ಅಂಕಣ ಬರಹ
ತೊರೆಯ ಹರಿವು
ಆಸೆ, ಹೇಳುವಾಸೆ..
ಆಸೆ ಹೇಳುವಾಸೆ….’ ಎನ್ನುವ ಸಾಲು ಎಲ್ಲರ ನಾಲಗೆಯ ಮೇಲೂ ಬೇರೆ ಬೇರೆ ಬಗೆಯಲ್ಲಿ ನಲಿದಾಡಿರುತ್ತೆ. ‘ಚಿನ್ನ ಚಿನ್ನ ಆಸೆ.. ಮುದ್ದು ಮುದ್ದು ಆಸೆ..’ ಎಂದು ಎದೆ ಬಡಿತದೊಂದಿಗೆ ವೈಯಕ್ತಿಕ ಬಯಕೆಗಳೆಂಬ ಆಸೆಯೂ ಮಿದುವಾಗಿಯೂ ಲಘುವಾಗಿಯೂ ಕೆಲವೊಮ್ಮೆ ವಿಪರೀತ ವೇಗೋತ್ಕರ್ಷವಾಗಿಯೂ ಬಡಿದುಕೊಂಡಿರುತ್ತದೆ. ಹೀಗೆ ಆಸೆಯು ಬಡಿದಾಟಕ್ಕೆ ಮೂಲವಾಗಿಯೋ; ಬಡಿದಾಟವು ಆಸೆಗಾಗಿಯೋ ನಡೆದು ಒಟ್ಟಿನಲ್ಲಿ ಒಂದಕ್ಕೊಂದು ಥಳಕು ಹಾಕಿಕೊಂಡಿರುತ್ತವೆ! ಆದರೆ ಆಸೆ ಮಾಡಿದ್ದು ಈಡೇರದಿದ್ದಾಗ, ಅದೇ ಆಸೆಯು ದುಃಖಕ್ಕೆ ಮೂಲವಾಗಿದ್ದನ್ನು ಹಲವಾರು ಸಾದೃಶ್ಯಗಳ ಮೂಲಕ ಕಂಡು; ಅದನ್ನೇ ಧ್ಯಾನದ ಜಿಜ್ಞಾಸೆಯಿಂದ ಗ್ರಹಿಸಿ ಬುದ್ಧ ‘ಆಸೆಯೇ ದುಃಖಕ್ಕೆ ಮೂಲ!’ ಎಂಬ ಸಾರ್ವತ್ರಿಕ ವ್ಯಾಖ್ಯಾನ ನೀಡಿದರು.
‘ಅತಿ ಆಸೆ ಗತಿ ಕೆಡಿಸ್ತು’ ಎನ್ನುವ ಮಾತು ‘ಆಸೆಯೇ ದುಃಖಕ್ಕೆ ಮೂಲ’ಕ್ಕೆ ಪೂರಕ ಸಾಲುಗಳಂತಿವೆ ಎನಿಸಿದರೂ ಅತಿ ಆಸೆಗೂ ಬರಿ ಆಸೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಆಸೆ ದುಃಖಕ್ಕೆ ಮೂಲ ಹೇಗಾಗುವುದು? ಆಸೆ ಇಲ್ಲದೆ ಅರಮನೆ ಕಟ್ಟಲಾದೀತೆ? ಅರಮನೆ ಎಂದರೆ ಅರಮನೆಯೇ ಆಗಬೇಕಿಲ್ಲ. ಅದೊಂದು ನಿದರ್ಶನಕ್ಕಷ್ಟೆ.. ಆಸೆಗೂ ದುರಾಸೆಗೂ ನಡುವೆ ಒಂದು ತೆಳ್ಳನೆಯ ಪರದೆ ಇದೆ. ದುರಾಸೆ ದುಃಖಕ್ಕೆ ದೂಡಬಹುದೇ ಹೊರತು ಆಸೆಯಲ್ಲ.
