ಗಜಲ್
ತೇಜಾವತಿ ಡಿ
ಅವರು ನನ್ನ ಪ್ರೀತಿಯನ್ನು ಕೊಲ್ಲಲು ಬರುತ್ತಿದ್ದಾರೆ ನೀನು ಹಾಗೇ ನೋಡುತ್ತಿರು
ಅವರು ಮೌಡ್ಯದ ಗೋರಿ ನಿರ್ಮಿಸುತ್ತಿದ್ದಾರೆ ನೀನು ಹಾಗೇ ನೋಡುತ್ತಿರು
ನಾನು ಪ್ರೇಮದ ದೀಪ ಹಚ್ಚಲು ಅನಂತವಾಗಿ ತಿರುಗುತ್ತಿರುವೆ
ಅವರೀಗ ಉರಿವ ಬತ್ತಿಗೆ ಸೀಮೆ ಎಣ್ಣೆ ಬೆರೆಸುತ್ತಿದ್ದಾರೆ ನೀನು ಹಾಗೇ ನೋಡುತ್ತಿರು
ತೀರದ ದನಿ ಆರದ ಬೆಳಕು ಅರಸಿ ಹೊರಟಿರುವೆನು ನಾನೀಗ
ಹಳೆ ನಾಗರಿಕತೆಗೆ ಹೊಸ ತೊಟ್ಟಿಲು ಕಟ್ಟುತ್ತಿದ್ದಾರೆ ನೀನು ಹಾಗೇ ನೋಡುತ್ತಿರು
ನೋಡು ಗೆಳೆಯ ನನ್ನ ಬರಹದ ವಿರಹ ಪುಟಿದೆದ್ದು ಕುಣಿಯುತ್ತಿದೆ
ಇಲ್ಲಿ ಇಜತ್ತಿನ ಶಾಸನಗಳ ಕೆತ್ತುತ್ತಿದ್ದಾರೆ ನೀನು ಹಾಗೇ ನೋಡುತ್ತಿರು
ದೇವ,ದೈವಜಗ ಒಪ್ಪದ ಹಾದಿಯೊಂದ ಹುಡುಕಿ ಹೊರಟಿದ್ದೇನೆ
ದಾರಿಯುದ್ದಕ್ಕೂ ನವಿಲಕೊರಳಿಗೆ ರೆಕ್ಕೆ ಕಟ್ಟಿ ಕುಣಿಸುತ್ತಿದ್ದಾರೆ ನೀನು ಹಾಗೇನೋಡುತ್ತಿರು
ಬದಲಾದ ದುನಿಯಾದ ಕಣ್ಣುಗಳಿಗೆ ಮೆತ್ತಿದ ಹಳೆಯ ಕಿಲುಬು ಹೋಗಬೇಕಿದೆ
ಬಣ್ಣದ ಬುಗುರಿಗೆ ತುಕ್ಕಿನ ಮೊಳೆ ಬಡಿದು ಆಡಿಸುತ್ತಿದ್ದಾರೆ ನೀನು ಹಾಗೇ ನೋಡುತ್ತಿರು
ಬೀಸಿದರೆ ಬೀಸಿಬಿಡು ಕಂಬಳಿ ‘ತೇಜ’ ಪ್ರೇಮದ ಮಳೆ ಸುರಿಯಲಿ
ಗೋಡೆಯ ಮೇಲೆ ದ್ವೇಷದ ಸುಣ್ಣ ಮೆತ್ತುತ್ತಿದ್ದಾರೆ ನೀನು ಹಾಗೇ ನೋಡುತ್ತಿರು
*************************