ನೀಳ್ಗಥೆ
ಗಿಳಿಯು ಪಂಜರದೊಳಿಲ್ಲ
ಕೊನೆಯ ಕಂತು
ಟಿ. ಎಸ್. ಶ್ರವಣ ಕುಮಾರಿ
ಒಳಗೆ ಬಂದವಳು ʻಶ್ರೀಧರನಿಗೆ ಒಂದು ಮೆಸೇಜ್ ಕಳಿಸಲೇʼ ಎಂದುಕೊಂಡು ಟೇಬಲ್ಲಿನ ಮೇಲಿದ್ದ ಮೊಬೈಲನ್ನು ತೆಗೆದುಕೊಂಡಳು. ಅವನದೇ ನಾಲ್ಕು ಮೆಸೇಜ್‌ಗಳಿದ್ದವು. ʻಏನಾಯ್ತುʼ ʻಏನು ನಿರ್ಧಾರ ತೊಗೊಂಡೆʼ ʻಇನ್ನೂ ಯಾಕೆ ತಡʼ ʻನಾ ಬರ‍್ಲಾʼ… ಕಡೆಯ ಮೆಸೇಜ್ ನೋಡಿ ಒಂದು ಕ್ಷಣ ಭಯವಾಯಿತು. ʻಅವನು ಬರೋದು ಬೇಡ. ಮಾವನವರಿಗೆ ಅವನೇ ಇರಬಹುದು ಎಂದು ಗೊತ್ತಿರಬಹುದು. ಮಿಕ್ಕವರ‍್ಯಾರಿಗೂ ಅವನ ಬಗ್ಗೆ ಗೊತ್ತಿಲ್ಲ. ಗಂಡನಿಗೆ…? ಅವನಿಗೇನು… ಎಷ್ಟು ಅರ್ಥವಾಗತ್ತೋ… ದೇವರಿಗೇ ಗೊತ್ತು. ತನ್ನ, ಅವನ ಮಧ್ಯೆ ಇರುವುದು ಹೆಸರಿಗಷ್ಟೇ ಗಂಡ ಹೆಂಡತಿ ಸಂಬಂಧ. ಅವನು ಸುಮ್ಮನೆ ಸೋಫಾದಲ್ಲಿ ಪಕ್ಕದಲ್ಲಿ ಬಂದು ಕೂತರೂ ಯಾರೋ ಅನ್ನಿಸತ್ತೆ. ಇಂತಹವನೊಂದಿಗೆ ಜೀವಮಾನ ಪೂರ್ತಿ ಇರಕ್ಕೆ ಸಾಧ್ಯಾನಾ…ʼ ನೆನಸಿಕೊಂಡ ತಕ್ಷಣ ಮೈಯೆಲ್ಲಾ ಮುಳ್ಳೆದ್ದಿತು. ಮೊಬೈಲ್‌ನಲ್ಲಿ ಮತ್ತೆ ಶ್ರೀಧರ ಕೇಳುತ್ತಿದ್ದ ʻನಿಂಗೆ ಕಷ್ಟವಾದ್ರೆ ನಾನು ಬಂದು ಹೇಳಿ ಕರ‍್ಕೊಂಡು ಬರ‍್ತೀನಿʼ. ʻಅವನು ಬರೋದು ಬೇಡ… ಬಂದು ಅಪ್ಪ, ಅಮ್ಮ, ಸುಂದರಮ್ಮ ಇವರ ಬಾಯಿಗೆ ಸಿಗೋದು ಬೇಡʼ ಎಂದುಕೊಂಡು ʻಸ್ವಲ್ಪ ಸಮಯ ಕೊಡು, ನಾನು ಹೇಳ್ತೀನಿʼ ಎಂದು ಮೆಸೇಜ್ ಕಳಿಸಿದಳು.
