ಸಂದರ್ಶನ

sangeetharaviraj

ಸಂಗಾತಿ ಸಂದರ್ಶನದಲ್ಲಿ ಕೊಡಗಿನ ಕವಯಿತ್ರಿ ಸಂಗೀತಾ ರವಿರಾಜ್ ಅವರನ್ನು ಮಾತಾಡಿಸಿದ್ದಾರೆ ಕವಿ,ಲೇಖಕ, ಪತ್ರಕರ್ತ ನಾಗರಾಜ್ ಹರಪನಹಳ್ಳಿ

.ಸಂಗೀತಾ ರವಿರಾಜ್

ಕವಯಿತ್ರಿ ಪರಿಚಯ :

ಎಂ. ಎ.( ಅರ್ಥಶಾಸ್ತ್ರ)   ಬಿ. ಇಡಿ. ಪದವೀಧರೆಯಾದ ಶ್ರೀಮತಿ. ಸಂಗೀತ ರವಿರಾಜ್ ಸದ್ಗ್ ಹೃಣಿ. ಕೊಡಗಿನ ತಪ್ಪಲಿನ‌   ಹಳ್ಳಿ ಚೆಂಬುವಿನಲ್ಲಿ ಕೃಷಿಕ ಮಹಿಳೆಯಾಗಿಯು, ಜೊತೆಗೆ ಬರವಣಿಗೆಯ ಕೃಷಿಯಲ್ಲು ತೊಡಗಿಸಿಕೊಂಡಿರುವ ಪ್ರತಿಭಾವಂತೆ.‌ಕ್ರಿಯಾಶೀಲತೆಯಿಂದ ಮತ್ತು ಸೃಜನಶೀಲತೆಯಿಂದ ಬರೆಯುವ ಇವರು ಸದಾ ಹೊಸತನದ ಬರಹದೊಂದಿಗೆ ನಮಗೆ ಎದುರಾಗುತ್ತಿರುತ್ತಾರೆ.  ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ನಿರಂತರ ಪ್ರಕಟಗೊಳ್ಳುತ್ತಿರುತ್ತವೆ.

             ಶಿಕ್ಷಕ ದಂಪತಿಗಳಾದ ಗೂನಡ್ಕದ ಎಸ್ .ಪಿ. ನಿರ್ಮಲ ಚಂದ್ರ ಮತ್ತು  ಶಿಕ್ಷಕಿ ಶ್ರೀಮತಿ. ಯಶೋಧರವರವರ ಪುತ್ರಿ.  ಚಿಕ್ಕಂದಿನಿಂದಲೂ ಹೆಚ್ಚಿನ ಓದುವಿಕೆಗೆ ಅವಕಾಶ ಸಿಕ್ಕಿದ್ದರಿಂದ ಈಗ ಬರೆಯುವ ತುಡಿತ ಮತ್ತು ಆಸಕ್ತಿ ಹುಟ್ಟಿಕೊಂಡಿತು ಎನ್ನುತ್ತಾರೆ. ‘ಉಡುಗೊರೆ ‘ಮತ್ತು ‘ನನ್ನೊಡಲ ಮಿಹಿರ’  , ‘ ನಿರುತ್ತರ ‘ ಎಂಬ ಮೂರು

 ಕವನ ಸಂಕಲನಗಳು,   ‘ಕಪ್ಪು ಹುಡುಗಿ’ ಪ್ರಬಂಧ ಸಂಕಲನ , ‘ಕಲ್ಯಾಣ ಸ್ವಾಮಿ ‘ ಎಂಬ ಡಾ. ನಿರಂಜನರ ಕಾದಂಬರಿಯನ್ನು ಅರೆಭಾಷೆಗೆ ಅನುವಾದಿಸಿದ ಕೃತಿ, ಇವಿಷ್ಟು ಕೃತಿಗಳು ಲೋಕಾರ್ಪಣೆಗೊಂಡಿವೆ.  ‘ನಿರುತ್ತರ ‘ ಎಂಬ ಕವನ ಸಂಕಲನ ಇತ್ತೀಚೆಗೆ ಬಿಡುಗಡೆಗೊಂಡಿದೆ..  ಕಪ್ಪು ಹುಡುಗಿ ಕೃತಿಗೆ 2018 ರ ಕೊಡಗಿನ ಗೌರಮ್ಮ ಪ್ರಶಸ್ತಿ ಲಭಿಸಿದೆ .

