ಪಟ ಗಾಳಿಯಲಿ ಹಾರಿ

ಲಲಿತ ಪ್ರಬಂಧ

ಪಟ ಗಾಳಿಯಲಿ ಹಾರಿ

ಶಾಂತಾ ನಾಗಮಂಗಲ

Person Holding A Kite

ಇಂದು ಆಷಾಢ ಶುದ್ಧ ಏಕಾದಶಿ.  ಪ್ರಥಮ ಏಕಾದಶಿ. ಶ್ರದ್ಧಾಳುಗಳಿಗೆ ಮುದ್ರಾಧಾರಣಕ್ಕೆ ಪವಿತ್ರ ದಿನ ಉಪವಾಸ ಮಾಡಿ ಭಗವಂತನ ಸಾಮೀಪ್ಯ ಸುಖವನ್ನು ಮುಂಗಡ ಕಾಯ್ದಿಟ್ಟುಕೊಳ್ಳಲು ಹೇಳಿ ಮಾಡಿಸಿದ ದಿನ. ಇನ್ನುನಮ್ಮ ಹಳ್ಳಿಗರಿಗೆ  ಉಪಾಸದ ಹಬ್ಬ . ಹೀಗೆ ಇದರ ಆಚರಣೆಗಳು ಹಲವು ಬಗೆ. ಈ ಎಲ್ಲಾ ಧಾರ್ಮಿಕ ತೊಡಕು ತೋಟಿಗಳೆಲ್ಲವನ್ನೂ ಹೊರತು ಪಡಿಸಿದ ಒಂದು ಸ್ವಾರಸ್ಯವೂ ಇದರೊಂದಿಗೆ ತಳುಕು ಹಾಕಿಕೊಂಡಿದೆ.  ಒಂದು ಜನಸಮುದಾಯದ ದೇಸೀ ಆಟದ ಆಚರಣೆಯೂ ಈ ಪ್ರಥಮ ಏಕಾದಶಿಯ ಹಿಂದು ಮುಂದಿನ ದಿನಕ್ಕೆ ತಳುಕು ಹಾಕಿಕೊಂಡಿತ್ತು ಎನ್ನುವುದು ಈಗ ಬಹುಶಃ ನೆನಪು ಮಾತ್ರ.  ಏನು ಆಟ ಅದು ಅಂತೀರಾ ?  ಅದೇ ಪಟ ಹಾರಿಸೋ ಆಟ.   ಆ ಹೆಸರಿಂದಲೇ  ಪ್ರಥಮ ಏಕಾದಶಿಯ ಹಿಂದಿನ ದಿನವಾದ ದಶಮಿಯನ್ನು “ ಪಟದ ಹಬ್ಬ “  “ ಗಾಳಿಪಟದ ಹಬ್ಬ”  ಅಂತಾ ಕರೀತಾ ಇದ್ದರು  ಹಳೇ ಮೈಸೂರಿನ ಸುತ್ತ ಮುತ್ತ.  ಗಂಡು ಮಕ್ಕಳು ಇದ್ದ ಮನೆಗಳಲ್ಲಿ ಅವತ್ತು  ಅವರಿಗೆ ಎಣ್ಣೆ ನೀರು ಹಾಕಿ, ಪಾಯಸದ ಅಡಿಗೆ ಮಾಡ್ತಾ ಇದ್ದರು. ಆಗೆಲ್ಲಾ ಇಷ್ಟೊಂದು ಸ್ತ್ರೀವಾದದ ಕೋಲಾಹಲವಿರಲಿಲ್ಲ.  ಹಾಗಾಗಿ ಅದೇನು ಈ ಗಂಡು ಹೈಕ್ಳೇ ಪಟ ಹಾರಿಸಬೇಕೇ ?  ಹೆಣ್ಣು ಮಕ್ಕಳಿಗೆ ಅವಕಾಶ ಕೊಡದೆ ತುಳಿದಿಟ್ಟಿದ್ದಾರೆ . ಅಂತೆಲ್ಲಾ ಗಲಾಟೆ ಮಾಡೋರು ಇರಲಿಲ್ಲ.  ಅವರವರು ಅವರವರ ಕೆಲಸಗಳನ್ನು ಮಾಡಿಕೊಂಡು ಒಂತರದಲ್ಲಿ ನೆಮ್ಮದಿಯಾಗೇ ಇದ್ರು ಅನ್ಸತ್ತೆ.  ಈಗ ಅಂತವೆಲ್ಲಾ ಕೂಗಿಗೆ ಅವಕಾಶವಿಲ್ಲದಂತೆ ಪಟವೇನೂ, ಯುದ್ಧವಿಮಾನವನ್ನೇ ಹಾರಿಸ್ತಾ ಜಿಗಿ ಜಿಗಿಯುತ ಗಗನದಲಿ ಹಾರೋ ಸಾಧನೆ ಮಾಡಿದ್ದಾರೆ ನಮ್ಮ ಮಹಿಳಾ ಮಣಿಗಳು. ಸಂತೋಷವೇ. ಹೆಮ್ಮೆಯೇ. ವಿಷಯಾಂತರವಾಯ್ತು. ಪರವಾಗಿಲ್ಲ. ತರ್ಕಬದ್ಧವಾಗಿ ಬೆಳೆಸದೇ ಇರೋದು ಪ್ರಬಂಧ ಲೇಖನದ ಒಂದು ಲಕ್ಷಣ ಅಂತಾರಲ್ಲ. ನನ್ನ ಪ್ರಬಂಧ ಲಕ್ಷಣಶುದ್ಧವಾಗಿದೆ ಅಂತಾ ನಾನೇ ನನ್ನ ಬೆನ್ನನ್ನು ತಟ್ಕೋ ಬಹುದು ಬಿಡಿ.