ಆಸೆ ಯಾರಿಗಿರೋಲ್ಲ ಹೇಳಿ… ಹೆಚ್ಚೇನು ಪ್ರಾಪಂಚಿಕ ಅರಿವಿರದ ಮಗುವಿಗೂ ಅಮ್ಮನ ಮಡಿಲು, ಮೊಲೆಹಾಲು, ಅಪ್ಪನ ಹೆಗಲು, ಗೆಳೆಯರ ಒಡನಾಟಗಳ ಮೂಲಭೂತ ಆಸೆ ಇರುವುದಿಲ್ಲವೇ! ಮಗುವಿನ ಆಸೆಗಳ ಬಗ್ಗೆ ನಡೆದಿರುವ ಸಂಶೋಧನೆಗಳಿಗೆ ಲೆಕ್ಕವಿದೆಯೇ? ಎಷ್ಟೊಂದು ಬಗೆ ಬಣ್ಣಬಣ್ಣದ ಆಟಿಕೆಗಳು, ಹಲವು ವರ್ಣ ಸಂಯೋಜನೆಯ ಚಿತ್ತಾಪಹಾರಿ ಸಂಗೀತದ ಆಡಿಯೋಗಳು, ವೈವಿಧ್ಯಮಯ ವೀಡಿಯೋಗಳು… ಹೀಗೆ ಮಾರುಕಟ್ಟೆಯ ಸಿಂಹಪಾಲು ಮಕ್ಕಳ ಆಸೆಯನ್ನೇ ಬಂಡವಾಳ ಮಾಡಿಕೊಂಡು ಬಿಟ್ಟಿವೆ.
‘ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎನ್ನುತ್ತಾ ಆಸೆಗೆ ಮಿತಿ ಹೇರುವವರಿಗೆ ಕಾಲು ಚಾಚುವಷ್ಟೇ ಹಾಸಿಗೆ ಹೊಲಿಸಿಕೊಳ್ತೀವಿ ಎಂದು ಎದಿರು ಹೇಳುವ ಜಾಣರಿಗೆ ಬರಿಯ ಹುಂಬತನ ಇರೋದಿಲ್ಲ. ಅವರ ಕಣ್ಮುಂದೆ ಅಪಾರ ಸಾಧ್ಯತೆಗಳು ತೆರೆದುಕೊಂಡಿರುತ್ತವೆ. ಛಲ ಬಿಡದ ತ್ರಿವಿಕ್ರಮರಂತೆ ಅವರು ಆಸೆಯ ಬೆನ್ನೇರಿ ಅಸಾಧ್ಯವೆನ್ನುವುದನ್ನೂ ಸಾಧಿಸಿ ಸಾಧನೆಯ ಶಿಖರ ನಿರ್ಮಿಸಿರುತ್ತಾರೆ. ದಿನಂಪ್ರತಿ ಕಾಣುತ್ತಿದ್ದ ವಿಖ್ಯಾತ ಹಿಮಪರ್ವತವನ್ನು ಒಂದಲ್ಲಾ ಒಂದು ದಿನ ಏರುವ ಆಸೆ ಮಾಡದಿದ್ದರೆ ತೇನ್ಸಿಂಗ್ ಇತಿಹಾಸದ ಪುಟಗಳಲ್ಲಿ ಅಜರಾಮರ ಆಗುತ್ತಿರಲಿಲ್ಲ. ಹೀಗೆ ಆಸೆಯ ಬೆನ್ನಟ್ಟಿ ಹೋದ ಹಲವಾರು ಮಂದಿ ಬರಿಗೈಲಿ ಬರಲಿಲ್ಲ. ಕೀರ್ತಿ, ಯಶಸ್ಸು ಗಳಿಸಿಕೊಂಡೇ ಬಂದಿದ್ದಾರೆ. ಹಾಗಾಗಿಯೇ ಆಸೆಯ ಇನ್ನೊಂದು ಮುಖ ನಿರಾಸೆಯಲ್ಲ, ಕನಸು..