           ರಾಜ್ಯ ಅರೆಭಾಷೆ  ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ತಮ್ಮ ಊರಿನಲ್ಲಿ ‘ಚೆಂಬು ಸಾಹಿತ್ಯ ವೇದಿಕೆ ‘ಯನ್ನು ಹುಟ್ಟು ಹಾಕಿ ಸದಸ್ಯರೊಂದಿಗೆ ಸೇರಿ  ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಮೈಸೂರು ದಸರ ಕವಿಗೋಷ್ಠಿ,  ಜಿಲ್ಲಾ ಮತ್ತು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳು ಸೇರಿದಂತೆ ಹಲವಾರು ಕವಿಗೋಷ್ಠಿಗಳಲ್ಲಿ ಭಾಗಿಯಾಗಿದ್ದಾರೆ.   ಮಡಿಕೇರಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿರುತ್ತಾರೆ. ಸಾಹಿತ್ಯ ಅಕಾಡೆಮಿಯ ಡಾಕ್ಯುಮೆಂಟರಿ ‘ನನ್ನ ಹಾಡು ನನ್ನ ಕವಿತೆ’  ಕಾರ್ಯಕ್ರಮದಡಿಯಲ್ಲಿ ಇವರ ಕವಿತೆಗಳ ವಾಚನದ ಚಿತ್ರೀಕರಣವಾಗಿದೆ.  ಮಡಿಕೇರಿ ಆಕಾಶವಾಣಿಯ ಕುರಿತು ಅಭಿಮಾನದಿಂದ ಹೇಳುವ ಇವರು‌ ಕೊಡಗಿನ ಬರಹಗಾರರ ಬೆಳವಣಿಗೆಗೆ ಆಕಾಶವಾಣಿ ವೇದಿಕೆಯಾಗಿದೆ ಎನ್ನುತ್ತಾರೆ. ಇವರ ಕವಿತೆಗಳು , ಭಾವಯಾನ ಕಾರ್ಯಕ್ರಮ , ಸಂದರ್ಶನ ಇತ್ಯಾದಿಗಳು ಆಕಾಶವಾಣಿಯಲ್ಲಿ  ಭಿತ್ತರಗೊಂಡಿವೆ.  ಶಕ್ತಿ ಹುಟ್ಟುಹಬ್ಬ ಸ್ಪರ್ಧೆಯ ಬಹುಮಾನ ಸೇರಿದಂತೆ ಹಲವಾರು ಬಹುಮಾನ , ಪ್ರಶಸ್ತಿಗಳು ಲಭಿಸಿವೆ.  ಇವರ ಕವಿತೆಗಳು ಮಲಯಾಳಂ ಭಾಷೆಗೆ ( ಅನುವಾದಕಿ‌ : ಶ್ರೀಮತಿ ಸುನೀತ ಲೋಕೆಶ್) ಮತ್ತು ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿವೆ.  ಇವರು  ಮಡಿಕೇರಿ ತಾಲ್ಲೂಕು ಚೆಂಬು ಗ್ರಾಮದ  ಕೃಷಿಕರಾದ ಹೊಸೂರು  ರವಿರಾಜ್ ರವರ ಪತ್ನಿ.

           *****

ತೋಚಿದನ್ನು ಪದಗಳಲ್ಲಿ ಹಿಡಿದಿಡುವ ಶಕ್ತಿ ಇರುವುದು ಕಾವ್ಯಕ್ಕೆ ಮಾತ್ರ

* ನಿಮ್ಮ ಕವಿತೆಗಳ ಮೇಲೆ ಯಾರ ಪ್ರಭಾವ ಹೆಚ್ಚಿದೆ?

ಉತ್ತರ :

ಮೊದಮೊದಲು ಬರೆಯುವಾಗ ಇಂಥವರದ್ದೆ ಪ್ರಭಾವ ಅಂತ ಹೇಳಲು ಸಾಧ್ಯ ಇಲ್ಲ. ಪತ್ರಿಕೆಗಳಲ್ಲಿ, ಪಠ್ಯಗಳಲ್ಲಿ ಯಾವುದೆ ಪದ್ಯ ಕಂಡರೆ ಓದುತ್ತಿದ್ದೆ. ಗೃಹಿಣಿಯಾದ ಮೇಲೆ ಮಹಿಳೆಯರ ಕವಿತೆಗಳನ್ನು ಹೆಚ್ಚು ಓದುತ್ತಿದ್ದೆ. ಅದರಲ್ಲು ಮನೆಯಲ್ಲಿರುವ ಹೆಂಗಳೆಯರ ಕವಿತೆಗಳ ಪ್ರಭಾವವೆ ಹೆಚ್ಚು. ಅದರಲ್ಲಿ ಮುಖ್ಯವಾಗಿ  ನಮ್ಮೆಲ್ಲರ ಹಿರಿಯಕ್ಕ ವೈದೇಹಿಯವರು.

* ನಿಮ್ಮನ್ನು ಪದೇ ಪದೇ ಕಾಡುವ ವಿಷಯ ವಸ್ತು ಯಾವುದು?

ನನ್ನ ಒಡಹುಟ್ಟಿದ ತಂಗಿ ಅಕಾಲಿಕ ಮರಣವನ್ನಪ್ಪಿದ ಮೇಲೆ ಪದೇ ಪದೇ ಕಾಡುವ ವಸ್ತು ಸಾವು. ” ನನ್ನೊಡಲ ಮಿಹಿರ” ಕವನ ಸಂಕಲನದಲ್ಲಿ ಸಾವಿನ ಬಗ್ಗೆ ಹಲವಾರು ಕವಿತೆಗಳಿವೆ.

* ಕಾವ್ಯ ಪ್ರಕಾರವೆ ಯಾಕೆ ಇಷ್ಟ?

  ಯಾಕೆಂದರೆ ನಮಗೆ ತೋಚಿದನ್ನು ಪದಗಳಲ್ಲಿ ಹಿಡಿದಿಡುವ ಶಕ್ತಿ ಇರುವುದು ಕಾವ್ಯಕ್ಕೆ ಮಾತ್ರ. ಇದಕ್ಕೆ ಪೂರಕವಾಗಿ ವೈನ್ಕೆ ಯವರು” ಕವಿತೆ ನೀನೇಕೆ ಪದಗಳಲ್ಲಿ ಅವಿತೆ” ಎಂಬುದಾಗಿ ಹೇಳಿದ್ದಾರೆ.

* ನಿಮ್ಮ ಇಷ್ಟದ ಕವಿ ಕವಯತ್ರಿಯರು ಯಾರು?

