ಕವಿತೆ
ಮೌನಗೀತೆ
ಮೀನಾಕ್ಷಿ ಸೂಡಿ
ಮನದ ಶರಧಿಯ ಮೌನಗೀತೆಯಲಿ
ನವಿರು ಭಾವದ ಸವಿ ನೆನಪಿದೆ
ಕಣ್ಣ ಕಡಲಿನಲ್ಲಿ ಬಣ್ಣದ ಕನಸು
ನಿನ್ನ ದಾರಿಯ ಕಾಯುತಿದೆ.
ಮುಗಿಲ ಬಸಿರ ಬಗೆದ ನೇಸರ
ನಗುತ ಭುವಿಯ ಬೆಳಗುವಂತೆ
ಒಣಗಿರುವ ಈ ಎದೆಯ ನೆಲದಲ್ಲಿ
ನಗೆ ಹೂಗಳ ರಾಶಿ ಮಾಡಲು
ಒಲಿದು ಬಾ ಇನಿಯ ಒಲಿದು ಬಾ
ಬದುಕು ಬೆಳದಿಂಗಳ ಈ ಪಯಣಕೆ…
ಆ ಚಂದ್ರ-ತಾರೆಗಳನು ಮೀರಿ
ತಂಗಾಳಿಯ ಮುಂಗುರುಳ ಸವರಿ
ಒಲವ ಲತೆಗೆ ಪ್ರಣಯದ ರಸ ಎರೆದು
ಕಾದಿಹೆನು ನಾ ಈ ಹೃದಯ ತೆರೆದು
ನುಡಿಸು ಬಾ ಇನಿಯ ನುಡಿಸು ಬಾ
ಒಲವ ವೀಣೆಯನು ಪ್ರೇಮಾಲಾಪದಿ…
ಬಾ ಇನಿಯ ಕಾಯಿಸದೆ,ನೀನಿಲ್ಲದೆ ನನಗೇನಿದೆ,
ಎದೆಯ ಹೊಂಬಟ್ಟಲಲ್ಲಿ
ಒಲವೆಂಬ ದೀಪ ಬೆಳಗಿ
ಪ್ರೀತಿ ಪಲ್ಲಕ್ಕಿಯಲ್ಲಿ,ಮೆಲ್ಲನೆ ಬಳಿ ಸಾರಿ
ಹಾಡು ಬಾ ಇನಿಯ,ಹೊಸ ಪಲ್ಲವಿಯ
ಬದುಕಿನ ಈ ಹೊಸ ಗೀತೆಗೆ…