ಅಂಕಣ ಬರಹ

ತೊರೆಯ ಹರಿವು

ಶ್ರೇಷ್ಠತೆಯ ವ್ಯಸನ…


            ‘ಕೀರ್ತಿ ಶನಿ ತೊಲಗಾಚೆ’         ವಿಶ್ವಮಾನವ ಕವಿ ಕುವೆಂಪು

blue yellow and red abstract painting

ಮೊದಲ ಪ್ರಕರಣ-

      ಆ ಸಂದರ್ಭದಲ್ಲಿ ನಾನು ಸರ್ಕಾರಿ ನೌಕರಿಗೆ ಹೊಸಬಳಾಗಿದ್ದೆ. ಆ ದಿನ ಒಂದು ಸಭೆ ನಡೆಯುತ್ತಿತ್ತು. ಸಭೆಯ ನಡುವೆ ಕಾಫಿ-ಟೀ ತಂದ ಗ್ರೂಪ್ ಡಿ ನೌಕರರನ್ನು ಹಿಂದೆ ಕುಳಿತಿದ್ದ ಒಬ್ಬರು ಜೋರಾಗಿ, ‘’ನಾನೂ ಗೆಜ಼ೆಟೆಡ್ ಅಧಿಕಾರಿ, ನನಗೂ ಕಪ್ ಸಾಸರ್ನಲ್ಲಿ ಕಾಫಿ ತಾ..” ಎಂದು ಗದರಿದ್ದು ಕೇಳಿಸಿತು. ‘ನಾನೂ ಗೆಜ಼ೆಟೆಡ್’ ಎಂದ ಅವರು ತೀರಾ ಆಗಷ್ಟೇ ಗೆಜ಼ೆಟೆಡ್ ಹುದ್ದೆಗೆ ಮುಂಬಡ್ತಿ ಪಡೆದಿದ್ದರು. 

ಎರಡನೆಯ ಪ್ರಕರಣ-

        ಜಿಲ್ಲಾಧಿಕಾರಿಯಾಗಿದ್ದ ಅವರು, ತಮ್ಮ ಕೊಠಡಿಯಿಂದ ಹೊರಟು ನಾವೆಲ್ಲ ಯಾವುದೋ ಪತ್ರ ಟೈಪ್ ಮಾಡಿಸುತ್ತಿದ್ದಲ್ಲಿಗೆ ಬಂದರು. ಬಂದವರೇ ಅಲ್ಲಿದ್ದ ಸಿಪಾಯಿಯ ಕುರ್ಚಿಯಲ್ಲಿ ಕುಳಿತು, ನಾವು ಟೈಪ್ ಮಾಡಿಸುತ್ತಿದ್ದ ಪತ್ರವನ್ನು ಪರಿಶೀಲಿಸುತ್ತಾ, ಡಿಕ್ಟೇಶನ್ ಹೇಳಿದ್ದಲ್ಲದೇ ನಮ್ಮ ಟೈಪಿಂಗ್ ಸ್ಪೀಡ್ ಕಡಿಮೆ ಇದ್ದರಿಂದ ತಾವೇ ಟೈಪ್ ಮಾಡಿದರು. ಇದೇ ಅಧಿಕಾರಿ ಸಭೆಯೊಂದರಲ್ಲಿ ತಮಗೆ ಹಾಗೂ ಇತರೆ ಅಧಿಕಾರಿಗಳಿಗೆ ವಿಶಿಷ್ಟ ಕಪ್ ಸಾಸರ್ ಗಳಲ್ಲಿ ಕಾಫಿ ವಿತರಿಸಿ, ಇತರರಿಗೆ ಕಾಗದದ ಕಪ್ನಲ್ಲಿ ನೀಡದ್ದನ್ನು ನೋಡಿ ತಮ್ಮ ಕಪ್ ಅನ್ನು ಮರಳಿಸಿ ಎಲ್ಲರಿಗೂ ಸಮಾನ ಕಪ್ ಗಳಲ್ಲಿ ಕಾಫಿ-ಟೀ ನೀಡಿರೆಂದು ತಾಕೀತು ಮಾಡಿ ಅದನ್ನು ಜಾರಿಗೆ ತಂದರು. ಅದನ್ನೂ ಖುದ್ದು ಕಂಡಿದ್ದೇನೆ.