ಸೂರು-ವಾಹನ-ಸಂಸಾರ- ಇತ್ಯಾದಿ ಮೂಲಭೂತ ಅಗತ್ಯಗಳನ್ನೇ ಆಸೆ ಎಂದು ನಮ್ಮಂತಹ ಸಾಮಾನ್ಯರು ಎನ್ನುವುದಾದರೆ, ರಿಚರ್ಡ್ ಬ್ರಾನ್ಸನ್ ಆಕಾಶಕ್ಕೇ ಏಣಿ ಹಾಕಿ ಬಾಹ್ಯಾಕಾಶ ಪ್ರವಾಸ ಹೋಗಿಬಂದುದನ್ನು ಆಸೆಯ ಯಾವ ನೆಲೆಗೆ ಆರೋಪಿಸೋಣ? ತನ್ನ ಯಶಸ್ವೀ ಕಾರ್ಯದಿಂದ ಆಕರ್ಷಿತರಾಗಿ ಬರುವ ಅತಿಶ್ರೀಮಂತ ಪ್ರವಾಸಿಗರಿಂದ ವರ್ಜಿನ್ ಕಂಪನಿ ಲಾಭ ಕುದುರಿಸಲಿ ಎನ್ನುವುದು ಬ್ರಾನ್ಸನ್ನನ ಆಸೆಯೇ ಆಗಿರುವುದಿಲ್ಲವೇ?!
‘ಅಕ್ಕಿ ಮೇಲಾಸೆ ನೆಂಟ್ರ ಮೇಲೆ ಪ್ರೀತಿ’ ಅನ್ನೋದು ಜಿಪುಣತನಕ್ಕೂ ಆಸೆಬುರಕುತನಕ್ಕೂ ಇರುವ ನಂಟಿನ ಬಗ್ಗೆ ಹೇಳುತ್ತೆ. ಎಂಜಲು ಕೈಲೂ ಕಾಗೆ ಓಡಿಸಲಾರದವರಿಗೆ ಅಗುಳಿನ ಮೇಲೆ ಎಷ್ಟು ಆಸೆ ಇರಬಹುದು! ಅವರೇನಾದ್ರೂ ಶಾಶ್ವತ ಅಮರತ್ವ ಪಡೆದವರಾಗಿದ್ದರೆ, ಭೂಮಿ ಮೇಲೆ ರಾಮಾಯಣ ಮಹಾಭಾರತ ನಿರಂತರವಾಗಿ ನಡೆದಿರ್ತಿತ್ತು..
ದಿನಾ ಬಂಗಾರದ ಮೊಟ್ಟೆ ಇಡುವ ಕೋಳಿಯನ್ನು ಕಾಪಾಡಿಕೊಳ್ಳದೆ, ಹೊಟ್ಟೆ ಬಗೆದು ತಮ್ಮ ದುರಾಸೆಯ ಹಳ್ಳಕ್ಕೆ ತಾವೇ ಬೀಳುವವರಿಗೆ ಯಾವ ನೀತಿಕತೆಗಳೂ ವಿವೇಕ ಹೇಳಲಾರವು. ಆಸೆ ಪಟ್ಟರೂ ಕಷ್ಟ ಪಡಲಾರದೆ ನಾಕಾರು ಪ್ರಯತ್ನಕ್ಕೇ ಕೈಚೆಲ್ಲುವ ನರಿ ದಕ್ಕಿಸಿಕೊಳ್ಳಲಾರದ ದ್ರಾಕ್ಷಿಯನ್ನು ಹುಳಿಯೆಂದು ಹಳಿದುದರಲ್ಲಿ ಆಸೆಯ ವೈಫಲ್ಯವಿದೆ. ಕೆಲವರ ಈಡೇರಲಾರದ ಆಸೆ ಕೆಲವೊಮ್ಮೆ ಅವರ ಮನಸ್ಸು ಕೆರಳಿಸಿ ಅನರ್ಥ ಮಾಡಿಸಬಹುದು. ವೃಥಾ ಮತ್ತೊಂದು ವಿಚಾರ/ವ್ಯಕ್ತಿಯ ಮೇಲೆ ಆರೋಪ ಸೃಷ್ಟಿಸಬಹುದು, ಇಲ್ಲದ ಅನಾಹುತಕ್ಕೆ ಎಡೆ ಮಾಡಿಕೊಡಬಹುದು. ಸಲ್ಲದ ಜಗಳ ತಂದಿಡಬಹುದು..
