ಆಸೆಯ ಕಂದೀಲ

ಪುಸ್ತಕ ಸಂಗಾತಿ

 “ಆಸೆಯ ಕಂದೀಲ –

ಬೆಳಕಿನ ಮೌನದ ಮಾತು

ಹುಡುಕುತ್ತಾ…”

ಕೃತಿ: “ಆಸೆಯ ಕಂದೀಲು“(ಕವನ ಸಂಕಲನ)

ಕವಯತ್ರಿ: ಮಂಜುಳ.ಡಿ, ಬೆಂಗಳೂರು.

ಪ್ರಕಾಶನ: ತೇಜು ಪಬ್ಲಿಕೇಷನ್ಸ್, ಬೆಂಗಳೂರು.

ಬೆಲೆ: ₹೫೫

ಕವನ ಸಂಕಲನಗಳನ್ನು ಕೊಂಡು ಓದುವವರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಾಣುತ್ತಿರುವ ಸಮಯದಲ್ಲಿ, ಇಂದಿನ ಕಾಲಘಟ್ಟದಲ್ಲಿ ಕವಿತೆಗಳನ್ನು ಬರೆದು ಪ್ರಕಟಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸಂತಸದ ಸಂಗತಿಯೇ ಆಗಿದೆ. ಆದರೆ ಮನಸ್ಸಿಗೆ ಬಂದದ್ದನ್ನು ಗೀಚಿ ಪುಸ್ತಕದ ರೂಪದಲ್ಲಿ ಪ್ರಕಟಿಸಿ ತಾನೊಬ್ಬ ‘ಕವಿ/ಕವಯಿತ್ರಿ’ ಎಂಬ ಲೇಬಲ್ ಅನ್ನು ತಮಗೆ ತಾವೇ ನೀಡಿಕೊಂಡು ಸಂಭ್ರಮಿಸುವ ಸಂಸ್ಕೃತಿ ಜಾರಿಯಲ್ಲಿರುವುದನ್ನು ತಳ್ಳಿಹಾಕುವಂತಿಲ್ಲ! ಹೀಗಿದ್ದಾಗ ಅಂತಹ ಹಲವರ ನಡುವೆ ನಿಜಕ್ಕೂ ಉತ್ಕೃಷ್ಟವಾದ ಕವಿತೆಗಳನ್ನು ರಚಿಸುತ್ತಿರುವ ಲೇಖಕರನ್ನು ಅರಸುವುದು ಕಷ್ಟಸಾಧ್ಯವೆ ಸರಿ. ಅಂತಹ ವಿರಳರಲ್ಲಿ ವಿರಳರಾದ,

ಫೇಸ್ಬುಕ್  ಸಾಮಾಜಿಕ ಜಾಲತಾಣದಲ್ಲಿ ಛಾಪು ಮೂಡಿಸಿ, ತಮ್ಮದೇ ಆದ ಓದುಗ ವರ್ಗವನ್ನು ಹೊಂದಿರುವ ಮಂಜುಳ.ಡಿ ರವರು, ತಮ್ಮ ವಿಭಿನ್ನ ಶೈಲಿಯ ಕವಿತೆಗಳಿಂದಲೇ ಪರಿಚಿತರಾದವರು. “ಆಸೆಯ ಕಂದೀಲು” ಕವನ ಸಂಕಲನ ‘ಮಂಜುಳ.ಡಿ’ ರವರ ಚೊಚ್ಚಲ ಕೃತಿಯಾಗಿದ್ದು, ಇದರೊಂದಿಗೆ “ಸಂಪಿಗೆ ಮರ” (ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟಣೆಯಾದ ಅಂಕಣ ಬರಹಗಳು) ಮತ್ತು “ನಿನಾದವೊಂದು…”(ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟನೆಯಾದ ಅಂಕಣ ಬರಹಗಳು) ಕೃತಿಗಳನ್ನು ಸಹ ಪ್ರಕಟಿಸಿದ್ದಾರೆ.