ರಾತ್ರಿಯೂ ಮಗುವಿಗೆ ಅನ್ನ ತಿನ್ನಿಸಿ, ತಾನು ಒಂದು ಲೋಟ ಹಾಲು ಕುಡಿದು ಬಂದು ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು, ಎತ್ತಿಕೊಂಡು ಓಡಾಡುತ್ತಾ ಕಾಲಕಳೆದಳು. ಆಡುತ್ತಾ ಹಾಗೆಯೇ ಮಲಗಿದ್ದ ಮಗುವನ್ನು ಎತ್ತಿ ಮಂಚದ ಮೇಲೆ ಮಲಗಿಸಿ ಹೊದಿಸಿದಳು. ʻಇವನು ನನಗೆ ಬೇಕು ಅಂತ ನಾನು ಕೇಳೋ ಹಾಗಿಲ್ಲ. ಈ ಮನೆ ಮಗು ಅನ್ನೋದು ಜಗತ್ತಿಗೆ ತಿಳಿದಿರೋ ಸತ್ಯ. ಇದು ಕಾನೂನಿನ ಮುಖಾಂತ್ರ ಹೋರಾಡೋ ವಿಷ್ಯಾನಾ…? ಹಾಗೆ ಹೋದ್ರೆ ಈ ಮನೆ ಮರ‍್ಯಾದೆ ಮೂರು ಕಾಸಾಗತ್ತೆ. ಹಾಗೆ ಮಾಡೋದು ಸರೀನಾ. ಏನೇ ಆಗಿದ್ರೂ ಅಪ್ಪ ಮಾಡ್ಕೊಂಡಿದ್ದ ಸಾಲಾನೆಲ್ಲಾ ತೀರ‍್ಸಿ ಆ ಋಣ ನಾನು ತಲೆಯೆತ್ತದ ಹಾಗೆ ಮಾಡಿದೆ. ಏನು ಮಾಡಿದರೆ ಸರಿ………ʼ ರಾತ್ರೋ ರಾತ್ರಿ ಮಗುವನ್ನೂ ಕರೆದುಕೊಂಡು ಎಲ್ಲರೂ ಮಲಗಿರುವಾಗ ಹೊರಟು ಹೋದರೆ… ? ಯಾರೋ ಒಬ್ಬರಿಗೆ ಎಚ್ಚರವಾದರೂ ಆಮೇಲೆ ನರಕವೇ. ಹೊರಗೆಲ್ಲಾ ನಿಶ್ಶಬ್ದವಾಗಿದೆ. ಎಲ್ಲರೂ ಮಲಗಿರಬಹುದೇನೋ… ಒಂದಷ್ಟು ಹೊತ್ತು ಹೀಗೇ ಯೋಚನೆಯಲ್ಲಿ ಮುಳುಗಿದ್ದವಳು ಬಚ್ಚಲಿಗೆ ಹೋಗಿ ಬರೋಣವೆಂದು ಕೋಣೆಯ ಬಾಗಿಲು ತೆರೆದಳು. ಬಾಗಿಲಿಗೇ ಮಲಗಿರುವ ಸುಂದರಮ್ಮ. ಮುಖದ ಮೇಲಿನ ಮುಸುಕು ಸರಿಸಿ ತನ್ನೆಡೆಗೆ ನೋಡಿದರು. ತಾನು ನೋಡಲೇ ಇಲ್ಲವೆನ್ನುವ ಹಾಗೆ ಪದ್ಮ ಬಚ್ಚಲಿನ ಕೆಲಸ ಮುಗಿಸಿಕೊಂಡು ಬಂದು ಮತ್ತೆ ಮಲಗಿದಳು. ಬೆಳಗಿನವರೆಗೂ ಯೋಚಿಸಿದರೂ ಯಾವುದೂ ಬಗೆ ಹರಿಯಲಿಲ್ಲ… ಅದ್ಯಾವ ಗಳಿಗೆಯಲ್ಲಿ ಜೋಂಪು ಹತ್ತಿತೋ…
*
ಬೆಳಗ್ಗೆ ಸ್ವಲ್ಪ ತಡವಾಗಿ ಎದ್ದು ಬಂದವಳತ್ತ ಹಾಲಿನಲ್ಲಿ ಕುಳಿತವರೆಲ್ಲರ ಗಮನ ಹರಿಯಿತು. ಯಾರನ್ನೂ ನೋಡದೆ ಒಟ್ಟಿಗೇ ಸ್ನಾನವನ್ನೇ ಮುಗಿಸಿಕೊಂಡು ಬಂದು ಮತ್ತೆ ಕೋಣೆಯನ್ನು ಸೇರಿಕೊಂಡಳು. ಮಗುವಿಗೆ ಹಾಲು ತೆಗೆದುಕೊಳ್ಳಲು ಅಡುಗೆಮನೆಗೆ ಬಂದಾಗ ಒಂದು ತಟ್ಟೆಯಲ್ಲಿ ಅವಲಕ್ಕಿ ಒಗ್ಗರಣೆ ಇಟ್ಟಿದ್ದು ನೋಡಿ ತನಗೇ ಇಟ್ಟಿರುವುದೇನೋ ಎಂದುಕೊಂಡರೂ, ಯಾಕೋ ತಿನ್ನುವ ಮನಸ್ಸಾಗಲಿಲ್ಲ. ಮತ್ತೊಮ್ಮೆ ಒಂದು ಲೋಟ ಹಾಲು ಕುಡಿದು ಕೋಣೆಗೆ ಬರುವಷ್ಟರಲ್ಲಿ ಮಾವನವರು ಮಗುವನ್ನು ಎತ್ತಿಕೊಂಡು ಹೋಗಿದ್ದರು. ಹೋಗಿ ಮಗುವನ್ನು ಕೊಡಿ ಎನ್ನುವಷ್ಟು ಧೈರ್ಯ ಬರಲಿಲ್ಲ. ಅತ್ತರೆ ಅವರೇ ತಂದುಕೊಡಬಹುದೆಂದು ಕಾಯುತ್ತಾ ಕುಳಿತಳು. ಅಷ್ಟರಲ್ಲಿ ಮತ್ತೆ ಶ್ರೀಧರನ ಸಂದೇಶ… ʻಏನು ನಿರ್ಧಾರ ತೊಗೊಂಡೆ?ʼ. ʻಸ್ವಲ್ಪ ಸಮಯ ಕೊಡುʼ ಎಂದು ಉತ್ತರಿಸಿ ಮತ್ತೆ ನೆನೆಗುದಿಗೆ ಬಿದ್ದಳು.
