ನಮ್ಮದಾರಿ ಬರಿ ಚಂದ್ರನ ವರೆಗೆ

ಕಥೆ

ನಮ್ಮದಾರಿ ಬರಿ ಚಂದ್ರನ ವರೆಗೆ

ಸ್ಮಿತಾ ಭಟ್

Crescent, Moon, Balloon, Night, Star

ಅದೊಂದು ಜನ ನಿಬಿಡ ದಾರಿ. ರಸ್ತೆಗೇ ತಾಕಿಕೊಂಡ ಮನೆ ಎದುರಿನ ಚಿಕ್ಕ ಸಿಟೌಟು

ಅಲ್ಲೊಂದು ತೇಟ್ ಸಿ ಸಿ ಟಿವಿಯಂತೆ ಕೆಲಸ ಮಾಡುವ ಅಜ್ಜಿ,

ಸೂರ್ಯ ಕಣ್ಮುಚ್ಚಿಕೊಳ್ಳುವ ಕ್ಷಣಕ್ಕೆ ಸರಿಯಾಗಿ ಪಕ್ ನೇ ಕಣ್ಬಿಡುತ್ತಾಳೆ .ನಾಳಿನ ಖುಷಿಗೆ ಸಜ್ಜಾಗುತ್ತಿದ್ದ ಬೆಣ್ಣೆಯಂತ ಮೊಗ್ಗುಗಳು.

ದಾರಿಗುಂಟ ಬೆಳೆದು ನಿಂತ ಮನೆಗಳು.

ಅದರಂಚಿನ ಬೇಲಿಗೆ ವಾಲಿದ ಹೂ ಬಳ್ಳಿಗಳು ತಲೆದೂಗುತ್ತಿರುತ್ತವೆ.

ಅಲ್ಲಲ್ಲೇ ಬೇಲಿಯ ಸಂದಿಯೊಳಗೆ ಕೈ ತೂರಿಸಿ ಆಚೆ ಈಚೆ ನೋಡುತ್ತ ಮಡಿಲಿಗೆ ಒಂದಿಷ್ಟು ಮೊಗ್ಗುಗಳನ್ನು ತುರುಕಿಕೊಂಡು ಕಣ್ಮುಚ್ಚಿ ಹಾಲು ಕುಡಿದ ಬೆಕ್ಕಿನಂತೆ ಕಳ್ಳ ಹೆಜ್ಜೆ ಇಟ್ಟು ಸೆರಗು ಸರಿ ಪಡಿಸಿಕೊಳ್ಳುತ್ತ,ಮತ್ತೆ ತನ್ನ ಜಾಗದಲ್ಲೇ ಪವಡಿಸಿ, ಹರಡಿಕೊಂಡ ಮೊಗ್ಗುಗಳ ಹೆಕ್ಕುತ್ತ ಉದ್ದಕ್ಕೆ ಚಾಚಿದ ಕಾಲಿಗೆ ಬಾಳೆಯನಾರು ಸಿಕ್ಕಿಸಿ,ಸ್ತ್ರೋತ್ರ ಪಠಿಸುತ್ತ ದಂಡೆ ಹೆಣೆಯುತ್ತಾಳೆ.

ಹಾಗೆ ಅವಳು ದಂಡೆ ಹೆಣೆಯುತ್ತಾ ಕೂತಿದ್ದಾಳೆ ಅಂದ್ರೆ ನಾಳೆ ಎಲ್ಲೋ ಮದುವೆನೋ, ಮುಂಜಿನೋ ಇದೆ ಅಂತಲೇ ಅರ್ಥ, ವಾರದಲ್ಲಿ ಕನಿಷ್ಠ ಮೂರು ಬಾರಿಯಾದರೂ ಅವಳ ತಿರುಗಾಟ ಪಕ್ಕಾ.

