ಪುಸ್ತಕ ಸಂಗಾತಿ
ಸರಹದ್ದುಗಳಿಲ್ಲದ ಭೂಮಿಯಕನಸು
ಕನ್ನಡ ಕಾವ್ಯ ಲೋಕದ ಹೊಸ ಬೆಳಕು
ಕವಯಿತ್ರಿ ನಿರ್ಮಲಾ ಶೆಟ್ಟರ 2020 ರಲ್ಲಿ ಕನ್ನಡ ಸಾಹಿತ್ಯದ ಕಾವ್ಯ ಲೋಕಕ್ಕೆ ಕೊಟ್ಟ ಹೊಸ ನೋಟದ ಕೃತಿ ‘ಸರಹದ್ದುಗಳಿಲ್ಲದ ಭೂಮಿಯ ಕನಸು’. ಹೌದು ಕವಿ ಹಾಗೆ. ಕವಿತೆಗಳಿಗೆ ಸರಹದ್ದುಗಳಿರುವುದಿಲ್ಲ. ಕಾವ್ಯ ಸದಾ ಮನುಷ್ಯ ಮನುಸ್ಸು ಗಳನ್ನು ಬೆಸೆಯುವ ,ಹೊಸ ಹೊಸ ಕನಸು ಕಾಣುವ, ಶೋಷಣೆಯ ಬಂಧಗಳ ಮುರಿದು , ಹೊಸ ಹುಡುಕಾಟ ಮಾಡುತ್ತಿರುತ್ತದೆ. ಅದು ಕಾವ್ಯದ ಕ್ರಿಯೆ. ಕನ್ನಡದ ಪರಂಪರೆಯೇ ಹಾಗೆ. ವಚನಗಳ ಬೇರುಗಳಿಂದ ಚಿಗಿಯುವ ಹೊಸ ಚಿಗುರು ಸರಹದ್ದುಗಳಿಲ್ಲದ ದೇಶ ದೇಶಗಳ ಮನಸುಗಳನ್ನು ಬೆಸೆಯುವುದೇ ಆಗಿರುತ್ತದೆ. ಬದುಕಿನ ಅಸಂಗತತೆ, ಸಂಕೀರ್ಣ ಮನಸ್ಥಿತಿಗಳ , ಆತಂಕ, ತಳಮಳದ ಮನಸುಗಳ ಮಧ್ಯೆ ಹುಟ್ಟುವ ಕಾವ್ಯ , ಕಸುವುಗೊಳ್ಳುವುದೇ ಸಂಕೋಲೆಗಳಿಲ್ಲದ ಭೂಮಿಯಲ್ಲಿ ನಿಂತು ಮನುಷ್ಯತ್ವದ ಕನಸು ಕಂಡಾಗ.
ಕವಿ ಸಂತನ ಹಾಗೆ. ನಾಳಿನ ಬೆಳಕಿಗೆ ವರ್ತಮಾನದಲ್ಲಿ ನಿಂತು ಹಂಬಲಿಸುತ್ತಿರುತ್ತಾನೆ. ಕರುಣೆ ಮತ್ತು ದಯೆಯನ್ನು ಉಡಿಯಲ್ಲಿಟ್ಟು ಹಂಚುವ ಮನಸೊಂದು ಕವಯಿತ್ರಿಯ ಒಡಲಲ್ಲಿ ತಣ್ಣಗೆ ಹರಿವ ನದಿಯಂತೆ , ಈ ಸಂಕಲನದ ಕವಿತೆಗಳಲ್ಲಿ ಹರಿದಿದೆ.
ಪ್ರಕೃತಿಯ ಸೂಕ್ಷ್ಮ ಗಮನಿಸುವಿಕೆ ಹಾಗೂ ಅದರಿಂದ ಕವಯಿತ್ರಿ ಕಟ್ಟಿಕೊಡುವ ಪ್ರತಿಮೆಗಳು ನಿರ್ಮಲಾ ಶೆಟ್ಟರ್ ಅವರ ಕವಿತೆಗಳಿಗೆ ಶಕ್ತಿ, ಕಸುವು ನೀಡಿವೆ.
