‘ಅಮ್ಮನ ನಿರಾಳತೆ’

ಪ್ರಬಂಧ

‘ಅಮ್ಮನ ನಿರಾಳತೆ’

ವಸುಂಧರಾ ಕದಲೂರು. 

Cris-Pereby-_-sculptures-_-belgium-(10) | Sculptures, Sculpture art,  Sculpture

    ಮಕ್ಕಳಿಗೆ ಏನು ಬೇಕನ್ನೋದು ಅಮ್ಮನಿಗೆ ಹೃದ್ಗತವಾಗಿರುತ್ತೆ ಅನ್ನೋದು ನಂಬಿಕೆ. ನಿದ್ದೆಯಲ್ಲಿರುವ ಹಸುಗೂಸಿನ ತುಟಿ ಒಣಗಿದರೆ ಎತ್ತಿ ಹಾಲೂಡಿ ತಂಪುಗೊಳಿಸಿ ಸಂತೈಸುವ ಅಮ್ಮ; ಮಕ್ಕಳ ಕಣ್ಣು ಕೆಂಪಾದರೆ, ತಲೆಕೂದಲು ಒರಟಾದರೆ, ನೆತ್ತಿಗೆ ಎಣ್ಣೆ ಒತ್ತಿ ಹಿತ ಕಾಯುತ್ತಾಳೆ. ಕಿರಿಮಕ್ಕಳು ಬೆಳೆದು ಹಿರಿಯರಾದರೂ, ಮುಖಬಾಡಿ ಮನ ಮುದುಡಿ ಕುದಿಯ ವೇದನೆಯಲಿ ನರಳುವಾಗ, ಒಳಗುದಿಯನು ಹೇಳಿಕೊಂಡು ಹಗುರಾಗಲು ನೆನಪಾಗುವ ಮೊದಲ ಗೆಳತಿ ಅಮ್ಮನೇ…

  ಚಿಕ್ಕಪುಟ್ಟ ಮಕ್ಕಳಿಗಂತೂ ತಾವು ಏನೇ ಹೊಸತು ಮಾಡಿದರೂ ಅದನ್ನು ಮೊದಲು  ಅಮ್ಮನೇ ನೋಡಬೇಕು ಎನ್ನುವ ಆಸೆ. ಆಕೆ  ಮೆಚ್ಚಿ ‘ಶಹಬಾಷ್!’ ಅಂದರಂತೂ ಮೊದಲ ಬಹುಮಾನ ಸಿಕ್ಕಷ್ಟೇ ತೃಪ್ತಿ. ‘ಅಮ್ಮನಿಗೆ ಹೇಳದೇ ಈ ಮಕ್ಕಳು ಏನನ್ನೂ ಮಾಡೋದಿಲ್ಲವೇ!?’ ಎಂದು ಸಂದೇಹ ಪಡುವಷ್ಟರ ಮಟ್ಟಿಗೆ ಮಕ್ಕಳು ಅಮ್ಮನನ್ನು ಹಚ್ಚಿಕೊಂಡಿರುತ್ತವೆ. ಎಷ್ಟರ ಮಟ್ಟಿಗೆಂದರೆ, ಶೌಚಕ್ಕೆ ಹೋಗುವ ಅನಿವಾರ್ಯತೆ ಇದ್ದಾಗಲೂ ಅಮ್ಮನಿಗೆ ಹೇಳಿಯೇ ಹೋಗಬೇಕು! ಎಷ್ಟೇ ಅವಸರವಾಗಿದ್ದರೂ, ಅಮ್ಮ ಒಪ್ಪಿ ಸರಿ ಹೋಗು ಎಂದು ತಲೆ ಆಡಿಸೋವರೆಗೂ ಇವರು ತಕಪಕ ಕುಣಿಯುತ್ತಿರುತ್ತಾರೆಯೇ ಹೊರತು ತಾವಾಗೇ ಹೋಗಲೊಲ್ಲರು. ಇದು ಅತಿಶಯೋಕ್ತಿ ಏನಲ್ಲ. ಪಾಪ ಅವು ಮುಗ್ಧ ಕೂಸುಗಳು. 

 ಇಂಥಾ ಮುಗ್ಧತೆ ತೋರುವ ಮಕ್ಕಳು ಯಾವಾಗ್ಲೂ ಅಮ್ಮ ಹೇಳಿದ್ದಕ್ಕೆಲ್ಲಾ ಒಪ್ಪಿ ತಲೆಯಾಡಿಸುತ್ತಾರೆ ಅಂದ್ಕೊಳ್ಳೋದು ಅಮ್ಮಂದಿರ ಮುಗ್ಧ ಮೂರ್ಖತನವಷ್ಟೇ. 

