ಅಂಕಣ ಬರಹ
ತೊರೆಯ ಹರಿವು
ನೆರೆಯೋ..ಹೊರೆಯೋ?
‘ನೆರೆಹೊರೆ’ ಪದವನ್ನು ಯಾರು ಟಂಕಿಸಿದ್ರೋ.. ಅನುಭವಿಗಳಿಗೆ ಗೊತ್ತು ಅದರ ನೋವು/ನಲಿವಿನ ಅಸಲಿ ಕಿಮ್ಮತ್ತು. ಒಬ್ಬರಿಂದ ಮತ್ತೊಬ್ಬರಿಗೆ ನೆರೆಯವರ ಸಹವಾಸದಲ್ಲಿ ದೊರೆತಿರುವ ಅನುಭವಗಳು ಒಂದೇ ರೀತಿ ಇರುವುದಿಲ್ಲ. ಹಾಗಾಗೀ ನೆರೆಹೊರೆಯ ಕುರಿತು ಬರೆದಿರುವ, ಬರೆಯುತ್ತಾ ಬಂದಿರುವ ಅನುಭವ ಮಾಲೆಗಳೂ ಕಡಿಮೆಯಾಗಿಲ್ಲ. ವಿಷಯ ಪ್ರಸ್ತುತಿಯಲ್ಲಿಯೂ ಹೊಸತನ ಕಾಣಲು ಕೊರತೆಯಿಲ್ಲ.
‘ಅಕ್ಕಪಕ್ಕದ ಮನೆಯವರೆಂದ ಮೇಲೆ ಅಡ್ಜೆಸ್ಟ್ಮೆಂಟ್ ಇಲ್ಲಾ ಅಂದ್ರೆ ಹೇಗೆ?’ಎನ್ನುವುದು ಪರಿಚಯದ ಪ್ರಾರಂಭದಲ್ಲಿ ಇಬ್ಬರಲ್ಲೊಬ್ಬರ ಬಾಯಿಂದ ಬರುವ ಡೈಲಾಗ್. ‘ಹಿಹ್ಹಿಹ್ಹಿ..’ ಹಲ್ಕಿರಿದು ಉಭಯಕುಶಲೋಪರಿ ವಿನಿಮಯ ಮುಗಿದ ಮೇಲೆ ಒಂದಷ್ಟು ದಿನ ತಕರಾರಿರುವುದಿಲ್ಲ. ದಿಢೀರ್ ಸಣ್ಣಪುಟ್ಟ ತೊಂದರೆಗಳಾದ್ರೂ ಹೇಗೋ ಸಂಭಾಳಿಸುತ್ತಾ, ‘ಇಂಥವ್ರು ನಮ್ಮ ಪಕ್ಕದ ಮನೆಯವರಾಗಿ ಸಿಕ್ಕಿರೋದೇ ಪುಣ್ಯ’ ಎಂದು ಕೊಂಡಾಡುವ ಮಂದಿಯನ್ನು ಹುಡುಕಿದರೆ ಅದೆಷ್ಟು ಸಿಗುವರೋ!? ನಿಧಾನವಾಗಿ ಯಾವಾಗ ಒಬ್ಬರು ಮತ್ತೊಬ್ಬರ ಮೇಲೆ ಅವಲಂಬಿತರಾಗುವ ಸಂದರ್ಭ ಬಂದಾಗ ಇಬ್ಬರಲ್ಲಿರುವ ನಿಜ ಬಣ್ಣ ಬಯಲಾಗಬಹುದು.