ಆರು ಕೊಟ್ರೆ ಅತ್ತೆ ಕಡೆ ಮೂರು ಕೊಟ್ರೆ ಸೊಸೆ ಕಡೆ ಎನ್ನುವ ಮಾತು ಕೂಡ ಆಸೆಯನ್ನು ಕುರಿತು ಹೇಳುತ್ತೆ. ನಮ್ಮಂಮ್ಮ ಆಸೆಗಳೇ ನಮ್ಮ ನಿಲುವನ್ನು ನಿರ್ಧರಿಸುತ್ತವೆ. ಕೆಲವೊಮ್ಮೆ ಆಸೆಗಳೇ ಮೋಸವನ್ನೂ ಮಾಡಬಹುದು. ಅದಕ್ಕೇ ಆಸೆಯನ್ನು ಬಿಸಿಲ್ಗುದುರೆಗೆ ಹೋಲಿಸುವುದು. ‘ಆಸೆ ಎಂಬ ಬಿಸಿಲುಕುದುರೆ ಏಕೆ ಏರುವೆ..! ಮರಳು ಗಾಡಿನಲ್ಲಿ ಒಂಟಿ ಪಯಣ ಸಾಧ್ಯವೇ…!?’
ಆಸೆಗೊಂದು ಮಿತಿ ಇರಲಿ ಅನ್ನೊದು ಹಿರಿಯರ ಹಿತ ನುಡಿ. ಮಿತಿ ಮೀರಿದರೆ ಆಸೆ-ಆಪತ್ತಾಗುತ್ತದೆ. ‘ಮೈದಾಸ’ನೆಂಬ ರಾಜ ಕೂಡ ತನ್ನ ಅತಿ ಆಸೆಯಿಂದ ಮುಟ್ಟಿದ್ದೆಲ್ಲಾ ಬಂಗಾರ ಮಾಡಿಕೊಳ್ಳುವ ಭರದಲ್ಲಿ ತನ್ನ ಮಗುವನ್ನೇ ಚಿನ್ನದ ಪುತ್ಥಳಿ ಮಾಡಿಕೊಳ್ಳಲಿಲ್ಲವೇ? ಸೀತೆ ಮೇಲಿನ ಆಸೆ ರಾವಣನ ಲಂಕೆಯನ್ನು ಬೂದಿ ಮಾಡಲಿಲ್ಲವೇ! ದೃತರಾಷ್ಟ್ರನ ಶತಕುಮಾರರು ರಾಜ್ಯದಾಹದಲ್ಲಿ ಹತಭಾಗ್ಯರಾಗಲಿಲ್ಲವೇ!
ಹೀಗೆ ಆಸೆ ಮಾಡುವ ಅನಾಹುತಗಳು ಒಂದೇ ಎರಡೇ? ಸಾಯೋ ಮುಂಚೆ ಮಕ್ಕಳ-ಮೊಮ್ಮಕ್ಕಳ ಮದುವೆ ನೋಡ್ಬೇಕು ಅನ್ನುವ ಹಿರಿಯರ ಕ್ಷುಲ್ಲಕ ಆಸೆ ಎಷ್ಟೋ ಮಕ್ಕಳ ಭವಿಷ್ಯವನ್ನೇ ಬದಲಿಸಿರುತ್ತೆ. ಬೇರೆಯವರ ಪ್ರಾಣಕ್ಕೆ ಕಂಟಕ ತರುವಂತಹ ಆಸೆಗಳನ್ನು ಆ ಹೆಸರಿನಿಂದ ಕರೆಯೋದು ಹೇಗೆ? ಅದು ಆಸೆಯಲ್ಲ, ಪಾಶ.
ಆಸೆ ತಣಿಯುವಂತಹದ್ದೂ ಇರಬಹುದು, ಅಥವಾ ತಣಿಸುವಂತಹದ್ದೂ ಇರಬಹುದು. ಅಂತಹ ಆಸೆಗಳನ್ನು ಈಡೇರಿಸಿಕೊಳ್ಳುವುದರಲ್ಲಿ ಅರ್ಥವಿದೆ. ಆದರೆ, ಯಾವ ಆಸೆಯನ್ನು ಶತಪ್ರಯತ್ನಗಳ ಅನಂತರವೂ ಪೂರೈಸಲಾಗುವುದಿಲ್ಲವೋ ಅದನ್ನು ಕೈಬಿಡುವುದೇ ಜಾಣತನ. ಏಕೆಂದರೆ, ‘ಆಸೆಗೆ ಅಂತ್ಯವಿಲ್ಲ, ಪಾಶಕ್ಕೆ ಕಡೆಯಿಲ್ಲ’ ಎನ್ನುವ ಗಾದೆ ಮಾತೇ ಇದೆ. ಹಾಗಾಗಿ ಆ ಆಶಾಪಿಶಾಚಿ ಬೆನ್ನು ಹತ್ತಿರ ಬರದಂತೆ ಸ್ವಯಂ ನಿಗ್ರಹ ಸಾಧಿಸಿಕೊಳ್ಳುವುದು ನಿಜವಾದ ಜ್ಞಾನ.