    ನಿಜಕ್ಕೂ ಅಮ್ಮನನ್ನು ತಮ್ಮ ಮುದ್ದು ಮುದ್ದು ನಡವಳಿಕೆಗಳಿಂದ ದಾರಿತಪ್ಪಿಸುತ್ತಾ, ತಾವು ಮಾಡಿರುವ ತಪ್ಪಿಗೆ ಆಕೆಯಿಂದ ಶಿಕ್ಷೆಗೆ ಗುರಿಯಾಗದಂತೆ ನಾಟಕ ಆಡುವುದರಲ್ಲಿ ಇವರು ನಂಬರ್ ಒನ್.  ಅಪಾರ ಮುಗ್ಧರಂತೆ ನಟಿಸುವ ಕಿಲಾಡಿ ಮಕ್ಕಳ ಮುಂದೆ ತಾವು ಜೀವಮಾನಪೂರ್ತಿ ಗಳಿಸಿದ ಅನುಭವ, ವಿದ್ಯೆ, ಬದುಕು ಕಲಿಸಿದ ಪಾಠಗಳು ಯಾವುವೂ ಪರಿಗಣನೆಗೆ ಬರುವುದೇ ಇಲ್ಲ. ಅಮ್ಮ ಮಾಡುವ ತಂತ್ರಗಳು ಸಹ ‘ಹೊಳೆ ನೀರಿನಲ್ಲಿ ಹುಣಸೆ ತೇದ ಹಾಗೆ’ ಹುಳಿಯೆಲ್ಲಾ ಹರಿಯುವ ನದಿಯೊಡನೆ ಉಪ್ಪು ಕಡಲು ಸೇರುವಂತೆ ವ್ಯರ್ಥವಾಗುತ್ತವೆ. 

  ಸುಪ್ರಸಿದ್ಧ ತುಂಟ ಮಗು, ‘ಬೆಣ್ಣೆಕಳ್ಳ’ನೆಂಬ ಆರೋಪ ಹೊತ್ತಿರುವ ಕೃಷ್ಣ ಬಾಲ್ಯದಲ್ಲಿ ಮಾಡಿದ ತುಂಟಾಟಗಳು ಕಡಿಮೆಯೇ! ದಿನಾ ಮನೆಯ ಬಾಗಿಲಿಗೆ ಬರುವ ದೂರುಗಳನ್ನು ಕೇಳೀಕೇಳೀ ಅಮ್ಮ ಯಶೋಧೆಯ ಕಿವಿಗಳು ತೂತು ಬಿದ್ದಿರಲಿಕ್ಕೆ ಸಾಕು. ಎಷ್ಟೇ ಆರೋಪಗಳು ಮಗುವಿನ ಬಗ್ಗೆ ಬಂದರೂ, ‘ಕಡೇಪಕ್ಷ ಆತ ಹೊಟ್ಟೆ ತುಂಬುವಷ್ಟಾದರೂ ಒಂದಷ್ಟು ಹಾಲು ಮೊಸರು ಬೆಣ್ಣೆ ಎಂದು ತಿಂದುಕೊಂಡಿದ್ದಾನೆ ಬಿಡು’ ಎಂದು ಆಕೆ ಸಮಾಧಾನ ಮಾಡಿಕೊಂಡಿದ್ದಳೇನೋ.  

ಗೆಳೆಯರೊಡನೆ ತಿರುಗಾಡಿಕೊಂಡು ಹೊತ್ತುಹೊತ್ತಿಗೆ ಹಾಲುಬೆಣ್ಣೆ ತಿಂದುಂಡು ಇರುತ್ತಿದ್ದ ಅಷ್ಟರ ಮಟ್ಟಿಗೆ ಆತನ ಊಟದ ರಗಳೆ ಇರುತ್ತಿರಲಿಲ್ಲ. ಆದ್ದರಿಂದ ಬೆಣ್ಣೆ ಕಳ್ಳನ ಚಿಂತೆ ಸಧ್ಯಕ್ಕೆ ಬಿಡೋಣ. 

