ನುಡಿ – ಕಾರಣ

ಲೇಖನ

ನುಡಿ – ಕಾರಣ

ಗೋನವಾರ ಕಿಶನ್ ರಾವ್

golden details of church bascillica celiling

ಸರಿ ಸುಮಾರು ಆರು ದಶಕಗಳ ಹಿಂದಿನ ಮಾತು.ಸುಗ್ಗಿಯ ನಂತರದ ದಿನಗಳು.ಊರಿನ ಆಸಕ್ತ ಜನಗಳೆಲ್ಲ ಸೇರಿ ನಾಟಕದ ತಾಲೀಮು ನಡೆಸುತ್ತಿದ್ದರು.ಪೌರಾಣಿಕನಾಟಕ.’ಅಕ್ಷಯಾಂಬರ’
ಮಹಾಭಾರತದ ವಸ್ತು. ಸಭಾಪರ್ವದ ತುಣುಕು.ದ್ರೌಪದಿಯ ವಸ್ತ್ರಾಪರಣ ಮತ್ತು ಕೃಷ್ಣ ಅಂಬರ ಅಂದರೆ ವಸ್ತ್ರ ಅಕ್ಷಯವಾಗಲೆಂದು ಹರಸಿ ದ್ರೌಪದಿಯ ಮಾನ ಕಾಪಾಡಿದ್ದು. ದುಶ್ಯಾಸನ ಸೀರೆ ಸೆಳೆಯುವಾಗ ಕೃಷ್ಣ ನನ್ನು ಪ್ರಾರ್ಥಿಸುವ ಕಂದ ಪದ್ಯ ಹಾಡುವ ಭಾಗ.

ಪತಿಗಳೈವರು ಅತಿ ಮೌನ ದಿಂದಿಹರೋ
ಅತಿ ಬಲಾಢ್ಯರು ಪ್ರಚಂಡ ಶೂರ ಧೀರರ
ರತಿ ತಲೆಬಾಗಿ ರೋಧಿಸುತ್ತಿರುವರೋ ಮಹಾ
ರತಿಗಳನು, ಎನ್ನನು ಮಾನ ಕಾಪಾಡಿ ರಕ್ಷಿಸೋ

ಆ ಸೀಸ ಪದ್ಯದ ಸಾಲು‌ ಹೀಗೆ ಇದ್ದಿರಬೇಕು ನೆನಪಿಲ್ಲ.ಹಾಗೆ ನೋಡಿದರೆ ಮೇಲೆ ಬರೆದಿದ್ದೆಲ್ಲ ಇಂದು ಸಂಯೋಜಿಸಿಕೊಂಡದ್ದು. ಅಂದು ನೆನಪಿನಲ್ಲಿ ಉಳಿದಿರುವದು ಎಂದರೆ ನಮ್ಮದೊಡ್ಡ ಮನೆಯ ಒಂದು ಪಾರ್ಶ್ವದಲ್ಲಿ ನಡೆಯುತ್ತಿರುವ ದಿನದ ತಾಲೀಮ್ ನಿಂದಾಗಿ ಅದರ ಎಲ್ಲಾ ಸಂಭಾಷಣೆಗಳು ಮಾತ್ರ ಇಂದಿಗೂ ಕಂಠಗತ.‌
ಅತೀ ವಿಷಾಂತರವಾಯಿತು.ಬಹುಶಃ “ಮೌನ” ಪದ ಮಾತ್ರ ಅಂದೇ ಮನದಾಳದಲ್ಲಿ ಸ್ಥಾಪಿತವಾಗಿಬಿಟ್ಟಿತ್ತು.

ಎರಡು ” ಮೌನ ಕಣಿವೆ ” ಗಳನ್ನು ಭೂಮಿತಾಯಿ ನಮಗಾಗಿ ನೀಡಿದ್ದಾಳೆ.ಅಮೇರಿಕೆಯಲ್ಲಿ ಒಂದು
ಭಾರತದಲ್ಲಿ ಇನ್ನೊಂದು.ಸುಮ್ಮನೆ ಮಾಹಿತಿಗೆಂದು.