ಮೊಗ್ಗು ಕೊಯ್ಯುವ ಸಮಯದಲ್ಲಿ ಯಾರಾದರೂ ಸಿಕ್ಕರೆ ಒಂದು ಪ್ಯಾಲೆ ನಗೆ ಎಸೆದು ನಾವು ತಿರುಗಿ ನಕ್ಕಿದ್ದೂ ಹೆಚ್ಚಾಯ್ತೇನೋ ಅನ್ನೋ ಮುಖಮಾಡಿ ನೋಡಿದವರನ್ನೇ ಅಪರಾಧಿ ಎಂಬಂತೆ ಮಡಿಲು ಮರೆ ಮಾಡಿಕೊಳ್ಳುತ್ತ ದುಡು ದುಡುನೇ ಹೊರಡುತ್ತಾಳೆ. ಉಳಿದಂತೆ ಎಲ್ಲೇ ಸಿಕ್ಕರೂ ಏನಜ್ಜಿ? ನಾಳೆ ಎಲ್ಲಿಗೆ !?ಎನ್ನುವ ನಮ್ಮ ಮಾತು  ಮುಗಿಯುವುದರೊಳಗೇ,ಹೋಗ ಬೇಕಾದ ಜಾಗ, ದಾರಿ, ಮದುವೆ,ಗಂಡು, ಹೆಣ್ಣು,  ಪುರೋಹಿತರ ಜಾತಕದವರೆಗೂ ಬಡಬಡನೇ ಹಲುಬುತ್ತಾಳೆ.ಸಾಕು ಎನ್ನಿಸಿ ನಾವೇ ನಂಗೆ ಎಲ್ಲಾ ಗೊತ್ತು ಅಜ್ಜೀ..

ಮದ್ವೆ ಹೆಣ್ಣಿನ  ಪಕ್ಕದ ಮನೆಲಿ ಒಂದೊಳ್ಳೆ ಕೂಸು ಇದ್ದಾಳಂತೆ ಗೊತ್ತಾ !? ನಮಗೂ ಗೊತ್ತಿಲ್ಲದ ಒಂದು ಸತ್ಯದದಂತಹ ಸುಳ್ಳು ತೂರುವುದು ಅಷ್ಟೇ,,

“ನನಗೆ ಗೊತ್ತಿಲ್ಲದ ಸುದ್ದಿ ನಿಂಗೆ ಹ್ಯಾಂಗೇ ಗೊತ್ತಾಯ್ತೇ ಮಾರಾಯ್ತಿ”

ತರೆದ ಬಾಯಿಯೊಳಗೆ ಹಾರಾಡಿ ಬಂದ ನೊಣಗಳು ರೆಕ್ಕೆ ಕುಣಿಸಿ ಓಡಿ ಬರುವದರೊಳಗೆ

 ನಾವಲ್ಲಿಂದ ಜಾಗ ಖಾಲಿ ಮಾಡಿ ಬಿಡಬೇಕು

ಹಿಂಬಾಲಿಸಿ ಬಂದಳೋ… ಮುಂದಿನದು ದೈವ ಚಿತ್ತವೇ ಸರಿ.

ಈ ಕರೋನಾ ಎನ್ನುವುದು ಯಾರನ್ನ ಕಂಗಾಲು ಮಾಡಿಲ್ಲ ಹೇಳಿ,ಇಡೀ ವ್ಯವಸ್ಥೆಯನ್ನೇ ಅಲ್ಲಾಡಿಸಿದ ಅದ್ರಶ್ಯ ಜೀವಿ ಅದು.

ಕರೋನಾ ಅಂದಾಗೆಲ್ಲ ನನಗೆ ಮಾಯಾವಿ ಅಸುರರ ನೆನಪಾಗುತ್ತದೆ.

ಕತ್ತೆಲೆಯಲ್ಲಿ ಕುಳಿತು ಕತ್ತಿ ಝಳಪಿಸುವ ಅಸಹಾಯಕರು ನಾವಾಗಿದ್ದೇವಾ ಅನ್ನಿಸುತ್ತದೆ.

ಗೆದ್ದೇ ಬಿಡುತ್ತೇವೆಂದು ಹೊರಡುವ ನಾವು

 ಹಲ್ಲುಕಿತ್ತ ಹಾವಾಗಿ ಹುತ್ತ ಸೇರುತ್ತಿದ್ದೇವೆ.

ಮಾನವನಿಗೆ ಬುದ್ಧಿ ಕಲಿಸಲೇ ಬಂದಿದೆ ಈ ಕರೋನಾ ಮಾರಿ ಎಂದು ನಾವು ನೀವುಗಳೂ ಸೇರಿದಂತೆ ಮಾತಾಡಿಕೊಂಡಿದ್ದೇವೆ ಕೂಡ.