        ವೈದೇಹಿ,  ಜಯಂತ ಕಾಯ್ಕಿಣಿ, ನೇಮಿಚಂದ್ರ , ಯುವ ಕತೆಗಾರ್ತಿ ಶಾಂತಿ ಅಪ್ಪಣ್ಣ, ಮತ್ತು ವಸುಧೇಂದ್ರ.

* ಕನ್ನಡ ಸಾಹಿತ್ಯದಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಿದ ಅಂಶಗಳಾವು?

         ಬೇಂದ್ರೆಯವರು ತಮ್ಮ ಮಗ ತೀರಿಹೋದಾಗ ,ಹೆಂಡತಿಯ ಮುಖ ನೋಡಲಾರದೆ ‘ ನೀ ಹಿಂಗೆ ನೋಡಬ್ಯಾಡ ನನ್ನ..ನೀ ಹಿಂಗೆ ನೋಡಿದರೆ ನನ್ನ’ ಎಂಬ ಕವಿತೆ ಹುಟ್ಟಿದ ಸಂದರ್ಭ ನೆನಪಾದರೆ ಏನೋ ತೀವ್ರವಾದ ಭಾವೋದ್ವೇಗ ನನ್ನಲುಂಟಾಗುತ್ತದೆ. ಭಾವಜೀವಿಗಳಿಗೆ ಕವಿತೆ ಸ್ಪುರಿಸುವ ಘಳಿಗೆಯ ಕುರಿತು ಆಶ್ಚರ್ಯವು ಆಗುತ್ತದೆ. ಇಂತಹ ಶಕ್ತಿ ಸಾಹಿತ್ಯಕ್ಕಿದೆ ಎಂಬುದೆ ನನ್ನನ್ನು ಗಾಢವಾಗಿ ಪ್ರಭಾವಿಸಿದೆ.  ಸಾಹಿತ್ಯ ಕೃತಿಯ ಓದಿನಿಂದ ವ್ಯಕ್ತಿಗಳು  ಬದಲಾದ ನಿದರ್ಶನಗಳಿವೆ. ಈ ರೀತಿಯ ಹಲವಾರು ಉದಾಹರಣೆಗಳು ನನ್ನನ್ನು ಪ್ರಭಾವಿಸಿದೆ.

*ಸಾಹಿತ್ಯ , ಬದುಕಿನಲ್ಲಿ ನಿಮ್ಮ ಕನಸುಗಳೇನು?

ಬದುಕಿಗಿಂತಲು ದೊಡ್ಡದು ಬೇರೆನಿಲ್ಲ.

 ಬರಹಕ್ಕಿಂತಲು ಬದುಕು ಮುಖ್ಯ. ಬದುಕಿನ ಎಲ್ಲ ಜವಬ್ದಾರಿಗಳನ್ನು ನಿಭಾಯಿಸಿಕೊಂಡು ಸಾಹಿತ್ಯ ರಚನೆಯಲ್ಲಿ ನಿರಂತರ ತೊಡಗಿಸಿಕೊಳ್ಳಬೇಕೆಂಬ ಕನಸಿದೆ.

*ಕವಿತೆಗಳನ್ನು ಯಾಕೆ ಬರೆಯುತ್ತೀರಿ?

     ಆ ಕ್ಷಣದ ಬಿಡುಗಡೆಗೆ, ಅನುಭವಿಸಿದ ತಲ್ಲಣಗಳನ್ನು ಕವಿತೆಯಾಗಿ ಬರೆಯುವೆ. ಮುಖ್ಯವಾಗಿ ನನ್ನ ಮನ ಸಂತೋಷಕ್ಕಾಗಿ ಬರೆಯುವೆ.

* ಕವಿತೆ ಹುಟ್ಟುವ ಕ್ಷಣ ಯಾವುದು?

       ಸಂವೇದನಾಶೀಲ ಮನಸ್ಸಿಗೆ ಕವಿತೆ ಸ್ಪುರಿಸುವ ಹೊತ್ತು ಇಂಥದ್ದೆ ಅಂತ ಇರಲು ಸಾಧ್ಯ ಇಲ್ಲ. ಕವಿತೆಗೋಸ್ಕರ ನಾವು ಕಾಯಬೇಕೆ ಹೊರತು ಕವಿತೆ ನಮಗೋಸ್ಕರ ಕಾಯಬಾರದು ಅಷ್ಟೆ.  ಮನಸ್ಸಿನಲ್ಲಿ ಮಥಿಸಿ ಉದಯಿಸಿದ ಕೂಡಲೆ ಅದನ್ನು ಹಿಡಿದಿಟ್ಟುಕೊಳ್ಳುವ ಚಾಕಚಕ್ಯತೆ ನಮಗಿರಬೇಕು.

*ಕವಿತೆಗಳಲ್ಲಿ ಬಾಲ್ಯ , ಹರೆಯ ಇಣುಕಿದೆಯ?

         ಬಾಲ್ಯದ ನೆನಪುಗಳು, ಹರೆಯದ ಹುರುಪುಗಳೆ ಹೆಚ್ಚಿನ ಕವಿತೆಗಳ ಸೋಪಾನ.

* ನೀವು ಗೃಹಿಣಿ, ಕೃಷಿಕ ಮಹಿಳೆ . ಇದು ನಿಮ್ಮ ಸೃಜನಶೀಲತೆಗೆ ನೆರವಾಗಿದೆಯ?

