ಅಂಕಣ

ನೆಲಸಂಪಿಗೆ

ನಮ್ಮ ನಡುವಿನ  ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು  ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ

ಕಾಡಂಚಿನ ಊರಿಗೆ ನರಿಗಳ ಸಂಗೀತ!

ಮುದೂರಿ, ಮುದುವೇರಿ ಎಂದೆಲ್ಲ ಕರೆಸಿಕೊಳ್ಳುತ್ತ ಹಾಡಿ, ಬೆಟ್ಟ, ಗುಡ್ಡ, ಗದ್ದೆ, ತೋಟಗಳ ನಡುವೆ ಅಡಗಿಕೊಂಡಿರುವ; ಸಮುದ್ರ ತೀರದಿಂದ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿನ ಪುಟ್ಟ ಊರು ನಮ್ಮದು. ಕರೆಂಟು,ಸರಿಕಟ್ಟಾದ ರಸ್ತೆ ಯಾವುದೂ ಇರದಿದ್ದ ಹಳೆಯ ಕಾಲದಲ್ಲಿ ಮಳೆ, ಚಳಿ, ಸೆಕೆ, ದುಡಿಮೆ, ಸೂರ‍್ಯ, ಚಂದ್ರ, ಪ್ರಾಣಿಪಕ್ಷಿಗಳೇ ಜನರ ಸಂಗಾತಿಗಳಾಗಿದ್ದವು. ಹಗಲು ಮೈಮುರಿಯುವ ಕೆಲಸ, ಚೂರುಪಾರು ಹರಟೆ, ರಾತ್ರಿಯ ದೀರ್ಘ ನಿದ್ದೆ…. ಉಳಿದಂತೆ ದಿನನಿತ್ಯದ ಜಂಜಡಗಳ ನಡುವೆ ಜನಸಾಮಾನ್ಯರ ಬದುಕು ಸಾಗುತ್ತಿತ್ತು. ರಾತ್ರಿ ಒಂಬತ್ತು ಗಂಟೆಯ ಮೊದಲೇ ಹೊಗೆ ಕಾರುವ ಚಿಮ್ಣಿ ದೀಪಗಳನ್ನು ಆರಿಸಿ ಮಲಗಿಬಿಡುತ್ತಿದ್ದೆವು. ಮುಂದಿನದ್ದು ಕತ್ತಲ ಸಾಮ್ರಾಜ್ಯ, ಇರುಳ ಸದ್ದುಗಳು, ನಿಗೂಢ ಲೋಕ!  ನಾವೆಲ್ಲ ಬಾಗಿಲು ಬಡಿದುಕೊಂಡು ಮಲಗಿದ ಮೇಲೆ ಹೊರಗೊಂದು ಹೊಸ ಪ್ರಪಂಚವೇ ತೆರೆದುಕೊಳ್ಳುತ್ತಿದ್ದಿರಬೇಕು; ಗುಮ್ಮಗಳು, ಬಾವಲಿ, ನತ್ತಿಂಗ(ನೈಟ್‌ಜಾರ್), ಗುಡ್ಡೆಹೆಗ್ಣ, ಇಲಿ, ನಾಯಿ-ಬೆಕ್ಕುಗಳು, ಕಾಡುಹಂದಿ, ನರಿಗಳು ಇಂತಹ ರಾತ್ರಿ ಸಂಚಾರದ ಪ್ರಾಣಿಪಕ್ಷಿಗಳು ಪರಸ್ಪರ ಸಂವಾದಿಸುತ್ತ, ಜಗಳಾಡುತ್ತ ತಮ್ಮ ‘ದಿನಚರಿ’ ನಡೆಸುತ್ತಿದ್ದಿರಬೇಕು. ಆದರೆ ಈ ಜಗತ್ತಿನ ಪೂರ್ಣ ಪರಿಚಯವಿರದ ನಾವು ಹಳ್ಳಿಗರು ‘ನಮ್ಮಿಂದಲೇ ಬೆಳಕಾಗುವುದು’ ಎಂಬಂತೆ ಬೆಳಗಿನ ಜಾವಕ್ಕೇ ಎದ್ದುಕೊಂಡು ಮಂಕುದೀಪಗಳನ್ನು ಉರಿಸಿ, ಒಲೆಹಚ್ಚಿ ನಿತ್ಯದ  ಹರ್ಬ್(ಕೆಲಸ) ಶುರು ಮಾಡುತ್ತಿದ್ದೆವು! ಆದರೆ ಎಷ್ಟೆಂದರೂ ರಾತ್ರಿ ನಾವು ಮಲಗಿದ ಮೇಲೆ ನಡೆಯುವ ವಿದ್ಯಮಾನಗಳ ಕುರಿತು ಅಲ್ಪಸ್ವಲ್ಪ ಪರಿಚಯ ನಮಗಿದ್ದೇ ಇತ್ತಲ್ಲ…….!

