ದಾರಾವಾಹಿ

ಆವರ್ತನ

ಅಧ್ಯಾಯ: 17

What is Abstract Art?

ಏಕನಾಥರು, ಶಂಕರನ ಜಮೀನು ನೋಡಲು ಅವನೊಂದಿಗೆ ಹೊರಟಿದ್ದರು. ಶಂಕರ ತನ್ನ ಜಾಗದಲ್ಲಿ ಉದ್ಭವಿಸಿದ ನಾಗನ ಸಮಸ್ಯೆಗೆ ಪರಿಹಾರ ಮಾರ್ಗೋಪಾಯದ ಕುರಿತು ದಾರಿಯುದ್ದಕ್ಕೂ ಏಕನಾಥರೊಡನೆ ಕೆದಕಿ ಕೆದಕಿ ಪ್ರಶ್ನಿಸುತ್ತ ತನ್ನ ಭಯವನ್ನು ನಿವಾರಿಸಿಕೊಳ್ಳಲು ಹೆಣಗುತ್ತ ಕಾರು ಚಲಾಯಿಸುತ್ತಿದ್ದ. ಆದರೆ ಏಕನಾಥರು ಅತೀವ ಚಾಣಾಕ್ಷರು. ಅವರು, ಅವನ ಒಂದೊಂದು ಪ್ರಶ್ನೆಗೂ ಬಹಳವೇ ಯೋಚಿಸಿ ಪರಿಹಾರ ಸೂತ್ರವನ್ನು ಮರೆಮಾಚಿಯೇ ಉತ್ತರಿಸುತ್ತ, ಏನನ್ನೋ ಗಂಭೀರವಾಗಿ ಯೋಚಿಸುತ್ತ ಸಾಗುತ್ತಿದ್ದರು. ಕಾರಣ, ಅವರ ತಲೆಯೊಳಗೆ ಹೊಸ ಯೋಜನೆಯೊಂದು ರೂಪಗೊಳ್ಳುತ್ತಿತ್ತು.

   ‘ಬಹುಶಃ ಇಷ್ಟರವರೆಗಿನ ತಮ್ಮ ಗುಲಾಮಗಿರಿಯ ಬದುಕು ಇಂದಿಗೆ ಮುಕ್ತಾಯಗೊಂಡು ಸ್ವತಂತ್ರ ಜೀವನದ ಹೆಬ್ಬಾಗಿಲು ತೆರೆಯುತ್ತಿದೆ. ಆ ಅವಕಾಶವು ಇವನ ಮೂಲಕವೇ ತಮ್ಮನ್ನು ಹುಡುಕಿ ಬಂದಿರುವುದು ಖಚಿತವಾಗಿದೆ. ಈ ಒಂದು ಕಾರ್ಯವನ್ನು ತಾವು ಯಶಸ್ವಿಯಾಗಿ ನಡೆಸಿಕೊಟ್ಟೆವೆಂದರೆ ಆಮೇಲೆ ತಮ್ಮ ಅದೃಷ್ಟ ಕುಲಾಯಿಸಿದಂತೆಯೇ ಸರಿ! ಮುಂದಿನ ನಾಲ್ಕೈದು ವರ್ಷದೊಳಗೆ ಒಳ್ಳೆಯ ಸಂಪಾದನೆ ಕುದುರುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಇವತ್ತು ತಾವು ಇವನ ಸಮಸ್ಯೆಯ ಎಳೆಎಳೆಯನ್ನೂ ಸೂಕ್ಷ್ಮವಾಗಿ ಅವಲೋಕಿಸಿ ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು. ಇವನೂ ಒಳ್ಳೆಯ ಮನುಷ್ಯನೇನೂ ಅಲ್ಲ. ಎಷ್ಟೋ ಬಡವರ, ಅಮಾಯಕರ ಮಂಡೆ ಹೊಡೆದೇ ಮೇಲೆ ಬಂದವನು. ಇಂಥವರೊಂದಿಗೆ ವ್ಯವಹರಿಸುವಾಗ ಸ್ವಲ್ಪ ವ್ಯಾಪಾರದ ನಾಟಕವಾಡುವುದರಲ್ಲಿ ತಪ್ಪೇನಿಲ್ಲ. ಯಾಕೆಂದರೆ ನಮಗೂ ಸಂಸಾರವಿದೆ ಮತ್ತೆ ಅದಕ್ಕೊಂದು ಭವಿಷ್ಯವೂ ಇದೆಯಲ್ಲವಾ! ಅದಕ್ಕಾಗಿಯಾದರೂ ತಾವು ಬುದ್ಧಿವಂತಿಕೆಯಿಂದ ಮುಂದುವರೆಯಬೇಕು. ‘ಒಂದು ಶುಭಕಾರ್ಯಕ್ಕೆ ನೂರೆಂಟು ವಿಘ್ನಗಳಂತೆ. ಅವನ್ನೆಲ್ಲ ಮೀರಿ ಕಾರ್ಯಸಿದ್ಧಿಗೆ ಹೊರಟಾಗ ಸಣ್ಣಪುಟ್ಟ ತಪ್ಪು ಒಪ್ಪುಗಳು ನಡೆಯುವುದೂ ಸಹಜವೇ!’ ಎಂದು ಪೆದುಮಾಳರು ಹೇಳುತ್ತಿದ್ದುದು ನೆನಪಿದೆ. ಆದರೂ ತಮ್ಮ ಕಾಯಕದಲ್ಲಿ ತಾವು ವಿವೇಕದಿಂದ ವರ್ತಿಸಬೇಕು. ಎಂದಿಗೂ ಇವನಂಥ ದುರಾಸೆಯ ಮನುಷ್ಯನಾಗಬಾರದು. ತಾವು ನಂಬಿದ ದೈವ ದೇವರುಗಳು ಮೆಚ್ಚುವಂತೆಯೇ ನಡೆದುಕೊಳ್ಳಬೇಕು. ತಮ್ಮನ್ನು ನಂಬಿ ಬಂದವರಿಗೆ ಒಳ್ಳೆಯದಾಗುವಂತೆಯೇ ವ್ಯವಹರಿಸಬೇಕು. ಹಾಗೆ ಬದುಕಿದರೆ ಯಾವ ದೋಷವೂ ತಟ್ಟುವುದಿಲ್ಲ! ಎಂದು ನಿರ್ಧರಿಸಿದ ಏಕನಾಥರು ತಮ್ಮ ಚಿಂತನೆಗೆ ಮಂಗಳ ಹಾಡುವಷ್ಟರಲ್ಲಿ ಶಂಕರನ ಕಾರು ಶೀಂಬ್ರಗುಡ್ಡೆಯನ್ನು ದಾಟಿ ಸಣ್ಣ ಬೆಟ್ಟವೊಂದನ್ನೇರಿ ಬಾಕುಡಗುಡ್ಡೆಯನ್ನು ತಲುಪಿತು. ಅಲ್ಲಿನ ಕೊರಕಲು ಮಣ್ಣಿನ ರಸ್ತೆಯನ್ನು ಹಿಡಿದು ಮತ್ತಷ್ಟು ದೂರ ಸಾಗಿದ ನಂತರ ಒಂದು ಕಡೆ ಬಲಕ್ಕೆ ತಿರುಗಿ ವಿಶಾಲವಾದೊಂದು ಕುರುಚಲು ಕಾಡಿನ ಸಮೀಪ ಹೋಗಿ ನಿಂತಿತು.