ಆಹಾರದ ಮೇಲಿನ ಆಸೆ ಆರೋಗ್ಯ ಕೆಡಿಸುವಷ್ಟಿರಬಾರದು. ಸಿಹಿ ಇಷ್ಟವೆಂದೋ, ಬಾಯಿ ರುಚಿ ತಣಿಸಲೆಂದೋ ಆಸೆ ಪಟ್ಟರೆ ಅನಾರೋಗ್ಯಕ್ಕೆ ಆಹ್ವಾನ ಕೊಟ್ಟ ಹಾಗೆ. ಪಥ್ಯ/ ಸಂಯಮ ಎನ್ನುವುದು ಆಸೆಗೆ ವಿರುದ್ಧವಾಗಿ ಆಗಾಗ್ಗೆ ಬಳಸಬೇಕಾದ ಪದವೇ ಆಗಿವೆ.
ಪ್ರವಾಸ ಹೋಗುವುದು, ಚಾರಣ ಮಾಡುವುದು, ಓದುವುದು, ಹೊಸತನ್ನು ಕಲಿಯುವುದು… ಇತ್ಯಾದಿ ವೈಯಕ್ತಿಕ ಆಸೆಗಳು ಆತ್ಮೋನ್ನತಿಗಾಗಿ ಹಾಗೂ ಬೇಸರ ನೀಗಿಸುವ ಹವ್ಯಾಸಗಳಾಗಿದ್ದರೆ ತೊಂದರೆ ಇಲ್ಲ. ಹಾಗೆಯೇ ಸಮಷ್ಟಿಯ ನೆಲೆಯಲ್ಲಿ ಒಂದಷ್ಟು ಕೆಲಸಗಳನ್ನು ಮಾಡುವ ಆಸೆಯೂ ಸಹ ಅಭಿವೃದ್ಧಿಗೆ ಪೂರಕವಾಗಿರುವುದರಿಂದ ಅಡ್ಡಿಯಿಲ್ಲ. ಆಸೆಯು ವಿದ್ರೋಹಕ್ಕೆ, ಮೋಸಕ್ಕೆ, ಕೊಲೆ- ಸುಲಿಗೆಗೆ ಎಡೆಮಾಡಿಕೊಡುವುದಾದರೆ ಅದನ್ನು ನಿವಾರಿಸುವುದೇ ಉತ್ತಮ.
ಕಳ್ಳನ ಆಸೆಯು ಪೊಲೀಸ್ ವ್ಯವಸ್ಥೆಯನ್ನೇ ಜಾರಿಗೆ ತಂದಿರುವ ಹಾಗೆ, ಉನ್ನತ ಆಸೆಗಳು ಉತ್ತಮ ವ್ಯವಸ್ಥೆಯನ್ನು ಸಮಾಜದಲ್ಲಿ ಜಾರಿಗೆ ತಂದಿವೆ. ಆಸೆಯನ್ನು ಕನಸು ಎಂದು ಕರೆದರೂ ಹಲವರಿಗೆ ನನಸಾಗದ ಕನಸುಗಳೇ ಹೆಚ್ಚಿರುತ್ತವೆ. ಕೈಗೂಡಲಾರದ ಕನ್ನಡಿಯೊಳಗಿನ ಗಂಟಿನಂಥ ಆಸೆಗಳನ್ನು ಕೈ ಬಿಟ್ಟು ಸಾರ್ಥಕ ಎನಿಸುವ ಬಯಕೆಗಳ ಬೆನ್ನಟ್ಟಿ ಹೋಗಿ ಸಫಲತೆ ಪಡೆಯುವುದು ಕ್ಷೇಮ ಎನ್ನುವುದು ಅನುಭವಿಗಳ ಕಿವಿಮಾತು. ‘ಬಾನಿಗೆ ಎಲ್ಲೆ ಇಲ್ಲ ಆಸೆಗೆ ಮಿತಿ ಇಲ್ಲ’ ಅಂದುಕೊಂಡರೂ ಒಂದೊಂದೇ ಆಸೆಗಳನ್ನು ಪೂರೈಸಿಕೊಳ್ಳುತ್ತಾ ಹೋಗುವುದು ಜಾಣತನ. ಏಕಕಾಲಕ್ಕೆ ಹಲವು ಆಸೆಗಳ ಈಡೇರಿಕೆಗೆ ಮುಂದಾದರೆ ಯಾವುದೇ ಒಂದನ್ನೂ ಸರಿಯಾಗಿ ದಡ ಹತ್ತಿಸದಿರಬಹುದು. ಆದ್ದರಿಂದ ಆಸೆ ಪಟ್ಟ ಮೇಲೆ ದುಡುಕದೇ ಅದರ ಈಡೇರಿಕೆಯ ಸಾಧ್ಯತೆ-ಭಾಧ್ಯತೆಗಳ ಪರಿಶೀಲನೆ ಮಾಡಿ ಮುನ್ನಡಿ ಇಡುವುದು ಹೊಸ ಸಾಧನೆಗೆ ಮುನ್ನುಡಿ ಬರೆಯುವಂತಾಗಬಹುದು.