ಖಂಡಿತವಾಗಿ.  ಮಗುವಿನ ಕಣ್ಣೀರಲ್ಲಿ ಕವಿತೆ, ನಗುವಲ್ಲೊಂದು ಕವಿತೆ. ಸಾಸಿವೆ ಸಿಡಿವ ಸದ್ದಿಗೊಂದು ಕವಿತೆ.  ಹಾಲುಕ್ಕುವ ಪರಿಗೆ, ಹೂವರಳುವ ನಿಶ್ಯಬ್ಧಕ್ಕೆ ಸದ್ದಿಲ್ಲದೆ ಅರಳುವ ಕವಿತೆ. ಹೀಗೆ  ತೋಟದ ಕೆಸರು ನೆಲದ ಕಂಪಲ್ಲು ಕವಿತೆ ಹುಟ್ಟುವ ಸೃಜನಶೀಲತೆಗೆ ನಾವೆ ಬೆರಗುಗೊಳ್ಳುತ್ತೇವೆ.

* ವೃತ್ತಿ, ಸೃಜನಶೀಲತೆ ಹಾಗು ಆಪ್ತ ಬದುಕನ್ನು‌ ನಿಭಾಯಿಸುವ ಕೌಶಲ್ಯ ಹೇಗೆ?

             ಇಂತಹ ನಿಭಾಯಿಸುವ ಪರಿಸ್ಥಿತಿ ಮುಖ್ಯವಾಗಿ ಮಹಿಳೆಯರಿಗೆ ಹೆಚ್ಚು ಸಿಗುವಂತಹ ವಿಚಾರ. ಮನೆಯವರ ಪ್ರೋತ್ಸಾಹವೊಂದಿದ್ದರೆ ಯಾವುದೆ ಮಹಿಳೆಗೆ ಈ ಕೌಶಲ್ಯ ಕಷ್ಟವಲ್ಲ. ನಾನು ಈ ವಿಚಾರದಲ್ಲಿ ಅದೃಷ್ಟವಂತೆ. ಪತಿಯ ಸಹಕಾರದೊಂದಿಗೆ , ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಯಿಸುವುದರೊಂದಿಗೆ , ಮನೆಯ ಒಳ ಹೊರಗಿನ ಕೆಲಸಗಳನ್ನು ಪೂರೈಸಿಕೊಂಡು ಓದು ಬರವಣಿಗೆಯ ಹವ್ಯಾಸವನ್ನು ಸರಿದೂಗಿಸುತ್ತಿರುವೆ.

* ಕನ್ನಡ ವಿಮರ್ಶಾಲೋಕ ನಿಮ್ಮ ಕವಿತೆಗಳನ್ನು ಗಮನಿಸಿದೆಯ?

      ನನ್ನ ಪ್ರಕಟ ಆದ ಎರಡು ಎರಡು ಕವನ ಸಂಕಲನಗಳ ಕುರಿತು ಪತ್ರಿಕೆಗಳಲ್ಲಿ ಕೆಲವು ವಿಮರ್ಶೆಗಳು ಪ್ರಕಟ ಆಗಿವೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಗಮನಿಸಿದೆ ಎನ್ನಬಹುದು.

* ಸಾಹಿತ್ಯ ಲೋಕದ ಬರಹಗಾರರಾಗಿ ಲಿಂಗ ಅಸಮಾನತೆಯನ್ನು ನೀವು ಎಂದಾದರು ಎದುರಿಸಿದ್ದೀರ?

     ನನ್ನ ಸ್ವತಃ ಅನುಭವಕ್ಕೆ ಇದು ಬಂದಿಲ್ಲ.  ಆದರೆ ಬರಹಗಾರ್ತಿ ಗೆಳತಿಯರು ಹೇಳಿರುವ ಹಲವಾರು ಸಮಸ್ಯೆಗಳನ್ನು ಆಲಿಸಿದ್ದೇನೆ.  ಅದರ ವಿರುದ್ಧ ಅಸಮಾನತೆ ಏಕೆ ಎಂದು ಪ್ರಶ್ನಸಿದ್ದು ಇದೆ.  ಹಿಂದಿನ ಕಾಲದಲ್ಲಿ ಮನೆಯಿಂದಲೆ ಈ ಸಮಸ್ಯೆ ಉದ್ಭವವಾಗುತ್ತಿತ್ತು. ಈಗ ಅಲ್ಲೊಂದು ಇಲ್ಲೊಂದು ಉದಾಹರಣೆ ಬಿಟ್ಟರೆ ಮನೆಯ ಮೂಲದಿಂದ ಲಿಂಗ ಅಸಮಾನತೆಯ ಸಮಸ್ಯೆ ಕಡಿಮೆಯಾಗುತ್ತಿದೆ.

  * ಎಡ, ಬಲ ಪಂಥೀಯ ತಿಕ್ಕಾಟದ ಗುಂಪುಗಳ ಬಗ್ಗೆ ನಿಮ್ಮ ಅನಿಸಿಕೆಯೇನು?

        ಅವರವರ ಅಭಿಪ್ರಾಯ , ಆಲೋಚನೆ ಅವರವರಿಗೆ ಸರಿ ಎಂಬುದು ನನ್ನ ಭಾವನೆ. ಎಲ್ಲರು ಅದನ್ನು ಪರಸ್ಪರ ಗೌರವಿಸಬೇಕು.  ಏನೆ ಆದರು ವಿಶಾಲ ದೃಷ್ಟಿಕೋನದಿಂದ ಎಲ್ಲವನ್ನೂ ನೋಡಬೇಕು.  ಗಂಡು ಮತ್ತು‌ ಹೆಣ್ಣು ಎಂಬುದನ್ನು ಬಿಟ್ಟರೆ ಮನುಷ್ಯರೆಲ್ಲರು ಒಂದೆ ತಾನೆ?

