ಹೊಂಗೆ ನೆರಳು

ಪುಸ್ತಕ ಸಂಗಾತಿ

ಹೊಂಗೆ ನೆರಳು  ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನ

ಪುಸ್ತಕ ಪರಿಚಯ

ಹೊಂಗೆ ನೆರಳು  ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನ

ಸಂಪಾದಕರುಶ್ರೀ ರಾಮು ಎನ್ ರಾಠೋಡ ಮಸ್ಕಿ

 ಮೊ.ನಂ ೯೭೩೯೯೫೯೧೫೧

ಪ್ರಕಾಶಕರು..ಹೆಚ್ ಎಸ್ ಆರ್ ಪ್ರಕಾಶನ

ಬೆಂಗಳೂರುಮೊ.೭೮೯೨೭೯೩೦೫೪

ಶ್ರೀ ರಾಮು ಎನ್ ರಾಠೋಡ ಮಸ್ಕಿ ಇವರು ವೃತ್ತಿಯಿಂದ ಕೆ ಪಿ ಟಿ ಸಿ ಎಲ್  ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಉತ್ತಮ ಬರಹಗಾರರು ,ಕವಿಗಳು ,ಗಜಲ್ ಕಾರರು,ಸಂಘಟನಾಕಾರರು ಆಗಿದ್ದು ಕವಿವೃಕ್ಷ ಬಳಗ ರಾಯಚೂರು ಜಿಲ್ಲಾಧ್ಯಕ್ಷರಾಗಿ ಅತ್ಯಂತ ಉತ್ಸಾಹ ದಿಂದ ಕ್ರಿಯಾ ಶೀಲರಾಗಿ ತಾಲೂಕಾ ಮಟ್ಟದಲ್ಲಿ ಕವಿವೃಕ್ಷ ಬಳಗ ವನ್ನು ಸ್ಥಾಪಿಸಿ ಎಲೆಯಮರೆಯ ಯುವ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಮಟ್ಟದ ಕವಿಗೋಷ್ಠಿಗಳನ್ನು ಆಯೋಜಿಸಿ ಹೊಸ ಹೊಸ ಕೃತಿಗಳನ್ನು ಲೋಕಾರ್ಪಣೆ ಕಾರ್ಯಕ್ರಮ ಗಳನ್ನು ಮಾಡುತ್ತಾ ಬಂದಿದ್ದಾರೆ.ಈಗ ಹೊಂಗೆ ನೆರಳು ಎಂಬ ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನಕ್ಕೆ ಸಂಪಾದಕರಾಗಿ ಕೃತಿ ಪ್ರಕಟಿಸಿ ಲೋಕಾರ್ಪಣೆ ಮಾಡಿ ಓದುಗರ ಕೈಗೆ ಇಟ್ಟಿದ್ದಾರೆ.

     ಹೊಂಗೆ ನೆರಳು ಕೃತಿಯ ಶೀಷಿ೯ಕೆ ಓದಿದ ತಕ್ಷಣ ನೆನಪಾಯಿತು ಬೇಂದ್ರೆ ಯವರ ಯುಗಾದಿ ಕವಿತೆಯ ಸಾಲು,”ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಮತ್ತೆ ಕೇಳ ಬರುತಿದೆ” ಚೈತ್ರದ ಬಿಸಿಲು ಚಿಗುರಿ ಹಸಿರಾದ ಹೊಂಗೆ ಮರದ ನೆರಳಿಗೆ ದಣಿದ ಜೀವ ಮಲಗಿದಾಗ ಮರದಲಿ ಅರಳಿದ ಹೊಂಗೆ ಹೂ ಗಳ ಘಮ ಆಘ್ರಾಣಿಸಿ  ಕಣ್ಣು ಮುಚ್ಚಿ ಭೃಂಗಗಳ ಸಂಗೀತ ಆಸ್ವಾದಿಸಿದಾಗ ಮನವು ಸಂಭ್ರಮಿಸಿ ಪರವಶಕೊಳ್ಳುತ್ತದೆ .ಅದರಂತೆ ಓದುಗ ಗಜಲ್ ಗಳ ಒಳ ಹೊಕ್ಕಾಗ  ಗಂಧವು ಆತ್ಮಕ್ಕೆ ಪೂಸಿಸಬೇಕು ಅದು ಎಲ್ಲಾ ಮಗ್ಗಲಿನಿಂದ ಗ್ರಹಿಸಿ ಆತ್ಮ ವನ್ನು ಆವರಿಸಿ ಸಂದಾನಕ್ಕೆ ಇಳಿಯಬೇಕು.ಆ ಗಜಲ್ ದಲ್ಲಿರು ಮಧುರ ,ಮೃದು ಗೇಯತೆ ಲಾಲಿತ್ಯ ಭಾವ ತೀವ್ರತೆ ಓದುಗನನ್ನು ಮಂತ್ರ ಮುಗ್ಧವಾಗಿಸಿ ತನ್ನಲ್ಲಿಯೇ ತಾ ಗುನ್ ಗುನಾಯಿಸುವಂತೆ ಮಾಡಬೇಕು, ನವಿರಾದ ಭಾಷೆ ಸ್ವಾತಿಕ ಸ್ವಾದ ಓದುಗರಿಗೆ ನೀಡಬೇಕು.ಗಜಲ್ ಗಳಲ್ಲಿ ನಿರಾಕಾರನೊಂದಿಗೆ ಸಂವಾದಿಸುವ ಸತ್ವ ತುಂಬಿರುತ್ತದೆ.

