ನೀಳ್ಗಥೆ
ಗಿಳಿಯು ಪಂಜರದೊಳಿಲ್ಲ
ಭಾಗ—ಮೂರು
ಟಿ. ಎಸ್. ಶ್ರವಣ ಕುಮಾರಿ
[0:37 am, 06/07/2021] SHRAVANA KUMARI: ಅಪ್ಪ ಮಗ ಇಬ್ಬರೂ ಹರಕೆ ಹೇಳಿಕೊಂಡು ಮರುದಿನ ತಿರುಪತಿಯಿಂದ ವಾಪಸ್ಸು ಬಂದರು. “ನಾಳೆ ಸ್ನಾನ ಮಾಡಿದ ಮೇಲೆ ಭಕ್ತಿಯಿಂದ ಪ್ರಸಾದ ತೊಗೋಮ್ಮ. ಆದಷ್ಟು ಬೇಗ ಈ ಮನೆಗೆ ಒಂದು ಮಗು ಬರಲಿ” ಎಂದರು. ಅವಳೂ ಭಕ್ತಿಯಿಂದಲೇ ತೆಗೆದುಕೊಂಡಳು. ಮಾಮೂಲಿನಂತೆ ಶ್ರೀಧರ ಬರುತ್ತಿದ್ದ. ಅವಕಾಶವಾದಾಗೆಲ್ಲ ಇಬ್ಬರೂ ಅದನ್ನು ಉಪಯೋಗಿಸಿಕೊಂಡರು. ತಿರುಪತಿ ತಿಮ್ಮಪ್ಪ ಕಣ್ಣು ಬಿಟ್ಟಿದ್ದ. ಹರಕೆ ಕಟ್ಟಿಕೊಂಡ ಮೂರು ತಿಂಗಳೊಳಗೆ ಪದ್ಮನಿಗೆ ಬಸುರಿನ ಲಕ್ಷಣಗಳು ಕಾಣತೊಡಗಿದವು! ವೆಂಕಟೇಶಯ್ಯನವರು ಹಿರಿಹಿರಿ ಹಿಗ್ಗಿದರು. ತಂಗಿಯೊಡನೆ ಸಂಭ್ರಮವನ್ನು ಹಂಚಿಕೊಂಡರು. ʻಸುಸ್ತಾದರೆ ಅಡುಗೆಯವರನ್ನು ಇಟ್ಟುಕೊಳ್ಳೋಣಮ್ಮʼ ಎಂದರು. ಊರಿನ ಹೆಸರಾಂತ ಡಾಕ್ಟರರ ಬಳಿ ಸೊಸೆಗೆ ವೈದ್ಯೋಪಚಾರ ಕೊಡಿಸಿದರು. ಹೊರಗೆ ಹೋದಾಗೆಲ್ಲಾ ಹಣ್ಣು, ಹೂವು, ಸಿಹಿತಿಂಡಿಗಳನ್ನು ತಂದುಕೊಟ್ಟರು. ಬೆಳಗೂ ಸಂಜೆ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳತೊಡಗಿದರು. ʻಬಾಣಂತನಕ್ಕೆ ತವರಿಗೆ ಕಳಿಸುವುದಿಲ್ಲ. ಅಲ್ಲಿ ಅನುಕೂಲವಿಲ್ಲ; ನಿಮ್ಮಮ್ಮನ್ನೇ ಇಲ್ಲಿಗೆ ಕರೆಸಿಕೊಳ್ಳೋಣʼ ಎಂದು ತಮ್ಮದೇ ನಿರ್ಧಾರವನ್ನು ಮಾಡಿದರು. ಹೋಗಲು ತನಗೂ ಬೇಕಿರಲಿಲ್ಲ. ಏಳನೇ ತಿಂಗಳಲ್ಲಿ ಅದ್ಧೂರಿಯಾಗಿ ಸೀಮಂತವನ್ನು ಮಾಡಿ ಅದಕ್ಕೆ ಬಂದ ಬೀಗಿತ್ತಿ ಲಲಿತಮ್ಮನನ್ನು ಬಾಣಂತನ ಮುಗಿಯುವವರೆಗೆ ಇರಿಸಿಕೊಂಡರು.