ಭೂಮಿಯ ಚಲನೆ, ಹುಲ್ಲುಗರಿಕೆ, ಕತ್ತಲು, ಬೆಳಕು, ದೀಪಗಳನ್ನು ಅವರು ವಿವಿಧ ಕವಿತೆಗಳಲ್ಲಿ ಪಡಮೂಡಿಸುವ,ಗ್ರಹಿಸುವ ಮತ್ತು ಅವುಗಳಿಂದ ಹೊರಡಿಸುವ ಧ್ವನಿ ಸೊಗಸಾಗಿದೆ. ಅರ್ಥಗರ್ಭಿತ ವಾಗಿದೆ. ಚಲಿಸುವ
ಗಾಳಿಗೂ ಉಸಿರು ಕಟ್ಟುವುದನ್ನು ಗ್ರಹಿಸುವ ಶಕ್ತಿ ಅದ್ಭುತವಾದುದು.
” ಬಯಲ ಸಂತಾನವಾದ ಬಣ್ಣ
ಬಯಲಾಗಿ ನಿಲ್ಲುವುದು
ಸುಗಂಧ ಹರಡಿಕೊಂಡಷ್ಟೇ ಸರಳವಲ್ಲ
ಗಾಳಿಗೂ ಉಸಿರು ಸಿಕ್ಕಿಕೊಂಡಂತೆ
(ಸರಹದ್ದುಗಳಿಲ್ಲದ ಭೂಮಿಯ ಕನಸು)
ಹೀಗೆ ಚೆಂದ ಪ್ರತಿಮೆಗಳ ಮೂಲಕ ಬಣ್ಣ ಹಚ್ಚಿಕೊಂಡು ಬಣ್ಣವೇ ಆಗುವ, ದಾರಿ ಬಲು ದೀರ್ಘ ಎನ್ನುತ್ತಾ , ಆ ದಾರಿಗೆ ಸರಹದ್ದುಗಳಿಲ್ಲ. ಸರಹದ್ದುಗಳಿಲ್ಲದ ದಾರಿ ಭೂಮಿಯ ಮೇಲೆ ಹಾಸಿಕೊಂಡಿದೆ. ಭೂಮಿ ಸಹ ತನ್ನ ಪಾಡಿಗೆ ತಾನು ಸುತ್ತುತ್ತಿದೆ. ಮನುಷ್ಯ ಮಾತ್ರರಾದ ನಾವು ಮಾತ್ರ ಚಲಿಸಿದೇ ಸ್ಥಗಿತ ವ್ಯವಸ್ಥೆಯ ಭಾಗವಾಗಿದ್ದೇವೆ ಎಂಬ ಧ್ವನಿ ಇಲ್ಲಿ ಕಾಣ ಸಿಗುತ್ತದೆ.
ಜಗಕೆ ಬೆಳಕು ಹರಿಯುವುದಿಲ್ಲ ಎಂಬ ಕವಿತೆಯಲ್ಲಿ ಸಹ
” ಏನೊಂದು ಸಿಕ್ಕದೆ ಹೋದರೂ ದಕ್ಕಿಸಿಕೊಂಡದ್ದು
ಬೆಳಗು ಕತ್ತಲೆಯ ಮೀರಿದ್ದೆಂದು ಹೇಗೆ ಹೇಳಲಿ”
ಈ ಒಳನೋಟ, ಬದುಕಿನ ಧ್ಯಾನ ಕವಿಗೆ ಮಾತ್ರ ಕಾಣುವ ಹೊಳಹು .
” ಮಾತಿಲ್ಲದ
ಮೌನವೂ ಅಲ್ಲದ
ನಸುಕಿನಲಿ ಅರಳಿದ ಹೂ”
ಹೀಗೆ ಕವಿತೆಗಳು ಓದುಗನನ್ನು ಹೊಸ ಅರ್ಥವ್ಯಾಪ್ತಿಗೆ ಕರೆದೊಯ್ಯುತ್ತವೆ.
“ಕಲ್ಲಿನೆದೆ ಸೀಳಿ
ತಲೆಯೆತ್ತಿ ಗಾಳಿಗೆ ಬಳುಕುವ ಗರಿಕೆ”
ಎಂಬ ಸಾಲು ‘ನಮಿಸುವುದಾದರೆ ತಡವೇಕೆ’ ಎಂಬ ಕವನದಲ್ಲಿದೆ. ಇದೇ ಕವಿತೆಯ ಕೊನೆಯ ಸಾಲು ಹೀಗಿದೆ…
” ಒಮ್ಮೆ ನಮಿಸಿ ಬಿಡಿ
ಬೆಳಗುವ ದೀಪದ
ಧ್ಯಾನದಲಿರುವ ಕತ್ತಲಿಗೆ”
ಕವಯಿತ್ರಿಗೆ ಗರಿಕೆ ಹಾಗೂ ಕತ್ತಲು ಸಹ ಮುಖ್ಯವಾಗುವುದು ಹೀಗೆ..
