅನ್ನಿಸುವ ಹಾಗೆ, ನಮ್ಮನ್ನ ಅತೀ ಸಲಿಗೆಯಿಂದ, ಫ್ರೆಂಡ್ಸ್  ರೀತಿ ನೋಡಿಕೊಂಡಿದ್ದರು ಮತ್ತು  ಸಾಕಿದ್ದರು…ಆದರೆ, ಅವರ ಸಂಗಡ ಅಂತೂ  ಕಾಲ ಕಳೆಯಲೇ ಇಲ್ಲ ಅನ್ನಿಸ್ತಿದೆ; ಮುಖ್ಯವಾಗಿ ಪಾಪು ಪ್ರಮುಖನನ್ನ ಹೆಚ್ಚು ಹೆಚ್ಚು  ಆಡಿಸಲೇ ಇಲ್ಲ ಅಂತಲೂ ಅನ್ನಿಸಿದೆ; ಅದೇ ಬೇಸರ.

…ಹೀಗೆ ಏನೇನೂ ಮಾಡಲೇ ಇಲ್ಲ ಅಂತೆಲ್ಲಾ ಅನ್ನಿಸುತ್ತಿದೆ; ಬಹುಶಃ ಇದೆಲ್ಲ ಸಹಜ…ಆದರೂ, ಹೊರಡುವ ಸಮಯ ಹೊಸ್ತಿಲಿಗೇ ಬಂದಂತೆ…

ಸಾಗರ್ ಅವರು ಎಲ್ಲೋ ಹೋಗಿದ್ದು  ವಾಪಸ್ಸು ಬಂದದ್ದೇ ಲೇಟು . ನನಗೂ ಕಾಯ್ದು ಕಾಯ್ದು ನಿದ್ದೆ ಹತ್ತೋ ಹಾಗಾಗಿತ್ತು. ಅಕ್ಕ ತಾನು ಬರೋಲ್ಲ ಅಂತ ಮೊದ್ಲೇ ಹೇಳಿದ್ದಳು. ಪ್ರಮುಖ್   ನಿದ್ದೆಯಲ್ಲಿದ್ದ. ಭಾವ ನಾಳೆ ಬರುವುದಿತ್ತು.

ಅಂತೂ ಸಾಗರ್ ಬಂದು, ನಾವು ನೀರಜ ಮನೆ ತಲುಪಿದ್ದೇ ಲೇಟು. ಆದರೂ ಬೆಂಗಳೂರು ಟ್ರಾಫಿಕ್ ನಲ್ಲಿ ತಲುಪಿದ್ದೇ ಖುಷಿ.  ಅಷ್ಟರಲ್ಲಿ ಅವಳ ಮಗಳು ಕೂಡ ನಿದ್ದೆ ಹೋಗಿದ್ದಳು.

ಸಾಗರ್ ಸ್ವಲ್ಪ ಸಮಯ ನೀರಜ  ಪತಿ, ನಿರಂಜನ್ ಜೊತೆಗೆ ಹರಟೆ ಹೊಡೀತಾ ಇದ್ದರು. ಅಮೆರಿಕದ  ಬದುಕು ಮುಂತಾಗಿ ಬಹಳಾನೇ ವಿಚಾರ ವಿನಿಮಯ  ಮಾಡ್ತಾ ಇರೋ ಹಾಗೆ, ಇಬ್ಬರೂ ಜೊತೆಗೇ ಮೆಟ್ಟಿಲನ್ನೇರಿ ಬಾಲ್ಕನಿಗೆ ನಡೆದರು. ಬಹುಶಃ, ಬಿಯರ್ ಕುಡಿಯಲು.

ಸಾಗರ್ ಅಮೆರಿಕದಲ್ಲಿ ಸಹ, ಶನಿವಾರ ಮತ್ತು ಭಾನುವಾರವೇ ಅಲ್ಲದೆ, ರಜಾ ದಿನಗಳಲ್ಲಿ ಕೂಡ, ಬಿಯರ್ ಅಥವ ವೈನ್ ಸ್ವಲ್ಪ ಸ್ವಲ್ಪ  ಕುಡಿಯುತ್ತಿದ್ದರು. ಮತ್ತು ಬೇರೆ  ಫ್ರೆಂಡ್ಸ್ ಮನೆಗಳಿಗೆ ಅಥವಾ ಪಾರ್ಟಿ ಗಳಿಗೆ ಹೋದಾಗಲೂ ಸಹ, ಡ್ರಿಂಕ್ಸ್ ಇಲ್ಲದ ಪಾರ್ಟಿ ವೆರಿ ರೇರ್! ಹಾಗಂತ, ಯಾರೂ ಮಿಸ್ ಬಿಹೇವ್ ಮಾಡೋದು ಅಂತ ಇರಲಿಲ್ಲ ಸದ್ಯ. ಅಮೇರಿಕಾದಲ್ಲಿ, ಇಲ್ಲಿಯ ರೀತಿ ಎಲ್ಲೆಂದರಲ್ಲಿ ಆಲ್ಕೋಹಾಲ್ ಕುಡಿಯೋ ಹಾಗಿಲ್ಲ. ಬಾರ್ ಗಳಲ್ಲಿ, ಮನೆಗಳಲ್ಲಿ ಅಥವಾ ಪರ್ಮಿಟೆಡ್ ಸ್ಥಳಗಳಲ್ಲಿ ಮಾತ್ರ ಕುಡಿಯುವ ಅವಕಾಶ. ಬೇರೆ ಎಲ್ಲಿ ಕುಡಿಯೋದೂ ಅಫೆನ್ಸ್!

