ಅಂಕಣ ಬರಹ

ರಂಗ ರಂಗೋಲಿ

ಅಮ್ಮನೊಳಗೆ ಅರಳಿದ

ಅಖಂಡ ಲೋಕ

Pin on Art Deco

ಈ ಸಲ ಹುಣ್ಣಿಮೆಗೆ ಜನ ತುಂಬ ಆಗಬಹುದಾ..ಸ್ಪೆಶಲ್ ಬಸ್ ಗಳು ರಾತ್ರಿಯೆಲ್ಲ ಇರುವುದರಿಂದ ಬಂದು ಹೋಗುವ ಜನಗಳು ರಶ್ ಅಷ್ಟು ಗೊತ್ತಾಗದು. ನಾವು ಚಿಕ್ಕವರಿರುವಾಗ ಅದೆಂತಹ ಸಂಭ್ರಮ!, ನಮಗೆ ಆ ರಶ್ ಮಧ್ಯೆ ನೂರಿಕೊಂಡು ಆವೇಶ ಬಂದವರ ಬಳಿ ನಿಲ್ಲುವುದೇ ರೋಮಾಂಚನ. ಆ ಖುಷಿ ಈಗ ಸಿಗದು. ಆದರೆ ಊರಿನ ಜಾತ್ರೆ, ವೀರಭದ್ರ ಕರೆಯುತ್ತಾನೆ. ಬಾಲ್ಯದ ಪುಳಕಗಳನ್ನು ಮೆಲುಕು ಹಾಕುತ್ತ ಜಾತ್ರೆಗೆ ಒಂದು ಸುತ್ತು ಬರುವುದು. ಮತ್ತೆ ಬೇರೆ ಊರಿನಲ್ಲಿ ನೆಲೆ ಕಂಡ ಬಾಲ್ಯ ಸ್ನೇಹಿತರೆಲ್ಲ ಸಿಗುವುದೇ ಈ ಜಾತ್ರೆಯ ಸಂಭ್ರಮದಲ್ಲಿ. ಅದೊಂತರಹ ಖುಷಿ.  ಅನನ್ಯ ಸಂತಸ.

ಹೀಗೆ ನಮ್ಮ ಊರಿನ ಜಾತ್ರೆಗೆ ಎರಡು ದಿನ ಉಳಿದಿರುವಾಗ ಅದರ ನೆನಕೆ ಮಾಡಿಕೊಂಡು ಎದುರಿಗಿದ್ದ ಹಿರಿಯರೊಬ್ಬರಿಗೆ ಬಣ್ಣಿಸುತ್ತಿದ್ದೆ . ಮೊಬೈಲ್ ಕರೆ.

” ಗೆಳತಿಗೆ ಅಕ್ಸಿಡೆಂಟ್ ಮಣಿಪಾಲದ ಆಸ್ಪತ್ರೆಯಲ್ಲಿದ್ದಾಳೆ.”

 ” ಇವಳದ್ದು  ಡ್ರೈವಿಂಗ್ ಬಹಳ ಸ್ಪೀಡ್”

ಎನ್ನುತ್ತಾ ನೋಡಲು ಹೋದೆ. ಕಾಲುಗಳಿಗೆ ಬ್ಯಾಂಡೇಜ್ ಬಿಗಿದು ಮಲಗಿದ್ದಾಳೆ. ಕೈಗೂ ತಾಗಿದೆ. ‘ಕಾಲು ಫ್ರಾಕ್ಚರ್’ ಎನ್ನುತ್ತ ನಕ್ಕಳು.

 ಹಿಂತಿರುಗುವಾಗ ಥಟ್ಟನೆ‌ ಮನಸ್ಸಿಗೆ ಹೊಕ್ಕ ಯೋಚನೆ

” ಅರೇ!, ಇವಳ ನಾಟಕ ಹತ್ತಿರದಲ್ಲೇ ಇತ್ತಲ್ವಾ..’

ಇದು ನಡೆದದ್ದು ಬುಧವಾರ ಇರಬೇಕು. ಗುರುವಾರ ನನ್ನ ಕಾಣಲು ರಂಗದ ಸ್ನೇಹಿತರಾದ ರಾಘವೇಂದ್ರ ಬಂದರು.

” ಸಮಸ್ಯೆಯಾಗಿದೆ ಮೇಡಂ. ಶನಿವಾರ ನಮ್ಮ ನಾಟಕ ಉಡುಪಿಯ ಪುತ್ತೂರಿನಲ್ಲಿ..ಆದರೆ ನಾಟಕದ ನಾಯಕಿ ಆಸ್ಪತ್ರೆಯಲ್ಲಿ ಮಲಗಿದ್ದಾರೆ. “

“ಈಗ..? ಕ್ಯಾನ್ಸಲ್ ಮಾಡಿದ್ರಾ “

 ” ಹೇಳಿದೆ, ಆದರೆ ಅವರು ಆಮಂತ್ರಣ ಪತ್ರಿಕೆ ಹಂಚಿಯಾಗಿದೆ. ಬೇರೆ ನಾಟಕ ಅಂದರೆ ಕೂಡಲೇ ಹೇಗೆ ಹೊಂದಿಸುವುದು? ಕೆಲವು ತಂಡಗಳನ್ನೂ ಸಂಪರ್ಕಿಸಿದೆ. ಪ್ರಯೋಜನವಾಗಲಿಲ್ಲ.”