ಈಗ ತಾನೇ ಪರಿಚಯವಾದ ನೆರೆಮನೆಯವರಲ್ಲಿ ಒಬ್ಬರು ಪ್ರವಾಸಕ್ಕೆ ಹೋಗುತ್ತಾರೆ ಎಂದುಕೊಳ್ಳೋಣ. ‘ಸ್ವಲ್ಪ ನಮ್ಮನೆ ಕಡೆ ಜೋಪಾನ ರೀ, ಮನೆ ಕಡೆ ಒಂದು ಕಣ್ಣಿಟ್ಟಿರಿ. ಹಾಲು- ಪೇಪರಿನವರಿಗೆ ನಾವು ಬರುವ ದಿನ ಹೇಳಿದ್ದೀವಿ. ನಾವು ಬರುವ ದಿನ ಸ್ವಲ್ಪ ತಡವಾಗಬಹುದು; ಆ ದಿನ ನಿಮ್ಮ ಮನೇಲಿ ಅದನ್ನು ಸ್ವಲ್ಪ ತೆಗೆದಿಟ್ಟುಕೊಂಡಿರಿ ಪ್ಲೀಸ್. ಏನೂ ಅಂದ್ಕೋಬೇಡಿ..’ ಹೀಗೆ ಪ್ರಾರಂಭವಾದಾಗ ನೋಡಿ. ನೆರೆ ಮನೆಯವರತ್ತ ಚಾಚಿದ ಸಹಾಯ ಹಸ್ತ. ಆಮೇಲೆ ‘ನಮ್ಮನೇಲಿ ಕೊತ್ತಂಬರಿ, ಕರಿಬೇವು ಮುಗಿದಿದೆ, ಹಸಿಮೆಣಸು ಖಾಲಿಯಾಗಿದೆ, ನಿಮ್ಮನೇಲಿದ್ರೆ ಸ್ವಲ್ಪ ಕೊಟ್ಟಿರಿ… ಪೇಪರಿನಲ್ಲೇನು ಹೊಸ ಸುದ್ದಿ ಬಂದಿದೆಯಂತಲ್ಲಾ ಚಿನ್ನದ ರೇಟು, ನಿವೇಶನದ ರಿಜಸ್ಟರ್ ಫೀ ಬಗ್ಗೆ… ಸ್ವಲ್ಪ ನೋಡಿಕೊಡುತ್ತೇವೆ ಕೊಡಿ…’ ಹೀಗೆ ಪಟ್ಟಿ ಬೆಳೆಯುತ್ತಾ ಸಕ್ಕರೆ, ಟೀ- ಕಾಫಿಪುಡಿಗಳ ‘ಕಡ’ ಕೊಡು-ತೆಗೆದುಕೊಳ್ಳುತ್ತಾ ನಮ್ಮ ಕನ್ನ ಧಾರಾವಾಹಿಗಳಂತೆ ನಿರಂತರ ಪ್ರವಹಿಸುತ್ತಾ… ಇರುವುದರ ಕುರಿತು ವಿಶೇಷವಾಗಿ ಏನೂ ಹೇಳುವಂತಿಲ್ಲ. ಮತ್ತೆ ಹೀಗೆ ಕಡ ಪಡೆದ ವಸ್ತುಗಳು ಮರಳಿರುವ ದಾಖಲೆಯನ್ನು ಯಾರಾದರೂ ಇಟ್ಟಿರುವ ಬಗ್ಗೆ ಸಂಶಯವಿದೆ. ಈ ವಿಷಯದಲ್ಲಿ ಕ್ಷೇತ್ರಕಾರ್ಯಾಧಾರಿತ ಸಂಶೋಧನೆ ಧಾರಾಳವಾಗಿ ಮಾಡಬಹುದು. ಪ್ರಬಂಧ ಮಂಡಿಸುವುದಕ್ಕೂ ಮೊದಲು ನೆರೆಹೊರೆಯವರು ಸಂಶೋಧಕರಿಗೆ ಒಪ್ಪಿಸುವ ಪುರಾಣ, ಉಪಕತೆಗಳಿಗೆ ಒಂದೆರಡು ಅಧ್ಯಾಯ ಮೀಸಲಿಡಬಹುದು..