ನಂತರದ ದಿನಗಳಲ್ಲಿ ಮೌನ ಪದ ಬಂದಾಗೆಲ್ಲ ಈ ಸನ್ನಿವೇಶ ನೆನಪಿಗೆ ಬರುತ್ತಿತ್ತು.
ಮೌನಕ್ಕೊಂದು ವ್ಯಾಖ್ಯೆ ನೀಡಬಹುದೇ ? ಬಹುಶಃ ಖಚಿತವಾದ ಉತ್ತರ ಇರಲಿಕ್ಕಿಲ್ಲ ಗೊತ್ತಿದ್ದವರು ಹೇಳಿದರೆ ಖುಷಿಯಾಗುತ್ತದೆ

ಆಕಾರ ನಿರಾಕಾರವೆಂಬ ಸ್ವರೂಪಂಗಳೆರಡು
ಒಂದು ಆಹ್ವಾನ ಒಂದು ವಿಸರ್ಜಜನ
ಒಂದು ವ್ಯಾಕುಳ ಒಂದು ನಿರಾಕುಳ
ಉಭಯಕುಳರಹಿತ ನಿಮ್ಮ ಶರಣ ನಿಶ್ಚಿಂತನು.
– ಅಲ್ಲಮ ಪ್ರಭು

ಪ್ರಸಿದ್ಧ ವಿಮರ್ಶಕ ಓ.ಎಲ್ ನಾಗಭೂಷಣ ಸ್ವಾಮಿಯವರು ಅಲ್ಲಮ‌ಪ್ರಭುವಿನ ಮೇಲಿನ ವಚನದ ಸಾಲುಗಳನ್ನು ಉದ್ಧರಿಸುತ್ತ,
ಮಾತು – ಮೌನ ಬೇರೆ ಬೇರೆಯಲ್ಲ. ಮಾತಿಗೆ ಆಕಾರವಿದೆ ಮೌನ ನಿರಾಕಾರ.ಆಕಾರ ನಿರಾಕಾರ ಎರಡೂ ಸ್ವರೂಪಗಳೇ.ನುಡಿಯು ಆಕಾರ ಪಡೆಯಬೇಕಾದರೆ ನುಡಿಗೆ ಮುನ್ನ ನುಡಿಯ ಒಂದೊಂದು ಧ್ವನಿಗಳ ನಡುವೆ ಮತ್ತು ನುಡಿಯ ನಂತರ ಮೌನ ಇದ್ದೇ ಇರಬೇಕು.ಮೌನವಿರದ ನುಡಿ,ನುಡಿ ಅಥವಾ ಯಾವುದೇ ಸದ್ದು ಇಲ್ಲದೆ ಮೌನವಿರಲು ಸಾಧ್ಯವಿಲ್ಲ. ಎಂದು ವಿವರಿಸುತ್ತಾರೆ.

ಇನ್ನೂ ವಿಸ್ತರಿಸಿ ಹೇಳಬಹುದಾದರೆ, ಕಾವ್ಯ ಮೀಮಾಂಸೆಯಲ್ಲಿ ‘ಯತಿ’ ಎನ್ನವ ಒಂದು ಪರಿಭಾಷೆ ಇದೆ.’ಯತಿ ಎಂಬುದೊಂದುಸಿರ್ವ ತಾಣ’ ಎಂದು ಅದನ್ನು ವ್ಯಾಖಾನಿಸಲಾಗಿದೆ.ಹೀಗಾಗಿ ಈ ಉಸಿರು ತೆಗೆದುಕೊಳ್ಳುವ ತಾಣ ಎಂದರೇನೆ ಮೌನ ಎನ್ನಬಹುದೆ ? ಹಳೆಗನ್ನಡ ಕಾವ್ಯಗಳಲ್ಲಿ’ | ‘ ಸಂಕೇತ ಬಳಕೆ ಯಾಗುವ ದನ್ನು ಗಮನಿಸಿಯೇ ಇರುತ್ತೇವೆ.
ಅದು ಉಸಿರ್ವತಾಣ. ಹಾಗೆಯೇ ಷಟ್ಪದಿ ಯ ಮೂರನೆಯ ಸಾಲಿನ ಕೊನೆಯ ಅಕ್ಷರದ ನಂತರ, ಜಾನಪದ ತ್ರಿಪದಿಗಳ ಎರರಡನೆಯ ಸಾಲಿನ ‘ – ‘ಬರುವ ಮೊದಲಿನ ಅಕ್ಷರ, ಇವೆಲ್ಲವೂ ಮೌನಗಳೇ.

