ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ

ಪ್ರಬಂಧ

ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ

ಜಯಶ್ರೀ.ಜೆ. ಅಬ್ಬಿಗೇರಿ

black, brown, and white bird standing on person right hand

   ಇಸ್ಲಾಂ ಧರ್ಮದ ಪ್ರಖ್ಯಾತ ಗುರು ‘ಸಾದಿ’ ಸಣ್ಣವರಿದ್ದಾಗ ತನ್ನ ತಂದೆಯೊಂದಿಗೆ ಮಸೀದಿಗೆ ಹೋಗಿದ್ದರು. ತಂದೆ ಮಕ್ಕಳು ಮಸೀದಿಯ ಮೇಲ್ವಿಚಾರಣೆ ನೋಡಿಕೊಳ್ಳಬೇಕಿತ್ತು. ಅಲ್ಲಿ ಪ್ರಾರ್ಥನೆಗೆ ಬಂದವರೆಲ್ಲ ನಿದ್ದೆಗೆ ಜಾರಿದ್ದರು. ಅದನ್ನು ಕಂಡ ಸಾದಿಗೆ ಆಶ್ಚರ್ಯವಾಯಿತು. ಆತ ತಂದೆಗೆ ತಿಳಿಸಿದ. ‘ನಮ್ಮಿಬ್ಬರನ್ನು ಬಿಟ್ಟು ಬಾಕಿಯವರೆಲ್ಲ ಮಲಗಿ ಬಿಟ್ಟಿದ್ದಾರೆ. ಆತನ ತಂದೆಗೆ ಕೋಪ ಬಂದಿತು.’ನಿನ್ನ ಕೆಲಸ ನೀನು ಮಾಡು. ಬೇರೆಯವರು ಏನು ಮಾಡುತ್ತಿದ್ದಾರೆಂದು ನೋಡುವುದು ನಿನ್ನ ಕೆಲಸವಲ್ಲ. ‘ಬೇರೆಯವರಲ್ಲಿ ತಪ್ಪು ಕಂಡು ಹಿಡಿಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಅದರ ಬದಲು ನಿನ್ನಲ್ಲಿರುವ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊ. ಬೇರೆಯವರಲ್ಲಿ ಹಲವು ತಪ್ಪುಗಳಿದ್ದು ಒಂದೇ ಒಂದು ಒಳ್ಳೆಯ ಗುಣವಿದ್ದರೂ ಅದರ ಮೇಲೆ ನಿನ್ನ ಗಮನವಿಡು.ಒಳ್ಳೆಯದರತ್ತ ಗಮನ ಹರಿಸುವುದರಿಂದ ಒಳ್ಳೆಯದೇ ಆಗುತ್ತದೆ.’ ಎಂದರು.

    ಸಂಪೂರ್ಣವಾಗಿ ಒಳ್ಳೆಯ ಗುಣಗಳು ತುಂಬಿರುವ ವ್ಯಕ್ತಿ ಸಿಗುವುದು ದುರ್ಲಭ. ಹಾಗಂತ ಸಂಪೂರ್ಣ ಕೆಟ್ಟ ಗುಣಗಳಿರುವ ವ್ಯಕ್ತಿ ಸಿಗುವುದು ಸುಲಭ ಅಂತಿಲ್ಲ. ಹಾಗಿದ್ದರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತವೆ ಅನ್ನುವುದು ಸೂರ್ಯನಷ್ಟೇ ಸ್ಪಷ್ಟ. ಈ ಸಂಗತಿಯನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ ಪ್ರತಿಯೊಬ್ಬ ವ್ಯಕ್ತಿ ಒಳ್ಳೆಯ ಮತ್ತು ಕೆಟ್ಟ ಗುಣಗಳ ಒಟ್ಟು ಮೊತ್ತ. ಹಾಗಾದರೆ ಒಳ್ಳೆಯ ಮತ್ತು ಕೆಟ್ಟ ವ್ಯಕ್ತಿ ಅಂತ ಹೇಗೆ ಗುರುತಿಸುತ್ತೇವೆ? ಯಾರಲ್ಲಿ ಒಳ್ಳೆಯ ಗುಣಗಳು ಹೆಚ್ಚಿವೆಯೋ ಅವರು ಒಳ್ಳೆಯವರು. ಹಾಗೆಯೇ ಕೆಟ್ಟ ಗುಣಗಳ ಪ್ರಮಾಣ ಹೆಚ್ಚಿದ್ದವರು ಕೆಟ್ಟವರು ಎಂದು ನಿರ್ಧರಿಸಲಾಗುತ್ತದೆ. ಉತ್ತಮವಾದುದನ್ನು ನಿರೀಕ್ಷಿಸಿದರೆ ಅದನ್ನು ಪಡೆಯಬಹುದು. ಇತರರಲ್ಲಿ ಒಳ್ಳೆಯ ಗುಣಗಳನ್ನು ಮಾತ್ರ ಕಾಣುತ್ತಿದ್ದರೆ ಇಡೀ ಜಗತ್ತೇ ಒಳ್ಳೆಯದಾಗಿ ಕಾಣಿಸುವುದು. ಒಳಿತು ಕೆಡುಕುಗಳಿಗಿಂತ ನೋಡುವ ದೃಷ್ಟಿ ಒಳ್ಳೆಯದಾಗಿರಬೇಕು.