” ಅಯ್ಯೋ,ಈಗೇನು ಮಾಡ್ತೀರಿ ರಾಘ”

” ಅದೇ ತಿಳಿಯುತ್ತಿಲ್ಲ. ಎರಡು ದಿನ ಉಳಿದಿರುವಾಗ ಏನು ಮಾಡಲು ಸಾಧ್ಯ. ಅದಕ್ಕೆ ಕೊನೆಯದಾಗಿ ನಿಮ್ಮತ್ರ ಬಂದಿರುವುದು.  ಆ ಪಾತ್ರ ನೀವು ಮಾಡಬಹುದೇ “

ಎರಡು ದಿನ ಉಳಿದಿದೆ. ನಾಟಕ ಒಂದೇ ಸಲ ನೋಡಿರುವುದು ಮಾತ್ರ.

ಹೇಗೆ ಮಾಡುವುದು..??

“ಎರಡೇ ದಿನ ಇರುವುದಲ್ವಾ..ರಾಘ..

ಅದೂ ಮುಖ್ಯಪಾತ್ರ “

” ನೀವು ‘ಹಾಂ’ ಎನ್ನಿ ಆಗುವುದು. ನಮಗೆ ಬೇರೆ ಯಾವ ದಾರಿಯೂ ಉಳಿದಿಲ್ಲ. ಸಂಘಟಕರೂ ಅಸಹಾಯಕರು. ಅವರಲ್ಲಿ ಚರ್ಚಿಸಿದೆ. ಅವರೇ ಕೊನೆಯ ಪರಿಹಾರವಾಗಿ ನಿಮ್ಮ ಹೆಸರು ಹೇಳಿದ್ದಾರೆ. ಅವರು ಮಾಡಬಲ್ಲರು. ಅವರಿಂದ ಸಾಧ್ಯ. ಒಮ್ಮೆ ಕೇಳಿನೋಡಿ ಎಂದರು. ಮರ್ಯಾದೆ ಹೋಗುತ್ತದೆ. ನೀವು ಕಲಾವಿದೆ. ನಿಮಗೆ ನಾನು ಏನೂ ಹೇಳಬೇಕಾಗಿಲ್ಲ.”

ಹೇಗೆ ಹೇಳಲಿ..? ಎರಡು ದಿನಗಳ ರಿಹರ್ಸಲ್ ನಲ್ಲಿ ನಾಟಕದ ಮುಖ್ಯ ಪಾತ್ರ ಮಾಡುವುದು ಸಾಧ್ಯವೇ? ಅದೂ ನೇರವಾಗಿ ತುಂಬಿದ ಜನರೆದುರಿಗೆ ಪ್ರಸ್ತುತಿಗೊಳ್ಳುವುದು. ಆದರೆ ಸಾಧ್ಯವಿಲ್ಲ ಎಂದು, ಒಬ್ಬ ರಂಗಕಲಾವಿದೆಯಾಗಿ ಹೇಗೆ ಹೇಳುವುದು, ಸಾಧ್ಯವೇ?

ತಳಮಳಕ್ಕೊಳಗಾದೆ. ಹೊಟ್ಟೆಯೊಳಗೆ ಭಯತುಂಬಿದ ಸಂಕಟ.

“ತಳಮಳವಾಗ್ತಿದೆ ರಾಘ”

” ಇಲ್ಲ ಮೇಡಂ,ಒಪ್ಪಿಕೊಳ್ಳಿ. ದೇವರಿದ್ದಾನೆ. ನಿಮ್ಮೆದುರು ಕಲಾವಿದ, ಸಂಘಟಕ ಅಸಹಾಯಕನಾಗಿ ನಿಂತಿದ್ದೇನೆ. ಎಲ್ಲವೂ ನಿಮ್ಮ ನಿರ್ಧಾರ ಹೊಂದಿಕೊಂಡಿದೆ. ಬೇರೆಯವರಿಗೆ ಕಷ್ಟ.”

” ಸರಿ. ಇಂದು ಎಷ್ಟು ಹೊತ್ತಿಗೆ, ಎಲ್ಲಿ ರಿಹರ್ಸಲ್ ರಾಘ”

ಕಲಾವಿದ ಒತ್ತಡ ಕಳಚಿಕೊಂಡ ನಗು ಅರಳಿಸಿದ.

ಇದು ಉಡುಪಿಯ ‘ರಂಜನ ಕಲಾವಿದರು’ ಎಂಬ ರಂಗತಂಡಕ್ಕೆ ಎದುರಾದ ಅನಿರೀಕ್ಷಿತ ಅಪಘಾತ.

