ಜೀವಾದಿಗಳ ಸಾನಿಧ್ಯದಲ್ಲಿ !

ಲೇಖನ

ಜೀವಾದಿಗಳ ಸಾನಿಧ್ಯದಲ್ಲಿ !

ವಿಜಯಶ್ರೀ ಹಾಲಾಡಿ

ನಮ್ಮ ಅಡುಗೆಮನೆ ಕಟ್ಟೆಯ ಮೇಲೆ ಕಂದುಬಣ್ಣದ ಇರುವೆಗಳು ಓಡಾಡುತ್ತಿರುತ್ತವೆ. ಇವು ಕಚ್ಚುವ ಇರುವೆಗಳಲ್ಲ; ಅವುಗಳಿಗಿಂತ ದೊಡ್ಡ ಗಾತ್ರದ ಜಳ್ಳಿರುವೆಗಳು. ಇವುಗಳ ದೇಹ ತೀರಾ ಮೆದು. ನಮ್ಮ ಕೈ ತಾಕಿದರೂ ಸಾಕು, ಅವುಗಳ ಕೈ, ಕಾಲು ಮುರಿದುಹೋಗಬಹುದು! ಇಂತಹ ಇರುವೆಗಳು ಸ್ಟವ್ ಸುತ್ತಮುತ್ತ ಓಡಾಡುತ್ತಿರುವಾಗ ಗಡಿಬಿಡಿಯಲ್ಲಿ ಕೆಲಸ ಮಾಡುವ ಹೊತ್ತಲ್ಲಿ ಅಥವಾ ಕಟ್ಟೆ ಒರೆಸುವಾಗ, ಬಿಸಿ ದೋಸೆಬಾವಡಿ ಕಟ್ಟೆಯ ಮೇಲಿಟ್ಟಾಗ, ಟೀ ಪಾತ್ರೆ ಇಳಿಸುವಾಗೆಲ್ಲ ಒಂದಲ್ಲಾ ಒಂದಿರುವೆಗೆ ತಾಕಿ ಅನಾಹುತವಾಗುತ್ತದೆ. ಅದೂ ಅಲ್ಲದೆ ಇವು ನೆಲದಮೇಲೂ ಅಲ್ಲಲ್ಲಿ ಯದ್ವಾತದ್ವಾ ಅಲೆದಾಡುತ್ತಿರುವಾಗ ಕಾಲಿನಡಿ ಸಿಕ್ಕಿ ಸಾಯುವುದೂ ಉಂಟು. ಅದೆಷ್ಟು ತಪ್ಪಿಸಿದರೂ ಹೀಗೆಲ್ಲ ಆದಾಗ ಅಚಾನಕ್ ಪಾಪಪ್ರಜ್ಞೆ ಕಾಡತೊಡಗುತ್ತದೆ. ಅಡುಗೆಮನೆಯ ಗೋಡೆ ಮೇಲೆ ಇವುಗಳದ್ದೇ ಒಂದು ಕಾಲುದಾರಿಯಿದೆ. ಅಲ್ಲಿ ಸದಾ ನಡೆದಾಡುತ್ತ ಪರಸ್ಪರ ಮೀಸೆ ಮುಟ್ಟಿ ಸಂದೇಶ ರವಾನಿಸಿಕೊಂಡು ಇರುತ್ತವೆ. ಇಂತಹ ಮುದ್ದು ಇರುವೆಗಳು ಅಪಘಾತಕ್ಕೆ ಒಳಗಾಗುವುದನ್ನು ತಪ್ಪಿಸಲು ಅಡುಗೆಕಟ್ಟೆಯ ಒಂದು ಮೂಲೆಯಲ್ಲಿ ತುಸು ಬೆಲ್ಲ ಹಾಕಿ ಇಡುತ್ತೇನೆ; ಆದಷ್ಟು ಇರುವೆಗಳು ಅಲ್ಲೇ ಸಂತೆ ನಡೆಸಲಿ ಎಂದು ! ಇದನ್ನು ನೋಡಿ ನಮ್ಮನೆ ಮಂದಿ ” ಹಿಂದಿನ ಜನ್ಮದಲ್ಲಿ ನೀನು ಇರುವೆಯಾಗಿರಬೇಕು” ಎಂದು ಕಾಲೆಳೆದರೆ “ಹೌದು, ನೀವೆಲ್ಲ ‘ಡೆಮ್ಯಾಕ್ಷನ್’ (ಗೆಮ್ಯಾಕ್ಸಿನ್) ಪುಡಿಯಾಗಿ ಬಂದು ನನ್ನನ್ನು ಸಾಯಿಸಿದಿರಿ” ಎಂದು ಚಾಳಿಸುತ್ತೇನೆ ನಾನು! ‘ಬೆಕ್ಕು, ನಾಯಿ, ಹಲ್ಲಿ, ಇಲಿ, ಇರುವೆ, ಜಿರಳೆ, ಜೇಡ ಇಲ್ಲದ ಮನೆ ಮನೆಯೇ ಅಲ್ಲ’ ! ಎಂದು ನಾನು ಅಭಿಪ್ರಾಯ ಪಟ್ಟಾಗ ನನ್ನ ವಿದ್ಯಾರ್ಥಿಗಳು ಹೌದೆಂದು ಒಪ್ಪಿಕೊಳ್ಳುತ್ತಾರೆ: ತಮ್ಮ ಮನೆಯಲ್ಲಿರುವ ಇಂತಹ ಜೀವಾದಿಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಆದರೆ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳನ್ನು ಪ್ರೀತಿಸುವವರನ್ನು, ಅವುಗಳ ಪರವಾಗಿ ಮಾತಾಡುವವರನ್ನು, ಕೆಲಸ ಮಾಡುವವರನ್ನು ಬಹುತೇಕರು ‘ ಇವರಿಗೆ ಬೇರೆ ಉದ್ಯೋಗವಿಲ್ಲ’ವೆಂದು ಆಡಿಕೊಳ್ಳುವುದು ಮಾಮೂಲಿ, ಅಂತವರನ್ನು ಸೆಂಟಿಮೆಂಟಲ್ ಫೂಲ್‍ಗಳೆಂದು, ಪ್ರಾಣಿಸಂಘದ ಅಧ್ಯಕ್ಷರೆಂದು ಲಘುವಾಗಿ ಕರೆಯುತ್ತ ಆದಷ್ಟು ಮೂಲೆಗೊತ್ತಲು ಪ್ರಯತ್ನಿಸುತ್ತಲೇ ಇರುತ್ತಾರೆ. ಯಾಕೆಂದರೆ ಈ ಮನುಷ್ಯನೆಂಬ ಪ್ರಾಣಿಸಮೂಹದ  ಸಕಲೆಂಟು ಕೆಲಸಕಾರ್ಯಗಳೂ ನಿಂತಿರುವುದು ದುಡ್ಡೆಂಬ ಕಾಗದದ ಮೇಲೆ ತಾನೇ! ಮೂಕ ಪ್ರಾಣಿಗಳಗೆ ದುಡ್ಡಿನ ಪರಿಚಯವಿಲ್ಲ, ಮೂಕ ಪ್ರಾಣಿಗಳನ್ನು ಪ್ರೀತಿಸುವವರಿಗೂ ಅವುಗಳಿಂದ ಯಾವುದೇ ರೀತಿಯ ಧನಲಾಭ ಇಲ್ಲವಾದ್ದರಿಂದ ಟೀಕಿಸುವವರ ವ್ಯಾವಹಾರಿಕ ದೃಷ್ಟಿಗೆ ಇದು ಸರಿಬರುವುದಿಲ್ಲವೆಂದು ಕಾಣುತ್ತದೆ, ಇರಲಿ. ಲೋಕದ ಡೊಂಕನ್ನು ತಿದ್ದಹೋಗದೆ ನಮ್ಮ ನಮ್ಮ ಮನವನ್ನು ಸಂತೈಸಿಕೊಳ್ಳುವತ್ತ ಹೆಜ್ಜೆಹಾಕಬೇಕಾಗಿದೆ.

