ಗಜಲ್
ಶಂಕರಾನಂದ ಹೆಬ್ಬಾಳ
ಹಗ್ಗದ ಮೇಲೆ ಜೀವವನ್ನು ಒತ್ತೆಯಿಟ್ಟು
ನಡೆಯುತ್ತಿದೆ ಈ ಬಾಲೆ||
ಬಾಳಬಂಡಿಯ ಪಣಕ್ಕಿಟ್ಟು ಅಹರ್ನಿಶಿ
ದುಡಿಯುತ್ತಿದೆ ಈ ಬಾಲೆ||
ತುತ್ತು ಕೂಳಿಗೂ ಪರದಾಡುವ ಪರಿಸ್ಥಿತಿ
ಬೇತಾಳದಂತೆ ಬೆನ್ನುಹತ್ತಿದೆಯಲ್ಲ|
ಮುಳ್ಳುಕಂಟಿಯಲಿ ಸಾವಿನ ಸೋಪಾನವ
ತುಳಿಯುತ್ತಿದೆ ಈ ಬಾಲೆ||
ಬೀದಿಯ ಗುಡಾರದಲಿ ಕಾದ ಹೆಂಚಿನ
ರೊಟ್ಟಿಯಂತೆ ಮನ ಸುಡುತಿದೆ|
ಗಟ್ಟಿ ಕೈಗಳಲಿ ಹಲಗೆಯನು ಬೆಂಬಿಡದೆ
ಬಾರಿಸುತ್ತಿದೆ ಈ ಬಾಲೆ||
ನೋವಿನ ಕುಲುಮೆಯಲಿ ಬೇಯುತ್ತಾ
ಪುಟಕ್ಕಿಟ್ಟ ಚಿನ್ನವಾಗಿರುವೆಯಲ್ಲ|
ಹಾವಿನಂತೆ ಮೈಬಳುಕಿಸಿ ಚಪ್ಪಾಳೆಯನು
ಗಿಟ್ಟಿಸುತ್ತಿದೆ ಈ ಬಾಲೆ||
ತೂತು ಬಿದ್ದ ಕೌದಿಯಲಿ ಸಿರಿಯನ್ನು
ಕನಸಿನಂತೆ ಕಾಣುತ್ತಲಿದೆ|
ಅಭಿನವನ ಕರುಣೆಯ ಕಡಲು ಉಕ್ಕಿ
ಹರಿಸುತ್ತಿದೆ ಈ ಬಾಲೆ||
****************************