ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

Image result for images of akka mahadevi

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಡಾ.ಸಣ್ಣರಾಮ

ಹಿಂದಿನ ಸಂಚಿಕೆಯಿಂದ———

ಇಂದಿನ ಆಧುನಿಕ ಮಹಿಳಾವಾದಿಗಳು ಹೆಣ್ಣು ತನ್ನ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿದರೆ ಪುರುಷ ದೌರ್ಜನ್ಯದಿಂದ ಪೂರ್ಣ ವಿಮುಕ್ತಿ ಪಡೆಯಬಹುದು ಎಂದು ಹೇಳುತ್ತಾರೆ. ಈ ತತ್ವವನ್ನು 12ನೇ ಶತಮಾನದಷ್ಟು ಹಿಂದೆ ಅಕ್ಕ ಹೇಳಿದ್ದಾಳೆ ಎಂಬುವುದನ್ನು ಮಹಿಳಾವಾದಿಗಳು ಗಮನಿಸಬೇಕು. ಅಕ್ಕನ ಬದುಕೆ ಇಂದಿನ ಮಹಿಳಾವಾದಕ್ಕೆ ಮೂಲ ಪ್ರೇರಣೆಯಾಗಬಲ್ಲದು.

ಕದಳಿ ಎಂಬುದು ವಿಷಂಗಳು
ಕದಳಿ ಎಂಬುದು ಭವ ಘೋರಾರಣ್ಯ
ಈ ಕದಳಿ ಎಂಬುದು ಗೆದ್ದು ತಾವೆ ಬದುಕಿ ಬಂದು
ಕದಳಿ ಬನದಲ್ಲಿ ಭವಹರನ ಕಂಡೆನು
ಭವಗೆದ್ದು ಬಂದ ಮಗಳೆ ಎಂದು
ಕರುಣದಿ ತೆಗೆದು ಬಿಗಿದಪ್ಪಿದಡೆ
ಚನ್ನಮಲ್ಲಿಕಾರ್ಜುನನ ಹೃದಯ ಕಮಲದಲ್ಲಿ ಅಡಗಿದೆನು-