*
ಹೀಗೇ ಖುಷಿಯಿಂದ ದಿನಗಳು ಕಳೆಯುತ್ತಿರುವಾಗಲೇ ಇದ್ದಕ್ಕಿದ್ದ ಹಾಗೆ ಶ್ರೀಧರನನ್ನು ಬಾಡಿಗೆಯಿಂದ ಬಿಡಿಸಿ ಕಳುಹಿಸಿಬಿಟ್ಟರು. ದಿನ ತುಂಬಿ ಗಂಡು ಮಗು ಹುಟ್ಟಿತು. ವೆಂಕಟೇಶಯ್ಯನವರನ್ನು ಹಿಡಿಯುವವರಿಲ್ಲ. ನಾಮಕರಣದ ದಿನವಂತೂ ಬಂದವರಿಗೆಲ್ಲಾ ʻನೋಡಿ ನಮ್ಮ ಸೀನನ ಮಗ ರಾಮʼ ಎನ್ನುತ್ತಾ ಮಗುವನ್ನು ತೋರಿ ತೋರಿ ಹಿಗ್ಗಿದರು. ಸುಂದರಮ್ಮನಂತೂ ಇಷ್ಟೆಲ್ಲಾ ಸಂಭ್ರಮಕ್ಕೆ ತಾನೇ ಕಾರಣ ಎನ್ನುವಂತೆ ಬೀಗಿದಳು. ಸೀನನೂ ಬಲು ಖುಷಿಯಿಂದ ಓಡಾಡಿಕೊಂಡಿದ್ದ. ಮಗುವನ್ನು ಎತ್ತಿ ಮುದ್ದಾಡುತ್ತಿದ್ದ. ಕೊರತೆಯೆನಿಸಿದ್ದು ಪದ್ಮಳೊಬ್ಬಳಿಗೇ… ಒಮ್ಮೆಯಾದರೂ ಮಗುವಿನ ಅಪ್ಪ ಅದನ್ನು ನೋಡಬೇಕಿತ್ತು ಅನ್ನಿಸಿದರೂ, ಅದನ್ನು ಯಾರ ಹತ್ತಿರವೂ ಹೇಳಿಕೊಳ್ಳುವಂತಿರಲಿಲ್ಲ. ಎಲ್ಲರೂ ಸೀನನ ಮಗುವೆಂದೇ ನಂಬಿದ್ದಾರೆ. ಸೀನನೂ…?! ಜೊತೆಜೊತೆಗೇ ಎಲ್ಲರೂ ತೋರುತ್ತಿರುವ ಪ್ರೀತಿ ಅಕ್ಕರೆಯಿಂದ ಪಾಪಪ್ರಜ್ಞೆ ಕಾಡತೊಡಗಿತು, ʻಏನೋ ಒಳ್ಳೇದಕ್ಕೇ ಇರಬಹುದು. ಈಗ ಹೇಗೂ ಜೀವನದಲ್ಲಿ ಒಂದು ಬದಲಾವಣೆ ಬಂದಿದೆ. ಆಸೆ, ಅಕ್ಕರೆಗೆ ಮಗುವಿದೆ. ಇನ್ನು ಅವನನ್ನು ಮರೆಯುವುದೇ ಒಳ್ಳೆಯದೇನೋ. ಆದಷ್ಟೂ ಆ ದಿನಗಳನ್ನು ಮನಸ್ಸಿಗೆ ತಂದುಕೊಳ್ಳಬಾರದುʼ ಎಂದು ಬಲವಂತವಾಗಿ ನಿಶ್ಚಯಿಸಿಕೊಂಡು ಶ್ರೀಧರ ಕಳುಹಿಸುತ್ತಿದ್ದ ಮೆಸೇಜಿಗೆ ಉತ್ತರವನ್ನೂ ಕೊಡದೆ ಅಳಿಸಿಹಾಕತೊಡಗಿದಳು.