ಕಿಟಕಿಯಿಂದಾಚೆ ಕಾಣುತ್ತಿದ್ದ ಸೀಬೇಮರದ ಮೇಲೆ ಹಕ್ಕಿಗಳೆರಡು ಒಂದಷ್ಟು ಹೊತ್ತು ಚಿಲಿಪಿಲಿ ಮಾಡಿ ಏನೋ ಮಾತಾಡಿಕೊಂಡಂತೆ ಅಲ್ಲಿಂದ ಹಾರಿದವು. ʻಅವುಗಳ ಜೀವನ ಎಷ್ಟೊಂದು ಸ್ವತಂತ್ರ; ಮನುಷ್ಯನ ಹಾಗೆ ಅವುಗಳಿಗೆ ಯಾವ ಬಂಧನವೂ, ಜಂಜಾಟವೂ, ಕ್ಲೇಷವೂ ಇಲ್ಲʼ ಎನ್ನಿಸಿ ಒಂದು ಕ್ಷಣ ಹೊಟ್ಟೆಕಿಚ್ಚೆನಿಸಿತು. ಸೀಬೆ ಮರದ ತುಂಬಾ ಹೀಚುಕಾಯಿಗಳು ಅಲ್ಲಲ್ಲಿ ಅರಳಿ ನಿಂತ ಬಿಳಿಯ ಹೂಗಳು. ಮರದ ತುಂಬಾ ಓಡಾಡುತ್ತಿದ್ದ ಅಳಿಲಿಗೆ ಅದೆಲ್ಲಿ ಒಂದು ದೋರುಗಾಯಿ ಸಿಕ್ಕಿತೋ ಅದನ್ನಷ್ಟು ತಿಂದು ಪುಟಪುಟನೆ ಇನ್ನೊಂದು ರೆಂಬೆಗೆ ಓಡಿತು. ಕೈಕಾಲು ಸೋತಹಾಗಾಗಿ ಬಂದು ಮಂಚದ ಮೇಲೊರಗಿ ಯೋಚನೆಯಲ್ಲಿ ಮುಳುಗಿಹೋದಳು. ಎಷ್ಟು ಹೊತ್ತು ಕಳೆಯಿತೋ… ಮಧ್ಯಾಹ್ನದ ಅಡುಗೆಯೂ ಆಗಿರಬಹುದೇನೋ… ಮಗುವನ್ನು ಹುಡುಕಿಕೊಂಡು ಹೊರಬಂದಳು. ಅಲ್ಲೇ ಮಾವನವರ ಜೊತೆಗೆ ಆಡುತ್ತಿತ್ತು. “ಊಟ ತಿನ್ನಿಸಬೇಕು, ಕೊಡಿ” ಎಂದು ಮಗುವನ್ನು ಎತ್ತಿಕೊಂಡು ಊಟದ ಬಟ್ಟಲನ್ನು ಹಿಡಿದುಕೊಂಡು ಮತ್ತೆ ಕೋಣೆಯನ್ನು ಸೇರಿಕೊಂಡಳು. ಆಗ ಕಂಡ ಹಕ್ಕಿಗಳೆರಡೂ ಮತ್ತೆ ಹುಲ್ಲು, ಕಡ್ಡಿ, ಒಣಗಿದೆಲೆ ಎಲ್ಲವನ್ನು ತೆಗೆದುಕೊಂಡು ಬಂದು, ಮರದ ಕೊಂಬೆಯ ಆಯಕಟ್ಟಿನ ಜಾಗದಲ್ಲಿ ಗೂಡು ಕಟ್ಟುತ್ತಿದ್ದವು. ಮಗುವಿಗೆ ಆ ಹಕ್ಕಿಗಳನ್ನೇ ತೋರಿಸುತ್ತಾ ಊಟ ಮಾಡಿಸಿದಳು. ಮೂತಿಯನ್ನು ತೊಳೆಸಿಕೊಂಡು ಬಂದು ತನ್ನ ಪಕ್ಕದಲ್ಲಿಯೇ ಮಲಗಿಸಿಕೊಂಡು ಮೆತ್ತಗೆ ತಟ್ಟತೊಡಗಿದಳು. ಹಾಗೆಯೇ ಜೋಂಪು…
*