ಈ ವಚನ ಅಕ್ಕನ ಪ್ರೌಢಮೆಗೆ, ಪ್ರಬುದ್ಧ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ. ಕೆದಕಿದಷ್ಟು ಅರ್ಥವನ್ನು ಹಿಡಿ ಹಿಡಿಯಾಗಿ ಸಹೃದಯರಿಗೆ ಉಣಬಡಿಸುತ್ತದೆ. “ಕದಳಿ” ಎಂಬ ಪದವನ್ನು ಎಷ್ಟು ಅರ್ಥದಲ್ಲಿ ಬಳಸಿದ್ದಾಳೆಂಬುದು ಗ್ರಹಿಕೆಗೆ ಸಿಕ್ಕರೆ ಭಾಷಾ ಪಂಡಿತರು ಬೆಕ್ಕಸ ಬೆರಗಾಗುತ್ತಾರೆ. ತನು, ಮನ, ಸಂಸಾರ, ಲೌಕಿಕ ಬದುಕು ಮೃದುಭಾವ ಮೊದಲಾದ ಅರ್ಥದಲ್ಲಿ ಕದಳಿ ಎಂಬ ಪದ ಬಳಕೆಯಾಗಿದೆ. ಈ ಸಂಸಾರವೆಂಬ ಘೋರ ಅರಣ್ಯವನ್ನು ಜಯಿಸಲು “ಕದಳಿ” ತನುಬೇಕು. ತನುವಿಲ್ಲದೆ ಪೂರ್ಣ ತತ್ವ ಲಭಿಸುವುದಿಲ್ಲ. ಕದಳಿ ತನುವಿನಿಂದ ಪೂರ್ಣ ತತ್ವವನ್ನು ಇಹದಲ್ಲಿ ಸಾಧಿಸಿದವರು ಪರದಲ್ಲಿ ಪೂರ್ಣವನ್ನು ಪಡೆಯುತ್ತಾರೆ. ಪೂರ್ಣದಲ್ಲಿ ಪೂರ್ಣವು ಸೇರಿದರೆ ಉಳಿಯುವುದು ಬಯಲು. ಈ ಬಗೆಯ ಅದ್ಭುತ ತತ್ವವನ್ನು ಸರಳ ಪದಗಳಲ್ಲಿ ನಿರ್ವಚಿಸಿರುವ ರೀತಿ ಅಪೂರ್ವವಾದುದು.
ಪ್ರಾಚೀನ ಕಾಲದಲ್ಲಿಯೂ ಭಾರತದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನ ಮಾನ್ಯತೆಯನ್ನು ಪಡೆದಿದ್ದರೆಂಬುದಕ್ಕೆ ನಿಕತ್ತಾ, ಸಾಸ್ವತಿ, ಮೈತ್ರೇಯಿ, ಗಾರ್ಗಿ, ಅಪಲಾ, ಯಯಾಂತ ಇವರು ನಿದರ್ಶನರಾಗಿದ್ದಾರೆ. ಶರಣೆ ಅಕ್ಕಮಹಾದೇವಿ ಕನ್ನಡದ ಮೊದಲ ಮಹಿಳಾವಾದಿಯಂತೆ ಮೊದಲ ಕವಿಯಿತ್ರಿಯೂ ಹೌದು. ಹತ್ತನೆ ಶತಮಾನದಲ್ಲಿ ಕೆಲವು ಸಾಲುಗಳ ಬರವಣಿಗೆ ಇದೆ ಎಂದು ಹೇಳಲಾಗುತ್ತಿರುವ “ಕಂತಿ” ಎಂಬುವಳನ್ನು ಹೊರತು ಪಡಿಸಿದರೆ 354 ವಚನಗಳನ್ನು “ಯೋಗಾಂಗ ತ್ರಿವಿಧಿ”, “ಸೃಷ್ಟಿಯ ವಚನ”, “ಮಂತ್ರ ಗೋಪ್ಯ” ಎಂಬ ಕೃತಿಗಳನ್ನು ರಚಿಸಿದ ಮಹಾದೇವಿ ಅಕ್ಕ ಬರೆದಿದ್ದಾಳೆ. ಅಕ್ಕನ ವಚನಗಳಲ್ಲಿ ತತ್ವವಿದೆ, ಸತ್ವವಿದೆ, ವೇದನೆಯಿದೆ. ಕನ್ನಡ ಸಾರಸ್ವತ ಲೋಕಕ್ಕೆ ಅಕ್ಕನ ಕೊಡುಗೆ ಶ್ಲಾಘನೀಯ. ಅಕ್ಕಮಹಾದೇವಿಯ ವಚನದ ಮಹೋನ್ನತಿಯನ್ನು ಕುರಿತಂತೆ ಚನ್ನಬಸವಣ್ಣನವರು

ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ
ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ
ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ
ಅಜಗಣ್ಣನ ಐದು ವಚನಕ್ಕೆ ಕೂಡಲ ಚನ್ನಸಂಗಮದೇವಾ
ಮಹದೇವಿಯಕ್ಕನ ಒಂದು ವಚನ ನಿರ್ವಚನ-ಎಂದಿದ್ದಾನೆ.

ಅಕ್ಕಮಹಾದೇವಿಯ ವಚನ, ಅನುಭವ ಸಂಪತ್ತು ಅಷ್ಟು ಘನವಾಗಿತ್ತು. ಎಲ್ಲಾ ಆದ್ಯರ, ಹಿರಿಯರ ವಚನಗಳ ಸತ್ವವನ್ನು ಮೀರಿ ನಿಲ್ಲಬಲ್ಲವಾಗಿದ್ದಾವೆ ಎಂದು ಸಾಕ್ಷಿಕರಿಸಿರುವುದು ಗಮನಾರ್ಹ ಸಂಗತಿಯಾಗಿದೆ.

