ಸೀರೆಯಲ್ಲಿ ಬಂಧಿಯಾದ ಅಮ್ಮನ ಬದುಕು…

ಲೇಖನ

ಸೀರೆಯಲ್ಲಿ ಬಂಧಿಯಾದ

ಅಮ್ಮನ ಬದುಕು…

ಅಂಜಲಿ ರಾಮಣ್ಣ

ಸೀರೆಯೇ ಅಮ್ಮ ಆಗಿದ್ದು ಈಗ ಇದೀಗ….
ಅಮ್ಮನಿಗೆ “ಸೀರೆ” ಅವಳ ಏಕೈಕ ವ್ಯಕ್ತ ವಾಗಿತ್ತು. ಸೀರೆ ಸೀರೆ ಸೀರೆ, ಎಲ್ಲಿ ಹೋದರೂ ಮನೆಯಲ್ಲಿದ್ದರೂ. ಅವಳಿಗೆ ಅದು ಎಂದೂ ವ್ಯಾಪಾರ ಆಗಿರಲಿಲ್ಲ, ಬದುಕಿನ ಶೈಲಿ ಯಾಗಿತ್ತು. ಅವಳು ಉಡದೆಯೇ ಹೋದ ಹತ್ತಾರು ಬಗೆ ಬಾಕಿ ಇದೇ ನಿಜ, ಆದರೆ ಅವಳಿಂದ ಅದ ಪಡೆಯದೆಯೇ ಉಳಿದ ಹೆಣ್ಣಿಲ್ಲ. ಸೀರೆಯೇ ಅಮ್ಮನಾಗಿದ್ದು ಈಗ ಅರಿವಿಗೆ ಬಂತು ಮಗಳಿಗೂ…..



ಸೀರೆಯೇ ಅಮ್ಮ ಆಗಿದ್ದು ಈಗ ಇದೀಗ…..



ನನ್ನಮ್ಮನ ಬಳಿ ನೂರು ಸೀರೆಗಳು
ಎಲ್ಲವೂ ಇಸ್ತ್ರಿಗೊಂಡು ಸಪೂಟು ಕಪಾಟಿನಲಿ
ಕೀಲಿಕೈ ಒಂದು ಸದಾ ಅವಳ ಸೊಂಟದಲ್ಲಿ



ಬೂದು ಬಣ್ಣದಲ್ಲಿ ಅಪ್ಪನ ಜರಿ ಅಂಚು
ಅವಳಪ್ಪ ಅವ್ವ ಹಚ್ಚೆಯಾಗಿಸಿದ್ದ ಹಸಿರು ಹೂವು
ದೂರದೂರ ಗೆಳೆಯನ ನೋಟದ ಹಳದಿ ಬೂಟ



ಶಿಫಾನ್, ಜಾರ್ಜೆಟ್ಟ್, ರೇಷ್ಮೆ, ಹತ್ತಿ
ಉಸಿರ ಹೊತ್ತು ಮಡಿಕೆಗಳಾಗಿ
ನಿಡಿದಾದ ಸೀರೆಗಳಾಗಿವೆ ಈಗ ಈಗಲೇ


ದುಷ್ಯಂತ ಜಗ್ಗಿದ್ದ ತೋಳ್ಬಂಧಿ
ಪಟ್ಟಾಭಿಷೇಕಕ್ಕೆ ತೊಡಲು ಮರೆತಿದ್ದ ಕಿರೀಟ
ಸೀಮಂತದಲ್ಲಿ ಬಳೆಯಿಂದ ಜಾರಿ ಬಿದ್ದ ಹವಳ



ಕೈತುತ್ತುಣಿಸುವಾಗ ಮೆತ್ತಿಕೊಂಡ ಅನ್ನದಗುಳು
ಬೇಳೆ ಹೋಳಿಗೆಯ ಘಮ ಸಾರಿನ ಪುಡಿಯ ಘಾಟು
ಕೀಟ ಬಾಧೆಗೆ ಬಚ್ಚಿಟ್ಟ ಸಂಪಿಗೆ ಎಸಳು



ನುಡಿಸುವಾಗ ಕಿತ್ತುಕೊಂಡ ವೀಣೆಯ ಷಡ್ಜ
ಶಾಯಿಗೊಂಡ ಬೆರಳುಗಳ ಅಚ್ಚು
ಒಂದಷ್ಟು ಅಕ್ಷರಗಳ ಗೆಜ್ಜೆ



ಒರಳಿನಿಂದ ಥಟಕ್ಕನೆ ಹಾರಿದ ದೋಸೆ ಹಿಟ್ಟಿನ ಬುರುಗು
ಅತ್ತಿಗೆ ನಾದಿನಿ ಮಕ್ಕಳು ಮೈದುನರ ಕಲೆಯುಳ್ಳ ಸೆರಗು
ಕಿಬ್ಬೊಟ್ಟೆ ಬಾಧೆಗೆ ಮಾಡಿಕೊಂಡ ಆಯುರ್ವೇದ



ಎಲ್ಲವೂ ಈಗ  ಈಗಲೇ ಸೀರೆಗಳಾಗಿ
ಇಸ್ತ್ರಿಗೊಂಡು ಸಪೂಟು ಕಪಾಟಿನಲಿ
ಬೇಲಿಯಂಚಿನ ಕತ್ತಾಳೆಲ್ಲಿ ರಾಜ ಹೂ ಗೊಂಚಲಂತೆ….

ತಣಿವೀಗ ಆವಿಯಾಗಿದೆ
ಅದಕ್ಕೇ
ಮುಗ್ಗಲಾಗದೆ ಬೆಚ್ಚಗಿವೆ
ನನ್ನಮ್ಮನ ಬಳಿ ನೂರು ಸೀರೆಗಳು 
ಸೀರೆಯೇ ಅಮ್ಮ ಆಗಿದ್ದು ಈಗ ಇದೀಗ….

ಅಂಜಲಿ ರಾಮಣ್ಣ

**************************

Leave a Reply

Back To Top