ಮತ್ತೆ ಹಾಲಿನಲ್ಲಿ ಮಾತಿನ ಸದ್ದು. ಓ… ಆಗಲೇ ಸಂಜೆ ಐದು ಗಂಟೆ ಹತ್ತಿರವೇನೋ… ಕಾಫಿಕುಡಿದ ನಂತರದ ಮೀಟಿಂಗ್ ಶುರುವಾಗಿದೆ… ಅಮ್ಮ ಅಳುತ್ತಿರುವ ಸದ್ದು. ಮಾವ “ಅಳ್ಬೇಡೀಮ್ಮಾ… ಅವ್ಳಿಗೂ ತನ್ನ ಮಗುವಿನ ವಾಂಛೆ ಇರಲ್ವೇ. ಖಂಡಿತವಾಗಿ ಒಪ್ಕೋತಾಳೆ. ಎಲ್ಲ ಸರಿ ಹೋಗತ್ತೆ” ಅಮ್ಮನಿಗೆ ಆಶ್ವಾಸನೆ ಕೊಡ್ತಿದ್ರು. “ಸೀನ… ನೀನೇನಂತೀಯೋ. ಇಷ್ಟೆಲ್ಲಾ ನಡೆದ್ರೂ ಬೆಲ್ಲ ಜಜ್ಜಿದ ಕಲ್ಲಿನ ಹಾಗೆ ಕೂತಿದೀಯಲ್ಲೋ…” ಸುಂದರಮ್ಮ ದನಿ ಎತ್ತರಿಸಿದರು. “ನಂಗೇನು ಗೊತ್ತಾಗತ್ತೆ… ಅಪ್ಪ, ನೀವು ಎಲ್ಲಾ ಹೇಗೆ ಹೇಳಿದ್ರೆ ಹಾಗೆ…” ಸೀನ ಪಲುಕಿದ. “ನೋಡಿ.. ನೋಡಿ.. ಈ ದನೀನಂತ ಹುಡುಗನಿಗೆ ಮೋಸ ಮಾಡಕ್ಕೆ ಅವ್ಳಿಗೆ ಹೇಗಾದ್ರೂ ಮನಸ್ಸು ಬಂತೋ…” ಅಳತೊಡಗಿದರು ಸುಂದರಮ್ಮ. “ನೀನು ಸುಮ್ನಿರು ಸುಂದ್ರಾ.. ರಂಪಾಟ ಮಾಡ್ಬೇಡ” ಮಾವನ ಮಾತು. ಈಗ ಅಪ್ಪನ ದನಿ “ಆ ರಂಡೆ ಒಪ್ಕೊಳ್ದಿದ್ರೆ ಬಡಿದು ಬಲಿ ಹಾಕ್ಬಿಡ್ತೀನಿ. ನಾಯೀನ ತೊಗೊಂಡು ಹೋಗಿ ಸಿಂಹಾಸನದ ಮೇಲೆ ಕೂರ‍್ಸಿದ ಹಾಗಾಯ್ತು. ನೀವೇನೂ ಯೋಚ್ನೆ ಮಾಡ್ಬೇಡಿ ರಾಯ್ರೆ. ನಾನಿದೀನಿ. ಕಾಲ್ಮುರುದು ಅವ್ಳು ಮನೆಯಿಂದ ಹೊರಗೆ ಕಾಲಿಡದ ಹಾಗೆ ಮಾಡ್ತೀನಿ”. ಅಮ್ಮನ ಧ್ವನಿ “ಅಷ್ಟು ಮಾಡಿ ಪುಣ್ಯ ಕಟ್ಕೊಳಿ. ಕಾಲ್ಮುರಿದು ಅವ್ಳು ಓಡಾಡಕ್ಕೆ ಆಗ್ದಿದ್ರೂ ನಂಗೆ ಬೇಜಾರಿಲ್ಲ. ಬೇಕಾದ್ರೆ ಇಲ್ಲೇ ಇದ್ದು ಮಗೂನ ನಾನೇ ದೊಡ್ಡದು ಮಾಡ್ಕೊಡ್ತೀನಿ. ಅವ್ಳು ಮನೆ ಬಿಟ್ಟು ಹೋಗ್ದಿದ್ರೆ ಸಾಕಾಗಿದೆ.” ಕೇಳುತ್ತಿದ್ದ ಪದ್ಮನ ಕಣ್ಣಲ್ಲಿ ತಡೆಯಿಲ್ಲದೆ ಕಣ್ಣೀರು ಸುರಿಯತೊಡಗಿತು.