ರಂಗ ತಂಡವೊಂದನ್ನು ಕಟ್ಟುವುದೆಂದರೆ ಸುಲಭದ ಕಾರ್ಯವಲ್ಲ.  ಅದು ಭಗೀರಥನ ತಪಸ್ಸು. ಅದೆಷ್ಟು ಪರಿಶ್ರಮ, ತಂಡದ ಕೆಲಸ. ಎಲ್ಲರೂ ಜೊತೆಯಾಗಿ ಕೈಗೂಡಿಸಬೇಕು.

 ಕಥೆ,ಕಲಾವಿದರು, ತಂತ್ರಜ್ಞರು, ರಿಹರ್ಸಲ್, ವೇಷಭೂಷಣ, ಟ್ರಾಯಲ್ ಗೆ ಸ್ಥಳ, ನಿರ್ದೇಶನ..ಎಲ್ಲಾ ಸಹಕಾರ ಬೇಕು. ನಾಟಕ ಕಟ್ಟುವುದೆಂದರೆ  ಬಗೆಬಗೆ ಬಣ್ಣದ ಮನಸ್ಸುಗಳನ್ನು  ಕಟ್ಟುವುದು. ಬಲು ನಾಜೂಕಿನ ಕೆಲಸ. ಹೆಚ್ಚು ಬಿಗಿಯಾಗಬಾರದು, ಸಡಿಲಗೊಳ್ಳಬಾರದು. ಒಂದು ಮನಸ್ಸು ಉದುರಿದರೂ ಕಟ್ಟಡ ಉರುಳುವ ಭಯ. ಸಂಘಟಕಳಾಗಿ ಈ ಏರಿಳಿತಗಳನ್ನು ನಾನೂ ಅನುಭವಿಸಿದ್ದೆ. ಇಷ್ಟು ಕಷ್ಟಗಳ ನಂತರ ನಾಟಕವು ಒಂದಿಷ್ಟು ಷೋ ಕಾಣಬೇಕು. ಅದೂ ಅಷ್ಟು ಸುಲಭವಲ್ಲ. ಸಿಕ್ಕಿರುವ ಅವಕಾಶಕ್ಕೆ ಕೊನೆಯ ಕ್ಷಣದಲ್ಲಿ ಇಂತಹ ಕಠಿಣ ತಿರುವು ಸಿಕ್ಕಿದರೆ..?

ಒಪ್ಪಿಕೊಂಡೆ. ಹಾಗೆ ನೋಡಿದರೆ ರಂಜನ್ ಕಲಾವಿದರು ಈ ನಾಟಕ ಕಟ್ಟುವ ನಿರ್ಧಾರ ಮಾಡಿದಾಗ ರಂಗಗೆಳೆಯ ರಾಘವೇಂದ್ರ ನನ್ನಲ್ಲಿ ಚರ್ಚಿಸಿದ್ದರು. ಇದರ ಮುಖ್ಯ ಪಾತ್ರ ನೀವು ಮಾಡಬೇಕು. ನಿಮಗೆ ಹೊಂದುವುದು ಎಂದೂ ಹೇಳಿದ್ದರು.

ಉಡುಪಿಯ ಹೆಚ್ಚಿನ ರಂಗತಂಡಗಳ ತಾಯಿ ಬೇರು

” ರಂಗಭೂಮಿ ಉಡುಪಿ” ಯೇ ಆಗಿದೆ. ರಂಜನ ಕಲಾವಿದರು ಎಂಬ ಸಂಸ್ಥೆ ಹುಟ್ಟುಹಾಕಿದ ರಾಘವೇಂದ್ರ ಅವರು ಉಡುಪಿ ರಂಗಭೂಮಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರದ ದಿನಗಳಲ್ಲಿ ತನ್ನೂರಿನಲ್ಲಿ ಪುಟ್ಟದಾಗಿ ತಂಡವೊಂದನ್ನು ಕಟ್ಟಿದ್ದರು. ಹಾಗಾಗಿ ಈ ನಾಟಕದ ಬಿತ್ತು ಮನಸ್ಸಿನಲ್ಲಿ ಬಿದ್ದಾಗ ಒಂದು ಪಾತ್ರ ನಾನು ಮಾಡಬೇಕು ಎಂಬ ತಮ್ಮ ಇಷ್ಟವನ್ನು ತಿಳಿಸಿದ್ದರು. ಪಾತ್ರ ಮಾಡಲು ಅಂದಿನ ಪರಿಸ್ಥಿತಿ ಯಲ್ಲಿ, ನನಗೆ ಅಸಾಧ್ಯವಾಗಿದ್ದರಿಂದ, ನನ್ನ ಕಲಾವಿದೆ ಗೆಳತಿಯ ಹೆಸರನ್ನು ಆ ಪಾತ್ರಕ್ಕೆ ಸೂಚಿಸಿದ್ದೆ. ಆಕೆಗೇ ಈಗ ಆಕ್ಸಿಡೆಂಟ್ ಆದದ್ದು.