ಹಿಂದೆಲ್ಲಾ ಸ್ಕೂಲುಗಳಿಗೆ ಪಟದ ಹಬ್ಬ, ಉಪಾಸದ ಹಬ್ಬಕ್ಕೆಲ್ಲಾ ರಜ ಇರ್ತಿತ್ತು.  ಊರು ತುಂಬಾ ಪಾಳು, ಬಯಲು ಎಲ್ಲಾ ಬೇಜಾನಾಗಿ ಇರ್ತಿದ್ವು. ಹಾಗಾಗಿ ಹುಡುಗರೆಲ್ಲಾ  ಪಟ ಹಾರಸ್ತಾ ದಿನವೆಲ್ಲಾ ಕಳೀತಾ ಇದ್ದದ್ದು ಸರ್ವೇ ಸಾಮಾನ್ಯವೇ ಆಗಿರ್ತಿತ್ತು.  ನಿಸರ್ಗದಲ್ಲಿ ಬೇರೆ ಬೇರೆ ಋತುಗಳಲ್ಲಿ ಆಗುವ ಬದಲಾವಣೆಗಳನ್ನು ಎಳೆಯರು ತಮ್ಮ ಮೈ ಮನಗಳಿಗೆ ಅನುಭವಕ್ಕೆ ತಂದು ಕೊಳ್ಳಲು ಇಂಥಾ ಹಬ್ಬಗಳನ್ನು ಯೋಜಿಸಿರುತ್ತಿದ್ದರೋ ಏನೋ.   ಅಂತೂ ಪಟದ ಹಬ್ಬವನ್ನು ಬಲು ಜೋರಾಗಿ, ಒಂದು ಧಾರ್ಮಿಕ ವಿಧಿಯೋ ಎನ್ನುವಂತೆ ಆಗಿನ ದಿನಗಳಲ್ಲಿ ಆಚರಿಸುತ್ತಿದ್ದಿದ್ದಂತೂ ನಾವು ಕಂಡ ವಿಷಯವೇ.

ಆಷಾಢದ ಗಾಳಿ ಪಿಸುಗುಡುತ್ತಾ ಬಂದು ಹುಡುಗರ ಕಿವಿಗಳಲ್ಲಿ ನಾನು ಬರುತ್ತಿದ್ದೇನೆ, ನೀವೆಲ್ಲಾ ಬಯಲಿಗೆ ಬನ್ನಿ ಪಟ ಹಾರಿಸಲು  ಎಂದು ಕರೆಯುತ್ತಾ ಊರಿಂದೂರಿಗೆ  ಹೋಗುತ್ತಿತ್ತೋ ಏನೋ. ಅಂತೂ ಆಷಾಢದ ಆರಂಭದಿಂದಲೇ ಊರಲ್ಲಿ ಪಡ್ಡೆ ಹುಡುಗರಿಂದ ಹಿಡಿದು ಚಿಳ್ಳೆಪಿಳ್ಳೆಗಳ ವರೆಗೂ ಪಟದ ಮಾತೇ ಮಾತು. ಅದರ ತಯಾರಿಯ ಕನಸೇ ಕನಸು.

ಯಾವ ಪಟ ಕಟ್ಟಬೇಕು,  ಯಾರು ಯಾವ ಯಾವ ಪಟಗಳನ್ನು ಕಟ್ಟೋದರಲ್ಲಿ ನಿಸ್ಸೀಮರು ಇದೆಲ್ಲಾ ಸ್ಕೂಲಲ್ಲಿ ಪಾಠಕ್ಕಿಂತ ಹೆಚ್ಚು ಚರ್ಚೆ ಆಗೋದು. ಈ ಹುಡುಗರ  ಚರ್ಚೆಗೆ ಆಷಾಢದ ಗಾಳಿ ಸ್ಕೂಲಿನ ಬಾಗಿಲು ಕಿಟಕಿಗಳನ್ನು, ತೆರೆದು ಮುಚ್ಚಿ ಸದ್ದು ಮಾಡಿ ಮಾಡಿ ಕುಮ್ಮಕ್ಕು ಕೊಡುತ್ತಿದ್ದವು.   ಗೂಬೆ ಪಟ, ಎಂಟು ಮೂಲೆ ಜಂಟಿ ಪಟ, ಬೋರಂಟಿ ಪಟ, ಗುಂಡೂರ್ ಚಕ್ರ, ಅರ್ಧಚಂದ್ರದ ಪಟ ಆಳೆತ್ತರದ ಮನುಷ್ಯನ ಪಟ , ಪೆಟ್ಟಿಗೆ ಪಟ -ಹೀಗೆ ಇಷ್ಟೊಂದು ಪಟಗಳ ಪಟ್ಟಿ ತಲೆಯಲ್ಲಿ ಓಡುತ್ತಾ ಇರುವಾಗ ಹುಡುಗರ ಗಮನ ಬೋರ್ಡ್ ಮೇಲೆ ಹೊಂದಿಸಿ ಬರೆಯಿರಿ ಅಂತಾ  ಮೇಷ್ಟ್ರು ಕೊಟ್ಟಿರ್ತಿದ್ದ   ಯಾವ “ಅ”   “ ಬ” ಪಟ್ಟಿಗಳ ಕಡೆ ಗಮನ ಹೋಗತ್ತೆ ನೀವೇಹೇಳಿ.  ಮೇಷ್ಟ್ರೂಗು ಗೊತ್ತು. ಅವರ ಮನೇಲೂ ಇರ್ತಿದ್ವಲ್ಲಾ ಸಾಲು ಸಾಲು  ಸೇರು, ಪಾವು, ಚಟಾಕು ಅಂತಾ ಸಾಲು ಮಕ್ಕಳ ದಂಡು. ಹಾಗಾಗಿ  ಅವರೂ “ ಏನ್ರೋ, ಪಟಾ ಕಟ್ಟೋ ಮಾತೇನ್ರೋ ? ಓದು ಬರಹ ಬಿಟ್ಟು ಪಟ ಕಟ್ತಿರೇನ್ರೋ ?  ಬೆತ್ತ ತೆಗೋಳ್ಲಾ ? ಅಂತಾ ನಾಮ್ಕೆ ವಾಸ್ತೆ ತಮ್ಮ ಕೆಲಸ ಮಾಡಿ ಸುಮ್ಮನಾಗೋರು.

ನಮ್ಮೂರ ಪಡ್ಡೆ ಹುಡುಗರ ಪೈಕಿ ಕೆಲವರು ಅವ್ವಲ್  ಪಟಗಳನ್ನು ಕಟ್ತಾ ಇದ್ರು. ಅಂತೋರ ಪೈಕಿ ನನ್ನ ದೊಡ್ಡ ತಮ್ಮನು ಒಬ್ಬ. ಅವನು ನನ್ನ ಚಿಕ್ಕತಮ್ಮನಿಗೆ ಪಟ ಕಟ್ಟಿಕೊಡದೇ ಸತಾಯಿಸೋನು ಕೂಡ.  ಅವ್ವಲ್ ಪಟ ಅಂದ್ರೆ “ ದಿ ಬೆಸ್ಟ್ “ ಅಂತಾರಲ್ಲ ಆ ಮಟ್ಟದ್ದು.  ಆಕಾರ ಅಳತೆಗಳಂತೂ ಈಗಿನ ಏರೋಡೈನಮಿಕ್ಸ್ ನ ನಿಯಮಗಳಿಗೂ ಸಡ್ಡು ಹೊಡೆಯೋ ಹಾಗೆ  ಪರ್ಫೆಕ್ಟ್.