ಅವರಿಬ್ಬರೂ ಬಾಲ್ಕನಿ ಕಡೆ ನಡೆದದ್ದೇ, ಈಗ ನಮ್ಮ ಜಗತ್ತು — ಕಿಚನ್ನಿನಲ್ಲಿ! ಮಟ್ಟಸವಾಗಿ ಚಾಪೆ ಹಾಸಿ ನೆಲದಲ್ಲೇ ಕೂತು, ಮೊದಲು ವೈಶಾಲಿಗೆ ಕಾಲ್ ಮಾಡಿದರೆ, ಆ ಕಡೆಯಿಂದ ಬರೀ ಎಂಗೇಜ್ ಶಬ್ದವೇ. ಆಮೇಲೆ ಮಾಡೋಣ ಅಂತ, ಇಷ್ಟು ವರ್ಷ ಕಾಣದ್ದು, ಕಂಡದ್ದು  ಮುಂತಾಗಿ ಎಲ್ಲದರ, ‘ಜಿಜ್ಞಾಸೆ’ಯಲ್ಲಿ ತಲ್ಲೀನರಾದೆವು. ಮದುವೆಯ ನಂತರ ಇದೇ ಮೊದಲ ಬಾರಿ ಈ ರೀತಿಯ ಮಾತುಗಳು…ಬೇಕಾದಷ್ಟು ಮಾತಾಡಿದೆವು, ‘ಹೊಟ್ಟೆ ತುಂಬಾ’ ಅಂತಾರಲ್ಲ, ಅಷ್ಟು! ಹೀಗೆ ಮಾತಾಡ್ತಾ ಮಾತಾಡ್ತಾ, ಇನ್ನೆಲ್ಲಿ ಸಮಯ ಖಾಲಿ ಆಗುತ್ತೋ ಅನ್ನೋ ಆತುರದಲ್ಲಿ ಇದ್ದ ಹಾಗೆ, ನೀರಜ,  ಇದ್ದಕ್ಕಿದ್ದಂತೆ…”ಲೇ, ಶಾಂಭವಿ, ನಾನು ಒಂದು ವಿಷಯ ಕೇಳ್ತೀನಿ, ಬೇಜಾರಿಲ್ಲ ತಾನೇ…”ಅಂತ ಹುಷಾರಿಂದ ಅನ್ನೋ ಹಾಗೆ ಆರಂಭಿಸಿ,..”ಇದು ನಿನ್ನ ಮದ್ವೆ ಆದಾಗ್ನಿಂದ್ಲೂ ನನ್ನನ್ನ ಕಾಡ್ತಾ ಇದೆ…” ಅಂದು ನಿಲ್ಲಿಸಿದಳು…

“ಅಲ್ಲ ಕಣೇ, ನೀನು ನನ್ನ ಪರ್ಮಿಷನ್ ತಗೊಂಡು ಕೇಳ್ಬೇಕ…?” ನಾನು ಹೇಳಿದೆ. ಮತ್ತೆ ಅವಳು, ತಡವರಿಸುವ ಹಾಗೆ,

“ನೀನ್ ನೋಡಿದ್ರೆ… ಹಿಂಗಿದ್ದೀ, ಇಷ್ಟೊಂದು ರೂಪ,…ಕಲರ್ ಎಲ್ಲ… ದೇವರ ದಯೆ…ಆದ್ರೆ, ಸಾಗರ್ ಅವರು ಹಾಗೆ! ಅವರ ಬಣ್ಣದ ಬಗ್ಗೆ ನಿನ್ಗೇನೂ ಅನ್ಸೇ ಇಲ್ವ…” ಅಂದಳು.

