ಮನದ ತುಡಿತ

ಕಥೆ

ಮನದ ತುಡಿತ

ಸರೋಜಾ ಶ್ರೀಕಾಂತ ಅಮಾತಿ

time lapse photography body of water

ಅಂದು ಮಧ್ಯಾಹ್ನದಿಂದ ಬಿಟ್ಟೂ ಬಿಡದಂತೆ ಜೋರಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಸಂಜೆ ಆರು ಗಂಟೆಯಾದರೂ ಸುರಿಯುತ್ತಲೇ ಇತ್ತು.ಶ್ರೀಶ ದೇವರ ಮುಂದೆ ದೀಪ ಹಚ್ಚಿ ಗಂಡ ಶ್ರೀವತ್ಸನ ದಾರಿ ಕಾಯುತ್ತಿದ್ದಳು.ರಾತ್ರಿ ಹತ್ತು ಗಂಟೆಯಾದರೂ ಶ್ರೀವತ್ಸ ಆಫೀಸಿನಿಂದ ವಾಪಸ್ಸಾಗಲಿಲ್ಲ!….ದೊಡ್ಡ ಹಾಲಿನಲ್ಲಿ ಆ ಎರಡು ಪ್ಲಾಸ್ಟಿಕ್ ಕುರ್ಚಿ,ಚಿಕ್ಕ ಗೋಡೆ ಗಡಿಯಾರ ಬಿಟ್ಟು ಮತ್ತೇನು ಇರಲಿಲ್ಲ.

ಅಪ್ಪನಿಗೆ ಒಬ್ಬಳೇ ಮುದ್ದಿನ ಮಗಳಾದ ಶ್ರೀಶಳನ್ನು ಇಷ್ಟು ದೂರ ಮದುವೆ ಮಾಡಿಕೊಡಲು ಸುತಾರಾಂ ಇಷ್ಟವಿರಲಿಲ್ಲ…. ಆದರೆ ಶ್ರೀಶ ಮತ್ತು ಶ್ರೀವತ್ಸನ ಅನನ್ಯ ಪ್ರೀತಿಗೆ ಮಣಿದು ಮನಸ್ಸಿಲ್ಲದೆ ಮದುವೆ ಮಾಡಿಕೊಟ್ಟಿದ್ದರು.ಅಂದಿನಿಂದ ಶ್ರೀಶ ಅಪ್ಪನೊಂದಿಗೆ ಮನ ಬಿಚ್ಚಿ ಮಾತನಾಡಿದ್ದೆ ಇರಲಿಲ್ಲ.ಅವಳ ಮೇಲಿನ ಪ್ರೀತಿ ಅಪ್ಪನನ್ನು ಸಿಟ್ಟಿಗೇಳುವಂತೆ ಮಾಡಿತ್ತು.ತವರಿನಿಂದ ಪ್ರೀತಿಯಿಂದ ಉಡುಗೊರೆಯಾಗಿ ಕೊಡುವ ಯಾವುದೇ ವಸ್ತುಗಳನ್ನು ಅವಳು ತರದೆ…. ಮನದ ತುಂಬಾ ಬರೀ  ತವರಿನ ಪ್ರೇಮ ,ಕೂಡು ಕುಟುಂಬದ ಮಮತೆ ವಾತ್ಸಲ್ಯಗಳನ್ನಷ್ಟೇ ಉಡಿಯಲ್ಲಿ ತುಂಬಿಸಿಕೊಂಡು ಒಂಟಿಯಾಗಿ ಶ್ರೀವತ್ಸನ ಜೊತೆ ಮುಂಬೈಗೆ ಕಾಲಿರಿಸಿದ್ದಳು.

ಅಂದೇಕೋ ಶ್ರೀಶಳಿಗೆ ತನ್ನ ತವರು ಅಜ್ಜ,ಅಜ್ಜಿ, ಅಪ್ಪ,ಅಮ್ಮ ಅಣ್ಣ  ಬಂಧುಗಳು ಎಲ್ಲರೂ ನೆನಪಾಗುತ್ತಲೇ ಇದ್ದರು ಅದಕ್ಕೆ ಶ್ರೀವತ್ಸನ ಇತ್ತೀಚಿನ ನಡವಳಿಕೆ ಮತ್ತು ಅಂದಿನ ಅವನ ಅನುಪಸ್ಥಿತಿ ಕಾರಣವಾಗಿತ್ತೇನೋ!? ಹೌದು … ಅವರಿಬ್ಬರ ಮದುವೆಯಾಗಿ ಮೂರು ತಿಂಗಳಾಗುತ್ತ ಬಂದಿತ್ತು.ಮೊದಲೆಲ್ಲ ಸಂಜೆ 7 ಗಂಟೆ ಅಷ್ಟೊತ್ತಿಗೆ ಮನೆಗೆ ಬಂದು ಮಡದಿಯನ್ನು ಅರೆ ಕ್ಷಣವೂ ಬಿಟ್ಟಿರದೇ ಸದಾ ತನ್ನ ಪ್ರೀತಿಯಿಂದ ನೋಡಿಕುಳ್ಳುತ್ತಿದ್ದ ಗಂಡ ತಿಂಗಳಿಂದ ಈಚೆಗೆ ರಾತ್ರಿ ಹತ್ತು ಗಂಟೆಯ ನಂತರ ಮನೆಗೆ ಬರುತ್ತಿದ್ದ.ಊಟದ ನಂತರ ಮತ್ತೆ ಕಂಪನಿಯ ಕೆಲಸ ಇದೆ ನೀ ಮಲಗಿಕೊ ಅಂತ ರಾತ್ರಿ 1,2 ಗಂಟೆವರೆಗೂ ಲ್ಯಾಪ್ಟಾಪ್ ನಲ್ಲಿ ಬಿಜಿ ಇರುತ್ತಿದ್ದ.ಇದೆಲ್ಲವನ್ನು ಅಣ್ಣನಿಗಾದರು ತಿಳಿಸಬೇಕೆಂದು ಕೊಂಡು ಫೋನ್ ಕೈಗೆತ್ತಿಕೊಂಡು. ಬೇಡ ಅನ್ನಿಸಿ,ಮತ್ತೆ ಗಂಡನಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಅಂತ ಆ ಕಡೆಯಿಂದ ಎರಡು ಗಂಟೆಯಿಂದ ಅದೇ  ಸದ್ದು ಬರುತ್ತಲೇ ಇತ್ತು.ಏನೇನೋ ಕನಸು ಕಂಡು,ಇಷ್ಟ ಪಟ್ಟು ತುಂಬಾ ಪ್ರೀತಿಸಿ ಮದುವೆಯಾದ ಗಂಡನನ್ನು ನಾನು ಅರ್ಥ ಮಾಡಿಕೊಳ್ಳಲು ವಿಫಲವಾದೆನೋ ಅಥವಾ ಶ್ರೀವತ್ಸ ಇಷ್ಟು ಬೇಗ ಬದಲಾದನೆ?….ಒಂದೂ ತಿಳಿಯುತ್ತಿಲ್ಲ. ಮಳೆಯ ರಭಸಕ್ಕೆ ಸುಳಿಗಾಳಿ ಆ ರಾತ್ರಿಯನ್ನು ಭಯ ಪಡುವಂತೆ ಮಾಡಿತ್ತು.ಮತ್ತೇ ಜೋರಾಗಿ ಸುರಿಯುತ್ತ ಸಪ್ಪಳ ಮಾಡುತ್ತಿದ್ದ ಮಳೆಯ ಸದ್ದಿಗೆ ವಾಸ್ತವಕ್ಕೆ ಬಂದ ಶ್ರೀಶ ಗಡಿಯಾರದತ್ತ ನೋಡಿದಾಗ ಗಂಟೆ ರಾತ್ರಿ ಹನ್ನೊಂದು ಕಾಲು ಆಗಿತ್ತು.ಆಗಾಗ ಹೋಗಿ ಬರುತ್ತಿದ್ದ ಕರೆಂಟು ಮನೆ ಮತ್ತು ಮನಸ್ಸನ್ನು ಕತ್ತಲೆಗೊಳಿಸುತ್ತಿತ್ತು.