 ಸಾಕಷ್ಟು ಕೆಡುಕುಗಳ ಮಧ್ಯೆಯೂ ಒಳ್ಳೆಯದನ್ನು ಹುಡುಕುವುದೇ ಒಳ್ಳೆಯತನ.ಮುಳ್ಳುಗಳ ನಡುವೆ ಅರಳಿ ನಿಂತ ಗುಲಾಬಿಯತ್ತ ಗಮನಿಸಬೇಕೇ ಹೊರತು ಮುಳ್ಳುಗಳೆಡೆಯಲ್ಲ.ಕಮಲದತ್ತ ದೃಷ್ಟಿ ನೆಡಬೇಕೇ ಹೊರತು ಕೆಸರಿನತ್ತ ಅಲ್ಲ.  ತೊಂದರೆ ಮಧ್ಯದಲ್ಲಿ ಹೇಗೆ ಅವಕಾಶಗಳು ಅವಿತುಕೊಂಡಿರುತ್ತದೆಯೋ ಹಾಗೆಯೇ ಕೆಟ್ಟದರ ನಡುವೆಯೂ ಒಳ್ಳೆಯದು ಅಡಗಿರುತ್ತದೆ. ಅದನ್ನು ಹೆಕ್ಕಿ ತೆಗೆದು ಬೆಳೆಸುವುದೇ ಜಾಣತನ. ಯಾವುದರ ಬಗೆಗೆ ಮನಸ್ಸನ್ನು ಕೇಂದ್ರೀಕರಿಸುತ್ತೇವೆಯೋ ಅದನ್ನೇ ದಕ್ಕಿಸಿಕೊಳ್ಳುತ್ತೇವೆ. ಗಮನವನ್ನು ಸದಾ ಒಳ್ಳೆಯ ಗುಣಗಳತ್ತ ಹರಿಸಬೇಕು. ಯಾಂತ್ರಿಕವಾಗಿ ದಿನವನ್ನು ದೂಡುತ್ತಿದ್ದರೆ ಒಳಿತು ಕೆಡುಕುಗಳ ಫರಕು ಗೊತ್ತಾದರೂ ಬದಲಾಗುವುದು ವಿರಳ. ನಮ್ಮ ಅಭ್ಯಾಸಗಳು ನಮ್ಮನ್ನು ಇತರರಿಂದ ಬೇರೆಯಾಗಿಸುತ್ತವೆ. ಒಳಿತನ್ನು ಹುಡುಕುವುದು ಒಂದು ಒಳ್ಳೆಯ ಅಭ್ಯಾಸ. ಒಳ್ಳೆಯದು ಮಹತ್ತರವಾದ ಸ್ಪೂರ್ತಿ ನೀಡುತ್ತದೆ. ಚೈತನ್ಯವನ್ನು ತುಂಬುತ್ತದೆ. ಒಳ್ಳೆಯದನ್ನು ಗಂಭೀರವಾಗಿ ಪರಿಗಣಿಸಬೇಕು. ಅದನ್ನು ಮೆಚ್ಚಬೇಕು. ನೀರೆರದು ಪೋಷಿಸಬೇಕು. ನಿರ್ಲಕ್ಷಿಸಿದರೆ ಒಣಗಿದ ಬಳ್ಳಿಯಂತಾಗುತ್ತದೆ.ಕೆಟ್ಟದ್ದನ್ನು ಸಾಕುವುದೆಂದರೆ ಫಲ ಕೊಡದ ಮುತ್ತುಗದ ಗಿಡಕ್ಕೆ ಹತ್ತಾರು ವರ್ಷ ಪೂಜಿಸಿದಂತೆ. ಯಾವುದೇ ಪ್ರಯೋಜನವಿಲ್ಲ. ನಿರಾಸೆಯ ಹೊರತು ಮತ್ತೇನೂ ಲಭಿಸದು. ಒಳ್ಳೆಯ ಗುಣಗಳನ್ನು ಪೋಷಿಸದಿದ್ದರೆ ಪ್ರೋತ್ಸಾಹಿಸದಿದ್ದರೆ ಒಳ್ಳೆಯವರು ನಿರಾಶರಾಗಬಹುದು. ‘ಎಷ್ಟು ಒಳ್ಳೆಯವರಾಗಿದ್ದರೂ ಅಷ್ಟೇ ಇದೆ. ಯಾವುದೇ ಲಾಭವಿಲ್ಲ. ಮತ್ತಷ್ಟು ನೋವನ್ನು ಅನುಭವಿಸುವುದು ಯಾರಿಗೆ ಬೇಕಿದೆಯೆಂದು ನೊಂದ ಮನಸ್ಸು ಕೆಟ್ಟದ್ದರತ್ತ ವಾಲುತ್ತದೆ.’ ಅಂದರೆ ಕೆಟ್ಟವರು ಮೂಲತಃ ಕೆಟ್ಟವರಲ್ಲ. ಅವರು ಪರಿಸ್ಥಿತಿಯ ಕೂಸಾಗಿ ಕೆಟ್ಟವರಾಗಿರುತ್ತಾರೆ. ಬೇಕಂತಲೇ ಅಪರಾಧಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಯಾರಿಗೂ ಬೇಕಾಗಿರುವುದಿಲ್ಲ.

