ಅಮ್ಮನೂರಿನ ನೆನಪುಗಳು.
ಅಮೇರಿಕಾದಿಂದ ಅಶ್ವಥ್
ಅಶ್ವಥ್
ಮೊದಲೇ ಹೇಳಿದಂತೆ, ರಂಗ ತಿಮ್ಮರ ಸಂತೆ ಪ್ರಯಾಣ ನಿಯಮಿತವಾಗಿರುತ್ತಿತ್ತು. ಮೂಟೆಯಲ್ಲಿ ಇರುವ ಪದಾರ್ಥದ ಆಧಾರದ ಮೇಲೆ ನಾಲ್ಕೈದು ಮಂಡಿಗಳಿಗೆ ಗಾಡಿ ಸಾಗಬೇಕಾಗಿತ್ತು. ಅವುಗಳಲ್ಲಿ ಭತ್ತ, ರಾಗಿ, ತೆಂಗುಗಳದ್ದು ಒಂದೇ ಮಂಡಿ. ಅದು ರಂಗ ತಿಮ್ಮರ ಮೊದಲ ನಿಲ್ದಾಣ, ಆಮೇಲೆ ಬೆಲ್ಲದ ಮಂಡಿ, ನಂತರ ಅಪರೂಪಕ್ಕೊಮ್ಮೆ ಅಡಿಕೆ ಮಂಡಿ. ಇವಿಷ್ಟೂ ರೌಂಡ್ಸ್ ಆದ ಮೇಲೆ ಮನೆಯಿಂದ ತಂದಿರುತ್ತಿದ್ದ ಹುಲ್ಲು ತಿನ್ನುವುದು. ಗಾಡಿಯ ಕೆಳಭಾಗದಲ್ಲಿ ನೇತುಹಾಕಿರುತ್ತಿದ್ದ ಬಕೆಟ್ ತೆಗೆದು ಸಂತೇಮಾಳದ ಕೈಪಂಪಿನಿಂದ ಹಿಡಿದ (ಕಡೆಗೆ ನಲ್ಲಿಯೂ ಬಂದಿತ್ತೋ ಏನೋ) ನೀರು. ಇನ್ನು ಮನೆಕಡೆ ಹೊರಡುವುದಕ್ಕಿಂತ ಮೊದಲು ದಿನಸಿ ಅಂಗಡಿಯಲ್ಲಿ ಒಂದು ನಿಲುಗಡೆ, ಕಡಲೇಪುರಿ, ಖರ್ಜೂರ ಸಿಹಿತಿಂಡಿಗಳ ಅಂಗಡಿಯ ಬಳಿ ಮತ್ತೊಂದು ನಿಲುಗಡೆ. ಈ ನಿಲುಗಡೆಗಳೆಲ್ಲ ಕಡ್ಡಾಯವಾಗಿರುವಂತಹವು, ಒಮ್ಮೊಮ್ಮೆ ನಿಲ್ಲಿಸಬೇಕಾದ ಅಗತ್ಯವಿಲ್ಲದಿದ್ದರೂ, ರಂಗ ತಿಮ್ಮರ ಅಭ್ಯಾಸಬಲ ಎಷ್ಟಿತ್ತು ಅಂದರೆ, ಗೌಡಜ್ಜಿಯ ಗಾಡಿ ಅಂಗಡಿ ಮುಂದೆ ನಿಲ್ಲದೇ ಹೋಗುವುದಿಲ್ಲ ಎಂದು ದಿನಸಿ ಅಂಗಡಿಯ ಶೆಟ್ಟರು ಖಡಾಖಂಡಿತವಾಗಿ ಹೇಳುವಷ್ಟು. ಪೇಟೆಯೊಳಗೆ ಮತ್ತು ಸಂತೆಮಾಳದಲ್ಲಿ ಬಸ್ಸು, ಕಾರು ಲಾರಿಗಳ ಮಧ್ಯೆ ಸಂತೆಯ ಜನಜಂಗುಳಿಯಲ್ಲೂ ಸಹ ಯಾರ ಮೇಲ್ವಿಚಾರಣೆಯೂ ಇಲ್ಲದೆ, ಯಾರಿಗೂ ಅಡ್ಡಿಯಾಗದಂತೆ ತಮ್ಮ ಜಾಡನ್ನೇ ಹಿಡಿದು ಸಾಗುವುದು ಅದೆಷ್ಟೋ ಜನರ ಕಣ್ಣಿಗೆ ಆಶ್ಚರ್ಯವೇ ಸರಿ. ಸಂತೆಮಾಳ ಬಿಟ್ಟ ತಕ್ಷಣ, ಮಾವಂದಿರು ಗಾಡಿಯಿಂದ ಇಳಿದು, ರಂಗ ತಿಮ್ಮರನ್ನು ತಮ್ಮ ಪಾಡಿಗೆ ಬಿಟ್ಟು ಊರಿನ ಜನರ ಜೊತೆ ಮಾತನಾಡುತ್ತಾ ಬೇರೆ ಗಾಡಿಗಳಲ್ಲಿ ಬರುತ್ತಿದ್ದರು. ದಿನವೂ ನಾಲ್ಕೂವರೆಗಂಟೆಗೆ ಶಾಲೆ ಮುಗಿದರೂ, ಕತ್ತಲಾಗುವ ತನಕ ಗೆಳೆಯರೊಂದಿಗೆ ಆಡಿಕೊಂಡು ಮನೆ ಸೇರುತ್ತಿದ್ದ ನಾನು, ಮಂಗಳವಾರ ಸಂಜೆ ಆಟದ ನೆನಪೂ ಮಾಡಿಕೊಳ್ಳದೆ ನಮ್ಮನೆಯ ಜಗುಲಿಯ ಮೇಲೆ ಹಾಜರಿರುತ್ತಿದ್ದೆ. ನನ್ನ ಈ ಹಾಜರಿಗೆ ಕಡಲೆಪುರಿ, ಖರ್ಜೂರ, ಸಕ್ಕರೆಅಚ್ಚು, ಬೆಣ್ಣೆಬಿಸ್ಕತ್ತುಗಳು, ಬಾಳೆಹಣ್ಣು ಇರುವ ಚೀಲ ಮುಖ್ಯ ಕಾರಣವಾಗಿದ್ದರೂ, ರಂಗ ತಿಮ್ಮರು ಹದಿನೈದು ಕಿಲೋಮೀಟರು ದೂರದ ಪೇಟೆಯ ಸಂತೆಗೆ ಮಸುಕಿನಲ್ಲಿ ಗಾಡಿಯ ಹೊರೆ ಎಳೆದು ಹೋಗಿ ಮತ್ತೆ ಗೋಧೂಳಿಯ ಹೊತ್ತಿಗೆ ಗಾಡಿಯನ್ನು ಮನೆ ಬಾಗಿಲು ಮುಂದೆ ತಂದು ನಿಲ್ಲಿಸಿ ಬಾಲ ಅಲ್ಲಾಡಿಸುವ ಅವುಗಳ ಹುರುಪು ನೋಡುವುದೇ ಒಂದು ಖುಷಿ. ಸಂತೆಗೆ ಗಾಡಿ ಹೋಗದಿದ್ದ ವಾರವೂ ಸಹ ನಾನು ರಂಗ ತಿಮ್ಮರ ಬರುವಿಕೆಗಾಗಿ ಕಾದಿದ್ದಿದೆ… ರಂಗತಿಮ್ಮರು ಪೇಟೆಯ ರಸ್ತೆಯಿಂದ ಬರದೇ, ಹಿತ್ತಿಲಿನಿಂದ ತಾತ ಹಿಡಿದುಕೊಂಡು ಬರುತ್ತಿದ್ದರೆ, ಗಾಡಿ ನಿಲ್ಲಿಸುತ್ತಿದ್ದ ಮಾಡಿನ ಹತ್ತಿರ ಹೋಗಿ ನೋಡುತ್ತಿದ್ದೆ. ಓಹ್! ಇವತ್ತು ಸಂತೆಗೆ ರಜಾ ಅಂತ ಬೇಸರವಾಗುತ್ತಿತ್ತು.