Ant, Insect, Animal, Arthropod, Wildlife

ನಮ್ಮ ಬಾಡಿಗೆಮನೆಗಳೆಲ್ಲ ಇದ್ದದ್ದು ಪುಟ್ಟಕಾಡಿನ ಅಂಚಿನಲ್ಲಿ ಅಥವಾ ಕೊನೇಪಕ್ಷ ಸ್ವಲ್ಪ ಮರಗಿಡಗಳ ಆಸುಪಾಸಿನಲ್ಲಿ. ಪೇಟೆಯಿಂದ ತುಸು ದೂರದಲ್ಲಿದ್ದು, ದಿನಾ ಬೆಳಿಗ್ಗೆ ಆಟೋ ಮೂಲಕ ಬಸ್‍ಸ್ಟ್ಯಾಂಡಿಗೆ ಗಡಿಬಿಡಿಯಲ್ಲಿ ಓಡಾಡುವುದಾದರೂ ಅಡ್ಡಿಯಿಲ್ಲ: ನಿಸರ್ಗದ ಸಾನಿಧ್ಯದಲ್ಲಿ ಮನೆಯಿರಲಿ ಎಂದು ಹುಡುಕಾಡಿ ಸೇರಿಕೊಳ್ಳುತ್ತಿದ್ದೆವು. ತಣ್ಣಗೆ, ಆಪ್ತವಾಗಿ ಇರುವ ಇಂತಹ ಮನೆಗಳು ‘ಜೀವಜಂತು’ ಗಳಿಂದ ಕೂಡಿರುತ್ತವೆ ಎನ್ನುವುದೂ ಸತ್ಯ. ಆ ‘ಜೀವಾದಿ’ ಅಂಗಳಕ್ಕೆ ಬರುವ ನವಿಲು, ಕಾಡುಕೋಳಿ, ಮುಂಗುಸಿ ಆಗಿರಬಹುದು; ಮಧ್ಯರಾತ್ರಿ ಕೂಗುವ ನರಿಗಳಾಗಿರಬಹುದು ಅಥವಾ ಮನೆ-ಮನೆ ಸಂದರ್ಶಿಸುವ ಬೆಕ್ಕು, ನಾಯಿ, ಇಲಿ, ಜಿರಳೆಗಳೂ ಆಗಿರಬಹುದು! ನಾವು ಮನೆಯಲ್ಲಿ ಇರುವುದು ಮೂರೇ ಜನವಾದರೂ ಕೂಡುಕುಟುಂಬದಲ್ಲಿದ್ದೇವೆಂಬ ಭ್ರಮೆ ಮತ್ತು ‘ನಿಜ’ ವನ್ನು ಈ ಎಲ್ಲ ಪ್ರಾಣಿಗಳು ನಮ್ಮೊಳಗೆ ಹುಟ್ಟುಹಾಕಿದವು. ಅಂತಹ ಜಂತುಗಳ ಜೀವದಯೆಯಿಂದಾಗಿಯೇ ಬದುಕಿನ ವೈರುಧ್ಯಗಳು, ಸಂಕಟಗಳನ್ನು ಮೀರಿ ಮಾನಸಿಕ, ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಇದುವರೆಗೂ  ಬದುಕಿಬಾಳಿದ್ದೇನೆ ಎಂದು ಹೇಳಲು ನನಗ್ಯಾವ ಹಿಂಜರಿಕೆಯೂ ಇಲ್ಲ !