ಪಕ್ಕದಲ್ಲಿದ್ದ ಮೊಬೈಲ್ ಕರೆ ಮಾಡಿತು. ಶ್ರೀಧರ ಹೇಳುತ್ತಿದ್ದ “ನಾನು ಬರ‍್ತಿದೀನಿ. ಹೊರಡುವುದಕ್ಕೆ ತಯಾರಾಗು. ನನಗರ್ಥವಾಗತ್ತೆ ನಿನ್ನ ದ್ವಂದ್ವ ಇರೋದು ಮಗುವಿನ ಬಗ್ಗೆ. ಬಿಟ್ಟು ಬರಕ್ಕೆ ಮನಸ್ಸಿಲ್ಲ; ಕರ‍್ಕೊಂಡು ಬರಕ್ಕೆ ಋಣದ ಭಾರ ಅಂತ. ಬಿಟ್ಟು ಬಾ. ಹೇಗೂ ಇನ್ನೊಂದು ಕುಡಿ ಹೊಟ್ಟೆಯಲ್ಲಿದೆಯಲ್ವಾ. ಅವ್ರಿಗೆ ಬೇಕಾಗಿದ್ದದ್ದು, ಬೇಕಾಗಿರೋದು ಮಗೂನೇ ತಾನೆ. ಅದನ್ನ ಚೆನ್ನಾಗೇ ನೋಡ್ಕೋತಾರೆ. ನಿನ್ನ ಮುಂದಿನ ಜೀವನದ ಬಗ್ಗೆ ಮಾತ್ರ ಯೋಚ್ನೆ ಮಾಡು. ಬಂದ್ಬಿಡು ಪದ್ಮಾ”. “ನಂಗೆ ಏನು ತೀರ್ಮಾನಕ್ಕೂ ಬರಕ್ಕಾಗ್ತಿಲ್ಲ. ಆದ್ರೂ ನೀನು ಹೇಳೋದೇ ಸರಿಯೇನೋ… ಆದ್ರೆ ನೀನು ಮನೆಗೆ ಬರ‍್ಬೇಡ. ಗಣಪತಿ ದೇವಸ್ಥಾನದ ಕಟ್ಟೆ ಮೇಲೆ ಕಾದಿರು. ಇನ್ನರ್ಧ ಗಂಟೆಯಲ್ಲಿ ಅಲ್ಲಿಗೇ ಬರ‍್ತೀನಿ” ಎಂದವಳೇ ಒಂದು ಸಣ್ಣ ಸೂಟ್ಕೇಸಿನಲ್ಲಿ ಒಂದೆರಡು ಬಟ್ಟೆಗಳನ್ನು, ಸಾಮಾನುಗಳನ್ನು ಇರಿಸಿಕೊಂಡಳು. ಮಲಗಿದ್ದ ಮಗುವನ್ನು ಕಡೆಯ ಬಾರಿಗೆಂಬಂತೆ ನೋಡಿದಳು. ತಾನಾಗೇ ಉರುಳಿದ ಕಣ್ಣೀರನ್ನು ಒರಸಿಕೊಂಡು ಕೋಣೆಯ ಬಾಗಿಲು ತೆಗೆದು ಹೊರಗೆ ಬಂದಳು. ಎಲ್ಲರ ಕಣ್ಣುಗಳೂ ಅವಳೆಡೆಗೆ ತಿರುಗಿದವು. ವೆಂಕಟೇಶಯ್ಯನವರ ಮುಖವನ್ನೇ ನೇರವಾಗಿ ನೋಡುತ್ತಾ “ನಾನು ಹೊರಡ್ತಿದೀನಿ ಮಾವ. ಮಗು ಮಂಚದ ಮೇಲೆ ಮಲಗಿದೆ. ಸೂಟ್ಕೇಸಿನಲ್ಲಿ ಒಂದಿಷ್ಟು ಬಟ್ಟೆಗಳನ್ನು ಮಾತ್ರ ಇಟ್ಕೊಂಡಿದೀನಿ. ಒಡವೆ, ದುಡ್ಡು ಏನನ್ನೂ ತೊಗೊಂಡು ಹೋಗ್ತಿಲ್ಲ. ಬೇಕಾದ್ರೆ ನನ್ನ ಸೂಟ್ಕೇಸನ್ನ ನೋಡಿ ಕೊಡಿ” ಸೂಟ್ಕೇಸನ್ನು ಅವರ ಮುಂದಿಟ್ಟಳು. “ನೋಡಮ್ಮಾ ಒಂದ್ಸಲ ನೀನು ಮನೆಯಿಂದ ಹೊರಗೆ ಕಾಲಿಟ್ರೆ ಮತ್ತೆ ಒಳಗೆ ಬರಕ್ಕಾಗಲ್ಲ. ಇನ್ನೊಂದು ಸಲ ಯೋಚ್ನೆ ಮಾಡಿ ನೋಡು. ನಿಂಕೈಲಿ ಮಗೂನ ಬಿಟ್ಟಿರಕ್ಕಾಗತ್ತಾ” ವೆಂಕಟೇಶಯ್ಯ ಕೇಳಿದರು. “ಬಿಟ್ಟಿರೋದು ಕಷ್ಟ ಅಂತ ನಂಗೂ ಗೊತ್ತು ಮಾವ. ಆದ್ರೆ ನಂಗೆ ಋಣದ ಭಾರದಿಂದ ಮುಕ್ತಿ ಬೇಕು. ದಿನವೂ ಅವಮಾನ, ಅನುಮಾನ ನುಂಗ್ತಾ ನಂಗಿಲ್ಲಿ ಬದಕಕ್ಕೆ ಸಾಧ್ಯ ಇಲ್ಲ. ನಂಗೆ ಬಿಡುಗಡೆ ಬೇಕು. ನಾನು ಹೋಗ್ತಿದೀನಿ” ಸೂಟ್ಕೇಸನ್ನು ಕೈಗೆತ್ತಿಕೊಂಡಳು.
ರಮಣ ಮೂರ್ತಿಗಳಿಗೆ ಪಿತ್ತ ನೆತ್ತಿಗೇರಿ ಧಡಕ್ಕನೆ ಎದ್ದು ನಿಂತು “ಸೂಳೆ ಮುಂಡೆ. ಈ ಮನೆಯಿಂದ ಹೊರಗೆ ಕಾಲಿಡ್ತೀಯಾ? ಕೊಂದುಬಿಡ್ತೀನಿ ನಿನ್ನ… ನಿನ್ಕೊಂದ್ರೂ ನಂಗೆ ಪಾಪ ಬರಲ್ಲ. ಅದ್ಹೇಗೆ ಹೋಗ್ತೀಯಾ ನೋಡ್ತೀನಿ” ಎನ್ನುತ್ತಾ ಅವಳ ಕೂದಲಿಗೆ ಕೈಹಾಕಿದರು. “ನೀನು ನನ್ನನ್ನ ಮಾರಿಕೊಂಡಾಗಿದೆ. ಈಗ ನನ್ಮೇಲೆ ನಿಂಗೆ ಯಾವ ಅಧಿಕಾರಾನೂ ಇಲ್ಲ. ಮರ್ಯಾದೆಯಾಗಿ ಕೈಬಿಟ್ರೆ ಸರಿ. ಇಲ್ದಿದ್ರೆ…” ದುರುಗುಟ್ಟಿ ನೋಡಿದಳು. “ಏನೇ… ಏನೇ ಮುಂಡೆ ಏನೇ ಮಾಡ್ತೀಯಾ ನೀನು” ಕಣ್ಣಿಂದ ಉರಿಕಾರುತ್ತಾ ಕೇಳಿದರು. ಇನ್ನು ತಡೆಯಲಾಗದೆ ಅವರ ಇನ್ನೊಂದು ಕೈಯನ್ನು ಬಲವಾಗಿ ಕಚ್ಚಿದಳು. ಇದನ್ನು ನಿರೀಕ್ಷಿಸದಿದ್ದ ರಮಣಮೂರ್ತಿ ʻಅಯ್ಯಯ್ಯೋ…ʼ ಕೂಗಿಕೊಂಡು