ಅಂಕಣ ಬರಹ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ-11
ಆತ್ಮಾನುಸಂಧಾನ
ಗೇರು ಹಕ್ಕಲಿನಲ್ಲಿ
ಅನುಭಾವ ಗೋಷ್ಠಿಗಳು (೧)
ನಮ್ಮ ಕೇರಿಗೆ ಹೊಂದಿಕೊಂಡಂತೆ ಪೇರುಮನೆ ನಾರಾಯಣ ನಾಯಕ ಎಂಬುವವರ ಒಂದು ವಿಶಾಲವಾದ ಗೇರು ಹಕ್ಕಲ’ವಿತ್ತು. ಅದನ್ನು ನಮ್ಮ ಜಾತಿಯವನೇ ಆದ ಗಣಪತಿ ಎಂಬುವನು ನೋಡಿಕೊಳ್ಳುತ್ತಿದ್ದ. ಗಣಪತಿ, ನಾರಾಯಣ ನಾಯಕರ ಮನೆಯ ಜೀತದ ಆಳು. ತನ್ನ ಹೆಂಡತಿ ಸಾವಿತ್ರಿಯೊಡನೆ ಒಡೆಯರ ಮನೆಯ ಕಸ ಮುಸುರೆ, ದನದ ಕೊಟ್ಟಿಗೆಯ ಕೆಲಸ ಮುಗಿದ ಬಳಿಕ ಅವನು ಗದ್ದೆ ಕೆಲಸದ ಮೇಲ್ವಿಚಾರಣೆ ಇತ್ಯಾದಿ ನೋಡಿಕೊಂಡು ಇರುತ್ತಿದ್ದ ಸರಿ ಸುಮಾರು ಎಪ್ರಿಲ್ ಮೇ ತಿಂಗಳು ಗೇರು ಬೀಜಗಳಾಗುವ ಹೊತ್ತಿಗೆ ಗೇರು ಬೀಜಗಳನ್ನು ಕೊಯ್ದು ದಾಸ್ತಾನು ಮಾಡಿ ಒಡೆಯನ ಮನೆಗೆ ಮುಟ್ಟಿಸುವುದು ಅವನ ಜವಾಬ್ದಾರಿಯಾಗಿತ್ತು. ಗೇರು ಬೀಜಗಳಿಗೆ ಅಷ್ಟೊಂದು ಬೆಲೆಯಿಲ್ಲದ ಕಾಲದಲ್ಲಿ ನಾಯಕರು ಗೇರು ಬೆಳೆಯ ಆದಾಯದ ಕುರಿತು ಅಷ್ಟೇನೂ ಕಾಳಜಿ ಪೂರ್ವಕ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ನಮ್ಮ ಗೆಳೆಯರ ಗುಂಪಿಗೆ ನಾಯಕರ ಗೇರು ಹಕ್ಕಲವೆಂಬುದು ಅತ್ಯಂತ ಪ್ರೀತಿಯ ಆಡುಂಬೊಲವಾಗಿತ್ತು. ಮೇವಿನ ತಾಣವೆನಿಸಿತ್ತು. ನಮ್ಮ ಅನುಭವ ಅನುಭಾವಗಳ ವಿಕಾಸ ಕೇಂದ್ರವಾಗಿತ್ತು.