ನನ್ನ ಹೊಟ್ಟೆಯಲೊಂದು ಚಿನ್ನ ಹುಟ್ಟಿತು ತಾಯಿ ನಿಮ್ಮೂರಿಗೊಮ್ಮೆ ಕರೆದೊಯ್ಯೆ- ಹಡೆದವ್ವ
ರಾಮಾಸಾಲ್ಯಾಗ ಬರೆ ಹಾssಕ.

ಇವೆಲ್ಲವೂ ಸಹನೀಯ ಮೌನಗಳು.ನಿಜ ಜೀವನದಲ್ಲಿಯೂ ನಾವು ಅನೇಕ ಸಹನೀಯ ಮೌನಗಳನ್ನು ಕಾಣುತ್ತೇವೆ.

  • ಮನೆ ನಿಶ್ಯಬ್ದ. ಯಾರೂ ಮಾತನಾಡುತ್ತಿಲ್ಲ. ಯಾಕೆ ? ಮಗು ಮಲಗಿದೆ !
  • ಉದಯರಾಗ ಕೇಳುತ್ತಿದ್ದೇವೆ.ಬೆಳಗಿನ ಆನಂದ ಸವಿಯುವ ಸಮಯ ! ಮಾತು ಯಾರಿಗೆ ಬೇಕು ?
  • ಆಸಕ್ತಿ ಕರವಾದ ಉಪನ್ಯಾಸ ಅಥವ ಅನುಗ್ರಹ ಸಂದೇಶ ! ಸೂಜಿ ಬಿದ್ದರೂ ಕೇಳಿಸುವಂತಹ ಸದ್ದು !!
    ಯಾರು, ಗುಸಪಿಸ ಎಂದರೂ ರಸಾಭಾಸ.

ಕೆಲವೊಂದು ಸಾರಿ ಮೌನ ಸಹನೀಯ ವಾಗಲಾರದು ಮನೆಯಲ್ಲಿ ಎಲ್ಲರೂ ಊರಿಗೆ ಹೋಗಿದ್ದಾರೆ ಏನಾದರೂ ಹಳೆಯ ಕೆಲಸ ಮುಗಿಸಿಬಿಡೋಣ ಎಂದುಕೊಂಡರೆ ಉಹೂಂ ಸಾಧ್ಯವಿಲ್ಲ. ಇಂತಹ ಮೌನದಲ್ಲಿ ಏನೂಮಾಡಲಾರೆವು ಇದು ವಿಚಿತ್ರ ಮೌನ.

ಗಂಡ ಹೆಂಡತಿ ಮಧ್ಯೆ ಶೀತಲ ಸಮರ ಇಬ್ಬರೂ ರಾಜಿಯಾಗಲು ಸಿದ್ಧರಿಲ್ಲ. ಪುಟ್ಟ ಮಾತು ಬಾರದ ಹಸುಳೆ. ಇವರ ಸಂಭಾಷಣೆಯ ಮಾಧ್ಯಮ.’ಪುಟ್ಟ ಆಗಲೇ ಒಂಬತ್ತು ಹೊಡೆಯಿತು ಇನ್ನೂ ಸ್ನಾನವಿಲ್ಲ ಇವತ್ತು ರಜೆಯೇನು ಕೇಳು’ ಉತ್ತರ ” ಪುಟ್ಟ ಎರಡನೆಯ ಚಹ ಕೊಟ್ಟರೆ ಸ್ನಾನ ಎಂದು ನಿಮ್ಮ ಅಮ್ಮನಿಗೆ ಗೊತ್ತಿಲ್ಲೇನು ಕೇಳು’ ಇದು ಒಂದು ಒಂದು ರೀತಿಯ ಸಹ್ಯ – ಅಸಹನೀಯ ಮೌನ.