Peacok, Blue, Colors, Colorful, Feathers

ನಮ್ಮನೆ ಹಿಂದುಗಡೆ ಮತ್ತು ಬಲಗಡೆ ಮಣ್ಣಿನಲ್ಲಿ ದೊಡ್ಡ ದೊಡ್ಡ ಬಿಲಗಳಿದ್ದವು. ಅವು ಗುಡ್ಡೆಹೆಗ್ಗಣಗಳ ಬಿಲಗಳು. ಆಗಾಗ ತಮ್ಮ ಪ್ರತಿರೋಧ ತೋರಿಸುವಂತೆ ಮಣ್ಣು ಅಗೆದುಹಾಕಿ ಹೋಗುವ ಈ ಗುಡ್ಡೆಹೆಗ್ಗಣಗಳ ಬಗ್ಗೆ ನನಗೆ ಯಾವಾಗಲೂ ಅಪಾರ ಮೆಚ್ಚಗೆ; ಅವುಗಳಿಗೇ ಸೇರಬೇಕಾದ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡ ಮನುಷ್ಯನನ್ನು ಇಷ್ಟಾದರೂ ಅವು ವಿರೋಧಿಸುತ್ತಾವಲ್ಲ ಎಂದು !  ಇನ್ನು ನಮ್ಮ ಮನೆಯೊಳಗಿನ ಇಲಿಗಳದ್ದೇ ಬೇರೆ ಕತೆ. ಹಾಡುಹಗಲಲ್ಲೇ ಅವು ಧುತ್ತೆಂದು ಪ್ರತ್ಯಕ್ಷವಾಗಿ ನಾವು ಓದಿದ ದಿನಪತ್ರಿಕೆಗಳನ್ನೆಲ್ಲಾ ಓದಿ, ಒಗೆದು ಒಣಗಿಸಿದ ಬಟ್ಟೆಗಳನ್ನೆಲ್ಲಾ ಆಧುನಿಕ ವಿನ್ಯಾಸದಲ್ಲಿ ಕತ್ತರಿಸಿ, ಹಳೆಸಾಮಾನುಗಳನ್ನು ಹರಡಿಕೊಂಡು ತೂಕಕ್ಕೆ ಹಾಕತೊಡಗಿದಾಗ ನನಗೂ, ಮಗನಿಗೂ ಬುದ್ಧಿ ಬರುತ್ತದೆ. “ಆ ಇಲಿಬೋನು ಅಟ್ಟದಿಂದ ಹೊರತೆಗೆಯಿರಿ ಮರಾಯ್ರೆ” ಎಂದು ಬಡಿದುಕೊಂಡು ತಿಂಗಳೊಂದು ಕಳೆದಮೇಲೆ ಹುಕಿ ಬಂದ ದಿನ ಅಪ್ಪ-ಮಗ ಸೇರಿ ಪೇಟೆಗೆ ಹೋಗಿ ಒಳ್ಳೊಳ್ಳೆಯ ತಿಂಡಿಗಳನ್ನು ಹುಡುಕಿ ತರುತ್ತಾರೆ. ರಾತ್ರಿ ಊಟವಾದ ಮೇಲೆ ಬೋನಿನ ಧೂಳು ಕೊಡವಿ ಮಾಲ್‍ಪೂರಿ, ಮೈಸೂರ್‍ಪಾಕು, ಚಕ್ಕುಲಿ, ಶಂಕರಪೋಳಿ, ಕೊಬ್ರಿಮಿಠಾಯಿ ಮುಂತಾದ ತರಾವರಿ ತಿಂಡಿಗಳನ್ನು ತುರುಕಿ ಬಾಗಿಲು ಮುಚ್ಚುತ್ತಾರೆ. ಮಗನಿಗಂತೂ ಆ ರಾತ್ರಿಯಿಡೀ ನಿದ್ದೆಯಿಲ್ಲ. ಮಾಮೂಲಿನಂತೆ ಬೆಳಿಗ್ಗೆ ಎಂಟರವರೆಗೆ ಬಿದ್ದುಕೊಳ್ಳದೆ ಆರುಗಂಟೆಗೇ ಎದ್ದು ಬೋನಿಟ್ಟ ರೂಮಿಗೆ ಓಡುತ್ತಾನೆ. ಕನಿಷ್ಟ ಎರಡು ಇಲಿಗಳಾದರೂ ಬಿದ್ದಿರುತ್ತವೆ ! ವಿಚಿತ್ರವೆಂದರೆ ಆ ಇಲಿಗಳು ಯಾವ ಗಾಬರಿಯನ್ನೂ ಪ್ರದರ್ಶಿಸದೆ ತಮ್ಮಷ್ಟಕ್ಕೆ ಕಣ್ಣುಕೂರುವುದನ್ನು ಮುಂದುವರಿಸುತ್ತವೆ. ” ನಿನ್ನ ತಿಂಡಿಯ ಪ್ರಭಾವ, ಪಟ್ಟಾಗಿ ನಿದ್ದೆಹೊಡೆಯುತ್ತಿವೆ ನೋಡು” ನಾನೆಂದರೆ, ಮಗ ” ಅಯ್ಯೋ ಪಾಪ, ಹೆದರಿ ಕೂತದ್ದು ಅವು” ಎಂದು ಕನಿಕರ ತೋರಿಸಿ ಮತ್ತಷ್ಟು ತಿಂಡಿ ತಂದು ಬೋನೊಳಗೆ ಹಾಕಿ, ಕೂಡಲೇ ಅವುಗಳನ್ನು ಕಾಡಿಗೆ ಒಯ್ಯುವ ಎಂದು ಪಿರಿಪಿರಿ ಮಾಡುತ್ತಾನೆ. ಅಪ್ಪನನ್ನು ರೆಡಿಮಾಡಿಸಿ ತಾನು ಬೈಕಿನಲ್ಲಿ ಹಿಂದೆ ಮುದುರಿ ಕುಳಿತು ಮಧ್ಯದಲ್ಲಿ ಇಲಿಬೋನನ್ನು ಜೋಪಾನವಾಗಿ ಇರಿಸಿಕೊಂಡು ಇಬ್ಬರೂ ಕಾಡಿಗೆ ಹೋಗಿ ಬಿಟ್ಟುಬರುತ್ತಾರೆ. ನನ್ನ ಸಂಶಯವೆಂದರೆ ಹಾಗೆ ನಾವು ಬಿಟ್ಟುಬಂದ ಇಲಿಗಳೇ ಮತ್ತೆ ವಾಪಸ್ಸಾಗಿ ನಮ್ಮ ಮನೆಗೆ ಸೇರಿಕೊಳ್ಳುತ್ತವೆ ಎಂದು. ಇಲ್ಲವಾದರೆ ಪದೇ ಪದೇ ಇಲಿಗಳ ಜಾತ್ರೆಯೇ ಹೇಗೆ ನೆರೆಯುತ್ತದೆ ಮನೆಯಲ್ಲಿ ? ಒಂದು ದಿನವಂತೂ ಮರಿ ಇಲಿಯೊಂದು ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ಹಾಲ್‍ನಿಂದ ಅಡುಗೆಮನೆಗೆ, ಅಡುಗೆಮನೆಯಿಂದ ರೂಮಿಗೆ ರಾಜಾರೋಷವಾಗಿ ಓಡಾಡತೊಡಗಿತು. ಭೂತದಂತೆ ಎದುರಿಗೆ ನಿಂತ ನನ್ನ ಆಕೃತಿಯನ್ನು ನೋಡಿಯೂ ಅದು ಕೇರೇ ಮಾಡದೆ ಅಲ್ಲಿಂದಿಲ್ಲಿಗೆ ಸುತ್ತುತ್ತಿರುವುದನ್ನು ಕಂಡು ‘ಅದರ ತಲೆ ಏನಾದರೂ ಕೆಟ್ಟಿರಬಹುದೇ’ ಎಂಬ ಅನುಮಾನ ಬಂತು. ಆದರೆ ಸಾಮಾನ್ಯವಾಗಿ ಪ್ರಾಣಿಗಳಿಗೆ ಬುದ್ಧಿವೈಕಲ್ಯ ಉಂಟಾಗುವುದಿಲ್ಲ. “ಓ ಹಾಗಾದರೆ ಇದು ಯಾರೋ ಇಟ್ಟ ಇಲಿಪಾಷಾಣ ತಿಂದು  ಅಮಲೇರಿಸಿಕೊಂಡಿರಬೇಕು ಪಾಪದ್ದು; ಈಗಲೋ ಆಗಲೋ ಸಾಯುವುದರಲ್ಲಿದೆ” ಎಂದುಕೊಂಡು ಒಂದು ಹಿಡಿಕಡ್ಡಿ ಹಿಡಿದು ಅದರ ಹತ್ತಿರ ಹೋಗಿ ನಿಧಾನಕ್ಕೆ ಮೈಗೆ ಸೋಕಿಸಿದೆ. ಅಬ್ಬಾ ! ‘ ಕೆಸ್ ಬುಸ್ ಪುಸ್’ ಅಂತ ನಂಗೆ ಅಬ್ಬರಿಸಿ ದಡದಡನೆ ಅಡುಗೆಮನೆಗೆ ಓಡಿತು. ಈಗ ತಲೆಕೆಡುವ ಸರದಿ ನನ್ನದಾಯಿತು. ‘ಇಲಿಗಳನ್ನು ಹಿಡಿಯುವುದಿಲ್ಲ’ ಎಂದು ಘೋಷಿಸಿಕೊಂಡು ‘ದೇವಬೆಕ್ಕಾ’ಗಿರುವ ನಮ್ಮ ಕೆಂಚನಿಗೆ, ಬಾಯಿಗೆ ಬಂದಂತೆ ಬಯ್ದು ಮರಿ ಇಲಿಯನ್ನು ಹೊರಹಾಕಬೇಕೆಂದು ನಿರ್ಧರಿಸಿ ಮಗನನ್ನು ಸಹಾಯಕ್ಕೆ ಕರೆದೆ. ಅವನು ಕಂಪ್ಯೂಟರಿನಿಂದ ತಲೆ ಹೊರಹಾಕದೆ “ಅಮ್ಮ, ಆ ಇಲಿ ನಿನಗೆಂತ ಮಾಡಿದೆ ? ಅದರಷ್ಟಕ್ಕೆ ಓಡಾಡಿಕೊಂಡಿರಲಿ ಬಿಡು” ಎಂದ ! ಇದ್ದ ಸಿಟ್ಟು ಮತ್ತಷ್ಟು ಏರಿ ಕೆಂಚನಿಗೆ, ಅದರ ‘ಹೆಂಡತಿ’ ಕೆಂಚಿಗೆ, ನಮ್ಮ ಮನೆಯ ಎಲ್ಲ ಮನುಷ್ಯರಿಗೆ ಬಯ್ಯುತ್ತಾ ಹೇಗೋ ಆ ದಾಂಡಿಗ ಇಲಿಮರಿಯನ್ನು ಹಿಂದಿನ ಬಾಗಿಲು ದಾಟಿಸುವಷ್ಟರಲ್ಲಿ ನನ್ನ ವಿವೇಕ, ತಾಳ್ಮೆ, ಶಕ್ತಿ ಎಲ್ಲವೂ ವೆಚ್ಚವಾಗಿಹೋಗಿತ್ತು ! ಆ ಮೇಲೆ ಕಾಲುನೀಡಿ ಕುಳಿತು ಸುಧಾರಿಸಿಕೊಳ್ಳತೊಡಗಿದಾಗ ‘ಪಾಪ ಮರಿ ಇಲಿ’ ಅನ್ನಿಸಿತು. ಇಲಿಗಳಿಗೆ ಹಲ್ಲು ಬೆಳೆಯುತ್ತಲೇ ಇರುತ್ತದೆ. ಹಾಗಾಗಿ ಅವುಗಳು ಸದಾ ಪೇಪರೋ, ಮಣ್ಣೋ ಮರವೋ ಏನೋ ಒಂದನ್ನು ಕೊರೆಯುತ್ತಲೇ ಇರಬೇಕು. ಇಲ್ಲವಾದರೆ ಹಲ್ಲು ಬೆಳೆದೂ ಬೆಳೆದೂ ಬಾಯಿ ಮುಚ್ಚಲೇ ಆಗುವುದಿಲ್ಲವಂತೆ ! ಹಾಗಾಗಿ ಅವು ಬಾಯಿಮುಚ್ಚಿಕೊಳ್ಳಬೇಕೆಂಬ ಆಸೆಯಿದ್ದರೆ, ಮುನ್ನೂರರವತ್ತೈದು ದಿವಸವೂ ಮನುಷ್ಯರಿಂದ ಶಾಪ ಹಾಕಿಸಿಕೊಳ್ಳಲೇಬೇಕು ಅಂದ ಹಾಗಾಯಿತು !.