ನಮ್ಮ ಕೇರಿಯಲ್ಲಿ ಆಗ ಹೆಚ್ಚೂ ಕಡಿಮೆ ಸಮಾನ ವಯಸ್ಕ ಗೆಳೆಯರೆಂದರೆ ನಾರಾಯಣ ವೆಂಕಣ್ಣ, ನಾರಾಯಣ ಮಾಣಿ, ಕೃಷ್ಣ ಮಾಣಿ, ಹೊನ್ನಪ್ಪ ವೆಂಕಣ್ಣ, ಗಣಪತಿ ಬುದ್ದು, ನಾನು ಮತ್ತು ನನ್ನ ತಮ್ಮ ನಾಗೇಶ. ಈ ಸಪ್ತ ಪುಂಡರ ದಂಡು ರಜೆಯ ದಿನಗಳಲ್ಲಿ ಮನೆಯಿಂದ ಹೊರಬಿದ್ದರೆಂದರೆ ಗೇರುಹಕ್ಕಲಿನಲ್ಲೇ ಇರುತ್ತಾರೆ ಎಂದು ಹಿರಿಯರೆಲ್ಲಾ ಅಂದಾಜು ಮಾಡಿಕೊಳ್ಳುತ್ತಿದ್ದರು. ಹಾಗೆಂದು ಅದರ ಆಚೆಗೆ ನಮ್ಮ ಕಾರ್ಯಕ್ಷೇತ್ರ ವಿಸ್ತರಣೆಗೊಂಡಿರಲಿಲ್ಲವೆಂದು ಅರ್ಥವಲ್ಲ. ಆದರೆ ಬೇರೆ ಯಾವ ಕಾರ್ಯಕ್ರಮ ಹಾಕಿಕೊಳ್ಳುವುದಕ್ಕೂ ಯೋಜನೆಗಳು ಸಿದ್ಧವಾಗುವುದು ಗೇರುಹಕ್ಕಲಿನಲ್ಲಿಯೇ. ಹಿತ್ತಲ ಮಧ್ಯದ ಹತ್ತಿಪ್ಪತ್ತು ವರ್ಷ ಹಳೆಯದಾದ ದೊಡ್ಡ ಗೇರುಮರವೊಂದು ನಮ್ಮ ಎಲ್ಲಾ ಚಟುವಟಿಕೆಗಳಿಗೆ ಹೊಂದಿಕೆಯಾಗುತ್ತ ತನ್ನ ಆಕ್ರತಿಯನ್ನು ಬದಲಿಸಿಕೊಳ್ಳುತ್ತಿತ್ತು. ಮರದ ವಿಶಾಲ ರೆಂಬೆಗಳಲ್ಲಿ ಮರಕೋತಿ ಆಟ’ ಆಡುವುದಕ್ಕೂ, ಯಕ್ಷಗಾನ ಬಯಲಾಟ’ ಕುಣಿಯುವುದಕ್ಕೂ, ಆಗಾಗ ನಡೆಯುವ ಮೇಜವಾನಿಗಳಿಗೂ ಈ ಮರದ ನೆರಳು ಆಶ್ರಯ ತಾಣವಾಗಿತ್ತು.
ಗೇರುಹಕ್ಕಲಿನಲ್ಲಿ ನಾವು ಕುಣಿಯುತ್ತಿದ್ದ ಯಕ್ಷಗಾನ ಬಯಲಾಟಗಳ ಕುರಿತು ನಾನು ಮುಂದೆ ಪ್ರಸ್ತಾಪಿಸಲಿರುವೆ. ಮೇಲೆ ಹೇಳಿದ ಮೇಜವಾನಿ’ ಎಂಬುದರ ಕುರಿತು ಒಂದಿಷ್ಟು ವಿವರಗಳನ್ನು ನೀಡಬೇಕು.
ಗೇರು ಹಕ್ಕಲಿನ ಒಡೆಯ ನಾರಾಯಣ ನಾಯಕರು ಮತ್ತು ಕಾವಲುಗಾರ ಗಣಪತಿಮಾವ’ನ ಕಣ್ಣು ತಪ್ಪಿಸಿ ನಾವು ಹಕ್ಕಲಿನಲ್ಲಿ ಗೇರುಬೀಜಗಳನ್ನು ಕದ್ದು ಯಾವುದಾದರೂ ಅಂಗಡಿಗೆ ಒಯ್ದು ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಬೆಲ್ಲ ಅವಲಕ್ಕಿ, ಬೇಯಿಸಿದ ಗೆಣಸು, ಚಕ್ಕುಲಿ, ಮಂಡಕ್ಕಿಉಂಡಿ ಇತ್ಯಾದಿ ಸಿಕ್ಕ ತಿನಿಸುಗಳನ್ನು ಖರೀದಿಸಿ ತಂದು ಎಲ್ಲರೂ ಗೇರುಮರದ ನೆರಳಿಗೆ ಬಂದು ಹಂಚಿಕೊಂಡು ತಿನ್ನುತ್ತಿದ್ದೆವು. ಗೇರು ಬೀಜಗಳನ್ನೇ ಸುಟ್ಟು ತಿನ್ನುವುದೂ ಇತ್ತು. ಗೇರುಬೀಜದ ಸೀಜನ್ ಮುಗಿಯುತ್ತಿರುವಾಗಲೇ ಮಾವಿನ ಮಿಡಿಗಳು ಬಿಡಲಾರಂಭಿಸುತ್ತಿದ್ದವು. ಆಗ ನಮ್ಮ ತಂಡ ಮಾವಿನ ತೋಪುಗಳನ್ನು ಅರಸಿ ಹೋಗುತ್ತಿತ್ತು. ಗೇರು ಹಕ್ಕಲಿನ ಬದಿಯಲ್ಲೇ ಮೂರ್ನಾಲ್ಕು ಮಾವಿನ ಮರಗಳಿದ್ದ ಒಂದು ಚಿಕ್ಕ ಹಿತ್ತಲವಿತ್ತು. ಅದು ಕೊಂಕಣಿ ಮಾತನಾಡುವ ಒಬ್ಬ ವಿಧವೆ ಅಮ್ಮ’ನಿಗೆ ಸೇರಿದುದಾಗಿತ್ತು.