ಕೈಬಿಟ್ಟರು. “ಇನ್ನೊಂದು ಸಲ ಕೈ ಮಾಡಿದ್ರೆ ಹುಶಾರ್” ಎಂದವಳ ಕೆನ್ನೆಗೆ ಹೊಡೆಯಲು ಮತ್ತೆ ಕೈಯೆತ್ತಿದರು. ಎತ್ತಿದ ಕೈಯನ್ನು ಇಳಿಸಿ “ನಿಮ್ಮಿಬ್ರನ್ನ ಅಪ್ಪ ಅಮ್ಮಾಂತ ಹೇಳಕ್ಕೂ ನಂಗೆ ಅಸಹ್ಯವಾಗ್ತಿದೆ. ಇನ್ನು ನನ್ನ ದಾರಿ ನಂದು. ಅಡ್ಡ ಬಂದ್ರೆ ಸುಮ್ನಿರಲ್ಲ” ಎನ್ನುತ್ತಾ ಅವರನ್ನು ಹಿಂದೆ ನೂಕಿ ಸೂಟ್ಕೇಸನ್ನು ಕೈಗೆತ್ತಿಕೊಂಡು ಹೊರಟಳು. “ಅಯ್ಯೋ ಹುಟ್ಸಿದ ಅಪ್ಪ ಅಮ್ಮಂಗೇ ಹೀಗಂತಾಳಲ್ಲೋ… ಹೊಟ್ಟೇಲಿ ಹುಟ್ಟಿದ ಮಗೂನೇ ಬಿಟ್ಟು ಹೋಗೋಂತ ಕಟಕೀನಲ್ಲೋ ಇವ್ಳು. ಇಷ್ಟು ದಿನ ಎಷ್ಟು ಮಳ್ಳಿ ಹಂಗಿದ್ಲಲ್ಲೋ… ಇವ್ಳು ಹೀಗೇಂತ ಗೊತ್ತೇ ಆಗ್ಲಿಲ್ವಲ್ಲೋ ಅಣ್ಣಾ….” ಸುಂದರಮ್ಮ ಅರಚಿಕೊಳ್ತಾನೇ ಇದ್ದದ್ದು ಗೇಟು ದಾಟುವಾಗಲೂ ಕೇಳುತ್ತಿತ್ತು. ʻಮಗು ಎದ್ದು ಅತ್ತರೆ…ʼ ಒಂದು ಕ್ಷಣ ಕಾಲು ತಡೆಯಿತು… ಮರುಕ್ಷಣವೇ ಓ ಅಲ್ಲಿ ಶ್ರೀಧರ ಆಗಲೇ ಕಾಯುತ್ತಾ ತುಂಬಾ ಹೊತ್ತಾಗಿರಬಹುದು ಎನ್ನಿಸಿ ಸರಸರ ಹೆಜ್ಜೆ ಹಾಕಿದಳು…
**************************
ಧನ್ಯವಾದಗಳು ಮದುಸೂಧನ್ ಸರ್
ತನ್ನ ಮಗನ ಮಗನಲ್ಲ ಅಂತ ತಿಳಿದು ಆ ಮಗುವಿನ ಮೇಲೆ ಕೊನೆಯ ತನಕ ಪ್ರೀತಿ ಇರಬಹುದೇ?
ಆದರೂ ಪದ್ಮಾಳ ಮಾನಸಿಕ ತೊಳಲಾಟ ಚೆನ್ನಾಗಿ ಮೂಡಿಬಂದಿದೆ.
ಭೇಷ್!!! ಮುಕ್ತಾಯ ಸರಿಯಾಗಿದೆ. ಕದ್ದು ಮುಚ್ಹು ಹೋಗದೇ ಎಲ್ಲರೆದಿರು ರಾಜಾರೋಷವಾಗಿ ಹೋಗಿದ್ದೇ ಸರಿ.
ಒಳ್ಳೆಯ ಕತೆ ಓದಿಸಿದಕ್ಕೆ ಧನ್ಯವಾದಗಳು ವಾಣಿ ಅಕ್ಕಾ.
