ನನಗಿಷ್ಟವಾದ ಸಿನಿಮಾ

ಪಾರ್ಟಿ

 “कलाकार के मन में विद्रोह का जज्बा बहुत शक्तिशाली है।

     “एक ऐतिहासिक क्षण में जब बहुत से कलाकार एक विशेष प्रकार की चेतना व्यक्त करते है तो खुद ब खुद एक मूवमेंट शुरू हो जाती है।”

     ಕಲೆ ಮತ್ತು ಸಿನಿಮಾ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ದಿವಾಕರ್ ಬರ್ವೆ (ಮನೋಹರ ಸಿಂಗ್) ಎಂಬ ಕಲಾವಿದನಿಗೆ ಪ್ರಶಸ್ತಿ ದೊರೆತ ಕಾರಣಕ್ಕೆ ಆತನ ಸಮ್ಮಾನದಲ್ಲಿ ಹಮ್ಮಿಕೊಂಡ ‘ಪಾರ್ಟಿ’ಯ ಕತೆ ಇದು. ಒಂದು ಸಂಜೆಯ ‘ಪಾರ್ಟಿ’ಯಲ್ಲಿ ಇಡೀ ಸಿನಿಮಾ ತೆರೆದು ಕೊಳ್ಳುತ್ತದೆ. ಸಿನಿಮಾ ಬಗ್ಗೆ ಬರೆಯಬೇಕು ಎಂದಾಗ ಈ ಸಾಂಕ್ರಾಮಿಕ ರೋಗದ ದುರಿತ ಕಾಲದಲ್ಲಿ ಗುಲ್ಜಾರ್ ರ ‘ಖುಷ್ಬೂ’ ನೆನಪಾಯಿತು. ಕೆಳಮಧ್ಯಮ ವರ್ಗದ ಪ್ರತಿನಿಧಿಯಾದ ‘ಅಲ್ಬರ್ಟ್ ಪಿಂಟೋ ಕೋ ಗುಸ್ಸಾ ಕ್ಯೂ ಆತಾ ಹೈ’, ‘ಮೋಹನ್ ಜೋಶಿ ಹಾಜಿರ್ ಹೋ’, ನೆನಪಾದವು. ಆಕ್ರೋಶ್, ಅರ್ಧಸತ್ಯ ದಂಥ ಸಿನಿಮಾಗಳು ಕೂಡ. ಆದರೆ ‘ಪಾರ್ಟಿ’ ಮಾತ್ರ ವರ್ಷಗಳಿಂದಲೂ ನನ್ನನ್ನು ಕಾಡುತ್ತಲೇ ಇದೆ. ಇವತ್ತಿನ ಈ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಆತಂಕದಲ್ಲಿರುವಾಗ “ಪಾರ್ಟಿ” ನನಗೆ ಮಹತ್ವಪೂರ್ಣ ಅನ್ನಿಸಿತು.

         ಸಿನಿಮಾ ಎಂದರೆ ಹೀಗೇ ಇರಬೇಕು ಎಂಬ ಕಲ್ಪನೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಪಾರ್ಟಿಯಲ್ಲಿ ಅಂಥ ಎಲ್ಲ ನಿಯಮಗಳು ಬಾಹಿರ. 1984ರಲ್ಲಿ ಬಂದ ಈ ಚಿತ್ರದ ನಿರ್ದೇಶಕರು ಗೋವಿಂದ ನಿಹಲಾನಿ. ದೀಪಾ ಸಾಹಿ, ರೋಹಿಣಿ ಹತ್ತಂಗಡಿ, ಓಂ ಪುರಿ, ಅಮರೀಶ್ ಪುರಿ, ನಾಸಿರುದ್ದೀನ್ ಶಾ ಮುಂತಾದ ಕಲಾವಿದರ ದಂಡು ಈ ಸಿನಿಮಾದಲ್ಲಿದೆ. ನನ್ನ ಯಾವತ್ತೂ ಕಾಡುವ ಚಿತ್ರಗಳಲ್ಲಿ ಮುಂಚೂಣಿಯಲ್ಲಿರುವ ಚಲನಚಿತ್ರ ಇದೇ.