ನಾಡುಮಾಸ್ಕೇರಿಯಲ್ಲಿರುವ ಏಕೈಕ ಕೊಂಕಣಿಗರ ಮನೆ ಅಮ್ಮನ ಮನೆ’ ನಾವು ಕಾಣುವ ಹೊತ್ತಿಗೆ ಈ ಅಮ್ಮ ವಿಧವೆಯಾಗಿ ಕೇಶಮುಂಡನ ಮಾಡಿಸಿಕೊಂಡು ಕೆಂಪುಸೀರೆ ಉಡುತ್ತಿದ್ದಳು. ಅಮ್ಮನ ಹೆಸರು ಏನೆಂದು ನಮಗೆ ಕೊನೆಯವರೆಗೂ ತಿಳಿಯಲೇ ಇಲ್ಲ. ಅವಳ ಹಿರಿಯ ಮಗ ಯಾವುದೋ ಉದ್ಯೋಗದಲ್ಲಿ ಹೊರಗೇ ಇರುತ್ತಿದ್ದ. ತನ್ನ ಬಳಿಯೇ ಇರುವ ಅವಳಿ ಮಕ್ಕಳು ರಾಮು ಲಕ್ಷಣರಿಗೆ ಒಂದು ಪುಟ್ಟ ಅಂಗಡಿ ಹಾಕಿಕೊಟ್ಟು ವ್ಯಾಪಾರಕ್ಕೆ ಹಚ್ಚಿದ್ದಳು. ಇದ್ದ ಸ್ವಲ್ಪ ಬೇಸಾಯದ ಭೂಮಿಯನ್ನು ಹಾಲಕ್ಕಿ ಒಕ್ಕಲಿಗರಿಗೆ ಗೇಣಿ ಬೇಸಾಯ’ ಕ್ಕೆ ನೀಡಿದ ಅಮ್ಮ, ಹಿತ್ತಲಿನಲ್ಲಿ ಬೆಳೆದ ಮಾವು ಮುರಗಲ ಇತ್ಯಾದಿ ಕಾಯಿಗಳಿಂದ ಹುಳಿ’ ತಯಾರಿಸಿ ಮಾರಾಟಮಾಡಿ ಜೀವನ ಸಾಗಿಸುತ್ತಿದ್ದಳು. ಗೇರುಹಕ್ಕಲಿಗೆ ಹೊಂದಿಕೊಂಡಂತೆ ಇರುವ ಅಮ್ಮನ ಹಿತ್ತಲಿಗೆ ಲಗ್ಗೆ ಹಾಕುವುದು ನಮಗೆ ಬಹಳ ಸುಲಭವಾಗಿತ್ತು. ಮಾವು ಕಸುಗಾಯಿಯಾದ ಸಂದರ್ಭ ನೋಡಿ ನಾವು ಅಮ್ಮನ ಹಿತ್ತಲಿನಿಂದ ಮಾವಿನ ಕಾಯಿಗಳನ್ನು ಕದ್ದು ತಂದು ಅವುಗಳನ್ನು ಸಣ್ಣಗೆ ಹೆಚ್ಚಿ ಹಸಿಮೆಣಸು ಉಪ್ಪು ಬೆರೆಸಿ ಕೊಚ್ಚೂಳಿ’ ಮಾಡಿ ಒಂದೊಂದು ಬೊಗಸೆಯಷ್ಟನ್ನು ಪಾಲು ಹಾಕಿಕೊಂಡು ತಿನ್ನುತ್ತಿದ್ದೆವು. ನಾವು ಮಾವಿನ ಕಾಯಿ ಕದಿಯಲು ಬಂದದ್ದು ಗೊತ್ತಾಗಿ ಅಮ್ಮ ತನ್ನ ಸಾಕು ನಾಯಿಯನ್ನು ಛೂ ಬಿಟ್ಟುಕೊಂಡು ಅನ್ನಿ ಯಯ್ಲಪಳೆ ರಾಂಡ್ಲೋ ಪುತಾನಿ…. ಎಂದು ಮೊದಲಾಗಿ ಬಯ್ದುಕೊಳ್ಳುತ್ತಾ ಓಡಿ ಬರುತ್ತಿದ್ದರೆ ನಾವು