ಮಾಡಿಟ್ಟ ಅಡುಗೆ ಪಾತ್ರೆಗಳು ಹಾಗೆಯೇ ಇದ್ದವು.ಯಾಕೋ ಖಾಲಿ,ಖಾಲಿಯಂತೆ ಭಾಸವಾಗುತ್ತಿದ್ದ ಆ ಹಾಲಿನಿಂದ ಎದ್ದು ಭಾರವಾದ ಮನಸ್ಸನ್ನು ಹೊತ್ತು ದೇವರ ಮುಂದೆ ಹೋಗಿ ಕುಳಿತಳು ಶ್ರೀಶ.ತಲೆಯೊಳಗೆಲ್ಲ ಏನೇನೋ ಕೆಟ್ಟ ಆಲೋಚನೆಗಳು ಸುಳಿಯತೊಡಗಿದ್ದವು.

ಮದುವೆಗೆ ಇನ್ನೂ ಒಂದು ವಾರವಿದ್ದಾಗ ಅಪ್ಪ ಹೇಳಿದ ಆ ಮಾತುಗಳು ಅವಳಿಗೆ ನಿಜ ಅನ್ನಿಸತೊಡಗಿದವು”ಶ್ರೀಶ ಪುಟ್ಟಿ ನೀನು ಮದುವೆಯಾಗಿ ಅಷ್ಟು ದೂರ ಹೋಗುವುದು ನಂಗಿಷ್ಟವಿಲ್ಲ…. ಅದೂ ಅಲ್ಲದೆ ಶ್ರೀವತ್ಸ ಅನಾಥ ಹುಡುಗ! ಅದೂ ಹೋಗಲಿ ಇಲ್ಲಿಯೇ ಏನಾದರೂ ಉದ್ಯೋಗ ಮಾಡು ಎಂದರೆ ಸ್ವಾಭಿಮಾನಿಯಾದ ಆತ ಖಡಾಖಂಡಿತವಾಗಿ ನಿರಾಕರಿಸುತ್ತ” ಕ್ಷಮಿಸಿ ಮಾವ ಇದು ನಾನು ಹಗಲಿರುಳು ಕಷ್ಟ ಪಟ್ಟು ಓದಿದ ಪ್ರತಿಫಲಕ್ಕೆ ಸಿಕ್ಕ ಉಡುಗೊರೆ…. ಅದು ಕೂಡ ಕ್ಯಾ0ಪಸ್ ಸೆಲೆಕ್ಷನ್ ಆಗಿ ಮುಂಬೈಯಂತ ದೊಡ್ಡ ಶಹರದಲ್ಲಿ ಸಿಕ್ಕ ನನಗಿಷ್ಟವಾದ ಕೆಲಸ…. ಸಂಬಳ ಒಂದಿಷ್ಟು ಕಡಿಮೆಯಿರಬಹುದು.ಎಂದ ಅವನ ಮಾತುಗಳು ಅಪ್ಪನ ಮನಸ್ನನ್ನು ಮತ್ತಷ್ಟು ಗಾಯಗೊಳಿಸಿದ್ದವು.ಇರುವ ಒಬ್ಬಳೇ ಅತ್ತೆಯನ್ನು ತನ್ನ ಬಾಲ್ಯದ ಸ್ನೇಹಿತನಿಗೆ ಮದುವೆ ಮಾಡಿಕೊಟ್ಟ ಅಪ್ಪ “ನೋಡು ನನ್ನ ತಂಗಿ ಶೈಲ ಕೂಡ ನನ್ನ ಕಣ್ಮುಂದೆ ಇರಬೇಕು ಅಂತ ಇದ್ದೂರಲ್ಲಿಯೇ ಅವಳ ಮದುವೆ ಮಾಡಿಸಿರುವೆ.ಕಷ್ಟ,ಸುಖ ಅಂತ ಬಂದಾಗ ನಮ್ಮವರೇ ನಮಗಾಗುತ್ತಾರೆ”.ಎಂದ ಅಪ್ಪನ ಮಾತುಗಳು ಕಿವಿಗಪ್ಪಳಿಸುತ್ತಲೇ ಇದ್ದವು.

