“ಮಾರಿಯ ಗಾಣ”

ಕಾವ್ಯಯಾನ

“ಮಾರಿಯ ಗಾಣ”

ಹೇಮಚಂದ್ರ ದಾಳಗೌಡನಹಳ್ಳಿ

Halloween, Jack-O-Lantern, Pumpkin

ಕಾಣದ ಮಾರಿಯ ಮಾದರಿ
ಗಾಣವ ತಿರುಹಿದೆ
ಕಾಳು ಮಾನವನ ಹೆಣಸಿಪ್ಪೆಯ ಒಗೆದಿದೆ
ಪ್ರಾಣ ಎಣ್ಣೆಯನೊಯ್ಯುತಾ
ಅದರದೇ ನರ್ತನ ಥೈಯ್ಯತಾ
ಸಿಲುಕುತ ನಲುಗುತ
ಪಯಣವ ಮುಗಿಸುತ
ಹೊರಟಿದೆ ಯಾತ್ರೆ ಮಸಣವೆ ಪಾತ್ರೆ
ಕಾಲದ ತಾಳಕೆ
ಮಾರಿಯ ನರ್ತನ
ಮಾನವ ರೋದನ
ಯಾರನು ಕೊಲ್ಲದ
ರಾವಣ ಹತ್ಯಕೆ
ಬಂದನು ಅವತಾರಿ
ಸೀತೆಯ ಮೋಹವ ತೂರಿ…
ಜನಕೇಡಿಗನಲ್ಲದ
ಕೌರವ ಹತ್ಯಕೆ
ಅವತರಿಸಿದನವತಾರಿ
ನೆಲದಾಶೆಯ ತೂರಿ…
ಅವರಿವರೆನ್ನದೆ
ಒಳ್ ಕೆಡುಕೆನ್ನದೆ
ಒಣ ಚಿಗರೆನ್ನದೆ
ಸುಟ್ಟುರುಹುತಿದೆ ಮಾರಿ
ಕಾಣನು ಅವತಾರಿ..
ಮಾರಿಯ ಗಾಣವೆ ಅವನೋ
ಅವನದೆ ರೂಪದ ವೈದ್ಯನೋ
ಅವನಿಗು ಮೀರಿದ ಕಣವೋ
ನಿಯಮವ ಮೀರಿದ ಗುಣವೋ
ತಿರುತಿರುಗಿದೆ ಗಾಣ
ನಿಯಮವ ಮೀರದೆ ಮುರಿಯುವ ಗಾಣ ಮಾರಿಯ ಗಾಣ
ಇರುವಲ್ಲಿರುವ…ಇರುವಂತಿರುವ

******************

Leave a Reply

Back To Top