ಅತೀ ಅಸಹನೀಯ ಮೌನ ದಲ್ಲಿ ಸ್ಶಶಾನ ಮೌನ ಬರುತ್ತದೆ.ಇಲ್ಲಿ ಎಲ್ಲರೂ ಮಾತನಾಡುತ್ತಾರೆ ಅದರೆ ಮಾತು ಯಾರಿಗೂ ಬೇಡ.

ಮಾತಿಗೆ ವಿವಿಧ ಅರ್ಥಗಳಿರುವಂತೆ ಮೌನಕ್ಕೂ ಅನೇಕ ಅರ್ಥ ಗಳಿರುತ್ತವೆ.ಮಾತನ್ನು ಅರ್ಥಮಾಡಿಕೊಳ್ಳಲು ಎಷ್ಟು ಬುದ್ಧಿವಂತಿಕೆ ಅಗತ್ಯವೋ ಮೌನದ ಅರ್ಥಗ್ರಹಿಸಲು ಅಷ್ಟೇ ಅಗತ್ಯ. ಅಥವಾ ಅದಕ್ಕಿಂತ ಒಂದು ತೂಕ ಹೆಚ್ಚಿನ ಬುದ್ಧಿವಂತಿಕೆ ಬೇಕಾಗುತ್ತದೆ.ಬಳಸುವ ಸಂದರ್ಭ,ಧ್ವನಿಯ ಏರಿಳಿತಗಳಿಗೆ ಅನುಗುಣವಾಗಿ ನುಡಿಗೆ ಇರುವಂತೆ ಮಾತಿಗೂ ಮೌನಕ್ಕೂ ಅರ್ಥ ಇದೆಯೆಂದಂತಾಯಿತು.
ನೆನಪಿಡಬೇಕಾದ ಸಂಗತಿ ಎಂದರೆ ನಮ್ಮ ಮನೋಭಾವದ ಉತ್ಕಂಠತೆಯಲ್ಲಿ ನಮ್ಮ ನೆರವಿಗೆ ಬರುವುದು ಮೌನವೇ ಹೊರತು ಮಾತಲ್ಲ ! ಇದರಲ್ಲಿಯ ಒಂದು ದೌರ್ಬಲ್ಯ ಎಂದರೆ ಆಕಾರ ಇರುವ ಮಾತು ನಿರಾಕಾರ ಮೌನ ಎರಡೂ ಪ್ರೀತಿ,ದ್ವೇಷ ಅಸೂಯೆ, ಸಿಟ್ಟು ಗಳಂತಹ ಭಾವೋದ್ರೇಕದ ಸಂಗತಿಗಳನ್ನು ಒಳಗೊಂಡಿರುವದರಿಂದ ಎರಡೂ ಅಪಾರ್ಥಕ್ಕೆ ಒಳಗಾಗುವ ಅಪಾಯ ತಪ್ಪಿದ್ದಲ್ಲ ಅದಕ್ಕಲ್ಲವೇ ಬಸವಣ್ಣನವರು ಹೇಳಿದ್ದು

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಕೂಡಲ ಸಂಗಮ ಮೆಚ್ಚಿ
ಅಹುದಹುದೆನಬೇಕು.