    ಸರ್ಕಾರಿ ನೌಕರಿ ಎನ್ನುವುದನ್ನು ‘ಅಧಿಕಾರ ಚಲಾವಣೆ’ಯ ಟ್ರಂಪ್ ಕಾರ್ಡ್ ಹಾಗೂ ಅಹಂಮಿನ ನಶೆ ಏರಿಸಿಕೊಳ್ಳುವ ಜಾಗ ಎಂದು  ಬಳಸಿದ ಮೊದಲನೆ ಪ್ರಕರಣದಲ್ಲಿ ಕಾಣುವಂತೆ ಶ್ರೇಷ್ಠತೆಯ ವ್ಯಸನ ಹೆಚ್ಚಿಸಿಕೊಂಡಿರುವ ಜನರೇ ತುಂಬಿರುವಾಗ, ಅಂತಹವರ ನಡುವಲ್ಲಿ ಎರಡನೆ ಪ್ರಸಂಗದಲ್ಲಿ ಕಂಡುಬರುವ ಸರಳ ವ್ಯಕ್ತಿತ್ವದವರು ತೀರಾ ಅಪರೂಪ ಹಾಗೂ ಇವರು ಇತರರಂತೆ ಪ್ರಚಾರಪ್ರಿಯರಲ್ಲ ಎನ್ನುವುದು ಗಮನಾರ್ಹ. 

    ತನಗೆ ದೊರೆತ ಮುಂಬಡ್ತಿ, ತನ್ನಿಂದ ಹೆಚ್ಚಿನ ದಕ್ಷತೆಯ ಕೆಲಸವನ್ನು ಅಪೇಕ್ಷಿಸುತ್ತದೆ ಎನ್ನುವುದನ್ನು ಮರೆತ ವ್ಯಕ್ತಿ. ಅಧಿಕಾರ- ಶ್ರೇಣಿ ದೊರಕುವುದು ಎಂದರೆ, ಕಪ್ ಸಾಸರ್ ನಲ್ಲಿ ಕಾಫಿ-ಟೀ ಹೀರುವುದಕ್ಕೆ ಎಂತಲೋ ಅಥವಾ ಇತರರ ಕಡತಗಳನ್ನು ದಿನಗಟ್ಟಲೆ ತನ್ನ ಬಳಿ ಇರಿಸಿಕೊಂಡು ಕಾಲಕ್ಷೇಪ ಮಾಡುವುದಕ್ಕೆ ಎಂತಲೋ ತಿಳಿದುಬಿಡುವುದು ದೊಡ್ಡ ದುರಂತವಲ್ಲದೆ ಮತ್ತೇನು? ಒಂದು ದಿನ ತನ್ನ ಮನೆಗೆ ಇಲಾಖಾ ವಾಹನ ಬರದಿದ್ದರೆ, ಕಚೇರಿಗೆ ಬೇರೆ ವಾಹನಗಳಲ್ಲಿ ಅಥವಾ ಸ್ವಂತ ವಾಹನದಲ್ಲಿ ಹೋಗುವವರು ಎಷ್ಟು ಮಂದಿ?! ತಾನು ಇಂಥಾ ಹುದ್ದೆಯಲ್ಲಿರುವೆ ಆದ್ದರಿಂದ ಇಂಥಾ ಸವಲತ್ತಿಗೆ ಅರ್ಹತೆ ಪಡೆದಿರುವೆ ಎಂದು ಯೋಚಿಸುವವರು; ತನಗೆ ಈ ಹುದ್ದೆ ಇರುವ ಕಾರಣಕ್ಕೇ ಈ ಕರ್ತವ್ಯ ಬಾಧ್ಯತೆಯೂ ಇದೆ, ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಯೋಚಿಸುತ್ತಾರೆಯೇ? ಸವಲತ್ತಿಗೆ ಮುಂದು ಕೆಲಸಕ್ಕೆ ಹಿಂದು ಎನ್ನುವವರೇ ಹೆಚ್ಚು ಮಂದಿ. ಮತ್ತೊಂದು ಗುಂಪಿನವರು ಸರಕಾರದಿಂದ ಎಲ್ಲಾ ಸವಲತ್ತುಗಳನ್ನು ಪಡೆದು, ತಾವು ಮಾಡುತ್ತಿರುವ ಕೆಲಸವನ್ನು ವಿಶೇಷವಾದದ್ದೆಂದು ಮಾಧ್ಯಮಗಳ ಮುಂದೆ ಪ್ರಚುರಪಡಿಸುವವರು. ಆದರೆ, ನೀತಿ-ನಿಯಮಗಳ ಚೌಕಟ್ಟಿನ ಬಂಧಿಯಾದವರನ್ನು, ನಾಗರಿಕ ಸೇವೆಗೆ ನೇಮಕಗೊಂಡವರನ್ನು, ಜನಸಾಮಾನ್ಯರು ಅಗತ್ಯಬಿದ್ದಾಗ ಪ್ರಶ್ನಿಸದೇ, ಜನಪ್ರಿಯತೆಯ ಆಧಾರದ ಮೇಲೆ ಪ್ರೋತ್ಸಾಹಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಾಯಕಾರಿ ವಿಚಾರ.

     ಎರಡನೆಯ ಪ್ರಸಂಗದಲ್ಲಿ ಕಾಣುವ ಉನ್ನತ ಹುದ್ದೆಯನ್ನು ಸೇವೆಯ ಮಾದ್ಯಮವಾಗಿ ಮಾಡಿಕೊಂಡು ಸರಳವಾಗಿದ್ದು, ಜನರ ನಡುವೆ ಜನಾನುರಾಗಿಯಾಗಿ ಕೆಲಸ ಮಾಡುವವರು ಶ್ರೇಷ್ಠತೆಯ ಹುಚ್ಚಿಗೆ ಸಿಲುಕದೇ ಇರುತ್ತಾರೆ. ಅವರು ತಾವು ಮಾಡುವ ಮಲ್ಟಿ ಟಾಸ್ಕ್ ಗಳಲ್ಲಿ ಪ್ರಜ್ಞಾಪೂರ್ವಕವಾಗಿ ಜನಪರ ಕಾಳಜಿಯನ್ನು ಮೊದಲು ಎತ್ತಿ ಹಿಡಿಯುತ್ತಾರೆ. ಇದು ನಿಜವಾದ ಶ್ರೇಷ್ಠ ಜನರ ಕಾರ್ಯವೈಖರಿ. ಅನಗತ್ಯವಾಗಿ ಪ್ರಚಾರ ಬಯಸಿ ಹಿಂದೆ ಬೀಳದಿದ್ದರೂ, ಅವರನ್ನು ಗೌರವಿಸುವವರು ಇದ್ದೇ ಇರುತ್ತಾರೆ. 

    ತಮ್ಮ ಸೇವಾ ಮನೋಭಾವ ಹಾಗೂ ಇತರೆ ವಿಶೇಷ ಪ್ರತಿಭೆಯ ಕಾರಣಕ್ಕೆ ಜನರಿಂದ ಗುರುತಿಸುವುದು ಬೇರೆ, ತಮ್ಮ ವಿವಾದಗಳ ಕಾರಣದಿಂದ ಜನರಿಗೆ ಪರಿಚಿತರಾಗುವುದು ಬೇರೆ. ಇತ್ತೀಚೆಗೆ ತಪ್ಪು ಮಾಡಿದರೂ ಸರಿ ಜನಪ್ರಿಯತೆ ಗಳಿಸಿಕೊಂಡರೆ ಸಾಕು, ಎನ್ನುವಲ್ಲಿಗೆ ವ್ಯಕ್ತಿಗಳು ನಿಲ್ಲುತ್ತಿರುವುದು ತೀರಾ ನಾಚಿಕೆಗೇಡು. ಇಂತಹ ವಿದ್ಯಮಾನಗಳು ಮೇಲಿಂದ ಮೇಲೆ ಚರ್ಚೆಯ ಮುನ್ನೆಲೆಗೆ ಬರುತ್ತಿರುವುದು ಹಾಗೂ ಇತರೆ ಅಗತ್ಯ ಗಮನ ನೀಡಬೇಕಾದ ವಿಚಾರಗಳು ಹಿನ್ನೆಲೆಗೆ ಸರಿಯುತ್ತಿರುವುದು ಆತಂಕಕಾರಿ ವಿಷಯ. 