ಇಂತ ಸಮಯದಲ್ಲಿ ಒಂಟಿತನ ಅವಳನ್ನು ತುಂಬಾ ಕಾಡತೊಡಗಿತು.ಹುಟ್ಟಿದಾಗಿನಿಂದ ಅವಳಿಗೆಂದೂ ಒಂಟಿ ಅನ್ನುವ ಭಾವ ಬಂದಿರಲೇ ಇಲ್ಲ….ಅಜ್ಜ,ಅಜ್ಜಿ ಅಪ್ಪ ಅಮ್ಮ ಅಣ್ಣ ಚಿಕ್ಕಪ್ಪ, ಅತ್ತೆ,ಅತ್ತೆಯ ಮಕ್ಕಳಿಬ್ಬರು ಅವರ ಸಂಬಂಧಿಕರು, ಹೀಗೆ ಸದಾ ಬಂಧುಗಳು ಜೊತೆಗೆ ಇದ್ದ ಅವಳು ಎಲ್ಲವೂ ನೆನಪಾಗುತ್ತಲೇ ಬಿಕ್ಕುತ್ತ ಅಳಲು ಶುರು ಮಾಡಿದಳು. ಅಂದು ಮಧ್ಯಾಹ್ನ ತಾನು ಓದಿದ ಕಾದಂಬರಿಯ ಅಧ್ಯಾಯ ಕಣ್ಮುಂದೆ ಬಂದು ಎಲ್ಲಿ ನನ್ನ ಬಾಳು ಹಾಗೆಯೇ ಆಗುವುದೇ!? ಶ್ರೀವತ್ಸ ನನಗೆ ಮೋಸ ಮಾಡುತ್ತಿರಬಹುದೇ!?…. ಎಂಬ ಏನೇನೋ ವಿಚಾರಗಳು ಮನಸ್ಸನ್ನು ಹಿಂಡುತ್ತಿದ್ದವು.ಆದರೆ ಹೃದಯ ಮಾತ್ರ ಅಜ್ಜಿ ಹೇಳುತ್ತಿದ್ದ ಆ ಮಾತನ್ನು ಕೇಳೆನ್ನುತ್ತಿತ್ತು.