ಏಕನಾಥರು ಕಾರಿನಿಂದ ಇಳಿದವರು ಎದುರಿನ ಪ್ರದೇಶದ ಮೇಲೊಂದು ಪಕ್ಷಿನೋಟವನ್ನು ಬೀರುತ್ತ ನಿಂತರು. ಆ ವಿಶಾಲವಾದ ಜಮೀನಿನ ಮುಕ್ಕಾಲು ಭಾಗದ ಕಾಡುಗುಡ್ಡಗಳನ್ನು ಕಡಿದು ಜರಿದು ನಿನಾರ್ಮಗೊಳಿಸಲಾಗಿತ್ತು. ಕೆಲವೇ ತಿಂಗಳುಗಳ ಹಿಂದಷ್ಟೇ ಪಶ್ಚಿಮಘಟ್ಟದ ಒಂದು ಬೃಹತ್ ತುಣುಕಿನಂತೆ ಹಚ್ಚಹಸುರಾಗಿ ನಳನಳಿಸುತ್ತಿದ್ದ ಆ ಅರಣ್ಯವನ್ನೂ ಅಲ್ಲಿನ ಅಸಂಖ್ಯಾತ ಸ್ಥೂಲ ಮತ್ತು ಸೂಕ್ಷ್ಮ ಜೀವರಾಶಿಗಳನ್ನೂ ಜೆಸಿಬಿ, ಹಿಟಾಚಿ ಹಾಗೂ ಬುಲ್‍ಡೋಜರ್‍ಗಳಂಥ ರಾಕ್ಷಸ ಯಂತ್ರಗಳೂ, ಜನರೂ ಕೂಡಿ ಧ್ವಂಸಗೊಳಿಸಿಬಿಟ್ಟಿದ್ದರು. ಅಷ್ಟಲ್ಲದೇ ಆ ಕೆಲಸವಿನ್ನೂ ಚಾಲ್ತಿಯಲ್ಲಿತ್ತು! ಹಾಗಾಗಿ ಆ ಪರಿಸರವೂ ಅಲ್ಲಿನ ವಾತಾವರಣವೂ ಸುಡುಗಾಡಿನಂತೆ ಬಣಗುಟ್ಟುತ್ತಿತ್ತು. ಸಂಜೆಯ ಹೊಂಬಣ್ಣದ ಸೂರ್ಯನ ತಂಪಾದ ಕಿರಣಗಳ ನಡುವೆಯೂ ಆ ಭೂಮಿಯು ಬಿಸಿಯೇರಿ ನರಳುತ್ತಿತ್ತು. ರಭಸದಿಂದ ಏಳುತ್ತಿದ್ದ ಒಣಹವೆಯು ಆಕಾಶದೆತ್ತರಕ್ಕೆ ಕೆಂಧೂಳನ್ನೆಬ್ಬಿಸುತ್ತ ಅಲ್ಲಿನ ವಾತಾವರಣವನ್ನು ತೀವ್ರ ಕಲುಷಿತಗೊಳಿಸಿತ್ತು. ಆ ದೃಶ್ಯವನ್ನು ಗಮನಿಸಿದರೆ, ಮುಂದೊಂದು ದಿನ ಆ ಪ್ರದೇಶದಲ್ಲಿ ಉಂಟಾಗಬಹುದಾದ ವಿವಿಧ ರೂಪದ ಪ್ರಕೃತಿ ವಿಕೋಪದ ಸ್ಪಷ್ಟ ಮುನ್ಸೂಚನೆಯಂತಿತ್ತು.

   ಶತಮಾನಗಳಿಂದಲೂ ತಮ್ಮ ಸಂತತಿಯನ್ನು ಆ ಮಳೆಕಾಡಿನೊಳಗೆಯೇ ಸೃಷ್ಟಿಸಿ ಬೆಳೆಸುತ್ತ ಪರಿಸರಸ್ನೇಹಿಗಳಾಗಿ, ಸಮೃದ್ಧವಾಗಿ ಬಾಳಿ ಬದುಕಿದ ನೂರಾರು ಪಕ್ಷಿಸಂಕುಲಗಳಿಂದು ಶಂಕರನ ಅಭಿವೃದ್ಧಿ ಮತ್ತು ನಗರೀಕರಣದ ಧಾವಂತಕ್ಕೆ ಬಲಿಯಾಗಿ ತಮ್ಮ ನೆಲೆಗಳನ್ನು ಶಾಶ್ವತವಾಗಿ ಕಳೆದುಕೊಂಡು ಅನಾಥವಾಗಿಬಿಟ್ಟಿದ್ದವು. ಆದರೂ ಆ ಕಹಿ ಸತ್ಯವನ್ನು ತಿಳಿಯಲಾರದ ಅವುಗಳು ಸಂಜೆಯಾಗುತ್ತಲೇ ಅಳಿದುಳಿದ ಮರಗಿಡಗಳಲ್ಲಿ ವಿಶ್ರಮಿಸಿ ರಾತ್ರಿ ಕಳೆಯಲು ಹೆಣಗುತ್ತಿದ್ದವು. ಅಲ್ಲೂ ಸ್ಥಳಾವಕಾಶ ಸಾಲದೆ ಸೋತು ಆಕಾಶದ ತುಂಬೆಲ್ಲಾ ಹಾರಾಡುತ್ತ ಅತೀವ ವಿಚಲಿತತೆಯಿಂದ ಅರಚುತ್ತ ತಮ್ಮ ತಮ್ಮೊಳಗೇ ಕಚ್ಚಾಡಿಕೊಂಡು ಬಳಲುತ್ತಿದ್ದ ದೃಶ್ಯವು ಅಲ್ಲಿನ ಯಾವ ಮನುಷ್ಯರಲ್ಲೂ ಕನಿಕರ ಅನುಕಂಪವನ್ನು ಮೂಡಿಸದಿದ್ದುದು ಆ ಮನುಷ್ಯರೊಳಗಿನ ಅಮಾನವೀಯತೆಯನ್ನು ಬಿಂಬಿಸುತ್ತಿತ್ತು.

   ಅನಾದಿಕಾಲದಿಂದಲೂ ತಮ್ಮನ್ನಾಶ್ರಯಿಸಿದ ಮೂಕ ಜೀವರಾಶಿಗಳಿಗೂ, ಮೇಲಾಗಿ ಮನುಷ್ಯರಿಗೂ ಮಮತೆಯ ತೊಟ್ಟಿಲಿನಂತಿದ್ದ ದೈತ್ಯ ಮರಗಿಡಗಳು ಮತ್ತು ಅವುಗಳನ್ನು ಪ್ರೀತಿ, ವಿಶ್ವಾಸದಿಂದ ಅಪ್ಪಿಕೊಂಡು ಬೆಳೆದಿದ್ದ ವಿವಿಧ ಔಷಧಿಯ ಬಳ್ಳಿಗಳು ತಂತಮ್ಮ ಅವಯವಗಳನ್ನು ಕ್ರೂರವಾಗಿ ಕತ್ತರಿಸಲ್ಪಟ್ಟು, ಎಳೆದು ಸೀಳಲ್ಪಟ್ಟು, ಬುಡ ಸಮೇತ ಕೀಳಲ್ಪಟ್ಟು, ಅಪಘಾತಕ್ಕೀಡಾಗಿ ರಸ್ತೆಯ ನಟ್ಟನಡುವೆ ನರಳಿ ಸತ್ತ ಮೂಕ ನಾಯಿ, ನರಿ, ಬೆಕ್ಕುಗಳಂತೆಯೂ ಹಾಗೂ ಇನ್ನು ಕೆಲವು ಅರೆಜೀವಾವಸ್ಥೆಯಲ್ಲಿ ಒದ್ದಾಡುತ್ತಿರುವಂತೆಯೂ ಭಾಸವಾಗುತ್ತಿದ್ದವು. ನಿಸರ್ಗದ ನಡುವೆ ಸರಳವಾಗಿ ಬಾಳಿ ಬದುಕುವ ಯಾವ ಜೀವರಾಶಿಗಳೇ ಆಗಲಿ ಅತ್ತ ಸುಳಿಯಲಾರದಷ್ಟು ಆ ಪ್ರದೇಶವು ಶುಷ್ಕ, ರಣಭೂಮಿಯಂತೆ ಕಾಣುತ್ತಿತ್ತು.