ಸತ್ಯಕ್ಕ:
ಶರಣರ ಕ್ರಾಂತಿಗೆ ಶಕ್ತಿ ತುಂಬಿದ, ಅಲ್ಲಮ ಪ್ರಭುದೇವ ಮತ್ತು ಅಕ್ಕಮಹಾದೇವಿಯು ಶಿವಮೊಗ್ಗ ಜಿಲ್ಲೆಯವರೇ ಆಗಿದ್ದಾರೆ. ಜಿಲ್ಲೆಯ ಕೀರ್ತಿಯ ಕಿಡಿಯನ್ನು ಇಲ್ಲಿಂದಲೇ ಗುರುತಿಸಬಹುದಾಗಿದೆ. ಇವರೊಂದಿಗೆ ಶರಣೆ ಸತ್ಯಕ್ಕ ಸಹ ಶಿವಮೊಗ್ಗ ಜಿಲ್ಲೆಯ ಶರಣ ಚಳುವಳಿಯ ಕ್ರಾಂತಿಯ ಕಿಡಿ. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಸಮೀಪದ ಹಿರೇಜಂಬೂರು ಸತ್ಯಕ್ಕಳ ಜನ್ಮಸ್ಥಳ. ಸತ್ಯಕ್ಕ ಜನಪದ ಸಾಹಿತ್ಯದಲ್ಲಿ ಪ್ರವೀಣೆಯಾಗಿ ವಚನಗಾರ್ತಿಯು ಆಗಿದ್ದಳು. ಇವಳ ಕಾಯಕ, ನಿಷ್ಠೆ, ಭಕ್ತಿಯ ಪರಕಾಷ್ಠೆ ಆ ಕಾಲದಲ್ಲಿ ಮನೆಮಾತಾಗಿತ್ತು. ಶಿವಭಕ್ತರ ಮನೆಯ ಅಂಗಳ ಗುಡಿಸುವ ಕಾಯಕ ಇವಳದಾಗಿತ್ತು. ಈ ಕಾಯಕದಲ್ಲಿಯೇ ದೇವರನ್ನು ಕಂಡವಳು ಶಿವ ಶರಣೆ ಸತ್ಯಕ್ಕ. ಶಿವನ್ನಲ್ಲದೆ ಅನ್ಯ ದೈವವನ್ನು ಪೂಜಿಸುವುದಿಲ್ಲ. ಶಿವನ್ನಲ್ಲದೇ ಅನ್ಯ ದೈವದ ಶಬ್ಧವನ್ನು ಕೇಳುವುದಿಲ್ಲವೆಂದು ಪ್ರತಿಜ್ಞೆ ಮಾಡಿದ ಕಟ್ಟಾ ಶಿವಭಕ್ತೆ. ಅಂತೆಯೇ ತನ್ನ ಪ್ರತಿಜ್ಞೆಯನ್ನು ಪಾಲಿಸುತ್ತಾ ಬಂದವಳು. ಒಮ್ಮೆ ಶಿವನು ವೃದ್ಧ ಭಿಕ್ಷುಕನ ರೂಪದಲ್ಲಿ ಸತ್ಯಕ್ಕನ ಶಿವನಿಷ್ಠೆಯನ್ನು ಪರೀಕ್ಷಿಸಲು ಬರುತ್ತಾನಂತೆ. ಸತ್ಯಕ್ಕ ಬಿಕ್ಷೆ ಹಾಕಿದಾಗ ಹರಿದ ಜೋಳಿಗೆಯಿಂದ ಹಾಕಿದ ಬಿಕ್ಷೆಯು ನೆಲದಲ್ಲಿ ಚೆಲ್ಲುತ್ತದೆ. ಬಿಕ್ಷುಕ ರೂಪದ ಶಿವನು “ಅಯ್ಯೋ ಹರಿದ ಹರಿಯಿಂದ ಕಾಳು ಹರಿದು ಹೋಯ್ತು” ಎಂದು ಉದ್ಗರಿಸುತ್ತಾರೆೆ. ಹರಿ ಎಂಬ ಶಬ್ಧ ಕಿವಿಗೆ ಬೀಳುತ್ತಲೇ ಸಿಟ್ಟಾದ ಸತ್ಯಕ್ಕ ಸಿಟ್ಟಾಗಿ ಕೈಯಲ್ಲಿದ್ದ ಸಟ್ಟುಗದಿಂದ ಶಿವನನ್ನೇ ಹೊಡೆದಳೆಂದು ಐತಿಹ್ಯವಿದೆ. ಅಷ್ಟರ ಮಟ್ಟಿಗೆ ಶಿವಭಕ್ತೆಯಾಗಿದ್ದಳು.
ಸತ್ಯಕ್ಕನ ಒಟ್ಟು 29 ವಚನಗಳು ದೊರೆತಿವೆ. ಶಂಬುಜಕೇಶ್ವರ ಎಂಬುದು ಅವಳ ಅಂಕಿತನಾಮ. ಜಂಬೂರಿನಲ್ಲಿ ಶಂಬುಕೇಶ್ವರ ಎಂಬ ದೇವರಿದ್ದಾರೆ. ಈ ಶಂಬುಕೇಶ್ವರ ದೇವರ ನಾಮವನ್ನೆ ಸತ್ಯಕ್ಕನ ತನ್ನ ಅಂಕಿತದಲ್ಲಿಟ್ಟುಕೊಂಡಿರಬೇಕು. ಅದು ವ್ಯತ್ಯಾಸವಾಗಿ ಶಂಬುಜಕೇಶ್ವರ ಆಗಿರಬೇಕೆಂಬುದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ತಳ ಸಮುದಾಯದ ಸತ್ಯಕ್ಕನ ವಚನಗಳಲ್ಲಿ ಅಪರೂಪದ ತತ್ವಗಳು ತುಂಬಿವೆ. ಸತಿ-ಪತಿಭಾವ, ಸಮರ್ಪಣಭಾವ, ಶಿವನಿಷ್ಠೆಗಳು ಸರಳವಾದ ಭಾಷೆಯಲ್ಲಿ ಮೈದುಂಬಿ ನಿಂತಿವೆ.

ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಾಮಾಣಿಸಲಿಲ್ಲ
ಕಾಸೆ ಮಿಸೆ ಕಠಾರವಿದ್ದುದೆ ಗಂಡೆAದು ಪ್ರಮಾಣಿಸಲಿಲ್ಲ
ಅದು ಜಗದ ಹಾಹೆ: ಬಲ್ಲವರ ನೀತಿಯಲ್ಲ
ಏತರ ಹೆಣ್ಣಾದಡೂ ಮಧುರವೆ ಕಾರಣ
ಅಂದವಿಲ್ಲದ ಕುಸುಮಕ್ಕೆ ವಾಸನೆ ಕಾರಣ ಇದರಂದವ ನೀನೇ ಬಲ್ಲೆ
ಶಂಭಜಕ್ಕೇಶ್ವರಾ

ಸತ್ಯಕ್ಕ ಹಲವಾರು ವಚನಗಳಲ್ಲಿ ಪುರುಷ ಪ್ರಾಧ್ಯಾನತೆಯನ್ನು ದಿಕ್ಕರಿಸಿದ್ದಾಳೆ. ಅನುಭಾವಕ್ಕೆ ಲಿಂಗ ಭೇದವಿಲ್ಲ ಎಂದು ಸಾರಿದ್ದಾಳೆ. ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದಿದ್ದಾಳೆ.
ಶಿವಶರಣರ ಕ್ರಾಂತಿಯಲ್ಲಿ ಪಾಲ್ಗೊಂಡು ಅದರ ದನಿಯಲ್ಲಿ ಗಟ್ಟಿದನಿಯನ್ನು ಹೊರಡಿಸಿದ ಶಿವಮೊಗ್ಗದ ಶರಣರು ತಮ್ಮದೇ ಅನನ್ಯತೆಯನ್ನು ಮೆರೆದಿದ್ದಾರೆ. ಶಿವಮೊಗ್ಗ ಕ್ರಾಂತಿಯ ನಾಡೆಂಬುದನ್ನು ಆ ಕಾಲಕ್ಕೆ ತೋರಿದ ಕೀರ್ತಿ ಈ ಶಿವಶರಣ-ಶರಣೆಯರಿಗೆ ಸಲ್ಲುತ್ತದೆ.

  • ಮುಂದುವರೆಯುತ್ತದೆ…

Leave a Reply

Back To Top