ಮುಸ್ಸಂಜೆಯ ಚಹದೊಂದಿಗೆ

ಒಮ್ಮೆ ನೀ ಸಿಗು

ಒಂದಷ್ಟು ಮಾತುಗಳ ಎಳೆ ಹೆಣೆಯುವ

ನೀ ಮೌನದಲ್ಲಿ ಹೇಳುತ್ತಾ ಹೋಗು

ನಾ ಸುಮ್ಮನೆ ಕೇಳುವೆ

(ಮಾತಿನ ಎಳೆ)

   ಮುಂಜಾನೆ ಮುಸುಕು ಇಬ್ಬನಿ ಮಬ್ಬಿನ ಈ ಚಳಿಯ ಘಳಿಗೆಯಲ್ಲಿ, ಬಾಲ್ಕಾನಿಯಲ್ಲಿ ನಿಂತು ಶುಷ್ಕ ಹಬೆಯಾಡುವ ಚಹಾದ ಒಂದೊಂದು ಗುಟುಕು ಹೀರುತ್ತಾ… ಮಂಜುಳ. ಡಿ ರವರ ಒಂದೊಂದು ಕವಿತೆಗಳನ್ನು ಆಸ್ವಾದಿಸುತ್ತಿದ್ದರೆ ಭಾವಗಳ ಅಮಲೇರುವ ನಶೆಯ ಗಂಧ ಮೈಮನಸ್ಸನ್ನು ಆವರಿಸುತ್ತದೆ. ಏಕತಾನತೆಯಲ್ಲಿ ತಲ್ಲೀನನಾಗಿರುವವನಲ್ಲಿ ನಿರ್ಲಿಪ್ತ ನದಿಯೊಂದು ಮೌನವಾಗಿ ಹರಿದಂತೆ ಅನುಭವವಾಗುತ್ತದೆ.

ಶುದ್ಧ ಕಾವ್ಯಾತ್ಮಕವಾದ ಪರಿಭಾಷೆಯಲ್ಲಿ ಮಿಂದು ಪುಟಿದೆದ್ದಂತಿರುವ ಕಾವ್ಯದ ಸಾಲುಗಳು ನವೀನತೆಯಿಂದ ಅತ್ಯಾಪ್ತವಾಗುವ, ಮನಕೆ ಮುದ ನೀಡುವ, ರಮಿಸುವ, ಸಮ್ಮೋಹಿಸುವ, ಪರವಶಗೊಳಿಸುವ ಸರಳ ಭಾಷೆಯ ಹಾಗೂ ಸುಂದರ ಭಾವದ ಅಚ್ಚುಕಟ್ಟಾದ ರಚನೆಗಳು, ಅನಾಯಾಸವಾಗಿ ಕವಿಮನದ ಸೂಕ್ಷ್ಮ ಸಂವೇದನೆಯಿಂದ ಹೊಮ್ಮಿದ ಹಾಗೇ ಅಷ್ಟೇ ಅನಾಯಾಸವಾಗಿ ಓದುಗನನ್ನು ದಕ್ಕಿಸಿಕೊಳ್ಳುತ್ತವೆ.

ಅದು ಧ್ಯಾನವೋ ತಪನವೋ ಅರಿಯೆ ದಶಕವಾದರೂ ಒಂದಂಗುಲ ಕದಲದ ಒಂದೇ ತೀವ್ರತೆ

ಅಂಗುಷ್ಠದಿಂದ ನೆಟ್ಟಿಯಂಚಿನವರೆಗೂ ಅರೆಗಳಿಗೆಯಲ್ಲಿ ಕರಗಿ ಹರಿದುಬಿಡಬೇಕೆಂಬ ಕಾತರತೆ

(ಮುಗಿಲಿನಂಚಿನ ನೀಲಿ ಪರಿಚ್ಛೇದದಲ್ಲಿ ಉಲ್ಕಾಪಾತ)

