ಗಿಳಿಯು ಪಂಜರದೊಳಿಲ್ಲ

ನೀಳ್ಗಥೆ

ಗಿಳಿಯು ಪಂಜರದೊಳಿಲ್ಲ

ಭಾಗ—ಒಂದು

ಟಿ. ಎಸ್. ಶ್ರವಣ ಕುಮಾರಿ.

two parrots in a cage - YouTube
G LAOS3 bird in cage YA - Kikaphoto

ಬಿಸಿಲಿನಲ್ಲಿ ಮಗುವಿನ ಬಟ್ಟೆ ಒಗೆಯುತ್ತಿದ್ದ ಪದ್ಮನಿಗೆ ಇದ್ದಕ್ಕಿದ್ದಂತೆ ಬವಳಿ ಬಂದಂತಾಯಿತು. ಬಗ್ಗಿ ಕಸಕುತ್ತಿದ್ದವಳಿಗೆ ಬೆಳಗ್ಗೆ ತಿಂದ ದೋಸೆ ಬಾಯಿಗೇ ಬಂದ ಹಾಗಾಯಿತು. ಮಗುವಿನ ಬಟ್ಟೆಯನ್ನು ಅವಳು ಕೆಲಸದವಳಿಗೆ ಒಗೆಯಲು ಹಾಕುತ್ತಿರಲಿಲ್ಲ. ಒಂದು ಕ್ಷಣ ನೆಟ್ಟಗೆ ನಿಂತವಳಿಗೆ ಇನ್ನು ಸಾಧ್ಯವೇ ಇಲ್ಲ ಎನ್ನಿಸಿ ಪಕ್ಕದಲ್ಲಿದ್ದ ನೀರಿನ ತೊಟ್ಟಿಯ ಕಟ್ಟೆಯ ಮೇಲೆ ಕುಳಿತಳು. ಹೊಟ್ಟೆಯ ಕಲಮಲ ಸರಿಯಾಗಲೇ ಇಲ್ಲ. ಮೆಲ್ಲಗೆ ಎದ್ದು ಬಚ್ಚಲಿಗೆ ನಡೆದು ಬಗ್ಗಿದ್ದಷ್ಟೇ… ತಿಂದದ್ದೆಲ್ಲವೂ ಹೊರಗೆ ಬಂದಿತ್ತು… ಏನಾಗಿರಬಹುದು… ನಿನ್ನೆಯಿಂದ ಏನು ನೋಡಿದರೂ ವಾಕರಿಕೆ ಬರುತ್ತಿದೆ… ಮತ್ತೇನಾದರೂ… ಒಂದು ಕ್ಷಣ ಬೆಚ್ಚಿದಳು. ರಾಮು ಹುಟ್ಟಿದ ಮೇಲೆ ತಾನಿನ್ನೂ ಹೊರಗಾಗಲೇ ಇಲ್ಲ. ಹನ್ನೊಂದು ತಿಂಗಳು ಮಗುವಿಗೆ… ಹಾಗೆಯೇ ಏನಾದರೂ…? ಮಗುವಿಗೆ ಮೊಲೆಯೂಡಿಸುವಷ್ಟು ಕಾಲವೂ ಬಸಿರಾಗುವುದಿಲ್ಲ ಅಂದಿದ್ದಳಲ್ಲ ಅಮ್ಮ…  ಅದಿರಲಾರದು, ಸುಮ್ಮನೆ ಹೆದರುವುದು ಬೇಡ ಎಂದುಕೊಂಡವಳಿಗೆ ಮಗು ಅತ್ತ ಸದ್ದು ಕೇಳಿತು.