     ನಮ್ಮ ಮನೆಯ ಸುತ್ತ ಬತ್ತದ ಗದ್ದೆಗಳಂತೆ ಕಬ್ಬಿನ ಗದ್ದೆಗಳೂ ಇದ್ದವು. ಕಾತಿ, ಸುಗ್ಗಿ, ಧಾನ್ಯ ಹೀಗೆ ಮೂರು ಬೆಳೆ ಮುದೂರಿ ಬೈಲಿನಲ್ಲಿ ಬೆಳೆಯುತ್ತಿತ್ತು. ಕೆಲವರು ಕಬ್ಬು ಬೆಳೆಸುತ್ತಿದ್ದರು. ಈ ಕಬ್ಬನ್ನು ತಿನ್ನಲು ನರಿಗಳು ಬಂದುಹೋಗುತ್ತಿದ್ದವು. ಆದರೆ ಸುಮ್ಮನೆ ಗುಟ್ಟಿನಲ್ಲಿ ಬಂದುಹೋಗುವುದು ನರಿಗಳಿಗೆ ಅಸಾಧ್ಯ! ಗಲಾಟೆ ಮಾಡುತ್ತಾ, ಗಾಢ ನಿದ್ದೆಯಲ್ಲಿದ್ದವರೂ ಗೊಣಗಿ ಮಗ್ಗಲು ಬದಲಿಸುವಂತೆ ಕಾಕು ಹಾಕುತ್ತ ತಿರುಗುತ್ತಿದ್ದವು. ಸಿಹಿಕಬ್ಬು ತಿಂದು ‘ಕೂಕೂಕೂ’ ಎಂದು ಅರಚುತ್ತ ನರಿಗಳು ‘ಧಿಗಣ’ ಹಾರುತ್ತವೆ ಎಂದು ನಾವು ಮಕ್ಕಳು ಕಲ್ಪಿಸಿಕೊಂಡಿದ್ದೆವು! ಹಾಗೆ ಇಳಿಸಂಜೆ, ರಾತ್ರಿ, ಬೆಳಗಿನ ಜಾವಗಳಲ್ಲಿ ಹಠಾತ್ತಾಗಿ ಒಮ್ಮೆಗೇ ತೇಲಿಬರುವ ನರಿಗಳ ವಿಚಿತ್ರ ಧ್ವನಿಯನ್ನು ಕೇಳುತ್ತ ನಿದ್ದೆಗೆ ಜಾರುವುದು ಒಂದು ಅಭ್ಯಾಸವೇ ಆಗಿ ‘ನರಿಜೋಗುಳ’ವಿಲ್ಲವಾದರೆ ಏನನ್ನೋ ಕಳಕೊಂಡಂತೆ ಭಾಸವಾಗುತ್ತಿತ್ತು. ನರಿಗಳಿಗೆ ಸಾಥ್ ಕೊಡಲು ಮಳೆಗಾಲದ ಕಪ್ಪೆಗಳು, ಅಸಂಖ್ಯಾತ ಕೀಟ, ಜೀರುಂಡೆಗಳು ಇದ್ದವು. ‘ಊಂಹೂಂ’ ‘ಊಂಹೂಂಹೂಂ’ ಎಂದು ದನಿ, ಮರುದನಿ ಕೊಡುವ ಗುಮ್ಮಗಳಿದ್ದವು. ನೀರಿಗೆ ಕಲ್ಲು ಹಾಕಿದಂತೆ ಮೊಳಗುವ ನತ್ತಿಂಗಗಳಿದ್ದವು… ಈ ಎಲ್ಲ ಜೀವಾದಿಗಳ ಮೇಲೆ ಸಿಟ್ಟಿನಿಂದ ಗುರಾಯಿಸುತ್ತ ಬೊಗಳಿ ಹಾರುವ ನಾಯಿಗಳ ಠೇಂಕಾರ, ಹೂಂಕಾರ, ಗೊಣಗಾಟಗಳಿದ್ದವು. ಎಲ್ಲ ಶಬ್ದಗಳನ್ನೂ ನುಂಗಿ ನೊಣೆಯುವ ಗಾಳಿ, ಮಳೆ, ಗುಡುಗು, ಸಿಡಿಲುಗಳು ಮಳೆಗಾಲದ ಅಬ್ಬರವಾದರೆ; ಚಳಿಗಾಲದಲ್ಲಿ ತೆಂಗಿನ ಮರಗಳಿಂದ ತಟಪಟ ತೊಟ್ಟಿಕ್ಕುತ್ತ ಅಂಗಳ ಒದ್ದೆಮಾಡುವ ಇಬ್ಬನಿ ಹನಿಗಳ ಮಧುರ ಸದ್ದು!