*  ಪ್ರಸ್ತುತ ರಾಜಕೀಯ ಸನ್ನಿವೇಶದ ಕುರಿತು ನಿಮ್ಮ ಪ್ರತಿಕ್ರಿಯೆ ಏನು ?

         ರಾಜಕೀಯ ರಂಗದಲ್ಲಿ ಇರುವಷ್ಟು ಭ್ರಷ್ಟಾಚಾರ ನಮ್ಮ ಸಮಾಜದಲ್ಲಿ ಬೇರೆಲ್ಲು ಇರಲು‌ ಸಾಧ್ಯವಿಲ್ಲ. ಅವಶ್ಯಕತೆಗಿಂತ ಹೆಚ್ಚಿನ ಹಣ ಮಾಡುವ ದುರಾಸೆ ಮತ್ತು ಇನ್ನಿತರ ಆಸೆಗಳು ನಾಯಕರಾದವರಿಗೆ ಇರಲೇಬಾರದಿತ್ತು. ಆದರೆ ಹಾಗಾಗಿರುವುದು ನಮ್ಮ ದುರಾದೃಷ್ಟ.

  * ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?

           ಸಾಹಿತ್ಯ ವಲಯದಲ್ಲು ರಾಜಕಾರಣ ಇದೆ ಎಂಬುದು ಕೆಲವು ವಿಚಾರಗಳು ಪತ್ರಿಕೆಗಳಲ್ಲಿ ಬಂದಾಗ ತಿಳಿಯುತ್ತದೆ. ಪ್ರಸ್ತುತ ದಿನಗಳಲ್ಲಿ ಚುನಾವಣೆಗಳು ಜಾಸ್ತಿಯಾಗುತ್ತಿರುವುದು ಖೇದಕರ. ನನ್ನ ಅಭಿಪ್ರಾಯದಲ್ಲಿ ಬರಹಗಾರರು ಪ್ರತಿ ವಿಷಯದಲ್ಲು ಪ್ರಾಮಾಣಿಕರಾಗಿರಬೇಕು. ಬರಹ ಮತ್ತು ಬದುಕು ಒಂದೆ ಆಗಿರಬೇಕು. ನಮ್ಮ ಸಾಹಿತ್ಯ ವಲಯದಲ್ಲು ರಾಜಕಾರಣ ಇದೆ ಎಂದರೆ ಅದು ತುಂಬಾ ವಿಷಾದ.

*  ಈಚೆಗೆ ಓದಿದ ಕೃತಿಗಳಾವವು ?

        ದೇವನೂರ ಮಹಾದೇವರ ಎದೆಗೆ ಬಿದ್ದ ಅಕ್ಷರ ಮತ್ತು ನಾಗರೇಖಾ ಗಾಂವಕರ್ ಅನುವಾದಿಸಿದ

ದಿ ಡೈರಿ ಆಪ್ ಎ ಯಂಗ್ ಗರ್ಲ್ ಆ್ಯನ್ ಫ್ರಾಂಕ್ ಎಂಬೆರಡು ಅತ್ಯುತ್ತಮ ಪುಸ್ತಕಗಳು.

*  ನಿಮ್ಮ ಇಷ್ಟದ ಕೆಲಸ ಯಾವುದು?

         ಮಕ್ಕಳಿಗೆ ದೈನಂದಿನ ಪಾಠಗಳನ್ನು ಹೇಳಿಕೊಡುವುದು ಮತ್ತು ‌ಅವರ ಆಟಗಳೊಂದಿಗೆ ಸೇರಿಕೊಳ್ಳುವುದು ನನ್ನ ಇಷ್ಟದ ಕೆಲಸ. ಇದರಿಂದ ನಮಗು ಹಲವಾರು ಹೊಸ ವಿಚಾರಗಳು ತಿಳಿಯುತ್ತವೆ.

*  ಈ ದೇಶದ ಚಲನೆಯ ಬಗ್ಗೆ ನಿಮ್ಮ‌ಮನಸ್ಸು ಹೇಳುತ್ತದೆ?  

           ನಮ್ಮ ದೇಶದಲ್ಲಿ ಮಧ್ಯರಾತ್ರಿ ಹೆಣ್ಣು ಮಗಳೊಬ್ಬಳು ಒಬ್ಬಳೆ ನಡೆದು ಹೋದಂದು ನಿಜವಾದ ಸ್ವಾತಂತ್ರ್ಯ ಎಂದಿದ್ದರು ಮಹಾತ್ಮ ಗಾಂದೀಜಿ. ನಾನು ಇದನ್ನು ಅನುಮೋದಿಸಿ ಹೇಳುತ್ತೇನೆ. ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲು ಅದ್ವಿತೀಯ ಸಾಧನೆ ಮಾಡಿದ್ದರು ಈ ವಿಷಯದಲ್ಲಿ ಸೋತಿದ್ದಾರೆ.ಅದರಲ್ಲು ಮುಖ್ಯವಾಗಿ ಗ್ರಾಮೀಣ ಮಹಿಳೆಯರ ಸುಧಾರಣೆ ಅತ್ಯಲ್ಪ. ಮಹಾತ್ಮರು ಹೇಳಿದ ಮಾತು ನಡೆಯುವ ಕಾಲ ಬಂದಾಗ ಭಾರತದ ನಿಜವಾದ ಅಭಿವೃದ್ಧಿ. ಇದಾಗದೆ ಇನ್ನಿತರ ಸುಧಾರಣೆಗಳು ಕಂಡು ಬಂದು ಏನು ಪ್ರಯೋಜನ?