   ಏಕನಾಥರು ಆ ದೃಶ್ಯವನ್ನೆಲ್ಲ ದೀರ್ಘವಾಗಿ ಮತ್ತು ಸೂಕ್ಷ್ಮವಾಗಿ ಗಮನಿಸುತ್ತ ಮುನ್ನಡೆದರು. ಆದರೆ ಆ ಭೀಕರತೆಯನ್ನು ಕಾಣುತ್ತ ಹೋದವರಿಗೆ ನಿಧಾನವಾಗಿ ತಮ್ಮ ದೇಹದೊಳಗೆ ಯಾರೋ ಒರಟು ಕೈಗಳನ್ನು ತೂರಿಸಿ ಹೃದಯವನ್ನು ಬಲವಾಗಿ ಹಿಂಡಿದಂಥ ವೇದನೆ, ವಿಷಾದ ಹುಟ್ಟಿತು. ಜೊತೆಗೆ ತಮ್ಮ ತೀಕ್ಷ್ಣ ಬುದ್ಧಿಗೂ ನಿಲುಕದಂಥ ಹತಾಶಾಭಾವವೊಂದು ಮೊಳೆತು ಮೈಯಿಡೀ ತಣ್ಣನೆ ಬೆವರುತ್ತ ಉಸಿರುಗಟ್ಟಿದಂತಾಯಿತು. ಮರುಕ್ಷಣ ‘ಛೇ, ಛೇ! ಎಂಥ ಭಯಂಕರ ದೃಶ್ಯವಿದು! ಪ್ರಕೃತಿಯ ಮೇಲೆ ಮನುಷ್ಯನೊಬ್ಬ ಈ ಮಟ್ಟಕ್ಕೆ ಅತ್ಯಾಚಾರ ಎಸಗುವುದೆಂದರೇನು…? ಇಂಥ ಕೆಟ್ಟ ಕರ್ಮದಲ್ಲಿ ತಾವೂ ಭಾಗಿಯಾಗುವುದು ಸರಿಯೇ…?’ ಎಂದು ಅವರ ಅಂತರಾತ್ಮವು ಚೀರಿ ಕೇಳಿದಂತಾಯಿತು. ಮುಂದೇನೂ ಹೊಳೆಯದೆ ಅಶಾಂತರಾಗಿಬಿಟ್ಟರು. ಆದರೆ ಅಷ್ಟರಲ್ಲಿ ಅವರ ಸಂಸಾರವು ಅನುಭವಿಸುತ್ತಿದ್ದ ದಟ್ಟದಾರಿದ್ರ್ಯವೂ ಅದನ್ನು ನಿವಾರಿಸಲಾಗದ ಅವರ ದೌರ್ಬಲ್ಯವೂ ಕಣ್ಣೆದುರು ಬಂದು ಕುಣಿಯಿತು. ಆಗ ಅವರಲ್ಲಿ ಈ ಮೊದಲು ಉದ್ಭವಿಸಿದ್ದ ಆರ್ಧ್ರ ಭಾವನೆಯು ತಟ್ಟನೆ ಮುದುಡಿ ಮನಸ್ಸಿನಾಳಕ್ಕಿಳಿದು ಮರೆಯಾಯಿತು. ಹಾಗಾಗಿ ಅಂಥ ಯೋಚನೆಗಳು ತಮ್ಮ ಮನೋದೌರ್ಬಲ್ಯದ ಸೂಚನೆಯೆಂದು ಭಾವಿಸಿದ ಅವರು ಕೂಡಲೇ ತಮ್ಮ ವ್ಯಾವಹಾರಿಕ ಬುದ್ಧಿಯನ್ನು ಚುರುಕುಗೊಳಿಸಿ ಬಂದ ಕೆಲಸದತ್ತ ಗಮನ ಹರಿಸಿದರು.

   ಏಕನಾಥರಂತೆ ಶಂಕರನೂ ತನ್ನ ಜಮೀನನ್ನು ನೋಡುತ್ತ ನಡೆಯುತ್ತಿದ್ದ. ಆದರೆ ಅವನಿಗೆ ಅಲ್ಲಿ ತನ್ನಿಂದಾಗಿಯೇ ಕಲುಷಿತಗೊಂಡ ವಾತಾವರಣವಾಗಲಿ, ಅತಂತ್ರಗೊಂಡ ಜೀವರಾಶಿಗಳಾಗಲಿ ಅಥವಾ ತಮ್ಮ ಅವಯವಗಳನ್ನು ಸೀಳಿಸಿಕೊಂಡು ಕುರೂಪವಾಗಿ ಬಿದ್ದಿದ್ದ ಮರಗಿಡ ಬಳ್ಳಿಗಳಾಗಲಿ ಕಾಣುತ್ತಿರಲಿಲ್ಲ. ಬದಲಿಗೆ ಅವನ ಮನಸ್ಸು, ಮುಂದೆ ಅಲ್ಲಿ ತನ್ನಿಂದ ನಿರ್ಮಾಣಗೊಳ್ಳಲಿರುವ ಬಹುಮಹಡಿ ಕಟ್ಟಡಗಳು ಮತ್ತು ಶ್ರೀಮಂತ ಬಂಗಲೆಗಳು ಬೃಹದಾಕಾರವಾಗಿ ತಲೆಯೆತ್ತಿ ನಿಲ್ಲುತ್ತಿರುವಂತೆಯೂ ಆ ಮೂಲಕ ತಾನು ಹಾಗೂ ತನ್ನ ಮುಂದಿನ ಹಲವಾರು ತಲೆಮಾರುಗಳು ಆಗರ್ಭ ಸಿರಿವಂತಿಕೆಯಿಂದ ಮೆರೆದಾಡುವಂತೆಯೂ ಕಲ್ಪಿಸಿಕೊಳ್ಳುತ್ತ ಪುಳಕಿತಗೊಳ್ಳುತ್ತಿತ್ತು. ಅದೇ ಹೆಮ್ಮೆಯಿಂದ ನಡೆಯುತ್ತಿದ್ದವನು, ‘ನೋಡಿ ಗುರೂಜೀ, ಇದೇ ನನ್ನ ಜೀವಮಾನದ ದೊಡ್ಡ ಸಾಧನೆ!’ ಎಂದ ಗರ್ವದಿಂದ.