ಗದ್ದೆಗಳು, ನಡುವೆ ಸಾಲು ತೆಂಗಿನ ಮರಗಳು, ಸಣ್ಣದೊಂದು ಕೆರೆ, ಕೆರೆಗೆ ಬಾಗಿಕೊಂಡ ಪರಿಮಳದ ಹೂಗಳ ಹೊನ್ನೆ(ಸುರಹೊನ್ನೆ)ಮರ, ಕಬ್ಬಿನ ಜುಂಗು ಮತ್ತು ಬತ್ತದ ನಾರನ್ನು ಆಯ್ದುತಂದು ತೆಂಗಿನ ಮರಗಳಿಗೆ ಸಾಲಾಗಿ ಗೂಡುಗಳನ್ನು ನೇತುಹಾಕುವ ಗೀಜುಗಗಳು, ಮೇಲ್ಭಾಗದ ಮಕ್ಕಿಗದ್ದೆಯಲ್ಲಿ ಪ್ರತಿವರ್ಷ ನಡೆಯುವ ಕಬ್ಬಿನಾಲೆ- ಧಗಧಗಿಸುವ ಬೆಂಕಿ, ಕೊತಕೊತನೆ ಕುದಿವ ಬೆಲ್ಲದ ಕೊಪ್ಪರಿಗೆ, ರಾತ್ರಿ ಹಗಲು ಕೋಣಗಳನ್ನು ಓಡಿಸುತ್ತ ಒಳಾಲು ಹಾಕುವ ʼಓವೋʼ ಎಂಬ ಹುಡುಗನ ಕಂಠ… ನಮ್ಮೂರಿನ ಚಿತ್ರಣವನ್ನು ಹೇಳಹೋದರೆ ಎಷ್ಟೊಂದು! ಇಷ್ಟಾಗಿಯೂ ಸೊಗಡು ಬೀರುವ ಗೆಣಸಿನ ಗದ್ದೆಗಳು ಮತ್ತು ಅದರ ನಡುವೆ ಬೆಳ್ಳಗೆ ನಗುವ ಬೆರ್ಚಪ್ಪನನ್ನು ಮರೆತರೆ ಮುದೂರಿಬೈಲನ್ನು ವರ್ಣಿಸಿದಂತಾಗುವುದಿಲ್ಲ! ಇನ್ನು, ಕಾಲಕಾಲಕ್ಕೆ ಬೆಳೆದು, ಕಟಾವು ಮಾಡಿಸಿಕೊಂಡು, ಸಸಿ ಮೊಳಕೆಯೊಡೆದು, ತೆನೆತುಂಬಿ ನಿಲ್ಲುವ ಬತ್ತದ ಗದ್ದೆಗಳ ವಿವಿಧ ಬಗೆಯ ಪರಿಮಳ; ಮೂಗಿನಿಂದ ಮೆದುಳಿನ ಕೋಶಗಳನ್ನು ಪ್ರವೇಶಿಸಿ ನೆಲೆನಿಂತ ವಿಸ್ಮಯ!

Foxes have been scavenging from humans for 42,000 years - BBC Science Focus  Magazine