ಮಗುವಿಗೆ ಐದು ತಿಂಗಳು ತುಂಬಿದ ಮೇಲೆ ಪದ್ಮಳ ತಾಯಿ ಹೊರಡುವಾಗ ಪದ್ಮಳ ಬಳಿ “ಇಂತ ಮನೆಯನ್ನು ಬೇಡ ಅಂದಿದ್ದೆಯಲ್ಲಾ. ಈಗ ನೋಡು… ನಿನ್ನ ಪುಣ್ಯಕ್ಕೆ ಎಣೆಯಿದೆಯೇ. ಎಲ್ಲರ ಪ್ರೀತಿ, ವಿಶ್ವಾಸವನ್ನು ಹೀಗೇ ಉಳಿಸಿಕೋ. ಮಗೂನ ಚೆನ್ನಾಗಿ ನೋಡ್ಕೋ. ಇದಕ್ಕೆ ಎರಡು ವರ್ಷವಾದ ಮೇಲೆ ಇನ್ನೊಂದು ಮಗುವಾಗ್ಲಿ. ಮಗೂಗೆ ಹಾಲು ಕುಡಿಸ್ತಿರೋ ತಂಕ ಸಾಮಾನ್ಯವಾಗಿ ಬಸಿರಾಗಲ್ಲ. ನಾನೇ ಬಂದು ಆ ಬಾಣಂತನಾನೂ ಮಾಡ್ತೀನಿ” ಎಂದು ಹಿತೋಪದೇಶ ನೀಡಿ ಸಾಕಷ್ಟು ಉಡುಗೊರೆಗಳೊಂದಿಗೆ ಸಂಪ್ರೀತರಾಗಿ ಹೊರಟರು. ʻಇನ್ನೊಂದು ಮಗೂ…. ಆದ ಹಾಗೇʼ ಎಂದುಕೊಂಡ ಪದ್ಮ ಏನೂ ಹೇಳದೆ ಸುಮ್ಮನೆ ತಲೆಯಾಡಿಸಿದಳು. ಮನೆ ಮತ್ತೆ ಮೊದಲಿನ ಸ್ಥಿತಿಗೆ ಬಂತು. ಹೆಚ್ಚು ರಂಪಾಟ ಮಾಡದ ಮುದ್ದಾದ ಮಗು ಎಲ್ಲರ ಮುದ್ದಿನ ಕೂಸಾಯಿತು.
ಹೀಗೇ ಒಂದು ದಿನ ಬೆಳಗ್ಗೆ ವೆಂಕಟೇಶಯ್ಯನವರು ಸೊಸೆಯನ್ನು ಕರೆದು “ನೋಡಮ್ಮ, ನಮ್ಮ ಸೀನಂಗೆ ವ್ಯವಹಾರ ಜ್ಞಾನ ಕಮ್ಮಿ. ಆರೋಗ್ಯವಾಗಿರೋ ಗಂಡು ಮಗು ಹುಟ್ಟಿದೆ. ಇನ್ನೊಂದು ಅಕಸ್ಮಾತ್ ಹೆಣ್ಣು ಮಗು ಆದ್ರೆ ಜವಾಬ್ದಾರಿ ಜಾಸ್ತಿ. ಅವನ ಕೈಲಿ ನಿಭಾಯಿಸಕ್ಕೆ ಆಗಲ್ಲ. ಈ ಮನೆಗೆ ಒಂದು ಮಗು ಸಾಕು. ನೆನ್ನೆ ಡಾಕ್ಟರ ಹತ್ರ ಮಾಡಾಡ್ಕೊಂಡು ಬಂದಿದೀನಿ. ಸೀನನ್ನ ಕರ್ಕೊಂಡು ಹೋಗಿ ಇವತ್ತು ಆಪರೇಶನ್ ಮಾಡಿಸಿಕೊಂಡು