   ಪ್ರೀತಿ ,ಪ್ರೇಮ ವಿರಹ ಸಂದಾನಗಳು ಗಜಲ್ದ ಸ್ಥಾಯಿ ಗುಣವಾಗಿದ್ದರೂ ಅದರ ಜೊತೆಗೆ ಈಗ ಸಮಾಜಿಕ ಗಜಲ್ ಗಳು ರಚನೆ ಯಾಗುತ್ತಿವೆ.ಸಮಾಜದ ವಾಸ್ತವಿಕ ಸ್ಥಿತಿಗೆ ಕವಿ ಸ್ಪಂದಿಸಿ ಓರೆ ಕೋರೆಗಳನ್ನು ತಿದ್ದಲು ಗಜಲ್ ರಚನೆಯು ಆಗುತ್ತಿವೆ.. ಸುಕೋಮಲ ವಾದ  ಮಧುರ ಮೃದು ಶಬ್ದಗಳಲ್ಲಿ ಲಯ ಗೇಯತೆ ಯಿಂದ ಗಜಲ್ ರಚನೆ ಆದರೆ ಹಾಡಲು ಚಂದ,ಗಜಲ್ ಒಂದು ಹಾಡು ಗಬ್ಬ ವಾಗಿದ್ದು ಹಾಡಿದಾಗ ಅದರ ತೀವ್ರತೆ ಹೃದಯವನ್ನು ತಟ್ಟುತ್ತದೆ.ಅದಕ್ಕಾಗಿ ಭಾವತೀವ್ರತೆ ಯಿಂದ ಹಾಡಲು ಬರುವಂತಹ ಗಜಲ್ ಗಳನ್ನು ರಚಿಸಿದರೆ ಅವು ಬಹುಕಾಲ ಜನಮನದಲ್ಲಿ ನಿಲ್ಲುತ್ತವೆ.

        ಪ್ರೀತಿ ಎಂದರೆ ಏನೆಂದು ವ್ಯಾಖ್ಯಾನಿಸಲು ಬರುವುದಿಲ್ಲವೋ ಅದೇ ರೀತಿ ಗಜಲ್ ಅಂದರೇನೆಂದು ವ್ಯಾಖ್ಯಾನಿಸುವುದು ಕಷ್ಟ.ಅವರವರ ಭಾವಕ್ಕೆ ಅವರವರ ಭಕ್ತಿಗೆ ನಿರಾಕಾರನಾದ ಭಗವಂತನು ಕಾಣಿಸಿಕೊಳ್ಳುವಂತೆ ಅದೇ ರೀತಿ ಯಾಗಿ ಗಜಲ್ ಸಾಹಿತ್ಯ ಓದುಗರ ಗ್ರಹಿಕೆಯಂತೆ ಹೊಳಪುಗಳನ್ನು ತೋರಿಸುವ ಸುಂದರವಾದ ಕಾವ್ಯ ಸಾಹಿತ್ಯ ವಾಗಿದೆ.