ಈ ತೆರನಾದ ವಿಭಿನ್ನ ಮತ್ತು ಅನನ್ಯ ಅಭಿವ್ಯಕಿಯನ್ನು, ಕೌಶಲ್ಯವನ್ನು ಕರಗತ ಮಾಡಿಕೊಂಡಿರುವ ಮಂಜುಳರವರ ಕವನ ಸಂಕಲನದಲ್ಲಿ  ತಮ್ಮದೇ ಛಾಪು ಮೂಡಿಸುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದು.

ನಿನ್ನ ಕಂಡ ಮರುಕ್ಷಣ ನನ್ನೊಳು ಹರಿದು ನಿಂತ ನಿನ್ನ ಅಸ್ತಿತ್ವ

ನಿನ್ನದೇ ಬಣ್ಣ ಪಡೆದು ನಿಂತ ಪರಿ ನನ್ನ ಬಣ್ಣವ್ಯಾವುದೋ ಗುರುತಿಸಲಿ ಹೇಗೆ?”

(ನಿನ್ನಲ್ಲಿ ಕರಾಗಿರುವ ನನ್ನ ಬಣ್ಣವಾವುದು?)

    ಓದುಗ ಬೆರಳನ್ನು ಬಳಸಿ ಸಂಕಲನದ ಕವಿತೆಗಳನ್ನು ಓದುವಾಗ, ಅದರಲ್ಲಿನ ಹಸಿ ಸಿಹಿ ಭಾವ ಸುಮಗಳು ಓದುಗನ ಅಂಗೈ ಬೆರಳಿಗಂಟಿ ಮಗುಮ್ಮಾಗಿ ಘಮ್ ಎಂದು ನಕ್ಕು ಅಚ್ಚರಿ ಮೂಡಿಸುತ್ತವೆ! ಹಾಗಾಗಿ ಪ್ರಸ್ತುತ ಕವಿತೆಗಳಲ್ಲಿ ಮಿಂದು, ಕರಗಿ, ಒಂದಾಗಿ, ಕಳೆದು ಹೋಗುವ ಭಾವ ತೀವ್ರತೆ ಉಂಟಾಗುತ್ತದೆ.

ಬಿಟ್ಟು ಹೋಗುವ

ಆತುರವೆಷ್ಟಿತ್ತು ನೋಡು

ನಿನ್ನರ್ಧ

ನನ್ನಲ್ಲೆ ಉಳಿಸಿ ಹೋದೆ

( ಮಾಸದ ಕಲೆ)

   ಇಲ್ಲಿನ ಕವಿತೆಗಳು ಒಂದು ಮತ್ತೊಂದರ ನೆರಳಿಲ್ಲದೆ ಸ್ವತಂತ್ರವಾಗಿ ಮತ್ತು ವೈವಿಧ್ಯಮಯವಾಗಿ ಭಿನ್ನತೆಯನ್ನು ಕಾಯ್ದುಕೊಳ್ಳುವ ಜೊತೆಗೆ, ತಮ್ಮದೇ ಆದ ನವಿರಾದ ಶೈಲಿಯನ್ನು ಮೈಗೂಡಿಸಿಕೊಂಡಿದ್ದು; ಕ್ಲಿಷೆ ಅನಿಸುವ, ಜಿಜ್ಞಾಸೆ ಮೂಡಿಸುವ ಸವಕಲು ಪದಗಳ  ಪಂಜು ನಂದಿಸಿ, ಆಸೆಯ ಕಂದೀಲನ್ನು ಹೊಸತಾಗಿ ಹಚ್ಚಿದ್ದಾರೆ. ಅದರ ಪ್ರಭೆ ಉತ್ಸಾಹ ಭರಿತ, ಉಲ್ಲಾಸದಾಯಕ, ಉನ್ಮಾದದ ರಸಸಿದ್ಧಿಯ ಜೊತೆಗೆ ಉದಾತ್ತತೆಯ ತದಾತ್ಮಕತೆಯನ್ನು ಹುಟ್ಟಿಸಿ ಬೆರಗು ಮೂಡಿಸುವಂಥದ್ದು.