  ಬಹಳಷ್ಟು ಅಮ್ಮಂದಿರಿಗೆ ತಲೆ ನೋವು ಬರುವುದು ತಮ್ಮ ಮಗು ಸರಿಯಾಗಿ ತಿನ್ನೋದಿಲ್ಲ ಎನ್ನುವುದರಿಂದ. ಹೌದು, ಮಕ್ಕಳು ಸಮಯಕ್ಕೆ ಸರಿಯಾಗಿ ಹೊಟ್ಟೆ ತುಂಬಾ ತಿಂದುಬಿಟ್ಟರೆ ಆಕೆಯ ಅರ್ಧ ಕೆಲಸ ಮುಗಿದಂತೆಯೇ. ‘ಉಂಡಾಡಬಹುದೂ ಬೇಗ ಓಡಿ ಬಾ ಎನ್ನಪ್ಪಾ.. ಊಟಕೆ ಬಾರೋ ಕೃಷ್ಣಪ್ಪಾ…’ ಬರೀ ಹಾಲು ಮೊಸರು ಬೆಣ್ಣೆ ತಿನ್ನುವ ಮಗು ಸ್ವಲ್ಪ ಬೇರೆ ಊಟವನ್ನೂ ಮಾಡಲೆಂದು ಹೀಗೆ ಹಾಡಿದ್ದಳೇ? ಅಂತೂ ಕೃಷ್ಣ ಕೂಡ ಊಟ ಮಾಡಲು ಸತಾಯಿಸಿದ್ದ ಎಂದಾಯ್ತು ಅಲ್ಲವೇ? ಇರಲಿ ಬಿಡಿ ಏನೇನೋ ’ಜಂಕ್ ಫುಡ್’ ತಿನ್ನದೆ ಕಡೇಪಕ್ಷ ಆತ ತನ್ನ ಪಟಾಲಂ ಜೊತೆ ಸಮೃದ್ಧವಾಗಿ ಹಾಲು ಮೊಸರು ಬೆಣ್ಣೆ ತಿಂದು ಬೆಳೆದುಕೊಂಡಿದ್ದ. 

       ಆಕಾಶದ ಚಂದ್ರ ತಾರೆಯರನ್ನೂ, ಹಕ್ಕಿ ಮರ, ಗಿಡ, ಮೋಡಗಳನ್ನೂ, ರಸ್ತೆ ಮೇಲೆ ಸರ್ ಭರ್ ಓಡುವ ವಾಹನಗಳನ್ನೂ ಒಂದು ದಿನವಾದರೂ ತೋರಿಸದೆ ಜಗತ್ತಿನ ಯಾವ ತಾಯಾದರು ತಮ್ಮ ಸಣ್ಣ ಮಕ್ಕಳ ಪುಟ್ಟಬಾಯಿಗೆ ತುತ್ತು ನೀಡಿದ್ದಾರೆಂದರೆ ನಂಬಲು ಅಸಾಧ್ಯ.

   ’ಎಲ್ಲಿ ಆ…. ಆ…. ಮಾಡು ಜಾಣಮರಿ..’ ಎನ್ನುತ್ತಾ ತನ್ನ ಬಾಯನ್ನು ಸಹ ಅಗಲಿಸಿ ತೋರುತ್ತಾ ಆಂಗಿಕಾಭಿನಯ ಮಾಡದವರುಂಟೆ? ಬೂಚಿ, ಕಾಕಾ, ಬೌ ಬೌ, ಮಿಯಾಂವ್, ಗುಮ್ಮ, ಕಳ್ಳರನ್ನು ಕರೆಯದೇ  ಊಟದ ಆಟ ಮುಗಿಸಲಾಗಿದೆಯೇ? ಮಗುವಿಗೊಂದು ತುತ್ತು, ಬಾಲ ಆಡಿಸುತ್ತಾ ಬಿಟ್ಟಿ ಪ್ರದರ್ಶನ ತೋರುತ್ತಾ ಅಮ್ಮಂದಿರ ಪಾತ್ರಕ್ಕೆ ಸಪೋರ್ಟಿಂಗ್ ಕ್ಯಾರೆಕ್ಟರ್ ಗಳಾಗಿ ನಿಲ್ಲುವ ನಾಯಿಗೊಂದು ತುತ್ತು ಹಾಕದೇ ಮಗುವಿನ ಊಟ ಎಂದಾದರೂ ಮುಗಿದಿದೆಯೇ!? 

  ನಲ್ಲಿಯಲ್ಲಿ ನೀರು ಬಿಟ್ಟು ಬಚ್ಚಲಿಗೆ ವ್ಯರ್ಥ ಹರಿದು ಹೋಗುವುದನ್ನು ನೋಡಿದರೂ ಅಸಹಾಯಕ ಅಮ್ಮಂದಿರು ಸಧ್ಯ ಮಗುವಿನ ಹೊಟ್ಟೆ ತುಂಬಿದರೆ ಸಾಕೆಂದು ’ನ್ಯಾಶನಲ್ ವೇಸ್ಟ್’ ಬಗ್ಗೆ ಕಿವುಡರೂ ಕುರುಡರೂ ಆಗಿರುತ್ತಾರೆ. ತನ್ನ ಪ್ರಪಂಚವೇ ಆಗಿರುವ ಮಗುವಿನ ಮುಂದೆ ಆ ಕ್ಷಣಕ್ಕೆ ದೇಶ ಯಾವ ಮಹಾ…. ವಿದ್ಯುತ್ ದೀಪ ಉರಿಸುವುದೂ ಆರಿಸುವುದೂ ಮಾಡುವ ಆಟ ಆಡೀಆಡಿ ಬರ್ನ್ ಆದ ಬಲ್ಬ್ ಗಳ ಲೆಕ್ಕ ಬಹುಶಃ ಯಾವ ಅಮ್ಮಂದಿರೂ ಇಟ್ಟಿರಲಾರರು..