ಬರ್ತೀನಿ” ಎಂದವರೇ ಅವಳ ಅಭಿಪ್ರಾಯವನ್ನೂ ಕೇಳದೆ ಅವನನ್ನು ಕರೆದುಕೊಂಡು ಹೊರಟೇಬಿಟ್ಟರು. ಗರ ಬಡಿದವಳಂತೆ ನಿಂತೇ ಇದ್ದ ಪದ್ಮನಿಗೆ ಇದರ ಹಿಂದಿನ ಹುನ್ನಾರ ನಿಧಾನವಾಗಿ ಅರ್ಥವಾಗತೊಡಗಿತು… ʻಅಂದರೆ ಮಾವನವರಿಗೆ ಎಲ್ಲಾನೂ ಗೊತ್ತಿದೆ… ಮುಂದೆ ಮಗು ಬೇಡ ಅಂತಿದ್ರೆ ನಂಗೇ ಆಪರೇಶನ್ ಮಾಡಿಸ್ಕೊಳಕ್ಕೆ ಹೇಳ್ಬೋದಿತ್ತಲ್ವ. ಶ್ರೀಧರಂಗೆ ಬಾಡ್ಗೆಗೆ ಮನೆ ಕೊಟ್ಟಿದ್ದು… ಕೆಲಸವಾದ ತಕ್ಷಣ ಅವನನ್ನು ಬಿಡಿಸಿ ಕಳಿಸಿದ್ದು… ಇದು ಸೂಕ್ಷ್ಮವಾಗಿ ನನಗೆ ಕೊಡ್ತಿರೋ ಎಚ್ಚರಿಕೆ.ʼ ಎಂದುಕೊಂಡವಳ ಮನಸ್ಸು ಖಿನ್ನವಾಯಿತು. ಪ್ರಾಯಶಃ ಅವರು ಸೀನನ ಆಪರೇಶನ್ ಮಾತೆತ್ತದೆ ಇರ‍್ದಿದ್ರೆ ಆಸರೆಗೊಂದು ಮಗು ಇದೆ. ಇಷ್ಟೇ ಸಾಕು ಅಂತ ಇರಕ್ಕೆ ಪ್ರಯತ್ನಿಸ್ತಿದ್ದೆ… ಮಾವನವರ ಬಗ್ಗೆ ತನ್ನಲ್ಲೊಂದು ಋಣದ ಭಾವವಿತ್ತು. ಸದಾ ತನ್ನೊಂದಿಗೆ ಒಳ್ಳೆಯತನದಿಂದಲೇ ನಡೆದುಕೊಂಡಿದ್ದರು. ತಪ್ಪು ಮಾಡಿದ್ದರೂ ಅವರ ಹಿರಿಯ ಆಸೆಯನ್ನು ಹೀಗಾದರೂ ಪೂರ್ತಿ ಮಾಡಿದೆ ಎಂದು ತಂತಾನೇ ಸಮಾಧಾನ ಮಾಡಿಕೊಂಡಿದ್ದಳು. ʻಈಗ ಮಗುವಿಗಾಗಿ ಮಾವನೂ ನನ್ನನ್ನು ಮಾರಿಕೊಂಡು ತಮ್ಮ ಕೆಲಸವಾದ ಮೇಲೆ ಪಂಜರ ಹಾಕಲು ಪ್ರಯತ್ನ ಪಡ್ತಿದ್ದಾರೆʼ ಅನ್ನಿಸಿ ಅವರ ಬಗ್ಗೆಯೂ ಮನಸ್ಸು ಕಹಿಯಾಗತೊಡಗಿತು. ʻಅವ್ರು ಹೀಗ್ಮಾಡಿದ್ದಕ್ಕಾದ್ರೂ ನಾನು ಪ್ರತಿಭಟಿಸಬೇಕು. ಇಲ್ಲಿಂದ ಓಡಿ ಹೋಗಿಬಿಡ್ಬೇಕುʼ ಅನ್ನಿಸಿಬಿಟ್ಟಿತು. ʻಆದ್ರೆ ಹೋಗೋದೆಲ್ಲಿಗೆ?!