  ಕರ್ಕಶ ರಾಗದಲ್ಲಿ ಹಾಡುವುದಕ್ಕೆ ಪ್ರಚಾರ ಕೊಟ್ಟು ಆತನನ್ನೊಬ್ಬ ಸಾಧಕ ಎನ್ನುವಂತೆ ಮಾಡಿದ್ದನ್ನು, ಮಾನಸಿಕ ಸಮಸ್ಯೆ ಇರುವವರನ್ನು ಸೆಲೆಬ್ರಿಟಿ ಎಂದು ಬಿಂಬಿಸುವುದನ್ನು, ನಗರ ಬದುಕಿನಿಂದ ದೂರವಿದ್ದ ಮುಗ್ಧರನ್ನು ನಗರದ ಗೊಂದಲಕ್ಕೆ ಕೆಡವಿ ವಿನಾ ಜೀವ ಕಳೆದುದನ್ನು ಮರೆಯಲಾದೀತೇ? ಇವೆಲ್ಲಾ ಪ್ರಚಾರದ ಹುಚ್ಚಿನ ಫಲಿತಗಳು. ಪ್ರಚಾರವಾದರೂ ಏಕೆ ಬೇಕು?!ತಾನೇ ಗೆಲ್ಲಬೇಕೆಂಬ ಪ್ರತಿಷ್ಠೆಗಾಗಿ… ಹೇಗಾದರೂ ಸರಿ ಹೆಚ್ಚುಜನರ ಗಮನ ಸೆಳೆದು ಶ್ರೇಷ್ಠ ಎನಿಸಿಕೊಳ್ಳಬೇಕೆಂಬ ಹುಚ್ಚಿಗಾಗಿ…

    ಒಬ್ಬ ರೈತ ತಮ್ಮ ಹೊಲಗದ್ದೆಗಳಲ್ಲಿ ಶ್ರಮವಹಿಸಿ ದುಡಿದರೆ; ಒಬ್ಬ ಶಿಕ್ಷಕ ಚೆನ್ನಾಗಿ ಪಾಠ ಮಾಡಿದರೆ; ಒಬ್ಬ ವೈದ್ಯ ಸರಿಯಾಗಿ ಚಿಕಿತ್ಸೆ ನೀಡಿ ರೋಗಿಯನ್ನು ಕಾಳಜಿ ಮಾಡಿದರೆ; ಒಬ್ಬ ಪೌರಕಾರ್ಮಿಕ ತಮ್ಮ  ನಿಶ್ಚಿತ ಕರ್ಮ ಮಾಡಿದರೆ ಅದು ಅವರ ವೃತ್ತಿಧರ್ಮ    ಎನ್ನುವುದನ್ನು ಅರಿಯಬೇಕು. ಅದೇ ರೀತಿ ಒಬ್ಬ ಸರಕಾರಿ ನೌಕರ ಯಾವುದೇ ಪ್ರಚಾರ ಬಯಸದೇ ಕೆಲಸ ಮಾಡುವುದೂ ಅವರ ವೃತ್ತಿ ಧರ್ಮ ಎಂದು ಅಪೇಕ್ಷಿಸಬೇಕು. ಕಾನೂನು, ನಿಯಮಗಳ ಪಾಲನೆಗಾಗಿಯೇ ಅವರ ನೇಮಕಾತಿ ಆಗಿರುತ್ತದೆ. ಅವುಗಳ ಚೌಕಟ್ಟಿನೊಳಗೇ ಅವರು ಕರ್ತವ್ಯ ನಿರ್ವಹಿಸಬೇಕಾದದ್ದು ಸಹಜವಾಗಿರುತ್ತದೆ. ಇದು ಬಿಟ್ಟಿ ಸೇವೆ ಆಗಿರದೆ, ಅದಕ್ಕಾಗಿ ಅವರು ನಿಗದಿತ ವೇತನ-ಇತರೆ ಭತ್ಯೆ ಇತ್ಯಾದಿ ಪಡೆಯುತ್ತಾರೆ. ಇದರಲ್ಲಿ ಹೆಚ್ಚುಗಾರಿಕೆ ಏನಿದೆ? ತಾನು ಮಾಡುವ ಕೆಲಸವನ್ನು ಎತ್ತಿ ಆಡುವ ಹೆಚ್ಚುಗಾರಿಕೆ ಏಕೆ?

     ಜನರ ನಡುವೆಯೇ ಇರುವ, ಅವರಿಂದ ಉಪಕೃತರಾಗುವ ಅವರಿಗೂ ಉಪಕರಿಸುವ ಶಾಸಕಾಂಗ ರಚನಕಾರರಾದ ಮಂತ್ರಿ- ಮಹೋದಯರು ಜನಪ್ರಿಯತೆಯ ಹಿಂದೆ ಬಿದ್ದರೆ ಮತದಾನ ಪ್ರಕ್ರಿಯೆಯಲ್ಲಿ ಅವರಿಗೆ ಅಗತ್ಯ ಇರಬಹುದು ಎಂದು ಒಂದು ಪಕ್ಷ ಒಪ್ಪಬಹುದೇನೋ.. ಆದರೆ ಶಾಸನಗಳನ್ನು ನ್ಯಾಯವಾಗಿ ಜಾರಿಗೊಳಿಸಿ ಪಾಲಿಸಬೇಕಾದ ಕಾರ್ಯಾಂಗ ವ್ಯವಸ್ಥೆಯಲ್ಲಿ ಕೆಲಸ ಮಾಡುವವರು ಹೀಗೆ ಜನಪ್ರಿಯತೆಯ ಬೆನ್ನು ಹಿಡಿದರೆ, ಅವರಿಂದ ನಿಷ್ಪಕ್ಷಪಾತ ಸೇವೆಯನ್ನು ನಿರೀಕ್ಷೆ ಮಾಡುವುದು ಸಾಧ್ಯವೇ?

    ಈಗ ಜಾತಿ ಶ್ರೇಷ್ಠತೆಯ ಬಗ್ಗೆ ಜೋರಾಗಿ ವಾದ ವಿವಾದಗಳು ನಡೆಯುತ್ತಿರುವ ಎಡೆಯಲ್ಲಿ, ಅಧಿಕಾರ-ಹಣ-ಅಂತಸ್ತಿನ ಶ್ರೇಷ್ಠತೆಯ ಕುರಿತೂ ಚರ್ಚೆಯಾಗಬೇಕು. ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ಯ್ರ?’ ಎಂದು ಕವಿ ಕೇಳುವಂತೆ, ‘ಯಾರಿಗೆ ಬಂತು ಏತಕೆ ಬಂತು ನಾಗರಿಕ ಸೇವೆಯ ಜವಾಬ್ದಾರಿ?’ ಎಂದು ಜಪ್ಪಿಸಿ ಕೇಳಬೇಕಾದವರು ಯಾರು? ಜನಪ್ರಿಯತೆಯ ಹಿಂದೆ ಬಿದ್ದು ಕೀರ್ತಿಯನ್ನು ಹೆಗಲಿಗ ಏರಿಸಿ ಕೊಂಡವರು ‘ಕೀರ್ತಿಶನಿ ತೊಲಗಾಚೆ’ ಎನ್ನುವರೇ? ಅಥವಾ ಸಹಜೀವಿಗಳೊಂದಿಗೆ ಆತ್ಮೋನ್ನತಿ ಹೊಂದಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುವರೇ?! 

       ಜಾತಿ-ಮತ-ಧರ್ಮ-ಅಧಿಕಾರದಿಂದ ಪಡೆಯುವ ಶ್ರೇಷ್ಠತೆ ಎನ್ನುವ ವ್ಯಸನಕ್ಕೆ ಮದ್ದು ನೀಡುವವರು ಯಾರು? ನಮಗೆ ಮಾದರಿ ಎಂದು ಸರಿಯಾದುದನ್ನು ಆರಿಸಿಕೊಳ್ಳಬೇಕಾದವರು ಯಾರು?


ವಸುಂಧರಾ ಕದಲೂರು

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ  ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

One thought on “

Leave a Reply

Back To Top