ಪಕ್ಕದ್ಮನೆಯವರೆಂದು ಪರಿಚಯವಾದ ಹುರುಪಿನಲ್ಲಿ ನೆರೆಮನೆಯವರು ಏನಾದರು ಕೆಲಸ ಹೇಳಿದರೆ, ಕೆಲವರು ‘ಅಯ್ಯೋ ಇಷ್ಟೇ ತಾನೇ ಅವ್ರು ಕೇಳ್ತಿರೋದು. ಇಷ್ಟು ಸಣ್ಣ ಸಹಾಯ ಮಾಡಲಿಕ್ಕಾಗಿಲ್ಲ ಅಂದ್ರೆ ನಾವು ಮನುಷ್ಯರಾಗಿ ಏನು ಪ್ರಯೋಜನ..?!’ ಎನ್ನುತ್ತಾ ಮಾನವತೆಗೆ, ಸ್ನೇಹಕ್ಕೆ ಹೊಸ ಭಾಷ್ಯ ಬರೆಯುವವರೂ ಇರೋದ್ರಿಂದ ಮಳೆಬೆಳೆ ಕಾಣ್ತಿರೋದು ಅಂದ್ಕೊಳ್ಳೋಣ. ನಷ್ಟವೇನಿಲ್ಲವಲ್ಲ!! ನೆರೆಮನೆಯವರ್ರು ನಾಲ್ಕಾರುದಿನ ಪ್ರವಾಸಕ್ಕೆ ಹೋಗಿದ್ದರೆ, ಅವರು ಮರಳೋವರೆಗೂ ಅವರ ಮನೆಯಲ್ಲಿ ಹೂಕುಂಡಗಳಿಗೆ ನೀರು ಹಾಕಿ, ನಾಯಿ ಬೆಕ್ಕುಗಳಿಗೆ ಹಾಲು ಮೊಸರನ್ನ ಇಟ್ಟು ಸಾಕಿ, ಪಕ್ಕದ್ಮನೆಯವರು ಬರೋವರ್ಗೂ ರಾಜೋಪಚಾರ ಮಾಡುತ್ತಾ. ಮನೆಮಕ್ಕಳಿಗೆ ಬೈದರೂ ಸರಿಯೇ ನೆರೆಮನೆಯವರ ‘ಪೆಟ್’ ಗಳಿಗೆ ಒಂದು ಪೆಟ್ಟೂ ಕೊಡಲಾರರು ಎಂದರೆ ಈಗಿನ ಸೋಕಾಲ್ಡ್ ಸೆಲ್ಫಿಶ್ ಮಂದಿ ಅನ್ನೋಕಿಂದ ಸೆಲ್ಫ್ ಸೆಂಟರ್ಡ್ ಮಂದಿ ಮೂಗಿನ ಮೇಲೆ ಬೆರಳಿಟ್ಟಾರು!!
ಪರೋಪಕಾರಿ ಚೇತನವಾಗಿರುವ ಕೆಲವರಿಗೆ ಅವರಂತಹ ಸುಬುದ್ಧಿಯುಳ್ಳ ಜನರೇ ನೆರೆಮನೆಯವರಾಗಿ ಸಿಗುತ್ತಾರೆಂಬ ವಿಶ್ವಾಸಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಅಂಥ ಭರವಸೆ ಇಟ್ಟುಕೊಳ್ಳುವ ತಪ್ಪನ್ನು ಎಂದಿಗೂ ಯಾರೂ ಮಾಡಬಾರದು ಎಂದು ಉಪದೇಶ ಮಾಡೋರಿದ್ದಾರೆ.
’ಋಣಾನುಬಂಧ ರೂಪೇಣಾ ಪಶುಪತ್ನಿ ಸುತಾಲಯ..’ ಎಂಬ ಸೂಕ್ತಿಯ ಜೊತೆಗೆ ನೆರೆಮನೆಯವರನ್ನೇಕೆ ಸೇರಿಸಿಲ್ಲವೆಂದು ನನಗೆ ಬಹಳ ಆಶ್ಚರ್ಯವಾಗುತ್ತದೆ. ಏಕೆಂದರೆ, ಪತಿ—ಪತ್ನಿ, ಸುತ- ಸುತೆಯರೊಡನೆ ನಾಕಾರು ದಿನ ಬೈದಾಡಿ, ಗುದ್ದಾಡಿ, ಮೌನವ್ರತಾಚರಣೆಯನ್ನೂ ಮಾಡಬಹುದು, ಮನೆ ಬೇಸರವಾದರೆ ಬಿಟ್ಟು ಹೋಗಬಹುದೇನೋ.. ಆದರೆ ನೆರೆಮನೆಯವರೊಡನೆ ಈ ಯಾವ ರಾಂಗ್-ರಂಗಿನ ಆಟವನ್ನೂ ಆಡಲಾಗದು.
