ಅಂಕಣ ಬರಹ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ—27
ಆತ್ಮಾನುಸಂಧಾನ
ಖಾಲಿಯಾದ ಗುಂದಿ ಹಿತ್ತಲ
ಮನೆಗೆ ಬಂದ ಅಜ್ಜ
ನಾನು ಅಂಕೋಲೆಯ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುವ ಹೊತ್ತಿಗೆ ನಮ್ಮ ಕುಟುಂಬವಿಡೀ ನಾಡುಮಾಸ್ಕೇರಿಗೆ ಬಂದು ನೆಲೆಯಾಗಿತ್ತು. ಅಷ್ಟು ಹೊತ್ತಿಗಾಗಲೇ ಕುಟುಂಬದ ಸದಸ್ಯರ ಸಂಖ್ಯೆಯೂ ಅಲ್ಪಸ್ವಲ್ಪ ವಿಸ್ತರಣೆಗೊಂಡಿತ್ತು.
ಹೈಸ್ಕೂಲು ಶಿಕ್ಷಣದ ಕೊನೆಯ ಹಂತ ತಲುಪಿದ್ದ ನನ್ನ ತಮ್ಮ ನಾಗೇಶ, ಅದೇ ಆಗ ಹೈಸ್ಕೂಲು ಸೇರಿದ ನನ್ನ ತಂಗಿ ಲೀಲಾವತಿ, ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ತಮ್ಮಂದಿರಾದ ಮಧುಕೇಶ್ವರ ಮತ್ತು ಅಶೋಕ, ಇನ್ನೂ ಶಾಲೆಗೆ ಸೇರಲು ಅನುವಾಗುತ್ತಿರುವ ನನ್ನ ಕಿರಿಯ ಸಹೋದರಿ ಶ್ಯಾಮಲಾ…… ಹೀಗೆ ಆರು ಜನ ಮಕ್ಕಳು ತಾಯಿ-ತಂದೆ ಸೇರಿ ಎಂಟು ಜನರ ಕುಟುಂಬದ ನಿರ್ವಹಣೆಯ ಜವಾಬ್ದಾರಿ ತಂದೆಯವರ ಮೇಲಿತ್ತು.
ಜೊತೆಯಲ್ಲಿ ನಮ್ಮ ತಾಯಿಯ ಚಿಕ್ಕಪ್ಪ ರಾಕು ಎಂಬಾತನಿಗೆ ನಮ್ಮ ಹೊರತು ಬೇರೆ ಸಂಬಂಧಿಗಳು ಮಾಸ್ಕೇರಿಯಲ್ಲಿ ಇರಲಿಲ್ಲ. ಅವ್ವ ಬಾಲ್ಯದಲ್ಲಿಯೇ ತಂದೆಯನ್ನು, ತನ್ನ ವಿವಾಹದ ಬಳಿಕ ತಾಯಿಯನ್ನೂ ಕಳೆದುಕೊಂಡ ಮೇಲೆ ಅವಳಿಗೆ ತೌರುಮನೆಯ ಏಕೈಕ ಆಧಾರವಾಗಿ ಹತ್ತಿರ ಇದ್ದವನು ಚಿಕ್ಕಪ್ಪ ರಾಕು ಒಬ್ಬನೆ. ಅವನಿಗೆ ಸರಕಾರವು ನೀಡಿದ ಐದು ಗುಂಟೆ ಭೂಮಿ ಮತ್ತು ಸರಕಾರದಿಂದಲೇ ಲಭ್ಯವಾದ ಜನತಾ ಮನೆಯೂ ಇತ್ತಾದರೂ ಅವನ ಊಟ ತಿಂಡಿಗಳಿಗೆ ಅವ್ವನೇ ಆಧಾರವಾಗಿ ಆತ ಎಲ್ಲ ಬಗೆಯಿಂದಲೂ ನಮ್ಮ ಕುಟುಂಬದ ಸದಸ್ಯನಂತೆಯೇ ಉಳಿದುಕೊಂಡಿದ್ದ.
ನಮ್ಮ ಪೂರ್ವಜರು ನೆಲೆಸಿದ್ದ ‘ಗುಂದಿ ಹಿತ್ತಲು’ ನಮ್ಮ ಮನೆಯಿಂದ ಕೂಗಳತೆ ದೂರಮದಲ್ಲಿಯೇ ಇತ್ತಾದರೂ ಇತ್ತೀಚೆಗೆ ಅಲ್ಲಿ ನೆಲೆಸಿದ ಕುಟುಂಬಗಳು ಮಾಸ್ಕೇರಿ ಮತ್ತು ಅಗ್ಗರಗೋಣದ ಕಡೆಗೆ ವಲಸೆ ಹೋಗಿ ಸರಕಾರಿ ಭೂಮಿ ಪಡೆದು ನೆಲೆ ಕಂಡುಕೊಂಡಿದ್ದವು.