ʻಓ ನಿದ್ದೆಯಾಯಿತೇನೋʼ ಎಂದುಕೊಂಡು ಒಳಗೆ ಹೋಗಿ ಮಗುವನ್ನೆತ್ತಿಕೊಂಡಳು. ಬೆಳಗ್ಗೆಯೇ ಎರೆದುಕೊಂಡು ಮಲಗಿದ್ದ ಮಗುವಿಗೆ ವಿಪರೀತ ಹಸಿವಾಗಿತ್ತು. ಎತ್ತಿಕೊಂಡ ಪದ್ಮ ಮಂಚದ ಮೇಲೆ ಕುಳಿತು ಹಾಲೂಡಿಸತೊಡಗಿದಳು. ರಪ್ಪನೆ ಬಾಯಿ ಹಾಕಿದ ಮಗು ತಕ್ಷಣವೇ ಬಿಟ್ಟು ಮತ್ತೆ ಅಳತೊಡಗಿತು. ಏನಾಯಿತೋ ಎಂದುಕೊಂಡವಳು ಅಳುತ್ತಿದ್ದ ಮಗುವನ್ನು ಎತ್ತಿಕೊಂಡು ಸ್ವಲ್ಪ ಸುಧಾರಿಸಿ ಮತ್ತೆ ಹಾಲೂಡಿಸಹೊರಟರೆ ವಾಕರಿಸಿಕೊಂಡು ಕೈಕಾಲು ಬಡಿದು ಅಳತೊಡಗಿತು. ʻಹಾಲಿಲ್ಲವೇʼ ಎಂದು ಒತ್ತಿ ನೋಡಿಕೊಂಡರೆ ಏಕೋ ಹಾಲು ಲೋಳೆಲೋಳೆಯಾಗಿತ್ತು. ಅರ್ಥವಾಗದೆ ಮಗುವನ್ನೆತ್ತಿಕೊಂಡೇ ಎದ್ದು ಅಡುಗೆಮನೆಗೆ ಹೋಗಿ ಕಾಯಿಸಿಟ್ಟಿದ್ದ ಹಾಲನ್ನು ಲೋಟದಲ್ಲಿ ಹಾಕಿಕೊಂಡು ಸ್ವಲ್ಪ ಸಕ್ಕರೆಯನ್ನು ಬೆರೆಸಿ ಅಲ್ಲೇ ಕಾಲಮೇಲೆ ಮಲಗಿಸಿಕೊಂಡು ಚಮಚದಿಂದ ಕುಡಿಸತೊಡಗಿದಳು. ಇಷ್ಟವಾಗದೇ ಮೊದಲೆರಡು ಚಮಚ ಉಗುಳಿದರೂ, ಹಸಿವಾಗಿದ್ದರಿಂದ ಮಗು ಗುಟುಕುಗುಟುಕಾಗಿ ಕುಡಿಯತೊಡಗಿತು. ನೀರು ಕುಡಿಯಲೆಂದು ಬಂದ ಮಾವ ವೆಂಕಟೇಶಯ್ಯ “ಯಾಕಮ್ಮ, ಮಗೂಗೆ ಮೇಲುಹಾಲು ಹಾಕ್ತಿದೀ” ಕೇಳಿದರು. “ಸಾಕಾಗ್ತಿಲ್ವೇನೋ, ಅಳ್ತಿದೆ…” ಎಂದಳು ಕತ್ತೆತ್ತದೆ. “ಹೂಂ… ಇನ್ನೇನು ವರ್ಷಕ್ಕೆ ಬಂತಲ್ಲ” ಎಂದುಕೊಳ್ಳುತ್ತಾ ಹೊರಹೊರಟರು. ಹಾಲು ಕುಡಿದ ಮಗುವನ್ನು ಭುಜದ ಮೇಲೆ ಹಾಕಿಕೊಂಡು ತೇಗಿಸಿ ಹಾಗೇ ಎದ್ದು ನಿಲ್ಲಲು ನೋಡಿದರೆ ಮತ್ತೆ ಕಣ್ಣು ಕತ್ತಲೆ ಬಂದ ಹಾಗಾಯಿತು. ಸಾವರಿಸಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಮಗುವನ್ನು ಎತ್ತಿಕೊಂಡು ಪಡಸಾಲೆಗೆ ಬಂದು ಹಾಸಿದ್ದ ಹಾಸಿನ ಮೇಲೆ ಮಲಗಿಸಿ ಆಟದ ಸಾಮಾನುಗಳನ್ನು ಅದರ ಬಳಿ ಸರಿಸಿ, “ಬಟ್ಟೆ ಒಕ್ಕೊಂಡು ಬರೋತಂಕ ಸ್ವಲ್ಪ ನೋಡಿಕೊಳ್ತಿರಿ” ಎಂದು ಅಲ್ಲೇ ಟೀವಿ ನೋಡುತ್ತಾ ಕುಳಿತಿದ್ದ ಗಂಡ ವೆಂಕಟೇಶನಿಗೆ ಹೇಳಿ ಹೊರಟಳು.