ಮೌನ – ಮಾತುಗಳು , ವೈಜ್ಞಾನಿಕ ಪ್ರಪಂಚಕ್ಕೆ ಸೇರಿದವುಗಳು. ಮೌನ ಬರಹದ ವ್ಯಾಪ್ತಿಯಲ್ಲಿ ವಿಜ್ಞಾನ, ಕಲೆ ಕಾವ್ಯ,ನಾಟಕ, ಮಾನಸಿಕ ಶಾಸ್ತ್ರ, ಮುಂತಾಗಿ ಎಲ್ಲವೂ ಸಮ್ಮಿಳಿತವಾಗುತ್ತವೆ. ಅಷ್ಟು ಆಳಕ್ಕಿಳಿಯುವ ಉದ್ದೇಶ ಇಲ್ಲಿ ಇಲ್ಲವಾದ್ದರಿಂದ ಕಂಡರಿಯದ ಕೇಳರಿಯದ ಜಗತ್ತನ್ನು ಪ್ರವೇಶಿಸುದಕ್ಕಿಂತ ಕಂಡ , ಕೇಳಿದ ಸಂಗತಿಗಳಿಗೇ ಶಬ್ಬರೂಪ ನೀಡಲು ಪ್ರಯತ್ನಿಸಲಾಗಿದೆ.ಮಾನಸಿಕವಾಗಿ ನಮಗೆ ಅತೀ ದೂರ ಅಲ್ಲದ ಮತ್ತು ಅಷ್ಟೇ ಹತ್ತಿರವೂ ಅಲ್ಲದ ಈ ನುಡಿ – ನಾಡಿನ ಆವರಣದ ಒಳಗೆ, ಹೇಗೆ ಕೆಲಸ ಮಾಡಿದೆ ಎಂದು ತಿಳಿದುಕೊಳ್ಳುವುದು ಸುವಿಚಾರ ಅಲ್ಲವೇ ? ಇದೊಂದು ವಿಸ್ಮಯ ಜಗತ್ತು.ಇಲ್ಲಿ ಶಬ್ದಗಳದೇ ಆಟ.ಆಸಕ್ತಿ ಹೊಂದಿರುವ ಎಲ್ಲರೂ ಆಟಗಾರರೇ !
ನಿರ್ಣಯಗಳಿಲ್ಲ. ನಿರ್ಣಾಯಕರಿಲ್ಲ. ಆದರೆ ಚಪ್ಪಾಳೆ ತಟ್ಟುವ, ಟೀಕಿಸುವ, ಸಹಯೋಗ ನೀಡುವ, ನುಡಿ, ನಾಟಿಬಾಂಬು ಗಿಂತ ತೀಕ್ಷಣ ಎನ್ನುವ ಸತ್ಯದ ನಡುವೆಯೂ ಜವಾಬ್ದಾರಿ ಎನ್ನುವ ಚಾಟಿಯೊಂದಿದೆ ಎನ್ನುವುದು ಬಹಳ ಅಗತ್ಯದ ಸಂಗತಿ.
ನಮ್ಮ ಗಾದೆ ಮಾತುಗಳಲ್ಲಿ ಮೌನ ಹಾಸು ಹೊಕ್ಕಾಗಿದೆ.ಮಾತು ಬೆಳ್ಳಿ ಮೌನ ಬಂಗಾರ.ಮೌನಂ ಸರ್ವತ್ರ ಸಾಧನಂ. ಇತ್ಯಾದಿಗಳು ಸಾಕಷ್ಟು ಇವೆ.
ಪದ್ಯ ಭಾಗಕ್ಕೆ ಬರುವಾಗ,

ಪಶ್ಚಿಮ ಗಿರಿಶಿಖರದಲಿ ಸಂಧ್ಯೆಯ ರವಿ;
ನಿರ್ಜನಕವಿಶೈಲದೊಳಗೊಬ್ಬನೆ ಕವಿ ;
ಮಲೆನಾಡಿನ ಭುವಿ ಮೇಲರುಣಚ್ಛವಿ;
ವಸಂತ ಸಂದ್ಯಾ ಸುವರ್ಣ ಶ್ರಾಂತಿ!
ಅನಂತ ಶಾಂತಿ !