ಗುಂದಿ ಹಿತ್ತಲಿನ ಬೇಡು ಮತ್ತು ಸುಕ್ರು ಎಂಬ ಇಬ್ಬರ ಮಕ್ಕಳೂ ಬೇರೆ ಬೇರೆಯಾಗಿ ಸ್ವತಂತ್ರವಾಗಿ ಕೂಲಿ-ನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಮ್ಮ ತಂದೆಯವರ ತಂದೆ ಸುಕ್ರು ಎಂಬಾತನ ಹಿರಿಯ ಮಗ ಮರ‍್ಕುಂಡಿ ಎಂಬವರು ಅಗ್ಗರಗೋಣದಲ್ಲಿ ನೆಲೆಸಿದ್ದರು. ಬೇಡು ಎಂಬ ಅಜ್ಜನ ಮಕ್ಕಳು ಪೊಕ್ಕ ಮತ್ತು ನಾರಾಯಣ ನಾಡುಮಾಸ್ಕೇರಿಯಲ್ಲಿ ಸ್ವತಂತ್ರ ಬದುಕು ಕಟ್ಟಿಕೊಂಡಿದ್ದರೆ, ಕಿರಿಯವನಾದ ಮಹಾದೇವ ಎಂಬವನು ಅಗ್ಗರಗೋಣದಲ್ಲಿ ಉಳಿದುಕೊಂಡಿದ್ದ.
ಹೀಗೆ ಎಲ್ಲರೂ ಬೇರೆ ಬೇರೆ ಕಡೆಗಳಲ್ಲಿ ಹೋಗಿ ನೆಲೆಸಿದ ಬಳಿಕವೂ ನಮ್ಮ ಅಜ್ಜ ಸುಕ್ರು ಎಂಬವನು ಮಾತ್ರ ಗುಂದಿ ಹಿತ್ತಲಿನಲ್ಲಿಯೇ ಒಂದು ಚಿಕ್ಕ ಜೋಪಡಿಯಲ್ಲಿ ಬಹುಕಾಲದವರೆಗೆ ನೆಲೆಸಿದ್ದಾನೆ ಎಂಬ ಸಂಗತಿಯು ನಾವು ನಾಡುಮಾಸ್ಕೇರಿಗೆ ಬಂದು ವಾಸ್ತವ್ಯ ಹೂಡಿದ ಬಳಿಕವೇ ನಮ್ಮ ಅರಿವಿಗೆ ಬಂದಿತು.
ಗುಂದಿ ಹಿತ್ತಲಿನ ಭೂದಾಖಲೆಗಳಾಗಲೀ, ಭೂಮಿಯ ಒಡೆತನವಾಗಲೀ ಯಾರ ಹೆಸರಿನಲ್ಲಿ ಇವೆ ಎಂಬ ತಿಳುವಳಿಕೆಯೂ ನಮಗಿರಲಿಲ್ಲ. ಆದರೆ ಬೇಡಜ್ಜನ ಎರಡನೆಯ ಮಗ ನಾರಾಯಣ ಎಂಬವನು ಮಾತ್ರ ಗುಂದಿ ಹಿತ್ತಲಿನ ಭೂಕಂದಾಯವನ್ನು ಸರಕಾರಕ್ಕೆ ಭರಣ ಮಾಡುತ್ತ ಹಿತ್ತಲಿನ ಮೇಲ್ವಿಚಾರಣೆ ಮಾಡುತ್ತಿರುವುದರಿಂದ ಕುಟುಂಬದ ಇತರ ಯಾರೂ ಈ ಕುರಿತು ಹೆಚ್ಚಿನ ಯೋಚನೆ ಮಾಡುತ್ತಿರಲಿಲ್ಲ. ಆದರೆ ನಾಡುಮಾಸ್ಕೇರಿಯಲ್ಲೇ ಇದ್ದ ನಮ್ಮ ದಾಯಾದಿ ಬಂಧುವಾದ ನಾರಾಯಣ ಚಿಕ್ಕಪ್ಪನು ಗುಂದಿ ಹಿತ್ತಲಿನಲ್ಲಿದ್ದ ಆರೆಂಟು ತೆಂಗಿನ ಮರಗಳ ಕಾಯಿಗಳನ್ನು ಕುಯ್ಸಿಕೊಂಡು ಮನೆಗೆ ತರುವಾಗಲೂ ಅಲ್ಲಿನ ಒಂದು ಮರದ ಕಾಯಿಗಳನ್ನು ತಪ್ಪದೇ ನಮ್ಮ ಮನೆಗೆ ಮುಟ್ಟಿಸುತ್ತಿದ್ದ.