ಹೇಗೋ ಕಷ್ಟಪಟ್ಟು ಮುಗಿಸಿಕೊಂಡು ಬಂದವಳಿಗೆ ಏನೋ ಹೆಚ್ಚುಕಡಿಮೆಯಾಗಿದೆ ಅನ್ನಿಸಿ, ಈಗಿನ್ನೂ ಹನ್ನೊಂದು ಗಂಟೆ, ಶೆಟ್ಟಿ ಡಾಕ್ಟರ ಹತ್ತಿರ ಒಮ್ಮೆ ಹೋಗಿಬಂದರೆ ಹೇಗೆ ಎನ್ನಿಸಿತು. ಕುಕ್ಕರ್‌ ಜೋಡಿಸಿ, ಸಿದ್ಧವಾಗಿ ಮಗುವನ್ನೂ ಎತ್ತಿಕೊಂಡು ಇನ್ನೂ ಟೀವಿಯಲ್ಲೇ ಮುಳುಗಿದ್ದ ಗಂಡನಿಗೆ ಕುಕ್ಕರ್‌ ಆರಿಸಲು ಹೇಳಿ ಹೊರಟಳು. ಚಪ್ಪಲಿ ಹಾಕಿಕೊಳ್ಳುತ್ತಿದ್ದವಳನ್ನು “ಮಗುವನ್ನೂ ಕರೆದುಕೊಂಡು ಎಲ್ಲಿಗೆ ಹೊರಟೆ” ಎಂದರು ವೆಂಕಟೇಶಯ್ಯನವರು. “ಯಾಕೋ ಬೆಳಗಿಂದ ತಲೆ ಸುತ್ತುತ್ತಿದೆ. ಬೆಳಗ್ಗೆ ತಿಂದದ್ದೆಲ್ಲಾ ಸ್ವಲ್ಪ ಹೊತ್ತಿಗೆ ಮುಂಚೆ ವಾಂತಿಯಾಯಿತು. ಎರಡು ದಿನದಿಂದ ಸರಿಯಿಲ್ಲ. ಇವತ್ತು ಇನ್ನೂ ಜಾಸ್ತಿಯಾಗಿದೆ. ಇಲ್ಲೇ ಶೆಟ್ಟಿ ಡಾಕ್ಟರ್‌ ಹತ್ರ ತೋರಿಸಿಕೊಂಡು ಬರೋಣ ಅಂತ” ಎಂದಳು. “ಬಿಸಿಲಲ್ಲಿ ಮಗುವನ್ನೂ ಕರ್ಕೊಂಡು ಯಾಕೆ ಒಬ್ಳೇ ಹೋಗ್ತಿ. ನಾನೂ ಬರ್ತೀನಿ ಜೊತೆಗೆ” ಎಂದು ವೆಂಕಟೇಶಯ್ಯನವರೂ ಹೊರಟರು. ಇವಳ ಪುಣ್ಯಕ್ಕೆ ಹೆಚ್ಚು ಜನರಿರಲಿಲ್ಲ. ಕಾಲುಗಂಟೆ ಕಾಯುವುದರೊಳಗೆ ಇವಳ ಸರದಿ ಬಂತು. ಎರಡು ದಿನದಿಂದ ತಲೆ ಸುತ್ತುತ್ತಿರುವುದು, ಏನೋ ಇರುಸು-ಮುರುಸಾಗುತ್ತಿರುವುದು, ಇಂದು ವಾಂತಿಯಾಗಿದ್ದು, ಮೊಲೆಹಾಲು ಬಂಕೆಯಾಗಿರುವುದು ಎಲ್ಲವನ್ನೂ ಹೇಳಿದಳು. ಡಾಕ್ಟರು “ಮುಟ್ಟು ನಿಂತು ಎಷ್ಟು ದಿನವಾಯ್ತು?” ಎಂದರು. “ಮಗು ಹುಟ್ಟಿದ ಮೇಲೆ ಆಗೇ ಇಲ್ಲ” ಎಂದಳು. ಬಸಿರು ಅನ್ಸತ್ತೆ. ಇನ್ನು ಮಗುವಿಗೆ ಹಾಲು ಕುಡಿಸಬೇಡಿ. ಒಂದ್ಸಲ ಕನ್ಫರ್ಮ್‌ ಮಾಡಿಕೊಳ್ಳೋಣ” ಎಂದು ಸಿಸ್ಟರನ್ನು ಕರೆದು ಪ್ರೆಗ್ನೆಸ್ಸಿ ಚೆಕ್‌ ಕಿಟ್ಟನ್ನು ಕೊಟ್ಟು ಅವಳೊಂದಿಗೆ ಒಳಹೋಗಲು ಹೇಳಿದರು. ಐದೇ ನಿಮಿಷದಲ್ಲಿ ಪದ್ಮ ಮತ್ತೆ ಬಸುರಿಯೆಂದು ನಿಶ್ಚಿತವಾಗಿಹೋಯಿತು! ಡಾಕ್ಟರು ವೆಂಕಟೇಶಯ್ಯನವರನ್ನು ಕರೆದು, “ಕಂಗ್ರಾಜ್ಯುಲೇಶನ್‌ ಬೇಗ ನಿಮ್ಮನೆಗೆ ಮತ್ತೊಂದು ಮೊಮ್ಮಗು ಬರ್ತಾ ಇದೆ” ಎಂದು ಹೇಳಿ ಪದ್ಮನಿಗೆ ಮಿಕ್ಕ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಾ ಈಗ ತೆಗೆದುಕೊಳ್ಳಬೇಕಾದ ಔಷಧಿಯ ವಿವರವಿದ್ದ ಚೀಟಿಯನ್ನು ಕೊಟ್ಟರು. ವೆಂಕಟೇಶಯ್ಯನವರ ಮುಖ ಕಪ್ಪಿಟ್ಟುಹೋಯಿತು. ಪದ್ಮ ನಖಶಿಖಾಂತ ಬೆವರಿಹೋದಳು. ಡಾಕ್ಟರ ಇನ್ಯಾವ ಮಾತೂ ಇಬ್ಬರ ಕಿವಿಗೂ ಬೀಳಲಿಲ್ಲ. ಯಾಂತ್ರಿಕವಾಗಿ ಅವರು ಕೊಟ್ಟ ಚೀಟಿಯನ್ನು ತೆಗೆದುಕೊಂಡು ದುಡ್ಡನ್ನು ಕೊಟ್ಟು ಹೊರಬಂದರು. ದಾರಿಯುದ್ದಕ್ಕೂ ಯಾವ ಮಾತೂ ಇಲ್ಲ.