 ಬದಲಾದ ಸಂದರ್ಭ, ಮತ್ತೆ ನಾಟಕದ ಪಠ್ಯವನ್ನು ನಾನು ಕೈಗೆತ್ತಿ,ಕಣ್ಣಿಗೊತ್ತಿಕೊಳ್ಳುವಂತೆ ಮಾಡಿತ್ತು.

ಮರಾಠಿ ನಾಟಕ

” ಆಯಿ ರಿಟೈರ್ ಹೋತೇಯಿ” “ಅಮ್ಮ ರಿಟೈರ್ ಆಗ್ತಾಳೆ” ತುಳುವಿನಲ್ಲಿ

 ” ಅಮ್ಮ ರಿಟೈರ್  ಆಪೊಲು”

 ಈ ನಾಟಕ ಉಡುಪಿ ಬೈಲೂರಿನ ನಂದಗೋಕುಲ ಕಲಾಕಿರಣ್ ಕ್ಲಬ್ ವಾರ್ಷಿಕೋತ್ಸವಕ್ಕೆ ನಿಗದಿಯಾಗಿತ್ತು. ಕಲಾವಿದರೂ ಸಾಕಷ್ಟು ರಿಹರ್ಸಲ್ ನಡೆಸಿ ತಯಾರಾಗಿದ್ದರು. ಇನ್ನೇನು ಉಳಿದಿರುವುದು ಮೂರು ದಿನ ಎನ್ನುವಾಗ ಅವಘಡ ಸಂಭವಿಸಿತ್ತು.

ಇದರ ಕತೆ ಸುತ್ತುವುದೇ, ತಾಯಿಯ ಪಾತ್ರದ ಸುತ್ತ.  ಮನೆಯ ಜವಾಬ್ದಾರಿಗಳನ್ನೆಲ್ಲ ಪ್ರೀತಿಯಿಂದ ನಿರ್ವಹಿಸುವ ತಾಯಿ. ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿಸುತ್ತಾಳೆ. ಜವಾಬ್ದಾರಿ ಹೊರಲು ಹಿಂದೇಟು ಹಾಕುವ ಪತಿ. ಮಕ್ಕಳೂ ಮದುವೆಯಾಗಿ ಸೊಸೆಯಂದಿರು ಮನೆ ತುಂಬಿದರೂ ಅಮ್ಮನಿಗೆ ಮುಗಿಯದ ಕೆಲಸ. ಅಪ್ಪ ರಿಟೈರ್ ಆಗಿ ವಿಶ್ರಾಂತ ಜೀವನ.

 ಕುಟುಂಬ, ಭಾವನೆಗಳ ತಾಕಲಾಟದಲ್ಲಿ ಅಮ್ಮನಿಗೆ ನಿರಾಸೆಯಾಗುತ್ತದೆ. ತನ್ನ ಕೆಲಸಗಳಿಂದ ವಿಶ್ರಾಂತಿ ಬೇಕು. ತನಗೂ ರಿಟೈರ್ ಆಗಬೇಕು ಅನಿಸುತ್ತದೆ. ಅನಿಸಿಕೆ ನಿರ್ಧಾರವಾಗಿ ಪರಿವರ್ತನೆ ಗೊಂಡಾಗ ಮನೆಯ ಸದಸ್ಯರೆಲ್ಲ ಕಕ್ಕಾಬಿಕ್ಕಿ. ಅವಳ ನೋವು, ಭಾವನೆಗಳು, ಕೆಲಸ ಇವುಗಳ ಬಗ್ಗೆ ಯಾವತ್ತೂ ಗಂಭೀರವಾಗಿ ಯೋಚಿಸದಿದ್ದ ಮನೆಯವರು ಅವಳ ಅನುಪಸ್ಥಿತಿಯಲ್ಲಿ ಅವಳನ್ನು ಹುಡುಕುವ ಅನಿವಾರ್ಯತೆಗೆ ಸಿಲುಕುತ್ತಾರೆ. ಈ ಅಮ್ಮ ನಾಟಕದ ಕೇಂದ್ರಬಿಂದು.

 ಅಮ್ಮನ ಪಾತ್ರ ಮಾಡಬೇಕು. ವಿಡಿಯೋ ಒಮ್ಮೆ ನೋಡಿದೆ. ನಾಟಕ ಓದಿದೆ. ಎರಡು ದಿನ ರಿಹರ್ಸಲ್ ಮತ್ತೆ ಮತ್ತೆ.‌ ಅದೂ ಜೊತೆಗೆ ಅಭಿನಯಿಸುವ ಕಲಾವಿದರು ಬೇಕು. ಅವರ ಕೆಲಸದ ಒತ್ತಡಗಳು, ಬಿಡುವು ಹೊಂದಾಣಿಯಾಗಬೇಕು.   ವೇದಿಕೆಯಲ್ಲಿ ಟ್ರಾಯಲ್ ಸಮಯ ಒಂದಿಬ್ಬರು ಕಲಾವಿದರು ಮಾತ್ರ ಇದ್ದ ಸಂದರ್ಭಗಳೂ ಇದ್ದವು. ಕಾಯಲು ಸಮಯವಿಲ್ಲ. ಟ್ರಾಯಲ್ ನಡೆಯುವಾಗ ಬಂದು ಸೇರಿಕೊಳ್ಳುತ್ತಿದ್ದರು. ಎಲ್ಲರೂ ಸೇರಿದ ರಿಹರ್ಸಲ್ ಸಾಧ್ಯವಾಗಲೇ ಇಲ್ಲ.