    ರಾತ್ರೋರಾತ್ರಿ ಅಂಗಳದ ಕೋಳಿಗೂಡಿಗೆ ನುಗ್ಗಿ ಕೋಳಿ ಕದ್ದೊಯ್ಯುವ, ಏಡಿ-ಹುಳಹುಪ್ಪಡಿಗಳನ್ನು ತಿನ್ನುವ, ಮೇಕೆ ಮರಿಗಳನ್ನು ಭಕ್ಷಿಸುವ ನರಿಯೆಂಬ ನರಿ ಮುಳ್ಳುಸೌತೆ, ಕಬ್ಬನ್ನೂ, ಕಲ್ಲಂಗಡಿ ಹಣ್ಣನ್ನು ತಿನ್ನುತ್ತದೆ ಎಂಬ ವಿಷಯ ಬಾಲ್ಯದ ದಿನಗಳಂತೆಯೇ ಈ ಹೊತ್ತಿಗೂ ನಗು ತರಿಸುತ್ತದೆ. ನಮ್ಮ ಅಜ್ಜಿ ಕಷ್ಟಪಟ್ಟು ಬೆಳೆಸುತ್ತಿದ್ದ ಮುಳ್ಳುಸೌತೆಯ ಮಿಡಿಗಳನ್ನು ಅಪಹರಿಸಿ ಅವರಿಂದ ಶಾಪ ಹಾಕಿಸಿಕೊಳ್ಳುತ್ತಿದ್ದ ನರಿ; ಪರಿಹಾರಾರ್ಥವಾಗಿ ರಾತ್ರಿ ಹಾಡುಗಳನ್ನು ಹಾಡಿ ನಮ್ಮನ್ನು ಮುದಗೊಳಿಸುತ್ತಿತ್ತು! ಕಬ್ಬಿನ ಗದ್ದೆಯನ್ನು ಒಕ್ಕಿ ಕಬ್ಬು ತಿಂದು ಓಡಿಹೋಗುತ್ತಿದ್ದ ನರಿಗಳ ಬಗ್ಗೆ ರೈತರಿಗೆ ಸಿಟ್ಟಿತ್ತು. ಆದರೂ ಏನೂ ಮಾಡಲಾಗದೆ, “ಈ ನಾಯಿಗಳನ್ನ್ ಸಾಕಿದ್ದ್ ಕೂಳ್ ದಂಡಕ್ಕೆ” ಎಂದು ಪಾಪದ ನಾಯಿಗಳಿಗೆ ಬಯ್ದು ಬೇಗುದಿ ತೀರಿಸಿಕೊಳ್ಳುತ್ತಿದ್ದರು!  ಹಾಗೇ ನರಿಗಳ ಕುರಿತು ವಿವಿಧ ಕತೆಗಳನ್ನೂ ಹೇಳುತ್ತಿದ್ದರು. ಆ ಕತೆಗಳಲ್ಲಿ ನರಿ ಕುತಂತ್ರಿ, ಮೋಸಗಾರನಾಗಿತ್ತು! ಎಂದೆಂದೂ ಮರೆಯಲಾಗದ ಒಂದು ಸ್ವಾರಸ್ಯಕರ ಸಂಗತಿಯೆಂದರೆ, ಕೆಲವು ಕಬ್ಬುಗಳು ಮಧ್ಯೆ ಮಧ್ಯೆ ಕೆಂಪಾಗಿ ಬಿರುಕುಬಿಟ್ಟು ಹಾಳಾಗಿರುತ್ತವಲ್ಲ; ಆ ಕುರಿತಾದ ವ್ಯಾಖ್ಯಾನ! ನಮ್ಮ ಹಳ್ಳಿಯವರ ಪ್ರಕಾರ ಅದು ನರಿ ಹೂಸುಬಿಟ್ಟು ಹಾಗಾಗುವುದಂತೆ! ಮೂಗಿನವರೆಗೆ ಕಬ್ಬು ತಿಂದ ನಂತರ ‘ಈ ಮನುಷ್ಯನಿಗೆ ಬುದ್ಧಿ ಕಲಿಸುತ್ತೇನೆ’ ಎಂದು ಇಂತಹ ಕಿಡಿಗೇಡಿ ಕೆಲಸ ಮಾಡಿ ಕಾಡಿಗೆ ಓಡಿಬಿಡುತ್ತದಂತೆ! ಸಣ್ಣವರಿದ್ದಾಗ ನಾವೆಲ್ಲ ಈ ಕತೆಯನ್ನೇ ನಂಬಿಕೊಂಡಿದ್ದೆವು. ಕಬ್ಬು ತಿನ್ನುವಾಗೆಲ್ಲ ನೆನಪಿಸಿಕೊಂಡು ಆ ಭಾಗವನ್ನು ಬಿಸಾಡುತ್ತಿದ್ದೆವು. ಕಬ್ಬಿಗೆ ರೋಗ ಬಂದು ಹಾಗಾಗುವುದೆಂದು ತಿಳಿದದ್ದು ಕಾಲೇಜಿಗೆ ಹೋದಮೇಲೆಯೇ! ಆದರೆ ಈಗಲೂ ಅಂತಹ ಕಬ್ಬನ್ನು ನೋಡಿದಾಗ ಮೊದಲು ನೆನಪಾಗುವುದು ‘ಚಾಲಾಕಿ’ ನರಿ! ಆಚೆಮನೆ ದೊಡ್ಡಮ್ಮ ಮಾತ್ರ ಬಿಸಿಲು ಮಳೆ ಬಂದಾಗ “ಮಕ್ಳೇ, ಕಾಣಿ ಕಾಣಿ… ಈಗ ನರಿಯಣ್ಣನ್ ಮದಿಯಾತ್ತ್” ಅಂತಿದ್ದರು. ಅದೇ ಸಂದರ್ಭದಲ್ಲಿ ಕಾಮನಬಿಲ್ಲು ಕಟ್ಟಿದರೆ “ಅಗಣಿ, ಅದೇ ಮದಿ ತೋರ‍್ಣ” ಎನ್ನುತ್ತಾ ನಾವೆಲ್ಲ ಖುಷಿಯಿಂದ ಕುಣಿಯುವಂತೆ ಮಾಡುತ್ತಿದ್ದರು. ಶಾಲೆ ಮಕ್ಕಳು ಮಾತ್ರ “ನರಿ ಮುಕ್ಳಿ (ಹಿಂಭಾಗ) ಕಂಡ್ರೆ ಆ ದಿನ ಒಳ್ಳೇ ಪಡಾವ್ (ಅದೃಷ್ಟ) ಅಂಬ್ರ್” ಅಂತಿದ್ದವು! ಆದರೆ ನಾವ್ಯಾರೂ ಹಗಲು ಹೊತ್ತು ಹಾಡಿಗಳಲ್ಲಾಗಲೀ, ಬಯಲು ಗದ್ದೆಯಲ್ಲಾಗಲೀ ನರಿಯ ಮುಖವನ್ನೂ ಕಂಡಿರಲಿಲ್ಲ!!!