   ‘ಹ್ಞೂಂ, ಹ್ಞೂಂ, ಪರ್ವಾಗಿಲ್ಲ ಮಾರಾಯಾ ನೀನೂ ಸಣ್ಣ ಕುಳವೇನಲ್ಲ! ಈ ವ್ಯವಹಾರದಲ್ಲಿ ನೀನು ಇಷ್ಟೊಂದು ಹುಷಾರಿನವನೂ ಮತ್ತು ದೂರಾಲೋಚನೆ ಇರುವವನೂ ಎಂದರೆ ನಮಗೆ ನಂಬಲಿಕ್ಕೇ ಆಗುವುದಿಲ್ಲ! ನಮ್ಮ ಚೆನ್ನಮಣೆ ಆಟ ಗೊತ್ತುಂಟಲ್ಲವಾ ನಿಂಗೆ? ಅದರ ಮಾತಿನಂತೆ, ‘ಹೊಡೆದರೆ ಪೆರ್ಗವನ್ನೇ ಹೊಡೆಯಬೇಕು!’ ಅನ್ನುವುದನ್ನು ನೀನು ನಿಜ ಮಾಡಿಬಿಟ್ಟಿದ್ದಿ ನೋಡು!’ ಎಂದು ಏಕನಾಥರು ಅವನನ್ನು ಅಟ್ಟಕೇರಿಸಿದರು. ಅದರಿಂದ ಶಂಕರ ಮತ್ತಷ್ಟು ಉಬ್ಬಿದವನು ನಗುತ್ತ ಮುಂದೆ ಸಾಗಿದ. ಆದರೂ ಆ ಪ್ರದೇಶದೊಳಗಿನ ಪುರಾತನ ನಾಗಬನವನ್ನೂ ತುಳುನಾಡಿನ ದೈವಗಳ ನೆಲೆಗಳನ್ನೂ ತಾನು ಧ್ವಂಸ ಮಾಡಿದ್ದುದರ ತೀವ್ರ ಭಯವೊಂದು ಅವನನ್ನು ಅಡಿಗಡಿಗೂ ಕಾಡುತ್ತ ಹಿಂಸಿಸುತ್ತಿತ್ತು. ಅದನ್ನು ಹತ್ತಿಕ್ಕಿಕೊಳ್ಳುತ್ತ ಒಂದಷ್ಟು ದೂರ ದಾಪುಗಾಲು ಹಾಕಿದವನು ಅಲ್ಲೊಂದು ಕಡೆ ಇನ್ನೂ ಉಳಿದಿದ್ದ ಸಣ್ಣದೊಂದು ಹಾಡಿಯತ್ತ ಏಕನಾಥರನ್ನು ಕರೆದೊಯ್ದ. ಅಲ್ಲಿ ಕೆಲವು ಜೆಸಿಬಿ ಯಂತ್ರಗಳು ರೋಷಗೊಂಡ ಘೇಂಡಾಮೃಗಗಳಂತೆ ಆಕ್ರಮಣಕ್ಕೆ ಸಿದ್ಧವಾಗಿ ನಿಂತಿದ್ದವು. ಆದರೆ ಅವು ತಮ್ಮನ್ನು ಚಲಾಯಿಸುವವರಲ್ಲಿ ಹುಟ್ಟಿದ ನಾಗದೋಷದ ಭೀತಿಗೆ ತಾವೂ ಮಣಿದು ತಮ್ಮ ಹುಟ್ಟುಗುಣವನ್ನು ಹತ್ತಿಕ್ಕಿಕೊಂಡು ಮರಳಿ ಯಾವಾಗ ತಮ್ಮ ವಿಧ್ವಂಸಕ ಕೃತ್ಯಕ್ಕೆ ಚಾಲನೆ ದೊರಕೀತೋ…? ಎಂದು ಕಾಯುತ್ತಿದ್ದುದು ಅಲ್ಲಿನ ಒಂದಷ್ಟು ಜಾಗದಲ್ಲಿ ಅಳಿದುಳಿದಿದ್ದ ಜೀವರಾಶಿಗಳಿಗೂ ಮರಗಿಡ ಬಳ್ಳಿಗಳಿಗೂ ಸೂಕ್ಷ್ಮವಾಗಿ ತಿಳಿಯುತ್ತಿತ್ತು. ಆದ್ದರಿಂದ ಅವು ತಮ್ಮ ಅಂತ್ಯಕಾಲವನ್ನು ದುಃಖದಿಂದ ಎದುರು ನೋಡುತ್ತ ಕ್ಷೀಣವಾಗಿ ಉಸಿರಾಡಿಕೊಂಡಿದ್ದವು.

   ಶಂಕರ ತಾನು ಕಡಿದುರುಳಿಸಿದ್ದ ಹತ್ತಾರು ಮರಗಳನ್ನು ಹಾರಿ ನೆಗೆದು ದಾಟುತ್ತ ಒಂದು ಕಡೆ ಧೂಪ, ರೆಂಜೆ, ಸುರಗಿ, ಹೊನ್ನೆ ಮತ್ತು ಹಾಲೆಮರಗಳಿದ್ದ ಜಾಗಕ್ಕೆ ಏಕನಾಥರನ್ನು ಕರೆದೊಯ್ದ. ಆ ಮರಗಳ ನಾಲ್ಕು ಸುತ್ತಲೂ ಮುರಗಲ್ಲಿನಿಂದ ಕಟ್ಟಿದ ಸುಮಾರು ಎರಡಡಿಯಷ್ಟು ಎತ್ತರದ ಹಳೆಯ ಆವರಣವಿತ್ತು. ಅದರೊಳಗೊಂದು ವಿಶಾಲವಾದ ಚಚ್ಚೌಕದ ಮತ್ತು ಸ್ವಲ್ಪ ಎತ್ತರದ ಪೀಠವಿತ್ತು. ಆ ಪೀಠದ ಮೇಲೆ ಮತ್ತು ಅದರ ಸುತ್ತಮುತ್ತಲೂ ಅನೇಕ ಜಾತಿಯ ಮರಗಳು ಅವುಗಳ ಬೇರುಗಳು ಹಾಗೂ ಗಿಡಗಂಟಿ, ಪೊದೆಗಳು ಬೆಳೆದು ನಿಂತಿದ್ದವು. ಅದರಿಂದ ಆ ಪೀಠವು ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಆ ಬಿರುಕಿನೆಡೆಗಳಲ್ಲೂ ಅನೇಕ ಕುಬ್ಜವೃಕ್ಷಗಳು ಹುಟ್ಟಿ ಬೆಳೆದು ಜೀವಂತಿಕೆಯಿಂದ ನಳನಳಿಸುತ್ತಿದ್ದವು. ಆದರೆ ಜೆಸಿಬಿಯಿಂದ ಬಗೆದ ರಭಸಕ್ಕೆ ಪೀಠದ ಒಂದು ಭಾಗವು ಒಡೆದು ಪುಡಿಪುಡಿಯಾಗಿತ್ತು. ಅದರಲ್ಲಿ ದೈವದ ಕುರುಹುಗಳಾಗಿ ಸ್ಥಾಪಸಿಲಾಗಿದ್ದ ಸುಮಾರು ಮೂರು ನಾಲ್ಕು ಶತಮಾನಗಳಷ್ಟು ಪುರಾತನವಾದ ಕೆಲವು ಮುರಕಲ್ಲುಗಳು ಮತ್ತು ನಾಗನಕಲ್ಲುಗಳು ಸ್ವಸ್ಥಾನದಿಂದ ಕಿತ್ತು ಹೊರಗೆ ಎಸೆಯಲ್ಪಟ್ಟು ಅನಾಥವಾಗಿ ಬಿದ್ದಿದ್ದವು. ಆ ಕೆಲವು ಶಿಲೆಗಳ ಮೇಲೆ ಹೆಡೆ ಬಿಚ್ಚಿ ಬಾಲದ ತುದಿಯಲ್ಲಿ ನಿಂತ ನಾಗಿಣಿಯ ಚಿತ್ತಾರದ ಕೆತ್ತನೆಯೂ ಅದರ ಬಾಲದಿಂದ ನಡು ಶರೀರದವರೆಗೆ ದುಂಡಗಿನ ಮೊಟ್ಟೆಗಳ ಚಿತ್ತಾರಗಳೂ ಇದ್ದವು. ಇನ್ನು ಹಲವದರಲ್ಲಿ ಜೋಡಿ ನಾಗರಗಳ ಮಿಥುನ ಶಿಲ್ಪಗಳನ್ನೂ ಕೆಲವದರಲ್ಲಿ ಗಂಭೀರ ಹೆಡೆಯುಳ್ಳ ನಾಗರಾಜನನ್ನೂ ಮತ್ತು ‘ಪವಿತ್ರ ಗಂಟು’ ಹೆಣೆದ ನಾಗರ ಚಿತ್ತಾರಗಳನ್ನೂ ಕಲಾತ್ಮಕವಾಗಿ ಕೆತ್ತಲಾಗಿತ್ತು. ಅಂಥ ಕೆಲವು ಕಲ್ಲುಗಳು ಯಂತ್ರಗಳ ಹೊಡೆತಕ್ಕೆ ಸಿಲುಕಿ ಒಡೆದು ಪುಡಿಯಾಗಿದ್ದವು. ಏಕನಾಥರು ಅವನ್ನೆಲ್ಲ ಯೋಚನಾಗ್ರಸ್ತರಾಗಿ ಪರೀಕ್ಷಿಸತೊಡಗಿದವರು ಪದೇಪದೇ ತಮ್ಮ ಮುಖದಲ್ಲಿ ಭಯ ಮತ್ತು ವಿಷಾದವನ್ನು ಪ್ರಕಟಿಸುತ್ತ ಆ ಸ್ಥಳಕ್ಕೊಂದು ದೊಡ್ಡ ಸುತ್ತು ಹೊಡೆದರು. ಅವರ ಆಗಿನ ಮುಖಭಾವವನ್ನೂ ಅದಕ್ಕೆ ತಕ್ಕಂತೆ ಬದಲಾಗುತ್ತಿದ್ದ ಅವರ ವರ್ತನೆಯನ್ನೂ ನೋಡುತ್ತಿದ್ದ ಶಂಕರನೊಳಗಿನ ಆತಂಕವೂ ಇಮ್ಮಡಿಯಾಗುತ್ತಿತ್ತು. ಅದೇ ಚಡಪಡಿಕೆಯಿಂದ ಅವನು ಪದೇಪದೇ ಉಗುರುಕಚ್ಚಿ ಉಗಿಯುತ್ತಿದ್ದವನು, ಅಯ್ಯೋ ದೇವರೇ…! ಈ ದರ್ವೇಶಿ ಏಕನಾಥ ನಾನು ಸೂಚಿಸಿದ ಕೆಲಸ ಮಾಡುವುದನ್ನು ಬಿಟ್ಟು ನನ್ನ ಮನೆಮಠ ಲಗಾಡಿ ತೆಗೆಯುವ ಉಪಾಯವನ್ನೇ ಹೂಡುತ್ತಿದ್ದಾನೋ ಏನೋ…?’ ಎಂದು ತಳಮಳಿಸುತ್ತಿದ್ದ. ಆದರೆ ಅತ್ತ ಏಕನಾಥರೂ ಶಂಕರನ ಅಶಾಂತಿಯನ್ನು ಗಮನಿಸುತ್ತಲೇ ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು.