ಕೈಗೆ ಸಿಕ್ಕಷ್ಟು ದೋಚಿಕೊಂಡು ಓಡುವುದೇ ತುಂಬಾ ಮಜವಾಗಿರುತ್ತಿತ್ತು. ಮಾವಿನ ಹಣ್ಣುಗಳಾಗುವ ಸಮಯದಲ್ಲೂ ಮರದಡಿಯಲ್ಲೇ ಕಾದುಕುಳಿತು ಬಿದ್ದ ಹಣ್ಣುಗಳನ್ನಾಯ್ದು ತಿನ್ನುತ್ತಿದ್ದೆವು.
ಬೇಸಿಗೆಯ ದಿನಗಳಲ್ಲಿ ನಮ್ಮ ಬಾಯಿ ಚಪಲಕ್ಕೆ ಆಹಾರ ಒದಗಿಸಲು ಒಂದಿಲ್ಲೊಂದು ದಾರಿ ಇದ್ದೇ ಇರುತ್ತಿತ್ತು. ಬೆಳೆದುನಿಂತ ಗೆಣಸಿನ ಹೋಳಿಗಳಾಗಲಿ, ಶೇಂಗಾ ಗದ್ದೆಗಳಾಗಲಿ ಕಂಡರೆ ಮಬ್ಬುಗತ್ತಲಲ್ಲಿ ಉಪಾಯದಿಂದ ನುಗ್ಗಿ ಲೂಟಿ ಮಾಡುತ್ತಿದ್ದೆವು. ನಮಗೆ ಅತ್ಯಂತ ದುಷ್ಕಾಳದ ದಿನಗಳೆಂದರೆ ಮಳೆಗಾಲದ ದಿನಗಳು. ಕರಾವಳಿಯ ಜೀಗುಡುಮಳೆ ಹಿಡಿಯಿತೆಂದರೆ ಮನೆಯಿಂದ ಹೊರಗೆ ಹೋಗುವುದೇ ಕಷ್ಟವಾಗುತ್ತಿತ್ತು. ಕೆಲಸವಿಲ್ಲದೆ ಕುಳಿತಾಗ ಬಾಯಿ ಚಪಲ ಇನ್ನೂ ತಾರಕಕ್ಕೇರುತ್ತಿತ್ತು. ಕೆಲವು ಮನೆಗಳಲ್ಲಿ ಮಳೆಗಾಲದ ನಾಲಿಗೆ ಚಪಲಕ್ಕಾಗಿಯೇ ಬೇಯಿಸಿದ ಗೆಣಸಿನ ಹೋಳುಗಳನ್ನು ಒಣಗಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಜೋರು ಮಳೆ ಹೊಯ್ಯುವಾಗ ಒಂದೊಂದು ಮುಷ್ಟಿ ಒಣಗಿದ ಗೆಣಸಿನ ಹೋಳುಗಳನ್ನು ಕೈಗೆಕೊಟ್ಟು ಕೂಡ್ರಿಸುತ್ತಿದ್ದರು. ಅವುಗಳನ್ನು ಸುಲಭವಾಗಿ ಜಗಿದು ತಿನ್ನುವುದು ಸಾಧ್ಯವಿರಲಿಲ್ಲ. ಒಂದೊಂದೇ ಹೋಳುಗಳನ್ನು ಬಾಯಿಗಿಟ್ಟು ಲಾಲಾರಸದಲ್ಲಿ ನೆನೆಸಿ ಮೆದುಮಾಡಿಕೊಂಡು ಜಗಿದು ನುಂಗಬೇಕಾಗುತ್ತಿತ್ತು. ಈಗಿನ ಚೂಯಿಂಗ್ ಗಮ್ ಥರ ಸಮಯ ಕೊಲ್ಲಲು ಗೆಣಸಿನ ಹೋಳುಗಳು ಬಹಳ ಸಹಾಯ ಮಾಡುತ್ತಿದ್ದವು.