ರಂಗೋಲಿ ಹಾಕಲೆಂದು ರಸ್ತೆಯಂಚಿನಲ್ಲಿ ಕಸ ಗುಡಿಸುವಾಗ, ಈ ಮನೆಯ ದಿಕ್ಕಿನಿಂದ ಸಣ್ಣ ಕಸ ಹಾರಿ ಅವರ ಅಂಗಳಕ್ಕೆ ಬಿದ್ದರೆ, ‘ಸ್ವಚ್ಛ ಭಾರತ’ದ ಮಾದರಿ ‘ರಾಯಭಾರಿ’ಯಾದ ನೆರೆ, ‘ರೌದ್ರಾವತಾರಿ’ ಆಗಿ ಹಾವಳಿ ಎಬ್ಬಿಸುತ್ತಾರೆ. ಪ್ರತಿ ದಿನ ಅವರ ಮನೆಯ ದಿಕ್ಕಿನಿಂದ ಈ ಅಂಗಳಕ್ಕೆ ಪ್ರವಾಹದಂತೆ ಹರಿದು ಬರುತ್ತಿದ್ದ ಕಸದ ಬಗ್ಗೆ ಪಾಪ ಈ ಮನೆಯವರು ಎಂದೂ ತಕರಾರು ತೆರೆಯದಿದ್ದರೂ ಅವರಿಂದ ಮಾತ್ರ ಸಹಸ್ರ ನಾಮಾರ್ಚನೆ ತಪ್ಪುವುದಿಲ್ಲ. ಅವರು ಸಣ್ಣಪುಟ್ಟದಕ್ಕೂ ಅಸಹಿಷ್ಣುಗಳಾಗಿ ಕಾಲ್ಕೆರೆದು ಜಗಳಕ್ಕೆ ನಿಂತಾಗಲೇ ಈ ಮನೆಯ ಸದ್ಗೃಹಸ್ತರಿಗೆ ಅರಿವಾಗುವುದು. ಅರೆ, ಇದುವರೆವಿಗೂ ನಾವು ಅದೆಷ್ಟು ಸಂಯಮಿ, ಸಹಕಾರಿಗಳಾಗಿದ್ದೆವು ಎಂದು..! ಅದರೊಟ್ಟಿಗೆ, ತಾವು ಮೂರ್ಖರೆಂಬುದೂ ಗೊತ್ತಾಗುತ್ತದೆ. ತಾವು ಸಂಯಮ ಸಭ್ಯತೆ ತೋರಬೇಕಾದುದು ಇವರಿಗಲ್ಲ ಎಂದು ಜ್ಞಾನೋದಯವಾಗಿ, “ಯಾರು ಅರಿಯರು ನಮ್ಮ ನಾಲಗೆಯ ಪರಾಕ್ರಮಾ..” ಎಂದು ‘ಖಡ್ಗಕ್ಕಿಂತ ನಾಲಿಗೆ ಹರಿತ’ ವೆಂದು ಅದನ್ನು ಝಳುಪಿಸುತ್ತಾ ಅವರ ದಿಕ್ಕಿನಿಂದ ಎಷ್ಟು ಟನ್ ಕಸದ ರಾಶಿ ಯಾವ ಯಾವ ದಿನ ಇವರ ಮನೆ ಬಾಗಿಲಿಗೆ ಬಂದು ಬಿದ್ದಿತ್ತೆಂದು (ಆದರೆ ಲೆಕ್ಕಪತ್ರದ ದಾಖಲೆಯೊಂದು ಇರುವುದಿಲ್ಲವಷ್ಟೆ)ಪ್ರವರ ಒಪ್ಪಿಸಬಹುದು. ತಮ್ಮ ಕಸವು ಕಸವೇ ಅಲ್ಲ, ಚಿನ್ನದ ಅದಿರಿಗಿಂತ ಶ್ರೇಷ್ಠ ಎಂಬಂತೆ ಹೆಚ್ಚುಗಾರಿಕೆ ಮಾಡದೇ ಬಿಡುತ್ತಾರೆಯೇ? ಅಲ್ಲಿಗೆ ಒಂದು ಬೀದಿ ಜಗಳಕ್ಕೆ ಆದಿ-ಪದವನ್ನು ಹಾದಿಯಲ್ಲಿ ಹಾಡುತ್ತಾ, ಆಚೀಚಿನ ಮನೆ ಸದ್ಗೃಹಸ್ತರಿಗೆ ಒಂದು ಪುಕ್ಕಟೆ ಮನರಂಜನೆ ನೀಡುವ ಕಲಾವಿದರಾಗುತ್ತಾರೆ..
