ಅಂಕಣ ಬರಹ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ—40
ಆತ್ಮಾನುಸಂಧಾನ
ಆಗೇರ ಸಮಾಜದ ತರುಣನಿಗೆ ಪ್ರಾಧ್ಯಾಪಕ ಹುದ್ದೆ”— ಎಂದು ಸುದ್ದಿಯಾದೆ
: ಧಾರವಾಡ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಎರಡು ವರ್ಷಗಳು ಕಳೆದು ಹೋದದ್ದೇ ತಿಳಿಯಲಿಲ್ಲ. ಬಹುಪಾಲು ತಂಪಾಗಿಯೇ ಇರುವ ಪ್ರಾಕೃತಿಕ ಪರಿಸರ, ಬಯಲು ಸೀಮೆಯ ಆಪ್ತವೆನ್ನಿಸುವ ಕನ್ನಡ ಭಾಷೆಯ ಸೊಗಸು, ಮತ್ತೆ ಮತ್ತೆ ಕರ್ನಾಟಕ ವಿದ್ಯಾವರ್ಧಕ ಸಂಘದ, ಕನ್ನಡ ವಿಭಾಗದ ಕಾರ್ಯಕ್ರಮಗಳು, ಅಲ್ಲಿಗೆ ಬಂದು ಹೋಗುವ ಹಿರಿ-ಕಿರಿಯ ಲೇಖಕರು, ಕವಿಗಳು, ವಿದ್ವಾಂಸರು ಇವರನ್ನೆಲ್ಲ ನೋಡುವುದೇ ಕೇಳುವುದೇ ಒಂದು ಹೆಮ್ಮೆ ಮತ್ತು ಸೊಗಸು! ಬಹುತೇಕ ಕಾರ್ಯಕ್ರಮಗಳಲ್ಲಿ ಪ್ರತ್ಯಕ್ಷ ಕಾಣಸಿಗುವ ಬೇಂದ್ರೆ, ಕಣವಿ, ಪುಟ್ಟಪ್ಪ, ಚಂಪಾ, ಗಿರಡ್ಡಿ, ಪಟ್ಟಣ ಶೆಟ್ಟಿ ಮುಂತಾದ ಮಹನೀಯರ ಮಾತು ಕತೆಗಳೆಲ್ಲ ಎಷ್ಟು ಹರ್ಷದಾಯಕವಾಗಿದ್ದವೆಂದರೆ ನನ್ನ ಜೇಬಿನ ಖಾಲಿತನ ಎಂದೂ ನನಗೆ ಕಷ್ಟದಾಯಕವಾಗಿ ಕಾಡಲೇ ಇಲ್ಲ.
ಎರಡು ವರ್ಷ ಪೂರ್ತಿ ಕಳೆಯಲು ನಮ್ಮ ತಂದೆಯವರಿಂದ ನಾನು ಪಡೆದದ್ದು ಕೇವಲ ಎಂಟುನೂರು ರೂಪಾಯಿಗಳು ಮಾತ್ರ. ನನ್ನ ಊಟಕ್ಕೆ, ಬಟ್ಟೆಗೆ ಸಾಕು ಎನ್ನಿಸುವಷ್ಟು ಸ್ಕಾಲರ್ ಶಿಪ್ ಸಿಗುತ್ತಿತ್ತಲ್ಲ? ಅಪ್ಪ ಕಳುಹಿಸಿದ ಅಷ್ಟೂ ಹಣಕ್ಕಾಗಿ ಅವರು ಪಟ್ಟ ಶ್ರಮ ಎಷ್ಟೆಂಬುದು ನನಗೆ ತಿಳಿಯದ ಸಂಗತಿಯೇನೂ ಅಲ್ಲ. ತಿಂಗಳಿಗೆ ದೊರೆಯುವ ಎಪ್ಪತ್ತೋ ಎಂಭತ್ತು ರೂಪಾಯಿಗಳ ಮಾಸ್ತರಿಕೆಯ ಸಂಬಳದಲ್ಲಿ ಸಾಲದ ಕಂತು ಕಳೆದು ಕೈಗೆ ಬರುವ ಕಾಸಿನಲ್ಲೇ ತಮ್ಮ ತಂಗಿಯರ ಹೊಟ್ಟೆ ಬಟ್ಟೆ ಓದು ಬರಹದ ಖರ್ಚು ಹೊಂದಿಸಲು ಅಪ್ಪ ಪಡಬಾರದ ಬವಣೆ ಪಡುತ್ತಿದ್ದರು. ಆದರೂ ನನ್ನ ಮೇಲಿನ ಭರವಸೆ ಮತ್ತು ವಿಶ್ವಾಸದಿಂದ ನನಗೆ ಓದಿನ ಅವಕಾಶ ಕಲ್ಪಿಸಿಕೊಟ್ಟ ಅಪ್ಪ ನನ್ನ ಪಾಲಿನ ನಿಜವಾದ ದೇವರೇ ಅಂದರೆ ಅತಿಶಯೋಕ್ತಿಯಲ್ಲ.