ಹೂಡಿದ ಸಂಚೊoದು

ಯಾವುದೇ ಶಿಕ್ಷೆಯಿಲ್ಲದೆ

ರಿಹಾ ಆಯಿತು

ಕಣ್ಣುಗಳನ್ನು

ಆಯುಧವೆಂದು ಪರಿಗಣಿಸಿಲ್ಲ

(ಆಯುಧ)

ಹೀಗೆ….

ಹಾರುವ ಹಕ್ಕಿಯ ರೆಕ್ಕೆಯ ತುದಿಯಾಗಿ ಆತ್ಮವನ್ನು ಸ್ಪರ್ಶಿಸುವ, ಹೂದಳಗಳಾಗಿ ಮನಸ್ಸನ್ನು ಆರ್ದವಾಗಿ ತಾಕುವ, ಕತ್ತಲಲ್ಲಿ ದೀಪವನ್ನು ಹಚ್ಚಿಟ್ಟಂತೆ ಬೆಳಗುವ, ಬಿಸಿಲ ಹೊಂಗಿರಣಗಳಿಗೆ ಹೊಳೆಯ ಅಲೆಗಳಾಗಿ ಹೊಳೆಯುವ, ಹೊಸ ಹೊಳಹು ಹಾಗು ನವ ಕಾಣ್ಕೆಗಳ ಮೂಲಕ ವಿಸ್ಮಯ ಲೋಕವೊಂದನ್ನು ಸೃಷ್ಟಿಸುವ, ತದಾತ್ಮಕತೆಯನ್ನು ಹುಟ್ಟಿಸಿ ಬೆರಗು ಮೂಡಿಸುತ್ತವೆ.

ನೆರಳೆ ಬೆಳಕನ್ನು ಬೆನ್ನಟ್ಟಿದ ಹಾಗೆ

__

ಕಣ್ಣಿನಲ್ಲಿ ಬಿದ್ದ ಜಗವೀಗ ಒದ್ದೆ

__

ಅಲ್ಲಾನ ಗೋಡೆಯ ಚೂರು

__

ನೀ ಬರುವ ಹಾದಿಯಲ್ಲಿ ಕಣ್ಣ ಹಾಸಿ

__

ನಿನ್ನ ನೋಟದ ಜ್ವಾಲೆಯೊಂದು ತಾಕಿ

__

ಕಣ್ಣವೆಯ ಮೇಲೆ ಅನೂಹ್ಯ ಖಂಡಗಳ ನೆರಳು

__

ಹೇಳು ಹೀಗೆ ನಿನ್ನ ಕಡಲಲ್ಲಿ ಕರಗಿ

ನಿನ್ನದೇ ಬಣ್ಣ ತಳೆದ

ನನ್ನ ಬಣ್ಣವಾದರೂ ಯಾವುದು?’

ಹೀಗೆ….

ಸುಲಭಕ್ಕೆ ಕಲ್ಪನೆಗೆ ದಕ್ಕದ ಅಪರೂಪದ, ಸೃಜನಶೀಲ, ಚಿಂತನೆಗೆ ಹಚ್ಚುವ ಅಲೌಕಿಕ ಅರ್ಥವನ್ನು, ಪಾರಮಾರ್ಥಿಕ ಅನುಭೂತಿಯೊಂದಿಗೆ ಬೆಸೆದು ರೂಪಕಗಳಾಗಿಸಿ ಪ್ರೇಮವನ್ನು ಧ್ಯಾನಿಸುವ ಪರಿ ಅಪರಿಮಿತವಾದುದು.

