ಪುಸ್ತಕ ಸಂಗಾತಿ
ತಡವಾಗಿ ಬಿದ್ದ ಮಳೆ
ತಡವಾಗಿ ಬಿದ್ದ ಮಳೆ ೧೩ ಸಣ್ಣಕತೆಗಳ ಸಂಕಲನ. ನಮ್ಮ ದಿನನಿತ್ಯದ ಜೀವನದಲ್ಲಿ ಭೇಟಿಯಾಗುವ ಎಷ್ಟೋ ವ್ಯಕ್ತಿತ್ವಗಳು ಕೆಲವೊಮ್ಮೆ ನಾವೇ ಆ ಪಾತ್ರವೇನೋ ಎಂದೆನಿಸುವಷ್ಟು ಸಹಜ ಪಾತ್ರಗಳ ಮೂಲಕ ಕಥೆ ಹೇಳುವ ಕೌಶಲ್ಯ ಇವರಿಗೆ ಸಿದ್ಧಿಸಿದೆ. ನಮ್ಮದೇ ಕಥೆಯೇನೋ, ನಮ್ಮ ಮಾತುಗಳೇ ಪಾತ್ರದ ಮೂಲಕ ಆಡಿಸಿದ್ದಾರೆನೋ ಎಂದೆನಿಸುವ ಕಥೆಗಳು. ಲೇಖಕರೇ ಉಪಸಂಹಾರದಲ್ಲಿ ಹೇಳಿದಂತೆ “ತಡವಾಗಿ ಬಿದ್ದ ಮಳೆ ಒಂದು ಘಟಿಸಿರುವ, ಸಾವಿರಾರು ಘಟಿಸುತ್ತಿರುವ ಘಟಿಸಬಹುದಾದ ಸಮಕಾಲೀನ ಉದಾಹರಣೆಗಳ ಒಂದು ಸಾಂಧರ್ಬಿಕ ರೂಪವಷ್ಟೆ. ”
ಲೈಂಗಿಕ ಅಗತ್ಯ ಅಥವಾ ಸೆಕ್ಸ್ ಮಾನವನ ಜೀವನದ ಅವಶ್ಯಕತೆ ಅನಿವಾರ್ಯತೆ . ಆದರೆ ನೈತಿಕತೆಯ ಪರಿಭಾಷೆ ತಲೆಮಾರಿನಿಂದ ತಲೆಮಾರಿಗೆ, ದೇಶದಿಂದ ದೇಶಕ್ಕೆ ಬದಲಾಗುತ್ತದೆಯೇ? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ತಾಯಿ ಮಗಳ ಮದ್ಯದ ಸಂಘರ್ಷ ತುಮುಲಗಳನ್ನು ವಿವರಿಸುತ್ತಾ ಹೋಗುವ ಕಥೆ ಬಣ್ಣಗಳು. ಮೂವತ್ತರ ವಯಸ್ಸಿನ ವಿದೇಶದಲ್ಲಿ ಉದ್ಯೋಗ ಮಾಡುವ ಮಗಳಿಗೆ ಡೇಟಿಂಗ್ ಸಾಮಾನ್ಯ . ಆದರೆ ಚಿಕ್ಕ ವಯಸ್ಸಿನಲ್ಲೇ ಪತಿವಿಯೋಗವಾಗಿ ಬೇರೆ ಅಂಕಲ್ ನೊಡನೆ ಸಂಬಂಧವಿರಿಸಿಕೊಂಡಿದ್ದಾಳೆಂದು ತಾಯಿಯ ಬಗ್ಗೆ ಆಕ್ರೋಶ . ಈ ಸೂಕ್ಷ್ಮ ಎಳೆಯನ್ನು ತಾಯಿಯ ದೃಷ್ಟಿಕೋನದಿಂದ ಬಿಡಿಸುತ್ತಾ ಹೋಗುವ ಕಥೆ ನೈತಿಕತೆಯ ಸಂಕೀರ್ಣತೆಯನ್ನು ಬಿಚ್ಚಿಡುತ್ತದೆ. “ಭಾರತೀಯ ಮಹಿಳೆ ಸೆಕ್ಸ್ ಇಲ್ಲದೆಯೂ ಸಂಬಂಧದ ಗೌರವ ಉಳಿಸಿಕೊಂಡು ಬದುಕುತ್ತಾಳೆ . ಆದರೆ ಸುಖಕ್ಕಾಗಿ ಆತ್ಮಸಮ್ಮಾನ ಕಳೆದುಕೊಂಡು ಬದುಕಲಾರಳು” ಈ ಸಾಲುಗಳು ತುಂಬಾ ಇಷ್ಟವಾದವು.