   ಸುಮಾರು ಹೊತ್ತಿನವರೆಗೆ ಆ ಪ್ರದೇಶವನ್ನೂ ಅಲ್ಲಿ ಹಾನಿಗೊಂಡಿದ್ದ ನಾಗ, ಪರಿವಾರ ದೈವಗಳ ಪೀಠವನ್ನೂ ಬೇರೆ ಬೇರೆ ದೃಷ್ಟಿಕೋನಗಳಿಂದ ವಿಶ್ಲೇಷಿಸಿದ ಏಕನಾಥರು, ಕೊನೆಯಲ್ಲಿ ತಮ್ಮೊಳಗಿನ ಲೆಕ್ಕಾಚಾರಕ್ಕೂ ಒಂದು ಸ್ಪಷ್ಟರೂಪವನ್ನು ಕೊಟ್ಟುಕೊಂಡರು. ಬಳಿಕ ಆ ಜಾಗದಿಂದ ತಟ್ಟನೆ ಹೊರಗೆ ಬಂದುಬಿಟ್ಟರು. ಒಮ್ಮೆ ನಾಲ್ಕು ದಿಕ್ಕುಗಳನ್ನೂ ಮತ್ತು ಸಂಜೆಯ ಧೂಳಿನ ಓಕುಳಿ ಹರಡಿದ್ದ ಆಕಾಶವನ್ನೂ ಗಂಭೀರವಾಗಿ ದಿಟ್ಟಿಸುತ್ತ ಕಣ್ಣುಮುಚ್ಚಿದವರು ದೀರ್ಘ ಉಸಿರೆಳೆದುಕೊಂಡು ಕೆಲವು ಕ್ಷಣ ಧ್ಯಾನಸ್ಥರಾದರು. ನಂತರ ಕಣ್ಣು ತೆರೆದು ಶಂಕರನತ್ತ ದೃಷ್ಟಿ ಹೊರಳಿಸಿದರು. ಅವನು ಒಳಗೊಳಗೇ ಪರಿತಪಿಸುತ್ತಿದ್ದವನು ಬಾರದ ನಗು ಬರಿಸಿಕೊಂಡು ಅವರನ್ನು ದಿಟ್ಟಿಸಿದ.

   ಆಗ ಏಕನಾಥರು, ‘ಎಲ್ಲವನ್ನೂ ನೋಡಿಯಾಯಿತು ಶಂಕರ. ಇನ್ನು ಹೊರಡೋಣವಾ…?’ ಎಂದು ಗಂಭೀರವಾಗಿ ಅಂದರು. ಆದರೆ ಅಷ್ಟು ಕೇಳಿದ ಶಂಕರ ಅಶಾಂತನಾದ. ‘ಅಂದರೇ ಗುರೂಜೀ…? ತುಂಡಾದ ನಾಗನ ಕಲ್ಲುಗಳನ್ನು ಏನು ಮಾಡುವ ಅಂತೀರಿ…?’ ಎಂದು ಹುಬ್ಬುಗಂಟಿಕ್ಕಿದ. ಅವನ ಚಡಪಡಿಕೆಯನ್ನು ಕಂಡ ಏಕನಾಥರು, ‘ಅಯ್ಯೋ ಮುಖ್ಯಪ್ರಾಣಾ…! ಅದು ಅಷ್ಟೊಂದು ಗಡಿಬಿಡಿಯಲ್ಲಿ ಮಾಡುವ ಕೆಲಸ ಅಲ್ಲ ಮಾರಾಯಾ! ಅದನ್ನೊಂದು ಶಾಸ್ತ್ರವಿಧಿಯ ಪ್ರಕಾರವೇ ನಾಶಮಾಡಬೇಕು. ಇಲ್ಲದಿದ್ದರೆ ನಾಳೆ ನಿನ್ನೊಂದಿಗೆ ನಮಗೂ ದೋಷ ಬಡಿದೀತು. ಈಗ ಮೊದಲು ಮನೆಗೆ ಹೋಗಿ ಜ್ಯೋತಿಷ್ಯ ನೋಡಬೇಕು. ಅದರಿಂದ ಮುಂದೇನು ಮಾಡಬಹುದೆಂದು ತಿಳಿಯುತ್ತದೆ. ಇಲ್ಲಿನ ಪರಿಸ್ಥಿತಿಯನ್ನೂ, ಈ ಸ್ಥಳದ ವಾಸ್ತುವನ್ನೂ ನೋಡಿದ ಮೇಲೆ ನಾವು ಯಾವುದೇ ಅವಸರದ ನಿರ್ಧಾರಕ್ಕೆ ಬರುವ ಹಾಗಿಲ್ಲ! ಈ ಜಾಗಕ್ಕೆ ಸಂಬಂಧಿಸಿದ ಮನೆತನಗಳು ಇಲ್ಲಿನ ನಾಗ ಪರಿವಾರ ದೈವಗಳನ್ನು ಸಾವಿರಾರು ವರ್ಷಗಳ ಹಿಂದಿನಿಂದಲೂ ನಂಬಿಕೊಂಡು ಬಂದಿರುವುದು ನಮಗಿಲ್ಲಿ ಸೂಕ್ಷ್ಮವಾಗಿ ಗೋಚರಿಸುತ್ತಿದೆ. ನಿನ್ನಿಂದ ಭಿನ್ನಗೊಂಡ ಕಲ್ಲುಗಳು ಅದೇ ಕಾಲದವು. ಹೀಗಿರುವಾಗ ಏಕಾಏಕಿ ಅವನ್ನೆತ್ತಿಕೊಂಡು ಹೋಗಿ ಎಲ್ಲಾದರೂ ಬಿಸಾಡಲಿಕ್ಕಾಗುತ್ತದಾ ಹೇಳು? ಹಾಗೆ ಮಾಡಿದರೆ ನಿನ್ನೊಂದಿಗೆ ನಮಗೂ ಹುಚ್ಚು ಹಿಡಿದೀತು!’ ಎಂದು ಗುರೂಜಿ ಆತಂಕದಿಂದ ವಿವರಿಸಿದರು. ಅದೇ ಹೊತ್ತಿಗೆ ಅಲ್ಲಿ ಏಕನಾಥರ ಮಾತಿಗೂ ಶಂಕರನ ನಂಬಿಕೆಗೂ ಸಾಕ್ಷಿವಾಗುವಂಥದ್ದೊಂದು ವಿಚಿತ್ರ ಘಟನೆ ನಡೆಯಿತು. ಪುಡಿಯಾಗಿದ್ದ ಪೀಠದ ಸಮೀಪದ ಬಿಲದಿಂದ ಸಣ್ಣದೊಂದು ಪ್ರಾಣಿಯೂ ಅದರ ಹಿಂದೆ ದೊಡ್ಡ ಕೇರೆಹಾವೊಂದೂ ರಪ್ಪನೇ ಹೊರಗೆ ಓಡಿ ಬಂದವು! ಆದರೆ ಆ ಹಾವು ತನ್ನ ಸಮೀಪದಲ್ಲೇ ಮನುಷ್ಯರನ್ನು ಕಂಡು ಬೆಚ್ಚಿಬಿದ್ದು ತಲೆಯೆತ್ತಿ ಅವರನ್ನೊಮ್ಮೆ ದೀ‍ರ್ಘವಾಗಿ ದಿಟ್ಟಿಸಿದ್ದು, ಬಳಿಕ ಮಿಂಚಿನವೇಗದಲ್ಲಿ ಎದುರಿನ ಪೊದೆಯತ್ತ ಓಡಿ ಹೋಯಿತು. ಆದರೆ ಏಕನಾಥರು ಮತ್ತು ಶಂಕರ ಆ ಹಾವನ್ನು ಮಾತ್ರವೇ ಕಂಡವರು, ‘ಅಯ್ಯಯ್ಯಪ್ಪಾ…!’ ಎಂದರಚುತ್ತ, ಯದ್ವಾತದ್ವ ನೆಗೆಯುತ್ತ ಓಡಿ ಹೋದರು.

   ಸ್ವಲ್ಪಹೊತ್ತಿನ ನಂತರ ಏಕನಾಥರು ಭೀತಿಯಿಂದ ರೋಮರೋಮಗಳೆಲ್ಲ ನಿಗುರಿ ನಿಂತು ನಡುಗುತ್ತಿದ್ದ ತಮ್ಮ ದೇಹವನ್ನು ಹತೋಟಿಗೆ ತಂದುಕೊಳ್ಳುತ್ತ ಆ ಹಾವಿನ ಕುರಿತು ಯೋಚಿಸಿದರು. ಆಗ ಅದು ನಾಗರಹಾವಲ್ಲ ಎಂಬುದು ಅವರಿಗೆ ಖಚಿತವಾಯಿತು. ಆದರೆ ಮರುಕ್ಷಣ ಅದರಲ್ಲೂ ಅವರಿಗೇನೋ ಹೊಸತು ಹೊಳೆಯಿತು. ಆದ್ದರಿಂದ, ‘ನೋಡಿದೆಯಾ ಶಂಕರಾ ಆ ಹಾವನ್ನು…? ಅದು ಹೇಗೆ ತನ್ನ ಸ್ಥಾನದಿಂದ ಕಾಣಿಸಿಕೊಂಡು ನಮ್ಮನ್ನು ಹೆಡೆಯಗಲಿಸಿ ನೋಡುತ್ತ ಎಂಥ ಸೂಚನೆ ಕೊಟ್ಟು ಮಾಯವಾಯಿತು ಅಂತ ಗಮನಿಸಿದೆಯಾ…?’ ಎಂದು ಅಚ್ಚರಿ ತೋರಿಸುತ್ತ ಅಂದರು. ಹಾವು ತಲೆಯೆತ್ತಿ ನೋಡಿದ್ದನ್ನು ಶಂಕರನೂ ಗಮನಿಸಿದ್ದ. ಆದರೆ ಅದು ಹೆಡೆಯೋ ಇನ್ನೊಂದೋ ತಿಳಿಯುವುದಕ್ಕೆ ಮುಂಚೆಯೇ ಅವನು ಅಲ್ಲಿಂದ ಪರಾರಿಯಾಗಿದ್ದ. ಹಾಗಾಗಿ ಏಕನಾಥರ ಮಾತಿಗೆ ಅವನು ಮೌನವಾಗಿ ‘ಹೌದು!’ ಎಂದು ತಲೆಯಾಡಿಸಿದ.

‘ಈಗಲಾದರೂ ಅರ್ಥವಾಯಿತಾ ಮಾರಾಯಾ…?’ ಎಂದು ಹುಬ್ಬುಗಂಟಿಕ್ಕಿ ಕೇಳಿದ ಏಕನಾಥರು, ‘ಏನಾದರೊಂದು ಅರ್ಥ ಮಾಡಿಕೊಳ್ಳಲೋ ಹಡಬೆಗೆ ಹುಟ್ಟಿದವನೇ…!’ ಎಂಬಂತೆ ಅವನನ್ನು ತೀಕ್ಷ್ಣವಾಗಿ ದಿಟ್ಟಿಸಿದರು. ಆಗ ಶಂಕರನೂ ಅವರ ಮನಸ್ಸಿನಲ್ಲಿದ್ದುದನ್ನೇ ಅರ್ಥ ಮಾಡಿಕೊಂಡ. ಆದರೆ ಮರುಕ್ಷಣ ಅವಕ್ಕಾದ! ಅದನ್ನು ಗಮನಿಸಿದ ಏಕನಾಥರು, ‘ನಮಗೆ ಇಲ್ಲಿಯೇ ನಾಗನ ಒಪ್ಪಿಗೆಯೂ ದೊರಕಿದ್ದು ಬಹಳ ನೆಮ್ಮದಿಯಾಯ್ತು ಮಾರಾಯಾ. ಇನ್ನು ನೀನೇನೂ ಚಿಂತಿಸುವ ಅಗತ್ಯವಿಲ್ಲ ನೋಡು. ಆದರೆ ಯಾವುದೇ ಕಾರ್ಯಾರಂಭಕ್ಕೂ ಒಂದು ನೀತಿ ನಿಯಮ ಅಂತ ಇರುತ್ತದೆ. ಅದರಂತೆ ನಡೆದುಕೊಂಡರೆ ಎಲ್ಲವೂ ಸುಗಮವಾಗುತ್ತದೆ. ಇಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಮತ್ತು ನಿನ್ನ ಮುಂದಿನ ವ್ಯಾಪಾರ ವಹಿವಾಟುಗಳ ಏಳಿಗೆಯನ್ನು ಸಮೃದ್ಧಿ ಮಾಡಿಕೊಡುವ ಜವಾಬ್ದಾರಿ ನಮ್ಮದು. ಇನ್ನು ಮುಂದೆ ನಿಶ್ಚಿಂತೆಯಿಂದಿರು!’ ಎಂದರು ಗಂಭೀರವಾಗಿ.

