ಕವಿತೆ
ಭಾವ ಭುವನ
ಕಲಾ ಭಾಗ್ವತ್
ಕಾದ ನೆಲದ ಮೌನ
ಮಡುಗಟ್ಟಿ ಮಳೆ ಸುರಿವಾಗ
ಹೊಳಹು ಕೊಟ್ಟು ಹಾಯುವ ಮಿಂಚಿಗೆ
ಒಮ್ಮೆ ನಿಂತು ಏನೆಂದು ಕೇಳಬಾರದೆ?
ಹರಿವ ನದಿಯೊಡನೆ ಸೇರಿದ ಹನಿ ಮುತ್ತು
ಅಲೆ ಅಲೆಯಾಗಿ…
ಹರಿವ ಮುಸ್ಸಂಜೆಗೆ
ಮೆರುಗು ನೀಡಿ ಜಾರುವ ರಂಗಿಗೆ
ಒಮ್ಮೆ ನಿಂತು ಪಿಸುಮಾತ ಆಲಿಸಬಾರದೇ?
ಮೌನ ಮಥಿಸಿ ಪಕ್ವವಾಗಿದೆ ಈಗ
ಮತ್ತೆಲ್ಲವೂ ಮುಚ್ಚಿಕೊಂಡಿದೆ
ಶಿಶಿರದ ಇರುಳಿನಲಿ…
ತಣ್ಣನೆ ಬಿಚ್ಚಿದೆ ಮನ ಮಾತ್ರ
ಮುಂಜಾವು ಎಂದಿಗಿಂತಲೂ ಆರ್ದೃ
ಬೆಚ್ಚಗೆ ಸಿಹಿಯ ಸವಿ
ದೂರದಲ್ಲೇ ನಿಂತು
ಕಡಲ ತೆರೆಗಳ ಸೆಳೆವಾಗ
ಹೊಳೆವ ಮುಖದಲ್ಲಿ ಅರಳುವ
ಕನಸುಗಳು ನನಗಷ್ಟೇ ಸೀಮಿತವೀಗ
ಬಿಗುಮಾನವೆನಗೆ
ಇದಕ್ಕೆಲ್ಲ ಉತ್ತರವ
ಹುಡುಕಲಾಗದು ನನಗೆ
ಹುದುಗಿರುವ ಮಾತುಗಳು
ಸುಲಭದಲಿ ಅರ್ಥಕ್ಕೆ ದಕ್ಕದಂತೇ..
ತುದಿ ಮೊದಲಿಲ್ಲದ ಎಷ್ಟೋ ಪ್ರಶ್ನೆಗಳ
ಕಣ್ಣಿನಾಳದಲಿ ಇಳಿದು ತಿಳಿದು
ಕೊಟ್ಟ ಮುಗುಳು ನಗುವಿನ ಉತ್ತರ
ಅರ್ಥವಾಗಿದೆ ನನಗೆ ಮಾತ್ರ
ಮಾತಾಗಿ ಬರದಿರುವುದನೆಲ್ಲ
ಕವಿತೆಯಾಗಿ ಬರೆಯಲೇ…?
ನಿನಗೆ ಮಾತ್ರ.
*****************************************************
ಚೆಂದ ಕವಿತೆ
ಧನ್ಯವಾದಗಳು ಸಂಗಾತಿ ಬಳಗದವರಿಗೆ
ಕವಿತೆಯಾಗಿ ಬರೆಯಲೇ ಮನದ ಭಾವನೆಯನೆಲ್ಲ
ನಿನಗೆ ಮಾತ್ರ…
ನಿಜಕ್ಕೂ ಚಂದದ ಕವಿತೆ..ಆರ್ದೃತೆಯ ಭಾವ ತುಂಬಿದೆ
ಅಭಿನಂದನೆ ಕವಯಿತ್ರಿಗೆ