ಮೊದಲ ವರ್ಷದ ಅಂಕಗಳಿಕೆಯ ಆಧಾರದಿಂದ ಅಂತಿಮ ವರ್ಷದ ಫಲಿತಾಂಶದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣನಾಗುವ ವಿಶ್ವಾಸವಂತೂ ನನಗಿತ್ತು. ಕಾಲೇಜು ಉಪನ್ಯಾಸಕನಾಗಲು ಕನಿಷ್ಟ ಅರ್ಹತೆಗೆ ಅಷ್ಟು ಅಂಕಗಳು ಸಾಲುತ್ತಿದ್ದ ಕಾಲಮಾನ ಅದು. ಹೇಗೂ ನಾನು ಕಾಲೇಜು ಉಪನ್ಯಾಸಕನಾಗಬಹುದೆಂಬ ಆತ್ಮವಿಶ್ವಾಸದಿಂದಲೇ ಪ್ರೀತಿಯ ಧಾರವಾಡಕ್ಕೆ ವಿದಾಯ ಹೇಳಿದ್ದೆನಾದರೂ ಮನಸ್ಸಿನ ಮೂಲೆಯಲ್ಲಿ “ಇಲ್ಲಿಯೇ ಬಂದು ಉಪನ್ಯಾಸಕನಾಗಬೇಕು” ಎಂಬ ಕನಸೊಂದು ಅಂತರಂಗದಲ್ಲಿ ಚಿಗುರೊಡೆದಿತ್ತು.
ಪರೀಕ್ಷೆಯ ಫಲಿತಾಂಶ ಮತ್ತು ನಿರೀಕ್ಷಿತ ಅಂಕಗಳು ಬಂದಾದ ಬಳಿಕ ಉದ್ಯೋಗ ಅನ್ವೇಷಣೆಯ ಪ್ರಯತ್ನದಲ್ಲೇ ಆರೇಳು ತಿಂಗಳು ಕಳೆದವು. ಅಂದು ತೀರಾ ಅಪರೂಪವಾಗಿ ನಮ್ಮೂರಿನಂಥ ಕುಗ್ರಾಮಗಳಿಗೆ ತಲುಪುವ ಪತ್ರಿಕೆಗಳಲ್ಲಿ ಉದ್ಯೋಗ ಜಾಹೀರಾತು ನೋಡುವುದು ಅದಕ್ಕೆ ಅರ್ಜಿ ಹಾಕಿ ಕಾಯುವುದು ಒಂದು ಆಟದಂತೆ ನಡೆಯುತ್ತಿತ್ತು.
ಬೇಸರ ನೀಗಿಸುವ ಗೆಳೆಯರ ಗುಂಪು, ಆಚೀಚೆ ನಡೆಯುವ ಬಯಲಾಟಗಳ ವೀಕ್ಷಣೆ ಮತ್ತು ತೊಡಗುವಿಕೆಯಿಂದ ದಿನ ಕಳೆಯುವುದೆಂದೂ ಕಷ್ಟವಾಗುತ್ತಿರಲಿಲ್ಲ ಆಗಲೇ ನಾನು ಬಿ.ಎ ಪದವಿ ಪಡೆದ “ಗೋಖಲೆ ಸೆಂಟನರಿ ಕಾಲೇಜ್ ಅಂಕೋಲಾದಲ್ಲಿ ಕನ್ನಡ ಉಪನ್ಯಾಸಕರ ಹುದ್ದೆ ಖಾಲಿ ಇದೆ” ಎಂಬ ಜಾಹೀರಾತು ಕಣ್ಣಿಗೆ ರಾಚಿತು!
ನನಗೆ ಇದು ಹಲವಾರು ಕಾರಣಗಳಿಂದ ಇಷ್ಟದ ಸಂಗತಿಯಾಗಲಿಲ್ಲ. ಏಕೆಂದರೆ ಗೋಖಲೆ ಸೆಂಟನರಿ ಕಾಲೇಜು ದಿನದಿಂದ ದಿನಕ್ಕೆ ಪ್ರತಿಷ್ಠೆಯ ದಿಕ್ಕಿನಲ್ಲಿ ಪ್ರಗತಿ ಹೊಂದುತ್ತ ನಡೆದಿತ್ತು. ಮಾನ್ಯ ದಿನಕರ ದೇಸಾಯಿಯವರ ಸಂಕಲ್ಪ ದಂತೆ ಎಲ್ಲ ವಿಧದಲ್ಲಿಯೂ ಜಿಲ್ಲೆಯಲ್ಲಿ ಪ್ರಮುಖ ವಿದ್ಯಾಸಂಸ್ಥೆಯಾಗಿ ಮುನ್ನಡೆಯುತ್ತಿತ್ತು. ಅಲ್ಲಿರುವ ಎಲ್ಲ ಅಧ್ಯಾಪಕರೂ ಅಧ್ಯಾಪಕ ವೃತ್ತಿಗೆ ಪರಿಪೂರ್ಣ ನ್ಯಾಯ ಸಲ್ಲಿಸುವ ವಿದ್ಯಾಸಂಪನ್ನರಾಗಿದ್ದರು. ಕೆಲವೇ ವರ್ಷಗಳಾದರೂ ವಿದ್ಯಾರ್ಥಿಯಾಗಿ ನಾನು ಜಿ.ಸಿ.ಕಾಲೇಜಿನಲ್ಲಿ ಕಂಡ ಶಿಸ್ತು ಘನಸ್ಥಿತಿಯ ಭಾಗವಾಗುವ ಅರ್ಹತೆ ನನಗೆ ಸಾಧ್ಯವಾಗಿದೆಯೆ? ಎಂಬ ಪ್ರಶ್ನೆ ಹುಟ್ಟಿದ ಕ್ಷಣದಿಂದ ನಾನು ಅಧೀರನಾದೆ.