ಯಾವುದೇ ಮಗುವಿಗೆ, ತಂದೆ – ತಾಯಿ ದೇವರು. ಕಥೆಯಲ್ಲಿ ಹೆಣ್ಣು ಮಗಳು, ತನ್ನ ಹೆತ್ತವರ ನಂಬಿ ಮದುವೆಯಾಗಿ, ಒಬ್ಬ ಮಾಂಸದ ಮುದ್ದೆಯಂತಹ ಗಂಡನ ಜೊತೆ ಬದುಕಲು ತಳ್ಳಲ್ಪಟ್ಟಳು. ಆದರೂ ತನ್ನ ಪಾಲಿನ ಬದುಕನ್ನು ಮೂಕಳಾಗಿ ನಡೆಸುತ್ತಾ, ತನ್ನ ಮಾವನೇ ಹೆಣೆದ ಬಲೆಯಂತೆ, ವಯೋಸಹಜವಾಗಿ ಪರಪುರುಷನ ಸಂಗದಲ್ಲಿ ಕುಲಕ್ಕೆ ಮಗುವೊಂದ ಹಡೆದಳು. ಬದುಕಿನ ಭಾಗವಾಗಬೇಕಿದ್ದ ಸುಖ – ಸಂತೋಷ, ಅವಳ ಪಾಲಿಗೆ ಮಗು ಹೇರಲು ನಿಮಿತ್ತ ಮಾತ್ರ.
ನಂತರದ ಕೌಟುಂಬಿಕ ಚಿತ್ರಣ ಘೋರ.
ತನ್ನ ಶೋಷಣೆ ಮಾಡಿದವರೆಲ್ಲರನ್ನೂ ಮೌನವಾಗಿ ಸರಿಸಿ, ದೃಢ ಮನಸ್ಸಿನಿಂದ ಹೊಸ ಬದುಕಿಗೆ ಹೊರಟಳು.
ಶ್ರೀಧರನನ್ನು ಬಹಳ ಮೆಚ್ಚಬೇಕು. ಇವರಂತೆ ಸ್ವಾರ್ಥ ತೋರದೆ, ನಿಷ್ಕಪಟ ಪ್ರೇಮ ಸಾರಿದ.
ಪದ್ಮ… ಕೆಸರಿಂದ ಹೊರಟು ಶ್ರೀಧರನ (ಹರಿ)ಸೇರಿದಳು.
ಎಲ್ಲರೂ ಕೆಸರು ನೀಡಿದರು. ಕೆಸರು ನೀಡಿದವರಿಗೆ ಸಕ್ಕರೆ ಉಳಿಸಿ, ಆಕೆ ಪದ್ಮವಾಗಿ ಎಲ್ಲಿ ಸೇರಬೇಕೊ, ಅಲ್ಲಿ ಸೇರಿದಳು.
ನೆನಪಲ್ಲಿ ಉಳಿವ ಛಾಪು ಉಳಿಸುವ ಕಥೆ.
ಪದ್ಮಳ ನಿರ್ಧಾರ ಊಹಿಸಿದಂತೆಯೇ ಆಗಿದೆ. ಹೆಣ್ಣಿನ ಆತ್ಮಸಮ್ಮಾನ ವನ್ನು , ಅವಳಿಗೂ ದೇಹದ ಭಾವನೆಯಸಾಂಗತ್ಯದ ಅಗತ್ಯ ವಿರುತ್ತದೆ ಎಂಬುದನ್ನು ಲೇಖಕಿ ಚೆನ್ನಾಗಿ ಎತ್ತಿ ತೋರಿದ್ದಾರೆ.
ವೆಂಕಟೇಶಯ್ಯನವರ ನೀಚತನ, ಸ್ವಾರ್ಥದ ಸುಳಿವು ತಂದೆ ತಾಯಿಗಳಿಗೂ ತಿಳಿಯದೇ ಹೋದದ್ದು ದುರಂತ. ದುಡ್ಡು ಏನೆಲ್ಲಾ ಮಾಡಿಸತ್ತಲ್ಲಾ!!
ನೀಳ್ಕತೆ ಮನೋವೈಜ್ಞಾನಿಕ ವಾಗಿ ಹೆಣ್ಣಿನ ತಳಮಳ,ವಂಶ ಕುಡಿಗಾಗಿ ಹೆಣೆದ ಜಾಲಸಿಕ್ಕು ಬಳಲಿಲ ಮನಸ್ಸು,ಶ್ರೀ ಧರನ ವಿಶಾಲ ಮನೋಭಾವ ,ಎಲ್ಲವೂ ಸುಂದರವಾಗಿ ನಿರೂಪಣೆ ಮಾಡಿದ ಲೇಖಕರಿಗೆ ಅಭಿನಂದನೆಗಳು