ಹಾಗೆ ಈ ಅಜ್ಜಿ ಕೂಡ ತನ್ನದೇಆದ ಭಾಷೆಯಲ್ಲಿ

ಕರೋನ ಬೈತಾಳೊ ಜನರನ್ನೋ ಅಂತ ಗೊತ್ತಾಗೋದೇ ಇಲ್ಲ

 “ಸರೀ..ಆಯ್ತು ಈಗ.” ಹೊಟೆಲು,ಸಿನಿಮಾ,ನೌಕರಿ ಎನ್ನುತ್ತ ಮಡಿ ಮೈಲಿಗೆ ಶಾಸ್ತ್ರ ಸಂಪ್ರದಾಯ ಏನೂ ಇಲ್ಲದೇ,ಒಬ್ಬರ ಎಂಜಲು ಇನ್ನೊಬ್ಬರು  ತಿಂತಾ ಅಬ್ಬೆಪಾರಿ ಯಂತೆ ಬದುಕುತ್ತಿದ್ರು. ಈಗ ನೋಡಿ, ಎಲ್ಲ ಹೆಂಗೆ ಆಗಿದ್ದಾರೆ ಕಪ್ಪೆ ತಿಂದ ಬೆಕ್ಕಂಗೆ,

ಈ ಸುಟ್ ರೋಗ ಮನೆಯಿಂದ ಹೊರಗೆ ಕಾಲಿಡೋಕೂ ಗತಿ ಇಲ್ಲ “ಯೇ ಬಂತು  ಬಂತು ಕರೋನ” ಅಂತ ಹೆದರಿಸುತ್ತಾರೆ.ಮಕ್ಕಳಿಗೆ ಗುಮ್ಮಾ ಬಂತು ಹೇಳಿ ಹೆದರಿಸಿದಂತೆ,

ತನ್ನ ಎತ್ತರದ ಧ್ವನಿಯ ಅಸ್ತ್ರವನ್ನು ನಮಾಜಿನಂತೆ ಮೊಳಗಿಸುವದು ಅವಳ ಅಭ್ಯಾಸ ಅದೇ ಮೆಟ್ಟಿಲ ತುದಿಯ ಮೇಲೆ ಕುಳಿತು.

“ಅರೇ ಇಲ್ಯಾರು ಅಂಗಳದಲ್ಲಿ ಇಷ್ಟೊಂದು ದುಡ್ಡು ಒಗ್ದಿರೋದು’ ಮತ್ತೆ ಈ ದುಡ್ಡೂ ಬಂದ್ ಆಯ್ತಾ ಯಬ್ಬೊ!!ಯಬ್ಬೋ !

ಅದೇ ಬಿಡುವಿಲ್ಲದ ಮಾತು.

“ಅಯ್ಯೋ ಸುಮ್ನಿರಮ್ಮ” ಬ್ಯಾನೂ ಇಲ್ಲ ಬಂದೂ ಇಲ್ಲ ಯಾರ್ಯಾರೊ ಕೊಟ್ಟ ದುಡ್ಡು ಅದು,

ಅದ್ಕೆ ಸ್ವಲ್ಪ ಹೊತ್ತೊ ಬಿಸಿಲಿನಲ್ಲಿ ಇಟ್ಟಿದ್ದೀನಿ.

ಕರೋನಾ ಏನಾದ್ರು ಇದ್ರೆ ಸಾಯ್ಲಿ ಅಂತ ಅಂದ

ಮಗರಾಯ.

ತನ್ನ ಕಟ್ಟಿಸಿದ ಹಲ್ಲನ್ನು ಒಳಗೂ ಹೊರಗೂ ದೂಡುತ್ತಾ ಪಿಸಿ ಪಿಸಿ ನಗುವಿನಲ್ಲಿ

 ಪ್ಯಾಟೆಗೆ ಹೋಗಿ ಬಂದಾಗ  ಮೈಲಿಗೆ ಆಗ್ತದ್ರೋ ತೋಳಿರೋ ಎಲ್ಲ ಅಂದ್ರೆ ಎಲ್ರೂ ಹಾಗಲಕಾಯಿ ರಸ ಕುಡ್ದೋರ ಹಂಗೆ ಮಾಡ್ತಿದ್ರಲ್ಲೋ.