ನರಿ (Canis aureus) ತುಂಬ ಸೂಕ್ಷ್ಮ ಪ್ರಾಣಿ. ಗುಂಪುಗಳಾಗಿ ಚದುರಿಹೋಗಿ ವಾಸಿಸುವ ಇವು ಪರಸ್ಪರ ಸಂವಾದಿಸಲು, ಎಚ್ಚರಿಕೆ ಕೊಡಲು ಮತ್ತು ಅಪಾಯವನ್ನು ಮುಂಚೆಯೇ ಗ್ರಹಿಸುವ ಸಲುವಾಗಿ ಆಗಾಗ ಕೂಗುತ್ತವೆ. ಸಣ್ಣಪುಟ್ಟ ಪೊದೆಗಳಿರುವ ಖಾಲಿ ಜಾಗ, ಹುಲ್ಲುಗಾವಲು, ಹಾಡಿ (ಸಣ್ಣಕಾಡು), ಬಯಲು ಪ್ರದೇಶಗಳು ಇವುಗಳ ವಾಸಸ್ಥಾನ. ಸುಲಭವಾಗಿ ಬಿಲ ತೋಡಬಲ್ಲ ಜಾಗಗಳು ಇವುಗಳಿಗೆ ಅಗತ್ಯ. ಆಫ್ರಿಕಾ, ಯುರೋಪ್, ಏಷ್ಯಾಖಂಡಗಳು ನರಿಗಳ ಪ್ರಮುಖ ನೆಲೆಗಳು. ನಾಯಿಗಳ ಕುಟುಂಬಕ್ಕೆ ಸೇರಿರುವ ಇವುಗಳ ಆಯಸ್ಸು ಹನ್ನೆರಡು ವರ್ಷ. ಬಿಳಿ, ಕಪ್ಪು, ಕಂದು ಬಣ್ಣಗಳಲ್ಲಿ ಕಂಡುಬರುವ ಇವು ಅಂಜುಬುರುಕ ಪ್ರಾಣಿಗಳು. ಮನುಷ್ಯನ ತಲೆ ಕಂಡೊಡನೆ ಓಡಿಹೋಗುವುದು ಇವುಗಳ ಸ್ವಭಾವ. ಹುಲಿ ಮುಂತಾದ ದೊಡ್ಡ ಪ್ರಾಣಿಗಳು ತಿಂದು ಬಿಟ್ಟ ಮಾಂಸವನ್ನು ತಿಂದು ಕಾಡಿನ ಸ್ವಚ್ಛತೆಗಾರರಾಗಿಯೂ ಕಾರ್ಯ ನಿರ್ವಹಿಸುತ್ತವೆ. ಒಮ್ಮೆಗೇ ನಾಲ್ಕೈದು ಮರಿಗಳನ್ನು ಇಡುತ್ತವಾದರೂ ಎಲ್ಲಾ ಮರಿಗಳೂ ಉಳಿಯಲಾರವು. ಹೆಣ್ಣು ನರಿ ಮರಿಗಳ ಪೋಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಒಂದು ವೇಳೆ ಅದು ಮೃತಪಟ್ಟರೆ ಗಂಡು ನರಿ ಮರಿಗಳ ಪಾಲನೆ ಮಾಡುತ್ತದೆ.ಇಂತಹ ನರಿಯ ಕೆಲ ಮುಖ್ಯ ಲಕ್ಷಣಗಳು ಅದು ಹೇಗೋ ಅದಕ್ಕೆ ‘ಕುತಂತ್ರಿ’ಎಂಬ ಬಿರುದನ್ನು ಕಟ್ಟಿಕೊಟ್ಟಿರಬೇಕು!

