ನೇಪಥ್ಯ ಸೇರಿದ ಗುಡಿಹಳ್ಳಿ ಹೆಜ್ಜೆ ಗುರುತು

ನೇಪಥ್ಯ ಸೇರಿದ ಗುಡಿಹಳ್ಳಿ ಹೆಜ್ಜೆ ಗುರುತು

ಗೆಳೆಯ ಗುಡಿಹಳ್ಳಿ ನಾಗರಾಜ ಕೊನೆಯ ದಿನಗಳಲ್ಲಿ ದೈಹಿಕವಾಗಿ ತುಂಬಾ ಬಳಲಿದ್ದ. ಈಚೆಗೆ ಮಹಡಿಯಿಂದ ಕೆಳಗೆ  ಇಳಿದು ಬರುತ್ತಿರಲಿಲ್ಲ. 10 – 12 ದಿನಗಳಿಂದ ಮಾತು ನಿಂತು, ಯಾರನ್ನೂ ಗುರ್ತಿಸುತ್ತಿರಲಿಲ್ಲ ಎಂದು‌ ತಿಳಿದು ನೋವುಂಟಾಯಿತು. ನನಗೂ ತಿಳಿದು ಬಂದ ಸುದ್ದಿಯಂತೆ ಲಿವರಿಗೆ ಸಂಬಂಧಿಸಿದ ಕ್ಯಾನ್ಸರ್ ಇತ್ತು. ಅದು ಗೊತ್ತಾಗುವ ಮೊದಲೆ ನರ ದೌರ್ಬಲ್ಯಕ್ಕೆ ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ.

ಪತ್ರಿಕೆಯಲ್ಲಿ ದುಡಿದ ಹಣವನ್ನು ನಿವೇಶನ‌ ಕೊಳ್ಳುವ ಆಸೆಯಿಂದ ಹಿರಿಯ ಪತ್ರಕರ್ತರೊಬ್ಬರ ಅಪೇಕ್ಷೆ ಮೇರೆಗೆ ಖಾಸಗಿ ಬ್ಯಾಂಕ್ ವೊಂದರಲ್ಲಿ ಎಂಟೊಂಬತ್ತು ಲಕ್ಷ ಠೇವಣಿ ಇಟ್ಟಿದ್ದ. ಬ್ಯಾಂಕ್ ಮುಳುಗಿತು. ಅವರಿವರಿಂದ ಒತ್ತಾಯ ತಂದಿದ್ದರಿಂದ ಮೂರ್ನಾಲ್ಕು ಲಕ್ಷ ವಾಪಾಸು ಬಂತು. ಉಳಿದ ಹಣಕ್ಕೆ ಅಲೆಯುತ್ತಲೇ ಇದ್ದ. ಕೊನೆಗೂ ದೊಡ್ಡ ಮೊತ್ತ ಅವನಿಗೆ ಸೇರಲೇ ಇಲ್ಲ. ಅಲ್ಲಿ ಹಣ ತೊಡಗಿಸಿ ಕೈ ಸುಟ್ಟುಕೊಂಡ.

ಅದು ಪರಿಚಯಿಸಿದ ಹಿರಿಯ ಪತ್ರಕರ್ತರ ಸಂಬಂಧಿ ಬ್ಯಾಂಕ್!  ಆ ಪತ್ರಕರ್ತರು ಇವನನ್ನು ಮೋಸದ ಜಾಲದಲ್ಲಿ ಸಿಲುಕುವಂತೆ ಮಾಡಿದ್ದರು. ಅದರ ನೋವಿನ ಬೆನ್ನಲ್ಲೆ ಹಿರಿಯ ಮಗನ ಮದುವೆ ನಂತರದ ಸಮಸ್ಯೆ, ಮುಂದೆ ವಿಚ್ಛೇದನದ ಕಷ್ಟ ಎದುರಾದದ್ದು, ಕೋರ್ಟು ತೀರ್ಪು ಬರುವುದರೊಳಗೆ ಅದಕ್ಕೆ ಖರ್ಚಾದ ಲಕ್ಷಾಂತರ ಹಣದ ಸಾಲ…. ಇವೆಲ್ಲ ಕೊರಗು ಅವನಿಗಿತ್ತು. ಗೋವಿಂದರಾಜನಗರದಲ್ಲಿ 20×30ರಲ್ಲಿ ಪುಟ್ಟ ಮನೆ ಮಾಡಿಕೊಂಡದ್ದೆ ತೃಪ್ತಿ. ಅದನ್ನು ರಂಗಭೂಮಿಯ ಆಪ್ತ ಎಲ್. ಕೃಷ್ಣಪ್ಪ ಅವರು ಉಸ್ತುವಾರಿ ತೆಗೆದುಕೊಂಡು ಕಟ್ಟಿಸಿದರು.