ʼ ಎರಡು ದಿನ ಒದ್ದಾಡಿಹೋದಳು. ಕಷ್ಟಪಟ್ಟು ಮನಸ್ಸಿನಿಂದ ದೂರವಿಟ್ಟಿದ್ದ ಶ್ರೀಧರ ಮತ್ತೆ ಆಕ್ರಮಿಸಿಕೊಳ್ಳತೊಡಗಿದ. ʻಅವನೊಬ್ಬನಿಗೇ ತಾನು ಅರ್ಥವಾಗೋದು ಅವನ ಹತ್ತಿರ ಎಲ್ಲಾನೂ ಹೇಳಿಕೊಳ್ಳಬೇಕುʼ ಎನ್ನಿಸಿಬಿಟ್ಟಿತು…
ಮಾವನವರು ಮನೆಯಲ್ಲಿಲ್ಲದ ಸಮಯ ನೋಡಿಕೊಂಡು, ಮೊಬೈಲಿನಲ್ಲಿದ್ದ ಅವನ ನಂಬರನ್ನು ಹುಡುಕಿ ʻಹೇಗಿದ್ದೀʼ ಎಂದು ಮೆಸೇಜ್ ಕಳುಹಿಸಿದಳು. ತಕ್ಷಣವೇ ಏನೂ ಉತ್ತರ ಬರಲಿಲ್ಲ. ಅವನು ಕಳಿಸಿದ ಒಂದು ಮೆಸೇಜಿಗೂ ಉತ್ತರಿಸಿಲ್ಲ. ಅವನೂ ತನ್ನನ್ನು ಮರೆತುಬಿಟ್ಟಿದ್ದರೆ… ಎನ್ನಿಸಿ ಕಣ್ಣಲ್ಲಿ ನೀರು ತುಂಬಿಕೊಳ್ಳತೊಡಗಿತು. ಎದ್ದು ಅಳತೊಡಗಿದ ಮಗುವಿಗೆ ಹಾಲು ಕುಡಿಸುತ್ತಿದ್ದಾಗ ಮೊಬೈಲ್ ಸದ್ದಾಯಿತು. ಶ್ರೀಧರ ಮೆಸೇಜ್‌ನಲ್ಲಿ ಕೇಳುತ್ತಿದ್ದ ʻಈಗ ನನ್ನ ನೆನಪಾಯಿತೆ? ಮಾತಾಡಬಹುದೆ?ʼ ಮಗು ಹಾಲು ಕುಡಿದಿದ್ದು ಮುಗಿದ ತಕ್ಷಣವೇ ಕರೆಮಾಡಿದಳು… ಮಾತು ಶುರುಮಾಡುವ ಮುನ್ನವೇ ಬಿಕ್ಕಿ ಬಿಕ್ಕಿ ಅತ್ತಳು. ಆ ಕಡೆಯಿಂದ ಅವನು ಸಮಾಧಾನ ಮಾಡುತ್ತಾ ʻಏನಾಯ್ತು… ಏನಾಯ್ತು…ʼ ಎಂದು ಕೇಳುತ್ತಲೇ ಇದ್ದರೂ ಎಷ್ಟೋ ಹೊತ್ತಿನವರೆಗೂ ಅವಳಿಗೆ ಮಾತನಾಡಲು ಸಾಧ್ಯವೇ ಆಗಲಿಲ್ಲ. ಎಷ್ಟೋ ಹೊತ್ತಿನ ಮೇಲೆ “ನಿನ್ನ ಜೊತೆ ತುಂಬಾ ಮಾತಾಡ್ಬೇಕು” ಬಿಕ್ಕುತ್ತಾ ಹೇಳಿದಳು. “ಟೈಮ್ ಇದ್ದರೆ ಈಗಲೇ ಮಾತಾಡು; ನಾನೂ ಬಿಡುವಾಗಿದೀನಿ. ಎಷ್ಟು ಸಲ ನಿಂಗೆ ಮೆಸೇಜ್ ಮಾಡ್ದೆ; ಒಂದ್ಸಲವೂ ನೀನು ಉತ್ರ ಕೊಟ್ಟಿಲ್ಲ” ಎಂದ. ಒಡ್ಡು ಹರಿದಂತೆ ಅಳುವಿನ ಮಧ್ಯೆ ಮಧ್ಯೆ ಎಲ್ಲವನ್ನೂ ಹೇಳಿಕೊಳ್ಳತೊಡಗಿದಳು… ಸಾಕಷ್ಟು ಹೊತ್ತಿನ ಮಾತಿನ ನಂತರ “ಪದ್ಮಾ ನಿಂಗೆ ನನ್ಮೇಲೆ ನಂಬಿಕೆ ಇದ್ರೆ ಮಗೂನೂ ಕರ‍್ಕೊಂಡು ನಂಜೊತೆ ಬಂದ್ಬಿಡು. ನಾವು ಮದುವೆಯಾಗೋಣ. ಕಡೇ ತಂಕ ನಿನ್ನ ಚೆನ್ನಾಗಿ ನೋಡ್ಕೋತೀನಿ” ಎಂದ. ತಕ್ಷಣವೇ ಪದ್ಮನಿಗೆ ಏನು ಹೇಳಲೂ ತೋಚಲಿಲ್ಲ. “ಯೋಚ್ನೆ ಮಾಡು; ನಂಗೂ ನಿನ್ನ ಬಿಟ್ಟಿರೋದು ನಿಜವಾಗ್ಲೂ ಕಷ್ಟವಾಗ್ತಿದೆ. ನೀನು ಯಾವಾಗ ಬಂದ್ರೂ ನಾನು ತಯಾರು. ನಿಂಗೋಸ್ಕರ ಕಾಯ್ತಿರ‍್ತೀನಿ. ಆದಷ್ಟು ಬೇಗ ಭೇಟಿಯಾಗೋಣ” ಎಂದು ಸಮಾಧಾನ ಹೇಳಿದ. ʻಅದು ಅಷ್ಟು ಸುಲಭವೇʼ ಪದ್ಮ ನೆನೆಗುದಿಗೆ ಬಿದ್ದಳು. ʻತನಗೇನೇ ಅನ್ಯಾಯವಾಗಿದ್ದರೂ ಮಗುವನ್ನು ಕರ‍್ಕೊಂಡು ಹೋಗೋದು ಸರಿಯೇ… ಜಗತ್ತಿಗೆಲ್ಲಾ ಸೀನನ ಮಗುವೆಂದು ನಂಬಿಸಿರುವಾಗ ಮಗುವನ್ನು ನನ್ನ ಜೊತೆಗೆ ಕರೆದುಕೊಂಡು ಹೋದ್ರೆ… ಇಲ್ಲ… ಸರಿಯಾಗಲ್ಲ. ಹಾಗಂತ ಮಗೂನ ಬಿಟ್ಟು ಹೋಗಕ್ಕಾಗತ್ತಾ…? ಇಲ್ಲ, ಹೋಗೇಬಿಡ್ತೀನಿ ಅಂದುಕೊಳ್ಳುವಷ್ಟು ಧೈರ್ಯ ಬರಲಿಲ್ಲ. ಯೋಚನೆಯಲ್ಲೇ ದಿನಗಳು ಕಳೆದವು.