ಪಿಂಡ ಕಥೆಯಲ್ಲಿ ಶೇಖರನ ಸ್ವಂತ ಅಣ್ಣ ತಮ್ಮಂದಿರಿಗೆ ಹೊತ್ತಿಗೆ ನೆರವಾಗದಾದಾಗ ನೆರೆಯ ತಾಯಿ ಮಗ ಅನುವು ಆಪತ್ತಿಗೆ ಧಾವಿಸುತ್ತಾರೆ. ಆದರೆ ಶೇಖರನ ತಂದೆ ಆಚಾರ್ಯರ ಪಿಂಡ ಸ್ವೀಕಾರ ಕಾಗೆಗಳಿಂದ ಆಗಲು ಏನು ಮಾಡಬೇಕಾಗುತ್ತದೆ? ಒಂದು ಕುಟುಂಬದ ವಿವಿಧ ಸದಸ್ಯರ ಮನೋಭಾವ, ನಡವಳಿಕೆ, ವಂಶದ ಎಷ್ಟೋ ಮುಚ್ಚಿಟ್ಟ ರಹಸ್ಯಗಳು ಇವೆಲ್ಲದರ ಸುತ್ತ ಹೆಣೆದ ಕಥೆ ಆಪ್ತವೆನಿಸಿತು.
ಮುಖಗಳು ಕಥೆಯಲ್ಲಿ ತನ್ನ ಅಮ್ಮನ ಬಗೆಗಿನ ನಿಜ ವಿಷಯ ತಿಳಿಯದೆ ಅಪ್ಪನಿಂದ ವಿಮುಖಳಾಗಿದ್ದ ಮಗಳು ಕಡೆಗೆ ಸತ್ಯ ತಿಳಿದು ತಿಳಿಯುವುದು, ಕಥೆಯ ಮೊದಲಲ್ಲೇ ಕೊಟ್ಟ ಪರಿಚಯದ ಈ ನುಡಿಗಳೆ ವಿವರಣಾತ್ಮಕವಾಗಿದೆ ” ಸತ್ಯ ಯಾವಾಗಲೂ ಕಹಿಯೇ ಆಗಿರುತ್ತದೆ ಮುಖಗಳು ಮೇಲೆ ಕಂಡಂತೆ ಇರೋದಿಲ್ಲ. ಇದ್ದ ಮುಖಕ್ಕಿಂತ ಬಣ್ಣ ಹಚ್ಚಿಕೊಳ್ಳುವ ಕಲೆಗಳನ್ನು ಮರೆ ಮಾಡುವವರೇ ಹೆಚ್ಚು ಈಗ . ಆದರೆ ಮುಖವಾಡಗಳು ಕಳಚಿದಾಗಲೇ ವ್ಯಕ್ತಿಯ ನಿಜವಾದ ವ್ಯಕ್ತಿತ್ವ ಈಚೆಗೆ ಬರೋದು.”