ಮನೆಗೆ ಬಂದವಳೇ ಮಗುವನ್ನು ಆಡಲು ಬಿಟ್ಟು ಅಡುಗೆಮನೆಗೆ ಹೊರಟಳು. ಇನ್ನು ವೆಂಕಟೇಶಯ್ಯನವರಿಗೆ ತಡೆಯಲಾಗಲಿಲ್ಲ. “ಸ್ವಲ್ಪ ಇಲ್ಲಿ ಬಾ” ಎಂದು ಜೋರಾಗೇ ಕರೆದರು. “ಆಗ್ಲೇ ಹನ್ನೆರಡು ಗಂಟೆ ಆಗಿದೆ. ಇನ್ನೂ ಅಡುಗೆ ಆಗಿಲ್ಲ. ಮಗೂಗೆ ತಿನ್ಸಕ್ಕೆ ಹೊತ್ತಾಗತ್ತೆ. ನೀವು ಶುಗರ್‌ ಪೇಶೆಂಟು. ಒಂದೂವರೆ ಒಳಗೆ ನಿಮ್ಮ ಊಟವಾಗ್ಬೇಕು. ಆಮೇಲೆ ಮಾತಾಡೋಣ” ಎನ್ನುತ್ತಾ ಅಡುಗೆಯನ್ನು ಮುಂದುವರೆಸಲು ಒಳಗೆ ಹೋದಳು. ಉಪ್ಪು, ಹುಳಿ, ಖಾರ ಕೂಡಿಟ್ಟು, ಹುಳಿಯ ಪಾತ್ರೆಯನ್ನು ಸಣ್ಣ ಉರಿಯಲ್ಲಿ ಒಲೆಯ ಮೇಲಿರಿಸಿ, ಪಕ್ಕದಲ್ಲೇ ಒಗ್ಗರಣೆಯನ್ನೂ ಮಾಡಿಟ್ಟಳು. ಸಣ್ಣ ಬಟ್ಟಲಿಗೆ ಬಿಸಿ ಅನ್ನ, ಬೆಂದ ಬೇಳೆ, ತರಕಾರಿ, ಉಪ್ಪು ತುಪ್ಪ ಹಾಕಿ ಚೆನ್ನಾಗಿ ಮಿದ್ದು ಮಗುವನ್ನು ಎತ್ತಿಕೊಂಡು ಬಾಲ್ಕನಿಗೆ ನಡೆದಳು.