        ಹೊಂಗೆ ನೆರಳು ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನದಲ್ಲಿ  ೪೮ ಗಜಲ್ ಕಾರರ ೭೪ ಗಜಲ್ ಗಳಿದ್ದು ಹಿರಿಯ ಕಿರಿಯ ಸಮಕಾಲಿನ ಗಜಲ್ ಕಾರರ ಉತ್ತಮ ಗಜಲ್ ಗಳಿವೆ. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ” ಎಂಬಂತೆ ಈ ಸಂಕಲನದಲ್ಲಿ ನುರಿತ ಗಜಲ್ ಕಾರರ ಗಜಲ್ ಗಳ ಜೊತೆಗೆ ಯುವ ಉತ್ಸಾಹಿ ಬರಹಗಾರರ ಗಜಲ್ಗಳು ಇವೆ. ಯುವ ಬರಹಗಾರರು ವಯೋಸಹಜತೆ ಅನುಗುಣವಾಗಿ ಪ್ರೀತಿ ,ಪ್ರೇಮ,ವಿರಹ,ಪ್ರಣಯಗಳ ಜೊತೆಗೆ ಸಾಮಾಜಿಕ ವರ್ತಮಾನದ ತಲ್ಲಣಗಳ ಬಗ್ಗೆ ಗಜಲ್ ಗಳನ್ನು ರಚಿಸಿದ್ದಾರೆ. ಯುವ ಬರಹಗಾರರು ಉತ್ಸಾಹ ದಿಂದ ಗಜಲ್ ಗಳನ್ನು ರಚಿಸಿದ್ದಾರೆ ನಿಜ ,ಆದರೂ ಅವರು ತಮ್ಮ ಓದುವ ಹವ್ಯಾಸ ವನ್ನು ಹೆಚ್ಚಿಸಿಕೊಂಡರೆ ಇನ್ನೂ ಉತ್ತಮವಾದ ಗಜಲ್ ಗಳನ್ನು ಬರೆಯಲು ಸಾಧ್ಯ ವೆಂದು ನನ್ನ ಅನಿಸಿಕೆ.ಗಜಲ್ ರಚನೆಯಲ್ಲಿ ಅದರದೇ ಆದ ಛಂದಸ್ಸು ಜೊತೆಗೆ ಭಾವತೀವ್ರತೆ ಮತ್ತು ರೂಪಕ ,ಪ್ರತಿಮೆ ಗಳನ್ನು ಬಳಿಸಿ ಗಜಲ್ ರಚಿಸಿದಾಗ ಗಜಲ್ ಕಾವ್ಯ ಸುಂದರವಾಗುತ್ತದೆ.

          ಹೊಂಗೆ ನೆರಳು ಗಜಲ್ ಸಂಕಲನಕ್ಕೆ ನಾಡಿನ ಹೆಸರಾಂತ ಗಜಲ್ ಕಾರರಾದ ಅಲ್ಲಾಗಿರಿರಾಜ್ ಕನಕಗಿರಿ ಯವರು ಮುನ್ನುಡಿ ಬರೆದಿದ್ದಾರೆ. ಇದರ ಜೊತೆಗೆ ಜಿಲ್ಲೆಯ ಅನೇಕ ಗಜಲ್ ಕಾರರು ತಮ್ಮ ಅನಿಸಿಕೆಗಳನ್ನು ಬರೆದು ಸಂಕಲನದ ಬಗ್ಗೆ ತಮ್ಮ ಮೆಚ್ಚುಗೆಯನ್ನು ತಿಳಿಸಿದ್ದಾರೆ.ಇದರಿಂದ ಸಂಕಲನದ ಮೌಲ್ಯ ಹೆಚ್ಚಾಗಿದೆಂದು ಹೇಳಬಹುದು.