ಹೀಗೆ ಪಟಕಟ್ಟೋ ಹುರಿಯಾಳುಗಳಲ್ಲಿ ನಮ್ಮ ಚಿಕ್ಕಪ್ಪನೂ ಒಬ್ಬ. ಈ ಚಿಕ್ಕಪ್ಪ ಒಂಥರಾ ಅವಧೂತ ಇದ್ದ ಹಾಗೆ. ಹುಟ್ಟಿದ್ದು ವೈದಿಕ ಬ್ರಾಹ್ಮಣ, ಪುರೋಹಿತರ ಮನೆಯಲ್ಲಾದರೂ, ಚಾಳಿಯಲ್ಲಿ ಅಪಾಪೋಲಿ.  ಯಾವುದನ್ನೆಲ್ಲ ನಮ್ಮ ಧರ್ಮ ಶಾಸ್ತ್ರಗಳು ಪಂಚ ಮಹಾಪಾತಕಗಳು ಎಂದು ಹೇಳಿವೆಯೋ ಅವೆಲ್ಲವನ್ನೂ ಮಾಡಿ, ಅವು ನಿಜವಾಗಿಯೂ ಪಾತಕಗಳೇನಾ ಅಂತಾ ಪರೀಕ್ಷಿಸಿ ಸಡ್ಡು ಹೊಡೀತಾ ಇದ್ದೋನು ಅವನು. ಕಾಶೀಪುರಾಧೀಶ್ವರನ ಹೆಸರಿನ ಇವನು ಅವನ ಹಾಗೇ ಸರ್ವವ್ಯಾಪಿ. ತಿರುಕ. ಯಾವಾಗ ಬರುವ ಎಂದು ಊಹಿಸಲಾಗದ ಸಂಚಾರಿ.  ಆದರೆ ಈ ಪಟದ ಹಬ್ಬಕ್ಕೆ ಮಾತ್ರ ಖಂಡಿತಾ ಪ್ರತ್ಯಕ್ಷ. ಅದಕ್ಕೆ ಕಾರಣ ಅವನಿಗೂ ಇದ್ದ ಈ ಗಾಳಿಪಟ ಕಟ್ಟೋ ಹುಚ್ಚು. ಮಕ್ಕಳನ್ನೆಲ್ಲಾ ತನ್ನ ಸುತ್ತಾ ಕಲೆ ಹಾಕ್ಕೊಂಡು , ಕೈಯಿಂದ ಬೇಕಾದರೆ ನಾಕು ಕಾಸನ್ನೂ ಖರ್ಚು ಮಾಡಿ ಬೋರಂಟಿ, ಗೂಬೆಪಟ- ಹೀಗೆ ಪಟಗಳನ್ನು ಕಟ್ಟಿ ಕೊಟ್ಟು ಅವರೊಂದಿಗೆ ಕೆರೆ ಬಯಲೋ, ಟ್ಯಾಂಕ್ ಫೀಲ್ಡೋ ಎಲ್ಲಿಗೋ ಹೋಗಿ ಪಟ ಹಾರಿಸೋನು.

ಯಾರೆಷ್ಟೇ ಚೆನ್ನಾಗಿ ಪಟ ಕಟ್ಟಿದ್ರೂ ಸೂತ್ರ ಸರಿಯಾಗಿ ಹಾಕ್ದೇ ಇದ್ದರೆ ಪಟ ಹಾರದೇ ಇಡೀ ಯೋಜನೆಯೇ ಹೊಳೇಲಿ ಹುಣಿಸೆ ಹಣ್ಣು ತೊಳೆದಂತೆ ಆಗಿ ಬಿಡ್ತಾ ಇತ್ತು. ಸೂತ್ರ ಸರಿಯಿಲ್ಲದೇ ಹೋದರೆ ಪಟ ಹಾರಿಸುವವರಲ್ಲಿ ಆಸೆ ಹುಟ್ಟಿಸುತ್ತಾ ಸ್ವಲ್ಪ ಸ್ವಲ್ಪವೇ  ಎತ್ತರಕ್ಕೆ ಏರುತ್ತಾ, ಯಾವುದೋ ಒಂದು ಎತ್ತರದಲ್ಲಿ ಗಾಳಿಯ ಒತ್ತಡ ತಡೆಯದೆಯೋ ಏನೋ ಗೋತಾ ಹೊಡೀತಾ, ಸ್ವರ್ಗಕ್ಕೆ ಹೋದವರು ಇಲ್ಲಿ ಭೂಲೋಕದಲ್ಲಿ ಸಂಪಾದಿಸಿದ ಪುಣ್ಯದ ಗೋಲಕವನ್ನೆಲ್ಲಾ ಖಾಲಿ ಮಾಡ್ಕೊಂಡ ಮೇಲೆ “ ಕ್ಷೀಣೇ ಪುಣ್ಯೇ ಮರ್ತ್ಯ ಲೋಕಂ ವಿಶಂತಿ “ ಅನ್ನುವ ಹಾಗೆ ಧರಾಶಾಯಿಯಾಗಿ ಬಿಡುತ್ತಿದ್ದವು.   ಹಾಗಾಗಿ, ಯಾರು ಎಷ್ಟೇ ಚೆನ್ನಾಗಿ ಪಟಕಟ್ಟಿದ್ದರೂ ಸೂತ್ರ ಸರಿಯಾಗಿ ಹಾಕೋರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು.  ಈ ಪಟೋ ಕಟ್ಟೋ ಕಲೆಯಲ್ಲಿ ಅಂಬೆಗಾಲಿಡಿರ್ತಾ ಇದ್ದ ಹುಡುಗರು ಈ “ ಸೂತ್ರದಾರ “ ಪ್ರಭುಗಳ ಹಿಂದೆ ಮುಂದೆ, ಸೊಂಟದಿಂದ ಜಾರೋ ಚಡ್ಡಿನಾ ಮೇಲಕ್ಕೆಳ್ಕೋತಾ,  ಬಹುಪರಾಕು ಹೇಳಿಕೊಂಡು ಓಡಾಡಿ ಸಮಯ ಕಾದು ಕೆಲಸ ಮಾಡಿಸಿಕೊಳ್ತಾ ಇದ್ವು. ಅದಕ್ಕೆ ಸೀಬೆಕಾಯಿ, ಕೊಬ್ಬರಿಬೆಲ್ಲ, ಕಡ್ಲೆ ಮಿಠಾಯಿ , ಗೋಲಿ, ಬುಗುರಿ ಚಾಟಿ, ಹೀಗೆ ಇನ್ನು ಏನೇನೋ  ಟಾಮ್ ಸಾಯರ್ ತರಹ ಲಂಚ ರುಷುವತ್ತುಗಳು, ವಶೀಲಿಬಾಜಿಗಳೂ ನಡೀತಾ ಇದ್ವು ಅನ್ನಿ