*

“ಶ್ರೀನಿವಾಸಾ… ವೆಂಕಟ್ರಮಣಾ… ಇದೇನು ಹೊಸ ಸಮಸ್ಯೆ ತಂದ್ಯಪ್ಪಾ” ಎನ್ನುತ್ತಾ ಕುರ್ಚಿಯಲ್ಲಿ ಕುಸಿದ ವೆಂಕಟೇಶಯ್ಯ ಯೋಚನೆಗೆ ಬಿದ್ದರು. ಹೌದೂ…. ಕರೆದಾಗ ಪದ್ಮ ಎದುರಲ್ಲಿ ನಿಂತಿದ್ದರೆ ತಾನು ಏನು ಕೇಳುತ್ತಿದ್ದೆ… ಹೇಗೆ ಕೇಳುತ್ತಿದ್ದೆ… ಅರ್ಥವಾಗದೇ ಗೊಂದಲದಲ್ಲಿ ಬಿದ್ದರು. ಮಗನಿಗೆ ಮದುವೆ ಮಾಡಿದ್ದೇ ತಪ್ಪಾಯ್ತೆ? ಮೊದ್ಲಿಂದ್ಲೂ ಸೀನಿ ದಡ್ಡರಲ್ಲಿ ದಡ್ಡ. ಮಿಡಲ್‌ ಸ್ಕೂಲಿಂದ ಮೇಲೆ ಹೋಗ್ಲೇ ಇಲ್ಲ. ಇಂತದು ಬೇಕೂಂತ ಕೇಳಲ್ಲ; ಕೊಟ್ಟದ್ದನ್ನ ಬೇಡ ಅನ್ನಲ್ಲ. ಯಾರು ಏನು ಹೇಳಿದರೂ ಕೇಳಿಕೊಂಡು, ಮಾಡಿಕೊಂಡು ನಯವಿನಯವಾಗಿ ಇರ್ತಾನೆ ಅಷ್ಟೇ. ಇರಸರಿಕೆಯೂ ಅಷ್ಟೇ. ನೋಡಿದ ತಕ್ಷಣವೇ ಯಾರಿಗಾದರೂ ತಿರುಳು ಅರ್ಥವಾಗಿಹೋಗುತ್ತೆ. ಜೀವಂತ ಬೊಂಬೆ ಹಾಗಿದಾನೆ ಅಷ್ಟೇ. ಚಿಕ್ಕಂದ್ನಲ್ಲಿ ಅವ್ನಿಗೆ ಬರ್ತಿದ್ದ ಫಿಟ್ಸ್‌ನಿಂದ ಹಂಗಾದ್ನಾ…? ನೂರು ಸಲ ತಲೆಯಲ್ಲಿ ಬಂದಿದ್ದನ್ನೇ ಮತ್ತೊಮ್ಮೆ ತಲೆಗೆ ತಂದುಕೊಂಡರು.