ನನ್ನ ಓದಿಗೆ ದಕ್ಕಿದ ಕೆಲವು ಗಜಲ್ ಗಳ ಮಿಸ್ರಾ ಗಳು

 ಕತ್ತಲೆಯ ಗೂಡಲಿ ಉಳಿದು ಉಸಿರು ಗಟ್ಟುತ್ತಿದೆ ನನಗೆ

* ಬೆಳಗಲಿ ಉದಯಿಸುವ ಸೂರ್ಯ ಕಿರಣ ನೋಡಲು ಬಿಡು* (ಗಜಲ್ ೩೮)

ಮೇಲಿ ಮಿಸ್ರಾ ದಲ್ಲಿ ಗಜಲ್ ಕಾರರು ಜಗದ ಅಜ್ಞಾನ ದ (ಕತ್ತಲೆ) ಕೂಪದಲ್ಲಿ ಇದ್ದು ಉಸಿರು ಗಟ್ಟುತ್ತಿದೆ,ಜ್ಞಾನದ ಬೆಳಕನ್ನು ಪಡೆಯಬೇಕಾಗಿದೆ  ನನ್ನನ್ನು ಬಂದಿಸ ಬೇಡ ವೆಂದು ಆತ್ಮ ಸಂಗಾತಿ ಯೊಂದಿಗೆ ಸಂವಾದಿಸುತ್ತಾನೆ.ಮನುಷ್ಯನು ಆಚರಿಸುವ ಮೂಢ ನಂಬಿಕೆಗಳಿಂದ,ಅಜ್ಞಾನ ದಿಂದ ಹೊರಬರಲು ಚಡಪಡಿಸುವ ತೀವ್ರಭಾವ ಗಜಲ್ ದಲ್ಲಿ ಎದ್ದು ಕಾಣುತ್ತದೆ.

ಕಳೆದು ಹೋದ ರಾತ್ರಿ ಕನಸು ಮರೆತು ಹೋದರೇನು

ಹೊನ್ನ ಬೆಳೆದಿಂಗಳನ್ನು ಸವಿಯೋಣ ಬಾ (ಗಜಲ್ )

ಮೇಲಿನ ಮಿಸ್ರಾ ದಲ್ಲಿ ಕವಿ ಜೀವನದಲ್ಲಿ ಕಳೆದ ಕಲ್ಪನೆಯ  ಸುಂದರ ದಿನಗಳು ಮರೆತು ಹೋದರೇನಾಯಿತು  ನಮ್ಮ ಮುಂದಿರುವ ವಾಸ್ತವಿಕ ಬಗ್ಗೆ ಯೋಚಿಸಿ ಸುಖ ಪಡೆಯೋಣ ಬಾ ಎಂದು ಆಶಾದಾಯಕದ  ನುಡಿಯನ್ನು ಬಾಳ ಸಂಗಾತಿಗೆ ಹೇಳುತ್ತಾರೆ.

ಮಾತೆಕೋ ಮೌನವಾಗಿದೆ ಅವಳು ಬಾರದೆ ಇಂದು

ಮನವೇಕೋ ನೊಂದಿದೆ ಇನಿಯಳು ಕಾಣದೆ ಇಂದು (ಗಜಲ್ ೧೨)

ಮೇಲಿನ ಮತ್ಲಾದಲ್ಲಿ ಕವಿ ತನ್ನ ಪ್ರಿಯೆತಮೆಯ ಬರುವನ್ನು ಕಾಯುತ್ತಿದ್ದಾರೆ.ಅವಳಿಲ್ಲದೆ ಮಾತುಗಳು ಬಾರದೆ ಹೃದಯ ಮೌನವಾಗಿದೆ. ಮನವು ನೊಂದು ಬೆಂದು ಅವಳ ಬರುವಿಗಾಗಿ ಕಾಯುತ್ತಾ ಚಡಪಡಿಸುತಿದೆ  ಇಂದು ಎಂದು ಹೇಳುತ್ತಾ ವಿರಹಿಗಳ ಮಾನಸಿಕ ಸ್ಥಿತಿ ಯನ್ನು ಗಜಲ್ ದಲ್ಲಿ ವ್ಯಕ್ತ ಪಡಿಸಿದ್ದಾರೆ.