ಉಡುಗೊರೆಯಾಗಿ ಏನು ಬೇಕು

ಎಂದಿಗೂ ಮುಗಿಯದ

ಒಂದೇ ಒಂದು ಭೇಟಿ ಸಾಕು

(ಉಡುಗೊರೆ)

ಈ ತೆರನಾದ ಕವಿತೆಗಳ ತೀವ್ರತೆ, ಭಾವುಕತೆ, ತುಡಿತ, ಮಿಡಿತ, ಕಾವ್ಯ ಕಟ್ಟುವ ವಿಧಾನ ಹಾಗು ಕಾವ್ಯ ಕಟ್ಟುವ ಕೆಲವು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಗಝಲ್ ಪ್ರಕಾರದ ಒಂದಷ್ಟು ಲಕ್ಷಣಗಳು ಗೋಚರಿಸುತ್ತವೆ. ಈ ನಿಟ್ಟಿನಲ್ಲಿ, ಮುಂದಿನ ದಿನಗಳಲ್ಲಿ ಮಂಜುಳರವರು ಗಝಲ್ಗಳನ್ನು ರಚಿಸಿದ್ದಲ್ಲಿ ಉತ್ತಮ ಗಝಲಕಾರರಾಗುವ ಸಾಧ್ಯತೆಗಳಿವೆ ಅನಿಸುತ್ತದೆ.

ಮನೆಯಿಂದ ಮಂದಿರ, ಮಸೀದಿ

ತುಸು ದೂರವೇ ಇದೆ

ಸಾಗುವ ಹಾದಿಯಲ್ಲಿ

ನೋವಿನಲ್ಲಿದ್ದವರ ಕೊಂಚ ನಗಿಸಿಬಿಡೋಣ

(ಮನುಜಮತ)

    ಶೋಕವು ನಿನಾದವಾಗುವ, ಲೋಕದ ಕಣ್ಣಿನ ಭಾಷೆಗೆ ಕವಿತೆ ಕ್ಯಾನುವಾಸಾಗುವ, ನೋವು ಕಂಬನಿಯಾಗಿ, ಮನದ ಬನಿಯಾಗಿ ಅಲಾಪಗೊಂಡು ಹೃದಯ ಮಿಡಿಯುವ, ಆ ಮೂಲಕ ನೋವು ಸಹ ಮುಗುಳ್ನಗೆಯಾಗುವ, ತುಡಿಯುವ, ಕಾಡುವ, ಕನವರಿಸುವ, ಕನಸಾಗುವ, ಪ್ರೇಮ ಆರಾಧನೆಯೊಂದಿಗೆ ವಿರಹವನ್ನು ಅಪ್ಪಿ ಸಲಹುವ, ಜೊತೆಗೆ ಸಿಟ್ಟು, ಸೆಡವು, ಹತಾಶೆ, ವ್ಯಾಮೋಹ, ಏಕಾಂತ, ಒಂಟಿತನ, ಮೌನ, ನಿಟ್ಟುಸಿರು, ನಗು, ಮುಗ್ಧತೆ, ಪ್ರಕೃತಿ, ಜಾತಿ, ಧರ್ಮ ಹೀಗೆ ಒಂದಷ್ಟು ತತ್ವ-ಸಿದ್ಧಾಂತ ಎಲ್ಲವೂ ಒಂದು ಯಾಖಃಚಿತ್ ರೂಪ ಪಡೆದು ರೂಪಕಗಳಾಗಿ ಕವಿತೆಗಳಲ್ಲಿ ಭಾವಾರ್ಥಗಳೊಡಗೂಡಿ ಸದ್ದಿಲ್ಲದೆ ಅನುಸಂಧಾನಿಸುವಂತೆ ಹರಿಯುವ ರೀತಿ….