     * ನಿಮ್ಮ ಇಷ್ಟದ ಪ್ರೇಕ್ಷಣೀಯ ಸ್ಥಳ ಯಾವುದು?

ಜೋಗ್ ಜಲಪಾತ.

     *  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ  ಬಗ್ಗೆ ನಿಮಗೆ ಏನನ್ನಿಸುತ್ತದೆ?

             ಸಾಂಸ್ಕೃತಿಕವಾಗಿ ನಮ್ಮ ಸಮಾಜ ಶ್ರೀಮಂತವಾಗಿದೆ. ಜನರಿಗೆ ವಿಫುಲ ಅವಕಾಶಗಳು ಮತ್ತು ವೇದಿಕೆಗಳು ಸಿಗುತ್ತಿರುವುದರಿಂದ ಸ್ಪರ್ಧಾ ಮನೋಭಾವದೊಂದಿಗೆ ಬೆಳೆಯುತ್ತಿದ್ದಾರೆ. ದೇಶ ವಿದೇಶಗಳ ವೈವಿದ್ಯಮಯ ಪ್ರತಿಬೆಗಳನ್ನು ಪ್ರತಿನಿತ್ಯ ಜಾಲತಾಣಗಳಲ್ಲಿ ವೀಕ್ಷಿಸುತ್ತೇವೆ. ಕವಿಗಳು , ಕಲಾವಿದರು, ನೃತ್ಯ ಪಟುಗಳು , ಹಾಡುಗಾರರು ಯಾವ ಪ್ರತಿಭೆಗಳು ಆದರು ಸಹ ಮುಖ್ಯವಾಗಿ ಗುಣಮಟ್ಟಕ್ಕೆ ಪ್ರಮುಖ ಆದ್ಯತೆ ಕೊಡಬೇಕು.

   * ನಿಮ್ಮ ಕವಿತೆಗಳ ವಸ್ತು ನಿರ್ವಹಣೆಯಲ್ಲಿ ಪ್ರಜ್ಞಾಪೂರ್ವಕ ನಿರೂಪಣೆ ಇದೆಯ?

           ಬರಹಗಾರರಾದವರು ಸಮಾಜದ ಒಳಿತು ಕೆಡುಕುಗಳ ಕುರಿತು ಕಳಕಳಿ ಹೊಂದಿರಬೇಕೆಂಬ ಆಶಯ ನನ್ನದು. ಯಾಕೆಂದರೆ ಲೇಖನಿಗೆ ಅಂತಹ ಶಕ್ತಿ ಇದೆ. ಪತ್ರಕರ್ತರ ಕಾಳಜಿಯ ಬರಹಗಳಿಂದ ನಾಡಿನಾದ್ಯಂತ ಹಲವಾರು ಸುಧಾರಣೆಗಳು ಕಂಡುಬಂದಿವೆ. ಇದರ ಬಗ್ಗೆ ಇನ್ನೂ ಹಲವಾರು ವಿಚಾರಗಳನ್ನು ಹಂಚಿಕೊಳ್ಳಬಹುದು. ಇಂತಹ ನಿಲುವು ಹೊಂದಿರುವ ನನ್ನಲ್ಲು ವಸ್ತು ನಿರ್ವಹಣೆಯಲ್ಲಿ ಪ್ರಜ್ಞಾಪೂರ್ವಕ ನಿರೂಪಣೆ ಇದೆ ಎನ್ನಬಹುದು.

…********************************

ನಾಗರಾಜ್ ಹರಪನಹಳ್ಳಿ

32 thoughts on “ಸಂದರ್ಶನ

 1. ಅನಂತ ಧನ್ಯವಾದಗಳು ನಮ್ಮೆಲ್ಲರ ಅಚ್ಚುಮೆಚ್ಚಿನ ಸಂಗಾತ ಪತ್ರಿಕೆಗೆ ಮತ್ತು ಅತ್ಯುತ್ತಮ ಪ್ರಶ್ನೆಗಳನ್ನು ರಚಿಸಿ ಬೆಳೆಯುತ್ತಿರುವ ನಮ್ಮಂತಹ ಬರಹಗಾರರನ್ನ ಪ್ರೋತ್ಸಾಹಿಸುವ ಹರಪನಹಳ್ಳಿ ಸರ್ ನಿಮಗೆ ಕೃತಜ್ಞತೆಗಳು.

  1. ಅತೀ ಉತ್ತಮ ಸಂದರ್ಶನ ಮೇರು ಕವಯ್ತ್ರಿಯಾಗಿ ಬೆಳೆದು ಬಾ ಮಗಳೇ

   1. ಅತೀ ಉತ್ತಮ ಸಂದರ್ಶನ ಮೇರು ಕವಯತ್ರಿಯಾಗಿ ಬೆಳೆದು ಬಾ ಮಗಳೇ..

  2. ಬೆಳೆಯುತ್ತಿರಿ ಹೀಗೆ…ನಮ್ಮೂರಿಗೆ ಹೆಮ್ಮೆ….