ನಾನೊಂದು ಅನೂಹ್ಯ ತಪಸ್ಸಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದೆ.

ಮನಸ್ಸನ್ನು ರಾಮ, ತನ್ನ ಬಿಲ್ಲಿಗೇರಿಸಿ ಹಿಡಿದ ಬಾಣದಂತೆ ಏಕಾಗ್ರವಾಗಿಸಿದ್ದೆ.

ಮಾತುಗಳನ್ನು ಪುನಃ ಪುನಃ ಹಲವು ಬಾರಿ ಓದುತ್ತಾ ರಂಗದ ನನ್ನ ಹೆಜ್ಜೆಗಳು ಮತ್ತು ಮಾತುಗಳ ಜೋಡಿ, ನನ್ನ ಮನಸ್ಸೊಳಗೇ ಬೆಳೆಯುತ್ತಲೇ ಇತ್ತು, ಒಂದು ಕಾಲ್ಪನಿಕ ರಂಗದಂತೆ..

ಬಿಡಿಸಿಕೊಳ್ಳುತ್ತಿತ್ತು ಹುಡಿ ಹುಡಿ ಸೇರಿಸಿದ ರಂಗೋಲಿಯಂತೆ..

ಫೋಟೋದ ನೆಗೆಟಿವ್ ನಂತೆ..

ಇರುಳು ಕಂಡ ಅಚ್ಚಳಿಯದ ಕನಸಿನಂತೆ..

ಕಲ್ಪನಾವಿಲಾಸದಂತೆ..

ಅಮ್ಮ, ಅವಳ ಮಕ್ಕಳು, ಗಂಡ, ಸೊಸೆ..ಎಲ್ಲರೂ ಆ ರಂಗದಲ್ಲಿ ಅವರವರ ಜಾಗದಲ್ಲಿದ್ದು ಅವರ ಮಾತುಗಳನ್ನು ನನ್ನ ಕಲ್ಪನೆಯೊಳಗೇ ಆಡುತ್ತಿದ್ದರು ಮನೋರಂಗದ ಏಕಪಾತ್ರಾಭಿನಯದಂತೆ..

ನಾನು ಕೇವಲ ಅಮ್ಮ!.

ಆಲೋಚನೆಗಳಲ್ಲೇ ಪಾತ್ರಗಳನ್ನು ಹೆತ್ತು ತುತ್ತುಣಿಸಿ ಅವುಗಳನ್ನು ಆಟವಾಡಿಸುವ ಅಮ್ಮ!.

ಕಲ್ಪನೆಯ ಪಾತ್ರಗಳೊಡನೆ ಆ ಎರಡು ದಿನಗಳಲ್ಲಿ,  ಜೀವನ ಪರ್ಯಂತ ಸವೆದ, ಸಂಸಾರ ಕಟ್ಟಿ ಬೆಳೆಸಿದ ಅಮ್ಮ!.

ಅವರೆಲ್ಲರನ್ನೂ ನನ್ನವರನ್ನಾಗಿಸಿದೆ.

ಮಹಾಮಾಯಿಯ ಅನುಭೂತಿ ಪಡೆದೆ.

ರಿಟೈರ್ ಆಗದ ಆ ಅಮ್ಮ ನನ್ನೊಳಗೆ  ನೂಲಿನಂತಹ ಬೇರು ಇಳಿಬಿಟ್ಟಳು.

ಆಳ ಆಳಕ್ಕೆ ಭಾವಗಳ ಹುಡುಕಾಡುತ್ತ ತಾಯಿ ಬೇರಾಗಿ ಗಟ್ಟಿಯಾಗುತ್ತ ಊರಿಕೊಳ್ಳುತ್ತಿದ್ದಳು.

ಒಳಲೋಕದ ಕ್ರಿಯೆಗಳ ಬಿಂಬ ನಾಟಕದ ಪಾತ್ರಗಳು ನನ್ನೆದುರು ಸಮಗ್ರವಾಗಿ ನಿಂತಾಗ ಅಮ್ಮನಾಗುವುದು ಸುಲಭವೆನಿಸಿತು. ರಂಗಚಲನೆಗಳು ತಮ್ಮೊಂದಿಗೆ ಅಮ್ಮನ ಮಾತುಗಳನ್ನು ಹೊತ್ತುಕೊಂಡು ಜೊತೆ ಸಾಗುತ್ತಿದ್ದವು. ಒಟ್ಟಿನಲ್ಲಿ, ಆ ನಾಟಕದ ಎಲ್ಲಾ ಪಾತ್ರಗಳೂ, ಅಂಕಗಳೂ ನನ್ನೊಳಗೇ ಸಮಗ್ರವಾಗಿ ಅಂತರ್ಗತವಾದಾಗಲೇ, ನನ್ನ ಅಂತರ್ಮನಸ್ಸು ಹೇಳಿತು.

