ಕೋಳಿ ಕಥೆ ಕೇಳಿ

ಹಾಸ್ಯ ಲೇಖನ

ಕೋಳಿ ಕಥೆ ಕೇಳಿ

ಶಾಂತಿವಾಸು

Two Brown Hen and One Red Rooster

ನಮ್ಮ ಮನೆಯ ಪಕ್ಕದಲ್ಲಿ ಒಂದು ಸೌದೆ ಡಿಪ್ಪೋ ಇತ್ತು. ಆಗೆಲ್ಲಾ ಮಧ್ಯಾನ್ಹ 3 ಗಂಟೆಗೆ ನಾವು ಸ್ಕೂಲಿನಿಂದ ವಾಪಸ್ ಬರುವಾಗ, ಥೇಟ್ ಈಗಿನ ಲಾಕ್ಡೌನ್ ತರಹದ ನಿಶಬ್ದವೇ ಇರುತ್ತಿತ್ತು. ಅಜ್ಜ ಸೌದೆ ಹೊಡೆಯುವಾಗ ಬಿಡುವ “ಹುಶ್ಸಾ ಹುಶ್ಸಾ” ಉಸಿರಿನ ಶಬ್ದ ಮೂರ್ನಾಲ್ಕು ಮನೆಗಳ ದಾಟಿ ಕೇಳುತ್ತಿತ್ತು. ಉಸಿರಾಡುವುದೇ ಅಷ್ಟು ದೊಡ್ಡ ಶಬ್ದವೆಂದರೆ, ಇನ್ನು ಮಾತಾಡುವಾಗ ಧ್ವನಿ ಹೇಗಿರಬೇಡ? ಅದಕ್ಕಿಂತ ಜಗಳವಾಡುವಾಗ ಇನ್ನೂ ನಾಲ್ಕು ರಸ್ತೆಗೆ ಕೇಳಿಸುವುದಿಲ್ಲವೇ? ಅಜ್ಜನ ಹೆಸರು ಕೂಡ ವೀರಭದ್ರಪ್ಪ. ಆ ಅಜ್ಜ ಸುಮಾರು ಕೋಳಿಗಳನ್ನೂ ಸಾಕಿತ್ತು.

ನಾನು ಗಿಡಗಳನ್ನು ಬಹಳ ಅಸ್ಥೆಯಿಂದ ನೋಡಿಕೊಳ್ಳುತ್ತಿದ್ದೆ ಕಣ್ರೀ. ಮರದ ರಿಪೀಸಿನ ಕಾಂಪೌಂಡಿನ ಅಂಚಿಗೆ ನಮ್ಮಮ್ಮ ನನಗೆ ಸ್ವಲ್ಪ ಜಾಗ ಕೊಟ್ಟಿದ್ದರು. ಅವರು ಬೆಳೆಸಿದ ಗಿಡ ಬಳ್ಳಿಗಳಿಗೆ ನಾನು ನೀರು ಹಾಕುವಂತಿರಲಿಲ್ಲ. ಹಾಗೂ ಕಣ್ತಪ್ಪಿಸಿ ಹಾಕಿ ಬಿಟ್ಟರೆ “ಹೋಯ್ತು, ಹೋಯ್ತು. ಅದು ವಾಂತಿ ಮಾಡಿಕೊಂಡು ಸತ್ತೋಗುತ್ತೆ. ನೀನು ನೀರು ಹಾಕ್ಬೇಡ ಅಂತ ಎಷ್ಟು ಸಲ ಹೇಳೋದು. ಚೊಂಬು ಕೊಡೆ ಇಲ್ಲಿ ಪೊರ್ಕಿ” ಅಂತ ಚೊಂಬು ಕಿತ್ಕೊಂಡು, ಅದರಲ್ಲೇ ಬೋರೆ ಮತ್ತು “ಟಣ್” ಅಂತ ಶಬ್ದ ಬರೋಹಾಗೆ ಕುಟ್ಟುತ್ತಿದ್ದರು. ಜಾಣೆ ಕಸ್ತೂರಮ್ಮ. ಒಂದೇ ಏಟಿಗೆ ಶಬ್ದ ಮತ್ತು ಪೆಟ್ಟು ಬೀಳೋ ಹಾಗೆ ಅಂದ್ರೆ ಒಂದೇ ಕಲ್ಲಿಗೆ ಎರಡು ಕಾಯಿ ಬೀಳುತ್ತೆ ಅನ್ನಲ್ವಾ ಹಾಗೆ ಕುಟ್ಟುತ್ತಿದ್ರು.