*
ತೋಟದ ಕಡೆ ಕೆಲಸ ಇದೆ ಎಂದುಕೊಂಡು ವೆಂಕಟೇಶಯ್ಯನವರು ಊರಿಗೆ ಹೊರಟರು. ಮರುದಿನ ಸಂಜೆ ಶ್ರೀಧರ ಮನೆಗೆ ಬಂದ. ಶ್ರೀನಿವಾಸನೂ ದಿನದ ಹಾಗೆ ದೇವಸ್ಥಾನಕ್ಕೆ ಹೋಗಿದ್ದ. ಎಷ್ಟೋ ತಿಂಗಳುಗಳ ಬಳಿಕ ಇಬ್ಬರ ಭೇಟಿಯಾಯಿತು. ಮಗುವನ್ನು ಮೊತ್ತ ಮೊದಲಬಾರಿಗೆ ನೋಡಿದವನು ಎತ್ತಿಕೊಂಡು ಅಪ್ಪಿ ಮುದ್ದಾಡಿದ. “ಹೀಗೇ ನನ್ನ ಜೊತೆ ಬಂದುಬಿಡು ಪದ್ಮ… ಹೊರಟುಹೋಗೋಣ” ಎಂದ. “ಅಷ್ಟು ಸುಲಭವೇ” ಅಂದವಳು ಮಗುವನ್ನು ಎತ್ತಿಕೊಂಡು ತೊಟ್ಟಿಲಿಗೆ ಹಾಕಿಬಂದಳು. ಹತ್ತಿರ ಬಂದು ಕುಳಿತವಳನ್ನು ಸಂತೈಸುವಂತೆ ತಬ್ಬಿಕೊಂಡ… ಮತ್ತೆ ಸುಖದ ಬಾಗಿಲು ತೆರೆಯಿತು… ವೆಂಕಟೇಶಯ್ಯನವರು ಊರಿನಿಂದ ಹಿಂತಿರುಗುವಷ್ಟರಲ್ಲಿ ದಿನದಿನವೂ ಬಂದು ಮಗುವನ್ನೂ, ಪದ್ಮನ್ನೂ ಮುದ್ದಾಡಿದ… ಬಂದಾಗೆಲ್ಲಾ ತನ್ನೊಂದಿಗೆ ಬರುವಂತೆ ಒತ್ತಾಯಿಸಿ ಹೋದ.
ಆದಷ್ಟು ಬೇಗ ಏನಾದರೊಂದನ್ನು ನಿಶ್ಚಯ ಮಾಡಬೇಕೆಂದು ಪದ್ಮನೂ ಯೋಚಿಸತೊಡಗಿದಳು… ಇರಲು ಮನಸ್ಸಿಲ್ಲ… ಹೋಗುವ ಧೈರ್ಯವಿಲ್ಲ. ಇದೇ ಮನಸ್ಥಿತಿಯಲ್ಲಿ ಜೀವಮಾನವೆಲ್ಲಾ ಇರಲು ಸಾಧ್ಯವೇ… ಆದರೆ ಋಣಭಾರದಿಂದ ತಪ್ಪಿಸಿಕೊಂಡು ಹೋಗುವುದು ಹೇಗೆ… ಮಗುವನ್ನು ಕರೆದುಕೊಂಡು ಹೋಗುವುದು ಹೇಗೆ… ಬಿಟ್ಟು ಹೋಗುವುದು ಹೇಗೆ…. ತಾನು ಕಂಡಂತೆ ಶ್ರೀಧರನೇನೋ ಒಳ್ಳೆಯವನೇ… ಆದರೂ… ಯೋಚನೆಗಳ ಗೊಂದಲದಲ್ಲಿ ಬಿದ್ದಿರುವಾಗಲೇ ಅವಳ ಜೀವನಕ್ಕೆ ಈ ಹೊಸ ತಿರುವೂ ಸಿಕ್ಕಿತ್ತು… ಇದು ಎಲ್ಲಿಗೆ ಹೋಗಿ ಕೊನೆ ಮುಟ್ಟತ್ತೋ… ಮೂರ‍್ನಾಲ್ಕು ದಿನಗಳಾದರೂ ಮತ್ತೆ ವೆಂಕಟೇಶಯ್ಯನವರು ಈ ಬಗ್ಗೆ ಏನೂ ಮಾತಾಡಿಲ್ಲ. ಇದೂ ಒಂದು ತರಹ ಹೆದರಿಕೆ ಹುಟ್ಟಿಸಿ, ಈ ಮೌನ ಯಾವುದಕ್ಕೆ ಪೀಠಿಕೆಯೋ ಎನ್ನಿಸಿಬಿಟ್ಟಿತು…
*
ಮುಂದುವರೆಯುವುದು
ಸೊಸೆಗೂ ಆಘಾತ ತರುವ ಪ್ರಯತ್ನಮಾಡಬಹುದೆ?
ಕುತೂಹಲವಿದೆ….