ಇನ್ನೊಂದು ಬಹುಮುಖ್ಯ ಸಂಗತಿಯೆಂದರೆ ಸಾವಿರಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿ ಸಮುದಾಯ. ಬಹುಪಾಲು ಮೇಲ್ವರ್ಗದ ಮೇಲ್ಜಾತಿಯ ಕುಟುಂಬದ ಮಕ್ಕಳು. ಅಂಥ ವಿದ್ಯಾರ್ಥಿ ಸಮುದಾಯವು ತೀರ ಕೆಳಸ್ತರದ ದಲಿತ ಆಗೇರ’ ಜಾತಿಯ ಹುಡುಗ ಪಾಠ ಹೇಳಲು ನಿಂತರೆ ಹೇಗೆ ಸ್ವೀಕರಿಸಬಹುದು?…. ಎಂಬಿತ್ಯಾದಿ ಪ್ರಶ್ನೆಗಳು ಭಯವಾಗಿ ಕಾಡತೊಡಗಿಸಿದಾಗ ನಾನು ಇಲ್ಲಿಗೆ ಅರ್ಜಿ ಹಾಕುವುದೇ ಬೇಡವೆಂದು ನಿರ್ಧರಿಸಿ ಸುಮ್ಮನಾದೆ.
ಅದೇ ಸಮಯಕ್ಕೆ ನನ್ನ ತಮ್ಮ ನಾಗೇಶ, ಗೆಳೆಯ ಹೊನ್ನಪ್ಪ, ಗಣಪತಿ, ನಾರಾಯಣ ಮುಂತಾದವರು ಅದೇ ಕಾಲೇಜಿನಲ್ಲಿ ಪಿ.ಯು ತರಗತಿಗೆ ಪ್ರವೇಶ ಪಡೆದಿದ್ದರು.
ನಮ್ಮ ಕನ್ನಡ ವಿಭಾಗದ ಮುಖ್ಯಸ್ಥರೂ, ನನ್ನ ಗುರುಗಳೂ ಆದ ಪ್ರೊ.ವಿ.ಎ.ಜೋಷಿಯವರಿಗೆ ನಾನು ಎಂ.ಎ ಪಾಸು ಮಾಡಿದ ಸಂಗತಿ ತಿಳಿದಿತ್ತಲ್ಲ? ಅವರು ನನ್ನ ಅರ್ಜಿ ಕಳಿಸುವಂತೆ ನನ್ನ ತಮ್ಮ ನಾಗೇಶನ ಮೂಲಕ ಸಂದೇಶ ಕಳಿಸುತ್ತಲೇ ಇದ್ದರು. ನಾನು “ಹಾಂ…ಹೂಂ” ಅನ್ನುತ್ತಲೇ ದಿನ ಕಳೆಯುತ್ತಿದ್ದೆ. ಕೊನೆಗೊಮ್ಮೆ ಸ್ವತಃ ನನ್ನ ಗುರು ಜೋಷಿಯವರೇ ಮಾದರಿ ಅರ್ಜಿಯೊಂದನ್ನು ಬರೆದು ಕಳುಹಿಸಿ ಅಂತೆಯೇ ಅರ್ಜಿ ಬರೆದು ಅಂಕಪಟ್ಟಿ ಜಾತಿ ಸರ್ಟಿಫಿಕೇಟ್ ಲಗ್ತಿಸಿ ಕಳಿಸುವಂತೆ ಕೊನೆಯ ಸಂದೇಶ ಕಳುಹಿಸಿದರು.
ನನಗೇನೂ ಇಲ್ಲಿ ಉಪನ್ಯಾಸಕನಾಗುವ ಧ್ಯೇಯವಾಗಲೀ, ಆತ್ಮ ವಿಶ್ವಾಸವಾಗಲೀ ಖಂಡಿತವಾಗಿಯೂ ಇರಲಿಲ್ಲ. ನಾನು ಒತ್ತಾಯ ಪೂರ್ವಕವಾಗಿ ಇಲ್ಲಿಯೇ ಕೆಲಸ ಮಾಡಬೇಕೆಂದು ತಂದೆಯವರು ಕೂಡಾ ಬಯಸಲಿಲ್ಲ. ಅವರು ನಿರ್ಲಿಪ್ತರಾಗಿದ್ದರು.
ಆದರೆ ನಾನು ಅರ್ಜಿ ಸಲ್ಲಿಸಿದ ಸಂಗತಿ ತಿಳಿದ ಬಳಿಕ ಅದಕ್ಕೆ ಪೂರಕ ಪ್ರಯತ್ನಗಳು ಬೇಕೆಂದು ಬಯಸಿ ತಮ್ಮ ಶಕ್ತ್ಯಾನುಸಾರ ಕೆಲವು ವ್ಯಕ್ತಿಗಳ ಪ್ರಭಾವ ಬಳಸುವ ಪ್ರಯತ್ನ ಮಾಡಿದರು. ಅವುಗಳಲ್ಲಿ ಮುಖ್ಯವಾದುದೆಂದರೆ ಕಾಲೇಜು ಪ್ರಾಚಾರ್ಯರಾದ ಕೆ.ಜಿ ನಾಯ್ಕರನ್ನು ಕಂಡು ಮಾತನಾಡುವುದು.
ಅಪ್ಪ ಹನೇಹಳ್ಳಿಯಲ್ಲಿ ಹಾಸ್ಟೆಲ್ಲಿನಲ್ಲಿ ಇದ್ದು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪನ ತರಗತಿಯಲ್ಲಿಯೇ ಹನೇಹಳ್ಳಿಯವರೇ ಆದ ಕೆ.ಜಿ.ನಾಯ್ಕ ಓದುತ್ತಿದ್ದರಂತೆ. ಈ ಬಾಲ್ಯ ಸ್ನೇಹದ ನೆನಪು. ಈಗ ಪ್ರಯೋಜನಕ್ಕೆ ಬರಬಹುದೆಂಬ ಆಸೆಯಿಂದ ನಾನು ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಅಪ್ಪ ಅಂಕೋಲೆಯ ಲಕ್ಷ್ಮೇಶ್ವರ ಭಾಗದಲ್ಲಿ ಇರುವ ಕೆ.ಜಿ.ನಾಯ್ಕರ ಮನೆಯನ್ನು ಹುಡುಕಿ ಹೊರಟರು. ಅವರಿಗೆ ವಿಷಯವನ್ನು ವಿವರಿಸಿ ತುಂಬಾ ಹೆಮ್ಮೆಯಿಂದ ಮಗನ ಕುರಿತು ಹೇಳಿ ಸಹಾಯ ಮಾಡುವಂತೆ ವಿನಂತಿಸಿ ಬಂದರು.
