ಅಂಕಣ ಬರಹ
ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ
ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ
ಸರಣಿಬರಹ………..
ಅದ್ಯಾಯ-4
ಬೆಳಗಿನ ಜಾವ ಐದೂವರೆಗೆ ಇಲ್ಲಿಯ ಏಳುವರೆಯಷ್ಟು ಬೆಳಕು ಮತ್ತು ಎಳೆ ಬಿಸಿಲು. ಒಳ್ಳೆಯ ನಿದ್ರೆಯಾಗಿ ತಾಜಾತನ ತುಂಬಿಕೊಂಡಂತೆ ಮೈ ಮನಸ್ಸು ಉಲ್ಲಸಿತವಾಗಿತ್ತು. ಮನೆಯಲ್ಲಿದ್ದರೆ ಹಲವಾರು ಕೆಲಸಗಳು ಸಾಲಾಗಿ ಧಬಧಬನೆ ಮೈ ಮೇಲೆ ಬಿದ್ದ ಹಾಗೆ ಧಾವಿಸಿ ಬರುತಿದ್ದವು. ಇಲ್ಲಿ ಯಾವ ಕೆಲಸದ ಗೊಡವೆಯೂ ಇಲ್ಲದೆ ಹಾಯಾಗಿ ಆ ಬೆಳಗಿನ ಜಾವವನ್ನು ಆನಂದಿಸಿದೆ.
ಸ್ನಾನಾದಿಗಳನ್ನು ಮುಗಿಸಿ ಬೆಳಗಿನ ಉಪಹಾರವೂ ಆಯಿತು. ಈ ದಿನ ಮೊದಲಿಗೆ ತಿರಂಗಾ ಪಾರ್ಕ್, ನಂತರ ಮ್ಯೂಸಿಯಂ ಮತ್ತು ಗವರ್ನಮೆಂಟ್ ಸಾಮಿಲ್. ಇಷ್ಟಾದ ಮೇಲೆ ನಮ್ಮ ಮೊದಲ ಹಡಗಿನ ಪ್ರಯಾಣ. ಸ್ವರಾಜ್ ದ್ವೀಪಕ್ಕೆ. ಹ್ಯಾವ್ಲೊಕ್ ಐಲ್ಯಾಂಡ್ ನ ಸ್ವದೇಶಿ ಹೆಸರು. ನೇತಾಜಿ ಸುಭಾಷ್ ಚಂದ್ರ ಬೋಸ್ ರ ಸ್ಮರಣಾರ್ಥವಾಗಿ ಸ್ವರಾಜ್ ದ್ವೀಪವೆಂದು ನಾಮಕರಣವಾಗಿದೆ.
ತಿರಂಗಾ ಪಾರ್ಕ್ ನಲ್ಲಿ ಸ್ವಲ್ಪ ಹೆಚ್ಚು ಹೊತ್ತು ಕಳೆಯಲು ಬಿಟ್ಟಿದ್ದರು. ಮಕ್ಕಳೆಲ್ಲಾ ದೊಡ್ಡದಾದ ಆ ಪಾರ್ಕ್ ನ ಮೂಲೆ ಮೂಲೆಗಳಲ್ಲೂ ಫೋಟೊಗಳನ್ನು ಕ್ಲಿಕ್ಕಿಸುತಿದ್ದರು. ಸಮುದ್ರದ ದಂಡೆಯ ಮೇಲಿನ ಆ ಪಾರ್ಕ್ ಸುಂದರವಾಗಿತ್ತು.
ಅಲ್ಲಿಂದ ಮ್ಯೂಸಿಯಂ ಗಳ ಕಟ್ಟಡ ಹತ್ತಿರಲ್ಲೇ ಇತ್ತು. ಅಂಡಮಾನ್ ನ ಜನ ಜೀವನ, ಅಲ್ಲಿಯ ಆದಿವಾಸಿಗಳ ಬಗ್ಗೆ ಚಿತ್ರಗಳು, ಸಮುದ್ರದಾಳದ ಜೀವ ಜಂತುಗಳ ಪರಿಚಯ, ಹವಳದ ಗಿಡಗಳು ಹೀಗೆ ಹಲವಾರು ವಸ್ತುಗಳು ಮ್ಯೂಸಿಯಮ್ ನಲ್ಲಿ ನೋಡಲು ಸಿಕ್ಕಿದವು.