ನಾವೆಲ್ಲ ‌ಬಂಡಾಯ ಸಾಹಿತ್ಯ ಸಂಘಟನೆಯ ಸಂಗಾತಿಗಳು. ಒಡನಾಟದಲ್ಲಿನ ಸಮ್ಮೇಳನಗಳು, ವಿಚಾರ ಸಂಕಿರಣಗಳು, ಸ್ನೇಹಿತರ ಮಿಲನ, ಎಡಪಂಥೀಯ ಬದ್ಧತೆ, ಚಳವಳಿ, ಧರಣಿ, ಹೋರಾಟದಲ್ಲಿ ಭಾಗಿಯಾಗಿದ್ದೇವೆ. ಅದಕ್ಕೂ ಮೊದಲು ಹೊಸಪೇಟೆಯಲ್ಲಿ ಓದುವಾಗ ಎಸ್ ಎಫ್ ಐ ಸಂಘಟನೆಯಲ್ಲಿ   ಸಕ್ರಿಯನಾಗಿದ್ದ. ಅವನು ಇಂಗ್ಲಿಷ್ ಎಂ.ಎ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮುಗಿಸಿ, ಹರಪನಹಳ್ಳಿಯಲ್ಲಿ ಉಪನ್ಯಾಸಕ ಆಗಿದ್ದಾಗ ತನ್ನ ವಿದ್ಯಾರ್ಥಿನಿಯನ್ನೆ ಇಷ್ಟಪಟ್ಟು ಮದುವೆಯಾದ. ಅವರು ಈಗ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಪನ್ಯಾಸಕ ವೃತ್ತಿ ಬಿಟ್ಟು ಮುಂದೆ  “ಪ್ರಜಾವಾಣಿ” ಪತ್ರಿಕೆಗೆ ಸೇರಿಕೊಂಡಾಗ ಚಿತ್ರದುರ್ಗ ಜಿಲ್ಲೆಯ ಮುಖ್ಯನಾಗಿ ಕಾರ್ಯನಿರ್ವಹಿಸಿದ. ಅಲ್ಲಿ ಎಡಪಂಥೀಯ ಚಳವಳಿಗಳು ಮುಖ್ಯವಾಗಿ ದಲಿತ ಹಾಗೂ ಬಂಡಾಯ ಚಳವಳಿಗೆ ಬೆಂಬಲವಾಗಿ ನಿಂತ. ಆಗ ಚಿತ್ರದುರ್ಗದಲ್ಲಿ ಎಂಟನೇ ರಾಜ್ಯ ‌ಬಂಡಾಯ ಸಾಹಿತ್ಯ ಸಮ್ಮೇಳನ ಮಾಡಿದ. ಅಲ್ಲಿ ಮಂಡಿಸಿದ ಪ್ರಬಂಧಗಳನ್ನು ಒಟ್ಟುಗೂಡಿಸಿ ಪುಸ್ತಕ ಹೊರತಂದ. ಬಂಡಾಯದ ವಿಚಾರಗಳ ಅಧಿಕೃತ ಕೃತಿಯಾಗಿ ಅದು ಇವತ್ತಿಗೂ ದಾಖಲಾಗಿದೆ.

