ಕವಿತೆ
ಹಾಡು ಹುಟ್ಟುವ ಜಾಡು
ಡಾ.ಯಾಕೊಳ್ಳಿ .ಯ.ಮಾ
ಹಿಮಾಲಯದೊಳಗೂ
ಮಾತಿದ್ದವು
ಮಾತನಾಡಲು ಹಿಲೆರಿಯೋ
ತೇನಸಿಂಗನೋ ಬರಬೇಕಿತ್ತು
ಸಮುದ್ರದ ದಂಡೆಯುದ್ದಕ್ಕೂ
ಮಾತಿದ್ದವು
ಮಾತನಾಡಲು ಕಾರಂತರೋ
ಕಾಯ್ಕಿಣಿಯೋ
ನಾಗವೇಣಿಯವರೋ
ಬರಬೇಕಿತ್ತು
ಈ ಧಾರವಾಡದ ಮೌನ
ಶ್ಯಾಲ್ಮಲೆಗೂ ಮಾತಿದ್ದವು
ಮಾತನಾಡಲೋ ಬೇಂದ್ರೆಯೋ
ಚಂಪಾನೋ ಬರಬೇಕಿತ್ತು
ಆ ಸಹ್ಯಾದ್ರಿಗೂ ಮಾತಿದ್ದವು
ನುಡಿಸಲು ಕುವೆಂಪುವೇ
ಜನಿಸಬೇಕಿತ್ತು
ಈ ಬರಗಾಲದ ಬರಗೇಡಿ
ನಾಡಿಗೂ ಮಾತಿದ್ದವು
ಮಧುರಚನ್ನರೋ
ಸಿಂಪಿಯೋ
ಮುತ್ತಾಗಬೇಕಿತ್ತು
ಇರುತ್ತವೆ ಮಾತು ಕಲ್ಲೊಳಗೆ ,
ನೀರೊಳಗೆ.ಮಣ್ಣೊಳಗೆ,
ಹೂ ಕಾಯಿ ಬೇರೊಳಗೆ,
ಒಲಿದು ಮಾತನಾಡುವ ಎದೆಗಳಿದ್ದರೆ
ನುಡಿಯುತ್ತವೆ
ಒಡಲ ಹಾಡು
ಹಾಡುತ್ತವೆ
***********************************************