ಸಾಮಾನ್ಯವಾಗಿ ನೆರೆಹೊರೆಯ ಮನೆಗೆ ಒಬ್ಬರೇ ಮನೆಕೆಲಸದವರು ಇರುವುದಿಲ್ಲ. ಏಕೆಂದರೆ ಈ ಮನೆಕೆಲಸದವರು ತಮ್ಮ ಮನೆಯ ವಿಷಯಗಳನ್ನು ಅವರೊಂದಿಗೆ ಹಂಚಿಕೊಳ್ಳಬಹುದೆಂಬ ಭಯ. ತಮ್ಮ ಮನೆಯ ಕೆಲವು ಗುಟ್ಟುರಟ್ಟಾದರೆ ನಾಳೆ ಜಗಳವಾಡುವಾಗ ಅದನ್ನೇ ಅವರು ಎತ್ತಿ ಆಡಬಹುದೆಂಬ ಮುನ್ನೆಚ್ಚರಿಕೆಯಿಂದ ಮಾಸ್ಟರ್ ಪ್ಲಾನ್ ರೂಪಿಸಿ ಅಕಸ್ಮಾತ್ ಒಬ್ಬರೇ ಮನೆಕೆಲಸದವರಿದ್ದರೆ ಉಪಾಯದಿಂದ ಬಿಡಿಸಿಕೊಳ್ಳುತ್ತಾರೆ. ನಮ್ಮ ಮನೆಯಲ್ಲಿ ಮೊದಲು ಕೆಲಸ ಮುಗಿಸ ಬೇಕು ಎಂದು ಕಂಡೀಷನ್ನು ಹಾಕುವುದರಿಂದ ಶುರು ಮಾಡಿ ಅವರ ಮನೇಲಿ ಇವರು ಏನೇನೂ ಎಕ್ಸ್ಟ್ರಾ ಕೆಲಸ ಮಾಡಬಾರದು, ಸಂಬಳ ಹೆಚ್ಚು ಕೇಳಬೇಕು, ಅವರ ಮನೇಲಿ ತಂಗಳು ಕೊಟ್ಟರೆ ತಿನ್ನಬಾರದು, ಮನೆಮಂದಿಯ ಜಗಳ ಮಾಡಿಕೊಂಡರೆ ವರದಿ ಮಾಡಬೇಕು, ಗಂಡಹೆಂಡತಿ ಅನ್ಯೋನ್ಯತೆ ಹೇಗೆ? ಅತ್ತೆ ಸೊಸೆಗೆ ಹೇಗೆ? ಮಕ್ಕಳೇನು ಚೆನ್ನಾಗಿ ಓದುತ್ತಾರ? ಹರೆಯದ ಮಕ್ಕಳಿದ್ದರೆ ಅವರ ಲವ್ ಕೇಸಿದೆಯಾ? ಶಾಪಿಂಗಿನಿಂದ ಏನೇನು ತಂದ್ರು? ಹೊಸ ಚಿನ್ನ ಸೈಟು ಖರೀದಿಗೆ ಮಾತಾಗುತ್ತಿದೆಯಾ? ಮೊನ್ನೆ ಯಾರೋ ಬಂದಿದ್ರಲ್ಲ ಅವರ್ಯಾರು? ಏನಂತೆ? ಇವರೆಲ್ಲೋ ಹೋಗಿದ್ರಲ್ಲಾ! ಎಲ್ಲಿಗಂತೆ? ಇಂತಿಂಥ ದಿನ ಅವರ ಮನೆಗೆ ನೆಂಟರಿಷ್ಟರು ಬರುತ್ತಾರೆ ಅವತ್ತು ಕೆಲಸಕ್ಕೆ ಬರಬೇಡ ಸರಿಯಾಗಿ ಕೈಕೊಡು. ಎಂಬೋವರೆಗೆ ರಹಸ್ಯ ಮಾತುಕತೆ, ಒಳಪಿತೂರಿ ನಡೆಯುವುದು ಸುಳ್ಳಲ್ಲ.
ಇನ್ನು, ಮನೆ ಮುಂದೆ ವಾಹನ ಪಾರ್ಕಿಂಗ್ ಗೆ ಕಿರಿಕಿರಿ, ಇವರ ಮನೆ ಕಸಗುಡಿಸಿ ಅವರ ಮನೆಯತ್ತ ತೂರುವುದು, ಕಂಪೌಂಡಿನೊಳಗೆ ಹೂ ಬಿಡುವ ಗಿಡಗಳೇನಾದರು ಹಾಕಿದ್ದರೆ ಮೊಗ್ಗನ್ನೂ ಬಿಡದೆ ಕೊಯ್ದುವುದು, ಹಾಲಿನ ಪ್ಯಾಕೆಟ್, ಪೇಪರ್ ಎಗರಿಸೋದು ಇಂಥಾ ಕಿರುಕುಳ ಒಂದಾ ಎರಡಾ!? ಹೋಗಲಿ ಬಿಡೆಂದು ನೆಗಲೆಟ್ ಮಾಡುವ ಇಂಥಾ ಕೆಲವು ವಿಚಾರಗಳಿಂದ ಹಿಡಿದು, ಸಂಸಾರ ಒಡೆಯುವ, ಮದುವೆ ಮುರಿಯುವ, ಓದುವ ಮಕ್ಕಳ ಭವಿಷ್ಯ ಹಾಳು ಮಾಡುವ, ಮಾಲೀಕರು – ಬಾಡಿಗೆದಾರರ ನಡುವೆ ಮನಃಸ್ಥಾಪ ಹೆಚ್ಚಿಸುವ, ಮನೆ ಖಾಲಿಯಾದ್ರೆ ಬಾಡಿಗೆಯವರು ಬಾರದಂತೆ ಮಾಡುವ ಕುತ್ಸಿತ ಬುದ್ಧಿಯುಳ್ಳ ನೆರೆಯವರೂ ಇರುತ್ತಾರೆ. ಒಟ್ಟಿನಲ್ಲಿ ಎಲ್ಲರ್ಗೂ ಒಳ್ಳೆ ನೆರೆಮನೆಯವರೇ ಸಿಗುತ್ತಾರೆ ಎನ್ನುವಂತಿಲ್ಲ. ಅವರವರ ಅದೃಷ್ಟಾನುಸಾರ ನೆರೆ ಪ್ರಾಪ್ತಿ.!