 ” ಪೂರ್ಣಿ, ಅಮ್ಮನಿಗಿದು ಸಾಧ್ಯ, ಅಮ್ಮನಿಗೆ ಮಾತ್ರ ಸಾಧ್ಯ”

ಅಮ್ಮನಾಗುವ ಆ ಅನುಭವ ನಿಜಕ್ಕೂ ಬಲು ಚೆಂದ. ಇದರ ಜೊತೆಗೆ ವರ್ಷ ವರ್ಷವೂ ತಪ್ಪದೆ ಹಾಜರಾತಿ ನೀಡುವ ಊರ ಜಾತ್ರೆ. ಇದರಿಂದ ದೂರ ಉಳಿವ ಅನಿವಾರ್ಯತೆ. ಮರುದಿನವೇ ನಾಟಕ ಅರಳಬೇಕು. “ಸಿರಿಜಾತ್ರೆಗೆ” ಹೋಗುವುದು ಸಾಧ್ಯವಿರಲಿಲ್ಲ. ಸಿರಿಭಾವ ರಂಗದಲ್ಲಿ ಅಪ್ಪಿಕೊಂಡವು ಹೊಟ್ಟೆಯೊಳಗೆ ಆಸೆ, ಕುತೂಹಲ, ಭಯದ ಮೂಟೆ ಜೊತೆಗಿಟ್ಟುಕೊಂಡು ತೊಡಗಿಸಿಕೊಂಡೆ.

ಇನ್ನೂ ಮುಖ್ಯ ಸಮಸ್ಯೆಯೆಂದರೆ ನಾಟಕ ತುಳುವಿನಲ್ಲಿ ಆಡಬೇಕಿತ್ತು. ತುಳು ನಮ್ಮ ಅವಿಭಜಿತ ದಕ್ಷಿಣ ಕನ್ನಡದ ಆಡುಭಾಷೆಯಾಗಿದ್ದರೂ ನನ್ನ ಭಾವಗಳು ಅನುರಣನೆಗೊಳ್ಳುವುದು ಕನ್ನಡದಲ್ಲಿ. ಮಾತೂ ಹೆಚ್ಚಾಗಿ ಕನ್ನಡದಲ್ಲಿ ಆಡುವುದರಿಂದ ನಾಟಕದ ಭಾವ, ಭಾಷೆ ಏಕತ್ರಯಗೊಳ್ಳುವಲ್ಲಿ ತುಸು ಎಡವಿದಂತಾಗುತ್ತಿತ್ತು. ಅದೂ ನಾಟಕದ ತುಂಬ ಈ ಪಾತ್ರ ತುಂಬಿಕೊಂಡಿತ್ತು. ಸಂಭಾಷಣೆ ತುಂಬಿದ ನಾಟಕ. ಆದರೆ

ನಾನು ಮಾಡಬೇಕು,ಚೆನ್ನಾಗಿ ಮಾಡಬೇಕು” ಎಂಬ ನಿಶ್ಚಯ,

” ನಾನು ಮಾಡಬಲ್ಲೆ” ಆತ್ಮ ವಿಶ್ವಾಸದ ಮಂತ್ರವಾಗಿ ಮೇಲೆ ಹೇಳಿದಂತೆ ಕಲ್ಪನಾ ಪ್ರಯತ್ನದಿಂದ ಎದೆಯೊಳಗೆ ಚಿಗುರಿಸಿಟ್ಟುಕೊಂಡಿದ್ದೆ.

ರಾತ್ರಿ ಹನ್ನೆರಡಾದರೂ ಊರಿನೊಳಗೆ ‘ಸಿರಿ’ ಯಾಗಿ ಆವೇಶಗೊಂಡು ಹೆಂಗಸರು ನಡುಗುತ್ತಿದ್ದರೆ ನಾನು ಆ ಶಾಲೆಯ ತೆರೆದ ರಿಹರ್ಸಲ್ ವೇದಿಕೆಯಲ್ಲಿ, ಅಮ್ಮನಾಗಿ ಓಡಾಡುತ್ತ ಆಕೆಯನ್ನು ಅವಾಹಿಸಿಕೊಳ್ಳುವತ್ತ   ಸೇವೆಯಲ್ಲಿ ನನ್ನನ್ನು ಸಿಲುಕಿಸಿಕೊಂಡಿದ್ದೆ.

ಮರುದಿನ ಬೆಳಗ್ಗೆ ಒಂದು ರಿಹರ್ಸಲ್ ನಡೆಸಿ ನಾಟಕವಾಡುವ ಸ್ಥಳಕ್ಕೆ ತಂಡ ನಡೆಯಿತು. ಕಲಾವಿದರೆಲ್ಲ ನನಗೆ ಧೈರ್ಯ ತುಂಬುತ್ತಿದ್ದರು.