ಮಳೆಗಾಲದ ತಿನಿಸುಗಳಿಲ್ಲದ ದುಷ್ಕಾಳದ ಸಮಯದಲ್ಲಿ ನಮ್ಮ ನೆರವಿಗೆ ಬಂದದ್ದೇ ಗೊಣ್ಣೆಗೆಂಡೆ ಸುಳಿ’. ಮತ್ತೆ ಅದೇ ಗೇರುಹಕ್ಕಲ ನಮಗೆ ಬಲಿತ ಗೊಣ್ಣೆ ಗೆಂಡೆಗಳನ್ನು ನೀಡಿ ಉಪಕಾರ ಮಾಡುತ್ತಿತ್ತು. ಬೇಸಿಗೆಯಲ್ಲಿ ಸುಳಿವು ನೀಡದೇ ನೆಲದೊಳಗೆ ಅವಿತುಕೊಂಡಿದ್ದ ಗೊಣ್ಣೆಗೆಂಡೆಯ ಬೇರುಗಳು ಮಳೆ ಬೀಳುತ್ತಿದ್ದಂತೆ ಬಲಿತು ಚಿಗುರೊಡೆದು ಅದರ ಬಳ್ಳಿಗಳು ಗೇರುಮರದ ರೆಂಬೆಗಳನ್ನು ಆಶ್ರಯಿಸಿ ಹಬ್ಬುತ್ತಿದ್ದವು. ಬಳ್ಳಿಗಳ ಬುಡವನ್ನರಸಿ ಅಗೆದು ಗೊಣ್ಣೆಗೆಂಡೆಗಳನ್ನು ಆಯ್ದುಕೊಳ್ಳುವುದು ಸುಲಭವಾಗುತ್ತಿತ್ತು. ಒಂದು ಮುಷ್ಠಿಗಾತ್ರದ ಉರುಟಾದ ಈ ಗಡ್ಡೆಗಳಿಗೆ ಒರಟಾದ ಕಪ್ಪು ಸಿಪ್ಪೆಯ ಕವಚವಿರುತ್ತಿತ್ತು. ಗಡ್ಡೆಗಳನ್ನು ಬೇಯಿಸಿದಾಗ ಆಲೂಗಡ್ಡೆಯ ಸಿಪ್ಪೆಯಂತೆ ಸುಲಿದು ತೆಗೆಯಬಹುದಾಗಿತ್ತು. ಆದರೆ ಅಸಾಧ್ಯ ಕಹಿಯಾಗಿರುವ ಗೊಣ್ಣೆಗೆಂಡೆಗಳನ್ನು ಹಾಗೇ ಬೇಯಿಸಿ ತಿನ್ನುವುದು ಸಾಧ್ಯವಿರಲಿಲ್ಲ. ಅದಕ್ಕೆ ಸೂಕ್ತ ಕ್ರಿಯಾ ಕರ್ಮಗಳನ್ನು ಮಾಡಿ ಹದಗೊಳಿಸಿ ಗೊಣ್ಣೆಗೆಂಡೆಸುಳಿ’ಯನ್ನು ತಯಾರು ಮಾಡಬೇಕಾಗುತ್ತಿತ್ತು. ನಮ್ಮ ತಂಡದಲ್ಲಿ ನಮ್ಮೆಲ್ಲರಿಗಿಂತ ವಯಸ್ಸಿನಲ್ಲಿ ಸ್ವಲ್ಪ ಹಿರಿಯವನೆಂದರೆ ನಾರಾಯಣ ವೆಂಕಣ್ಣ. ಅವನಿಗೆ ಅದರ ಕೌಶಲ್ಯ ಚೆನ್ನಾಗಿ ತಿಳಿದಿತ್ತು. ಅವನ ಮಾರ್ಗದರ್ಶನದಂತೆ ನಾವು ನೆರವಿಗೆ ನಿಲ್ಲುತ್ತಿದ್ದೆವು.