    ಹೇಳಿದ್ನಲ್ಲಾ ನಾನು ಗಿಡಗಳನ್ನ ಬಹಳ ಅಸ್ಥೆಯಿಂದ ನೋಡಿಕೊಳ್ತಿದ್ದೆ. ಕಾಂಪೌಂಡ್ ಅಂಚಿಗೆ ಭದ್ರಾಕ್ಷಿ, ಅದೇನೋ ಆಗೆಲ್ಲಾ ಒಂಥರಾ ತಿಳಿ ನೇರಳೆ ಜೊತೆ ಬಿಳಿ ಮಿಶ್ರಿತ ಬಣ್ಣ ಇದ್ದ ಗಂಟೆಯಾಕಾರದ ಗೊಬ್ಬು ವಾಸನೆಯ ಹೂವು ಮತ್ತು ಸ್ಮಶಾನದ ಹೂವು ಅಂತಾರಲ್ಲ? ಅದೇ ಈಗ್ಲೂ ಕಲ್ಲುಗಳ ಸಂದಿಯಲ್ಲಿ ಬಿಳಿ ಅಥವಾ ಪಿಂಕ್ ಹೂ ಬಿಟ್ಟಿರುತ್ತಲ್ಲ ಆ ಗಿಡಗಳನ್ನು ತಂದು ನೆಡುತ್ತಿದ್ದೆ.

      ನಾನು ನಿಜಕ್ಕೂ ವಿಶೇಷವಾಗಿ ನೆಡುತ್ತಿದ್ದೆ. ಎಲ್ಲರೂ ಭೂಮಿ ಅಗೆದು ನೆಟ್ಟರೆ, ನಾನು ಜೇಡಿ ಮಣ್ಣನ್ನು ಗುಡ್ಡೆಯಂತೆ ಮಾಡಿ ಅದರಲ್ಲಿ ಗಿಡದ ಬೇರಿಟ್ಟು, ತಿಪ್ಪೆ ಗುಂಡಿಯಲ್ಲೆಲ್ಲಾ ಓಡಾಡಿ ಕಡ್ಡಿಯಿಂದ ಕೆದಕಿ ಕೆದಕಿ, ಎರೆಹುಳುಗಳನ್ನು ಹೆಕ್ಕಿ ಬೆಂಕಿಪೊಟ್ಟಣದಲ್ಲಿ ತುಂಬಿಕೊಂಡು ಬಂದು ಬೇರಿನ ಮೇಲೆ ಹಾಕಿ, ನೀರು ತುಂಬಿ, ಹುಳು ತೇಲುವಾಗ ಮಣ್ಣು ಮುಚ್ಚುತ್ತಿದ್ದೆ.

    ನಾನು ಹೇಳಬೇಕಾದ ವಿಷಯ ಬೇರೆಲ್ಲೋ ಹೋಯ್ತು ನೋಡಿ. ಏನು ಹೇಳ್ತಿದ್ನಪ್ಪಾ? ಹೂಂ, ಹಾ ಸೌದೆ ಡಿಪ್ಪೋ ತಾತನ ಕೋಳಿ ಕಥೆ. ಊಂ, ಏನು ಗೊತ್ತಾ? ಆ ಅಜ್ಜನ ಕೋಳಿಗಳು ನಮ್ಮ ಕಂಪೌಂಡ್ ದಾಟಿ ಬಂದು ಬಂದು ನನ್ನ ಮಣ್ಣು ಹುಳಗಳನ್ನು ತಿಂದುಬಿಡುತ್ತಿತ್ತು. ನಾನೂ ಎಷ್ಟು ಸಹಿಸುವುದು. ಅಜ್ಜ ಬೆಳಗ್ಗಿನಿಂದ ಸಂಜೆ ತನಕ ಸೌದೆ ಸೀಳಿಕೊಂಡು ರೋಡಲ್ಲೇ ಇರ್ತಿತ್ತು. ಗಂಡು ಹುಡುಗರ ಜೊತೆ ಅಲೆದಾಡ್ತಾ ಕಾಯಿಗೆ ಕಲ್ಲು ಹೊಡೆದು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ನಲ್ಲಾ? ಸದ್ದಿಲ್ಲದಂಗೆ ಕೋಳಿ ಕಾಲಿಗೆ ಕಲ್ಲು ಬೀಸಿ ಏನೂ ಗೊತ್ತಿಲ್ಲದ ಹಾಗೆ ಹೋಗಿಬಿಡುತ್ತಿದ್ದೆ.