ಎರಡೋ, ಮೂರೋ ಅಬಾರ್ಷನ್‌ ಆದ್ಮೇಲೆ ಸೀನಿ ಹುಟ್ಟಿದ್ದು ಮದುವೆಯಾಗಿ ಹತ್ವರ್ಷವಾದ ಮೇಲೆ. ಮತ್ತೆ ಮಕ್ಕಳಾಗ್ಲೇ ಇಲ್ಲ. ಇವನಿಗೆ ಹದ್ನೈದು ವರ್ಷವೇನೋ ಲಕ್ಷ್ಮಿಗೆ ಅದೇನೋ ಜ್ವರ ಬಂದಿದ್ದೇ ನೆಪವಾಗಿ ತೀರ್ಕೊಂಡಾಗ… ಆಗ ಬಂದಿದ್ದ ಚಿಕ್ಕಪ್ಪನ ಮಗ ಲಕ್ಷ್ಮೀಕಾಂತ ಯಾರೊಂದಿಗೋ ಹೇಳ್ತಿದ್ದ ಮಾತು ತಾನಾಗೇ ಕಿವಿಗೆ ಬಿದ್ದಿತ್ತು. “ಮಾಡ್ಬಾರದ್ದ ಮಾಡಿದ್ರೆ ಆಗ್ಬಾರದ್ದೇ ಆಗೋದು. ಈಗ್ನೋಡು. ನಮ್ತಾತ ನಮ್ಮಪ್ಪಂಗೆ ಮೋಸ ಮಾಡಿ ಆಸ್ತೀಲಿ ದೊಡ್ಡ ಪಾಲು ಇವನಪ್ಪಂಗೆ ಕೊಟ್ರಲ್ಲಾ ಈಗ ಅದನ್ನುಳಿಸ್ಕೊಳ್ಳಿ ನೋಡೋಣ. ಕಡೆಗೆ ವೆಂಕ್ಟೇಶನ ಆಸ್ತಿ ಎಲ್ಲಾ ನಂದೇನೆ. ಅವನು ಮಗಂಗೆ ಮದ್ವೆ ಮಾಡ್ದ ಹಾಗೇ… ಅವನ ವಂಶ ಉದ್ಧಾರವಾದ ಹಾಗೇ…” ಅಂತ ಇನ್ನೇನೇನೋ ಅರ್ಥ ಬರೋ ಹಾಗೆ… ಅಪ್ಪ ಇಬ್ರಿಗೂ ಸಮನಾಗೇ ಹಂಚಿದ್ರು. ಇವನಪ್ಪ ಕುಡ್ತ, ಜೂಜಿಗೆ ಬಿದ್ದು ಕಳ್ಕೊಂಡ. ಈಗ ಮಗ ತಾತನ್ಮೇಲೆ ಕಾರ್ತಾನೆ. ಸೀನಂಗೆ ಮದ್ವೆಯಾಗಿ, ಮಕ್ಕಳಾಗಿ ನಮ್ಮ ವಂಶ ಮುಂದುವರೀಲೇ ಬೇಕು. ಇಲ್ದಿದ್ರೆ ನಾನು ಹೋದ್ಮೇಲೆ ಸೀನನ್ನ ಮುಂಡಾಯಿಸಕ್ಕೆ ಅವನಿಗೇನೂ ಕಷ್ಟವಿಲ್ಲ.  ಏನೇ ಆದ್ರೂ ಸರಿ… ಕಷ್ಟಪಟ್ಟು ಗಳಿಸಿ, ಉಳಿಸ್ಕೊಂಡಿರೋ ಊರಲ್ಲಿರೋ ಐವತ್ತೆಕರೆ ಕಾಫಿ, ಏಲಕ್ಕಿ ತೋಟ; ಇಷ್ಟು ದೊಡ್ಡ ಮನೆ; ಮಳಿಗೆ, ವ್ಯವಹಾರ ಯಾವ್ದೂ ಲಕ್ಷ್ಮೀಕಾಂತನ ಪಾಲಾಗಕ್ಕೆ ಬಿಡ್ಬಾರ್ದು ಅಂತ ಅವತ್ತೇ ನಿರ್ಧಾರ ಮಾಡಿದ್ದು.