ಈಗ ಹೆಂಗಾಗದೇ ನೋಡಿ ನಿಮ್ಮ ಪರಿಸ್ಥಿತಿ

ಮತ್ತೆ ನಗತೊಡಗಿದಳು.

ನಿಜ ಅಂದು ಎಲ್ಲ ಸಂಪ್ರದಾಯಗಳು ಸ್ವಚ್ಛತೆಯ ಮೂಲ ಉದ್ದೇಶವಾಗಿತ್ತು.ಆದ್ರೆ ಬರ ಬರುತ್ತ ಕೇವಲ ಅದು ಕಾಟಾಚಾರದ ಶಾಸ್ತ್ರ ವಾಗಿ ಕಟ್ಟಳೆಯಾಗಿ ಪರಿಣಮಿಸಿ, ಇದೆಲ್ಲದರಿಂದ ದೂರ ಇರುವಂತೆ ಮನುಷ್ಯನನ್ನು ಮಾಡಿತು.

ಈಗ ಅದರ ಮೂಲ ಉದ್ದೇಶ ಅರಿತುಕೊಳ್ಳುವ ಕಾಲ ಬಂದಿದೆ ಅಷ್ಟೇ.

ಆರಂಭದಲ್ಲಿ ಕಿಲ ಕಿಲನೆ ನಗುತ್ತಿದ್ದ ಮನೆಗಳು ಕಮಕ್ ಗಿಮಕ್ ಅನ್ನದೇ ಸ್ತಬ್ಧವಾಗಿವೆ,

ವರ್ಕ ಪ್ರಾಂ ಹೋಂ ನಿಂದಾಗಿ.

ಮೀಟಿಂಗು,ಪೋನ್ ಕಾಲ್ಸ್, ಲ್ಯಾಪ್ ಟಾಪ್,

ಮನೆಯ ಉಳಿದ ಸದಸ್ಯರೂ ಮಾತಾಡೋ ಹಾಗಿಲ್ಲ. ಕುಳಿತಲ್ಲಿಂದಲೇ ಬಾಯಿಮೇಲೆ ಬೆರಳಿಟ್ಟು ಶ್…

ಏನು ಮಾಡೋದು ಮಕ್ಕಳು ವರ್ಕು ನಾವು ಒರ್ಕು(ಒರಗು) ಅನ್ನೋದು ಅಜ್ಜಿ ತಕರಾರು.

ಮೊದ ಮೊದಲು  ಕರೋನಾ ಕರಿ ನೆರಳಲ್ಲೂ ತಂಪಿನ ಭಾವ ತಂದುಕೊಳ್ಳುತ್ತಿದ್ದ ನಾವು, ಈಗೀಗ  ಭಯಂಕರ ಭೀಕರವಾಗಿ ಕುಸಿದು ಬೀಳುತ್ತಿರುವುದಂತೂ ನಿಜ.

ಭಾವ-ಬಂಧಗಳೂ ಗೆದ್ದಲು ಹಿಡಿದಿವೆ

ಯಾವ ಕೆಲಸಕ್ಕೇ ಕೈ ಹಾಕಿದರೂ ಕರೋನ ಕಾರಣವೊಂದು ಯಮದೂತನಂತೆ ಬಂದು ನಿಲ್ಲುತ್ತದೆ,ನಮ್ಮದು ಗೋಗರೆವ ಸಾವಿತ್ರಿಯ ಕಥೆ.

ಇತಿಹಾಸದಲ್ಲಿ ಸರಿದು ಹೋದ ಮಹಾ ಮಹಾ ಯುದ್ಧಗಳ ಕಾಲಕ್ಕೆ ಈ ಕರೋನಾಕಾಲವನ್ನೂ

ಸೇರಿಸಬಹುದು.

ಅದಕ್ಕಿಂತ ಘೋರವೆಂದರೂ ತಪ್ಪಾಗಲಾರದು.

ಯಾಕೆಂದರೆ ಇಡೀ ಸೃಷ್ಟಿಯನ್ನೇ ಏಕ ಕಾಲದಲ್ಲಿ ಕಾಡಿದ ಕಾಲವಿದು.

ಬದಲಾವಣೆಗಳು ಆಗದೇ ಇರುತ್ತವೆಯೇ!?