35,836 Wild Pig Stock Photos, Pictures & Royalty-Free Images - iStock

      ಅಂದು ನನ್ನ ಬಾಲ್ಯ ಕಾಲದಲ್ಲಿ ನಮ್ಮೂರಿಗೆ ಕಾಡುಹಂದಿಗಳು ಬಂದು ರಾತ್ರಿಹೊತ್ತು ಕಂಟ(ಬದು)ಗಳನ್ನು ಅಗೆದು ಹೋಗುತ್ತಿದ್ದವು. ಬಸಳೆ ನೆಟ್ಟರೆ ಒಮ್ಮೊಮ್ಮೆ ಬುಡಮೇಲು ಮಾಡುತ್ತಿದ್ದವು. ಆದರೆ ಈ ಉಪದ್ರ ಅಪಾಯಕಾರಿ ಮಟ್ಟವನ್ನು ತಲುಪಿರಲಿಲ್ಲ. ಹಾಗೇ ನಾಯಿ, ಬೆಕ್ಕುಗಳನ್ನು ಕದ್ದೊಯ್ಯುವ ನಾಯಿಕುರ್ಕ(ನಾಯಿಹುಲಿ)ದ ರಗಳೆ ಇದ್ದರೂ ಅವು ಹಾಡಿಯ ದರ್ಖಾಸು ಮನೆಗಳಿಗೆ ಮಾತ್ರ ಭೇಟಿ ಕೊಡುತ್ತಿದ್ದವಲ್ಲದೆ ತೀರಾ ಊರಿಗೆ ನುಗ್ಗಿರಲಿಲ್ಲ. ಚಿರತೆ, ಹುಲಿಗಳು ದೂರದ ಹರಿನ್‌ಗುಡ್ಡೆಯಲ್ಲಿ ಇವೆ ಎಂದು ಜನ ಮಾತಾಡಿಕೊಳ್ಳುತ್ತಿದ್ದುದು ಬಿಟ್ಟರೆ ದಿನನಿತ್ಯದ ಬದುಕಿಗೆ ತೊಂದರೆಯಾಗಿರಲಿಲ್ಲ. ಆದರೀಗ ಅಂದು ಕಾಣದ ಜಿಂಕೆಗಳು ಹಿಂಡುಹಿಂಡಾಗಿ ಗದ್ದೆಯಿಳಿದು ಮೆಂದು ಹೋಗುತ್ತವೆ. ನವಿಲುಗಳ ಸಂಖ್ಯೆ ಮಿತಿಮೀರಿದೆ. ಮೊದಲು ನವಿಲನ್ನು ಕಾಣುವುದೆಂದರೆ ಅಪರೂಪದಲ್ಲಿ ಅಪರೂಪ. ಈಗ ಮನೆ ಹತ್ತಿರದ ಗದ್ದೆಗಳಿಗೆ ಬಂದು; ಬತ್ತ, ತರಕಾರಿಯನ್ನು ತಿಂದು ನಲ್ಲೆಯನ್ನು ಮೆಚ್ಚಿಸಲು ನರ್ತಿಸುತ್ತಾ ಆರಾಮಾಗಿರುತ್ತವೆ. ರೈತರು ಗದ್ದೆಗಳಿಗೆ ಬಲೆಗಳನ್ನು ಮುಚ್ಚಿ ಬೆಳೆಯನ್ನು ರಕ್ಷಿಸಲು ಸಾಹಸ ಪಡುತ್ತಿದ್ದಾರೆ. ಮಂಗಗಳ ಕಾಟವಂತೂ ಎಲ್ಲಾ ಊರುಗಳಂತೆ ಇಲ್ಲೂ ಸರ್ವೇಸಾಮಾನ್ಯ. ತೆಂಗಿನ ಮರ ತನ್ನದಾದರೂ ಬೊಂಡ, ಕಾಯಿಗಳು ತನ್ನವಲ್ಲ ಎಂಬ ಅಸಹಾಯಕತೆ ರೈತನದಾಗಿದೆ! ಗುಡ್ಡೆಹೆಗ್ಳಗಳು ಸುವರ್ಣಗಡ್ಡೆ, ಮರಸಣಿಗೆ ಒಂದೂ ಬಿಡದೆ ಅಗೆದು ದರ್ಬಾರು ತೋರಿಸುತ್ತವೆ! ಚಿರತೆ ಮನೆಹತ್ತಿರದ ಹಾಡಿಗಳಲ್ಲೇ ತಿರುಗಾಡುತ್ತ, ಆಗಾಗ ದನಕರುಗಳ ಅವಶೇಷವನ್ನು ಬಿಟ್ಟು ಹೋಗುತ್ತಿದೆ!! ಆ ಕಾಲದಲ್ಲಿ ಸೂಡಿಬೀಸುತ್ತಾ ನಟ್ಟನಡುರಾತ್ರಿ ಯಕ್ಷಗಾನಕ್ಕೆ ಹೋಗಿ ಬರುತ್ತಿದ್ದ ಹಳ್ಳಿಗರು ಈಗ ಚಿರತೆಯ ಹೆದರಿಕೆಯಿಂದಾಗಿ ಯಕ್ಷಗಾನ ನೋಡುವ ಆಸೆಯನ್ನೇ ಕೈಬಿಟ್ಟಿದ್ದಾರೆ! ನಾಯಿಕುರ್ಕ ಮುದೂರಿಯ ಮನೆ ಮನೆಗೆ ರಾತ್ರಿ ಹೊತ್ತು ಭೇಟಿ ಕೊಟ್ಟು ನಾಯಿ, ಬೆಕ್ಕುಗಳನ್ನು ಒಯ್ಯುತ್ತಿದೆ! ಆದರೆ ಈ ವಿದ್ಯಮಾನಗಳಿಗೆ ವಿರುದ್ಧವಾಗಿ ಇನ್ನು ಕೆಲವು ಪ್ರಾಣಿ-ಪಕ್ಷಿಗಳು ಮಾಯವಾಗಿವೆ. ಮುಖ್ಯವಾಗಿ ನರಿಗಳ ಜೋಗುಳ ಇಲ್ಲವಾಗಿ ಹತ್ತಕ್ಕಿಂತ ಜಾಸ್ತಿ ವರ್ಷಗಳೇ ಕಳೆದಿವೆ! ಇವು ಎಲ್ಲಿ ಹೋದವು, ಯಾಕೆ ಹೋದವು ಯಾರಿಗೂ ಗೊತ್ತಿಲ್ಲ. ಕಬ್ಬಿನ ಗದ್ದೆಗಳು ಇಲ್ಲವಾದದ್ದಕ್ಕೆ ನರಿಗಳೂ ಊರುಬಿಟ್ಟು ಬೇರೆ ಕಡೆ ಹೋದವೆ… ಅಥವಾ ಆ ಭಾಗದಲ್ಲಿ ಇವುಗಳ ಸಂತತಿಯೇ ನಶಿಸಿತೇ? ತಿಳಿದಿಲ್ಲ. ಮೊದಲೆಲ್ಲ ʼಗ್ವಾಂಕ್ರ್ ಗ್ವಾಂಕ್ರ್ʼ ಎಂದು ಕೂಗುತ್ತ ಮಳೆಯನ್ನು ಕರೆಯುತ್ತಿದ್ದ ಗ್ವಾಂಕ್ರ ಕಪ್ಪೆಗಳೆಂಬ ದೊಡ್ಡಗಾತ್ರದ ಕಪ್ಪೆಗಳು ಈಗ ವಿರಳ. ಇನ್ನೊಂದು ಸಂಗತಿಯೆಂದರೆ ಗುಬ್ಬಚ್ಚಿಗಳ ಜೊತೆಗೆ ಈಗೀಗ ಕಾಗೆಗಳೂ ಮಾಯವಾಗಿವೆ! ಮನುಷ್ಯನ ಹಪಹಪಿಯ ಕಾರಣದಿಂದಾಗಿ ನಿಸರ್ಗದ ಆಳದಲ್ಲಿ ನಡೆದ ಬದಲಾವಣೆಯ ಸೂಚನೆಗಳಾಗಿ ನಾವಿದನ್ನು ನೋಡಬೇಕಾಗುತ್ತದೆ; ನಿಸರ್ಗ ಸರಪಣಿಯ ಕೊಂಡಿ ತಪ್ಪಿದೆ!