ತಡವಾಗಿ ಬಿದ್ದ ಮಳೆ ಕಥಾ ಸಂಕಲನದ ಶೀರ್ಷಿಕೆಯ ಹೆಸರಿನದೇ ಕಥೆ .ಸ್ವತಂತ್ರವಾಗಿರಬೇಕೆಂದು ಬೇರೆ ಮನೆ ಮಾಡುವ ಮಗಳು ವೀಕೆಂಡ್ ಅಫೇರ್ಸ್ ಅದನ್ನು ವರ್ಷಕ್ಕೊಮ್ಮೆ ಬದಲಾಯಿಸುವ ಚಾಳಿ ಬೇರೆ. ಹೆಂಡತಿಯೊಂದಿಗೆ ಬೇರೆ ವಾಸಿಸುವ ಮಗ.ಇಬ್ಬರೂ ವಿಧವೆ ತಾಯಿ ಇಳಿವಯಸ್ಸಿನಲ್ಲಿ ಮತ್ತೆ ಮದುವೆಯಾಗ ಹೊರಟಾಗ ವಿರೋಧಿಸುತ್ತಾರೆ . ಹಸಿಹಸಿಯಾಗಿಯೇ ನೇರವಾಗಿ “ನಿಮ್ಮ ಈ ರೀತಿಯ ಬದುಕಿಗಿಂತ ಇದು ತಲೆಯೆತ್ತಿ ನಡೆಯುವ ನಿರ್ಧಾರ” ಎಂದು ತನ್ನ ಬದುಕಿನ ಈ ಸೆಕೆಂಡ್ ಇನ್ನಿಂಗ್ಸ್ ನಿರ್ಧಾರ ವನ್ನು ಸಮರ್ಥಿಸಿಕೊಳ್ಳುತ್ತಾಳೆ .”ಮಳೆ ಕೊಂಚ ತಡವಾಗಿ ಬಿದ್ದರೂ ಅದು ನೀಡುವ ತಂಪಿಗೆ ಜೀವನೋತ್ಸಾಹ ತುಂಬಿಸೋ ಶಕ್ತಿಗೆ ಸಮನಾದದ್ದು ಬೇರಿಲ್ಲ . ಅದಷ್ಟು ನೈಜ ಮತ್ತು ಪ್ರಾಮಾಣಿಕ. ತಡವಾಗಿ ಬಿದ್ದರೂ ಅದು ಮಳೆಯೇ. ಕೃತಕವಾಗಿ ಸುರಿಸುವ ಶಾವರ್ ಗಿಂತ ತಡವಾಗಿ ಬೀಳುವ ಮಳೆಯ ಹನಿಗಳಲ್ಲಿ ತುಂಬಿರುವ ಜೀವನೋತ್ಸಾಹ ಅದ್ಭುತ. ಅದು ಬದುಕಿಗೆ ಬೇಕಿರುವುದು. ಬದುಕನ್ನು ಬಟ್ಟೆಯಂತೆ ಆಗಾಗ ಬದಲಾಯಿಸಬೇಕಿಲ್ಲ” ಎಷ್ಟು ನಿತ್ಯಸತ್ಯದ ಮಾತುಗಳು ಅಲ್ಲವೇ?
ಪಾಲು ಕಥೆಯಲ್ಲಿ ಅಧಃಪತನ ಹೊಂದುತ್ತಿರುವ ದೃಷ್ಟಿಕೋನ ಧೋರಣೆಗಳು ಜವಾಬ್ದಾರಿ ಇರದ ಲಘುವಾಗಿ ತೆಗೆದುಕೊಳ್ಳುವ ಡೇಟಿಂಗ್ ಕಾಲದ ಮಗನಿಗೂ ಬೇರೆ ಸಂಬಂಧವಿರಿಸಿಕೊಂಡರೂ ಅದನ್ನು ಧೈರ್ಯವಾಗಿ ಪ್ರಾಮಾಣಿಕವಾಗಿ ಒಪ್ಪಿಕೊಂಡು ಹೊಣೆಹೊತ್ತು ಜವಾಬ್ದಾರಿ ನಿರ್ವಹಿಸುವ ತಂದೆಯ ಮನೋಭಾವಕ್ಕೂ ಇರುವ ಸಾಮಾಜಿಕ ವ್ಯತ್ಯಾಸದ ಕಡೆ ಬೆಟ್ಟು ಮಾಡಿತೋರಿಸುತ್ತದೆ . ಲೇಖಕರೇ ಹೇಳುವಂತೆ “ಬೆಳವಣಿಗೆ ಬೇಕು ಆದರೆ ಅದು ನಮ್ಮನ್ನು ಬೇರ್ಪಡಿಸಬಾರದು ಒಟ್ಟಿಗೆ ಬೆಳೆಸುವಂತಿರಬೇಕು”.
ಗೋಡೆ ಕತೆಯಲ್ಲಿ ಶ್ರೀಮಂತರ ದೌರ್ಜನ್ಯದಲ್ಲಿ ಮಧ್ಯೆ ಅಡಕತ್ತರಿಗೆ ಸಿಕ್ಕಿ ಅಸಹಾಯಕರಾಗುವ ಆಚಾರ್ಯರು ಭೂ ವ್ಯಾಜ್ಯಗಳಲ್ಲಿ ಎದುರಾಳಿಯಾಗಿದ್ದ ಗೌಡರ ಮಗನಿಗೆ ಮೂಳೆಯ ಚಿಕಿತ್ಸೆಮಾಡಿ ದೊಡ್ಡವರಾಗುತ್ತಾರೆ. ಗೌಡರ ಮಗ ಅದನ್ನು ಗೌರವಿಸಿ ತನ್ನ ಕಡೆಯ ಭೂಮಿಯಲ್ಲಿ ಸ್ವಲ್ಪ ಬಿಟ್ಟುಕೊಡುವುದು ಇನ್ನೂ ಎಲ್ಲೋ ಅಲ್ಪಸ್ವಲ್ಪ ಮಾನವೀಯತೆ ಉಳಿದಿರುವುದಕ್ಕೆ ನಿದರ್ಶನವಾಗುತ್ತದೆ.