ನನಗೆಷ್ಟು ಬುದ್ದಿ ನೋಡಿ, ನಮ್ಮ ಕಂಪೌಂಡ್ ಒಳಗೆ ಕಾಲು ಮುರಿದು ಬಿದ್ದ ಕೋಳಿ ಕುಯ್ಯೋ ಕುಯ್ಯೋ ಅಂತ ಬೊಡ್ಕೊಂಡ್ರೆ, ಯಾರು ಕಾಲು ಮುರಿದಿದ್ದು ಅಂತ ಅಜ್ಜನಿಗೆ ಗೊತ್ತಾಗಲ್ವಾ? ರೋಡಲ್ಲಿ ನಿಂತ್ಕೊಂಡು “ಕಸ್ತೂರಮ್ಮ ಮೌ ಕಸ್ತೂರಮ್ಮ” ಅಂತ ದನಿ ಬರ್ತಿದ್ದಂಗೆ ನಮ್ಮಮ್ಮನಿಗೆ ಅರ್ಥ ಆಗಿ, ಜುಟ್ಟು ಹಿಡಿದು ಎಳ್ಕೊಂಡೇ ಹೊರಗೆ ಬರ್ತಿದ್ರು. ನನ್ನ ಜುಟ್ಟೆ ಮತ್ತೆ ಇನ್ಯಾರದ್ದು? “ತಗೋ ತಾತ ಇವಳ್ನ ನೀನೇ ಸಾಕ್ಕೋ” ಅಂತ ತಂದು ಮುದುಕನ ಮುಂದೆ ನಿಲ್ಲಿಸಿದ್ರೆ, ಅಜ್ಜ ಏನು ಮಾಡುತ್ತೆ? ಆಗ್ಲೇ ಅದಕ್ಕೆ ದೊಡ್ಡ ಹೆಂಡತಿ ಹತ್ತು ಮಕ್ಕಳನ್ನು ಹೆತ್ತು ಕೊಟ್ಟು ಸತ್ತುಹೋಗಿತ್ತು. ಎರಡನೇ ಹೆಂಡತಿ ಬೇರೆ ಒಂದು ಹೆಣ್ಣು ಮಗುವನ್ನು ಕಂಕುಳಲ್ಲಿ ಇಟ್ಕೊಂಡು ಓಡಾಡ್ತಿತ್ತು.

ಇಷ್ಟು ದೊಡ್ಡ ಸಂತೆಯಲ್ಲಿ ನನ್ನನ್ನು ಎಲ್ಲಿ ಬಿಡೋದು ಅಜ್ಜ? “ಐ ತೆಗೀ, ಕೋಳಿ ಕಾಲು ಮುರ್ದಾಕೌಳಲ್ಲಾ? ಅದುನ್ನ ಇಟ್ಕೊಂಡು ನಾನೇನ್ ಮಾಡ್ಲಿ? ನಂಗೆ ಬೇರೆ ಕೋಳಿ ಕೊಡ್ಸು” ಅಂತ ವ್ಯಾಪಾರ ಶುರು ಮಾಡುವಷ್ಟರಲ್ಲಿ, ಬಾಡಿಗೆ ಮನೆಯಲ್ಲಿದ್ದ ಬಾಲಾಜಿಯವರು ಬಂದು “ಇವಳನ್ನು ಏನು ಮಾಡೋದಾ? ಒಳ್ಳೆ ಪ್ರಶ್ನೆ ಕೇಳಿದ್ರಿ ಬಿಡಿ ಯಜ್ಮಾನ್ರೇ. ಮದ್ವೆ ಮಾಡ್ಕೊಳ್ಳಿ. ಮುದ್ದೆ ಬೇಯ್ಸೊಕ್ಕಾಗುತ್ತೆ” ಎಂದು ಅಜ್ಜನಿಗೆ ನಗು ತರಿಸುವ ಪ್ರಯತ್ನ ಮಾಡುತ್ತಿದ್ದರು. ನಮ್ಮ ತಾತ ಒದ್ದೆ ಬಟ್ಟೆಯ ಉದ್ದ ತುಂಡಿಗೆ ನೀರುಹಾಕಿ ಉಂಡೆ ಮಾಡಿದ ಕೆಮ್ಮಣ್ಣು ಇಟ್ಟು ತಂದು, ಸುಮ್ನೆ ಇರಲಾರದೆ ಎದ್ದು ಎದ್ದು ಓಡಲು ಪ್ರಯತ್ನಿಸಿ ಕುಯ್ಯೋ ಕುಯ್ಯೋ ಅಂತ ಮತ್ತೆ ಮತ್ತೆ ಬೀಳುತ್ತಿದ್ದ ಕೋಳಿಯನ್ನು ಹಿಡಿದು ಮೂಳೆ ಮುರಿದ ಕಾಲಿಗಿಟ್ಟು ಗಟ್ಟಿಯಾಗಿ ಕಟ್ಟಿ, ಅದರ ಬಾಯಗಲಿಸಿ ಸಕ್ಕರೆ ಕರಗಿಸಿದ ನೀರು ಸುರಿಯುತ್ತಿದ್ದರು.