 ಪ್ರಕೃತಿಯ ಬದಲಾವಣೆಗೆ ಮನುಷ್ಯ ಒಗ್ಗಿಕೊಳ್ಳುವಷ್ಟು ಗಟ್ಟಿಯಾಗಿಲ್ಲ.

ಭೂಮಿಯ ಮೇಲೆ ವಾಸಿಸುವ ಪ್ರತೀ ಮನುಷ್ಯ,ಪ್ರಾಣಿ, ಪ್ರಕೃತಿ,ಉದ್ಯೋಗ, ಬೇಕು ಬೇಡಗಳಿಂದ ಹಿಡಿದು

ಬದುಕಿನ ಅತ್ಯಂತ ಖಾಸಗೀ ವಿಷಯದವರೆಗೂ ಈ ಕರೋನಾ ಬಂದು ಬುಡವನ್ನೇ ಅಲ್ಲಾಡಿಸಿದೆ.

ಕರೋನಾಕಾಲವಿದು ಯಾವ ಬರಹಕ್ಕೂ ಭಾವಕ್ಕೂ ನಿಲುಕದಷ್ಟು ಭೀಕರವಾಗಿಯೇ ಮನುಜ ಕುಲದಮೇಲೆ ಪರಿಣಾಮ ಬೀರಿದ್ದಂತೂ ಸತ್ಯ.

ಅದನ್ನು ಈಗಲೂ ಅನುಭವಿಸುತ್ತಿರುವುದೂ ಸತ್ಯ.

“ಹುಟ್ಟುವಾಗ ಒಬ್ಬನೇ ಸಾಯುವಾಗ ಒಬ್ಬನೇ” ಎನ್ನುವ ದಾಸರವಾಣಿಯನ್ನೂ ಅಕ್ಷರಶಃ ಕೃತಿಯಲ್ಲಿ ಮಾಡಿ ತೋರಿಸಿದೆ ಈ ಕರೋನಾ.

ಕೇವಲ ಗೊಣಗಾಟದಲ್ಲಿ ಬದುಕಿನ ಬರವಸೆಗಳನ್ನು ಕಳೆದು ಕೊಳ್ಳುತ್ತಿದ್ದೇವೆ

ಇಂತಿಪ್ಪ ಕರೋನಾ ಕಾಟದಲಿ ಅಜ್ಜಿಯೂ ತನ್ನ ದಿನಚರಿ ಅನಿವಾರ್ಯವಾಗಿ ಬದಲಿಸಿದ್ದಳು.

ಮನೆಯಿಂದ ಹೊರಗೆ ಕಾಲಿಡೋಕೆ ಭಯ

ಮನೆ ಎದುರಿನ ಚಚ್ಚೌಕದ ಜಾಗದಲಿ  ಕೆಂಪು ಬಣ್ಣ ಮೆತ್ತಿದ  ಸಿಮೆಂಟಿನ ಕಟ್ಟೆಯ ಮೇಲೆ ಕುಳಿತು, ದೊಡ್ಡದಾದ ಕಂಬಕ್ಕೆ ವಾಲಿಕೊಂಡು, ಕತ್ತನ್ನು ಎತ್ತೆತ್ತಿ,ಅತ್ತಿತ್ತ ನೋಡುತ್ತ,ಬಿಟ್ಟ ಹೂಗಳ ಲೆಕ್ಕ ಹಾಕುತ್ತಿದ್ದಳು.

ಗೇಟು ದೂಡಿ ಇಣುಕಿ ನೋಡುವುದು ಯಾರೇ ಬಂದರೂ ತಡೆದು ನಿಲ್ಲಿಸುವ ಪ್ರಯತ್ನ ಮಾಡಿ ಸೋಲುತ್ತಿದ್ದಳು.

ಮುಚ್ಚಿದ ಮುಖದ ಹಿಂದೆ ಭಾವಗಳು ಕಾಣುತ್ತಿಲ್ಲವಾದ್ದರಿಂದ

ಕಣ್ಣಲ್ಲೇ ನಕ್ಕು ಕೈ ಸನ್ನೆ ಮಾಡಿ ಮುಂದೆ ಹೋಗುತ್ತಿದ್ದರು ಜನ.

ಈಗ ಒಂದು ತಿಂಗಳಿಂದ ಆ ದಿನಚರಿಯೂ ನಿಂತು ಹೋಗಿತ್ತು.