Animal, Attractive, Beautiful, Boy

ನಮ್ಮನೆಯಲ್ಲಿ ಇದುವರೆಗೆ ಇರುವೆಗೆ ಅಥವಾ ಜಿರಳೆಗೆ ಯಾವುದೇ ಕ್ರಿಮಿನಾಶಕ ಬಳಸಿಲ್ಲ. ಕಚ್ಚಿರುವೆಗಳ ಕಾಟ ಅತಿಯಾದಾಗ ಅರಶಿನ, ಫೇಸ್‍ಪೌಡರ್ ಹಾಕಿ ಓಡಿಸಿದ್ದಿದೆ ! ಹಾಗಾಗಿ ವಿವಿಧ ಜಾತಿಯ ಇರುವೆಗಳು ಆಗಾಗ ಬರುವುದು; ತಾವಾಗೇ ಟೆಂಟು ಬಿಚ್ಚಿಕೊಂಡು ಹೋಗುವುದು ಮಾಮೂಲಿ. ವಿಶೇಷ ಎಂದರೆ ವರ್ಷದಲ್ಲಿ ಒಂದೆರಡು ಸಲ ನಿರ್ದಿಷ್ಟ ಸಮಯದಲ್ಲಿ ಕಚ್ಚಿರುವೆಗಳ ಸಾಲು ಸಾಲೇ ದಾಳಿಯಿಡುವುದಿದೆ ! ಹಲವು ದಿನ ಸುಮ್ಮನಿದ್ದು ಅವುಗಳಿಂದ ಕಚ್ಚಿಸಿಕೊಂಡು ಅನಂತರ ಬುದ್ಧಿಬಂದು ಫೇಸ್‍ಪೌಡರ್ ಸಿಂಪಡಿಸಿ ಗುಡಿಸಿ ಹೊರಗೆ ಸಾಗಿಸುವುದೇ ಒಂದು ದೊಡ್ಡ ಪ್ರಕ್ರಿಯೆಯಾಗುತ್ತದೆ. “ಬರೀ ಪೌಡರ್ ಯಾಕೆ? ಕ್ರೀಂ, ಲಿಪ್‍ಸ್ಟಿಕ್, ಕಾಜಲ್ ಎಲ್ಲ ಹಾಕಿ ಕಳಿಸು” ಎಂದು ಗೆಳತಿ ನಗುತ್ತಾಳೆ. ತಮಾಷೆಯೆಂದರೆ ನಮ್ಮ ಕೆಂಚಬೆಕ್ಕಿನ ಅದ್ವಾನ ! ಕೆಂಚನಿಗೆ ಇರುವೆಗಳನ್ನು ಕಂಡರೆ ಭಯಂಕರ ಭಯ. ಕಚ್ಚಿರುವೆಗಳು ಮನೆಗೆ ದಾಳಿಯಿಟ್ಟ ಸುದ್ದಿ ಗೊತ್ತಾದರೆ ಸಾಕು, ಅವನು ದೂರದಿಂದಲೇ ಓಡಿಹೋಗುತ್ತಾನೆ. ಆದರೆ ಎಷ್ಟು ಹೊತ್ತು ಹಸಿವಿನಲ್ಲಿ ಕುಳಿತುಕೊಳ್ಳಲು ಸಾಧ್ಯ? ಕೊನೆಗೊಮ್ಮೆ ಧೈರ್ಯ ಮಾಡಿ ಅವನು ಬರುವ ಚಂದ ನೋಡಬೇಕು ! ತುಂಬಿ ಹರಿವ ಹೊಳೆಯನ್ನು ದಾಟುವವರ ಭಾವ-ಭಂಗಿಗಳನ್ನೆಲ್ಲ ಪ್ರದರ್ಶಿಸಿ, ನೃತ್ಯ ಮಾಡಿ’ ಇರುವೆ ಸಾಲನ್ನು ಠಣ್ಣನೆ ಹಾರಿ ಹಿಂದಿರುಗಿ ನೋಡುತ್ತ ಅಡುಗೆಮನೆಯೊಳಗೆ ಕಾಲಿಡುತ್ತಾನೆ ! ಉಗ್ರಗಾಮಿಗಳ ಅಡಗುತಾಣವನ್ನು ಹುಡುಕುವಂತೆ ಅಡುಗೆಮನೆಯ ಇಂಚಿಂಚನ್ನೂ ಪರಿಶೀಲಿಸುತ್ತ ತಟ್ಟೆಯ ಬಳಿ ಬರುವಾಗಲೇ ಕೆಂಚ ಸುಸ್ತು ! ಆಮೇಲೆ ಅಲ್ಲೇ ಮಲಗಿ ವಿಶ್ರಾಂತಿ ತೆಗೆದುಕೊಂಡು ನಿಧಾನಕ್ಕೆ ಅನ್ನ, ಮೊಸರು ತಿಂದು, ಕಾಫಿಕುಡಿದು ಸಣ್ಣ ನಿದ್ದೆ ಪೂರೈಸಿ ಮರಳಿ ಹೊರಹೋಗುವಾಗ ಮತ್ತೊಂದು ಹೊಳೆ ದಾಟಿದಂತೆ ಅವನ ಸಾಹಸ ! ಹೀಗೆ ಇರುವೆ ಬಂದುಹೋಗಿ ವರ್ಷ ಕಳೆದರೂ ಕೆಂಚ ಮರೆಯುವುದಿಲ್ಲ ಎಂಬುದು ವಿಶೇಷ ! ನನಗೇ ಎರಡು-ಮೂರು ದಿನದಲ್ಲಿ ಇರುವೆಗಳ ಕಾಟ ಮರೆತಿರುತ್ತದೆ; ಆದರೆ ಕೆಂಚ ಸದಾ ಹೊಸ್ತಿಲನ್ನು ಕುಪ್ಪಳಿಸಿ ನೆಗೆದೇ ಮನೆಯೊಳಗೆ ಕಾಲಿಡುವ ಅಭ್ಯಾಸ ಮಾಡಿಕೊಂಡಿದ್ದಾನೆ. ಮತ್ತೆ ಈ ಕೆಂಚನಷ್ಟು ಹೆದರುಪುಕ್ಕಲ ಬೆಕ್ಕು ಜಗತ್ತಿನಲ್ಲೇ ಬೇರೊಂದಿರಲಿಕ್ಕಿಲ್ಲ ! ಜಿರಳೆಯನ್ನೂ ಸಾಯಿಸಲು ಅವನಿಂದಾಗುವುದಿಲ್ಲ. ಆಗಾಗ ಮರೆಯಿಂದ ಹೊರಬಂದು ‘ಏನೀಗ’ ಎಂದು ಬಿರುಬೆಳಕಿನಲ್ಲೇ ಕೈ ಕಾಲು ಒದರಿ ಓಡಾಡುವ ಹುಕಿ ಕೆಲ ಜಿರಳೆಗಳಿಗೆ ಬರುವುದುಂಟು. ಇಂತಹ ಧೈರ್ಯಶಾಲಿ ಜಿರಳೆಗಳ ಹತ್ತಿರವೂ ಸುಳಿಯದೆ ಆದಷ್ಟು ದೂರಹೋಗಿ ಮಲಗುತ್ತಾನೆ ಕೆಂಚ. ಆದರೂ ಯಾವತ್ತಾದರೊಂದು ದಿನ ಹಟ ಬಂದು ಹಿಡಿಯಲು ಹೋದರೆ ಒಂದೆರಡು ಸಲ ಕಚ್ಚಿ ಕೊಡಕಿ, ಚೋಟಿನಲ್ಲಿ ಎಳೆದುಹಾಕಿ ತಲೆಯಾಡಿಸಿ ಬಿಟ್ಟುಬಿಡುತ್ತಾನೆ. ಅಂತೂ ನಮ್ಮನೆ ಜಿರಳೆಗಳೆಂಬ ಅಕ್ಕಳೆಗಳಿಗೆ ಮಜವೋ ಮಜ ! ಗಂಡಾಂತರಗಳಾವುವೂ ಇಲ್ಲದೆ ನಿರ್ಭೀತವಾಗಿ ‘ಹಾರಾಡಿ’ಕೊಂಡಿವೆ.