“ಆಚೆ ಈಚೆಗಳ ನಡುವೆಯಲ್ಲಿ” ಹಳ್ಳಿಯ ಜೀವನ ನಗರದ ಜೀವನದ ಮಧ್ಯೆ ವ್ಯತ್ಯಾಸ ಬೇಕೆಂದಾಗ ಎಲ್ಲಾ ಸಿಗುವುದರಿಂದ ಬೆಲೆಯೇ ಇಲ್ಲದ ಹಾಗೆ ಆಗಿರುವ ಇಂದಿನ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಹೇಳುತ್ತಾ “ಅತಿ ಸರ್ವತ್ರ ವರ್ಜಯೇತ್” ಎನ್ನುವುದರ ಸಮರ್ಥನೆ ಮಾಡುತ್ತಾರೆ. “ಚೌಕಿಮನೆ”ಯ ಯಜಮಾಂತಿ ತನ್ನ ಗತಿಸಿದ ಗಂಡನ ಇನ್ನೊಂದು ಸಂಬಂಧ ಶಾರದಮ್ಮನನ್ನು ಸಮಾನದುಃಖಿ ಎಂದು ಗುರುತಿಸಿ ಮುಂದಾದರೂ ಒಟ್ಟಿಗೆ ಇರೋಣ ಎನ್ನುವುದು, “ಬೇಲಿ ಮೇಲಿನ ನೀಲಿಹೂವು! ನಲ್ಲಿ ವಿಶಾಲವಾಗಿ ಯೋಚಿಸುವ ಅಜ್ಜಿ ಇವರು ಹೆಣ್ಣಿನ ವಿಶಾಲ ಮನೋಭಾವಕ್ಕೆ ಸಾಕ್ಷಿಯಾಗುತ್ತಾರೆ. ದಾನವ ಕಥೆಯಲ್ಲಿನ ಕ್ರೌರ್ಯ ಮೈನಡುಗಿಸುತ್ತದೆ .
ಕೆಲವು ಕಥೆಗಳಲ್ಲಿನ ಉತ್ತರಕನ್ನಡದ ಹಳ್ಳಿಯ ವಾತಾವರಣದ ಸೊಗಡು ಭಾಷೆಯ ಸೊಬಗು ಮನಸೆಳೆಯುತ್ತದೆ. ಕಥೆಗಾಗಿ ಕಥೆ ಎನ್ನದೆ ಹೇಳಬೇಕಾದ ನೀತಿಯನ್ನು ಹೊರಗೆಡಹಲು ಕಟ್ಟಿಕೊಡುವ ಚೌಕಟ್ಟು, ಬೆಳೆಸುವ ಪಾತ್ರಗಳಲ್ಲಿನ ಹಸಿವು, ಕಸುವು, ಧಾರ್ಷ್ಟ್ಯ, ದೈನ್ಯತೆ , ಅಸಹಾಯಕತೆಗಳು ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿರುತ್ತವೆ. ಅಸಹಜತೆ ಇರದೆ ಕೆಲವೊಮ್ಮೆ ವಿಪರೀತ ಹಸಿಹಸಿ ನೇರಾನೇರ ಎನಿಸಿದರೂ ಗುರಿಯಿಟ್ಟ ಬಾಣದಂತೆ ಮನಮುಟ್ಟುವುದು ಇವರ ಕಥೆಗಳ ವೈಶಿಷ್ಟ್ಯ .
ಕುವೆಂಪುರವರು ತಮ್ಮ ಕವಿತೆ “ನನ್ನ ಕವಿತೆ ತನ್ನ ವಿಮರ್ಶಕನಿಗೆ” ನಲ್ಲಿ ಹೇಳುತ್ತಾರೆ
ನೀನೇರಬಲ್ಲೆಯಾ ನಾನೇರುವೆತ್ತರಕೆ?