ಸಮುದ್ರಿಕಾ ಮರೈನ್ ಮ್ಯೂಸಿಯಮ್, ಪ್ರಾಣಿಶಾಸ್ತ್ರ ವಿಭಾಗ, ಮಾನವ ಶಾಸ್ತ್ರ, ಮತ್ಸ್ಯ, ಗುಡ್ಡಗಾಡು ಇವುಗಳ ಪ್ರತ್ಯೇಕ ಮ್ಯೂಸಿಯಮ್ ಗಳು ಹತ್ತಿರದಲ್ಲೇ ಇದ್ದುದರಿಂದ ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ಇಲ್ಲಿ ಸುಂದರವಾಗಿ ಕಳೆಯಿತು.
ಅಲ್ಲಿಂದ ಗವರ್ನಮೆಂಟ್ ಸಾಮಿಲ್, ಮರದ ಕೆತ್ತನೆಯ ಹಲವಾರು ಪೀಠೋಪಕರಣಗಳು, ಹಲವಾರು ಅಲಂಕಾರಿಕ ವಸ್ತುಗಳು. ನೋಡಿ ಕಣ್ತುಂಬಿಕೊಂಡೆವಷ್ಟೆ. ಅವುಗಳನ್ನು ಇಲ್ಲಿ ತರುವುದೂ ಕಷ್ಟ. ಮತ್ತೊಂದು.. ಪ್ರವಾಸಿಗರೆಂದು ಬೆಲೆಯೂ ಕೈಗೆಟಕದಷ್ಟಿತ್ತು.
ಈ ಕಾರ್ಖಾನೆಯು 19 ನೆ ಶತಮಾನದಲ್ಲಿ 1883 ರಲ್ಲಿ ಕಟ್ಟಲ್ಪಟ್ಟಾಗ ಭಾರತದಲ್ಲಷ್ಟೇ ಅಲ್ಲ ಏಷಿಯಾದಲ್ಲೇ ಅತೀ ದೊಡ್ಡ ಮರದ ಕಾರ್ಖಾನೆಯಾಗಿತ್ತು. ಇದು ಅತ್ಯಂತ ಪುರಾತನವಾಗಿದ್ದು ಹಲವಾರು ಜಾತಿಯ ಮರದ ತೊಲೆಗಳನ್ನು, ಹಲಗೆಗಳನ್ನು ಇಲ್ಲಿ ಯಂತ್ರದ ಸಹಾಯದಿಂದ ಕೊಯ್ಯುವ ಈ ಕಾರ್ಖಾನೆಯಲ್ಲಿ ವರ್ಷಕ್ಕೆ ಸುಮಾರು 20000 ತೊಲೆಗಳನ್ನು ಸಂಗ್ರಹಿಸಿ ಪೋರೈಸಲಾಗುತ್ತದೆ.
ಬ್ರಿಟಿಷರು ಈ ಕಾರ್ಖಾನೆಯನ್ನು ಸ್ಥಾಪಿಸಿ ಇಲ್ಲಿಂದ ದೊಡ್ಡ ಪ್ರಮಾಣದಲ್ಲಿ ಮರಗಳ ತೊಲೆಗಳನ್ನು, ಹಲಗೆಗಳನ್ನು ಲಂಡನ್ , ನ್ಯೂಯಾರ್ಕ್ ಮುಂತಾದ ಪಟ್ಟಣಗಳಿಗೆ ರಫ್ತು ಮಾಡುತಿದ್ದರು. 1942 ರಲ್ಲಿ ಜಪಾನಿಯರ ಬಾಂಬ್ ದಾಳಿಗೆ ತುತ್ತಾಗಿದ್ದ ಈ ಕಾರ್ಖಾನೆಯನ್ನು ಮತ್ತೆ ಪುನರ್ ನಿರ್ಮಿಸಲಾಯಿತು.