    ಒಳ್ಳೆಯದನ್ನು ಅಲ್ಲಗಳೆಯುವುದು ತುಚ್ಛವಾಗಿ ಕಾಣುವುದು ತಪ್ಪು. ಹಣ ಅಧಿಕಾರ ಅಂತಸ್ತಿನಿಂದ ಒಣ ಪ್ರತಿಷ್ಟೆಯಿಂದ ಪಡೆದ ಸುಳ್ಳು ಒಳ್ಳೆಯತನದ ಬಿರುದು ದೀಪದ ಬೆಳಕಿನಂತೆ ಎಣ್ಣೆ ಇರುವವರೆಗೆ ಮಾತ್ರ ಇರುತ್ತದೆ.ನಿಜವಾದ ಒಳ್ಳೆಯತನಕ್ಕೆ ಸಿಗುವ ಗೌರವ ಸೂರ್ಯನಂತೆ ಸೃಷ್ಟಿ ಇರುವವರೆಗೆ ಬೆಳಗುತ್ತದೆ. ಒಳ್ಳೆಯ ಸಮಾಜ ಕಟ್ಟಬೇಕೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಮೊದಲು ಅನ್ಯರ ಒಳಿತಿಗಾಗಿ, ನಂತರ ತನ್ನ ಒಳಿತಿಗಾಗಿ ದುಡಿಯುವ ಮನೋಭಾವ ಹೊಂದಿರಬೇಕು. ಯೋಚನೆಗಳು ಕಾರ್ಯಗಳು ಒಳ್ಳೆದಾದರೆ ಬದುಕು ಒಳ್ಳೆಯದಾಗುತ್ತದೆ. ಒಳ್ಳೆಯದನ್ನು ಗುರುತಿಸೋಣ ಒಳ್ಳೆಯದನ್ನು ಬೆಳೆಸೋಣ. ಒಳ್ಳೆಯ ಗುಣಗಳು ಮತ್ತೆ ಮತ್ತೆ  ಚಿಗುರೊಡೆಯಲು ಪ್ರೋತ್ಸಾಹಿಸೋಣ. ಉದುರಿ ಹೋದ ಹೂಗಳು ತಮ್ಮ ಸುವಾಸನೆಯನ್ನು ಚೆಲ್ಲುತ್ತವೆ. ಒಳ್ಳೆಯ ಪುಸ್ತಕಗಳು ಒಳ್ಳೆಯ ವ್ಯಕ್ತಿಗಳು ಒಳ್ಳೆಯತನ ಕೂಡಲೇ ಅರ್ಥವಾಗುವುದಿಲ್ಲ. ಪುಸ್ತಕವನ್ನು ಮತ್ತೆ ಮತ್ತೆ ಓದಿದಾಗ ಮಾತ್ರ ಅದರ ಸತ್ಯ ಅರಿವಾಗುವುದು. ಹಾಗೆಯೇ ವ್ಯಕ್ತಿಗಳ ಮನಸ್ಸನ್ನು ಸ್ವಚ್ಛ ಮನಸ್ಸಿನಿಂದ ಅರಿಯಲು ಪ್ರಯತ್ನಿಸಿದರೆ ಮಾತ್ರ ಒಳ್ಳೆಯತನ ತಿಳಿಯುವುದು.ಸಾಕಷ್ಟು ಒಳ್ಳೆಯ ಗುಣಗಳು ಇರುವವರು ಸಿಗುವರು ಎಂದು ಕಾಯುವುದು ಬೇಡ. ಸಿಕ್ಕ ಜನರಲ್ಲಿಯೇ ಒಳ್ಳೆಯ ಗುಣಗಳನ್ನು ಗುರುತಿಸಿ ಪೋಷಿಸೋಣ. ಆಗ ಒಳ್ಳೆಯದು ಬಾಡದ ಹೂವಿನಂತೆ ನಗುತ್ತಿರುತ್ತದೆ.

=============================================================

.

Leave a Reply

Back To Top