ಚೆಂದದ ಚೆಲುವೆಯು ಮನಸನು ಕದಿಯಲು ಬಂದಿಹಳು

ಪ್ರೀತಿಯ ಗೈಯಲು ತೋಳಲಿ ಬಂಧಿಸಲು ಬಂದಿಹಳು ( ಗಜಲ್ ೨೧)

ಮೇಲಿನ ಮತ್ಲಾದಲ್ಲಿ ಪ್ರಿಯತಮ ತನ್ನ ಪ್ರೇಯಸಿಯ ಚೆಲುವನ್ನು ವಣಿ೯ಸುತ್ತಾ ನನ್ನ ಹೃದಯ ವನ್ನು ಕದಿಯಲು ಬಂದ ಕಳ್ಳಿ,ಪ್ರೀತಿಮಾಡುತ್ತಾ ತನ್ನ ಕೋಮಲವಾದ ತೋಳಿನಲ್ಲಿ ನನ್ನನ್ನು ಬಂಧಿಸಲು ಬಂದಿರುವಳೆಂದು ಹೇಳುತ್ತಾ ಗಜಲ್ ದಲ್ಲಿ ಅವಳು ತನ್ನ ಬಾಳಲ್ಲಿ ವಸಂತ ಗೀತೆ ಹಾಡುತ್ತಾ ಅಮೃತವನ್ನು ಉಣಿಸಲು ಬಂದಂತ ದೇವಲೋಕದ ಅಪ್ಸರೆ ಎಂದು ತನ್ನ ಪ್ರಿಯೆತಮೆ ಯನ್ನು ಭಾವನಾತ್ಮಕ ವಾಗಿ ವಣಿ೯ಸಿದ್ದಾರೆ.

ಎದೆ ತುಂಬ ಕಾಡುವ ನೆನಪುಗಳು ಎಲ್ಲಿ ಬಚ್ಚಿಡಲಿ

ಬಣ್ಣ ಬಣ್ಣಕ್ಕೆ ತಿರುಗುವ ರೆಕ್ಕೆಗಳು ಎಲ್ಲಿ ಬಚ್ಚಿಡಲಿ (ಗಜಲ್ ೩೪)

ಮೇಲಿನ ಮತ್ಲಾದಲ್ಲಿ ಕವಿ ಮನದಲ್ಲಿ ಕಾಡುವ ಕೊರೆಯುವ ಹಳೆಯ ನೆನಪುಗಳನ್ನು ಹೇಗೆ ಮರೆಯಲಿ ಎಲ್ಲಿ ಬಚ್ಚಿಡಲಿ ಅವುಗಳನ್ನು ಎಂದು ಹೇಳುತ್ತಾ ಕ್ಷಣ ಕ್ಷಣಕ್ಕೆ ಬದಲಾಗುವ  ಬಣ್ಣ ಬಣ್ಣದ ಕನಸುಗಳನ್ನು (ರೆಕ್ಕೆಗಳು)ಎಲ್ಲಿ ಬಚ್ಚಿಡಲಿ ಎಂದು ತನ್ನ ಪ್ರಿಯತಮೆಗೆ ಹೇಳುತ್ತಾನೆ ಅವಳೊಂದಿಗೆ ಕಳೆದ ದಿನಗಳನ್ನು ಹೇಗೆ ಮರೆಯಲೆಂಬ ಚಡಪಡಿಕೆಯು ಈ ಗಜಲ್ ದಲ್ಲಿ ಎದ್ದು ಕಾಣುತ್ತದೆ.

ಅದೆಷ್ಟೋ ಉಳಿದ ಎದೆಯ ಮಾತಿಗೆ ದನಿ ಬೇಕಿದೆ

ದೂರಾದ ಜೀವವು ಪ್ರೀತಿಗೆ ಸೋತು ಬರಬೇಕಿದೆ (ಗಜಲ್ ೪೭)

ಮೇಲಿನ ಮತ್ಲಾದಲ್ಲಿ ಗಜಲ್ ಕಾತಿ೯ಯು ತನ್ನ ಪ್ರಿಯಕರನ ಬರುವಿಗಾಗಿ  ಕಾಯುತ್ತಾ ನೀನಿಲ್ಲದೆ ನನ್ನ ಮನದ ಮಾತುಗಳು ಎದೆ ಆಳದಲ್ಲಿ ಉಳಿದಿವೆ,ನೀ ಬಂದು ಅವುಗಳಿಗೆ ದನಿಯಾಗ ಬೇಕಾಗಿದೆಂದು ಹೇಳುತ್ತಾ ,ನೀನು ಎಷ್ಟೇ ದೂರ ಇದ್ದರೂ ನನ್ನ ಶುದ್ಧ ವಾದ ಪ್ರೀತಿಗೆ ನೀನು ತಲೆಬಾಗಿ ಬರಲೇಬೇಕೆಂದು ಹಂಬಲುಸುತ್ತಾ ಪ್ರಿಯಕರನ್ನು ಆಹ್ವಾನಿಸುತ್ತಾ ಅವನ ಆಗಮನದ ನಿರೀಕ್ಷೆ ಯಲ್ಲಿ ಹಗಲು ರಾತ್ರಿ ಯನ್ನದೆ ತೆರೆದ  ಕಣ್ಣಿನಿಂದ  ನಿದ್ದೆ ಮಾಡದೆ ಹುಡುಕುತ್ತಿದ್ದಾಳೆ.ಇದು ವಿರಹದಲ್ಲಿ ಪ್ರಿಯತಮನನ್ನು  ಹುಡುಕಾಡುವ  ಗಜಲಾಗಿದೆ.