  ಕಂಕುಳಲ್ಲಿ ಮಗುವನ್ನು ನಿರುಕಿಕೊಂಡು, ಎಡಗೈಲಿ ಅನ್ನದ ಬಟ್ಟಲು, ಬಲಗೈಲಿ ತುತ್ತೊಂದನ್ನು ಹಿಡಿದು ಮನೆಮುಂದೆ, ರಸ್ತೆ ಅಂಚು, ಪಕ್ಕದ ಮನೆ, ಬೀದಿ ಕೊನೆ ಅಳೆಯದಿರುವ ಮಾತೆಯರೇ ನಿಜಕ್ಕೂ ಭಾಗ್ಯವಂತೆಯರು. ಅಮ್ಮಂದಿರಿಗೆ ಮಕ್ಕಳು ಹೊತ್ತುಹೊತ್ತಿಗೆ ಹೊಟ್ಟೆತುಂಬಾ ತಿಂದರೆ ಸಾಕಲ್ಲವೇ? ಅದಕ್ಕಾಗಿ ಯಾವ ಸರ್ಕಸ್ಸು ಮಾಡಲು ಸಿದ್ಧರಿರುತ್ತಾರೆ. 

  ಹಲವಾರು ಜವಾಬ್ದಾರಿಗಳನ್ನು ಹೆಗಲ ಮೇಲೆ ಹೇರಿಕೊಂಡಿರುವ ಕೆಲವು ಆಧುನಿಕ ಅಮ್ಮಂದಿರು, ಒಂದು ಬಂಧಿಸಿಡುವ ಕುರ್ಚಿತಂದು ಮಗುವನ್ನದರಲ್ಲಿ ಕೂರಿಸಿ, ಅದರ ಬಟ್ಟೆ ಕೊಳಕಾಗದಂತೆ ಪುಟ್ಟ ಏಪ್ರನ್ ಕಟ್ಟಿ, ಚೆಂದದ ಆಡಿಯೋ ವೀಡಿಯೋ ಹಾಕಿದ ಎಲೆಕ್ಟ್ರಿಕಲ್ ಗ್ಯಾಜ಼ೆಟ್ಟಿನ ಮುಂದೆ ಮಕ್ಕಳನ್ನು ಕೂಡಿಸಿದರೆ ಮುಗೀತು. ಅನ್ನದ ಬಟ್ಟಲು ಎರಡು ಬಾರಿ ತುಂಬಿಸಿ ತಂದರೂ ಪರಿವೆ ಇರುವುದಿಲ್ಲ ಎಂದು ಹೇಳುತ್ತಾರೆ.

   ಒಳ್ಳೆಯ ಪೌಷ್ಠಿಕ ಆಹಾರವನ್ನು ಮಗು ತಿಂದ ತೃಪ್ತಿ ತಾಯಿಗೆ ಸಿಗುವಂತಿದ್ದರೆ, ಆಕೆ ಇಂತಹ ಸಾವಿರ ಗ್ಯಾಜ಼ೆಟ್ಟುಗಳನ್ನು (ಅವುಗಳ ದುಷ್ಪರಿಣಾಮಗಳನ್ನು ಅರೆಕ್ಷಣ ಬದಿಗಿಟ್ಟು) ಮಗುವಿನ ಮುಂದೆ ರಾಶಿ ಸುರಿದಾಳು. 

         ಒಟ್ಟಿನಲ್ಲಿ ಹೊಟ್ಟೆ ತುಂಬಿದ ಮಗು ಒಂದಷ್ಟು ಹೊತ್ತು ತರಲೆ ಮಾಡದೇ ಆಡಿಕೊಂಡೋ, ಮಲಗಿಕೊಂಡೋ ಇದ್ದರೆ ಅಮ್ಮನಿಗೆ ಸಿಗುವ ನಿರಾಳತೆ ಇದೆಯಲ್ಲಾ ಅದಕ್ಕೆ ಬೆಲೆ ಕಟ್ಟಲಾಗದು. 

***************************************************

4 thoughts on “‘ಅಮ್ಮನ ನಿರಾಳತೆ’

  1. ಎಲ್ಲಾ ವಿವರಗಳ ಒಟ್ಟಿಗೆ ಆಧುನಿಕ ತಾಯಂದಿರ ಕೊನೆಯ ಸಾಲುಗಳು ಪ್ರಸ್ತುತ ಬದುಕಿನ ಕನ್ನಡಿ.ಚೆಂದದ ಬರಹ

Leave a Reply

Back To Top