ರಂಗ ತಿಮ್ಮ ಇಬ್ಬರೂ ನಮ್ಮ ಮನೆಯವರ, ಅದರಲ್ಲೂ ತಾತನ ಧ್ವನಿಯನ್ನು ಸಂತೆಯ ಗದ್ದಲದ ಒಳಗೂ ಗುರುತಿಸುತ್ತಿದ್ದವು. ಇನ್ನು ನಾನು ಹುಟ್ಟಿಬೆಳೆದ ಮನೆಯನ್ನು ನಾನು ಹುಟ್ಟುವುದಕ್ಕಿಂತ ಒಂದೆರಡು ವರ್ಷಗಳ ಮೊದಲು ಕಟ್ಟಿದ್ದು. ಆ ಮನೆಕಟ್ಟಲು ಮಣ್ಣು ಹೊತ್ತಿದ್ದು, ನೀರು ಹೇರಿ ತಂದಿದ್ದು, ಮರಮಟ್ಟು ಸಾಗಿಸಿದ್ದು, ಪೇಟೆಯಿಂದ ಹೆಂಚು ಸಾಗಿಸಿದ್ದು ಈ ರಂಗ ತಿಮ್ಮರೇ. ಮಂಗಳೂರು ಹೆಂಚಿನ ನನ್ನ ತಾತನ ಹೊಸಮನೆಯ ಗೋಡೆ ಹೆಂಚುಗಳಿಗೆ ರಂಗ ತಿಮ್ಮರ ದುಡಿಮೆ ಸದಾ ಅಂಟಿಕೊಂಡಿದೆ. ನಾನು ರಂಗ ತಿಮ್ಮರನ್ನು ನೋಡಿದ ಅಷ್ಟೂ ದಿನಗಳಲ್ಲಿ ಕೆಲಸ ಮಾಡಿ ಅವುಗಳು ಬಳಲಿರುವ ದಿನಗಳೇ ಇರಲಿಲ್ಲ. ದುಡಿಮೆ ಅಂದರೆ ಅವುಗಳಿಗೆ ಉಸಿರಾಡುವಷ್ಟು, ಮೇವುತಿನ್ನುವಷ್ಟು ಸಲೀಸು. ಮುಂಗಾರಿನ ಬಿರುಸಾದ ಅಡ್ಡಮಳೆಯಿಂದ ಹಿಡಿದು ಭಾದ್ರಪದದ ಸೋನೆಮಳೆಯೂ ರಂಗ ತಿಮ್ಮರನ್ನು ನೆನೆಯಿಸುತ್ತಿರಲಿಲ್ಲ. ಬೇಸಿಗೆಯ ಜಳಜಳ ಬಿಸಿಲು ಅವುಗಳನ್ನು ಎಂದೂ ಒಣಗಿಸಿರಲಿಲ್ಲ. ಹತ್ತಾರು ಎಕರೆ ಹೊಲ, ಗದ್ದೆ ತೋಟಗಳನ್ನು ಉಳುಮೆ ಮಾಡಿ ಹದಗೊಳಿಸಿದವು ಅವು. ಅವುಗಳ ಹುರುಪಿನ ದುಡಿಮೆಗೆ ತಕ್ಕಂತೆ ಬಂದ ಫಸಲನ್ನು ಅಷ್ಟೇ ಶ್ರಮದಿಂದ ಕಣಕ್ಕೆ ಸಾಗಿಸುತ್ತಿದ್ದವು. ಅದೇ ಪಸಲನ್ನು ವಾರಕ್ಕೊಮ್ಮೆ ಸರದಿಯಲ್ಲಿ ಪೇಟೆಗೆ ಹೊತ್ತು, ಸಂತೆಯನ್ನೂ ಸುತ್ತಿ ಮನೆಗೆ ಉಪ್ಪು, ಎಣ್ಣೆಯಾದಿಯಾಗಿ ದಿನಸಿಯನ್ನು ಸಾಗಿಸುತ್ತಿದ್ದವು.