ನೀ ಹಾರಬಲ್ಲೆಯಾ ನಾ ಹಾರುವಗಲಕ್ಕೆ?
ನೀ ಮುಳುಗಬಲ್ಲೆಯಾ ನಾ ಮುಳುಗುವಾಳಕ್ಕೆ ?
ಇಲ್ಲ? ನಡೆ ದೂರಸರಿ: ಹೌದು? ಬಾ ಹತ್ತಿರಕೆ
ಆ ನಿಟ್ಟಿನಲ್ಲಿ ವಿಮರ್ಶಕರನ್ನು ಸಹೃದಯಿ ಓದುಗರನ್ನು ಕೈಹಿಡಿದು ತನ್ನ ಅನಿಸಿಕೆಗಳ ಮಟ್ಟಕ್ಕೆ ಏರಿಸಿ ಚಿಂತನೆಗಳ ಆಳಕ್ಕೆ ಇಳಿಸಿ ಅಭಿಪ್ರಾಯ ವಿಸ್ತಾರದಲ್ಲಿ ಹಾರಿಸುತ್ತಾ ಅನುಭವದ ವಿವಿಧ ಸ್ತರಕ್ಕೆ ಕೊಂಡೊಯ್ಯುವ ಲೇಖಕ ಯಶಸ್ವಿಯಾಗುತ್ತಾನೆ . ಆಗ ಕೃತಿಗಳು ಸಾರ್ಥಕವೆನಿಸುತ್ತದೆ. ಅಂತಹ ಅಭಿವ್ಯಕ್ತಿ ಕೌಶಲ್ಯ ಜೊತೆಗೆ ಕರಪಿಡಿದು ಕರೆದೊಯ್ಯುವ ಸಾಮರ್ಥ್ಯ ಮೆಹಂದಳೆಯವರ ಕೃತಿಗಳಲ್ಲಿವೆ .
ಮೆಹಂದಳೆಯವರ ಕೃತಿಯೆಂದರೆ ಓದುಗರಲ್ಲಿ ಏನೋ ಒಂದು ನಿರೀಕ್ಷೆ ಇದ್ದೇ ಇರುತ್ತದೆ. ಹಿಪೊಕ್ರೆಟಿಕ್ ಆಗದೆ ಅನ್ನಿಸಿದ್ದನ್ನು ಮುಖಾಮುಖಿ ಹೇಳುತ್ತಾರೆ ಎನ್ನುವುದಂತೂ ಸರ್ವವಿದಿತ. ಆ ನಿರೀಕ್ಷೆ ಭರವಸೆಗಳನ್ನು ಹುಸಿ ಗೊಳಿಸದೆ, ಸರಾಗವಾಗಿ ಓದಿಸಿಕೊಂಡು ಹೋದರೂ ಸರಳವಾಗಿರದೆ, ಸಂಕೀರ್ಣತೆಯಿಂದ ಚಿಂತನ ಮಂಥನಕ್ಕೆ ಒಡ್ಡುವ ಕಥೆಗಳು. ಖಂಡಿತವಾಗಿಯೂ ಕೊಟ್ಟ ಹಣ ಫೈ ಟು ಪೈ ವಸೂಲ್. ಮಿಸ್ ಮಾಡದೆ ಓದಲೇಬೇಕಾದ ಕಥೆಗಳು ಅಂತ ಪ್ರತ್ಯೇಕ ಹೇಳಬೇಕೆ? ಇಂಥದ್ದೇ ಅಥವಾ ಇನ್ನೂ ಉತ್ತಮ ಕೃತಿಗಳು ತಮ್ಮ ಕಲ್ಪನೆಯ ಮೂಸೆಯಿಂದ ಮೂಡಿ ಬರಲಿ. ಕನ್ನಡ ಸಾರಸ್ವತ ಲೋಕಕ್ಕೆ ಹೆಮ್ಮೆಯ ಕೊಡುಗೆಯಾಗಲಿ. ಅಭಿನಂದನೆಗಳು ಮತ್ತು ಶುಭಕಾಮನೆಗಳು . ಜೂಲೇ ಜೂಲೇ ಸರ್ ಜೀ…….
*********
ಸುಜಾತಾ ರವೀಶ್
ಪ್ರಕಟಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸಂಪಾದಕರಿಗೆ
ಸುಜಾತಾ ರವೀಶ್