ಸೂರ್ಯಾಸ್ತದ ಹೊಂಬಣ್ಣದ ಸೂರ್ಯ,ಕವಿಶೈಲದ ಮೌನ, ಮಲೆನಾಡು, ಅದನ್ನಾವರಿಸಿದ,ಮುಸ್ಸಂಜೆಯ ಕಾಂತಿ ಯಲಿ ಶ್ರಾಂತಿ = ಮಾತು, ಬೇಡ ಅನುಭವಿಸು ಶಾಂತಿ ಎಂದೆನುವ ‘ಕುವೆಂಪು’ ವಾಣಿಯಲ್ಲಿ ಮೌನದ ಒಟ್ಟಾರೆ ಅರ್ಥ ಗ್ರಹಿಸಿಕೊಂಡಿದ್ದೇವೆ.ಹೌದಾದರೆ ಹೌದೆನ್ನಿ.ಮೊನ್ನೆಯಷ್ಟೇ ೧೨೫ ವರ್ಷಗಳನ್ನು ಪೂರೈಸಿದ ಬೇಂದ್ರೆ ತಾತನ ( ಎಲ್ಲರು ಅಜ್ಜ ಬಳಸಿ ಬಳಸಿ, ಅಂಕಿತನಾಮ ಮಾಡಿಬಿಟ್ಟಿದ್ದಾರೆ. ನಾನು ಪಕ್ಕಾ ರಾಯಚೂರಿ ಅದಕ್ಕೆಂದೇ ಈ ಪ್ರಯೋಗ) ಮೌನದ ವ್ಯಾಖ್ಯಾನ ಕೇಳಲೇ ಬೇಕು.

ಕ್ಷಣಕ್ಷಣವು ಹೊಸಹೊಸದಿದು ಘನಗಗನವಿತಾನ
ದಿನದಿನ ಗ್ರಹಮಾಲೆಯ ರಿಂಗಣಗುಣಿತದ ತಾನ
‘ತಿರುತಿರುಗಿಯು ಹೊಸತಾಗಿರಿ’ಎನುತಿದೆಋತುಗಾನ
ಈ ಹಾಡಿಗೆ ಶೃತಿ ಹಿಡಿದಿದೆ ಬ್ರಹ್ಮಾಂಡದ ಮೌನ.

Image result for photos of  kuvempu

ವಿವರಣೆ ಬೇಕೆ ? ನಾನಂತೂ ಮೌನಿ !

ಪು.ತಿ.ನರಸಿಂಹಾಚಾರ್ಯರ ‘ ಯದುಗಿರಿಯ ಮೌನವಿಕಾಸ ‘ ಅನಂತ ಮೂರ್ತಿಯವರ ಕಥೆ ‘ಮೌನಿ’ ಹೀಗೆ ಸಾರಸ್ವತ ಪ್ರಪಂಚದಲ್ಲಿ ಎಲ್ಲರೂ ‘ಮೌನ’ ದ ಆರಾಧಕರೇ ನಿನ್ನೆಯಷ್ಟೆ ನಮ್ಮ ಮಹಾದೇವ ಕಾನತ್ತಿಲ್ ಅವರು ಸುಂದರ ರಚನೆ ನೀಡಿದ್ದಾರೆ.ಅದು ಹೀಗಿದೆ :

Image result for photos of putina poett

.
ಮೌನಗಬ್ಬ

ಅತ್ತ ಮೌನ
ಇತ್ತ ಮೌನ
ಅತ್ತಿತ್ತೆತ್ತ ಮೌನ

ಮಗು ಮೌನ
ನಗು ಮೌನ
ಮಾಗಿ ಮಾಗಿ ಮೌನ

ಕಣ್ಣು ಮೌನ
ಕಣಿವೆ ಮೌನ
ಮಣ್ಣು ಮಣ್ಣಾದ ಮೌನ

ಗಣಿ ಮೌನ
ಗಣಿತ ಮೌನ
ಗಣ ಮಣಿಸಿದ ಮೌನ

ಗಾಣ ಮೌನ
ಎತ್ತು ಮೌನ
ಕಬ್ಬ ರಸವೆ ಮೌನ

ಕಿರಿದರಲ್ಲಿ ಹಿರಿದನ್ನು ಸೂಚಿಸುವದೇ ಮಹಾದೇವ ಅವರ ಶೈಲಿ.ಮೌನವನ್ನು ಇವರು ಅದಕು ಇದಕು ಎದಕೂ ಬಳಸಬಲ್ಲರು.ಮೌನ ಮಾಗಿ ಬಿಸಿಲಿಗೂ, ಮಾಗಿ ಕಳಿತವಾದ ಮನಸ್ಸಿಗೂ, ಮಗುವಿನ ಮಂದಹಾಸಕ್ಕೂ ಸಂಬಂಧ ಕಲ್ಪಿಸಬಲ್ಲರು. ನನಗೆ ಸಡನ್ನಾಗಿ ಪಂಜೆ ಮಂಗೇಶರಾಯರು ನೆನಪಾಗಿಬಿಡುತ್ತಾರೆ.