ನಮ್ಮ ಅವ್ವನ ಮದುವೆಯ ಕಾಲಕ್ಕೆ ತೌರುಮನೆಯವರು ಅವ್ವನಿಗೆ ಬಳುವಳಿಯಾಗಿ ಕೊಡಮಾಡಿದ ತೆಂಗಿನ ಸಸಿಯೊಂದನ್ನು ಗುಂದಿ ಹಿತ್ತಲಿನಲ್ಲಿ ನೆಟ್ಟು ಬೆಳೆಸಿದರೆಂದೂ ಅದು ಈಗ ಮರವಾಗಿ ಕಾಯಿ ಬಿಡುತ್ತದೆ ಎಂದೂ, ನಾರಾಯಣ ಚಿಕ್ಕಪ್ಪನು ಅತ್ತಿಗೆಯ ‘ತೆಂಗಿನ ಮರ’ ಎಂಬ ಗೌರವದಿಂದ ಅದರ ಕಾಯಿಗಳನ್ನು ತಪ್ಪದೇ ತಂದು ಒಪ್ಪಿಸುವನೆಂದೂ, ಅವ್ವ ನಮಗೆಲ್ಲ ಕಥೆಯಂತೆ ವಿವರಿಸಿದ್ದಳು. ಇದರಿಂದಾಗಿ ಗುಂದಿ ಹಿತ್ತಲಿನ ಒಂದೇ ಒಂದು ‘ಅವ್ವನ ಬಳುವಳಿ’ ತೆಂಗಿನ ಮರದ ದೆಸೆಯಿಂದ ಒಂದು ಭಾವನಾತ್ಮಕ ಸಂಬಂಧದ ಬೆಸುಗೆ ನಮಗೆ ಉಳಿದುಕೊಂಡಿತ್ತು.
ಆದರೆ ಗುಂದಿ ಹಿತ್ತಲಿನಲ್ಲಿ ಇನ್ನೂ ವಾಸಿಸುತ್ತಿರುವ ನಮ್ಮ ತಂದೆಯವರ ತಂದೆ ಸುಕ್ರಜ್ಜನ ಕುರಿತು ಈಗ ನಾವು ಯೋಚಿಸಲೇ ಬೇಕಾಯಿತು.
ನೆರೆಯಲ್ಲಿ ಒಂದು ಚಿಕ್ಕ ಹಳ್ಳ, ಸುತ್ತಲೂ ವಿಶಾಲವಾದ ಗದ್ದೆ ಬಯಲು…… ನಿರ್ಜನವಾದ ಒಂಟಿ ಹಿತ್ತಲಿನಲ್ಲಿ ಅಜ್ಜ ಒಬ್ಬನೇ ಚಿಕ್ಕ ಬಿಡಾರದಲ್ಲಿ ಉಳಿದುಕೊಂಡಿದ್ದಾನೆ ಎಂಬುದು ನಮಗೆ ಆತಂಕವನ್ನು ಉಂಟುಮಾಡಿತು. ಏನೊಂದು ತಾಪತ್ರಯವಾದರೂ ಕರೆದರೆ ಯಾರೂ ಬಂದು ಸಹಾಯ ಮಾಡಲಾಗದಂಥ ಸ್ಥಿತಿಯಲ್ಲಿ ಅಜ್ಜನಿದ್ದಾನೆ ಎಂಬುದು ಅರಿವಾದ ಬಳಿಕ ಅಪ್ಪ-ಅಮ್ಮ ನಾವೆಲ್ಲ ಯೋಚಿಸಿ ಗುಂದಿ ಹಿತ್ತಲಿನಿಂದ ಅಜ್ಜನನ್ನು ನಮ್ಮ ಮನೆಗೆ ಕರೆತರಲು ನಿರ್ಧರಿಸಿದೆವು. ನಾವೆಲ್ಲ ಅಲ್ಲಿಗೆ ಹೋಗಿ ಕಷ್ಟಪಟ್ಟು ಮನ ಒಲಿಸಿ ಸುಕ್ರಜ್ಜನನ್ನು ಕರೆತಂದ ಬಳಿಕ ‘ಗುಂದಿ ಹಿತ್ತಲು’ ಅಕ್ಷರಶಃ ನಮ್ಮೆಲ್ಲ ಭಾವುಕ ಸಂಬಂಧಗಳನ್ನು ಕಡಿದುಕೊಂಡು ನಮ್ಮಿಂದ ಸಂಪೂರ್ಣ ಬೇರೆಯಾಯಿತು.