   ತನ್ನಿಂದ ಭಗ್ನಗೊಂಡ ನಾಗನಕಲ್ಲುಗಳನ್ನು ಗುರೂಜಿ ಈಗಿಂದೀಗಲೇ ಕೊಂಡುಹೋಗಿ ಎಲ್ಲಾದರೂ ಗೌಪ್ಯವಾಗಿ ಎಸೆದು ತಮ್ಮ ಹಳೆಯ ಮನೆಯನ್ನು ತನ್ನಿಂದ ದೈನ್ಯದಿಂದ ರಿಪೇರಿ ಮಾಡಿಸಿಕೊಳ್ಳುತ್ತಾರೆ ಎಂದೇ ಭಾವಿಸಿದ್ದ ಶಂಕರನಿಗೆ ಅವರ ಮಾತುಗಳು ಮತ್ತೀಗ ದಿಢೀರ್ ಪ್ರತ್ಯಕ್ಷವಾದ ಹಾವೂ ಸೇರಿ ಅವನ ಲೆಕ್ಕಾಚಾರವನ್ನೆಲ್ಲ ಬುಡಮೇಲು ಮಾಡಿಬಿಟ್ಟಿದ್ದವು. ಜೊತೆಗೆ, ‘ನಮಗೆಲ್ಲರಿಗೂ ಹುಚ್ಚು ಹಿಡಿದುಬಿಟ್ಟೀತು!’ ಎಂಬ ಗುರೂಜಿಯ ಎಚ್ಚರಿಕೆಯ ಹಿಂದಿದ್ದ ಗೂಢಾರ್ಥವೂ ಅವನ ನಾಭಿಯ ಮೂಲದಿಂದ ಭಯದ ಚಳಿಯನ್ನೆಬ್ಬಿಸಿಬಿಟ್ಟಿತು. ಅದರಿಂದ ರಪ್ಪನೆ ಸಪ್ಪಗಾದವನು ನಮ್ರತೆ ನಟಿಸುತ್ತ, ‘ಆಯ್ತು, ಆಯ್ತು ಗುರೂಜಿ, ನೀವು ಹೇಗೆ ಹೇಳುತ್ತೀರೋ ಹಾಗೆ. ಒಟ್ಟಾರೆ ಈ ಜಮೀನಿಗೆ ನಾನು ಹಾಕಿದ ಹಲವು ಕೋಟಿ ರೂಪಾಯಿಗಳಾದರೂ ವಾಪಾಸು ಬಂದರೆ ಅಷ್ಟೇ ಸಾಕು!’ ಎಂದು ದುಡ್ಡಿನ ಮೊತ್ತವನ್ನು ಬಾಯಿ ತಪ್ಪಿ ಅಂದವನು ತಟ್ಟನೆ ನಾಲಗೆ ಕಚ್ಚಿಕೊಂಡ. ಬಳಿಕ ‘ಇನ್ನೊಂದು ಮಾತು ಗುರೂಜೀ, ಈ ವ್ಯವಹಾರದಲ್ಲಿ ನೀವು ನನಗೆ ಮಾಡುವ ಉಪಕಾರವನ್ನೂ ನಾನು ಮರೆಯುವುದಿಲ್ಲ. ಅದಕ್ಕೆ ನ್ಯಾಯವಾಗಿ ನಿಮಗೆಷ್ಟು ಸಲ್ಲಬೇಕೋ ಅದನ್ನು ಸಲ್ಲಿಸಿಯೇ ಶುದ್ಧ!’ ಎಂದ ರುಬಾಬಿನಿಂದ.

‘ಆಯ್ತು, ಆಯ್ತು ಮಾರಾಯಾ. ಅದನ್ನೆಲ್ಲ ಆಮೇಲೆ ನೋಡಿಕೊಳ್ಳುವ. ಮೊದಲು ನಿನ್ನ ಕೆಲಸವಾಗಲಿ. ಇನ್ನು ಮುಂದೆ ನೀನು ನಮ್ಮ ಮಾತಿನಂತೆ ನಡೆದುಕೊಳ್ಳುತ್ತಿಯಾದರೆ ಇಲ್ಲಿನ ಕೆಲವು ಮುಖ್ಯ ವಿಚಾರಗಳನ್ನೂ ಹೇಳುತ್ತೇವೆ. ನಂತರ ಅದನ್ನು ನಂಬುವುದು ಬಿಡುವುದು ನಿನಗೆ ಸೇರಿದ್ದು. ಯಾಕೆಂದರೆ ಈ ಜಮೀನಿನ ಲಾಭನಷ್ಟವೂ ನಿನ್ನದೇ ಅಲ್ಲವಾ ಮಾರಾಯಾ…?’ ಎಂದು ಏಕನಾಥರು ಶಂಕರನ ಮುಖ ದಿಟ್ಟಿಸುತ್ತ ಅಂದರು. ಆಗ ಶಂಕರನಿಗೆ ಮರಳಿ ಅಳುಕೆದ್ದಿತು. ಆದರೂ, ತಿಳಿದೋ ತಿಳಿಯದೆಯೋ  ಬ್ರಹ್ಮರಾಕ್ಷಸನ ಬೆನ್ನೇರಿಯಾಗಿದೆ. ಇನ್ನು ಕೆಲಸವಾಗದೆ ಇಳಿಯುವಂತಿಲ್ಲ. ಬಂದದ್ದನ್ನು ಅನುಭವಿಸಲೇಬೇಕು. ಇರಲಿ! ಎಂದುಕೊಂಡವನು, ‘ಆಯ್ತು, ಗುರೂಜಿ ಹೇಳಿ!’ ಎಂದು ತನ್ನ ಕಣ್ಣು ಕಿವಿಗಳನ್ನು ಒಂದು ಮಾಡಿಕೊಂಡು ಅವರ ಮಾತನ್ನು ಕೇಳತೊಡಗಿದ.

‘ನಿನ್ನ ಈ ಜಮೀನಿನಲ್ಲಿ ನಮಗೆ ಅನೇಕ ತೊಂದರೆಗಳು ಕಾಣಿಸುತ್ತಿವೆ ಮಾರಾಯಾ! ಈ ಜಾಗಕ್ಕೆ ನೀನು ಕೈಹಾಕುವ ಮೊದಲು ಯಾರಾದರೂ ಜ್ಯೋತಿಷ್ಯರನ್ನೋ ಅಥವಾ ತಾಂತ್ರಿಕರನ್ನೋ ಭೇಟಿಯಾಗಿ ನಿಮಿತ್ತ ಕೇಳಿಯೇ ಮುಂದುವರೆಯಬೇಕಿತ್ತು. ಯಾಕೆಂದರೆ ಇದು ಬಹಳ ಕಾರ್ನಿಕದ ಮತ್ತು ವಿಶೇಷ ದೈವ ಕಳೆಗಳಿರುವ ಸ್ಥಾನ ಮಾರಾಯಾ! ಆ ಶಕ್ತಿಗಳು ಇಲ್ಲಿ ನೂರಾರು ವರ್ಷಗಳಿಂದಲೂ ನೀರು ನೆರಳಿಲ್ಲದೆ ಅತಂತ್ರವಾಗಿ ಬದುಕುತ್ತಿವೆ. ಅಲ್ಲದೆ ಈ ಪ್ರದೇಶದ ಜೀರ್ಣೋದ್ಧಾರಕ್ಕಾಗಿಯೂ ಅವು ಹಾತೊರೆಯುತ್ತಿವೆ. ಆದರೆ ನೀವೆಲ್ಲ ಇದ್ಯಾವುದನ್ನೂ ಯೋಚಿಸದೆ ಆ ಶಕ್ತಿಗಳ ವಾಸಸ್ಥಾನವನ್ನು ಹಾಳು ಮಾಡಿಬಿಟ್ಟಿದ್ದೀರಿ. ಆದ್ದರಿಂದ ಅವೀಗ ತೀವ್ರ ವಿಕೋಪಗೊಂಡಿರುವುದು ನಮ್ಮ ಗಮನಕ್ಕೆ ಬರುತ್ತಿದೆ!’ ಎಂದರು ಚಿಂತಾಕ್ರಾಂತರಾಗಿ. ಅಷ್ಟು ಕೇಳಿದ ಶಂಕರನಿಂದ ಮತ್ತೆ ಮಾತುಗಳು ಹೊರಡಲಿಲ್ಲ. ಅವನು ಭಯದಿಂದ ಮರಗಟ್ಟಿದಂತಾದ. ಅದನ್ನು ಗ್ರಹಿಸಿದ ಏಕನಾಥರು ತಮ್ಮ ಕಾರ್ಯಸಿದ್ಧಿಯ ಪ್ರಥಮ ಸೂತ್ರವನ್ನು ಸದೃಢಗೊಳಿಸಲು ಇದೇ ಸರಿಯಾದ ಸಮಯವೆಂದುಕೊಂಡವರು, ‘ಶಂಕರಾ, ಸ್ವಲ್ಪ ನಮ್ಮನ್ನು ನೋಡು ಮಾರಾಯಾ! ಈಗ ನಮ್ಮ ಇಡೀ ದೇಹದ ಅವಸ್ಥೆ ಏನಾಗಿದೆ ಅಂತ ಕಾಣುತ್ತಿದೆಯಾ ನಿನಗೆ…?’ ಎಂದು ಆಗಷ್ಟೇ ಅಲ್ಲಲ್ಲಿ ಬೆವರುಸಾಲೆಯಂತೆ ಎದ್ದು ಕೆಂಪಾಗಿ ತುರಿಕೆಯಿಂದ ಕೂಡಿ ಬೆವರಿನಿಂದ ತೊಯ್ದಿದ್ದ ತಮ್ಮ ಕೈಕಾಲುಗಳನ್ನೂ ಮತ್ತು ಮುಖವನ್ನೂ ಭೀತಿಯಿಂದ ಅವನಿಗೆ ತೋರಿಸಿದರು.