 2. ನಾಗರಾಜರು ಕೇಳಿದ ಪ್ರಶ್ನೆಗಳು ಮತ್ತು ಸಂಗೀತಾ ಕೊಟ್ಟ ಉತ್ತರಗಳನ್ನು ಓದಿದೆ.‌ ಸಾಹಿತ್ಯದ ಬಗ್ಗೆ ಅಪಾರ ಶ್ರದ್ಧೆಯಿರುವ ಗೃಹಿಣಿಯೊಬ್ಬರ ಉತ್ತರದಲ್ಲಿ ಅನೇಕ ಒಳನೋಟಗಳಿವೆ. ಮುಖ್ಯವಾಗಿ ಈ ಉತ್ತರಗಳ ಹಿಂದೆ ಇರುವ ನಿಷ್ಕಲ್ಮಷ ಮನಸು.‌ ಇವತ್ತು ಸಾಹಿತ್ಯ ಲೋಕ ಕಳಕೊಳ್ಳುತ್ತಿರುವುದನ್ನು ಸಂಗೀತಾ ತುಂಬಿಕೊಡುತ್ತಿದ್ದಾರೆ ಅನ್ನಿಸಿತು.

 3. ಸಂದರ್ಶನ ಪ್ರಶ್ನೆಗಳಿಗೆ…. ಸಮರ್ಥವಾಗಿ ಉತ್ತರಿಸಿದ್ದೀರ ಸಂಗೀತಾ.. ಅಭಿನಂದನೆಗಳು.

 4. ಬದುಕು ಮತ್ತೆ ಬರಹ ಒಂದನ್ನೊಂದು ಆವರಿಸಿಕೊಂಡ ಬಗೆಯನ್ನು ಬಹಳ ಚೆನ್ನಾಗಿ ಹೇಳಿದ್ದಾರೆ. ಅವರ ಸಾಹಿತ್ಯ ಕೃಷಿ ಇನ್ನಷ್ಟು ಬೆಳೆಯಲಿ ಜೊತೆಗೆ ಇನ್ನಷ್ಟು ಉತ್ತಮ ಕೃತಿಗಳು ಅವರ ಲೇಖನಿಯಿಂದ ಮೂಡಿಬರಲಿ…

  ಉತ್ತಮ ಪ್ರಶ್ನೋತ್ತರದ ಈ ಸಂದರ್ಶನ ಇನ್ನಷ್ಟು ಹೊಸ ಸಾಹಿತಿಗಳಿಗೆ ಉತ್ತೇಜನ ನೀಡಬಲ್ಲದು.

  ಧನ್ಯವಾದಗಳು.

 5. ಕನ್ನಡದ ಸಾಹಿತ್ಯ ಲೋಕಕ್ಕೆ ಇನ್ನೂ ಅಪಾರವಾದ ಕೊಡುಗೆ ನೀಡುವ ಸಾಮರ್ಥ್ಯ ಸಂಗೀತಾ ರವಿರಾಜರಿಗೆ ಇದೆ. ಶುಭವಾಗಲಿ……

 6. ಸಂಗೀತಾ..ನಿಮ್ಮ ಅಂತರಂಗದ ಮಾತುಗಳನ್ನು ಓದಿದೆ..ಎಳ್ಳಷ್ಟೂ ತೋರಿಕೆ,ಕಪಟವಿಲ್ಲದ ಸಹಜ ಬರಹಗಾರ್ತಿ ನೀವು..ನಿಮ್ಮ ಬದುಕೂ ಹಾಗೆಯೇ.. ಯಾವುದಕ್ಕೂ ಹಪಾಹಪಿ ಪಡದ ನಿಮ್ಮ ಒಳ್ಳೆಯತನಕ್ಕೆ ಸದಾ ನಮಸ್ಕಾರ..ಸಂದರ್ಶನ ಉತ್ತಮವಾಗಿದೆ

 7. ಅಭಿನಂದನೆಗಳು ಸಂಗೀತಾ…. ನಿನಗೆ ಶುಭವಾಗಲಿ…. ತುಂಬಾ ಚೆನ್ನಾಗಿ ಪ್ರಶ್ನೆಗಳಿಗೆ ಉತ್ತರಿಸಿರುವೆ.

 8. ಸಂದರ್ಶಕರ ಪ್ರಶ್ನೆಗಳಿಗೆ ಮನಮುಟ್ಟುವಂತೆ ಉತ್ತರಿಸಿದ್ದೀರಿ ಅಕ್ಕ… ತುಂಬಾ ಇಷ್ಟವಾಯಿತು ನಿಮ್ಮ ಮಾತುಗಳು..

 9. ಸರಳ ಪ್ರಾಮಾಣಿಕ ವಾಗಿ ಉತ್ತರಿಸಿದ್ದೀರಾ ಸಂಗೀತ ನಿಮಗೆ ಶುಭವಾಗಲಿ

 10. ಬಿಳಿಮಲೆ ಸರ್‌ ನಿಮ್ಮ ಆಶೀರ್ವಾದ ಪ್ರೋತ್ಸಾಹದ ಮಾತುಗಳು ನನಗೆ ಶ್ರೀರಕ್ಷೆ. ಎಲ್ಲ ಸಹೃದಯರ ಮೆಚ್ಚುಗೆಯ ನುಡಿಗಳಿಗೆ ಪ್ರೀತಿಯಿಂದ ನಮಸ್ಕರಿಸುತ್ತೇನೆ.