ಅಲ್ಲಿ ತನಕ ಅಜ್ಜ ಕೋಳಿಯನ್ನು ಮುಟ್ಟುತ್ತಲೂ ಇರಲಿಲ್ಲ ಕೊನೇ ಪಕ್ಷ ಅದಕ್ಕೆ ನಡೆಯುವ ಔಷದೋಪಚಾರದ ಕಡೆಗೂ ನೋಡುತ್ತಿರಲಿಲ್ಲ. ಅದು ಮುಂದೆ ನಡೆಯಬಹುದಾದ ಜಗಳಕ್ಕೆ ಮುನ್ನುಡಿ ಎನ್ನುವುದನ್ನು ಮತ್ತೆ ಹೇಳುವಂತಿಲ್ಲ.  “ಗೋವಿಂದಪ್ಪ, ಬೇರೆ ಕೋಳಿ ತಂದುಕೊಡು. ಎರಡು ಕಿಲೋ ಅದೆ.” ಅನ್ನುತ್ತಾ ಸುಮ್ಮನೆ ಅಲ್ಲೇ ನಿಂತಿರುತ್ತಿತ್ತು. ನಾನು ಒಳಗೆ ಹೋದರೆ ನಮ್ಮಪ್ಪ ಒದೆಯುತ್ತಿದ್ದರು. ಕೋಳಿ ಹತ್ತಿರ ನಿಂತಿದ್ದರೆ ಯಾವ ಸಮಯದಲ್ಲಾದರೂ ಜಗಳ ಶುರುವಾಗಿ ನಿಂತಲ್ಲೇ ಒದೆ ಬೀಳುತ್ತಿತ್ತು. ನಮ್ಮ ತಾತ ಕೋಳಿ ಕೆಳಗೆ ಬಿಟ್ಟು “ನೋಡು ನಿನ್ನ ಕೋಳಿ ಚೆನ್ನಾಗೇ ನಡೀತಾ ಇದೆ. ತಗೊಂಡೋಗಿ ಬುಟ್ಟಿ ಮುಚ್ಚಿಬಿಡು. ಬೆಳಗ್ಗೆ ಹೊತ್ತಿಗೆ ಸರಿ ಹೋಗುತ್ತೆ. ಹೋಗು ಭದ್ರಪ್ಪ” ಎನ್ನುತ್ತಾ ಹಲ್ಲಿಲ್ಲದ ಬೊಚ್ಚು ಬಾಯಿ ತೆಗೆದು ನಗು ಬರದಿದ್ದರೂ, ನಗುತ್ತಾ “ಹೆ ಹೆ, ನೋಡು ನೋಡು. ನಡೀತಾ ಇದೆ” ಎಂದು ಕಣ್ಣಲ್ಲಿ ಮಿಂಚು ಹರಿಸುತ್ತ ಕುಂಟುವ ಕೋಳಿ ಕಡೆ ನೋಡಿದರೆ, ಸೌದೆ ಅಜ್ಜ ಅಪ್ರಯತ್ನಪೂರ್ವಕವಾಗಿ ಅತ್ತ ನೋಡಿ, “ಕುಂಟ್ತಾ ಐತಲ್ಲಾ? ಎಲ್ಲಿ ಚೆನ್ನಾಗಿ ನಡೀತಾ ಅದೆ?” ಅಂದ್ರೆ ನಮ್ಮಮ್ಮ “ಬಾ ತಾತಾ, ನಾನೇ ತಂದು ಬುಟ್ಟಿ ಮುಚ್ತೀನಿ. ಬೆಳಗ್ಗೆ ಓಡಾಡ್ದೇ ಇದ್ರೆ ಕೇಳು” ಅಂತ ಕುಂಟ್ಕೊಂಡು ಕುಡುಕನಂತೆ ಓಡಾಡೋ ಕೋಳಿನ ಎತ್ಕೊಂಡು ಹೋಗಿ ಬಿದುರಿನ ಬುಟ್ಟಿ ಮುಚ್ಚಿ ಬರುತ್ತಿದ್ದರು.