ಪಟ ಕಟ್ಟೋಕೆ ಬೇಕಾದ ಸಾಮಗ್ರಿಗಳು ತುಂಬಾ ಸರಳ. ಖರ್ಚಿಲ್ಲದವು. ಕೆಂಪು, ಮಿಠಾಯಿ ರೋಸು, ಪರಮಾನ್ ಚೆಟ್ಟಿ, ಹಳದಿ, ಗಿಣಿಹಸಿರು  ಹೀಗೆ ಬಣ್ಣ ಬಣ್ಣದ ಜಲ್ಲಿ ಕಾಗದಕ್ಕೊಂದಕ್ಕೇ ನಾಕು ಕಾಸು ಖರ್ಚಾಗ್ತಾ ಇದ್ದದ್ದು. ಅದು ಬಿಟ್ಟರೆ ಮಟ್ಟೆಕಡ್ಡಿ, ಅಂದರೆ ತೆಂಗಿನ ಸೋಗೆ ಸೀಳಿ ಮಾಡ್ತಾರಲ್ಲ ಆ ಪರಕೆ ಕಡ್ಡಿಗಳು.  ಇವು ಪಟದ ಅಸ್ಥಿಪಂಜರದ ನಿರ್ಮಾಣಕ್ಕೆ ಬೇಕೇ ಬೇಕು. ಸಾಮಾನ್ಯ ಗಾತ್ರದ ಪಟಕ್ಕೆ  ಈ ಪರಕೆ ಕಡ್ಡಿಗಳೇ ಸಾಕಾದರೆ, ಆಳೆತ್ತರದ ಪಟಗಳಿಗೆ ಬೆತ್ತ, ಗಳುಗಳ ಬಲವಾದ ಮೂಳೆಹಂದರ ಬೇಕಾಗ್ತಿತ್ತು.

ಇನ್ನು ಪಟ ಅಂಟಿಸಕ್ಕೆ ಗೋಂದು. ಆಗೆಲ್ಲಾ ಹೀಗೆ ಫೆವಿಗಮ್, ಗಿವಿಗಮ್ಮುಗಳನ್ನು ಯಾರೂ ಕಂಡಿರಲಿಲ್ಲ. ಮೈದಾಹಿಟ್ಟಿನ ಪೇಸ್ಟ್, ಅದೇ ಪೋಸ್ಟ್ ಆಫೀಸ್ ದೂ- ತುಂಬಾ ಸಾಫಿಸ್ಟಿಕೇಟೆಡ್ ಗಮ್ ಅನ್ನಸಿಕೊಂಡಿತ್ತು. ಪಟದ ಹಬ್ಬದ ಹಿಂದೆ ಮುಂದೆ ಮನೆಯಲ್ಲಿ ಅಕ್ಕ ತಂಗಿಯರಿಗೆ ದುಂಬಾಲು ಬಿದ್ದು ಮಾಡಿಸಿಟ್ಟುಕೊಂಡು, ಮನೆಯೆಲ್ಲಾ ಗಬ್ಬು ನಾರಿ.. ಆ ಮೇಲೆ ಅದನ್ನು ಎಸೆದು ಮುಕ್ತಿಕಾಣೋರು. ಎಲ್ಲಕ್ಕಿಂತ ಸುಲಭವಾಗಿ ಅನ್ನವೇ ಒಳ್ಳೆಯ ಪೇಸ್ಟ್ ಕೆಲಸ ಮಾಡೋದು. ಆದ್ರೆ ಮಡಿ, ಮುಸುರೆ ನೋಡೋರ ಮನೇಲಿ ಇದು ದುರ್ಲಭ ವಸ್ತು. ನಮ್ಮೆದುರೇ, ನಮ್ಮೊಳಗೇ ಇದ್ದರೂ ಸಿಗದ ಪರಮಾತ್ಮ ವಸ್ತುವಿನಂತೆ ಇದು. ಎಷ್ಟಾದರೂ “ ಅನ್ನ ಬ್ರಹ್ಮ” ವಲ್ಲವೇ ? ಆ ಅನ್ನಕ್ಕೆಅದಕ್ಕೆ ಸರ್ಪಗಾವಲು. ಹಾಗಿದ್ದರೂ, ರಂಗೋಲಿ ಕೆಳಗೆ ತೂರೋ ತುಂಟರು ಎಷ್ಟೋ ಬಾರಿ ಅಮ್ಮನ ಕಣ್ಣು ತಪ್ಪಿಸಿ ಅನ್ನಚೌರ್ಯ ಮಾಡಿ ಪಟಕ್ಕೆ ಉಣಿಸುತ್ತಿದ್ದದ್ದುಂಟು. ಮುದ್ದೆ ತಿರುವೋ ಮನೆಗಳಾದರೆ ಮುದ್ದೆಯೂ ಗೋಂದಿನ ಕೆಲಸಕ್ಕೆ ಆಗ್ತಾ ಇತ್ತು ಅನ್ನಿ.

ಇನ್ನೊಂದು ನೈಸರ್ಗಿಕವಾದ ಗೋಂದು ಇತ್ತು. ಅದು ಚಳ್ಳೆಹಣ್ಣು. ಆ ಚಳ್ಳೇಹಣ್ಣಿನ ಗಿಡಕ್ಕೆ ಅದು ಹೇಗೆ  ಗೊತ್ತಾಗ್ತಾ ಇತ್ತೋ ಈ ಪಟದ ಹಬ್ಬದ ದಿನ, ವಾರ, ನಕ್ಷತ್ರವೆಲ್ಲಾ. ಅದ್ಯಾವ ಪಂಚಾಂಗ ನೋಡಿ ಗುರುತು ಮಾಡಿಟ್ಟುಕೊಂಡಿರ್ತಿತ್ತೋ ಗೊತ್ತಿಲ್ಲ.  ಅದೇ ಸಮಯಕ್ಕೆ ಸರಿಯಾಗಿ ಬೇಲಿ ತುಂಬಾ ಚಳ್ಳೆಹಣ್ಣು ಬಿಟ್ಟಿರೋದು. ಚಳ್ಳೆಹಣ್ಣಿನ ಆ ಸಿಹಿ ರುಚಿಗೋ ಏನೋ ಕೆಂಜಗವೂ  ಜೊತೇಲೇ ಇರ್ತಾ ಇದ್ವು. ಹುಡುಗರು ಹಣ್ಣನ್ನು ಕೀಳೋಕೆ ಹೋದರೆ ಇವರಿಗೆ ಕೆಂಜಗದ ಉರಿಯ ಚುಂಬನ ಸಿಕ್ಕಿ , ಇವು ಕೈಕಾಲು ಒದರಿ, ನೃತ್ಯ ಮಾಡಿ, ಅಂತೂ ಕಿತ್ತು, ಚಡ್ಡಿ ಜೋಬಲ್ಲಿ ತುಂಬಿ ತಂದು ಪಟ ಕಟ್ಟೋರು. ಮರುದಿನ ಚಡ್ಡಿ ಜೋಬೇ ಅಂಟಿಕೊಂಡು ಅಲ್ಲಿ ಜೋಬಿತ್ತಾ ಅನ್ನೋ ಹಾಗೆ ಆಗಿರ್ತಿತ್ತು ಅನ್ನೊದು ಬೇರೆ ವಿಷಯ.