   ಮುದೂರಿ ಬೈಲಿನಲ್ಲಿ ಈಗ ಮೂರು ಬೆಳೆಗಳಿಗೆ ಬೇಕಾದ ಸಮೃದ್ಧ ನೀರಿಲ್ಲದೆ, ಮಳೆಗಾಲದ ಕಾತಿ ಬೆಳೆ ಮಾತ್ರ ಖಾಯಂ ಆಗಿದೆ. ಸಾಧ್ಯವಾದರೆ ತರಕಾರಿ ಬೆಳೆಸುತ್ತಾರೆ; ಇಲ್ಲವಾದರೆ ಖಾಲಿ ಖಾಲಿ ಅಣಕಿಸುವ ಗದ್ದೆಗಳು! ಗೆಣಸಿನ ಏರಿಗಳು, ಚಂದದ ಹೂಗಳು, ಸುಟ್ಟ ಗೆಣಸಿನ ಘಮ, ಬೆರ್ಚಪ್ಪನ ಜೀವಂತ ಪ್ರತಿಮೆ ಈಗಿಲ್ಲ. ಮೊದಲಿನ ದಟ್ಟ ಕಾಡುಗಳು ಹೇಗೂ ಇಲ್ಲ! ನಮ್ಮೂರಿನ ಈ ಎಲ್ಲ ಬದಲಾದ ಸಂಗತಿಗಳನ್ನು ಕೇಳುತ್ತ, ಆಗಾಗ ಕಾಣುತ್ತ ಇಲ್ಲೊಂದು ಸಣ್ಣ ಪೇಟೆಯಲ್ಲಿ ನಾವು ತಳವೂರಿದ್ದೇವೆ. ನನ್ನೊಳಗಿನ ಹಳ್ಳಿಯನ್ನು ಬದುಕುತ್ತಾ ಪ್ರತಿ ಇರುಳು ಗಾಢ ಕತ್ತಲಲ್ಲಿ ಮುಖವಿಟ್ಟು ದಿಟ್ಟಿಸುತ್ತೇನೆ. ಒಂದು ರೋಮಾಂಚನಕಾರಿ ವಿಷಯವೆಂದರೆ ಈಗೆರಡು ವರ್ಷಗಳ ಹಿಂದೆ ನಾವಿದ್ದ ಮನೆಯ ಸಿಟೌಟಿನಲ್ಲಿ ಕೂತುಕೊಂಡರೆ ರಾತ್ರಿ ಹನ್ನೆರಡರ ಹೊತ್ತಿಗೆ ನರಿಗಳ ಕೂಗು ಕೇಳಿಸುತ್ತಿತ್ತು! ಪ್ರತಿದಿನವೂ ಆ ಅಪ್ಪಟ ಜೀವಕಾವ್ಯಕ್ಕಾಗಿ ನಾವು ಮನೆಯವರೆಲ್ಲ ಕಾತುರದಿಂದ ಕಾಯುತ್ತಿದ್ದೆವು! ಹಾಗೇ ಇತ್ತೀಚೆಗೆ ಲಾಕ್ಡೌನ್ ಅವಧಿಯಲ್ಲಿ, ನಡೆಯುತ್ತಾ ರಾತ್ರಿ ಎಂಟರ ಸಮಯಕ್ಕೆ ಮನೆಯಿಂದ ತುಸು ದೂರ ಹೋಗಿದ್ದಾಗ ಪಕ್ಕದಲ್ಲೇ ನರಿಗಳ ಹಾಡು! ಇದಂತೂ ಮರುಭೂಮಿಯ ಓಯಸಿಸ್‌ನಂತೆ ತಂಪೆರೆಯಿತು. ಇನ್ನೊಮ್ಮೆ ಅದೇ ಜಾಗದಲ್ಲಿ ವಾಹನದಲ್ಲಿ ಬರುತ್ತಿದ್ದಾಗ ಕತ್ತಲಲ್ಲಿ ಹೊಳೆವ ಕಣ್ಣುಗಳನ್ನು ನೋಡಿ ನಾಯೋ, ಬೆಕ್ಕೋ ಅಂದುಕೊಂಡರೆ ಒಂದು ನರಿ!… ಕ್ಷಣಮಾತ್ರದಲ್ಲಿ ಉತ್ಸಾಹದ ಮೂಟೆಯೊಂದನ್ನು ನಮ್ಮೆಡೆಗೆ ಉರುಳಿಸಿ ಕಾಡಿಗೆ ನೆಗೆಯಿತು!