“ಇಂಟ್ರೂ ಚೆನ್ನಾಗಿ ಮಾಡ್ಲಿಕೆ ಹೇಳು… ಒಳ್ಳೇ ತಯಾರಿಲಿ ರ್ಲಿ…” ಎಂಬ ಸಂದೇಶ ನೀಡಿ ಅವರು ಅಪ್ಪನನ್ನು ಬೀಳ್ಕೊಟ್ಟಿದ್ದರು. “ಇದು ಆಗ್ತದೆ” ಎಂಬ ವಿಶ್ವಾಸದಲ್ಲೇ ಅಪ್ಪ ಮನೆಗೆ ಬಂದಿದ್ದರು.
ನಮ್ಮ ನೆರೆಯ ಅಡಿಗೋಣ ಎಂಬ ಊರಿನಲ್ಲಿ ಗೌರವಾನ್ವಿತ ಹಿರಿಯ ವ್ಯಕ್ತಿಯೊಬ್ಬರಿದ್ದರು. ಅವರು ಪಟೇಲ ನಾರಾಯಣ ನಾಯಕರು. ನಾರಾಯಣ ನಾಯಕರು ಊರಿನ ಪಟೇಲರಾಗಿ ಗೌರವದಿಂದ ಕಾರ್ಯನಿರ್ವಹಿಸುತ್ತಿದ್ದರು. ಅದರ ಜೊತೆಗೆ ಗಿಡಮೂಲಿಕೆಗಳ ಆಯುರ್ವೇದ ಔಷಧಿಯ ಕುರಿತಾಗಿಯೂ ಪರಿಣತಿ ಹೊಂದಿದ್ದರು. ಸುತ್ತಲಿನ ಹಳ್ಳಿಗಳಿಗೂ ಇಂಥ ಔಷಧಿಗಳನ್ನು ಪೂರೈಸುತ್ತ ಜನಾನುರಾಗಿಯಾಗಿದ್ದರು. ಈ ಗೌರವಗಳ ಜೊತೆಯಲ್ಲಿಯೇ ಯಕ್ಷಗಾನದ ಕಟ್ಟಾ ಅಭಿಮಾನಿಯಾದ ನಾಯಕರು ಯಕ್ಷಗಾನ ತಾಳಮದ್ದಳೆಯಲ್ಲಿ ಸೊಗಸಾಗಿ ಅರ್ಥ ಹೇಳುವ ಕಲಾ ಸಂಪನ್ನತೆಯನ್ನು ಪಡೆದಿದ್ದರು.
ಇತ್ತೀಚಿನ ಕೆಲ ವರ್ಷಗಳಲ್ಲಿ ನಾನು ಯಕ್ಷಗಾನ ಪಾತ್ರಗಳನ್ನು ಮಾಡುತ್ತ, ಹೊಸ ಪ್ರಸಂಗಗಳನ್ನು ಬರೆದು ಪ್ರದರ್ಶನ ನಡೆಸಿದುದನ್ನು ಕಣ್ಣಾರೆ ಕಂಡ ನಾರಾಯಣ ನಾಯಕರು ನಮ್ಮ ತಂದೆಯವರ ಮುಂದೆ ಹಲವು ಬಾರಿ ನನ್ನ ಪ್ರತಿಭೆಯ ಕುರಿತು ಪ್ರಶಂಸೆಯ ಮಾತುಗಳನ್ನು ಆಡಿದ್ದರು.
ಬಹಳ ವಿಶೇಷ ಸಂಗತಿಯೆಂದರೆ, ಅಡಿಗೋಣದ ಈ ಗೌರವಾನ್ವಿತ ಹಿರಿಯರಾದ ನಾರಾಯಣ ನಾಯಕರ ಹಿರಿಯ ಮಗಳನ್ನೇ ಜಿ.ಸಿ.ಕಾಲೇಜಿನ ವರ್ತಮಾನದ ಪ್ರಾಚಾರ್ಯರಾದ ಕೆ.ಜಿ.ನಾಯ್ಕ ಅವರು ಕೈ ಹಿಡಿದಿದ್ದರು. ಇದನ್ನು ಅರಿತಿದ್ದ ತಂದೆಯವರು, ಅಡಿಗೋಣ ನಾರಾಯಣ ನಾಯಕರಿಂದಲೂ ಅವರ ಅಳಿಯ ಕೆ.ಜಿ.ನಾಯ್ಕರಿಗೆ ಒಂದು ಮಾತು ಹೇಳಿಸಬಹುದೆಂದು ಯೋಚಿಸಿ ನಾಯಕರ ಮನೆಗೂ ಹೋಗಿ ವಿಷಯವನ್ನು ನಿವೇದಿಸಿ ನನ್ನ ಕುರಿತು ವಿನಂತಿಸಿ ಬಂದರು.