ಆ ಕ್ಷಣಕ್ಕೆ ಶಾಂಭವಿಗೆ ಕೂಡ ಸ್ವಲ್ಪ ಕಸಿವಿಸಿ ಆಯ್ತು. ಆದರೆ, ಬಹುಶಃ, ಅವಳು ಇಂಥದೇ ಪ್ರಶ್ನೆಗೆ ತಯಾರಿದ್ದಳು ಅನ್ನಿಸೋ ಹಾಗೆ; ಏಕೆಂದರೆ ಅವರಿಬ್ಬರ   ಜೋಡಿಯೇ ಹಾಗಿತ್ತಲ್ಲವೇ – ಶಾಂಭವಿ ಮತ್ತು ಸಾಗರ್ ಅವರದ್ದು? ಎಷ್ಟೇ ಆತ್ಮೀಯತೆ ಇದ್ದರೂ ಸಹ, ಕ್ಯೂರಿಯಾಸಿಟಿ! ಅಲ್ಲವೇ…? ಆದರೂ ಸಹ, ತನ್ನ ಮೇಲಿನ ಕಾಳಜಿಯಿಂದ ತಾನೆ, ನೀರಜ   ಕೇಳ್ತಾ ಇರೋದು ಅನ್ನಿಸಿ, ಶಾಂಭವಿ,  ಸಾವರಿಸಿಕೊಂಡು, ” ಇಲ್ಲ ಅಂತ ಹೆಂಗ್ ಹೇಳ್ಲಿ, ಹೇಳು. ಖಂಡಿತ ಮೊದ್ಮೊದ್ಲು ನನಗೂ ಸಹ ಕಷ್ಟ ಆಗ್ತಿತ್ತು. ಅದರಲ್ಲೂ ಒಳ್ಳೇ ಬಣ್ಣ ಇರೋರ್ನ ನೋಡ್ದಾಗ, ಅಥವಾ ಬೇರೆಯವ್ರು ನಮ್ಮಿಬ್ಬರ್ನೂ ತಕ್ಕಡೀಲಿಟ್ಟಂಗ್ ಇಟ್ ನೋಡ್ದಾಗ,  ಬೇಸ್ರ ಆಗ್ತಾ ಇತ್ತು…ಆದ್ರೆ, ಜೊತ್ ಜೊತೇಲಿ ಬದಕ್ತಾ ಬದಕ್ತಾ, ಇವ್ರ ಗುಣ ಗೊತ್ತಾದಂಗೆ, ನನ್ನ ಮನಸ್ನೊಳ್ಗೆ ಭಾರಿ ಬದಲಾವಣೇನೇ ಆಯ್ತು. ಅಲ್ದೆ ಅಮೆರಿಕ್ದಲ್ಲಿ ಬಿಳಿಯರ್ಗೂ ಕರಿಯರ್ಗೂ ಆಗ್ತಾ ಇರೋ ಗಲಾಟೆ, ಕರಿಯರು ಪಡೋ ಹಿಂಸೆ, ಎಲ್ಲ ನೋಡಿ ನೋಡಿ ಕೂಡ ಮನಸ್ಸಿಗೆ ಕಸಿವಿಸಿ ಆಯ್ತು. ಅವರಲ್ಲೂ ಸಹ ಈಗ ಒಂದ್ ರೀತಿ ಬದಲಾವಣೆ ಆಗ್ತಾ ಇದೆ, ನಿಜ. ಹಾಗೆ   ನನ್ನ ಮನಸ್ಸು ಕೂಡ ಪರಿವರ್ತನೆ ಅಂತ ಆಯ್ತು…ಈಗ… ಐ ರಿಯಲಿ ಲವ್ ಹಿಮ್ ಲೈಕ್ ದೇರೀಸ್ ನೋಬಡಿ ಎಲ್ಸ್ ಇನ್ ಮೈ ಲೈಫ್”!

ಹೀಗೆ ಹೇಳಿದ ಮೇಲೆ, ಬಹುಶಃ, ನೀರಜಾಗೆ ನಿಜವಾದ, ನಿರಂತರವಾದ ರಿಲೀಫ್ ಆಗಿದೆ ಅಂತ ಶಾಂಭವೀಗೆ ಅನ್ನಿಸುತ್ತಿತ್ತು…ಗಂಡಸರು ಇಬ್ಬರೂ ಕೆಳಗೆ ಇಳಿಯೋ ಸೂಚನೆ ಬಂದದ್ದೇ, ಇಬ್ಬರೂ ಎದ್ದು ಊಟಕ್ಕೆ ಅರೇಂಜ್ ಮಾಡಿದರು. ಹಾಗಾದರೂ ವೈಶಾಲಿ ಕಾಲಂತೂ ಬರಲೇ ಇಲ್ಲ…ಅಂತೂ ಊಟ ಅಂತ ಆಯ್ತು…ಅಷ್ಟರಲ್ಲಿ ನಾನು, ನೀರಜ  ಹಾಗೂ, ಸಾಗರ್ ಮತ್ತು ನಿರಂಜನ್ ಬೇಕಾದಷ್ಟು, ಸಾಕಾದಷ್ಟು ಮಾತಾಡಿದ್ದಾಗಿತ್ತು.