ಅಮ್ಮನ ಹೊಟ್ಟೆ ಒಳಗಿರುವ ಭ್ರೂಣಕ್ಕೇ ಬಯಕೆ (ಬಸುರಿ ಬಯಕೆ) ಆಗುವುದಾದರೆ, ಹುಟ್ಟು- ಬದುಕು ಕಂಡು ಬಂದ ಜೀವಕ್ಕೆ ಬಯಕೆ ಏಕಿರಬಾರದು? ಮಕ್ಕಳು ಯುವಕರಿಗೆ ಇರುವಂತೆಯೇ ವೃದ್ಧರಿಗೂ ಆಸೆಗಳಿರುವುದು ಸಹಜ. ಎಲ್ಲರ ಆಸೆಗಳು ಸಮಾಜಕ್ಕೆ- ವ್ಯಕ್ತಿಯ ವೈಯಕ್ತಿಕ ನೆಲೆಯ ಏಳಿಗೆಗೆ ಪೂರಕವಾಗಿರಬೇಕು.
ರಾಜಮಹಾರಾಜರ ಸಾಮ್ರಾಜ್ಯ ವಿಸ್ತರಣೆಯ ಮೋಹ-ದಾಹವು ಇತಿಹಾಸವನ್ನು ಸೃಷ್ಟಿಸಿದರೆ, ವಿಜ್ಞಾನಿಗಳ ಆವಿಷ್ಕಾರದ ಆಸೆಗಳು ಜಗತ್ತಿಗೆ ಅಚ್ಚರಿಗಳನ್ನೇ ನೀಡಿವೆ.
ತಿನ್ನುವುದು- ಕುಡಿಯುವುದು- ತಿರುಗುವುದು ಹೀಗೆ ಪೂರ್ವಾಲೋಚನೆ ಇಲ್ಲದೆ ಮಾಡುವ ಕೆಲಸಗಳು ಆಸೆ ಎನಿಸುವುದಿಲ್ಲ. ತಿನ್ನುವದೇ ಆದರೆ ಯಾವ ರುಚಿ- ಯಾವ ಪದಾರ್ಥ ಇಷ್ಟ? ಕುಡಿಯುವದಾದರೆ ಯಾವ ಪಾನೀಯ ಇರಬೇಕು? ತಿರುಗಾಟವಾದರೆ, ಎಲ್ಲಿಗೆ ಪ್ರಯಾಣಿಸಬೇಕು? ಹೀಗೆ ಯೋಜಿತ ಬಯಕೆಗಳು ಆಸೆಯಾಗುವುದಾದರೆ ಅದಕ್ಕೊಂದು ಅರ್ಥವಿರುತ್ತದೆ.