* ನೂರು ನೋವುಗಳ ಸಂತೆ ಮನಕೆ ಅಂಟಿರಲು*

* ಬಟ್ಟಲಿನ ಒಡಲಲಿ ತುಸು  ಒಲವಿನ ನಶೆಯಲ್ಲ ಸಾಕಿ*(ಗಜಲ್ ೫೫)

ಮೇಲಿನ ಮಿಸ್ರಾ ದಲ್ಲಿ ಕವಿ ತನ್ನ ಮನದ ನೋವು ಸಾಕಿ ಯೊಂದಿಗೆ ಹಂಚಿಕೊಳ್ಳುತ್ತಾನೆ.ಮನಸಿನಲ್ಲಿ ನೂರು ನೋವುಗಳ ಸಂತೆ ನಡೆದಿದೆ ಅವು ಕರಳಿಗೆ ಅಂಟಿಕೊಂಡಿವೆ.ಹೃದಯ ಬಟ್ಟಿಲು ಬರಿದಾಗಿದೆ ಮರುಭೂಮಿ ಯಾಗಿ ಬಿರಿದಿದೆ,ಪ್ರೀತಿಯ ಮಳೆ ಇಲ್ಲದೆ ಒಣಗಿದೆ ನಿನ್ನೊಲವಿನ ಗುಟುಕು ಕುಡಿಯದೆ ಬದುಕಿನಲ್ಲಿ ಒಲವಿನ ನಶೆ ಎಲ್ಲಿಂದ ಬರಬೇಕೆಂದು ಸಾಕಿಯನ್ನು ಪ್ರಶ್ನಿಸುತ್ತಾ ಪ್ರಿಯೆತಮೆಯ ಪ್ರೇಮ ಇರದ ಬದುಕಿಗೆ ನೆಲೆ  ಎಲ್ಲೆಂದೆ ಎಂದು ಹಲಬುವ ಗಜಲ್ ಇದು.

ಇಂತಹ ಪ್ರೀತಿಯ ಕನವರಿಕೆಯ ಮತ್ತು ವಿರಹದ ನೋವಿನ ಗಜಲ್ ಗಳು ಈ ಸಂಕಲನದಲ್ಲಿ ಸಾಕಷ್ಟು ಇವೆ

ಇದರ ಜೊತೆಗೆ ವಿವಿಧ ವಿಷಯ ಗಳ ಗಜಲ್ ಗಳು ಕೂಡಾ ಇವೆ.ಹೊಂಗೆ ನೆರಳು ಗಜಲ್ ಸಂಕಲನವು ಓದಿಸಿಕೊಂಡು ಹೋಗುತ್ತದೆ.ಶ್ರೀ ರಾಮು ಎನ್ ರಾಠೋಡ ಮಸ್ಕಿ ಇವರ ಸಂಪಾದಕೀಯ ಕೆಲಸಕ್ಕೆ ಅಭಿನಂದನೆಗಳು ಹೇಳುತ್ತಾ ನನ್ನ ಬರಹಕ್ಕೆ ಮಿರಾಮ ಕೊಡುವೆ.


         ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ

One thought on “ಹೊಂಗೆ ನೆರಳು

  1. ಹೊಂಗೆ ನೆರಳು ಗಜಲ್ ಸಂಕಲನದ ಪರಿಚಯ ಪ್ರಕಟಿಸಿದಕ್ಕೆ ಸಂಪಾದಕ ಮಂಡಳಿಗೆ ಧನ್ಯವಾದಗಳು

Leave a Reply

Back To Top