ಪಟ ಹಾರಬೇಕಾದರೆ ಮತ್ತೊಂದು ಮುಖ್ಯವಾದ ಸಾಮಾನು ಬೇಕಾಗ್ತಿತ್ತು. ಬಾಲಂಗೋಚಿ. ಇದಂತೂ ಪಟಕ್ಕೆ ಬಲು ವಿಧೇಯ ಸೇವಕನಿದ್ದಂತೆ. ಪಟ ಆಕಾಶದಲ್ಲಿ ವಾಯುವಿಹಾರ ಮಾಡ್ತಾ ಇರಬೇಕಾದರೆ, ಅದು ಕೆಳಗೆ ಬೀಳದಂತೆ, ತುಯ್ಯದಂತೆ ಸಮತೋಲನ ಕಾಪಾಡೋ ಬಂಟ ಈ ಬಾಲಂಗೋಚಿ. ಪಟಪ್ರಭುವಿನ ಹಿಂದೆ ಹಿಂದೆ ನಡೆಯೋ ಅಂಗ. ಪಟದ ಸಪ್ತಾಂಗಗಳಲ್ಲಿ ಒಂದು ಅನ್ನೋಣ ಬೇಕಾದರೆ.  ಈ ಬಾಲಂಗೋಚಿಯ ಅತಿವಿಧೇಯ ನಡವಳಿಕೆಯಿಂದಾಗಿಯೆ ಯಾರಾದರೂ ಅಧಿಕಾರಸ್ಥರನ್ನು ಅಂಟಿಕೊಂಡೇ ಇರೋರಿಗೆ “ ಬಾಲ ಬಡುಕರು “ ಎಂಬ ಕೀಟಲೆಯ ಉಪನಾಮವಾಗಿ, ತಿರಸ್ಕಾರವಾಚಕವಾಗಿ ಬಳಕೆಯಾಗೋದು.

ಪಟದ ಬಾಲಂಗೋಚಿಗೆ ಮಾತ್ರ ಅಮ್ಮನ ಹಳೇ ಸೀರೆ ಅಂಚು, ಅಪ್ಪನ ಪಂಚೆಯ ಸೀಳುಗಳು ಇವೆಲ್ಲಾ ಬಲಿಯಾಗ್ತಾ ಇದ್ವು. ಬಾಲಂಗೋಚಿನಾ ಹೊಂದಿಸೋ ಆತುರದಲ್ಲಿ  ನಿತ್ಯ ಉಡೋ ಸೀರೇನೇ ಹರಿಯೂ ಭೂಪರೂ ಇದ್ದರು ಅನ್ನಿ. ಅದಕ್ಕೆ ಜಾಣ ಅಮ್ಮ ಅಜ್ಜೀರು, ಪಟದ ಹಬ್ಬ ಬರೋ ಮೊದಲೇ ಒಂದೆರಡು ಹಳೆ ಸೀರೆ, ಪಂಚೆನಾ ಬೇರೆ ಎತ್ತಿಡ್ತಾ ಇದ್ದದ್ದು ಉಂಟು.

ಪಟವನ್ನು ಹಾರಿಸಿ, ಇಳಿಸಿ ಮನೆಗೆ ತಂದರೆ ಪಟಕ್ಕೆ ಒಂದು ಮಟ್ಟದ ಸ್ವಾಗತ ಸಿಕ್ದಿದರೂ ಈ ಬಾಲಂಗೋಚಿಗೆ ಮಾತ್ರ ವಾಚಾಮಗೋಚರ ಬೈಗಳಗಳು. ಪಟವನ್ನು ಹುಡುಗರು ಜತನವಾಗಿ, ಹರಿಯದಂತೆ, ಮುರಿಯದಂತೆ ತರ್ತಾ ಇದ್ರು. ಆದರೆ ಬಾಲಂಗೋಚಿ ಕಡೆಗೆ ಗಮನವೇ ಇಲ್ಲ. ಅದು ರಸ್ತೆಯ ಧೂಳು, ಹೊಲಸಿನ ಮೇಲೆಲ್ಲಾ ಹೊರಳಾಡಿ, ಮನೆಮುಂದೆ ಆಗೆಲ್ಲಾ ಇರ್ತಾ ಇದ್ದ ತೆರೆದ ಮೋರಿಯ ವೈತರಣಿಯಲ್ಲಿ ಸ್ನಾನ ಮಾಡಿ ಶುಚಿರ್ಭೂತವಾಗಿ ಒಳಕ್ಕೆ ಬರ್ತಿದ್ದರಿಂದ ಈ ಮಂಗಳಾರತಿ, ಘಂಟಾನಾದದ ಸ್ವಾಗತ ಅವಕ್ಕೆ ನಿಶ್ಚಯ.

ಪಟದ ಹುರಿಯಿಲ್ಲದಿದ್ದರೆ ಪಟ ಹಾರುವುದೆಂತು ? ದುಡ್ಡು ಕೊಟ್ಟೇ  ಪಟದ ದಾರ ತರಬೇಕಾಗಿತ್ತು. ಈ ಪಟದ ಹಬ್ಬದ ಆಸುಪಾಸಿನಲ್ಲಿ ಈ ಪಟಕ್ಕೆ ಬೇಕಾದ ಎಲ್ಲವೂ ಅಂಗಡಿ ಬೀದಿಗಳಲ್ಲಿ ಧಾರಾಳವಾಗಿ ಸಿಗೋ ಹಾಗೆ  ವರ್ತಕರು ನೋಡ್ಕೋಳ್ಳೋರು ಕೂಡ. ಪಟ ಕಟ್ಟೋದು ಬೇಡ, ಯಾಕೆ ಆ ರಗಳೆ, ರೇಜಿಗೆ ಅನ್ನೋರಿಗೆ ನಮ್ಮೂರ ಸಾಬರ, ಶೆಟ್ಟರ ಅಂಗಡಿಗಳಲ್ಲಿ ಬಣ್ಣ ಬಣ್ಣದ ಪಟಗಳು ನೇತಾಡ್ತಾ ಕೈ ಬೀಸಿ ಕರೆಯೋವು.