ನನ್ನ ಪ್ರೀತಿಯ ಕವಯತ್ರಿ ಅಮೃತಾ ಪ್ರೀತಂ ರ ಕವಿತೆಗಳನ್ನು ನೆನಪಿಸಿದವು. ಅಮೃತಾ ರ ಕವಿತೆಗಳನ್ನು ಆಸ್ವಾದಿಸಿ, ಅನುಭವಿಸಿ, ಅವುಗಳ ಅಂತರ್ಯದಿ ಅವಿರ್ಭವಿಸಿ ಅಮಲೇರಿಸಿಕೊಂಡು ಕವಿತೆಗಳ ನಶೆಯಲ್ಲಿ ಧುತ್ತನಾಗಿ ಎಷ್ಟೋ ದಿನಗಳವರೆಗೆ ಕಾಡುವಂತೆ, ಮಂಜುಳ ರವರ ಆಸೆಯ ಕಂದೀಲು ಸಂಕಲನದ ಕವಿತೆಗಳು ಕಾಡುತ್ತವೆ.

ತದಾತ್ಮಕತೆಯನ್ನು ಹುಟ್ಟಿಸಿ ಬೆರಗು ಮೂಡಿಸುತ್ತವೆ!

~’ನೆರಳೆ ಬೆಳಕನ್ನು ಬೆನ್ನಟ್ಟಿದ ಹಾಗೆ

~’ಕಣ್ಣಿನಲ್ಲಿ ಬಿದ್ದ ಜಗವೀಗ ಒದ್ದೆ

~’ಅಲ್ಲಾನ ಗೋಡೆಯ ಚೂರು

~’ನೀ ಬರುವ ಹಾದಿಯಲ್ಲಿ ಕಣ್ಣ ಹಾಸಿ

~’ನಿನ್ನ ನೋಟದ ಜ್ವಾಲೆಯೊಂದು ತಾಕಿ

~’ಕಣ್ಣವೆಯ ಮೇಲೆ ಅನೂಹ್ಯ ಖಂಡಗಳ ನೆರಳು

~’ಹೇಳು ಹೀಗೆ ನಿನ್ನ ಕಡಲಲ್ಲಿ ಕರಗಿ

ನಿನ್ನದೇ ಬಣ್ಣ ತಳೆದ

ನನ್ನ ಬಣ್ಣವಾದರೂ ಯಾವುದು?’

ಇಂತಹ ಸಾಲುಗಳು ಚಿಂತನೆಗೆ ಹಚ್ಚುವುದರೊಂದಿಗೆ, ಕವಿಮನದ ಕಲ್ಪನೆಯ ಅನುಭೂತಿಯನ್ನು  ಓದುಗನಿಗೂ ಪ್ರಾಸಾದಿಸುತ್ತವೆ.

 ಇದುವರೆಗಿನ ಸಂಗೀತ ವಿದ್ವಾಂಸರು ಯಾರನ್ನು ಒಳಗಿಳಿಸಿಕೊಂಡು ಹಾಡುತ್ತಾರೆನ್ನುವುದು ಸದಾ ಚಕಿತಗೊಳಿಸುವ ಸಂಗತಿ ನನಗೆ

ಎಂಬಂತಹ ಕವಿತೆಯ ಹೊಳಹುಗಳು, ತೀರಾ ವಾಚ್ಯವೆನಿಸಿದರೂ ಕಾವ್ಯ ಲಹರಿಯೊಂದಿಗೆ ಓದಿಸಿಕೊಂಡು ಸಾಗುತ್ತವೆ.

ಇದರ ಜೊತೆಗೆ, ಮುಖ್ಯವಾಗಿ ಕೊನೆಯ ಪುಟಗಳಲ್ಲಿ ಬಿಡಿ ಹೂಗಳಾಗಿ ಅರಳಿರುವ ಅಳಿದುಳಿದ ಕವಿತೆಗಳು ಉತ್ಕೃಷ್ಟ ರಚನೆಗಳಾಗಿದ್ದು, ಕವಿಮನಸಿನಾಗಸದ ನಕ್ಷತ್ರಗಳಂತೆ ಮಿನುಗುತ್ತವೆ. ಅವುಗಳಲ್ಲಿ ಕೆಲವು ಓದುಗರಿಗಾಗಿ ಈ ಕೆಳಗೆ ಹಂಚಿಕೊಂಡಿರುವೆ….