ಗುಡಿಹಳ್ಳಿಗೆ ರಂಗಭೂಮಿ ಬಗ್ಗೆ ವಿಶೇಷ ಒಲವು ಆಸಕ್ತಿ. ವೃತ್ತಿ ಹಾಗೂ ಹವ್ಯಾಸಿ ನಡುವೆ ಕೊಂಡಿಯಾಗಿ ಬರಹ ಬರೆದ. ಹೆಚ್ವು ವೃತ್ತಿ ಕಲಾವಿದರ ಕಡೆಯೇ ವಾಲಿದ್ದ. ಹತ್ತಾರು ಆ ವೃತ್ತಿ ಕಲಾವಿದರ ಜೀವನಚರಿತ್ರೆ, ಪರಿಚಯ, ವಿಶ್ಲೇಷಣೆಯ ಕೃತಿ ಹೊರ ತಂದ.ಮಹತ್ವದ ಕೃತಿಗಳಲ್ಲಿ ಗುಬ್ಬಿ ವೀರಣ್ಣನವರ ಬಗ್ಗೆ ಕಿರು ಹೊತ್ತಿಗೆ, ಚಿಂದೋಡಿ ಲೀಲಾ,  ಮಾಲತಿಶ್ರೀ ಮೈಸೂರು,  ಕೆ. ನಾಗರತ್ನಮ್ಮ ಮೊದಲಾದ ಕಲಾವಿದೆಯರ ಆತ್ಮಕಥೆ ಬರೆದ. ಕೆಲವು “ಸುಧಾ” ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದವು.

1992 ರಲ್ಲಿ ದಾವಣಗೆರೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಗತಿಶೀಲ ಸಾಹಿತಿ ನಿರಂಜನ ಅವರ ಕುರಿತು ಒಂದು ದಿನದ ವಿಚಾರ ಸಂಕಿರಣ ನಡೆಯಿತು. ಪ್ರೊ. ಬರಗೂರು ರಾಮಚಂದ್ರಪ್ಪ ಆಗ ಅಕಾಡೆಮಿಯ ಅಧ್ಯಕ್ಷರು. ನಾನು, ಗುಡಿಹಳ್ಳಿ ಒಂದೇ ವೇದಿಕೆಯಲ್ಲಿ ಉಪಸ್ಥಿತಿ ಇದ್ದು ಪ್ರಬಂಧ ಮಂಡಿಸಿದ್ದೆವು. ಮುಂದೆ ವೇದಿಕೆಯಲ್ಲಿ‌ ಇರುವ ಇಂಥ ಹಲವಾರು‌ ಸಂದರ್ಭ ಬಂದಿವೆ.

ನಾಟಕ ಅಕಾಡೆಮಿ ಸದಸ್ಯ ಆಗಿದ್ದಾಗ ಮಹತ್ವದ ಯೋಜನೆ ರೂಪಿಸಲು ಅಧ್ಯಕ್ಷರಿಗೆ ಬೆನ್ನೆಲಬಾದ. ಹಲವು ರಂಗಕೃತಿಗಳು ಬರಲು ಕಾರಣನಾದ. “ಪ್ರಜಾವಾಣಿ” ಪತ್ರಿಕೆಯಿಂದ ನಿವೃತ್ತಿ ಆದ ನಂತರ ರಂಗಭೂಮಿಗೆ ಸಂಬಂಧಿಸಿದ ಪತ್ರಿಕೆ ಹೊರತಂದ. ತನ್ನ ಅನಾರೋಗ್ಯದ ದಿನಗಳಲ್ಲೂ, ಕರೋನಾ ಕಾಲದಲ್ಲೂ

ಒಂದರ್ಥದಲ್ಲಿ ಕೊನೆಯವರೆಗೂ “ರಂಗನೇಪಥ್ಯ”  ಪತ್ರಿಕೆ ಹೊರ ತಂದು ಪ್ರಾಮಾಣಿಕ ಸೇವೆ ಮಾಡಿದ. ಕೊನೆಯ ಮೂರು ನಾಲ್ಕು ಸಂಚಿಕೆಯ ಸಂಪಾದಕೀಯ ಬರೆಯಲಾಗದೆ, ಬಾಯಲ್ಲಿ ಹೇಳಿ ಇನ್ನೊಬ್ಬರಿಂದ ಬರೆಯಿಸುತ್ತಿದ್ದ. ಒಂದು ಸಂಚಿಕೆಯ ಸಂಪಾದಕೀಯ ನನ್ನ ಹತ್ತಿರ ಟೈಪು ಮಾಡಿಸಿದ್ದ.  ಗೆಳೆಯ, ಪ್ರಾಧ್ಯಾಪಕ ಡಾ. ರುದ್ರೇಶ ಅದರಂಗಿ ಕೊನೆಯ ಕೆಲವು ಸಂಚಿಕೆಗಳ ನಿರ್ವಹಣೆ ಮಾಡಿದ. ಗುರುವಾರ ಸಂಜೆ ಅವನು ತೀರಿದ ಸಂದರ್ಭಕ್ಕೆ ಅನೇಕರ‌ ಕೈಗೆ “ರಂಗ ನೇಪಥ್ಯ” ಸೇರಿತ್ತು. ಅಷ್ಟರಲ್ಲೇ ಗೆಳೆಯ ಪೂರ್ಣ ನೇಪಥ್ಯಕ್ಕೆ ಹೊರಟು ಹೋಗಿದ್ದ! ಇದೆಂಥ ಕಾಕತಾಳೀಯವೋ…!

