ಕವಿತೆ
ಆಪ್ತೇಷ್ಟರು
ಪುಷ್ಪಾ ಮಾಳ್ಕೊಪ್ಪ
ನರನಲ್ಲದೇ ಮರವ ನಿಂದಿಪರೇ
ಯನ್ನ ನಿತ್ಯ ನಿಂದಿಪರು ಬೇಕು
ಅವರೇ ಯನ್ನ ಆಪ್ತರು ಕಾಣಾ
ಅನ್ಯರನಲ್ಲದೇ ಲೋಕದಿ ತನ್ನಾಡಿಕೊಂಬರೇ
ಅಡಿಗಡಿಗೆ ಯನ್ನ ಆಡಿಕೊಂಬರು ಬೇಕು
ಅವರೆನ್ನತ್ಯಾಪ್ತರು ಕಾಣಾ
ಕಡುಗೋಪವಿಲ್ಲದೆಯೆ ಜಗದಿ ಜರಿಯುವರೇ
ಯನ್ನ ಜನುಮಕಾಗುವಷ್ಟು ಜರಿಯುವರು ಬೇಕು
ಅವರೆನ್ನ ಜೀವಬಂಧುಗಳು ಕಾಣಾ
ಹೀನಾಯದಿಂ ಕಾಣದೇ ಎನ್ನ ಹಿತವಪ್ಪುದೆ ಮರುಳೆ
ಹಿತವಪ್ಪುದು ಅವರಿಂದೆ ಅವರೆನ್ನ ಹರಸಿದವರು ಕಾಣಾ
ಛೀ ಥೂ ಎಂದರಲ್ಲವೇ ಶ್ವಾನದಿಂ ತೆರದಿ
ಎನ್ನ ತುಚ್ಛೀಕರಿಸುವರು ಬೇಕು
ಅವರೆನ್ನ ತಾಳ್ಮೆಯಂ ಹೆಚ್ಚಿಸಿದವರು ಕಾಣಾ
ಕುಟುಕಿದವರಲ್ಲವೇ ಎನ್ನ ಕಣ್ಣತೆರೆಸಿದವರು
ಕುಟುಕತನವದು ಬೇಕು
ಅವರೆನ್ನ ನಿದ್ದೆಯಿಂ ಎಬ್ಬಿಸಿದವರು ಕಾಣಾ
ಖಂಡಿಸಿದವರೆನ್ನ ವಿಷಯ ಮಂಡಿಸಿದವರು
ಖಡಾಖಂಡಿತವು ಬೇಕು
ಅವರೆನ್ನ ಕಂಠಸ್ಥರಯ್ಯಾ
ಇವರಲ್ಲವೇ ಎನ್ನ ತಿದ್ದಿ ತೀಡುವವರು
ಬಂದುದೆದುರಿಸುವುದ ಕಲಿಸುವವರು
ಬದುಕ ಕಲಿಸುವವರು.
***************