ನನ್ನ ಇಡೀ ಬಾಲ್ಯ ಅವುಗಳ ಮುಂದೆ ಕಳೆಯಿತು… ಅವುಗಳು ಬೆಳೆಯುತ್ತಿದ್ದ ಕರುಗಳಾಗಿದ್ದಾಗಿನ ದಿನಗಳ ತುಂಟಾಟದ ಸಂದರ್ಭಗಳನ್ನೂ ತಾತ, ಅಕ್ಕಪಕ್ಕದ ಮನೆಯವರು, ಮತ್ತು ಊರಿನವರೂ ಹೇಳುತ್ತಿರುತ್ತಿದ್ದರು. ರಂಗ ಹುಟ್ಟಿದಾಗಿನಿಂದ ಕಡೆಯವರೆಗೂ ಮನೆಯವನಂತೆಯೇ ಆಗಿತ್ತು. ತಿಮ್ಮ ಬೇರೆಮನೆಯಲ್ಲಿ ಹುಟ್ಟಿ ನಂತರ ರಂಗನ ಜೊತೆಯಾದರೂ ರಂಗನಷ್ಟೇ ಮನೆಯ ಸ್ವಂತದವನಂತೆ ಇತ್ತು. ಅವುಗಳ ಆಯಸ್ಸೇ ಕಡಿಮೆ… ಇಪ್ಪತ್ತು ವರ್ಷ. ಅವು ಇದ್ದ ಅಷ್ಟೂ ದಿನಗಳಲ್ಲಿ ಅವುಗಳಿಗೆ ಬದುಕಲು ಬೇಕಾಗಿದ್ದು, ಮುಂಗಾರಿನಲ್ಲಿ ಹೊಲದ ಬದುವಿನ ಹಸಿರು ಹುಲ್ಲು, ಬೇಸಿಗೆಯಲ್ಲಿ ಬಣವೆಯಲ್ಲಿನ ಒಣಹುಲ್ಲು ಜೊತೆಗೆ ದಿನದ ಮೂರು ಹೊತ್ತು ಕೆರೆಯ ನೀರು ಅಥವಾ ಕಲಗಚ್ಚು. ಗದ್ದೆನಾಟಿಯ ಸಮಯದಲ್ಲಿ ಕಡಲೆಹಿಂಡಿ, ಬೇಯಿಸಿದ ಹುರುಳಿ. ಅದೇ ಅವುಗಳಿಗೆ ಮೃಷ್ಟಾನ್ನ.
ನಾನು ಬೆಳೆಯುತ್ತಿರುವಂತೇ ರಂಗ ತಿಮ್ಮರಿಗೆ ಮುದಿತನ ಆವರಿಸುತ್ತಿತ್ತು. ಇನ್ನು ಇವುಗಳಿಂದ ಕೆಲಸ ಆಗುವುದಿಲ್ಲ ಮಾರಿಬಿಡುವುದು ಒಳ್ಳೆಯದು ಎಂದು ಕೆಲವರ ಅಭಿಪ್ರಾಯ… ಅಷ್ಟು ಸಾಲದು ಅಂತ ತಿಮ್ಮ ಮನೆಯಲ್ಲೇ ಒಬ್ಬರ ಕೆಂಗಣ್ಣಿಗೆ ಗುರಿಯಾದ. ಅದೇನು ಕೇಳಿಸಿತೋ, ಯಾವುದಕ್ಕೆ ಗಾಬರಿಯೋ, ಬದುವಿನಲ್ಲಿ ಮೇಯುವಾಗ, ಇದ್ದಕ್ಕಿದ್ದಂತೆ ಹರಿಹಾಯ್ದಿತೆನ್ನುವ ಒಂದು ಕಾರಣ. ತಿಮ್ಮನಿಗೆ ವಯಸ್ಸಾಗುತ್ತಿದ್ದರೂ ತನ್ನ ಸ್ವಭಾವ ಬದಲಾಗಿರಲಿಲ್ಲ. ಆದರೂ ಮಾರಲು ಒಂದೋ ಅಥವಾ ಎರಡೋ ಪ್ರಯತ್ನ ನಡೆಸಿದ ತಾತ ಮಾರಲು ಮನಸ್ಸು ಮಾಡದೇ ಸೋತು ಸುಮ್ಮನಿದ್ದರು. ಅವತ್ತೊಂದು ದಿನ, ಅದು ಯಾವ ದಿನ ಎನ್ನುವುದು ನೆನಪಿಲ್ಲ. ರಂಗನಿಗೆ ಒಂದೆರಡು ದಿನದಿಂದ ಹುಷಾರಿರಲಿಲ್ಲ. ವಯಸ್ಸಾಗಿದೆಯಲ್ಲ, ಅದಕ್ಕೇ ಹಾಗಾಗಿದೆ, ಸರಿಹೋಗುತ್ತೆ ಅಂತಲೋ ಏನೋ, ಮದ್ದು ಏನೂ ಕೊಟ್ಟಿರಲಿಲ್ಲ. ಎಂದಿನಂತೆ ಕೊಟ್ಟಿಗೆಯಿಂದ ಮನೆ ಮುಂಭಾಗಕ್ಕೆ ತಂದು ಬಳಪದ ಕಲ್ಲಿಗೆ ಕಟ್ಟಿದ್ದರು. ನಾನು ಶಾಲೆಗೆ ಹೊರಡುವಾಗ ರಂಗ ಮಲಗಿದ್ದಂತೆ ನೆನಪು. ಮಧ್ಯಾಹ್ನ ಊಟಕ್ಕೆ ಮನೆಗೆ ಬರಬೇಕಾಗಿದ್ದರೂ, ನಾನು ಅಪರೂಪಕ್ಕೆ ಮನೆಗೆ ಮಧ್ಯಾಹ್ನದ ಊಟಕ್ಕೆ ಬರುತ್ತಿದ್ದುದು. ಮಿಕ್ಕಂತೆಲ್ಲಾ ಬೆಳಿಗ್ಗೆ ರೊಟ್ಟಿ ತಿನ್ನುವಾಗಲೇ ಒಂದಿಷ್ಟು ಮಿಕ್ಕಿಸಿ ಪುಸ್ತಕದ ಮಧ್ಯೆ ಇಟ್ಟು ಓಡುತ್ತಿದ್ದೆ. ಊಟದ ಬಿಡುವಿನಲ್ಲಿ ಕಳ್ಳಾ-ಪೊಲೀಸು, ಲಗೋರಿ, ಗದ್ದೆಕೊಯ್ಲಿನ ಸಮಯವಾದರೆ ಶಾಲೆಯ ಪಕ್ಕದ ಕಣಗಳಲ್ಲಿ ಇರುತ್ತಿದ್ದ ಬಣವೆಗಳ ನಡುವೆ ಕಣ್ಣಾಮುಚ್ಚಾಲೆ ಹೀಗೆ ತರಹೇವಾರಿ ಆಟಗಳು. ಮಧ್ಯಾಹ್ನದ ಶಾಲೆ ಮುಗಿದು ನಾಲ್ಕೂವರೆ ನಂತರದಿಂದ ಕತ್ತಲಾಗುವ ತನಕ ಮತ್ತೆ ಆಟ. ಅವತ್ತೂ ಹಾಗೇ ಮಾಡಿದ್ದೆ. ಶಾಲೆ ಬಿಟ್ಟ ನಂತರ ಮಾಮೂಲಿನಂತೆ ನನ್ನ ಆಟ… ಆಮೇಲೆ ಮನೆಗೆ ಬಂದೆ. ಕತ್ತಲಾಗಿತ್ತು. ಮನೆಯವರೆಲ್ಲರೂ ಒಂದು ರೀತಿ ಮೌನವಾಗಿದ್ದರು… ಎಂದಿನ ಲವಲವಿಕೆಯಿಲ್ಲ. ಅಮ್ಮ (ಅಜ್ಜಿ) ಊಟ ಮಾಡಲು ಕೂರದೇ ಏನೋ ಗೊಣಗುತ್ತಿದ್ದರಿಂದ, ಈ ಬಣಗುಡುವ ರಾತ್ರಿಗೆ ಕಾರಣವೇನಿರಬಹುದು ಅಂತ ಅಮ್ಮನನ್ನೇ ದಿಟ್ಟಿಸಿದೆ. “ಅಷ್ಟೊರ್ಷ ಕಲ್ಲುಬಂಡೆಯಂಗಿದ್ದ ಎತ್ತಿಗೆ ಮೂರೇ ದಿನಕ್ಕೆ ಹಿಂಗಾಯ್ತಲ್ಲ. ಏನೋ, ಅತ್ಲಾಗಿ ಕೊರಗದಂತೆ ಜೀವ ಹೋಯ್ತು” ಅಂದರು. ಆಗ ಅಡುಗೆಮನೆಯಿಂದ ಕೊಟ್ಟಿಗೆಗೆ ಒಂದು ಸಣ್ಣ ಕಿಟಕಿಯಿತ್ತು. ನಾನಿನ್ನೂ ಅದನ್ನು ಇಣುಕುವಷ್ಟು ಎತ್ತರ ಬೆಳೆದಿರಲಿಲ್ಲ. ಅಲ್ಲೇ ಇದ್ದ ಸ್ಟೂಲ್ ಎಳೆದು ಅಂತೂ ಇಣುಕಿಯೇಬಿಟ್ಟೆ. ತಿಮ್ಮ ಒಂದೇ ನಿಂತಿತ್ತು. ಅದುವರೆಗೆ ಹುಷಾರಿಲ್ಲದಿದ್ದರೂ ಸಹ ಕೊಟ್ಟಿಗೆಯಲ್ಲೇ ಪಕ್ಕದಲ್ಲಿರುತ್ತಿದ್ದ ರಂಗ ಇರಲಿಲ್ಲ. ಜಾಗ ಅಗಲವಾಗಿದ್ದರಿಂದ ತಿಮ್ಮ ಹಿಂದಿನ ಕಾಲನ್ನು ಅತ್ತಿಂದಿತ್ತ ಅಡ್ಡ ಎಸೆಯುತ್ತಾ, ತೆರವು ಮಾಡಿದ್ದ ರಂಗನ ಜಾಗವನ್ನು ಕಾಯ್ದಿರಿಸುವವನಂತೆ ಕಾಣುತ್ತಿತ್ತು. ಮನೆಯವರ ಮೌನದೊಳಗೆ ನಾನೂ ಮುಳುಗಿಹೋದೆ. ನೆಪಕ್ಕೆ ಅನ್ನುವಂತೆ ಊಟಮಾಡಿ ದೀಪ ಆರಿಸಿದೆವು. ಬೆಳಗಾಗುತ್ತಲೇ ಹೊರಗೆ ಹೋಗಿ ಗಮನಿಸಿದೆ. ಹಿಂದಿನ ದಿನ ರಂಗನನ್ನು ಕಟ್ಟಿದ್ದ ಬಳಪದಕಲ್ಲಿನ ಪಕ್ಕ ಒಂದಿಷ್ಟು ಕುಂಕುಮ, ಕೆಲವು ಅಗರಬತ್ತಿ ತುಂಡುಗಳು, ಹಿತ್ತಲಿನ ಹೂವಿನ ಗಿಡದ ಒಂದಿಷ್ಟು ಬಾಡಿದ ಹೂವುಗಳು. ಇದಾದ ಒಂದು ವಾರದಷ್ಟು ಸಮಯದಲ್ಲಿ ತಿಮ್ಮನ ಒಂಟಿತನ ತಾತನ ಗಮನಕ್ಕೆ ಬಂತು. ನೋಡಕಾಗಲ್ಲ ಮಾರಿಬಿಡು ಅತ್ಲಾಗಿ ಅಂತ ಬೇಸರದಿಂದಲೇ ಹೇಳಿ ಸಂತೆಗೆ ಒಂಟಿತಿಮ್ಮನನ್ನು ಹೊರೆಯನ್ನೇನೂ ಹೊರಿಸದೇ ಕರೆದೊಯ್ದಿದ್ದರು.