    ಪಾರ್ಟಿಯಲ್ಲಿ ಭಾಗವಹಿಸಿದ ಪ್ರತಿಯೊಂದು ಪಾತ್ರವೂ ಸಮಾಜದಲ್ಲಿ ವಿಶೇಷ ಸ್ಥಾನಮಾನ ಹೊಂದಿರುವುದೇ ಆಗಿದೆ. ಒಬ್ಬ ನುರಿತ ನಟ, ಒಬ್ಬ ಪ್ರತಿಭಾವಂತ ಕವಿ, ಇನ್ನೊಬ್ಬ ಹರಿತ ಲೇಖನಿಯ ಪತ್ರಕರ್ತ, ಇನ್ನೊಬ್ಬ ಪ್ರಸಿದ್ಧ ಡಾಕ್ಟರ್… ಇನ್ನೂ ಏನೇನೋ. ಎಲ್ಲರೂ ಎಸ್ಟ್ಯಾಬ್ಲಿಷಡ್. ಅವರು ಹೀಗೇ ಇರಬೇಕು ಎಂಬ ಒಂದು ಮಾರ್ಗಸೂಚಿ ಇರುವಂತೆ ಅವರೆಲ್ಲ ಅದನ್ನು ಚೆನ್ನಾಗಿ ಕಾಯ್ದುಕೊಂಡಿದ್ದಾರೆ. ತಮ್ಮ ತಮ್ಮ ವ್ಯಕ್ತಿತ್ವವನ್ನು ಒಳಗಿನ ಪೊಳ್ಳುತನ ವ್ಯಕ್ತವಾಗದಂತೆ ಕಾಪಾಡಿಕೊಳ್ಳುವ ಬಾಧ್ಯತೆಗೆ ಕಟ್ಟು ಬಿದ್ದಿದ್ದಾರೆ. ಆದರೆ ಈ ಪಾರ್ಟಿಯಲ್ಲಿ ಒಂದೊಂದು ಪಾತ್ರವೂ ತನ್ನ ನಿಜದ ನಿಕಷಕ್ಕೆ ಒಳಗಾಗುತ್ತದೆ.

          ಅಲ್ಲಿ ಕತೆ ಇದೆ ಎಂದರೆ ಇದೆ. ಇಲ್ಲ ಎಂದರೆ ಇಲ್ಲ. ಆದರೆ ಎಲ್ಲ ಪಾತ್ರಗಳದೂ ಒಂದೊಂದು ಕತೆ. ಕವಿ ಮತ್ತು ಸಾಮಾಜಿಕ ಚಳುವಳಿಗಾರ ಅಮೃತ (ನಾಸಿರುದ್ದೀನ್ ಶಾ) ತನ್ನ ಪ್ರೇಯಸಿ (ದೀಪಾ ಸಾಹಿ)ಗೆ ಬರೆದ ಪತ್ರವನ್ನು ಓದುವ ಮೂಲಕ ಆರಂಭವಾಗುವ ಚಿತ್ರ ಅಮೃತನ ವ್ಯಕ್ತಿತ್ವವನ್ನು ಕಟ್ಟಿ ಕೊಡುವುದರ ಜೊತೆಗೆ ಆತನ ಕುರಿತು ಕುತೂಹಲ ಹುಟ್ಟು ಹಾಕುತ್ತದೆ. ಅಮೃತನ ಬಗ್ಗೆ ಅಲ್ಲಿ ಸೇರಿದ ಜನರ ಅಭಿಪ್ರಾಯ, ಆತನ ವಿಚಾರಗಳ ಮೂಲಕ ಆತನ ಚಿತ್ರವನ್ನು ನೀಡುವ ನಿರ್ದೇಶಕ ಚಿತ್ರದ ಕೊನೆಯವರೆಗೂ ಅಮೃತ ಎಂಬ ಪಾತ್ರವನ್ನು ಭೌತಿಕವಾಗಿ ತೋರಿಸುವುದಿಲ್ಲ. ಆದರೆ ನೋಡುಗರ ಮನಸ್ಸಿನಲ್ಲಿ ಅಮೃತ ಆವರಿಸುತ್ತಾನೆ, ಬೆಳೆಯುತ್ತಾನೆ.

       ಇಲ್ಲಿ ಬರುವ ಎಲ್ಲ ಪಾತ್ರಗಳಲ್ಲೂ ದ್ವಂದ್ವ ಇದೆ. ದಿವಾಕರ್ ಬರ್ವೆ, ಮೋಹಿನಿ ಬರ್ವೆ, ರವಿ, ಭರತ್ ಮುಂತಾದ ಎಲ್ಲ ಪಾತ್ರಗಳು ತಮ್ಮದಲ್ಲದ ಇನ್ನೊಂದು ಪಾತ್ರದಲ್ಲಿ ಜೀವಿಸುತ್ತಿದ್ದಾರೆ. ಎಲ್ಲರ ಒಳಗೂ ಜನಪ್ರಿಯತೆ, ಯಶಸ್ಸಿನ ಹೊರತಾಗಿಯೂ ಒಂದು ಹತಾಶೆ, ಖಿನ್ನತೆಯಿದೆ. ಒಂದೊಂದು ದೃಶ್ಯಗಳು ಇಂಥ ಅತೃಪ್ತಿಯನ್ನು ಸೂಚ್ಯವಾಗಿ ಬಿಂಬಿಸುತ್ತವೆ. ಎಲ್ಲೂ ಸಿನಿಮಾದ ನೈಜತೆಗೆ ಧಕ್ಕೆಯಾಗುವುದಿಲ್ಲ.

   ಅಮೃತ ಈ ಪಾರ್ಟಿ ನಡೆಯುವಾಗ ಯಾವುದೋ ಮೂಲೆಯ ಹಳ್ಳಿಯ ಗಿರಿಜನ ಹಾಡಿಯೊಂದರ ಸಮಸ್ಯೆಗಳಿಗೆ ಸ್ಪಂದಿಸಿ ಚಳುವಳಿಯಲ್ಲಿ ನಿರತನಾಗಿರುತ್ತಾನೆ. ಆತನ ವಾರ್ತೆಯನ್ನು ತೆಗೆದುಕೊಂಡು ಪಾರ್ಟಿಗೆ ಬರುವ ಆತನ ಗೆಳೆಯ ಅವಿನಾಶ್ (ಓಂ ಪುರಿ) ಸ್ಫೋಟಿಸುವ ಸತ್ಯದೊಂದಿಗೆ ಚಿತ್ರ ಕೊನೆಯಾಗುತ್ತದೆ. ಒಂದು ದುರಂತದ ಜೊತೆಗೆ ಇನ್ನೊಂದು ಮರುಹುಟ್ಟಿನ ಸೂಚನೆ ಕೊಡುವ ಕತೆಗಾರ ಚಿತ್ರವನ್ನು ಮುಗಿಸುತ್ತಾನೆ. ಆದರೆ ಪ್ರೇಕ್ಷಕ ಮಾತ್ರ ಚಿತ್ರದ ಯಕ್ಷಿಣಿಯಿಂದ ಹೊರ ಬರಲು ಸಮಯ ತೆಗೆದುಕೊಳ್ಳುತ್ತಾನೆ.

       ಚಿತ್ರದುದ್ದಕ್ಕೂ ಪಾತ್ರಗಳ ಮೂಲಕ, ಸಂಭಾಷಣೆ, ಸನ್ನಿವೇಶಗಳ ಮೂಲಕ ಅನೇಕ ವಿಚಾರಗಳನ್ನು ಎತ್ತುತ್ತಾ ಹೋಗುವ ಪರಿ ಕೆಲವೊಮ್ಮೆ ಸಿನಿಮಾ ಒಂದು ಡಾಕ್ಯುಮೆಂಟರಿ ಥರ ಅನ್ನಿಸಿ ಬಿಡುವ ಅಪಾಯವನ್ನು ಹಾದು ಹೋಗುತ್ತದೆ. ಅಲ್ಲಲ್ಲಿ ಹೆಚ್ಚು ವಾಚಾಳಿಯಾದಂತೆ ತೋರುತ್ತದೆ. ಆದರೂ ವಿಚಾರಗಳನ್ನು ಸಮರ್ಥವಾಗಿ ದಾಟಿಸುವುದರಲ್ಲಿ ಸಿನಿಮಾ ಯಶಸ್ವಿಯಾಗಿದೆ. ಗಂಭೀರ ಸಿನಿಮಾಗಳನ್ನು ಇಷ್ಟ ಪಟ್ಟು ನೋಡುವವರು ಖಂಡಿತ ಈ ಚಿತ್ರದ ಮೋಡಿಗೆ ಒಳಗಾಗುತ್ತಾರೆ. ಇನ್ನು ಅಪ್ಪಟ ಕಲಾವಿದರೇ ತುಂಬಿರುವ ಈ ಚಿತ್ರದಲ್ಲಿನ ಅಭಿನಯದ ಬಗ್ಗೆ ಎರಡು ಮಾತಿಲ್ಲ. ರೋಹಿಣಿ ಹತ್ತಂಗಡಿಯಂತೂ ಬಹುಕಾಲ ನೆನಪಿನಲ್ಲಿ ಉಳಿಯುತ್ತಾರೆ. ಹತ್ತಾರು ಬಾರಿ ನಾನು ಇದನ್ನು ನೋಡಿದ್ದೇನೆ. ನೀವೂ ಕೂಡ ಪಾರ್ಟಿಯನ್ನು ಒಮ್ಮೆಯಾದರೂ ನೋಡಿ.

*********

                       ವೀಣಾ ನಿರಂಜನ.

5 thoughts on “

    1. ಚೊಕ್ಕ ಚಿಕ್ಕದಾಗಿ ಪಾರ್ಟಿ ನೋಡುವ ಕುತೂಹಲ
      ಹೆಚ್ಚಿಸಿದಿರಿ ಬರಹಕ್ಕೆ ಧನ್ಯವಾದಗಳು

Leave a Reply

Back To Top