ಬೆಳಿಗ್ಗೆ ನಾವು ಹೊರಡುವಾಗಲೇ ನಮ್ಮ ಲಗ್ಗೇಜ್ ಗಳನ್ನು ತಂದು ಲಾಂಜ್ ಲ್ಲಿ ಇಟ್ಟಿದ್ದುದರಿಂದ, ನಮಗಿಂತ ಮೊದಲೇ ಅವುಗಳು ನಮ್ಮ ಹಡಗು ನಿಲ್ದಾಣ ಅಥವಾ ಬಂದರಿನ ಬಳಿ ನಮಗಾಗಿ ಕಾಯುತಿದ್ದವು.
ಟ್ರಾಲಿಗಳಲ್ಲಿ ತುಂಬಿಸಿ ತಳ್ಳಿಕೊಂಡು ಒಂದೆರಡು ಫರ್ಲಾಂಗ್ ದೂರ ನಡೆಯುವುದಿತ್ತು. ಸಾಮಾನುಗಳ ಟ್ರಾಲಿ ತಳ್ಳುವ ಕೆಲಸ ಶ್ರೀಪಾದ ಮತ್ತು ಧಾತ್ರಿಯದು. ಅವರೇ ಸ್ವಇಚ್ಛೆಯಿಂದ ಅದನ್ನು ಮಾಡುತಿದ್ದರು. ಹಡಗಿನ ಸ್ಟೋರೇಜ್ ಒಳಗೆ ನಮ್ಮ ಲಗ್ಗೇಜ್ ಗಳನ್ನು ಇಟ್ಟು ಹಡಗಿನ ಒಳಗೆ ಪ್ರವೇಶಿಸಿ ನೋಡಿದರೆ ವಿಮಾನದಲ್ಲಿರುವಂತೆಯೇ ಆಸನಗಳು.
ಎರಡೂವರೆ ಗಂಟೆಗಳ ಪ್ರಯಾಣವಿತ್ತು ಪೋರ್ಟ್ ಬ್ಲೇರ್ ನಿಂದ ಸ್ವರಾಜ್ ದ್ವೀಪಕ್ಕೆ.ಗಾಜಿನ ಕಿಟಕಿಗಳಿಂದ ಸಮುದ್ರವನ್ನು ವೀಕ್ಷಿಸಬಹುದು. ಸಮುದ್ರದ ಮೇಲೆ ಹಡಗು ತೇಲುತ್ತಾ ಬಳುಕುತ್ತಾ ಸಾಗುವಾಗ ಏನೋ ಹೊಸ ಅನುಭವ. ದೊಡ್ಡ ಅಲೆಗಳು ಬಂದಾಗ ಹಡಗನ್ನೇ ಎತ್ತಿ ಎಸೆದಂತಾದಾಗ ಜೋರಾಗಿ ಕಿರುಚಬೇಕೆನಿಸುತ್ತದೆ. ಆದರೂ ಹಡಗಿನ ಪ್ರಯಾಣವೊಂದು ವಿಶಿಷ್ಟ ಆನಂದವನ್ನು ನೀಡಿತು.
ಪ್ರಯಾಣದಲ್ಲಿನ ಹೊಟ್ಟೆ ತೊಳಸುವಿಕೆ, ತಲೆ ಸುತ್ತುವುದು ಇವೆಲ್ಲಾ ಸಾಮಾನ್ಯವಾಗಿ ಎಲ್ಲರ ಅನುಭವಕ್ಕೆ ಬರುತ್ತದೆ.