ಅರೇ ಎಲ್ಲಿ ಹೋದಳು ಈ ಅಜ್ಜಿ

ಕಾಣಲೇ ಇಲ್ಲ.ನನಗೆ ಗಾಭರಿ ಆಯ್ತು ಕರೋನಾ ಏನಾದ್ರೂ ಬಂತಾ!? ಅಂದುಕೊಳ್ಳುವಾಗಲೇ ಛೇ ಇರಲಿಕ್ಕಿಲ್ಲ ಎಂಬ ಸಮಾಧಾನವನ್ನೂ ತಂದುಕೊಂಡೆ.

ಹೋಗಿ ಕೇಳೋಣ ಅಂದರೆ, ಯಾರೂ ಯಾರ ಮನೆ ಬಾಗಿಲಿಗೂ ಹೋಗಬಾರದೆಂಬ  ಅನಿರ್ದಿಷ್ಟ ಮುಷ್ಕರವೊಂದು ಜಾರಿ ಇರುವಾಗ ಯಾಕೆ ಬೇಕು ರಿಸ್ಕು ಅಂತ ಸುಮ್ಮನಾದೆ.

ಜೊತೆಗೆ ಆ ಮನೆಗೆ ಪೇಟೆ ಪಟ್ಟಣಗಳಿಂದ  ಜನ ಬಂದು ಹೋಗುತ್ತಿರುತ್ತಾರೆ ಎಂಬ ಗುಮಾನಿ ಬೇರೆ ಇತ್ತಾದ್ದಂರಿಂದ ನಾವೂ ಊರಲ್ಲಿ ಅಸ್ಪ್ರಶ್ಯರಾಗುವ ಭಯ ಬೇರೆ.

ಸ್ವಲ್ಪ ದಿನ ಕಾಯೋಣ ಅಂತ ಸುಮ್ಮನಾದೆ.

ಒಂದಿನ ಹೋಗಿ ಬಾಗಿಲು ಬಡಿದೆ

ಮಗ ಬಾಗಿಲು ತೆಗೆದ

ಅಜ್ಜಿ ಇಲ್ವಾ? ಅಂದೆ

ಮಲಗಿದ್ದಾಳೆ ಇಷ್ಟೊತ್ತಲ್ಲಿ ಯಾಕೆ ಅಂದೆ.

ಅಜ್ಜಿಯ ಸಂಬಂಧಿಕರ್ಯಾರೋ ಸತ್ತು ಹೋದರಂತೆ  ಲಾಸ್ಟ್ ಟೈಮಲ್ಲಿ ಆಸ್ಪತ್ರೆಗೆ ಕರ್ಕೊಂಡು ಹೋಗೋದು ಅನಿವಾರ್ಯವಾಗಿ  ಕಂರ್ಕೊಂಡು ಹೋಗಿದ್ದಾರೆ.ಅವ್ರಿಗೆ ಕರೋನಾ ಇರಲೇ ಇಲ್ವಂತೆ ಕರೋನಾ ಇದೆ ಅಂತ ಸುಳ್ಳೇ ರಿಪೋರ್ಟ್ ಕೊಟ್ಟು ದೇಹ ಕೂಡಾ ಕೊಡದೇ ಕಳ್ಸಿದ್ದಾರಂತೆ. ತನ್ನ ಕಥೆಯೂ ಅಷ್ಟೇ ಎಂದು ಭಯದಲ್ಲೇ ಮೂಲೆ ಸೇರಿದ್ದಾಳೆ.ಯಾರ ಮಾತನ್ನೂ ಕೇಳೋದಿಲ್ಲ,ಇಂದು ನಾಳೆ ಅಂತಿದೆ ಜೀವ ಅಂದ

 ದಾರಿಗುಂಟ ಬರುವಾಗ ಮೊಗ್ಗುಗಳೆಲ್ಲ ಅರಳಿ ಕೈ ಬೀಸಿ ಕರೆಯುತ್ತಿರುವಂತೆ ಕಂಡಿತು.

ಕಣವಿಯವರ ಹಾಡು ನೆನಪಾಯ್ತು

ಹೂವು ಹೊರಳುವವು ಸೂರ್ಯನ ಕಡೆಗೆ

ನಮ್ಮ ದಾರಿ ಬರಿ ಚಂದ್ರನ ವರೆಗೆ ||

****************************

Leave a Reply

Back To Top