    ನರಿಗಳ ನೆಲೆಯನ್ನು ಸೈಟು ಮನೆಗಳಾಗಿ ಪರಿವರ್ತಿಸಿ ಮನುಷ್ಯ ಕಬಳಿಸಿದ್ದಾನೆ. ಗಣಿಗಾರಿಕೆ, ಕೈಗಾರಿಕೆ ಮುಂತಾದ ಎಗ್ಗಿಲ್ಲದ ‘ಅಭಿವೃದ್ಧಿ’ಯ ಚಟುವಟಿಕೆಗಳು ನರಿಗಳ ಬದುಕನ್ನು ಕಿತ್ತುಕೊಂಡಿವೆ. ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆಯ ವರದಿಯ ಪ್ರಕಾರ ನರಿಗಳು ಅಪಾಯದಂಚಿನಲ್ಲಿವೆ. ಈ ಎಲ್ಲ ಸತ್ಯಸಂಗತಿಗಳ ಕಟುವಾಸ್ತವದ ನಡುವೆಯೇ ಇಂತಹ ಸಣ್ಣಪೇಟೆ ಮನೆಯಲ್ಲಿ ನರಿಗಳ ಸಾಮಿಪ್ಯ ಅನುಭವಿಸುತ್ತಾ ಕನಸಿನ ಲೋಕಕ್ಕೆ ಜಾರುತ್ತೇನೆ….

   ಮನುಷ್ಯ ಬದಲಾಗಲಿ; ಮರ, ಗಿಡ, ಪೊದೆ, ಕಾಡು, ಬಲ್ಲೆಗಳನ್ನು, ಬೆಟ್ಟಗುಡ್ಡಗಳನ್ನು ತಾನು ನಿಂತ ನೆಲವನ್ನು ಉಳಿಸಲಿ. ಮೂಕಪ್ರಾಣಿಗಳು ಈ ನೆಲದ ನೈಜ ಹಕ್ಕುದಾರರೆಂಬ ವಿವೇಕ ಅವನೊಳಗೆ ಮೂಡಲಿ.

********************

ವಿಜಯಶ್ರೀ ಹಾಲಾಡಿ

ಲೇಖಕಿಯ ಪರಿಚಯ:

ಹುಟ್ಟೂರು: ಮುದೂರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಬಳಿ ಗ್ರಾಮ..ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಸೇವೆ ಮಾಡಿದ್ದಾರೆ.  ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ..ಆಸಕ್ತಿಯ ಕ್ಷೇತ್ರಗಳು:ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ,  ಕಾಡಿನ ತಿರುಗಾಟ ಮುಂತಾದವು.ಕೃತಿಗಳು :ಬೀಜ ಹಸಿರಾಗುವ ಗಳಿಗೆ,ಓತಿಕ್ಯಾತ ತಲೆಕುಣ್ಸೆ,ಅಲೆಮಾರಿ ಇರುಳು,  ಪಪ್ಪುನಾಯಿಯ ಪೀಪಿ,  ಸೂರಕ್ಕಿ ಗೇಟ್,  ಜಂಬಿಕೊಳ್ಳಿ ಮತ್ತು ಪುಟ್ಟವಿಜಿ,ಸಾಕು ಬೆಳಕಿನ ಮಾತು , ಪ್ರಕಟಿತ ಕೃತಿಗಳು.ಪಪ್ಪುನಾಯಿಯ ಪೀಪಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.ಜಿ.ಬಿ. ಹೊಂಬಳ ಸಾಹಿತ್ಯ ಪುರಸ್ಕಾರ, ಡಿಸೋಜ- ಎಚ್ಚೆಸ್ವಿ ಪುಟಾಣಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ , ಶಾರದಾ ರಾವ್ ದತ್ತಿನಿಧಿ ಬಹುಮಾನ ಇನ್ನಿತರ ಕೆಲ ಪ್ರಶಸ್ತಿಗಳು ಬಂದಿವೆ. ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ, ಲೇಖನಗಳು ಪ್ರಕಟವಾಗಿವೆ.ಎರಡು ಮಕ್ಕಳ ಕವಿತೆಗಳು ಸಿಬಿಎಸ್ ಸಿ  ಸಿಲೆಬಸ್ ಲ್ಲಿ ಪಠ್ಯವಾಗಿದ್ದವು.ಈಗ ಏಳನೇ ತರಗತಿ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಮಕ್ಕಳ ಪದ್ಯವೊಂದು ಪಠ್ಯವಾಗಿದೆ.

**************************

3 thoughts on “

  1. ತುಂಬಾ ಚೆಂದದ ಬರಹ
    ಮುಂದ್ವರಿಸಿ.ಬಹಳ ಕುತೂಹಲ ಕಾಯ್ದುಕೊಳ್ಳುವ ಬರಹವಾಗುವುದು.

  2. ಸುಂದರ ಬರಹ..ನಮ್ಮ ಬಾಲ್ಯದ ಹಳ್ಳಿ ಮನೆಯ ಆ ದಿನಗಳು ಹಸಿರಾದವು

  3. ಸೊಗಸಾದ ಬರಹ. ಮತ್ತೊಮ್ಮೆ ಬಾಲ್ಯದ ದಿನಗಳನ್ನು ನೆನಪಿಸಿತು.

Leave a Reply

Back To Top