ಮನೆಗೆ ಬಂದು “ಆ ಮುದ್ಕಾ ಬೇರೆ ಕೋಳಿ ಬೇಕು ಅಂದ್ರೆ ಏನು ಮಾಡೋದು ಈಗ? ಎರಡು ಕೆಜಿ ಇದೆ ಅಂತಾನೆ. ನಾನೇ ಎತ್ತಿ ನೋಡುದ್ನಲ್ಲಾ ಒಂದೂವರೆ ಕೆಜಿನೂ ಬರಲ್ಲ ಅಲ್ವಾ ತಾತ” ಎಂದು ತನ್ನ ಮಾವನಿಗೆ ಕಷ್ಟ ಹೇಳಿಕೊಳ್ಳುತ್ತಾ ಸೌದೆ ಮುದುಕನನ್ನು ಬೈದು, “ನಾಳೆ ಮತ್ತೆ ಮುದ್ಕ ಬಂದು ಬೇರೆ ಕೋಳಿನೇ ಬೇಕು ಅನ್ಲಿ, ಆಮೇಲೆ ನಿನಗಿದೆ ಪೊರಕೆ ಪೂಜೆ” ಎನ್ನುತ್ತಾ ಹಲ್ಲು ಕಡಿದು, ನಾಳಿನ ಸಂಭ್ರಮದ ಮುನ್ಸೂಚನೆಯನ್ನು ಸಾರಿ ಹೇಳುತ್ತಿದ್ದರು ನಮ್ಮಮ್ಮ. ಹಾಗಾಗಿ ಕೋಳಿಯ ಮುರಿದ ಕಾಲು ಸರಿ ಹೋಗಿದೆಯೋ ಇಲ್ಲವೋ ಎನ್ನುವ ನಿರೀಕ್ಷೆ ಎಲ್ಲರಿಗಿಂತ ನನಗೆ ಸ್ವಲ್ಪ ಹೆಚ್ಚಿಗೇ ಇರುತ್ತಿತ್ತು.

    ಮತ್ತೊಮ್ಮೆ ನಮ್ಮಮ್ಮ ಅಪ್ಪ ಎಲ್ಲೋ ಹೋಗಿದ್ದ ಸಮಯದಲ್ಲಿ ಅದೇ ಸೌದೆ ಡಿಪ್ಪೋ ಅಜ್ಜನ ಕೋಳಿ ಒಂದು ಕಂಪೌಂಡ್ ಒಳಗೆ ಬಂತು. ಆಗಾಗ ಕೋಪ ಬರಿಸುತ್ತಿದ್ದ ಕೋಳಿಯನ್ನು ಅಟ್ಟಾಡಿಸಿ ಹಿಡಿದು, ಬಾಣಂತಿಯಾಗಿದ್ದ ನಮ್ಮಕ್ಕನಿಗಾಗಿ ತರಿಸಿಟ್ಟಿದ್ದ ಬಿಸ್ಕೆಟ್ ಬ್ರಾಂದಿಯನ್ನು ಅವಳು ಬೇಡ ಎನ್ನುತ್ತಿದ್ದರೂ ಕೇಳದೆ, ಅದರ ಬಾಯಿಗೆ ಸುರಿದು ಹತ್ತು ನಿಮಿಷ ಬಿಟ್ಟು ಹೊರಗೆ ಬಿಟ್ಟೆ. ನೋಡಬೇಕಿತ್ತು ಅದರ ಆಟ. ಹಾಕಿದ ಐದಾರು ತೊಟ್ಟು ಬ್ರಾಂದಿಗೇ ಮನೆಯ ಮುಂದಿದ್ದ ಚಪ್ಪಡಿ ಸಂದಿಯಲ್ಲಿ ಕಾಲು ಬಿಟ್ಟು ಮೇಲೆ ಎಳೆದುಕೊಳ್ಳಲಾಗದೆ ತೂರಾಡಿ ಅಲ್ಲೇ ಬೀಳುತ್ತಿತ್ತು. ನಮ್ಮಕ್ಕ ಎತ್ತಿ ಸ್ವಲ್ಪ ಮುಂದೆ ಬಿಡುತ್ತಿದ್ದಳು. ಅವಳಿಗೂ ಹೊರಗೆ ಬಿಡಲು ಭಯ. ಅಜ್ಜ ಸೌದೆ ಸೀಳಿಕೊಂಡು ಹೊರಗೇ ಇರುತ್ತಿತ್ತಲ್ಲ?