ಕೆ.ಜಿ.ನಾಯ್ಕರ ಗಾಂಭೀರ್ಯ ಮತ್ತು ಶಿಸ್ತನ್ನು ವಿದ್ಯಾರ್ಥಿಯಾಗಿ ಗಮನಿಸಿದ್ದ ನನಗೆ ಮಾವನಿಂದ ಅವರು ಪ್ರಭಾವಿತರಾಗಬಹುದೆಂಬ ವಿಶ್ವಾಸವೇನೂ ಕಾಣಲಿಲ್ಲ. ಅಷ್ಟಕ್ಕೂ ಇಷ್ಟು ಜವಾಬ್ದಾರಿಯ ಕೆಲಸವನ್ನು ಕೇವಲ ನಮ್ಮ ಮೇಲಿನ ಪ್ರೀತಿಗಾಗಿ ನಾರಾಯಣ ನಾಯಕರು ಮೈಮೇಲೆ ಎಳೆದುಕೊಳ್ಳುತ್ತಾರೆ ಎಂಬ ವಿಶ್ವಾಸವೂ ನನಗಿರಲಿಲ್ಲ.
ತಂದೆಯವರು ತಮ್ಮ ಪಾಲಿನ ಪ್ರಯತ್ನ ತನ್ನ ಕರ್ತವ್ಯವೇ ಎಂಬ ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ ಎಂದಷ್ಟೆ ನಾನು ಭಾವಿಸಿದ್ದೆ. ನಿಜವಾಗಿ ನನ್ನ ಅಂತರಾತ್ಮದಲ್ಲಿ ನಾನು ಅಂಕೋಲೆಯ ಕಾಲೇಜಿನಲ್ಲಿ ಉಪನ್ಯಾಸಕನಾಗುವುದಾಗಲೀ, ಒಂದುವೇಳೆ ಆಯ್ಕೆಯಾದರೂ ನಾನಿಲ್ಲಿ ಕರ್ತವ್ಯ ನಿರ್ವಹಿಸುವುದು ಖಂಡಿತ ಸಾಧ್ಯವೇ ಇಲ್ಲವೆಂದೂ ನನಗೆ ದೃಢವಾಗಿತ್ತು.
ಇದೇ ಕಾರಣದಿಂದ ನನಗೆ ಸಂದರ್ಶನಕ್ಕೆ ಹೋಗಲು ಅಂಜಿಕೆಯೇನೂ ಆಗಲಿಲ್ಲ. ಹಲವು ಬಾರಿ “ನಾನು ಸಂದರ್ಶನಕ್ಕೆ ಹೋಗದೇ ಇರುವುದೇ ಸರಿ” ಎಂದೂ ಯೋಚಿಸುತ್ತಿದ್ದೆ. ಅದನ್ನು ನನ್ನ ತಮ್ಮಂದಿರು, ಗೆಳೆಯರ ಮುಂದೆ ಬಾಯಿಬಿಟ್ಟು ಹೇಳುತ್ತಿದ್ದೆ.
ಕಾಲೇಜಿನಲ್ಲಿ ಜೋಷಿ ಗುರುಗಳು ನನ್ನ ತಮ್ಮ ಕಂಡಾಗಲೆಲ್ಲ ಸಂದರ್ಶನದ ನೆನಪು ಮಾಡುತ್ತಲೇ ಇರುತ್ತಿದ್ದರಂತೆ. ಒಂದು ಬಾರಿ ನನ್ನ ತಮ್ಮನೇ ಗುರುಗಳ ಮುಂದೆ ನನ್ನ ಉದ್ದೇಶವನ್ನು ಬಾಯಿಬಿಟ್ಟು ಹೇಳಿದ್ದಾನೆ. ಗುರುಗಳು ಹಠ ಬಿಡದೇ ಎಚ್ಚರಿಕೆ ನೀಡಿ,
“ಏನ್ ಹುಚ್ ಅದಾನವ…..ಇಂಟ್ರೂಕ್ ಬಂದ್ರ ಅವನ್ನೆ ಆಯ್ಕೆ ಮಾಡ್ತಾರಂತ ಯಾರು ಹೇಳ್ಯಾರವಂಗ? ಏನೂ ತಾನೊಬ್ನೇ ಅಂಥಾ ಮೆರಿಟ್ ಇದ್ದಾವರಂಗ ಆಡ್ತಾನ…. ಬಾಯಿ ಮುಚಗೊಂಡ ಅಟಂಡಾಗನ್ನು ಅವಗ$$$$….” ಎಂದು ತಮ್ಮದೇ ಶೈಲಿಯಲ್ಲಿ ದಬಾಯಿಸಿ ಕಳಿಸಿದ್ದರಂತೆ.
ಸಂದರ್ಶನದ ದಿನಾಂಕ ಬಂತು. “ಯಾವ ಬಿಢೆಯೂ ಇಲ್ಲದೆ ಗೊತ್ತಿದ್ದ ಪ್ರಶ್ನೆಗೆ ಉತ್ತರಿಸಿ ಬರಬೇಕು. ಇಲ್ಲಿ ನೌಕರಿ ಮಾಡುವ ಆಸೆಯಂತೂ ಇಲ್ಲ, ಧೈರ್ಯ ಮೊದಲೇ ಇಲ್ಲ!” ಎಂದು ನಾನು ಗಟ್ಟಿ ಮನಸ್ಸು ಮಾಡಿದ್ದರಿಂದ ಧೈರ್ಯದಿಂದಲೇ ಸಂದರ್ಶನಕ್ಕೆ ಹೋದೆ.
ಕನ್ನಡಕ್ಕೆ ಏಳೆಂಟು ಜನ ಅಭ್ಯರ್ಥಿಗಳಿದ್ದರೂ ನನಗೆ ಪರಿಚಿತರಾದ ಸುತ್ತಲಿನ ಅಭ್ಯರ್ಥಿಗಳೇ ಆಗಿದ್ದರು. ಅಂಕಗಳಲ್ಲಿ ಪೈಪೋಟಿಯಿಲ್ಲ. ಒಬ್ಬನೇ ಒಬ್ಬ ಯುವಕ ತುಂಬ ಸುಂದರನಾಗಿದ್ದ. ಎತ್ತರದ ಆಳ್ತನ, ಆಕರ್ಷಕವಾಗಿ ಡ್ರೆಸ್ ಮಾಡಿಕೊಂಡಿದ್ದ. ಅವನ ಚೆನ್ನಾಗಿ ಪಾಲಿಶ್ ಮಾಡಿದ ಶೂ ಗಳು, ಕೊರಳಿಗೆ ಕಟ್ಟಿದ ಟೈ’ ಎಲ್ಲವೂ ಅಂಕೋಲೆಯ ಈ ಪರಿಸರದಿಂದ ಭಿನ್ನವಾಗಿ ಆತ ಬೇರೆಯೇ ಆಗಿ ಕಾಣುತ್ತಿದ್ದ. ನಾನು ಆಚೀಚೆ ವಿಚಾರಿಸಿದಾಗ ಆತ ಬೆಂಗಳೂರ-ಬಾಂಬೇ ಕಡೆಯಲ್ಲಿ ಎಂ.ಎ ಓದಿ ಬಂದವನಂತಲೂ, ಪ್ರಥಮ ದರ್ಜೆಯಲ್ಲಿಯೇ ಉತ್ತೀರ್ಣನಾಗಿರುವನೆಂದೂ, ಆದರೆ ಮೂಲತಃ ನಮ್ಮದೇ ಹನೇಹಳ್ಳಿಯವನೆಂದೂ ತಿಳಿಯಿತು. (ಹೆಸರು ಮರೆತಿದ್ದೇನೆ ಆದರೆ ಆತ ಗಾಂವಕರ ಎಂಬ ಸರ್ ನೇಮ್ ಹೊಂದಿದ್ದು ನೆನಪಿನಲ್ಲಿದೆ) ಯಾವ ಲೆಕ್ಕದಲ್ಲಿಯೂ ಈತ ಯೋಗ್ಯ ಆಯ್ಕೆಯಾಗುತ್ತಾನೆ ಎಂದು ನಿರುಮ್ಮಳನಾಗಿ ಸಂದರ್ಶನದ ಸರತಿಗಾಗಿ ಕಾದೆ.
ಕೆನರಾ ವೆಲಫೇರ ಟ್ರಸ್ಟಿನ ಅಧ್ಯಕ್ಷರಾದ ಡಾ. ದಿನಕರ ದೇಸಾಯಿ, ಕಾರ್ಯದರ್ಶಿಗಳಾದ ದಯಾನಂದ ನಾಡಕರ್ಣಿ, ವಾಮನ ಪೈ ಮೊದಲಾದ ಸದಸ್ಯರೊಂದಿಗೆ ಪ್ರಾಚಾರ್ಯ ಕೆ.ಜಿ.ನಾಯ್ಕ, ವಿಷಯ ತಜ್ಞರಾಗಿ ವಿಭಾಗ ಮುಖ್ಯಸ್ಥ ಪ್ರೊ.ಜೋಷಿ ಮುಂತಾದ ಮಹನೀಯರನ್ನು ಒಳಗೊಂಡ ಸಂದರ್ಶನ ಸಮಿತಿಯ ಮುಂದೆ ಹೇಗೂ ಧೈರ್ಯ ಮಾಡಿ ನಿಂತೆ.
ಆಗೇರರು-ಹಾಲಕ್ಕಿ-ಮುಂತಾದ ಹಿಂದುಳಿದ ಸಮುದಾಯವನ್ನು ಅತಿಯಾಗಿ ಹಚ್ಚಿಕೊಂಡಿದ್ದ ದೇಸಾಯಿಯವರಿಗೆ ನಾನು ಆಗೇರ ಜಾತಿಯಲ್ಲಿ ಹುಟ್ಟಿ ಮೊದಲ ಎಂ.ಎ ಪದವೀಧರನೆಂಬುದೇ ಅಚ್ಚರಿ ಆನಂದದ ಸಂಗತಿ ಎನಿಸಿದ್ದು ಅವರ ಮುಖಭಾವ ಮಾತುಗಳಲ್ಲೇ ವ್ಯಕ್ತವಾಯಿತು.
ಜೋಷಿಯವರು ವಿಷಯಕ್ಕೆ ಸಂಬಂಧಿಸಿದಂತೆ ಸಾಹಿತ್ಯ ಚರಿತ್ರೆಯ ಕುರಿತಾಗಿಯೇ ಪ್ರಶ್ನೆ-ಉಪಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಪ್ರಾಚಾರ್ಯ ಕೆ.ಜಿ ನಾಯ್ಕರು ಮಾತ್ರ ಯಕ್ಷಗಾನವನ್ನು ಬಿಟ್ಟು ಬೇರೆ ಏನನ್ನು ಕೇಳಲಿಲ್ಲ. ಯಕ್ಷಗಾನ ಕಲೆಯ ಕುರಿತು, ಯಕ್ಷಗಾನದ ಛಂದಸ್ಸು ಇತ್ಯಾದಿಗಳಿಂದ ಪ್ರಸಂಗ ರಚನೆಯ ಕೌಶಲ್ಯ, ನಾನು ಇದುವರೆಗೆ ಮಾಡಿದ ಪಾತ್ರಗಳು, ಹಿಮ್ಮೇಳದ ಯಾವ ವಾದ್ಯ ನುಡಿಸಬಲ್ಲೆ ಇತ್ಯಾದಿ ಪ್ರಶ್ನೆಗಳನ್ನೇ ಬಿಟ್ಟೂ ಬಿಡದೇ ಕೇಳಿ ನನ್ನಲ್ಲಿ ಪ್ರತಿ ಹಂತದಲ್ಲೂ ಉತ್ತರಿಸುವ ಉತ್ಸಾಹವನ್ನೇ ಹೆಚ್ಚಿಸಿದರು.