ಈಗ ಅವುಗಳು ಇಲ್ಲವಾಗಿ ಇಪ್ಪತ್ತು ವರ್ಷಗಳೇ ಕಳೆದಿವೆ. ಇದರ ನಡುವೆ ಜೀವನಚಕ್ರ ಎಷ್ಟೋ ದೂರ ಉರುಳಿದೆ. ತಾತನ ಮನೆಯಲ್ಲಿ ನಾನೇ ಮೊದಲ ಮೊಮ್ಮಗ. ಅದು ಅಕ್ಕನ(ತಾಯಿ) ತವರಾಗಿದ್ದರೂ, ನಾನು ಅಪ್ಪನ ಮನೆಯನ್ನು ಅಪ್ಪನ ಮನೆ ಎಂದಷ್ಟೇ ನೆನಪಿಸಿಕೊಳ್ಳುವೆನೇ ವಿನಃ, ಬಾಲ್ಯದ ನನ್ನ ಮನೆ ಅಂದರೆ ಈ ರಂಗ ತಿಮ್ಮರ ಹೆಜ್ಜೆಯ, ಕೊರಳಿನ ಗೆಜ್ಜೆಯ ಸದ್ದು ಇದ್ದ ಮನೆಯೇ. ಅಲ್ಲಿ ಇದ್ದಷ್ಟೂ ದಿನ ಜೀವನದ ಬಿಸಿಲೇ ತಾಕಿರಲಿಲ್ಲ. ರಂಗ ತಿಮ್ಮರಿರುವ ಅಷ್ಟೂ ದಿನ ಮನೆಯಲ್ಲಿ ಸಮೃದ್ಧಿಯಿತ್ತು. ಹೊಸ ಮನೆಯೂ ಆಗಿತ್ತು. ಸುತ್ತಲವರು ಮೆಚ್ಚುವಷ್ಟು ಬೆಳೆಯೂ ಬರುತ್ತಿತ್ತು. ಮನೆಗೆ ಹೋಗಿಬರುವವರು, ನೆಂಟರಿಷ್ಟರು ಅದೆಷ್ಟೋ. ಹಬ್ಬದ ದಿನಗಳು ನಿಜವಾಗಿಯೂ ವಿಶೇಷವಾಗಿರುತ್ತಿದ್ದವು. ಇದೆಲ್ಲದರ ಹಿಂದೆ ಮನೆಯ ಸದಸ್ಯರ ಶ್ರಮ ಇದ್ದರೂ, ಅದಕ್ಕೆ ರಂಗ ತಿಮ್ಮನ ಪಾತ್ರವನ್ನು ಅಳೆಯುವುದಕ್ಕೆ ಸೇರು ಬಳ್ಳಗಳಿಂದಾಗಲಿ, ಮಾರು ಮೊಳಗಳಿಂದಾಗಲಿ, ಮೀಟರು ಕಡ್ಡಿಗಳಿಂದಾಗಲೀ ಸಾಧ್ಯವಿರಲಿಲ್ಲ. ರಂಗ ತಿಮ್ಮರ ಕತೆ ಹದಿನೈದು-ಹದಿನೆಂಟು ವರ್ಷಗಳಲ್ಲಿ ನಡೆದ ಒಂದು ಮಿನಿ ಮಹಾಭಾರತವೇ ಹೌದು! ರಂಗ ತಿಮ್ಮರಿದ್ದ ಆ ನನ್ನ ಮನೆ ಸಣ್ಣದೊಂದು ನಂದನವನದಂತೆ ಇತ್ತು. ಡಿವಿಜಿ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದಾರಲ್ಲ, ‘ಬೆಳಕೀವ ಸೂರ್ಯಚಂದ್ರರದೊಂದೂ ಸದ್ದಿಲ್ಲ’ ಎನ್ನುವಂತೆ ರಂಗ ತಿಮ್ಮ ಇಬ್ಬರೂ ತಮ್ಮ ಸ್ನಾಯುಶಕ್ತಿಯ ಶ್ರಮದಿಂದಲೇ ಮನೆಗೆ ಬೆಳಕನಿತ್ತು, ಸದ್ದಿಲ್ಲದೇ ಸರಿದುಹೋದರು. ಈಗ ಇವುಗಳ ನೆನಪು ಬಾಯಾರಿದ ಗಂಟಲಿಗೆ ಸಿಹಿನೀರಿದ್ದಂತೆ!
ನಾನು ಕಲಾವಿದನಾಗಿದ್ದರೆ, ಮೊನ್ನೆಯ ಕನಸಿನಲ್ಲಿ ದುರುಗುಟ್ಟು ನೋಡುತ್ತಿದ್ದ ತಿಮ್ಮನ ಆ ಕಣ್ಣುಗಳನ್ನು ಅಚ್ಚುಒತ್ತಿದ ಹಾಗೆ ಬಿಡಿಸಿರುತ್ತಿದ್ದೆ!
******
ಕೆಲವು ಸಾಲುಗಳಂತು ಅತಿ ಸುಂದರವಾಗಿದೆ.