” ಪೂರ್ಣಿಮಾ,ಹೆದರಬೇಡಿ. ಹಾಗೆ ಸ್ವಲ್ಪ ವ್ಯತ್ಯಾಸವಾದರೆ ನಾವು ಸರಿಪಡಿಸಿಕೊಳ್ಳುತ್ತೇವೆ. “

ಸಂಘಟಕರಲ್ಲಿ ಓರ್ವರಾದ ಪ್ರಭಾಕರ್ ಬಳಿ ಬಂದರು.

 ನಾನು ಸುಮ್ಮನೆ ಮುಗುಳ್ನಕ್ಕೆ. ಒಂದು ವಿಶ್ವಾಸ ಮತ್ತು ಒಂದು ಭಯ ಜತೆ ಜತೆಗೇ ನನ್ನೊಳಗನ್ನು ಆಳುತ್ತಿತ್ತು.

 ಅಮ್ಮ ಇನ್ನೂ ನನ್ನನ್ನು ಪೂರ್ತಿ ಆವರಿಸಿಕೊಂಡಿರಲಿಲ್ಲ.

 ರಾಘವೇಂದ್ರ ಅವರು ಬಳಿಯಲ್ಲಿದ್ದ ದೇವಾಲಯಕ್ಕೆ ಹೋಗಿ ಬರುವೆ. ದೇವರಲ್ಲಿ ಬೇಡುವೆ..ಎನ್ನುತ್ತಾ ನಡೆದರು. ಬರುವಾಗ ಕೈಯಲ್ಲಿ ಪ್ರಸಾದ, ಗಂಧ. ದೇವಾಲಯದ ಬಾಗಿಲು ಹಾಕುವುದರಲ್ಲಿತ್ತು. ಭಟ್ರು ಪ್ರಸಾದ ನಿಮಗಾಗಿಯೇ ಇದೆ. ತೆಗೆದುಕೊಳ್ಳಿ ಎಂದರು. ನಾಟಕ ಯಶಸ್ವೀಯಾಗುವುದು ಎಂದರು.

 ಅಂಗೈಗೆ ಹಾಕಿದ ಪ್ರಸಾದ ಅವ್ಯಕ್ತ ಭಾವದೊಂದಿಗೆ ಮಿಳಿತಗೊಂಡು ಮುಷ್ಠಿಯೊಳಗೆ ಬೆವರುತ್ತಿತ್ತು. ಅಮ್ಮನ ವೇಷ, ಆ ಕನ್ನಡಕ ಏರಿಸಿ ಸೈಡ್ ವಿಂಗ್ ನಲ್ಲಿ ನಿಂತವಳ ನಾಭಿ ಕಂಪಿಸುತ್ತಿತ್ತು.

 ಹೊರಗಿಣುಕಿದೆ. ಗುಜುಗುಜು ಮಾತಿನ ನಡುವೆ ಬಿಂದು ಬಿಂದು ಚೆಲ್ಲಿ ನಿಂತ ಬೆಳಕು.

“ಇದು ಪರೀಕ್ಷೆಯ ಘಳಿಗೆ. ನನ್ನ ಒಬ್ಬಳ ಸೋಲು ತಂಡದ ಸೋಲಾಗಿ ಬಿಡುವುದು. ತಂಡ ಸೋತರೆ ಇಂದಿನ ಸಂಘಟಕರಿಗೂ ಅವಮರ್ಯಾದೆ. ಹಾಗಾಗಬಾರದು. ಈ ಸಂಜೆ ಬದುಕಿನ ಸವಿನೆನಪಾಗಿ ಉಳಿಯಬೇಕು. ಸೋಲಬಾರದು. ಗೆಲ್ಲಲೇ ಬೇಕು. ದೀರ್ಘವಾಗಿ ಉಸಿರೆಳೆದುಕೊಂಡೆ.

ಅಮ್ಮ, ಅವಳ ದುಡಿತ, ವಾತ್ಸಲ್ಯ, ಮಮತೆ, ಜವಾಬ್ದಾರಿ ಕಣ್ಮುಂದೆ ಬಂತು. 

ಅಮ್ಮ ಯಾವತ್ತೂ ಹೇಡಿಯಾಗಲಾರಳು. ಎದುರಿಸಬೇಕು. ಪ್ರೀತಿಯಲ್ಲಿ..ಎದುರಿಗೆ ಹಬ್ಬಿದ ಕತ್ತಲ ಸೆರಗಿನಲಿ ಬಿಂದು ಬಿಂದು ಬೆಳಕನ್ನು ಹೀರಿಕೊಳ್ಳುವಂತೆ..

ಬೆಳಕು ಒಳಬರಲಿ..

ಅನಂತ ನಿಶೆಯನ್ನು ಕರಗಿಸಲಿ..