ಸೀನಂಗೆ ಇಪ್ಪತ್ತೈದು ವರ್ಷವಾದಾಗ್ಲಿಂದ ಅವನಿಗೊಂದು ಹುಡುಗಿ ಹುಡುಕಕ್ಕೆ ಶುರುಮಾಡಿದ್ದು. ಆಗ್ಲೇ ಅವ್ನಿಗೆ ನಲವತ್ತರ ಹತ್ತಿರತ್ತಿರ ವಯಸ್ಸೇನೋ ಅನ್ನೋ ಹಾಗೆ ಕಾಣ್ತಿದ್ದ. ಅರ್ಧ ತಲೆಕೂದ್ಲು ನೆರೆತುಹೋಗಿತ್ತು. ಎಷ್ಟು ರೀತೀಲಿ ಹೆಣ್ಣು ಹುಡುಕಿದ್ದು. ಹೊಸ ಸಂಬಂಧಗಳೂ ಕೂಡಿ ಬರ‍್ಲಿಲ್ಲ; ಇವ್ನನ್ನ ನೋಡಿದ್ದ, ಇವನ ಬಗ್ಗೆ ಗೊತ್ತಿದ್ದ ಯಾವ ಸಂಬಂಧಿಕರೂ ಆಸ್ತಿ ಮುಖಾ ನೋಡೀನೂ ಹೆಣ್ಣು ಕೊಡ್ಲಿಲ್ಲ. ಯಾವ ಯಾವ ಮೂಲದಲ್ಲಿ ಹುಡುಕಾಟ ನಡೆಸಿದ್ರೂ ಏನೂ ಪ್ರಯೋಜನವಾಗ್ಲಿಲ್ಲ. ಎಲ್ರೂ ಏನೋ ಒಂದು ನೆಪ ಕೊಟ್ಟು ಬೇಡ ಅನ್ನೋವ್ರೆ. ಏನ್ಮಾಡ್ಬೇಕಿತ್ತು?! ಸದಾ ಅಣ್ಣಾ ಅಂತ ಕರೀತಾ ವಿಶ್ವಾಸದಲ್ಲಿ ಬಂದು ಹೋಗಿ ಮಾಡೋ ಚಿಕ್ಕಮ್ಮನ ಮಗ್ಳು ಸುಂದ್ರಮ್ಮನ್ನ ಕೇಳಿದ್ದಕ್ಕೆ, “ಅಣ್ಣಾ ತಪ್ಪು ತಿಳ್ಕೋಬೇಡ. ನನ್ನ ಮಗಳು ಓದಿದಾಳೆ. ನೋಡಕ್ಕೂ ಚೆನ್ನಾಗಿದಾಳೆ. ಅವಳು ಏನೂ ಓದಿಲ್ದೇ ಇರೋನ್ನ ಒಪ್ಕೊಂತಾಳಾ. ಈಗಿನ ಮಕ್ಕಳಿಗೆ ಆಸ್ತಿ ಬೇಕಿಲ್ಲ. ಅವಳ ವಿಷ್ಯ ಮರೆತ್ಬುಡು. ಯಾರಾದ್ರೂ ಬಡವರ ಮನೆ ಹೆಣ್ಣನ್ನ ನೋಡೋಣ. ಬೇಕಾದ್ರೆ ಅವರಿಗೊಂದಿಷ್ಟು ದುಡ್ಡಿನ ಸಹಾಯಾನೂ ಮಾಡಿ ಹೆಣ್ಣು ಕೇಳೋಣ. ಅಂತವ್ರು ಸಿಕ್ಕೇ ಸಿಕ್ತಾರೆ” ಎಂದವಳು ತಾನೇ ಮುಂದೆ ನಿಂತು ಅವರ ಮನೆಗೆ ಮೆಣಸಿನ ಪುಡಿ ಕುಟ್ಟಕ್ಕೆ ಬರೋ ಲಲಿತಮ್ಮನ ಮಗಳನ್ನ ಕೊಡೋದಕ್ಕೆ ಒಪ್ಪಿಸಿ ದಂಪತಿಗಳನ್ನು ಕರೆದುಕೊಂಡು ಬಂದಳು. ಬಂದವರು ಮನೆಯನ್ನು ನೋಡಿ ದಂಗಾಗಿ ಹೋದರು. “ಶ್ರೀನಿವಾಸ್‌ ಓದಿಲ್ದಿದ್ರೂ ನಮ್ಗೇನು ಪರವಾಗಿಲ್ಲ. ಕೆಲವರಿಗೆ ಬಾಲನೆರೆ ಬಂದ್ಬಿಡತ್ತೆ. ಏನ್ಮಾಡಕ್ಕಾಗತ್ತೆ? ನಮ್ಮಗಳು ಲಕ್ಷಣವಾಗಿದಾಳೆ, ಪಿಯೂಸಿ ತನಕ ಓದಿದಾಳೆ. ಜಾಣೆ. ಮುಂದೆ ಓದಿಸಕ್ಕೆ ನಮಗಾಗ್ಲಿಲ್ಲ ಅಷ್ಟೇ. ಮನೆ ಕೆಲ್ಸ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗ್ತಾಳೆ. ಆದ್ರೇ…” ಅಂತ ನಿಲ್ಲಿಸಿ ಮುಖ ನೋಡಿದ್ರು “ಪರವಾಗಿಲ್ಲ ಹೇಳಿ” ಅಂದ್ಮೇಲೆ “ನಾವು ಅಲ್ಲಿ ಇಲ್ಲಿ ಸಣ್ಣ ಪುಟ್ಟ ಅಡುಗೆ ಕೆಲಸಕ್ಕೆ, ಸಹಾಯಕ್ಕೆ ಹೋಗೋದಷ್ಟೆ. ಮನೇಲಿ ಒಂದು ಹೊತ್ತು ತಿಂದ್ರೆ ಇನ್ನೊಂದು ಹೊತ್ತು ಉಪವಾಸ. ಮೈತುಂಬಾ ಸಾಲ ಇದೆ. ಮದುವೆ ಮಾಡಕ್ಕೂ ನಮ್ಮ ಹತ್ರ ದುಡ್ಡಿಲ್ಲ” ಎಂದು ಹುಡುಗಿಯ ತಂದೆ ರಮಣ ಮೂರ್ತಿ ಕೈಮುಗಿದರು. ಸುಂದರಮ್ಮನೇ ಮಧ್ಯಸ್ತಿಕೆ ಮಾಡಿ ಅವರು ಮಾರವಾಡಿಯ ಹತ್ತಿರ ಮಾಡಿಕೊಂಡಿರುವ ಸಾಲ, ಸಹಕಾರಿ ಬ್ಯಾಂಕಿನಲ್ಲಿ ಮಾಡಿಕೊಂಡಿರುವ ಸಾಲ, ಅಲ್ಲಿ ಇಲ್ಲಿ ಮಾಡಿಕೊಂಡಿರುವ ಕೈಸಾಲ, ಅಸಲು, ಬಡ್ಡಿ ಎಲ್ಲಾ ಸೇರಿ ಹತ್ತಿರ ಹತ್ತಿರ ಐದು ಲಕ್ಷ ತೀರಿಸಿಕೊಟ್ಟು, ಎರಡೂ ಕಡೆಯ ಖರ್ಚನ್ನೂ ವಹಿಸಿಕೊಂಡು ಮದುವೆ ಮಾಡಿಕೊಳ್ಳುವ ಮಾತಾಯಿತು. “ಹುಡುಗಿ ಒಪ್ಪಬೇಕಲ್ಲ” ತಾವಂದದ್ದಕ್ಕೆ “ಅವ್ಳು ನಾವು ಹಾಕಿದ ಗೆರೆ ದಾಟಲ್ಲ. ಹಾಗೆ ಬೆಳೆಸಿದೀವಿ. ಈ ಮನೆ ಸೇರಕ್ಕೆ ಅವಳು ಪುಣ್ಯ ಮಾಡಿರ‍್ಬೇಕು. ಯಾಕೊಪ್ಪಲ್ಲ” ಎನ್ನುತ್ತಾ ಮಾತು ಮುಗಿಸಿ ಎದ್ದರು. ಸೀನನ್ನ ಕೇಳಿದರೆ “ನೀವೆಲ್ಲಾ ಹೇಗೆ ಹೇಳಿದ್ರೆ ಹಾಗೆ” ಎಂದ. ಅಂತೂ ಹುಡುಗ ಹುಡುಗಿ ಒಬ್ಬರನ್ನೊಬ್ಬರು ನೋಡದೇನೇ ಮದುವೆ ನಡೆದುಹೋಯಿತು… ಈಗೇನು… ಮಾಡೋದು.

(ಮುಂದಿನ ಭಾಗ- ಸೋಮವಾರ(5/7/2021) ಪ್ರಕಟವಾಗುವುದು)

*****

6 thoughts on “ಗಿಳಿಯು ಪಂಜರದೊಳಿಲ್ಲ

  1. ಕತೆ ತುಂಬಾ ಚೆನ್ನಾಗಿದೆ ವಾಣಿ ಅವರಿಗೆ.

  2. ಆರಂಭದ ಕೆಲವೇ ಸಾಲುಗಳಲ್ಲಿ ಓದುಗನನ್ಬು ಹಿಡಿದಿಟ್ಟುಕೊಳ್ಳುವ ಕಥೆ.ಮುಂದಿನ ಕಂತಿನ ನಿರೀಕ್ಷೆ ಮಾಡುವಂತಿದೆ.

  3. ಬಡತನದಿಂದಾಗುವ ಸಮಸ್ಯೆಗಳು ಪ್ರಾರಂಭದಲ್ಲಿಯೇ ಎದುರಾಗಿವೆ. ಇನ್ನು ನೋಡಬೇಕು.

Leave a Reply

Back To Top