ಆಗೀಗ ಸೆಲೆಬ್ರಿಟಿಗಳು ‘ಬಕೆಟ್ ಲಿಸ್ಟ್’ ಎನ್ನುವ ಪಟ್ಟಿಯನ್ನು ಬಿಡುಗಡೆ ಮಾಡುತ್ತಿರುತ್ತಾರೆ. ಇಚ್ಛೆಯ ಪಟ್ಟಿಯನ್ನೇ ‘ಬಕೆಟ್ ಲಿಸ್ಟ್’ ಎನ್ನುವುದು. ಹೀಗೆ ಬಯಕೆಯ ಬಕೆಟ್ ಹಿಡಿಯೋದು ಜನಪ್ರಿಯರಿಗೆ ಮಾತ್ರ ಸೀಮಿತವೇನಲ್ಲ. ಸಾಮಾನ್ಯರೂ ಸಹ ಅಸಾಮಾನ್ಯ ಬಯಕೆಗಳ ಕುರಿತು ಟಿಪ್ಪಣಿ ಮಾಡಬಹುದು. ಅದರ ಈಡೇರಿಕೆಗೆ ಪ್ರಯತ್ನಿಸಬಹುದು. ಈಡೇರಿದ ಆಸೆಯು ಸಂತೃಪ್ತಿ ತಂದರೆ ಈಡೇರದ್ದು ನಿರಾಸೆಗೊಳಿಸಬಹುದು. ಆದರೆ ಪಟ್ಟಿಯಲ್ಲಿ ಹಲವಾರು ವಿಚಾರಗಳಿರುವಾಗ ಒಂದು ಈಡೇರದಿದ್ದರೆ ಮತ್ತೊಂದರತ್ತ ಮುಖ ಮಾಡುವುದರಿಂದ ಮನಸ್ಸಿನ ಖೇದವನ್ನು ಕಡಿಮೆ ಮಾಡಿಕೊಳ್ಳಬಹುದು.
ಘನಘೋರ ತಪಸ್ಸು ಮಾಡುವ ತಪಸ್ವಿಗಳೂ ಯಾವುದೋ ಆಸೆ ಹಿಂದೆ ಬಿದ್ದಿರುವಂತೆ, ಯಾವ ಆಸೆ ಇಲ್ಲದ ಅಲಕ್ ನಿರಂಜನರೂ ಇರುತ್ತಾರೆ. ಚಕ್ರಾಧಿಪತಿಯಾದ ಭರತನಿಗೆ ಮಹಾತ್ಯಾಗಿ ಬಾಹುಬಲಿ ಇಲ್ಲವೇ..?! ಚೈನಾ ಮಹಾಗೋಡೆ, ಈಜಿಪ್ಟಿನ ಪಿರಮಿಡ್ಡು, ತಾಜಮಹಲು, ಅತಿಸ್ಪೀಡಿನ ರೈಲು, ಬಾಹ್ಯಾಕಾಶಯಾನ…. ಇವೆಲ್ಲವೂ ಆಸೆಗಳ ಪ್ರತಿಫಲಗಳೇ.
ಮನುಷ್ಯರಿಗೆ ಆಸೆಗಳಿರುವಂತೆ ಕೀಟ-ಪ್ರಾಣಿ-ಪಕ್ಷಿಗಳಿಗೂ ಆಸೆಗಳಿರುವದಿಲ್ಲವೇ? ಇಲ್ಲದಿದ್ದರೆ, ಮೈಲುಗಟ್ಟಲೆ ಹಕ್ಕಿಗಳೇಕೆ ಹಾರಿ ಬರುತ್ತಿದ್ದವು! ಚೆಂದದ ಗೂಡು ಕಟ್ಟುತ್ತಿದ್ದವು! ಸಂಗಾತಿ ಆಕರ್ಷಿಸಲು ಕಸರತ್ತು ಮಾಡುತ್ತಿದ್ದವು! ಚೆಂದದ ಬಲೆ ಹೆಣೆಯುತ್ತಿದ್ದವು! ಪ್ರಾಣಿಗಳೇಕೆ ಪ್ರಾಣಾಂತಕ ಬೇಟೆಯಾಡುತ್ತಿದ್ದವು! ವಿಶಾಲ ಜಗತ್ತಿನಲ್ಲಿ ತಮ್ಮ ಸರಹದ್ದು ಗುರುತಿಸಿಕೊಳ್ಳುತ್ತಿದ್ದವು? ಇಲ್ಲಿಯೂ ಎಲ್ಲೋ ಒಂದು ಕಡೆ ಆಸೆ ಕೆಲಸ ಮಾಡಿರುತ್ತದೆ ಅಲ್ಲವೇ?