ಪಟದ ದಾರದಿಂದ ಪಟದ ಹುರಿಯ ವರೆಗೂ ಬೇರೆ ಬೇರೆ ಗಾತ್ರ ಮತ್ತು ಶಕ್ತಿಯವು ಸಿಗ್ತಾ ಇದ್ವು .ಇದನ್ನು ಮಂಜಿ ಹುರಿ, ಮಾಂಜ ದಾರ ಅಂತಾನೂ ಕರೀಯೋರು.  ಬರಿ ಪಟ ಹಾರಸೋದಕ್ಕಷ್ಟೇ ಈ ದಾರದ ಕೆಲಸ ಅನ್ಕೋ ಬೇಡಿ. ಬಯಲಲ್ಲಿ ಎಲ್ಲರೂ ಅಲ್ಲಲ್ಲಿ  ನಿಂತು ಪಟ ಹಾರಿಸೋವಾಗ ಬೇಡದೋರ ಪಟಕ್ಕೆ ಜಂಟಿ ಹಾಕ್ಸಿ, ಅವರ ಪಟದ ದಾರ ಕುಯ್ದು ಬೀಳ್ಸೋಕ್ಕೂ ಈ ಹುರಿ ಆಯುಧವಾಗ್ತಾ ಇತ್ತು. ದೊಡ್ಡ ದೊಡ್ಡ ರಾಜ ಮಹಾರಾಜರುಗಳೂ ಈ ಆಗ್ದೋರ ಪಟದ ದಾರ ಕುಯ್ಸೋ ಕೆಲಸ ಆಳಿಟ್ಟು ಮಾಡಿಸ್ತಾ ಇದ್ರು ಅಂತಾ ಇತಿಹಾಸ ಹೇಳತ್ತೆ. ನಮ್ಮ ಮೈಸೂರು ಸಂಸ್ಥಾನದಲ್ಲೇ ಅರಸಿನವರ ಎರಡು ಬಣದ ನಡುವೆ ನಡೆದ ಪೈಪೋಟಿಯಲ್ಲಿ.  ಪಟದ ಸೂತ್ರ ಕಡಿಸಿ ಸೋಲ್ಸಕ್ಕೆ ಒಂದು ಬಣ ಮಾಂಜಿ ದಾರಕ್ಕೆ ಗಾಜಿನ ಪುಡಿ ಉಜ್ಜಿಸಿತ್ತು ಅಂತಾ ಗೊತ್ತಾಯ್ತಂತೆ. ಇನ್ನೊಂದು ಬಣದ ಅರಸಿನವರು ತಮಗೆ ಆದ ಸೋಲಿಗೆ ಬೇಜಾರು ಮಾಡ್ಕೊಂಡಾಗ, ಪಟ ಹಾರ್ಸಕ್ಕೆ ಅಂತಾ ಅವರು ನೇಮಕ ಮಾಡ್ಕೊಂಡಿದ್ದ ಪಾಕಡಾ ಸೇವಕ , ಗಾಜನ್ನು ಕುಯ್ಯೋದು ವಜ್ರವಲ್ಲವೇ, ದಣಿಗಳು  ಒಂದಷ್ಟು ವಜ್ರಗಳನ್ನು ಅಪ್ಪಣೆ ಮಾಡಿದ್ರೆ… ಅಂತಾ  ನಾಜೂಕಯ್ಯನ ತರ ಬಿನ್ನಾಣ ಮಾಡಿ ವಜ್ರಗಳನ್ನು ಲಪಟಾಯಿಸಿದ ಅಂತಾ ಮೈಸೂರು ವಾಸುದೇವಾಚಾರ್ಯರ ಅರಮನೆಯ ಅನುಭವಗಳನ್ನು ಹೇಳಿರುವ ಪುಸ್ತಕದಲ್ಲಿ ಬರತ್ತೆ.  ಹೀಗೆ ಈ ಪಟದ ದಾರದ ಮಹಿಮೆ ಅಪಾರ.

ಪಟಕ್ಕೆ ಬೇಕಾದ ಸಾಮಗ್ರಿಗಳಲ್ಲೆಲ್ಲಾ ಹೆಚ್ಚು ಖರ್ಚಿನ ಬಾಬ್ತೆಂದರೆ ಈ ಮಾಂಜದಾರವೇ. ಆದ್ದರಿಂದಲೇ  ಕೆಲವೊಮ್ಮೆ ಬಾನಿಗೇರಿದ ಪಟ ಅಲ್ಲೇ ನಿಂತು ನಿದ್ದೆ ಮಾಡದೆ, ತುಯ್ದು , ತಲೆನಡುಕ ಹುಟ್ಟಿ, ಕೆಳಕ್ಕೆ ಬಿದ್ದು ಆಷಾಢದ ಗಾಳಿ ಅದನ್ನು ದೂರಕ್ಕೆ ಹೊಡೆದು ಕೊಂಡು ಹೋಗುತ್ತಿರುವಾಗ, ಪಟ ಹೋದರೂ ಪರವಾಗಿಲ್ಲ, ದಾರ ಉಳಿಸಿಕೊಳ್ಳೋಣ ಅಂತಾ ಪಟದ ಹಿಂದೆ ಪಟ ಪಟ ಅಂತಾ ಹುಡುಗರ ದಂಡು ಓಡ್ತಾ ಇತ್ತು.

ಕೆಲವು ದಶಕಗಳ ಹಿಂದೆ ಆಷಾಢಮಾಸದಲ್ಲಿ ತಲೆಯೆತ್ತಿದರೆ “ ಜಿಗಿ ಜಿಗಿಯುತ   ಪಟ ಗಾಳಿಯಲಿ ತೇಲಿ ಬಾನಲ್ಲಿ ಹಾರಾಡುತ್ತಿದ್ದ ಪಟಗಳು ಕಾಣುತ್ತಿದ್ದವು ನಮ್ಮ ಹಳೇ ಮೈಸೂರು ಪ್ರದೇಶದ ಊರು, ಕೇರಿ, ಹಳ್ಳಿ ಹಾಡಿಗಳಲ್ಲಿ. ಈಗ ಅವೆಲ್ಲಾ ಮರೆಯಾಗಿವೆ.