ನಸುಕಿನ ಸೂರ್ಯ ಉದಯಿಸುತ್ತಲೇ ಹಕ್ಕಿಗಳು ಕಲರವ ಹಾಡಿ ರವಿಯನ್ನು ಸ್ವಾಗತಿಸುತ್ತಿದ್ದವು. ಥಟ್ ಅಂತ ಶ್ರೀಶಳಿಗೆ ಎಚ್ಚರಾದಾಗ ಅವಳು ದೇವರ ಮುಂದೆಯೇ ಮಲಗಿದ್ದಳು.ಸಂಜೆ ಹಚ್ಚಿಟ್ಟ ದೀಪ ದೇವರ ಎದುರು ಸಣ್ಣಗೆ ಇನ್ನೂ ಪ್ರಕಾಶಿಸುತ್ತಲೇ ಇತ್ತು….ಮನೆಯ ಬೆಲ್ ನ ಟ್ರಿಣ್,ಟ್ರಿನ್ ಸಪ್ಪಳಕ್ಕೆ ಓಡಿ ಹೋಗಿ ಬಾಗಿಲು ತೆಗೆದಾಗ ಶ್ರೀವತ್ಸ ಬಟ್ಟೆಯೆಲ್ಲ ಕೊಳೆಯಾಗಿಸಿಕೊಂಡು , ನೆನೆಸಿಕೊಂಡು ಕೂದಲೆಲ್ಲ ಹರಡಿಕೊಂಡು ಎದುರಿಗೆ ನಿಂತಿದ್ದ.ಅಳುತ್ತಲೇ ಅವನ ತಬ್ಬಿಕೊಂಡಳು. “ಕ್ಷಮಿಸು ಶ್ರೀಶ….ನಿನ್ನೆ ಆಫೀಸ್ ಬಿಡುವಾಗಲೇ ಗಂಟೆ ಎಂಟಾಗಿತ್ತು….. ಬಿಡದೇ ಸುರಿದ ಮಳೆಗೆ ಟ್ರೇನ್ ಕೂಡ ರದ್ದು ಮಾಡಿದ್ದರು.ಫೋನ್ ನಲ್ಲಿ  ಚಾರ್ಜ್ ಇರಲಿಲ್ಲ….ಆಟೋ ಹಿಡಿದು ಮನೆಗೆ ಬರಬೇಕೆಂದು ರೈಲ್ವೆ ಸ್ಟೇಶನ್ ಬಿಟ್ಟಿದ್ದೆ ತಪ್ಪಾಯಿತು ದಾರಿ ಮಧ್ಯೆ ಒಂಟಿಯಾಗಿ ಚಿಕ್ಕ ಅಂಗಡಿಯ ಕೆಳಗೆ ನಿಂತು ಬಿಟ್ಟಿದ್ದೆ.ಬೇಗ ಪ್ರಮೋಷನ್ ತೆಗೆದುಕೊಂಡು ನಿನಗೆ ಸರ್ಪ್ರೈಸ್ ಕೊಡಬೇಕೆಂದುಕೊಂಡು ಓವರ್ ಡ್ಯೂಟಿ ಮಾಡುತ್ತಿದ್ದ ಬಗ್ಗೆ ನಾ ತಿಳಿಸಬೇಕಿತ್ತು”.ಅಂತ ಒಂದೇ ಉಸಿರಿನಲ್ಲಿ ಗಂಡ ಹೇಳಿದ ಮಾತುಗಳನ್ನು ಕೇಳಿದ ಶ್ರೀಶಳಿಗೆ ತಿಂಗಳಿನಿಂದ ತಲೆ ಕೊರೆಯುತ್ತಿದ್ದ ಅವಳ ಪ್ರಶ್ನೆಗೆ ಉತ್ತರ ದೊರಕಿತ್ತು.ಅಳುತ್ತಲೇ ಇದ್ದ ಅವಳ ಮುಖವನ್ನು ಹಿಡಿದೆತ್ತಿ ಶ್ರೀಶ ಇಲ್ನೋಡು ನನಗೆ ಪ್ರಮೋಷನ್ ಕೊಟ್ಟಿದ್ದಾರೆ.ಅದೂ ಅಲ್ಲದೆ ಹೊಸ ಪ್ರಾಜೆಕ್ಟ್ ನಿಮ್ಮ ತವರು ಮನೆಗೆ ಸಮೀಪವೇ ಇದೆ.ಇನ್ನೊಂದು ವಾರದಲ್ಲಿ ಅಲ್ಲಿ ಹೋಗಿ ಜೋಯಿನ್ ಆಗಬೇಕು.ನೀ ಬರ್ತಿಯಾ ಇಲ್ಲಾ ಮುಂಬೈ ಇಷ್ಟಾ ಅಂತ ಇಲ್ಲೇ ಇರ್ತಿಯಾ ಅಂತ ರೇಗಿಸಿದಾಗ ಗಂಡನನ್ನು ಮತ್ತಷ್ಟು ಗಟ್ಟಿಯಾಗಿ ತಬ್ಬಿಕೊಂಡ ಶ್ರೀಶ ಊರಿಗೆ ಹೋಗುವ ಕನಸು ಕಾಣಲು ಶುರು ಮಾಡಿದಳು…. ಹಾಗೆಯೇ ಅಜ್ಜಿಯ * *ತಾಳಿದವನು ಬಾಳಿಯಾನು ಮಾತು ನೆನಪಾಯಿತು!.

*************************

Leave a Reply

Back To Top