ಮಳೆಯ ಹನಿಗಳಿಗೆ ಬಣ್ಣವಿಲ್ಲ

………………………

ಆದರೂ

ಸುತ್ತಲೂ

ಬಣ್ಣ ಚೆಲ್ಲಿದ ವಾತಾವರಣ

(ರಂಗು)

__

ಯಾರದ್ದಾದರೂ ತಪ್ಪುಗಳನ್ನು

ಎಣಿಸುವ ಮೊದಲು

ಕನ್ನಡಿಯ ಮುಂದೆ

ಒಮ್ಮೆ ಹಾದು ಹೋಗುವ

(ಆತ್ಮಶೋಧ)

__

ಮನೆಯವರಿಗೂ

ಬಿಟ್ಟು ಬರಲೇ

…………

ನನ್ನನ್ನು

ಇನ್ನೆಷ್ಟು

ಬಿಡುತ್ತೀಯ ಹೇಳು

(ವಿರಹಿ)

__

ಕಣ್ಣಿಂದ ಹೇಳಿದರೆ ನೀರ ಹನಿಗಳು

ಪದಗಳಲ್ಲಿ ಹೇಳಿದರೆ ಕವಿತೆ

(ನೋವೆಂದರೆ…)

__

ಕೆಳಜಾತಿಯವನೆಂದು ಆತನನ್ನು

ಮನೆಯ ಒಳಗೆ ಬಿಟ್ಟುಕೊಳ್ಳಲಿಲ್ಲ

ಅವರು ಸಾಕಿದ ನಾಯಿ

ಮನೆಯ ಒಳಗೆಲ್ಲ

ಓಡಾಡುತ್ತಲ್ಲ“*

(ಜಾತಿಮತಿ)

ಮುಗಿಸುವ ಮುನ್ನ…

“ಆಸೆಯ ಕಂದೀಲು…” ಸಂಕಲನದ ಒಟ್ಟು ಅರವತ್ತೈದು ಕವಿತೆಗಳೂ ಸಹ ಒಂದಾದ ನಂತರ ಮತ್ತೊಂದು ಓದುಗನನ್ನು ಅಪ್ಪುತ್ತಾ, ಆತ್ಮೀಯತೆಯಿಂದ, ಅಪ್ಯಯತೆಯಿಂದ ನಿರರ್ಗಳವಾಗಿ ಸಾಗುತ್ತವೆ. ಇಂತಹ ಪ್ರತಿಭಾವಂತರನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸುವ ಜವಾಬ್ದಾರಿ ಓದುಗರದ್ದಾಗಿದೆ.

ಕವಯಿತ್ರಿ ‘ಮಂಜುಳ.ಡಿ’ ರವರ ಚೊಚ್ಚಲ ಪ್ರಯತ್ನ ನಿಜಕ್ಕೂ ಸಾರ್ಥಕತೆಯತ್ತ ಸಾಗಿದೆ. ಈ ಪಯಣ ಹೀಗೆ ಮುಂದುವರಿಯಲಿ, ಮತ್ತಷ್ಟು ಕೃತಿಗಳು ಪ್ರಕಟವಾಗಿ ಓದುಗರ ಮನಸ್ಸು ತಣಿಸಲಿ ಎಂಬ ಶುಭ ಹಾರೈಕೆಗಳೊಂದಿಗೆ…

*****************************.

ಜಬೀವುಲ್ಲಾ ಎಮ್. ಅಸದ್

Leave a Reply

Back To Top