ನಮಗೆ ಆ ದಿನ ಮದ್ಯಾಹ್ನದ ಊಟವನ್ನು ಪ್ಯಾಕ್ ಮಾಡಿ ತಂದು ಎಲ್ಲರಿಗೂ ಹಂಚಿದ್ದರು. ಒಬ್ಬೊಬ್ಬರಿಗೂ ಎರಡು ಚಪಾತಿ ಮತ್ತು ಪಲ್ಯ. ಮತ್ತು ವೆಜ್ ಪಲಾವ್ ಮತ್ತು ಸಲಾಡ್, ಜೊತೆಗೆ ಜ್ಯೂಸ್ ಕೊಟ್ಟಿದ್ದರು. ಪ್ರಯಾಣ ಸ್ವಲ್ಪ ಅಭ್ಯಾಸ ಆದ ಮೇಲೆ ಸೇವಿಸಲು ಹೇಳಿದ್ದರಿಂದ ಯಾರಿಗೂ ತಿನ್ನುವ ಅವಸರವಿರಲಿಲ್ಲ. ಅಲ್ಲದೇ ಹೊಟ್ಟೆ ಸಂಕಟವಾಗಿ ವಾಂತಿ ಬಂದರೆ ಎಂದು ಪೇಪರ್ ಬ್ಯಾಗ್ ಗಳನ್ನೂ ಇಟ್ಟಿದ್ದರು.
ಹಡಗು ಸಾಗುತ್ತಿರುವಾಗ ಮಧ್ಯದಲ್ಲಿ ಜೋರಾದ ಗಾಳಿ ಬೀಸುವುದು, ದೊಡ್ಡ ದೊಡ್ಡ ಅಲೆಗಳು ಸಮುದ್ರದ ಅಡಿಯಿಂದ ಉಕ್ಕುವುದು ಮುಂತಾದ ಪ್ರತಿಕೂಲ ವಾತಾವರಣ ಉಂಟಾದಾಗ ವಿಮಾನದಲ್ಲಿದ್ದಂತೆಯೇ ಇಲ್ಲಿಯೂ ಮೈಕ್ ನಲ್ಲಿ ಹೇಳುತ್ತಾರೆ. ಸಣ್ಣಗೆ ಭಯವಾದರೂ ಕೂಡ ಪ್ರತಿಯೊಂದು ಕ್ಷಣವನ್ನೂ ಯಥೇಚ್ಛವಾಗಿ ಆನಂದಿಸಿದ್ದನ್ನು ಮಾತ್ರ ಮರೆಯುವಂತಿಲ್ಲ.
ಮಾರ್ಗ ಮಧ್ಯದಲ್ಲಿ ಹಲವಾರು ಚಿಕ್ಕ ಚಿಕ್ಕ ದ್ವೀಪಗಳು ನೋಡಲು ಸಿಗುತ್ತವೆ. ಅಲ್ಲಿ ಜನ ಸಂಚಾರವಾಗಲಿ, ವಾಸವಾಗಲಿ ಕಾಣಲಿಲ್ಲ.
ಎರಡೂವರೆ ಗಂಟೆಗಳ ಹಡಗಿನ ಪ್ರಯಾಣ ಮುಗಿಯುವುದರೊಳಗೆ ಎಲ್ಲರೂ ಊಟ ಮಾಡಿ ಮುಗಿಸಿದರು. ಸ್ವರಾಜ್ ದ್ವೀಪವನ್ನು ತಲುಪಿದಾಗ ನಮಗಾಗಿ ಬಸ್ ಕಾದು ನಿಂತಿತ್ತು. ಲಗ್ಗೇಜ್ ಗಳನ್ನೆಲ್ಲಾ ಅವರೇ ಎತ್ತಿ ಬಸ್ಸಿನ ನಾಲ್ಕು ಸೀಟಿನಲ್ಲಿ ಜೋಡಿಸಿ, ನಮ್ಮನ್ನೂ ಕೂರಿಸಿ ನಮಗಾಗಿ ಮೊದಲೇ ಕಾದಿರಿಸಿದ್ದ ರೆಸಾರ್ಟ್ ಗೆ ಕರೆತಂದರು.