ಮಾತು…ಮಾತು…ಮಾತು! ಇನ್ನು ಯಾವಗಲೋ ಮತ್ತೆ ಈ ಇಂಥ ಮಾತು…ರಾತ್ರಿ ಒಂದು ಘಂಟೆ ಆಗಿತ್ತು. ಸುಮಾರು ತಿಂಗಳು, ಬಹುಶಃ ವರುಷಗಳೇ  ಮೆಲಕುವಂಥ  ಮಾತುಗಳು, ನೆನಪುಗಳು ನಮ್ಮ ಬುತ್ತಿಯೊಳಗೆ ಸೇರಿದ್ದಾಗಿತ್ತು…ಇನ್ನೇನು ಹೊರಡುವ ಹೊತ್ತು!

 ಯಾವ ರೀತಿಯಲ್ಲೂ, ಬೀಳ್ಕೊಡುಗೆ  ಕಿಂಚಿತ್ತೂ ಸಹಿಸುವಂಥದ್ದಲ್ಲ! ಬಹುಶಃ ಹಾಗಾಗಿಯೇ, ಮಾತಿನೊಳಗೆ ಒಂದು ರೀತಿಯ  ಆನಂದಮಯವಾಗುವಂಥ ಮರ್ಮದ ಲೇಪನ ಯಥೇಚ್ಛ  ತುರುಕಿರುವುದು!… ನನ್ನ ಮತ್ತು ನೀರಜಳ ಕಣ್ಣುಗಳಲ್ಲಿ ಇಣುಕುತ್ತಿದ್ದ ಬಿಸಿ ಬಿಸಿ ತುಪ್ಪದ ಹನಿಗಳು, ಹೋಗಿ ಬಾ ಅಂತ ಅವಳು… ಹೋಗಿ ಬರುವೆ ಅಂತ ನಾನು… ಹೇಳುವ ಹಾಗೆ…

ನಾಡಿದ್ದು ನಮ್ಮ ರಿಟರ್ನ್ ಫ್ಲೈಟ್…

ಈಗ ಇಲ್ಲಿ ಇವರನ್ನ… ನಾಡಿದ್ದು ಏರ್ಪೋರ್ಟಿನಲ್ಲಿ, ನಮ್ಮ ಮನೆ ಮಂದಿಯನ್ನ… ಬೀಳ್ಕೊಂಡು ಹೊರಟರಾಯಿತು…ಅಂತೂ “ಬೀಳ್ಕೊಡುಗೆ” ಅಂತ ಬಂದೇ ಬರುತ್ತದೆ…ಎಲ್ಲರಿಗೂ, ಹಾಗೇ ಕೈ ಬೀಸಿದ ನಂತರ ನಮ್ಮ ಪಯಣ…

ಲಾಂಗ್ ಫ್ಲೈಟ್ ನಂತರ ಸಿಕ್ಕುವುದೇ  ನಮ್ಮ “ಕಾಯಕಕಾಂಡ”! ಅದಕ್ಕಾಗಿ ಸಿದ್ಧವಿರುವ, ವಿಶಾಲವಾಗಿ ಹರಡಿರುವ ಅಮೆರಿಕ ಎಂಬ ವೈಪರೀತ್ಯಗಳ ಖಂಡ… ಮತ್ತೆ ಮುಂದೆ ಎಂದೋ… ಏನೋ…

******************

2 thoughts on “ಶಾಂಭವಿ, ಬಣ್ಣ, ಜಾತಿ ಮುಂತಾಗಿ..

  1. ಕಥೆಯ ಅಂತ್ಯ ನೀರಸ ಆಯಿತಾ ಅನ್ನಿಸುತ್ತೆ. ಮತ್ತೆ ತುಂಬಾ characters ಗಳ ಅವಶ್ಯಕತೆ ಬೇಕಿತ್ತಾ
    But your story telling style makes one to wait for “ಮುಂದೇನು ಮುಂದೇನು ”

    ಚೆನ್ನಾಗಿದೆ ಮೂರ್ತಿ.I envy you!!

Leave a Reply

Back To Top