ಗೇರು ಹಕ್ಕಲಿನಿಂದ ಎಲ್ಲರೂ ಸೇರಿ ಗಡ್ಡೆಗಳನ್ನು ಅಗೆದು ತಂದಾದಮೇಲೆ ಅವುಗಳನ್ನು ಚೆನ್ನಾಗಿ ತೊಳೆದು ಮಣ್ಣಿನ ಗಡಿಗೆಯೊಂದರಲ್ಲಿ ಹಾಕಿ ಸರಿಯಾಗಿ ಬೇಯಿಸುವುದು. ಗಡ್ಡೆಗಳು ಬೆಂದ ಬಳಿಕ ಅದರ ಸಿಪ್ಪೆ ಸುಲಿದು ತೆಳ್ಳಗೆ ಹೋಳುಗಳಾಗಿ ಹೆಚ್ಚಿ ಕೊಳ್ಳುವುದು. ಹೆಚ್ಚಿದ ಹೋಳುಗಳನ್ನು ಜಾಳಿಗೆಯಂಥ ಬಿದಿರಿನ ಬುಟ್ಟಿಯಲ್ಲಿ ತುಂಬಿ ಒಂದು ರಾತ್ರಿಯಿಡೀ ಹರಿಯುವ ನೀರಿನಲ್ಲಿ ಇಟ್ಟು ಬರಬೇಕು. ಇದರಿಂದ ಗಡ್ಡೆಯಲ್ಲಿರುವ ಕಹಿ ಅಂಶ ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
ಮರುದಿನ ಬುಟ್ಟಿಯನ್ನು ಎತ್ತಿ ತಂದು ಮತ್ತೊಮ್ಮೆ ಚೆನ್ನಾಗಿ ತೊಳೆದು ಬೇಯಿಸಿಕೊಳ್ಳುವುದು. ಬೆಂದ ಹೋಳುಗಳನ್ನು ಮರದ ಮರಿಗೆಯಲ್ಲಿ (ಅಂದಿನ ಕಾಲದಲ್ಲಿ ಅನ್ನ ಬಸಿಯುವುದಕ್ಕಾಗಿ ದೋಣಿಯಾಕಾರದ ಕಟ್ಟಿಗೆಯ ಮರಿಗೆಗಳು ಬಹುತೇಕ ಮನೆಗಳಲ್ಲಿ ಇದ್ದವು) ಹಾಕಿ ಒನಕೆಯಿಂದ ಜಜ್ಜಿ ಮೆದುಗೊಳಿಸುವುದು. ಅದಕ್ಕೆ ಸಮಪ್ರಮಾಣದ ಬೆಲ್ಲ ಕಾಯಿಸುಳಿ’ ಬೆರೆಸಿ ಹದಮಾಡಿದರೆ
ರುಚಿಯಾದ ಗೊಣ್ಣೆಗೆಂಡೆ ಸುಳಿ’ ಸಿದ್ಧವಾಗುತ್ತಿತ್ತು. ಎರಡು ದಿನಗಳ ಇಷ್ಟೆಲ್ಲ ವಿಧಿವಿಧಾನಗಳನ್ನು ನಾರಾಯಣಣ್ಣ ಅತ್ಯಂತ ತಾಳ್ಮೆಯಿಂದ ನಿರ್ವಹಿಸಿ, ಸಿದ್ಧವಾದ ಸುಳಿ’ಯನ್ನು ತಾನೇ ಬಾಳೆಲೆಯಲ್ಲಿ ನಮಗೆ ಪಾಲು ಹಾಕಿ ಕೊಡುತ್ತಿದ್ದ. ಇಪ್ಪತ್ನಾಲ್ಕು ಗಂಟೆಗಳ ಕಾಯುವಿಕೆಯ ಪರಿಣಾಮವೋ ಏನೋ ನಮ್ಮ ಪಾಲು ನಮ್ಮ ಕೈಗೆಟುಕಿದಾಗ ಮ್ರಷ್ಟಾನ್ನವೇ ಕೈಗೆ ಬಂದಂತೆ ಗಬಾಗಬಾ ಮುಕ್ಕುತ್ತಿದ್ದೆವು.