ಸುಂದರವಾದ ಜಾಗ, ಒಳ್ಳೆಯ ವಾತಾವರಣ, ಪಕ್ಕದಲ್ಲೇ ರೆಸ್ಟೋರೆಂಟ್ ಇತ್ತು. ನಮ್ಮ ಸಾಮಾನುಗಳನ್ನು ನಮ್ಮ ನಮ್ಮ ಕೋಣೆಯ ಒಳಗೆ ತಂದಿಟ್ಟರು. ಪರಸ್ಪರ ಪರಿಚಯಕ್ಕಾಗಿ ಎಲ್ಲರನ್ನೂ ಒಂದೇ ಸ್ಥಳದಲ್ಲಿ ಕರೆದು ನಿಲ್ಲಿಸಿದಾಗ, ಎಲ್ಲರೂ ಅವರವರ ಕುಟುಂಬವನ್ನು ಪರಿಚಯಿಸಿದರು.
ಹದಿನಾರು- ಹದಿನೇಳು ವಯಸ್ಸಿರಬಹುದು, ಒಬ್ಬಳೇ ಹುಡುಗಿಯೊಬ್ಬಳು ನಮ್ಮ ಜೊತೆ ಬಂದಿದ್ದಳು. ಅವಳು ಇದು ಎರಡನೇ ಬಾರಿ ಅಂಡಮಾನ್ ಪ್ರವಾಸಕ್ಕೆ ಬರುವುದಂತೆ. ಯಾರೊಂದಿಗೂ ಮಾತಿಲ್ಲ, ಅವಳಷ್ಟಕ್ಕೆ ಅವಳು ಒಬ್ಬಳೇ ಇರುತಿದ್ದಳು. ಒಂದು ರೀತಿಯ ಖಿನ್ನತೆ ಅವಳನ್ನು ಕಾಡುತ್ತಿದೆಯೇನೋ ಅನಿಸುವಷ್ಟು ನಿರ್ಲಿಪ್ತಳಾಗಿ ಇರುತಿದ್ದಳು.
ನಾವು ಉಳಿದುಕೊಂಡ ಆ ರೆಸಾರ್ಟ್ ನ ಹಿಂಭಾಗದಲ್ಲಿ ಖಾಸಗಿ ಬೀಚ್ ಇತ್ತು. ಸಣ್ಣದಾದ ತೀರ. ಅತಿಯಾದ ಅಲೆಗಳ ಅಬ್ಬರವಿಲ್ಲ. ಅಲ್ಲಿ ಹೋಗಿ ಕೂತ ನಮಗೆ ಎದ್ದು ಬರಲು ಮನಸ್ಸೇ ಬರಲಿಲ್ಲ. ರಾತ್ರಿ ಎಂಟರಿಂದಲೇ ಊಟ ಶುರು. ಯಾರಿಗೆ ಯಾವಾಗ ಬೇಕೋ ಹೋಗಿ ಊಟ ಮಾಡಬಹುದಿತ್ತು. ನಾವು ಊಟವಾದ ಮೇಲೆ ಮತ್ತೆ ಸಮುದ್ರ ತೀರಕ್ಕೆ ಹೋಗಿ ಕೂತೆವು. ಸಂಜೆಯ ಕತ್ತಲ ನೀರವತೆ, ಸಮುದ್ರದ ಸಣ್ಣನೆ ಮೊರೆತ, ಬೀಸುವ ಹಿತವಾದ ಉಪ್ಪು ನೀರಿನ ಗಾಳಿ, ಚಂದ್ರನ ಮೃದುವಾದ ಬೆಳಕು ಈ ಸಮಯವಿಲ್ಲೇ ನಿಲ್ಲಬಾರದೇ ಅನಿಸುವಂತಿತ್ತು.
(ಮುಂದುವರೆಯುವುದು..)
*************************
ಶೀಲಾ ಭಂಡಾರ್ಕರ್.
Very good beautiful article and travelogue
ಸುಂದರವಾಗಿ ವರ್ಣಿಸಿದ್ದೀರಿ. ಮುಂದೆ ಓದುವ ಕುತೂಹಲ.
ಮನೋಜ್ಞ ನಿರೂಪಣೆ ಶೀಲಾರವರೆ…
ಸುಂದರ ಪ್ರವಾಸ ಕಥನ.ಅಭಿನಂದನೆಗಳು