Cockroach, Beetle, Pest, Insect, Wing

ಇನ್ನು, ಮನೆ ಎದುರು ಬೆಳೆಯುತ್ತಿದ್ದ ಹುಳುವಿನ ಕತೆಯೇ ಬೇರೆ. ವರ್ಷದ ನಾಲ್ಕು ತಿಂಗಳು ಮಳೆ ಸುರಿಯುವ ಈ ಪ್ರದೇಶದಲ್ಲಿ ಖಾಲಿ ಜಾಗ ಸಿಕ್ಕಿದರೆ ಪೊದೆಗಳು ಬೆಳೆಯುವುದು ಬಹುಬೇಗ. ಬೇಸಗೆಯಲ್ಲಿ ಬಣಬಣ ಎನ್ನುತ್ತಾ ಧೂಳು ರಾಚುವಂತೆ ಕಂಡರೂ ಮೊದಲ ಮಳೆ ಬೀಳುತ್ತಿದ್ದಂತೆ ಲಕ್ಷಾಂತರ ಬೀಜಗಳು ಕಣ್ಣೊಡೆದು ಕೆಲವೇ ದಿನಗಳಲ್ಲಿ ಅಚ್ಚಹಸಿರು ತುಂಬಿಕೊಂಡುಬಿಡುವುದು ಅಚ್ಚರಿ! ಹಾಗೆ ಕ್ರಮೇಣ ದೊಡ್ಡದಾಗಿ ಜಿಗ್ಗಾಗುವ ಈ ಹಳುವನ್ನು ತೆಗೆಸಿ ಎಂದು ಓನರಲ್ಲಿ ಹೇಳಿದರೆ ‘ಜನ ಸಿಗುವುದಿಲ್ಲ’ ಎಂಬ ಕಾರಣ ನೀಡಿ ‘ನಿಮ್ಮಿಂದಾಗದಿದ್ದರೆ ಮನೆ ಬಿಟ್ಟು ಹೋಗಿ’ ಎಂಬಲ್ಲಿವರೆಗೂ ಅವರ ಮಾತು ಮುಂದುವರಿದುಬಿಡುತ್ತದೆ. ಹಾಗಾಗಿ ಹೇಗೋ ಅಡ್ಜಸ್ಟ್ ಮಾಡಿಕೊಂಡು ಜೀವಾದಿಗಳ ಜೊತೆ ಬದುಕಲೇಬೇಕಾಗುತ್ತದೆ. ಆದರೆ ಈ ಹಳು ‘ತೊಂದರೆ’ ಅನಿಸಿದ್ದು ನಮಗೆ ಮಾತ್ರ ! ನಮ್ಮೊಂದಿಗೆ ವಾಸಿಸುತ್ತಿದ್ದ ಪ್ರಾಣಿ-ಪಕ್ಷಿ-ಕ್ರಿಮಿ-ಕೀಟಗಳಿಗೆ ಒಳ್ಳೇ ಸ್ವತಂತ್ರ ನಾಡು ಸಿಕ್ಕಂತಾಗಿ ಮನೆ ಎದುರಿನ ಸಣ್ಣ ಹಾಡಿಯನ್ನು ದಾಟಿ ಬಂದು ಅಂಗಳದ ಈ ಪೊದೆಗಳಲ್ಲಿ ಎಂತದೋ ಆಹಾರ ಹುಡುಕುತ್ತ ಅಲೆದಾಡುತ್ತಿರುತ್ತವೆ. ಹಾಗೊಂದು ಸಲ ಎರಡು ನವಿಲಿನ ತಲೆಗಳು ಎತ್ತರಕ್ಕೆ ಬೆಳೆದ ಹುಲ್ಲಿನೆಡೆಯಲ್ಲಿ ಕಂಡಿತು. ಅವುಗಳನ್ನು ಮೊದಲೇ ನೋಡಿದ್ದರಿಂದ ಉದಾಸೀನದಿಂದ ಕಣ್ಣನ್ನು ಬೇರೆ ದಿಕ್ಕಿಗೆ ಹೊರಳಿಸುವಷ್ಟರಲ್ಲಿ ಕಂಪೌಂಡ್ ಮೇಲೆ ಒಂದೊಂದೇ ಪ್ರತ್ಯಕ್ಷವಾದವು….! ಒಟ್ಟು ಎಂಟು ಪುಟಾಣಿ ಮರಿಗಳು ಮತ್ತು ಆ ಮರಿಗಳ ಇಬ್ಬರು ಅಮ್ಮಂದಿರು ! ಅಂದರೆ ಒಟ್ಟು ಹತ್ತು ನವಿಲುಗಳು ! ಆಮೇಲೆ ಆಗಾಗ ಈ ನವಿಲಿನ ಸಂಸಾರ ಬಂದು ಕಣ್ಣಿಗೆ ತಂಪೆರಚುತ್ತಿದ್ದವು. ತುಸುವೇ ಅನುಮಾನ ಬಂದರೂ ಅವು ಗಡಿಬಿಡಿಯಲ್ಲಿ ಹಾರಿಕೊಂಡು, ಓಡಿಕೊಂಡು ಪರಾರಿಯಾಗುವುದರಿಂದ ನಾವು ಮನೆಯೊಳಗೂ ಹೆಜ್ಜೆ ಸದ್ದು ಮಾಡದೆ ಕಿಟಕಿಯಲ್ಲಿ ಉಸಿರು ಬಿಗಿಹಿಡಿದು ಇಣುಕುತ್ತಿದ್ದೆವು. ಒಂದೆರಡು ಸಲ ಕೆಂಚಿಬೆಕ್ಕು ಹುಲ್ಲಿನೆಡಕಿನಲ್ಲಿ ಗಪ್ಪನೆ ಕೂತು ಮರಿಗಳನ್ನು ಹಿಡಿಯಲು ಹಾರಿ ಗಲಾಟೆ ಮಾಡಿದ್ದೂ ಉಂಟು; ಆದರೆ ನವಿಲುಗಳ ಗರಿಯ ತುದಿಯೂ ಕೊಂಕಲಿಲ್ಲ ಎನ್ನುವುದು ಬೇರೆ ಮಾತು ! ಕ್ರಮೇಣ ಈ ಎಂಟೂ ನವಿಲುಮರಿಗಳು ದೊಡ್ಡವಾಗಿ ಅಮ್ಮ ಯಾವುದು, ಮರಿ ಯಾವುದು ಅಂತ ಗುರುತಿಸುವುದೇ ಕಷ್ಟವಾಗತೊಡಗಿತು! ಇಷ್ಟಾಗಿಯೂ ಮನೆ ಹತ್ತಿರವೇ ನವಿಲುಗಳು ಓಡಾಡಿಕೊಂಡಿದ್ದರೂ, ಮಾರುದ್ದದ ಹಂಯ್ಸಾರ್ ಹಾವೊಂದು (ಕೇರೆ) ನಾಲ್ಕೈದು ಸಲ ಮನೆಯೊಳಗೇ ಪ್ರವೇಶಿಸಿ ಭಯ ಹುಟ್ಟಿಸಿದ್ದು ಸೋಜಿಗವೋ, ನಮ್ಮ ದೆಸೆಯೋ ತಿಳಿಯುತ್ತಿಲ್ಲ!