ಆಸೆಗೆ ಕನ್ನಡದಲ್ಲಿ ಎಷ್ಟೊಂದು ಸಮಾನಾರ್ಥಕ ಪದಗಳು ಇರಬಹುದು! ಇಷ್ಟ, ಬಯಕೆ, ತೀವ್ರತೆ, ಹಂಬಲ, ಇಚ್ಛೆ, ಅಭೀಪ್ಸೆ, ಕಾಂಕ್ಷೆ, ಆಕಾಂಕ್ಷೆ, ಬವ್ಕೆ, ಮನೋರಥ, ವಾಂಛೆ, ಈಪ್ಸಿತ, ಕಾಮ… ಇತ್ಯಾದಿ ಪದಗಳನ್ನು ‘ಆಸೆ’ ಪದಕ್ಕೆ ಸಮೀಪದ ಅರ್ಥವಾಗಿ ಬಳಸಲಾಗುತ್ತದೆ. ದೊಡ್ಡ ಆಸೆಗಳ ಹೊರತಾಗಿ ಹಲವು ಪುಟ್ಟ ಇಷ್ಟಗಳಿರುತ್ತವೆ. ಈ ದಿನ ಗಣಿತದ ಟೀಚರ್ ಬಾರದಿರಲಿ, ಹೋಂವರ್ಕ್ ಕೇಳದಿರಲಿ, ಡ್ರಿಲ್ ಮಾಡಿಸದಿರಲಿ, ಇತ್ಯಾದಿಯಿಂದ ಹಿಡಿದು, ಇನ್ನೊಂದು ಅರ್ಧ ತಾಸು ಮಲಗಬೇಕು. ಬಿಸಿ ದೋಸೆ ಜೊತೆ ಬಿಸಿಬಿಸಿ ಕಾಫಿ/ಚಹಾ ಬೇಕು. ಗಾಜಿನ ಬಾಕ್ಸಿನೊಳಗಿದ್ದ ಗೊಂಬೆಗೆ ಹಾಕಿದ್ದ ಸೀರೆ ಬೇಕು, ಒಂದು ಬಡ್ತಿ, ಎರಡು ಇನ್ಕ್ರಿಮೆಂಟ್, ಸ್ವಂತ ಮನೆ, ಹೇಳಿದಂತೆ ಕೇಳುವ ಸಂಗಾತಿ-ಮಕ್ಕಳು, ಒಳ್ಳೆಯ ನೆರೆಮನೆಯವರ… ಓಹ್! ಮರೆತಿದ್ದೆ, ಕವಿಗಳಿಗೆ ಕಿವಿಗಳ ಕೊರತೆ ಕಾಡದಿರಲಿ ಎನ್ನುವ ಆಸೆ ಜಗತ್ತಿನ ಅತಿ ಬೇಡಿಕೆಯ ಆಸೆ ಇದ್ದರೂ ಇರಬಹುದು. ಒಟ್ಟಿನಲ್ಲಿ ಆಸೆಗಳ ಈ ಪಟ್ಟಿಗೆ ಅಂತ್ಯವಿರುವುದೇ ಇಲ್ಲ. ಹನುಮಂತನ ಬಾಲದ ಹಾಗೆ ಆಸೆ ಸಾಲನ್ನು ಬೆಳೆಸುತ್ತಾ ಹೋಗಬಹುದು.
ಇಷ್ಟು ಬರೆದ ಮೇಲೆ, ಈ ಲೇಖನ ಓದಿ ಮಂದಿ ಮೆಚ್ಚುಗೆಯ ನಾಕು ಮಾತು ಆಡಲಿ ಎನ್ನುವುದು ಆಸೆಯೋ ನಿರೀಕ್ಷೆಯೋ ಹೇಗೆ ನಿರ್ಧರಿಸುವುದು?!
***************************
ವಸುಂಧರಾ ಕದಲೂರು.
೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ಆಸೆಪಟ್ಟು ಓದುವ ಬರಹ ಇದಾಗಿದೆ. ಆಸೆಗಳ ವಿವಿಧ ಆಯಾಮಗಳ ಸೊಗಸಾದ. ಅಭಿವ್ಯಕ್ತಿ
ಬಹಳ ಧನ್ಯವಾದಗಳು ಲೇಖನ ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ…