ಕವಿತೆ
ರಾಧೆ.
ದೇವಯಾನಿ
ರಾಧೆ..
ಅರಳಿದ ಕೆಂಗುಲಾಬಿಯ
ಪ್ರೀತಿಸಿದಳು
ಗುಲಾಬಿ ನಗುತ ಕೈ ನೀಡಿತು
ಬಾಡಿ ದಳಗಳುದುರಿದ ಮೇಲೆ
ಬರಿದೆ ಮುಳ್ಳುಳಿವ ಸತ್ಯ ಅರುಹಿತು
ರಾಧೆ
ವರ್ಷಗರೆವ ಮುಗಿಲ
ಪ್ರೀತಿಸಿದಳು
ಮುಗಿಲು ನಗುತ ಕರಗಿತು
ಹಗುರಾದಮೇಲೆ ನೆಲದುಳಿದ
ಕೆಸರ ತೋರಿ ಮರೆಯಾಯಿತು
ರಾಧೆ
ಮೇರೆಯನಳಿದ ಸಾಗರವ
ಪ್ರೀತಿಸಿದಳು
ಸಾಗರ ದಾಹ ದಾಹವೆನುತ
ನದಿಗಳನಾಲಂಗಿಸಿ
ಕಂಬನಿಗಿಷ್ಟು ಉಪ್ಪ ನೀಡಿ ಭೋರ್ಗರೆಯಿತು
ರಾಧೆ
ಜಗದೊಡೆಯ ಮಾಧವನ
ಪ್ರೀತಿಸಿದಳು
ಲೋಕಪಾಲಕನವನು
ಚಕ್ರ ಹಿಡಿದವನು ಹೊರಟವನು
ಕೊಳಲನಿತ್ತು ಕೈ ಬೀಸಿ ಮರೆಯಾದ