ನಮ್ಮನೆಗೆ ಬಂದು ಸೇರಿದ ಬೆಕ್ಕು-ನಾಯಿಗಳ ಕುರಿತು ಹೇಳಿದರೆ ಅದೇ ಒಂದು ದೊಡ್ಡ ಪ್ರಕರಣವಾಗುತ್ತದೆ. ಒಂದು ಕಡುಕಪ್ಪು ರಾತ್ರಿಯಲ್ಲಿ  ಕಣ್ಣೆದುರು ಸುಳಿದಾಡಿ ಬೆಕ್ಕೋ, ಕಬ್ಬೆಕ್ಕೋ, ಮುಸುವನೋ ಗುರುತಿಸಲಾಗದೆ ಗೋಳುಹೊಯ್ದುಕೊಂಡಿತು ವಿಶಿಷ್ಟವಾದೊಂದು ಪ್ರಾಣಿ ! ಮರುದಿನ ಸಂಜೆಯ ಹೊತ್ತಲ್ಲಿ ಗಮನಿಸಿದಾಗ ತಿಳಿದದ್ದು ಮೈತುಂಬ ಕೆಸರು ಮೆತ್ತಿಕೊಂಡ ಬೆಕ್ಕಿನ ಮರಿ ಅದು ಎಂದು ! ಆದರೆ ಕ್ರಮೇಣ ವಾರವೊಂದು ಕಳೆದಾಗ ದಿನವೂ ಅದನ್ನು ನೋಡಿ ನೋಡಿ ಅರಿವಾಯಿತು ; ಕೆಸರು ಹಚ್ಚಿಕೊಂಡದ್ದಲ್ಲ, ಆ ಬೆಕ್ಕು ಇರುವುದೇ ಹಾಗೆ ಎಂದು ! ಕಪ್ಪು-ಕೆಂಚು ಬಣ್ಣಗಳ ವಿಚಿತ್ರ ಮಿಶ್ರಣದ ಕುರೂಪ ದೇಹದೊಂದಿಗೆ  ಒಂದು ಕಣ್ಣನ್ನೇ ಕಳೆದುಕೊಂಡಿದ್ದ ಪಾಪದ ಬೆಕ್ಕದು. ಅದರ ಭಯ-ಗಾಬರಿಗಳನ್ನು ಹೋಗಲಾಡಿಸಿ, ನಮ್ಮಲ್ಲಿ ವಿಶ್ವಾಸ ಹುಟ್ಟುವಂತೆ ಮಾಡಿ ಮನೆಯೊಳಗೆ ಬಂದು ಹಾಲು ಕುಡಿಯುವಂತೆ ಅನುನಯಿಸಲು ಸುಮಾರು ಒಂದು ತಿಂಗಳೇ ಬೇಕಾಯಿತು ! ಮೊದಮೊದಲು ರೇಗಿಸಲೆಂದು ಕರೆದ ಹೆಸರೇ ಆ ನಮ್ಮ ಮುಸುವಬೆಕ್ಕಿಗೆ ಪರ್ಮನೆಂಟಾಯಿತು. ಆಮೇಲಿನದ್ದೆಲ್ಲ ಬರೀ ಖುಷಿ ! ಮುಸುವನ ಚಿತ್ರ-ವಿಚಿತ್ರ ಮೂಡುಗಳು, ನಡವಳಿಕೆಗಳು ಮನೆಯವರಿಗೆಲ್ಲ ಇಷ್ಟವಾಗಿ, ಅದೇ ಸಮಯಕ್ಕೆ ಪೆದ್ದು ನಾಯಿಮರಿಯೊಂದು ಬಂದು ಮನೆ ಸೇರಿಕೊಂಡು ‘ಪಾಪಣ್ಣ’ನಾಗಿ ಎರಡೂ ಸೇರಿ ಆಡಿದ್ದೇ ಆಡಿದ್ದು ! ಆಮೇಲೆ ಮುಸುವ ಮರಿಗಳನ್ನಿಟ್ಟಿದ್ದು ; ಫುಟ್ಬಾಲ್, ಪೈಲ್ವಾನ್ ಕಿಟ್ಟಪ್ಪ, ನಿತ್ರಾಣ್, ಬಾತುಕೋಳಿ ಎಂಬ ಚಿತ್ರ ವಿಚಿತ್ರ ಹೆಸರಿನ ಆ ಮರಿಗಳು ಪಾಪಣ್ಣನ ಜೊತೆ ನಾಯಿ-ಬೆಕ್ಕು ಎಂಬ ಭೇದವಿಲ್ಲದೆ ಮನೆಯೆಲ್ಲ ಸುತ್ತಿ ಆಡುತ್ತ ಉತ್ಸಾಹ ತಂದದ್ದು ಎಲ್ಲವೂ ಹೌದು. ಪಾಪಣ್ಣನಂತೂ ದರೋಡೆಕೋರರೇ ಮನೆಗೆ ಬಂದರೂ ಬಾಲದಲ್ಲಿ ಚಾಮರಸೇವೆ ಮಾಡಿ ಬಳುಕು ಹೆಜ್ಜೆಯಿಟ್ಟು ಕೈಕುಲುಕಿ ಸ್ನೇಹ ಕೋರುವಷ್ಟು ನಿರುಪದ್ರವಿ ನಾಯಿ ! ಅಡುಗೆ ಮನೆಯ ಮೂಲೆಯಲ್ಲಿ ಬಟ್ಟೆ ಹಾಸಿಗೆಯ ಮೇಲೆ ನಾಯಿ-ಬೆಕ್ಕುಗಳೆಲ್ಲ ಒಂದರ ಮೇಲೊಂದು ಬಿದ್ದು ನಿದ್ದೆ ಮಾಡುತ್ತಿದ್ದುದು, ಮುಸುವ ಬೆಕ್ಕು ಅಂಗಳದಲ್ಲಿ ಕುಳಿತಿದ್ದರೆ ಪಾಪಣ್ಣ ಅದರ ಸುತ್ತ ಸುರುಸುರು ಬತ್ತಿ ಚಕ್ರದಂತೆ ಓಡಾಡುತ್ತಾ ಗೋಳಾಡಿಸುತ್ತಿದ್ದುದು, ಸ್ನಾನಕ್ಕೆ ಹೆದರಿ ಸಂದಿ ಸೇರಿ ನಿಂತ ಪಾಪಣ್ಣ, ವಿಷದಹಾವೊಂದನ್ನು ತಂದು ಗಂಟೆಗಟ್ಟಲೆ ಅದರೊಡನೆ ಆಡಿದ ಮುಸುವನ ರುದ್ರಭಯಂಕರ ಭಂಗಿ.. ಇವೆಲ್ಲ ಕಣ್ಣಪರದೆಯ ಮುಂದಿನ ಚಿತ್ರಗಳು ! ಪಾಪಣ್ಣ ; ನಾನು- ಮಗ ಮಲಗುವ ಮಂಚದ ಅಡಿಯಲ್ಲೇ ಮಲಗುತ್ತಿದ್ದುದು, ಮತ್ತು ಮನೆಯೊಳಗೆ ಬಿಡುಬೀಸಾಗಿ ಓಡಾಡುತ್ತಿದ್ದುದು ನಮ್ಮನೆಗೆ ಬರುವ ಕೆಲವರಿಗೆ ಇಷ್ಟವಾಗದೆ ಅವರು ಮತ್ತೆ ಮನೆಕಡೆ ತಲೆಹಾಕದೆ ಇದ್ದದ್ದು ಕೂಡಾ ಆ ದಿನಗಳ ಸತ್ಯಗಳಲ್ಲಿ ಒಂದು.  ಪಾಪಣ್ಣ ಎಷ್ಟೊಳ್ಳೆ ನಾಯಿ, ಎಷ್ಟು ಚಂದದ ನಾಯಿ ! ಆದರೆ ಅದು ‘ಬೀದಿನಾಯಿ’ ಎಂಬ ತಾತ್ಸಾರದ ಪೊರೆಯನ್ನು ನಮ್ಮ ಸುತ್ತಮುತ್ತಲಿನ ಕೆಲ ಮನುಷ್ಯರು ಕೊನೆಗೂ ಕಳಚಲೇ ಇಲ್ಲ !.

Cat, Young Animal, Kitten, Gray Cat

ಪ್ರಾಣಿ-ಪಕ್ಷಿಗಳು ನಮ್ಮನ್ನು ಪ್ರೀತಿಸುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮನ್ನು ಮತ್ತು ನಾವಿರುವ ಪರಿಸರದ ನಿಶ್ಯಬ್ದತೆಯನ್ನು, ನಿರುಪದ್ರವತೆಯನ್ನು ಮನ್ನಿಸುತ್ತವೆ ಎಂದು ನೂರಕ್ಕೆ ನೂರು ಅರಿವಾಗಿದೆ. ನಾವಿದ್ದ ಎರಡು ಮನೆಗಳಲ್ಲಿ ಸಿಟೌಟಿನ ಕಂಬಕ್ಕೆ ಕಟ್ಟಿದ್ದ ರಟ್ಟಿನ ಪೆಟ್ಟಿಗೆಗಳನ್ನು ಸ್ವೀಕರಿಸಿ ತರಾವರಿ ಹಕ್ಕಿಗಳು ಗೂಡುಕಟ್ಟಿ ಮೊಟ್ಟೆಯಿಟ್ಟು ಮರಿಯೊಡೆಸಿದ್ದೇ ಇದಕ್ಕೆ ಸಾಕ್ಷಿ ! ಇದಂತೂ ಬದುಕಿನ ಕೊನೆದಿನದವರೆಗೆ ಮರೆಯದ, ಹಕ್ಕಿಗಳು ಕೊಟ್ಟ ಸರ್ಟಿಫಿಕೇಟಿನ ಹೆಮ್ಮೆ ನನಗೆ ! ಮೊದಲಿಗೆ ಎರಡು ಮಡಿವಾಳಹಕ್ಕಿ ಸಂಸಾರಗಳು ಆಮೇಲೆ ಕಾಡು ಮುನಿಯಗಳು, ಮತ್ತೆ ಮಡಿವಾಳ ಹಕ್ಕಿಗಳು ಹೀಗೆ ಸುಮಾರು ಎಂಟು ಹಕ್ಕಿ ಸಂಸಾರಗಳು ಮೇಲಿಂದ-ಮೇಲೆ ನಮ್ಮ ರಟ್ಟಿನ ಡಬ್ಬಗಳಿಗೆ ಹುಲ್ಲು, ನಾರು ತಂದುಹಾಕಿ ಗೂಡುಕಟ್ಟಿ ಮೊಟ್ಟೆಯಿಟ್ಟವು ! ಹಕ್ಕಿಗಳ ನಂಬಿಕೆಗೆ ಪಾತ್ರವಾದ ಆ ಕ್ಷಣಗಳ ನಂತರ ಮನುಷ್ಯರ ಮೋಸ, ದ್ರೋಹ, ನಂಬಿಕೆ- ಅಪನಂಬಿಕೆಗಳು ಅಲುಗಾಡಿಸಲಾರದ ತಟಸ್ಥ ಸ್ಥಿತಿಯೊಂದಕ್ಕೆ ಪಯಣಿಸಿದಂತೆ ನನಗೆ ಭಾಸವಾಗುತ್ತದೆ.

ನೀರವ ಕತ್ತಲಿನಲ್ಲಿ ನರಿಗಳ ಕೂಗು ಕೇಳಲೆಂದು ನಡುರಾತ್ರಿಯ ತನಕ ಸಿಟೌಟಿನಲ್ಲಿ ನಾನು, ಮಗ ಕಾದು ಕೂತಿರುತ್ತಿದ್ದೆವು. ದಿನವೂ ಮಧ್ಯರಾತ್ರಿಯ ಹೊತ್ತಿಗೆ ‘ಕೂ ಕೂ’ ಎಂಬ ನರಿಗಳ ಕೂಗು ಮನೆಯೆದುರಿನ ಕಾಡಿನಿಂದಾಚೆ ಕೇಳಿಬರುತ್ತಿತ್ತು. ಅದು ನರಿಯಾ ಅಥವಾ ಮನುಷ್ಯರಾ ಎಂದು ಸಂಶಯ ವ್ಯಕ್ತವಾಗುವಷ್ಟು ನರಿಗಳ ಕೂಗು ವಿಚಿತ್ರ. ಗಮನಿಸುತ್ತ ಹೋದರೆ ಅಚ್ಚರಿಗಳು ಮುಗಿಯುವುದೇ ಇಲ್ಲ ! ಅಂಗಳದ ಕಾಗೆಹಣ್ಣಿನ ಗಿಡದ ಮೇಲೆ ಓತಿಕ್ಯಾತವೊಂದು ಪ್ರತೀ ರಾತ್ರಿ ವಿಶ್ರಾಂತಿ ತೆಗೆದುಕೊಳ್ಳಲು ಬರುತ್ತಿದ್ದುದು ಅಂತಾದ್ದರಲ್ಲೊಂದು! ಇಳಿಸಂಜೆಯ ಹೊತ್ತಿಗೆ ಎಲ್ಲಿಂದಲೋ ಬಂದು ಗಿಡವೇರಿ ವಿಚಿತ್ರ ಭಂಗಿಯಲ್ಲಿ ಮಲಗಿ ಅದು ನಿದ್ದೆ ಮಾಡುತ್ತಿದ್ದುದು ಯಾವಾಗಲೂ ಕಣ್ಣಿಗೆ ಕಟ್ಟಿದಂತಿರುತ್ತದೆ. ಅದೇನಾಯಿತೋ ಸ್ವಲ್ಪ ಸಮಯದ ನಂತರ ಓತಿಕ್ಯಾತ ಕಾಣಿಸಿಕೊಳ್ಳಲಿಲ್ಲ. ಆದರೇನಂತೆ, ‘ಕೊರತೆ ತುಂಬಲು ನಾನಿದ್ದೇನೆ’ ಎನ್ನುತ್ತ ಪಕ್ಕದ ಪಪ್ಪಾಯಿ ಸಸಿಯ ದಂಟಿನ ಮೇಲೆ ಮರಕಪ್ಪೆಯೊಂದು ದಿನವೂ ರಾತ್ರಿ ಕುಳಿತುಕೊಳ್ಳತೊಡಗಿತು ! “ಅಂತೂ ಇಂತೂ ಈ ಪ್ರಾಣಿಗಳಿಗೆ ಅವುಗಳಂತೇ ಸೋಮಾರಿಗಳಾಗಿ ಕಾಡುಕಾಡಾಗಿರುವ ನಿಮ್ಮನ್ನು ಕಂಡರೆ ಭಾಳ ಪ್ರೀತಿ” ಎಂದು ಮನೆಗೆ ಅಪರೂಪಕ್ಕೆ ಬರುತ್ತಿದ್ದ ನೆಂಟರು ಕಮೆಂಟಿಸುತ್ತಿದ್ದರು ! ಅವರ ‘ಹೊಗಳಿಕೆ’ ನನ್ನ ಕಿವಿಗಂತೂ ಬಹು ಅಪ್ಯಾಯಮಾನವಾಗಿತ್ತು !

Puppy, Dog, Pet, Collar, Dog Collar

ಮಾತುಬಾರದ, ನಮ್ಮಂತೆ (ಕೆಟ್ಟ) ಬುದ್ಧಿ ಇಲ್ಲದ ಜೀವಜಂತುಗಳು ನಮ್ಮನ್ನು ಪ್ರೀತಿಸುತ್ತವೆ ಅಂದುಕೊಳ್ಳುವುದೇ ರೋಮಾಂಚನ. ಆದರೆ ಅವುಗಳಿಗೆ ಈ ಭಾವನೆಗಳೆಲ್ಲ ಗೊತ್ತಿರುವುದಿಲ್ಲ ಎನ್ನುವುದು ಗೊತ್ತಿದ್ದರೂ ನಾವು ಮತ್ತೆ ಮತ್ತೆ ಭ್ರಮೆಯ ಗೂಟಕ್ಕೆ ನಮ್ಮನ್ನು ಬಿಗಿದುಕೊಳ್ಳುತ್ತೇವೆ. ನೂರೆಂಟು ಕಗ್ಗಂಟುಗಳ ಈ ಮಾನವ ಬದುಕಿನಲ್ಲಿ ಭ್ರಮೆಯಿಲ್ಲದೆ ಜೀವಿಸುವುದು ಅಸಾಧ್ಯ. ಒಬ್ಬೊಬ್ಬರಿಗೆ ಒಂದೊಂದು ಭ್ರಮೆ. ಹಾಗೇ ನನಗೆ ‘ಜೀವಜಂತು’ಗಳ ಪ್ರೀತಿಯ ಭ್ರಮೆ ; ಅಥವಾ ಇದೊಂದು ಹುಚ್ಚಿದ್ದರೂ ಇರಬಹುದು ಎಂದು ನನಗೆ ಮತ್ತು ನನ್ನನ್ನು ಬಲ್ಲವರಿಗೆ ಒಂದು ಸಣ್ಣ ಅನುಮಾನ !

*******







































Leave a Reply

Back To Top