ಕವಿತೆ
ಮಾತು ಮತ್ತು ಹೂ
ಸಿದ್ಧರಾಮ ಕೂಡ್ಲಿಗಿ
ಅವರಿವರು ಆಡಿದ
ಮಾತುಗಳನೀಗ ಹೆಕ್ಕುವುದೇ
ಒಂದು ಕೆಲಸವಾಗಿದೆ
–
ಕೆಲವು-
ತರಗೆಲೆಗಳಂತೆ
ಕಣ್ಣೆದುರೇ ತೂರಿಹೋಗುತ್ತವೆ
–
ಕೆಲವು-
ನೆಲದಾಳದ ಎದೆಯಲಿ
ಭದ್ರವಾಗಿ ಕೂತು
ಚಿಂತಿಸಿ, ಮೊಳಕೆಯೊಡೆದು
ಗಿಡವಾಗುತ್ತವೆ
ಕೆಲವು ಹೂವರಳಿಸುತ್ತವೆ
ಕೆಲವು ಮುಳ್ಳುಗಳಾಗುತ್ತವೆ
–
ಕೆಲವಂತೂ-
ಹೆಮ್ಮರಗಳಾಗಿ
ಬೀಳಲು ಬಿಟ್ಟುಬಿಡುತ್ತವೆ
–
ಕೆಲವು-
ಮಾತುಗಳನ್ನು
ಕನ್ನಡಿಯ ಮುಂದೂ
ಆಡಿದ್ದೇನೆ
ಅದು ಮುಗುಳ್ನಕ್ಕು
ಸುಮ್ಮನೆ ನುಂಗಿ
ಗೋಡೆಗೆ ಆನಿಕೊಂಡಿದೆ
–
ಅವರಿವರ ಎದೆಗಳ
ಹುದುಲಿನಲ್ಲಿ ಸಿಕ್ಕಿಹಾಕಿಕೊಂಡ
ಮಾತುಗಳನ್ನೂ
ನಾನೀಗ ಕಿತ್ತು ತೆಗೆಯಬೇಕಿದೆ
ಸ್ವಚ್ಛಗೊಳಿಸಿ ತೋರಬೇಕಿದೆ
ಹುದುಲು ಪದಗಳದಲ್ಲ ನಿಮ್ಮದೆಂದು
–
ಕಿಟಕಿಯಾಚೆ
ಇರುವ ಹೂ ತಣ್ಣಗೆ ನಗುತಿದೆ
ಮಾತುಗಳ
ಗೊಡವೆ ನಿನಗೇಕೆ
ಬಾ ! ಸುಮ್ಮನೆ
ನನ್ನೊಂದಿಗೆ
ಮೌನವಾಗಿ ಅರಳು ಎಂದು
***********************************************