ನನ್ನ ಅಪ್ಪನಿಗೆ ವರ್ಗವಾದಾಗೆಲ್ಲಾ ಅಮ್ಮನೊಡನೆ ಊರೂರು ಸುತ್ತಾಡಿ ಬಂದ ನಮಗೆ ಹಲವಾರು ನೆರೆಯವರು ಸಿಕ್ಕಿದ್ದಾರೆ. ಆಗ ಸಣ್ಣವಳಾಗಿದ್ದ ನನಗೆ ನೆರೆ- ಹೊರೆ ಬಗ್ಗೆ ಗೊತ್ತಾಗುತ್ತಿರಲಿಲ್ಲ. ಸರಾಗವಾಗಿ ಅವರಿವರ ಮನೆಯೊಳಗೆ ನುಗ್ಗಿ, ಆಟ ಆಡಿ, ಚೆನ್ನಾಗಿ ಮಾತಾಡಿ, ಕೊಟ್ಟದ್ದು ಹಾಯಾಗಿ ತಿಂದುಂಡು ಬರುತ್ತಿದ್ದೆ. ಆಗ ಸಿಕ್ಕ ನೆರೆ ಮನೆಯವರನ್ನು ಹೊರೆ ಎನ್ನಲು ನನ್ನ ಮನಸ್ಸು ಒಪ್ಪುವುದೇ ಇಲ್ಲ. ಅಪ್ಪಟ ಸ್ನೇಹಜೀವಿಗಳವರು.
ಆದರೆ, ಈಗೀಗ ನನ್ನ ಬುದ್ಧಿ- ಭಾವ ಹಲವು ಚಿತ್ರ- ವಿಚಿತ್ರಗಳನ್ನು ಅರಿಯುವಷ್ಟು ಬೆಳೆದು ಬಲಿತುಕೊಂಡಿರುವುದರಿಂದ, ಆಡಲಾರದ, ಅನುಭವಿಸಲೂ ಆಗದ ಹೊರೆಯಾಗಿ ಬದಲಾಗುವ ನೆರೆಯವರ ರೂಪಾಂತರಗಳ ದಿವ್ಯದರ್ಶನವಾಗುತ್ತಿದೆ. ನೆರೆಯವರೆಂದರೆ ಪಕ್ಕದ ಮನೆಯವರೇ ಆಗಬೇಕಿಲ್ಲ. ಬಸ್ಸಿನಲ್ಲಿ ಹಂಚಿಕೊಂಡ ಸಹ ಪ್ರಯಾಣಿಕರು, ಕ್ಯೂನಲ್ಲಿ ಹಿಂದೆ ಮುಂದೆ ನಿಂತವರು, ಕಚೇರಿಯಲ್ಲಿ ಸಿಗುವ ಸಹೋದ್ಯೋಗಿಗಳು, ಆಸ್ಪತ್ರೆಯ ಪಕ್ಕದ ಬೆಡ್ಡಿನವರು…. ಅವರಿಂದ ಆಗುವ ಅನುಭವ, ಕಲಿಯುವ ಜೀವನ ಪಾಠ ನಮ್ಮ ಮೇಲೆ ಬೀರುವ ಪ್ರಭಾವ ಅದಿಕತಮವೇ.. ಅದನ್ನು ನಮಗೆ ಅದನ್ನು ಕಾಣುವ ಸೂಕ್ಷ್ಮತೆ ಇದ್ದರೆ.
ಬಹುಶಃ ನಾನೂ ನನ್ನ ನೆರೆಯವರಿಗೆ ಆಗಾಗ್ಗೆ ಹತ್ತಾರು ಅವತಾರಗಳಲಿ ದರ್ಶನ ಸೌಭಾಗ್ಯವನ್ನೀಯುತ್ತಾ ಹೊರೆಯಾಗುತ್ತಲೂ ಇರಬಹುದೇ!? ಯಾರಾದ್ರೂ ಬಾಯ್ಬಿಟ್ಟು ಹೇಳುವವರೆಗೂ ಒಳ್ಳೆಯ ನೆರೆಯವಳೆಂದು ನಾನಂತೂ ಸಮಾಧಾನದಿಂದಿರುವೆ.
*************************
ವಸುಂಧರಾ ಕದಲೂರು
೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ನೆರೆ ಹೊರೆಯ ಕುರಿತ ಬರಹ ಒಂದು ಚಿತ್ರದಂತೆ ಕಣ್ಣ ಮುಂದೆ ಸುಳಿಯಿತು. ಒಳ್ಳೆದಿದೆ ಬರಹ ವಸುಂಧರಾ