ಸುಕ್ರಜ್ಜ ಗುಂದಿ ಹಿತ್ತಲಿನಿಂದ ಬರುವಾಗ ಪ್ರೀತಿಯಿಂದ ಕಟ್ಟಿಕೊಂಡು ಬಂಧ ಒಂದು ಮಹತ್ವದ ವಸ್ತುವಿದೆ…… ಅದು ಅವನ ಕವಳ ಕುಟ್ಟುವ ಕಲ್ಲು!
ಅವ್ವ ಆಗಾಗ “ಇದು ಅಂತಿಂಥ ವಸ್ತುವಲ್ಲ. ನನ್ನ ಗಂಡನ ಪಿತ್ರಾರ್ಜಿತವಾಗಿ ದೊರೆತ ಕಲ್ಲು” ಎಂದು ಹಾಸ್ಯ ಮಾಡುತ್ತ ಇದ್ದಳು. ಮುಂದೆ ಅವ್ವನ ಈ ಹೇಳಿಕೆಯ ಪ್ರೇರಣೆಯಿಂದಲೇ ನಾನು “ಪಾತಜ್ಜಿಯ ಆಸ್ತಿಕಲ್ಲು” ಎಂಬ ಶೀರ್ಷಿಕೆಯ ಕಥೆಯೊಂದನ್ನು ಬರೆಯುವುದು ಸಾಧ್ಯವಾಯಿತು.
ಈಗ ಸುಕ್ರಜ್ಜನಿಲ್ಲ. ಅವ್ವ ಅದೇ ಕಲ್ಲಿನಲ್ಲಿ ಕವಳ ಕುಟ್ಟಿ ತಿನ್ನುತ್ತ ತನ್ನ ಗಂಡನ ಮನೆಯ ಆಸ್ತಿಯನ್ನು ಜೋಪಾನವಾಗಿರಿಸಿಕೊಂಡಿದ್ದಾಳೆ.
ನಾನು ಊರಿಗೆ ಹೋದಾಗ ನನಗೂ ಕವಳ ಕುಟ್ಟಿಕೊಡುತ್ತ ನಮ್ಮವ್ವನ ಆಸ್ತಿಕಲ್ಲು ಪರಂಪರೆಯನ್ನು ನೆನಪಿಸುತ್ತ ಇದೆ!
************************
ರಾಮಕೃಷ್ಣ ಗುಂದಿ
ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಗುರೂಜಿ,
ನಿಮ್ಮ ವಂಶಸತ್ತರ ಹೆಸರುಗಳು ತುಂಬಾ ಚೆನ್ನಾಗಿವೆ. ಓದುವಾಗ ಹೆಮ್ಮೆ ಎನಿಸುತ್ತದೆ. ನಿಮ್ಮ ತಾತನ ಹೆಸರು ಸುಕ್ರಜ್ಜ ತುಂಬಾ ಸುಂದರ. ನಿಮ್ಮ ತಾಯಿ ಇಟ್ಟಿರುವ ಆಸ್ತಿಕಲ್ಲು ನಿಮಗೆಲ್ಲರಿಗೂ ನೆನಪು ಶಾಶ್ವತ W. O.W amazing family history……
ಮುಂದುವರಿದ ಸಂಚಿಕೆ ಎದುರಾಗಿರುವೆ….
ಸರ,
ಹಿರಿಯರ ನೆನಪಿನ ಬುತ್ತಿ ಬಿಚ್ಚಿ ಇಡುತ್ತಿದ್ದೀರಾ, ಓದುವ ಕುತೂಹಲದಿಂದ ಕಾಯುವಂತಾಗಿದೆ.
ನಿಮ್ಮ ನೆನಪಿನ ಅಂಗಳದಲ್ಲಿ ಇನ್ನೆಷ್ಟು ವಿಚಾರಗಳಿವೆ ಅದನ್ನು ಮುಂದಿನ ದಿನಗಳಲ್ಲಿ ನಮಗೆ ಓದಲು ಸಿಗುವಂತಗಲಿ.