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?
ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು?
ಸವರಿ ಆನೆಯ ಸೊಂಡಿಲಿನ ರಣಕೊಂಬನಾರ್ ಭೋರ್ಗರೆದರೋ?

ಹುಲಿಯ ಹಾಲನ್ನು ಕುಡಿಯುವ ಕವಣೆಯ ದಾರದಿಂದ ಹೆಬ್ಬಾವನ್ನು ಸೆಳೆಯುವ,ಆನೆಯ ಸೊಂಡಿಲನ್ನೇ ಕಿತ್ತು ರಣಕಹಳೆ ಊದುವ ಸಾಹಸಕ್ಕಿಂತ ಸಾಹಸ ಮಹದೇವ ಅವದರದು. ಮಣ್ಣನ್ನೇ ಮಣ್ಣಾಗಿಸುತ್ತಾರೆ.ಮಣ್ಣನ್ನೇ ಮಣ್ಣಾಗಿಸಿ ಕುಂಬಾರಿನ ತಿಗರಿಯಲ್ಲಿ ವಿವಿಧ ಆಕಾರಗಳನ್ನು ನಿರ್ಮಿಸುತ್ತಾರೆ ಇವರು.ಅದಕ್ಕೆಂದೇ ಇವರ ಕವಿತೆ ಕಬ್ಬಿನ ರಸದಷ್ಟೇ ಮಧುರ.ನೋಡಿ ಎಲ್ಲವೂ ಮೌನ ಎಂಬ ಝಳಪಿಸುವ ಪದಗಳ ಆಯುಧದಿಂದ. ದಿಲ್ಲಿಗೆ ಹೋದರೂ ಡೊಳ್ಳಿಗೆ ಒಂದೇ ಪೆಟ್ಟಂತೆ. ಮಹದೇವ ಅವರ ‘ಮೌನ’ದ ಪ್ರಭಾವ ಪ್ರಪಂಚದ ಮೂಲೆಮೂಲೆಗಳನ್ನು ಅರಸಬಲ್ಲದು.
ಪ್ರೇಮ – ವಿರಹ ಗಳಲ್ಲಿ ಕಣ್ಣು ಮನಸುಗಳು ‘ಮೌನಕ್ಕೆ’ ಭಾಷ್ಯ ಬರೆದರೆ, ಕದನ – ವಿರಾಮ ಗಳಲ್ಲಿ,ವಾದ- ವಿವಾದ ಗಳಲ್ಲಿ ‘ಮೌನ’ಕ್ಕೆ ಜಯ.

ಇನ್ನು ಚಿತ್ರ ಪ್ರಪಂಚದಲ್ಲಿ ಯಂತೂ ಮೌನ ದ ಮೇಲಿನ ಹಾಡುಗಳು ಅಗಣಿತ.ಗಣಿ ಮೌನ ! ಗಣಿತ ಮೌನ!! ಆದರೂ ಒಂದು ಹಾಡು ನುಡಿಯಿಂದಾಗಿ ಆಕರ್ಷಿಸುವ ಶಕ್ತಿ ಹೊಂದಿದ್ದು.

ಮೌನಮೇಲನೋಯಿ ಈ ಮರಪುರಾನಿ ರೇಯಿ
ಎದೆಲೋ ವೆನ್ನೆಲ ಕಲಿಗೇ ಕನ್ನುಲ
ತಾರಾಡೆ ಹಾಯಿಲಾ.
( ಮೌನವೇ ಹಿರಿದೆನಗೆ,
ಮರೆಯಲಾಗದೀ ರಾತ್ರಿ
ಮನ ಹೀರುವ ,ಬೆಳದಿಂಗಳು
ಕಂಗಳಲ್ಲಿ ಸೂಸುತಿರೆ,
ತೂರಾಡುವೆ ಹಾಯಾಗಿ ) .
ತೆಲುಗು ಚಲನಚಿತ್ರ ಸಾಗರ ಸಂಗಮಂ ನ ಈ ಗೀತೆ,ಮೌನವನ್ನು ವರ್ಣಿಸುವ ಕಲ್ಪನೆ ಬಹು ಸುಂದರ.ಅಸರ ನಾಲ್ಕು ಸಾಲುಗಳು ಮತ್ತು ಅಸರ ಭಾವಾನುವಾದ :