ಪಟದ ಹಬ್ಬದ  ಆಚರಣೆಯೇನೋ ಹೆಚ್ಚು ಕಮ್ಮಿ ಹೋದಂತೆಯೇ. ಆದರೆ ನನ್ನ ಪರಿಚಯದವರೊಬ್ಬರು ತಮ್ಮ  ಒಬ್ಬರು ಶೆಟ್ಟರು ಗೆಳೆಯರು ಮೊನ್ನೆ ಮೊನ್ನೆ ತಮ್ಮ ಮಕ್ಕಳಿಗೆ ಪಟದ ಹಬ್ಬದ ನೆನಪಾಗಿ ಪಟದ ಆಕಾರದ ಚಿನ್ನದ ಪದಕ ಕೊಡಿಸಿದ್ದಾರೆ -ಎಂದು ಹೇಳಿದ ಒಂದು ವಿಷಯ  ನನಗೆ ಅಚ್ಚರಿವುಂಟು ಮಾಡಿತು. ಅಚ್ಚರಿ ಪಟದ ಆಕಾರದ ಪದಕಕ್ಕಲ್ಲ. ಈಗೇನು ಹಾವನ್ನೇ ಕರ್ಣ ಕುಂಡಲವಾಗಿ ಹಾಕ್ಕೋಳೋ ಕಾಲ. ಬಗೆ ಬಗೆಯ ಆಕೃತಿಗಳ ಒಡವೆಗಳನ್ನು ಧರಿಸೋ ಕಾಲ. ಆಚ್ಚರಿಯಾಗಿದ್ದು “ ಪಟದ  ಹಬ್ಬವನ್ನು ಹೀಗೆ ಪಟಹಾರಿಸದೆಯೇ, ಕುತ್ತಿಗೆಗೆ ನೇತು ಹಾಕಿಕೊಂಡು ಸಾಂಕೇತಿಕವಾಗಿ ಆಚರಿಸೋರಿದ್ದಾರಲ್ಲ ಅಂತಾ.  ಆಮೇಲೆ ಸ್ವಲ್ಪ ಕೆದಕಿದಾಗ ಗೊತ್ತಾಗಿದ್ದು – ವೈಶ್ಯರಲ್ಲಿ ಮದುವೆಯಾದ ಮೊದಲ ವರ್ಷದಲ್ಲಿ ಬರುವ ಎಲ್ಲಾ ಹಬ್ಬಗಳಿಗೂ ಅಳಿಯನಿಗೆ ಮಗಳಿಗೆ ಉಡುಗೊರೆಗಳನ್ನೂ  ಕೊಡಲೇ ಬೇಕಾದ ಪದ್ಧತಿಯಿದ್ದು, ಈ ಪಟದ ಹಬ್ಬಕ್ಕೆ ಅಳಿಯನಿಗೆ ಚಿನ್ನದ ಪಟ ( ಅದೆಷ್ಟು ದೊಡ್ಡದೋ, ಯಾವ ಆಕಾರದ್ದೋ ಗೊತ್ತಿಲ್ಲ ) ಮತ್ತು ಬೆಳ್ಳಿಯ ಸರಿಗೆಯ ನೂಲಿನ ಉಂಡೆಯನ್ನು ಉಡುಗೊರೆಯಾಗಿ ಕೊಡುವ ಪದ್ದತಿಯಿತ್ತು ಎಂಬುದು. ಯಾವತ್ತೂ ಹಾರಿಸಲಾಗದ ಇದು    ಎಂಥಾ ಉಡುಗೊರೆ ? ಬರೀ ವ್ಯವಹಾರವಷ್ಟೇ. ಗೋಡೆಗಳನ್ನು ಕೆಡವಿ ಹಾರೋದೇ ಪ್ರಧಾನ ಗುಣವಾದ ಪಟವನ್ನು ಕುತ್ತಿಗೆಯಲ್ಲೋ, ಲಾಕರ್ ನಲ್ಲೋ ಬಂಧಿಸೋದು ಅಂದ್ರೆ ? ಇದು ಪಟಕ್ಕೆ ಮಾಡಿದ ಅವಮಾನ ಅನ್ನಬೇಕಷ್ಟೇ.

ಇನ್ನು ರಶಿಯನ್ನರು, ತಾಲಿಬಾನರು ಸರ್ವನಾಶನ ಮಾಡುವ ಮೊದಲು ಅಫ್ಗನ್ನರ ರಾಷ್ಟ್ರೀಯ ಕ್ರೀಡೆ ಎಂದರೆ ಪಟ ಹಾರಿಸೋದು ಮತ್ತು  ಸೂತ್ರ ಕತ್ತರಿಸಿ ಕೆಳಕ್ಕೆ ಬೀಳಿಸಿದ ಪಟವನ್ನು ಕರಾರುವಾಕ್ಕಾಗಿ ಅದು ಬೀಳುವ ಜಾಗಕ್ಕೆ ಹೋಗಿ ಅದನ್ನು ಮೊದಲು ಎತ್ತಿಕೊಂಡವರು ವಿಜೇತರಾಗಿ, ಅವರಿಗೆ ಪ್ರಾಚೀನ ಒಲಂಪಿಕ್ ವೀರರಿಗೆ ಸಲ್ಲುತ್ತಿದ್ದ ಮರ್ಯಾದೆ ಸಿಗುತ್ತಿತ್ತಂತೆ.