ಇಷ್ಟಾಗಿಯೂ ಗೊಣ್ಣೆ ಕಹಿ ಗುಣ ಹಾಗೇ ಉಳಿದುಕೊಂಡಿರುವುದು ಗಮನಕ್ಕೆ ಬರುತ್ತಿತ್ತಾದರೂ ಲೆಕ್ಕಿಸದೇ ತಿಂದು ಮುಗಿಸುತ್ತಿದ್ದೆವು. ಈ ಮೇಜವಾನಿ ಹೆಚ್ಚೆಂದರೆ ಮಳೆಗಾಲದ ಒಂದೆರಡು ದಿನ ಮಾತ್ರ ಸಾಧ್ಯವಾಗುತ್ತಿತ್ತು. ಆದರೆ ಪ್ರತಿ ಮಳೆಗಾಲದಲ್ಲೂ, ನಾವು ದೊಡ್ಡವರಾಗುವವರೆಗೂ ವರ್ಷಕ್ಕೆ ಒಮ್ಮೆಯಾದರೂ ಈ ಮೇಜವಾನಿಯ ಯೋಗವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಬಹುಶಃ ಇದೇ ಕಾರಣದಿಂದ ಇರಬಹುದು ನಾವೆಲ್ಲರೂ ಇದೀಗ ಐವತ್ತು ದಾಟಿದ್ದೇವೆ, ಆದರೆ ಯಾರಿಗೂ ಸಕ್ಕರೆಯ ಸಮಸ್ಯೆ’ ಕಾಡಲೇ ಇಲ್ಲ.
***************************
ರಾಮಕೃಷ್ಣ ಗುಂದಿ
ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಸೂಪರ್ ಅನುಭವ ತಮ್ಮದು ಸರ್, ಅಂದಿನ ಕಾಲದ ಆ ಬಾಲ್ಯ, ತಂಟಾಟಗಳು ಇಂದಿನ ಮಕ್ಕಳಿಗೆ ಅಷ್ಟಾಗಿ ಇಲ್ಲವಲ್ಲ ಅದೇ ಬೇಸರದ ಸಂಗತಿ ಸರ್. ನಾವೆಕ್ಲ ಹಳ್ಳಿಯಲಿ ಹುಟ್ಟಿ ಅಂದು ತಿಂದ ಮಾವಿನ ಕುಚ್ಚೊಳಿ ಬಾಯಲ್ಲಿ ನೀರುರಿಸುತ್ತದೆ.
ಧನ್ಯವಾದಗಳು
ಪ್ರತಿ ಕಂತಿನಲ್ಲಿಯೂ ಆಪ್ತವಾಗುವ ಜೀವನ ದರ್ಶನ ನಮಗೆ ಸಿಗುತ್ತಿದೆ …..ಅಭಿನಂದನೆಗಳು ಸರ್
ಧನ್ಯವಾದಗಳುತಮ್ಮೆಲ್ಲರ ಪ್ರೀತಿಗೆ
ನೆನಪಿನ ದೋಣಿಯಲ್ಲಿ ಸಾಗುವ ಅನುಭವ ಕಥನ ತುಂಬಾ ಚೆನ್ನಾಗಿ ಮೂಡಿ ಬ೦ದಿದೆ.
ಧನ್ಯವಾದಗಳುಸರ್
Sir, innomme baalyakke maralida anubhavavayitu…
Thank you, Sir…