ಪ್ರಾಚಾರ್ಯ ಕೆ.ಜಿ.ನಾಯ್ಕರು ಕೇಳಿದ ಎಲ್ಲ ಪ್ರಶ್ನೆಗಳಿಂದ ನನಗೆ ಒಂದಂತೂ ಖಚಿತವಾಗಿತ್ತು. ಅವರ ಮಾವನವರಾದ ನಾರಾಯಣ ನಾಯಕರು ಕಾಳಜಿ ಪೂರ್ವಕವಾಗಿ ನನ್ನ ಕಲಾವಿದ ವ್ಯಕ್ತಿತ್ವವನ್ನು ಅಳಿಯನಿಗೆ ಪರಿಚಯಿಸಿ ಇದ್ದರು. ಒಬ್ಬ ಸಾಮಾನ್ಯ ಶಿಕ್ಷಕನಾದ ನಮ್ಮ ತಂದೆ ನನ್ನ ಕುರಿತು ಮಾಡಿದ ವಿನಂತಿಯನ್ನು ಹಗುರವಾಗಿ ಪರಿಗಣಿಸುವ ಎಲ್ಲ ಸಾಧ್ಯತೆಗಳೂ ನಾರಾಯಣ ನಾಯಕರಿಗೆ ಇದ್ದವು. ಮೇಲಾಗಿ ಇಲ್ಲಿ ಆಯ್ಕೆ ಬಯಸಿದ ಹೆಚ್ಚಿನ ಅಭ್ಯರ್ಥಿಗಳು ನಾಯಕರ ಜಾತಿ ಬಂಧುಗಳೇ ಆಗಿದ್ದರು. ಅಂಥ ವಾಸ್ತವವನ್ನು ಮೀರಿ ನಾಯಕರು ನನ್ನ ಕುರಿತು ಶಿಫಾರಸು ಮಾಡಿದ್ದಾರೆ ಅಂದರೆ ಸಾಮಾನ್ಯ ಸಂಗತಿಯಲ್ಲ. ದೊಡ್ಡವರ ದೊಡ್ಡತನಕ್ಕೆ ನಾಯಕರು ಉದಾಹರಣೆಯಾಗಿ ನನ್ನ ಮನಸ್ಸಿಗೆ ಮುಟ್ಟಿದರು. ಗುಣಗ್ರಾಹಿಯಾದ ನಾರಾಯಣ ನಾಯಕರಂಥವರ ಹೃದಯವಂತಿಕೆಯನ್ನು ನೆನೆದರೆ ಈಗಲೂ ರೋಮಾಂಚನವಾಗುತ್ತದೆ!
ಸಂದರ್ಶನ ಮುಗಿಸಿ ನಗುತ್ತಲೇ ಹೊರಬಂದ ನನ್ನನ್ನು ಕಂಡವರೆಲ್ಲ ಫಲಿತಾಂಶ ಪ್ರಕಟವೇ ಆಯಿತೇನೋ ಎಂದು ಅನುಮಾನಪಡುವಷ್ಟು ನಾನು ಉಲ್ಲಸಿತನಾಗಿಯೇ ಸಂದರ್ಶನದ ಕೋಣೆಯಿಂದ ಹೊರಗೆ ಬಂದಿದ್ದೆ.
ನಾನು ಎದುರಿಸಿದ ಮೊಟ್ಟ ಮೊದಲ ಮತ್ತು ಕೊನೆಯ ಸಂದರ್ಶನ ಇದೇ ಆಯಿತು. ನಾನು ಆಯ್ಕೆಯಾದ ಸಂಗತಿ ತಿಳಿಯಲು ನನಗೆ ಬಹಳ ಕಾಲ ಕಾಯಬೇಕಾಗಲಿಲ್ಲ. ೧೯೭೫ ರ ಜುಲೈ ಒಂದರಂದು ನಾನು ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿ ಕಾಲೇಜಿನಿಂದ ಪತ್ರ ತಲುಪಿತು. ಇದೇ ಕಾಲೇಜು ಕಛೇರಿಯ ಸಿಬ್ಬಂದಿಗಳಲ್ಲಿ ಒಬ್ಬರಾಗಿ ಕೆಲಸ ಮಾಡುತ್ತ ಸಂಯುಕ್ತ ಕರ್ನಾಟಕ ಮತ್ತಿತರ ದೈನಿಕಗಳಿಗೆ ವರದಿಗಾರರಾಗಿಯೂ ಕೆಲಸ ಮಾಡುತ್ತಿದ್ದ ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ಅವರು “ಆಗೇರ ಸಮಾಜದ ತರುಣನಿಗೆ ಪ್ರಾಧ್ಯಾಪಕ ಹುದ್ದೆ” ಎಂಬ ಶಿರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿದರು.
ಒಂದು ಕಡೆ ಹೆಮ್ಮೆ ಮತ್ತು ಸಂತೋಷವಾಗುತ್ತಿದ್ದರೂ “ತರಗತಿಯನ್ನು ಪ್ರವೇಶಿಸುವ ಮುನ್ನವೇ ನನ್ನ ಜಾತಿ ಬೇರೆ ಜಗಜ್ಜಾಹೀರಾಯಿತಲ್ಲ?” ಮುಂದೆ ಹೇಗೋ ಎಂಬ ಆಂತಂಕದಲ್ಲೇ ಕರ್ತವ್ಯಕ್ಕೆ ಹಾಜರಾದೆ.