   ಶಂಕರ ಏಕನಾಥರ ಮೈಯನ್ನು ಅಳುಕಿನಿಂದಲೇ ನಿಟ್ಟಿಸಿದವನು ಮರುಕ್ಷಣ ಮೆಲ್ಲನೆ ತನ್ನ ದೇಹವನ್ನೂ ನೋಡಿಕೊಂಡು ಬೆಚ್ಚಿಬಿದ್ದ! ಹೌದು. ಅವನ ದೇಹವೂ ಏಕನಾಥರಿಗಿಂತ ಇಮ್ಮಡಿ ಬೆವರುತ್ತಿತ್ತು. ತನ್ನ ಶರೀರದ ಮೇಲೆಯೂ ಕೆಂಪಗಿನ ಬೊಕ್ಕೆಗಳು ಎದ್ದಿರುವಂತೆ ಅವನಿಗೆ ಭಾಸವಾಗತೊಡಗಿತು. ಮತ್ತಷ್ಟು ಗಲಿಬಿಲಿಗೊಂಡ. ಅದೇ ಸಮಯಕ್ಕೆ ಏಕನಾಥರು ಮತ್ತೆ ಮಾತಾಡಿದರು. ‘ಸರಿಯಾಗಿ ನೋಡಿದೆಯಲ್ಲ ಶಂಕರ, ಅದಕ್ಕೇ ಹೇಳಿದ್ದು ದುಡುಕುವುದು ಬೇಡ ಅಂತ! ಇಲ್ಲಿನ ಶಕ್ತಿಗಳನ್ನು ಅತೀವ ತಾಳ್ಮೆ ಮತ್ತು ಭಕ್ತಿಯಿಂದ ಮಣಿಸಿ ಅವುಗಳಿಂದಲೇ ನಮಗೆ ಒಳಿತಾಗುವಂತೆ ಮಾಡಿಸುವ ಹೊಣೆ ನಮ್ಮದು. ಯಾವುದಕ್ಕೂ ಮೊದಲು ಮನೆಗೆ ಹೋಗಿ ಜ್ಯೋತಿಷ್ಯ ತಿಳಿದು, ಅಂಜನವಿಟ್ಟು ನೋಡುವ. ಆನಂತರ ಅವು ಸೂಚಿಸುವ ಕೆಲವು ಪೂಜಾವಿಧಿಗಳನ್ನೂ ನೆರವೇರಿಸುವ. ಸದ್ಯದ ಪೂಜಾ ಸಾಮಾಗ್ರಿಗಳಿಗೆ ಹತ್ತು ಸಾವಿರದಷ್ಟು ಖರ್ಚಾದೀತು. ನಾಡಿದ್ದು ಸೋಮವಾರ ಒಳ್ಳೆಯದಿನ. ಅಲ್ಲಿಯ ತನಕ ನೀನು ಮಧು ಮಾಂಸ ಮುಟ್ಟಬೇಡ. ಅಂದು ರಾತ್ರಿ ಏಳು ಗಂಟೆಗೆ ಸರಿಯಾಗಿ ಶುದ್ಧಾಚಾರದಿಂದ ಮನೆಗೆ ಬಂದು ಬಿಡು. ಆಮೇಲೆಲ್ಲ ಸರಿ ಹೋಗುತ್ತದೆ!’ ಎಂದು ಗಂಭೀರವಾಗಿ ಹೇಳಿದ ಏಕನಾಥರು ಅಲ್ಲಿಂದ ಹಿಂದಿರುಗಿದರು. ಆದರೆ ತುಸುದೂರ ನಡೆದವರು ಆ ಜಾಗದ ಧೂಳಿನ ಪ್ರಭಾವದಿಂದಲೋ ಅಥವಾ ಯಾವುದೋ ಕ್ರಿಮಿಕೀಟಗಳ ಸೋಕಿನಿಂದಲೋ ತಮ್ಮ ಮೈಮೇಲೆ ಉಂಟಾಗಿದ್ದ ತುರಿಕೆಯನ್ನು ಬೇಕೆಂದೇ ಶಂಕರನೆದುರು ಇನ್ನಷ್ಟು ಜೋರಾಗಿ ಕೆರೆದುಕೊಳ್ಳುತ್ತ ಉರಿಯಿಂದ ಮುಖ ಸಿಂಡರಿಸುತ್ತ ಕಾರಿನತ್ತ ಧಾವಿಸಿದರು. ಇತ್ತ ಗುರೂಜಿಯವರನ್ನು ಉಪಾಯದಿಂದ ತನ್ನ ಕಾರ್ಯಕ್ಕೆ ಬಳಸಿಕೊಂಡು ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕೆಂದಿದ್ದ ಶಂಕರನೇ ಅವರ ಬಲೆಗೆ ಬಿದ್ದಿದ್ದವನು, ‘ಆಯ್ತು ಗುರೂಜಿ ಇನ್ನೆಲ್ಲವೂ ನಿಮ್ಮದೇ ಜವಾಬ್ದಾರಿಯಲ್ಲಿ ನಡೆಯಲಿ!’ ಎಂದು ನಮ್ರವಾಗಿ ಹೇಳಿ ಹುಬ್ಬುಗಂಟಿಕ್ಕಿಕೊಂಡು ಅವರನ್ನು ಹಿಂಬಾಲಿಸಿದ.

(ಮುಂದುವರೆಯುವುದು)  

*******************************

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

4 thoughts on “

  1. ಶಂಕರನ ವ್ಯವಹಾರಿಕ ಬುದ್ಧಿ ಸ್ವಾರ್ಥ ಮತ್ತು ಮಹತ್ವಾಕಾಂಕ್ಷೆಯ ನೆಲೆಯಲ್ಲಿ ಸಾಗುತ್ತಿರುವುದು ಒಂದೆಡೆಯಾದರೆ, ಏಕನಾಥರದ್ದು ಬಡತನವನ್ನೇ ಅನುಭವಿಸಿ ನೊಂದ ಮನಸ್ಸು ಅದರಿಂದ ವಿಮೋಚನೆ ಪಡೆಯಲು ಬಯಸುತ್ತಿತ್ತು. ಇಲ್ಲಿ ಕಾದಂಬರಿಕಾರರು ಸಂದರ್ಭ ಸನ್ನಿವೇಶಕ್ಕೆ ತಕ್ಕಂತೆ ಕಥಾನಕವನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ.

    1. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ಅನಿತಾ ಮೇಡಮ್..

Leave a Reply

Back To Top