ಅದರೂ ಒಮ್ಮೊಮ್ಮೆ ಮೌನ ಕೆಲಸಕ್ಕೆ ಬಾರದು ಎನ್ನುವ ವಾದವೂ ಇದೆ ಪ್ರತಿಭಟನೆಯಲ್ಲಿ, ಘೋಷಣೆಗಳಲ್ಲಿ, ಜಗಳ ದೊಂಬಿಗಳಲ್ಲಿ ಈ ಮೌನದಿಂದೇನು ಪ್ರಯೋಜನ ? ಅನ್ಯಾಯ ಅತ್ಯಾಚಾರ ಗಳನ್ನು ಮೌನದಿಂದ ಪ್ರತಿಭಟಿಸಲಾಗದು ಎಂದು ಕೇಳುವವರೂ ಇಲ್ಲದಿಲ್ಲ.ಅದನ್ನು ನಾನು ದೂರವಿಡಲು ಪ್ರಯತ್ನಿಸಿದ್ದೇನೆ.

ಮೌನವಾಗಿರುವುದಕ್ಕೂ ಎದೆಗಾರಿಕೆ ಬೇಕು. ನುಡಿಯ ರೂಪ ತಾಳದಿದ್ದರೆ ನಮ್ಮ ವ್ಯಕ್ತಿತ್ವ ಇಲ್ಲವಾದೀತು ಎನ್ನುವ ಅಳುಕು ಮನದಾಳದಲ್ಲಿ ಮನೆ ಮಾಡಿದ್ದರೆ ಮೌನಪಾಲನೆ ಅಸಾಧ್ಯ. ಮೌನದಿಂದ ಕೇಳಲು, ಮೌನದಿಂದ ನೋಡಲು, ವಾಸ್ತವಾಂಶ ಕಾಣಲು ಮೌನವೇ ಗತಿ. ಈ ಎಲ್ಲ ಸಂಗತಿಗಳಿಗೆ ನಮ್ಮಲ್ಲಿರುವ ಅಹಂಕಾರ ಅಳಿಯಬೇಕು ಎನ್ನುವುದು ಆಧ್ಯಾತ್ಮದ ಮಾತು.
ಆಧ್ಯಾತ್ಮದ ದಾರಿ ದೂರ. ಬಂದದ್ದೆಲ್ಲಿಗೆ ಮತ್ತೆ ಇಲ್ಲಿಗೇ. ಜಗತ್ತು ಗೋಳಕಾರವಾಗಿದೆ ‘ಮೌನ’ವೂ ಗೋಳಕಾರ.


ಹೆಚ್ಚಿನ ಓದಿಗೆ :


ಮೌನ – ಅಂಕಣ ಬರಹ – ಓ.ಎಲ್.ನಾಗಭೂಷಣ ಸ್ವಾಮಿ.
ಅಲ್ಲಮ ಪ್ರಭು ವಚನಗಳು – ವಚನ ಮಂಟಪ.
ಭಾರತೀಯ ಕಾವ್ಯ ಮೀಮಾಂಸೆ – ತೀ.ನಂ.ಶ್ರೀ.
ಜೋ ಜೋ ಹಾಡು – ಜಾನಪದ – ಕೃಪೆ ಸಾಕ್ಷಿಕಲ್ಲು
ಪಕ್ಷಿಕಾಶಿ – ಕುವೆಂಪು
ವಿನಯ – ಆಯ್ದ ಕವನಗಳು – ದ.ರಾ.ಬೇಂದ್ರೆ.
ಹುತ್ತರಿ ಹಾಡು – ಪಂಜೆ ಮಂಗೇಶರಾಯರು.
ಮೌನಗಬ್ಬ – ಮಹಾದೇವ ಕಾನತ್ತಿಲ್.

********************************************

Leave a Reply

Back To Top