ಒಮ್ಮೆ ಪ್ರಜಾವಾಣಿಗೆ ಒಂದು ವಾಚಕರವಾಣಿಗೆ ಪತ್ರ ಬರೆಯಬೇಕಿತ್ತು. ಅದು ಸಾಧ್ಯವಾಗದ್ದರಿಂದ ನನಗೆ ಫೋನಲ್ಲಿ ಹೇಳುತ್ತ ಹೋದ. ಅದನ್ನು ನಾನೆ ಟೈಪು ಮಾಡಿ ಕೊಟ್ಟಿದ್ದೆ. ವೃತ್ತಿ, ಹವ್ಯಾಸಿ ರಂಗಭೂಮಿ ಬಗ್ಗೆ ಅವನಷ್ಟು ಜ್ಞಾನ ಪಡೆದ ಪತ್ರಕರ್ತರು ಕಡಿಮೆ. ನಮ್ಮಿಬ್ಬರ ನಡುವೆ ಅನೇಕ ಸ್ವಾರಸ್ಯ ಘಟನೆಗಳಿವೆ. ಇಬ್ಬರ  ಹೆಸರಿನ ಹೋಲಿಕೆಯಿಂದ ಅನೇಕರು ಗೊಂದಲಕ್ಕೀಡಾಗಿದ್ದೂ ಉಂಟು. ಅವನ ಲೇಖನ‌ ಓದಿ ನನಗೆ ಅಭಿನಂದನೆ, ಮೆಚ್ಚುಗೆ ಹೇಳೋರು! ನನ್ನ ಬರಹ ಓದಿ ಅವನಿಗೆ ಹೇಳೋರು! ಅವನು ಮಾಡಿದ್ದ ಯಾವುದೋ ತಪ್ಪಿಗೆ ಒಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಿಕ್ಕ ಧಾರವಾಡದ ಪ್ರೊ. ದೇವೇಂದ್ರಕುಮಾರ ಹಕಾರಿ ಅವರಿಂದ ಎಗ್ಗಾಮುಗ್ಗ ಬೈಸಿಕೊಂಡಿದ್ದೆ. ಆಮೇಲೆ ಅವರಿಗೆ ಹೇಳಿದ್ದೆ: “ಸಾರ್, ನೀವು ಬೈಯ್ಯೋ ಗುಡಿಹಳ್ಳಿ ನಾನಲ್ಲ ಸಾರ್! ನಾನು ಆರ್ ಜಿ ಹಳ್ಳಿ” ಅಂದಾಗ ಹೌಹಾರುವ ಸಂದರ್ಭ ಅವರದಾಗಿತ್ತು! ಇನ್ನೂ ಎಷ್ಟೋ ಘಟನೆಗಳು ನಮ್ಮಿಬ್ಬರ ನಡುವೆ ನಡೆದಿದ್ದವು.

ಕರೋನಾ ಕಾಲಘಟ್ಟದಲ್ಲೂ ನಿರಂತರ ರಂಗಪತ್ರಿಕೆ ತಂದು ವೃತ್ತಿ ಗೌರವ ಉಳಿಸಿಕೊಂಡಿದ್ದ ಮಿತ್ರನಿಗೆ ನಮನಗಳು.

ಫೋಟೊ ಆಲ್ಬಂ

**

ಆರ್ ಜಿ ಹಳ್ಳಿ ನಾಗರಾಜ

One thought on “ನೇಪಥ್ಯ ಸೇರಿದ ಗುಡಿಹಳ್ಳಿ ಹೆಜ್ಜೆ ಗುರುತು

  1. ನನ್ನೂರಿನ ಅಣ್ಣನ ಬಗ್ಗೆ ಹೃದಯಸ್ಪರ್ಶಿಯಾಗಿ ಬರೆದಿರುವಿರಿ…

Leave a Reply

Back To Top