 11. ಮಾಗಿದ ಹಣ್ಣಿನ ರುಚಿಯಂತೆ…ನಿಮ್ಮ ಉತ್ತರಗಳು…ಏತ್ತರದ ರುಚಿಯನ್ನು …ಸುವಾಸನೆಯನ್ನು…ಹಂಚುತ್ತಿವೆ…ಧನ್ಯವಾದಗಳು… ಶುಭವಾಗಲಿ…

 12. ಅನುಭಾವದ ಅಭಿವ್ಯಕ್ತಿ ಆಪ್ತವಾಗಿದೆ ಸಂಗೀತ… ಮತ್ತಷ್ಟು ಹೊಳಹುಗಳಿಗೆ ಬದುಕು ತೆರೆದುಕೊಳ್ಳುತ್ತಿರಲಿ… ಶುಭಾಶಯಗಳು…

 13. ಧನ್ಯವಾದಗಳು ಸಂಗೀತ.. ನನ್ನ ಸ್ಕೂಲ್ ಗೆಳತಿ ನೀನು.. ನಿನ್ನ ಹುರುಪು, ಉತ್ಸಹ ಇನ್ನು ಹೆಚ್ಚಾಗಿ,ದೊಡ್ಡ ಕವಿಯತ್ರಿ ಯಾಗಿ ಬಾಳು ಬಂಗಾರ ವಾಗಲಿ..

 14. ನಿನ್ನ ಪದಪುಂಜಗಳು ನಿನ್ನ ಜ್ಞಾನದ ಆಗರವನ್ನು ಸಾರಿ ಹೇಳುತ್ತಿದೆ ಗೆಳತಿ. ಆದರ್ಶ ಗೃಹಿಣಿಯಾಗಿ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಒಂದಿಷ್ಟು ಸಮಯವನ್ನು ಸಾಹಿತ್ಯಲೋಕದಲ್ಲಿ ಮತ್ತು ಶೈಕ್ಷಣಿಕವಾಗಿ ವಿನಿಯೋಗಿಸಿ ತನ್ನ ಮನದ ಉಲ್ಲಾಸವನ್ನು ಪಡೆಯುತ್ತಿರುವ ನಿನ್ನ ಭವಿಷ್ಯ ಉಜ್ವಲವಾಗಲಿ ಎಂದು ಶಾಸ್ತಾವು ದೇವರಲ್ಲಿ ಪ್ರಾರ್ಥಿಸುವೆ ಗೆಳತಿ

 15. ಬರಹಗಾರರು ಪ್ರತಿ ವಿಷಯದಲ್ಲೂ ಪ್ರಾಮಾಣಿಕರಾಗಿರಬೇಕು ಹಾಗೂ ಬರಹ ಮತ್ತು ಬದುಕು ಒಂದೇ ಆಗಬೇಕು ಎಂಬ ಮಾತುಗಳು ಇಷ್ಟವಾದವು ಇವುಗಳು ಎಂದೆಂದಿಗೂ ಸಾಹಿತ್ಯ ಕ್ಷೇತ್ರದ ಅನಿವಾರ್ಯ ಅಂಶಗಳು..

 16. ಪ್ರಶ್ನೆಗಳಿಗೆ ಕೊಟ್ಟಂತ ಉತ್ತರ ನಿಜಕ್ಕೂ ತುಂಬಾ ನಿಖರವಾಗಿ, ನಿರ್ದಿಷ್ಟವಾಗಿದೆ.. ಮನದಾಳದ ಮಾತುಗಳಾಗಿವೆ….. ಸಾಹಿತ್ಯ ದಲ್ಲಿ ಇರುವ ಆಸಕ್ತಿ ಅದ್ಭುತ.. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ನಿಮ್ಮ ಜೀವನ ಶೈಲಿ ನಿಮ್ಮ ಪ್ರತಿಭೆಗೆ ಹಿಡಿದ ಕೈಗನ್ನಡಿ.. ಸಾಹಿತ್ಯಸಕ್ತಿ ಇರುವ ಮಹಿಳೆಯರಿಗೆ ನೀವು ಮಾದರಿ… ನಿಮ್ಮ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆಗಳು

 17. ಅಭಿನಂದನೆಗಳು ಸಂಗೀತ ರವಿರಾಜ್..
  ಕನ್ನಡ ಸಾಹಿತ್ಯ ಲೋಕದ ಮೇರು ಕವಿಯಿತ್ರಿಯಾಗಿ ಬೆಳಗು..ಶುಭ ವಾಗಲಿ.

 18. ಅಭಿನಂದನೆ ಸಂಗೀತಾ.
  ಪ್ರಾಮಾಣಿಕ ಅಭಿವ್ಯಕ್ತಿ. ಇಷ್ಟವಾಯ್ತು

 19. ತಮ್ಮೆಲ್ಲರ ಮೆಚ್ಚುಗೆಯ ನುಡಿಗಳಿಂದ ನನ್ನ ಬರವಣಿಗೆಯ ಜವಾಬ್ದಾರಿ ‌ಇನ್ನು‌ಹೆಚ್ಚಿದೆ. ನಿಮ್ಮೆಲ್ಲರ ನಿಷ್ಕಲ್ಮಶ ಪ್ರೀತಿಗೆ ಚಿರ ಋಣಿ.

 20. ಇತ್ತೀಚೆಗೆ ಪರಿಚಯವಾದರೂ ಜನ್ಮಾಂತರದ ಗೆಳತಿಯಂತಿರುವ, ನೇರ ವ್ಯಕ್ತಿತ್ವದ, ಅಮೋಘ ಪ್ರತಿಭೆಯ, ಕಾವ್ಯ ಜಗತ್ತಿಗೆ ಅತ್ಯುತ್ತಮ ಆಸ್ತಿಯಾಗಿರುವವರು ಸಂಗೀತಾ ರವಿರಾಜ್. ನಿಮ್ಮ ಅಭಿವ್ಯಕ್ತಿ, ಮನದಾಳದ ಮಾತುಗಳು ಅದ್ಭುತ. ಒಳಿತೇ ಆಗಲಿ ನಿಮಗೆ.

Leave a Reply

Back To Top