******************************
ರಾಮಕೃಷ್ಣ ಗುಂದಿ
ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಕುವೆಂಪು, ಬೇಂದ್ರೆ, ದಿನಕರ ದೇಸಾಯಿ ಅವರ ಬದುಕಿನ ಸಮಯದಲ್ಲಿ ತರುಣರಾಗಿದ್ದ ಮಾಹಿತಿ ಹಾಗೂ ದಿನಕರ ದೇಸಾಯಿ ಅವರಿಗಿದ್ದ ಜ್ಯಾತ್ಯಾತೀತ ನಿಲುವು ಹಾಗೂ
ಅವತ್ತಿನ ಮೇಲ್ಜಾತಿಯ ಹಲವು ಅಕ್ಷರಸ್ಥರಲ್ಲಿದ್ದ ಮಾನವೀಯ ಹಾಗೂ ಮನುಷ್ಯ ಪರ ನಿಲುವುಗಳು …ಆತ್ಮಕಥನದ ೪೦ ನೇ ಅಧ್ಯಾಯದಲ್ಲಿ ಗಮನಿಸಿದೆ ಸರ್. ನಮ್ಮ ಸಮಾಜದ ನಡೆಯ ದೃಷ್ಟಿಯಿಂದ ಈ ಅಧ್ಯಾಯ ನಿಮ್ಮ ಜೀವನ ಚರಿತ್ರೆಯ ಪ್ರಮುಖವಾಗಿ …ಇವತ್ತಿನ ಸಮಾಜದ ಗಣ್ಯರೆನೆಸಿಕೊಂಡ ಕೆಲವು ಜಾತಿವಾದಿಗಳು ಮುಟ್ಟಿನೋಡಿಕೊಳ್ಳುವಂತಿದೆ. ಸಣ್ಣ ಆಶಾವಾದ ಸಹ ಆತ್ಮಕಥನದ ಭಾಗದಲ್ಲಿದೆ. ಹಾಗೂ ಬದುಕಿನ ಅಂತರಂಗದ ತಲ್ಲಣ, ಸಂಘರ್ಷದ ಪ್ರಾರಂಭದ ದಿನಗಳು ಸಹ ಮುಂದಿನ ಭಾಗದಲ್ಲಿ ಕಾಣಬಹುದು….
thank you for your comment
Nagraj ….Ammebal avattu suddi maaduvaaglu nanna ide photo haakidru…
ಗುರೂಜಿ,
ಅರಬಿ ಸಮುದ್ರ ದಾಟಿ ಘಟ್ಟದ ಮೇಲೆ ಬಯಲು ಸೀಮೆಗೆ ಬಂದು M. A ಪದವಿ ಪಡೆದು ಮತ್ತೆ ಘಟ್ಟದ ಕೆಳಗೆ ಇಳಿದು ಅರಬಿ ಸಮುದ್ರದ ಮಡಿಲಿನಲ್ಲಿ ನೀವು ಅಧ್ಯಾಪಕರಾಗಿ ನಿಮ್ಮ ನಿಷ್ಠಾವಂತ ಬದುಕು ಪ್ರಾರಂಭಿಸಿದ ತಂದೆಗೆ ತಕ್ಕ ಮಗ…..
ಆಗೇರ ಸಮಾಜದ ತರುಣನಿಗೆ ಅಧ್ಯಾಪಕ ಪಟ್ಟ ಇಂದೇ ಜರುಗುತ್ತಿದ್ದಂತೆ ನಿರೂಪಿಸಲ್ಪಟ್ಟಿದೆ.
ಸರ್, ಇಷ್ಟೆಲ್ಲಾ ವರ್ಷಗಳ ಕಾಲ ಪಟ್ಟ ಪರಿಶ್ರಮ, ಸಹಿಸಿದ ಅವಮಾನ ಕೊನೆಗೂ ಫಲ ಕೊಟ್ಟಿತು.ಅಧ್ಯಾಪಕರಾಗಿ ಜಿ.ಸಿ.ಕಾಲೇಜಿನ ತಮ್ಮ ಅನುಭವಗಳನ್ನು ಕೇಳಲು ಕಾತರನಾಗಿದ್ದೇನೆ.
ನಿಮ್ಮ ಬರಹ ನಮಗೆ ಮಾದರಿ ಸರ್
ಸರ,
ತಾವು ಕಲಿತ ಕಾಲೇಜಿನಲ್ಲಿ ಅಧ್ಯಾಪಕ ನೇಮಕಾತಿ ಪ್ರಕ್ರಿಯೆ ಕುರಿತು ಮಾಹಿತಿ ಓದಿ ತುಂಬಾ ಸಂತೋಷವಾಯಿತು. ನಿಮ್ಮ ಜೀವನ ಇನ್ನೊಬ್ಬರಿಗೆ ಮಾದರಿಯಾಗಿದೆ.
ನಿಮ್ಮ ಪ್ರತಿಭೆ ನಿಮ್ಮನ್ನು ಆಯ್ಕೆ ಮಾಡಿದ್ದರೂ ಪ್ರಭಾವವೂ ಕಾರಣವಿದೆ ಅನ್ನುವಂತೆ ಬರೆದಿರುವ ನಿಮ್ಮ ಸತ್ಯನಿಷ್ಠೆ ಹೆಮ್ಮೆಯೆನಿಸುತ್ತದೆ. ಅಂದಿನ ಆ ಮನಸ್ಸುಗಳು ನಮಗೆ ಅಭಿಮಾನ ತುಂಬುತ್ತವೆ. ಒಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗುತ್ತವೆ.