ನಮ್ಮ ಚಲನ ಚಿತ್ರ ರಂಗವೂ ಪಟ ಹಾರಿಸೋದನ್ನು ಕೆಲವು ಕಡೆ ಬಳಸಿಕೊಂಡಿದೆ. “ ಜಿಗಿ ಜಿಗಿಯುತ ನಲಿ ಗಗನದ ಬಯಲಲಿ ಪಟಗಾಳಿಯಲಿ ತೇಲಿ— “ ಜೇನುಗೂಡು” ಸಿನಿಮಾದ ಈ ಚಂದದ ಪ್ರಸಿದ್ಧ ಗೀತೆ ಪಟವನ್ನು ಹಾರಿಸುತ್ತಲೇ ಹಾಡಿರುವುದು . ಇತ್ತೀಚಿನ “ ಆಪ್ತಮಿತ್ರ” ಸಿನಿಮಾವೂ ಪಟಹಾರಿಸೋ ದೃಶ್ಯವೊಂದನ್ನು ಅಳವಡಿಸಿಕೊಂಡಿದೆ. ಇವಲ್ಲದೇ ಅನೇಕ ಹಿಂದೀ ಚಲನ ಚಿತ್ರಗಳಲ್ಲೂ ಪಟದ ಹಾಡುಗಳಿವೆ.  ಸಿನಿಮಾಗಳಲ್ಲೂ ಕಂಡು ಬರುವ ಪಟದ  ಈ ದೃಶ್ಯಗಳು ಉಲ್ಲಾಸದ, ಉತ್ಸಾಹದ ಸಂದರ್ಭದ್ದಾಗಿಯೇ ಇರೋದು ವಿಶೇಷ . ಪಟ ಹಾರಿಸೋದು ಅಂದರೆ ಚಿಂತೆ ತೊರೆದು ಹಗುರಾಗುತ್ತಾ ಪಟದೊಂದಿಗೆ ಮಾನಸಿಕವಾಗಿ ಮೇಲೇರೋದು. ಮನೆಯ ಚೌಕಟ್ಟನ್ನು ತೊರೆದು ಬಯಲಿಗೆ ಬಂದು ಬೀಸುವ ಆಷಾಢದ ಗಾಳಿಗೆ ಮೈಯನೊಡ್ಡಿ, ಪಟವನ್ನು ಒಂದು ತುದಿಯಲ್ಲಿ ಗಾಳಿಯ ದಿಕ್ಕಿಗೆ ಹಿಡಿದು ನಿಂತು,  ವಾಯುದೇವನ ಅನುಜ್ಞೆಗೆ ಕಾದು, ಅವನು  ಹೂಂ, ಇನ್ನು ಬಿಡಿ, ನಾನು ನೋಡಿಕೊಳ್ಳುವೆ ಎಂದು ಅಪ್ಪಣೆ ಕೊಡಿಸಿದಾಗ ಕೈ ಬಿಟ್ಟು ನಾವು ಸೃಷ್ಟಿಸಿದ ಕಂದನನ್ನು ಮಾತರಿಶ್ವನ ಕೈಗೆ ಒಪ್ಪಿಸೋದು. ಅವನ ಆಟ ನೋಡೋದು. ಆನಂದಿಸೋದು. ಒಟ್ಟಿನಲ್ಲಿ ಪಟದ ಹಬ್ಬ ಉಲ್ಲಾಸ, ಉತ್ಸಾಹಗಳ ಪ್ರತೀಕವಾದ  ಜನಪದರ, ಸಮುದಾಯದ, ಜಾತಿ ಮತಗಳನ್ನು ಮೀರಿದ ಒಂದು ಆಚರಣೆಯಾಗಿತ್ತು. ನಗರ ಜೀವನದ ವ್ಯಸ್ತತೆ, ಬಿಡುಬೀಸಾದ ಜಾಗದ ಸಂಕೋಚ, ಕ್ರೀಡೆಗಳ ಕುರಿತಾದ ಬದಲಾದ ಪರಿಕಲ್ಪನೆ ಈಗ ಈ ಎಲ್ಲಾ ಸೊಗಡನ್ನೂ ದೂರಮಾಡಿದೆ ಎಂದೇ ಹೇಳ ಬೇಕು.  ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದು ಜೀವದ ಲಕ್ಷಣ. ಹಾಗೆಯೇ ನನ್ನ ನೆನಪೂ ಪಟದ ಹಬ್ಬದ ನೆವದಲ್ಲಿ ಗತಕಾಲದ ಪಟಗಳ ಪ್ರಪಂಚದಲ್ಲೊಂದು ಸುತ್ತುಹಾಕುವಕಡೆಗೆ ತುಡಿದಿದ್ದು ನಿಜ.

 ( ನೆನ್ನೆ ದಿನ ಅಂದರೆ ಆಷಾಢ ಶುದ್ಧ ದಶಮಿ ಪಟದ ಹಬ್ಬ. ಅದನ್ನು ನೆನೆಯುತ್ತಾ ಒಂದಷ್ಟು ಸ್ಮೃತಿಲೋಕದಲ್ಲಿ ನನ್ನ ಮತಿ ಸಂಚರಿಸಿದ್ದರ ಫಲ ಈ ಅಕ್ಷರರೂಪ )

****************************

5 thoughts on “ಪಟ ಗಾಳಿಯಲಿ ಹಾರಿ

  1. ಸೊಗಸಾದ‌ ಲವಲವಿಕೆಯಿಂದ ಕೂಡಿದ ಲೇಖನ.

  2. ಬಹಳ ಚನ್ನಾಗಿದೆ ಮೇಡಂ. ಮನಸ್ದಿನ ಭಾವನೆಗಳಿಗೆ ಅಕ್ಷರರೂಪ ಕೊಡುವುದು ನಿಮಗೆ ಸಿದ್ಧಿಸಿದೆ. ಈಗಿನ ಮಕ್ಕಳು ಪಟ ಹಾರಿಸಬೇಕೆಂದರೂ ಜಾಗವೂ ಇಲ್ಲ. ಟೆರೇಸ್ ನ ಮೇಲೆ ಹಾರಿಸಿದರೆ ಕ್ಷಣದಲ್ಲೇ ಅವನ್ನು ತಡೆಯಲು ಕಾದಿರುತ್ತವೆ, ಪಕ್ಕದ ಮನೆಗಳ ಸೋಲಾರ್ ಟ್ಯಾಂಕ್, ದಾರಿಯ ಟೆಲಿಪೋನ್ ಕಂಬಗಳು, ಕೇಬಲ್ ವೈರುಗಳು.ಹಿರಿಯರು ತಮ್ಮ ಕಾಲದ ನೆನಪುಗಳನ್ನು ಮಕ್ಕಳಿಗೆ ಹೇಳಿ ಅವರಲ್ಲಿ ಆಸೆ ಹುಟ್ಟಿಸಿ ತೀರಿಸಲಾಗದೆ ಬಯ್ದು ಸುಮ್ಮನಾಗುತ್ತಾರೆ.

  3. ಅದ್ಭುತವಾದ ಲೇಖನ, ಒಂದು ಪೀಳಿಗೆಯ ಮನರಂಜನೆಯ ಕಥೆಯನ್ನೇ ಕೇಳಿದಂತಾಯಿತು.

  4. ಈಗ ಬರೀ “ಪಟ ಪಟ ಗಾಳಿಪಟ” ಅನ್ನೋ ಆಪ್ತ ಮಿತ್ರ ಹಾಡು ಕೇಳುವಂತಾಗಿದೆ…

  5. ಈಗ ಬರೀ”ಪಟ ಪಟ ಗಾಳಿಪಟ” ಅನ್ನೋ ಆಪ್ತ ಮಿತ್ರ ಚಿತ್ರದ ಕೇಳುವಂತಾಗಿದೆ…

Leave a Reply

Back To Top