ಮಗದೊಮ್ಮೆ ಕಣ್ಮುಚ್ಚಿ ದೀರ್ಘವಾಗಿ ಉಸಿರೆಳೆದು ಎದೆಯ ನೀರವತೆ ಓಡಿಸುವಂತೆ ಮೊದಲ ದೃಶ್ಯಕ್ಕೆ ಅಗತ್ಯವಾಗಿದ್ದ ಅಕ್ಕಿ ತುಂಬಿದ ಗೆರಸಿ ಕೈಗೆತ್ತಿಕೊಂಡು ಹೆಜ್ಜೆ ಮುಂದಿಟ್ಟೆ.

ಅಮ್ಮ ರಂಗದ ತುಂಬಾ ಓಡಾಡಿದಳು..

ನಕ್ಕಳು..

ಅತ್ತಳು..

ಬದುಕಾದಳು..

ಪಾತ್ರವಾದಳು..

ಬೆಳೆಸಿದಳು..

ಬೆಳೆಯಾದಳು..

ಕಣ್ಣಾದಳು..

ಕಣ್ಣೀರಾದಳು..

 ನಾಟಕ ನಡೆಯಿತು. ಎಲ್ಲೂ ಅಭಾಸವಾಗದಂತೆ ಪ್ರಸ್ತುತಿಗೊಂಡಿತು. ಎರಡು ದಿನದಲ್ಲಿ ರೂಪುಗೊಂಡ ಅಮ್ಮ ರಂಗ  ಸಮುದ್ರದಲ್ಲಿ ಸೇರಿಕೊಂಡಳು. ಕಡಲಿನೊಳಗಿನ ಬಿಂದು ನೀರು.

ಒಂದು ನಂಬಿಕೆ, ವಿಶ್ವಾಸ, ಭಕ್ತಿ ಹಾರೈಕೆ, ತಪಸ್ಸು ಫಲಿತಗೊಂಡಿತ್ತು.

” ಅಮ್ಮ ರಿಟೈರ್ ಗೊಳ್ಳಲಿಲ್ಲ”

*****************************

ಪೂರ್ಣಿಮಾ ಸುರೇಶ್

ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ

6 thoughts on “

  1. You are great dear Poornima. It’s your inborn gift which has evolved by your efforts and identity with are, literature. Keep it up. My wishes are always there for you.
    Warm loving wishes.

  2. ಪೂರ್ಣಿಮಾ, ನಿಮ್ಮ ಆತ್ಮವಿಶ್ವಾಸ, ಅಂತಃಶಕ್ತಿ ಅಗಾಧವಾದದ್ದು. ಇನ್ನೂ ಎತ್ತರಕ್ಕೆ ಏರಲಿ ನಿಮ್ಮ ಕೀರ್ತಿ.

    1. ವೀಣಾ,ನಿಮ್ಮಂತಹ ಒಳ್ಳೆಯ ಮನಸ್ಸಿನ ಗೆಳತಿಯ ಹಾರೈಕೆ ಶಕ್ತಿ ನೀಡುವುದು

  3. ನೀವು ಹುಟ್ಟು ಕಲಾವಿದೆ.ನೀವು ಯಾವುದೇ ಪಾತ್ರದಿಂದ ರಿಟೈರ್ ಆಗಲು ಸಾಧ್ಯವಿಲ್ಲ.ಸವಾಲನ್ನು ಸ್ವೀಕರಿಸಿದ ನಂತರ ದಿನಗಳ ತಳಮಳವನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ.ಅದನ್ನೇ ನಮ್ಮೆದೆಗೂ ದಾಟಿಸಿದ್ದೀರಿ.”ಸಿರಿ” ಏಕಾಪಾತ್ರಭಿನಯ ನೋಡುವಾಗಲೇ ನಿಬ್ಬೆರಗಾಗಿದ್ದೆ.ಅಷ್ಟೆಲ್ಲಾ ಪಾತ್ರಗಳನ್ನು ಒಬ್ಬರೇ ನಿರ್ವಹಿಸುವುದು ಹೇಗೆ ಸಾಧ್ಯ ಅಂತ ಯೋಚಿಸಿದಷ್ಟೂ ಅಚ್ಚರಿ.ಹಾಗಾಗಿ ಕೊನೆಯ ಕ್ಷಣದಲ್ಲಿ ಒದಗುವ ಪಾತ್ರವನ್ನೂ ನೀವು ಲೀಲಾಜಾಲವಾಗಿ ಅನುಭವಿಸಿ ಅಭಿನಯಿಸಬಲ್ಲಿರಿ.

    ನಿಮ್ಮ ಅನುಭವದೊಂದಿಗೆ ನಮ್ಮನ್ನೂ ಕರೆದುಕೊಂಡು ಹೋಗಿದ್ದೀರಿ.ಲೇಖನ ಖುಷಿ ಕೊಟ್ಟಿತು.

    1. ಧನ್ಯವಾದಗಳು. ನೀವು ,ನಿಮ್ಮ ಪ್ರೋತ್ಸಾಹದ ಮಾತುಗಳು ಯಾವತ್ತೂ ನನಗೆ ಆಮ್ಲಜನಕ

Leave a Reply

Back To Top