     ಈ ಕೋಳಿನೋ ತೂರಾಡಿಕೊಂಡು ಮತ್ತೆ ಮತ್ತೆ ಮನೆ ಕಡೆಗೇ ಬರುತ್ತಿತ್ತು. ಹಲ್ಲು ಕಡಿಯುತ್ತಾ “ಅಮ್ಮ, ಅಣ್ಣ, ತಾತ ಎಲ್ರೂ ನೀನು ಮಾಡೋ ಚೇಷ್ಟೆ ಬಗ್ಗೆ ಹೇಳ್ದಾಗ ನಂಬಿರ್ಲಿಲ್ಲ. ಈ ಕೋಳಿ ಹೊರಗೇ ಹೋಗ್ತಾ ಇಲ್ಲ. ಏನು ಮಾಡೋದು ಈಗ?” ಎನ್ನುತ್ತಾ ತಲೆ ಚಚ್ಚಿಕೊಂಡಳು ಅಕ್ಕ. ನಾನು ಮುಖ ಚಿಕ್ಕದು ಮಾಡಿಕೊಂಡು, ಅಜ್ಜ ಅಪ್ಪಿತಪ್ಪಿ ಒಳಗೆ ಹೋದ ಸಮಯದಲ್ಲಿ ಹೊರಗೆ ಬಿಡೋಣವೆಂದು ಅದನ್ನು ಹೊತ್ತೊಯ್ದು ಕಂಪೌಂಡ್ ಹತ್ತಿರ ಹಿಡಿದು ಸ್ವಲ್ಪ ಹೊತ್ತು ನಿಂತೆ. ಕುಡುಕ ಕೋಳಿ ಕೈಯ್ಯನ್ನು ಕುಕ್ಕಲು ಶುರು ಮಾಡಿತು. ನೋವು ಸಹಿಸಲಾರದೆ ಆಗಿದ್ದಾಗಲಿ ಅಂತ ಮೆಲ್ಲಗೆ ಗೇಟ್ ತೆಗೆದು ಹೊರಗೆ ಬಿಟ್ಟುಬಿಟ್ಟೆ. ಕೋಳಿ ಅದರ ಮನೆ ಕಡೆ ಹೋಗದೆ, ಬೀಳುತ್ತಾ ಏಳುತ್ತಾ ಅಲ್ಲಲ್ಲೇ ಓಡಾಡುತ್ತಿದ್ದರೆ ನನಗೆ ನಗುವೋ ನಗು. ಅಕ್ಕ ಮತ್ತೆ ಗುರಾಯಿಸಿದರೆ ನಾನು “ಸಂಜೆ ಅದು ಮನೆಗೆ ಹೋಗೋ ತನಕ ಅಜ್ಜ ಅದನ್ನೇನೂ ಹುಡುಕಲ್ಲ ಬಿಡಕ್ಕ” ಎನ್ನುತ್ತಾ ಸಿಕ್ಕಾಪಟ್ಟೆ ಮಜಾ ತಗೊಂಡಿದ್ದೆ. ಅಕ್ಕನೂ ಕೂಡ ಆ ಕ್ಷಣವೇ ನನ್ನ ವಿರುದ್ದದ ಕೂಟಕ್ಕೆ ಸೇರಿಹೋದಳೆಂದು ಮತ್ತೆ ಹೇಳಬೇಕಿಲ್ಲ ಅಲ್ಲವೇ?

***********************

2 thoughts on “ಕೋಳಿ ಕಥೆ ಕೇಳಿ

Leave a Reply

Back To Top