ಗರಿಕೆ ಹುಲ್ಲು ಮತ್ತೆ ” ನಿಮ್ಮ ತಕ್ಕಡಿಯಲಿ ” ಎಂಬ ಕವಿತೆಯಲ್ಲಿ ಪುರುಷಾಹಂಕಾರವನ್ನು ಮೆಟ್ಟಿ ನಿಲ್ಲುತ್ತದೆ.
ನಿಮ್ಮೊಳಗಿನ ಅಹಂ ಬಿಟ್ಟು ನೋಡಿ…….. “ಒಲವೆಂಬುದು ಹೀಗೂ ನಳನಳಿಸುವುದು
ಲೆಕ್ಕವಿಲ್ಲದ ತುಳಿತಕೆ ಎದೆಯೊಡ್ಡಿಯೂ ,ತಲೆ ಎತ್ತಿ ನಿಂತ ಹುಲ್ಲಿನಂತೆ…”
“ಬೆಂಕಿ ಇರುವಲ್ಲಿ ಕುದಿತವಿದ್ದದ್ದೆ
ಒಲೆಯಾದರೂ ; ಎದೆಯಾದರೂ…..”
ಬದುಕಿನ ನಿಷ್ಠುರತೆಯನ್ನು ಎಷ್ಟು ಚೆಂದದ ರೂಪಕದಲ್ಲಿ ಹೇಳುತ್ತಾಳೆ ಕವಯಿತ್ರಿ. ಇದರ ಹಿಂದಿನ ನೋವು ಮಾತ್ರ ಊಹೆಗೆ ನಿಲುಕದ್ದು.
“ಹೇಳಬೇಕಿಲ್ಲ” ಎಂಬ ಕವಿತೆಯಲ್ಲಿ ಹಕ್ಕಿಯ ಕೂಗು,ಆ ನಗು …
ಅಳಿದು ಹೋಗಬೇಕೆಂದಿದ್ದ ನಿನ್ನ ಹೀಗೆ ಉಳಿಸಿಬಿಟ್ಟವು ಎಂಬುದು ಬದುಕಿನ ಭಾವನಾತ್ಮಕತೆಯ ಮಹತ್ವ ಸಾರುತ್ತವೆ.
‘ನಾವು ಹೀಗೆಯೆ’ ಕವಿತೆ ಬಂಡಾಯವನ್ನು ಸಾರುತ್ತಲೇ, ಪುರುಷ ಚಂಚಲತೆಯ ದಟ್ಟವಾಗಿ ಹಿಡಿದಿಡುತ್ತಲೇ, ಕೊನೆಯಲ್ಲಿ ….
ಇನ್ನಾದರೂ ಮುಖಕ್ಕೆ ಮುಖ ಕೊಟ್ಟು ; ಕಣ್ಣಲಿ ಕಣ್ಣು ನೆಟ್ಟು ಮಾತಾಡುತ್ತಲಿರಿ ; ಹಗಲ ಬೆಳಕಿನಲಿ …….. ಎಂಬಲ್ಲಿ ಪ್ರಾಮಾಣಿಕತೆಯನ್ನು ಹೆಣ್ಣು ಬಯಸುತ್ತಾಳೆ ಎಂಬ ದನಿಯಿದೆ.
“ದೇಹವನ್ನು ಸುಮ್ಮನಿರಿಸಿ” ಕವಿತೆ ಹೆಣ್ಣಿನ ಬದುಕಿನ ಆರ್ತನಾದವಿದೆ. ದಿನ ನಿತ್ಯದ ಜಂಜಾಟದಲ್ಲಿ ಬದುಕು ಸೆವೆಯುವ ಹಾದಿಯಿದೆ.
ಸಪ್ಪಳ ಮಾಡದಿರು ಗಾಳಿಯೆ ಬೆಳದಿಂಗಳಲಿ
ನಲ್ಲನ ಪಿಸುಮಾತು ಕೇಳದಾದೀತು
ಕಾದ ಅದೆಷ್ಟೋ ಮೌನ
ಹದಗೆಟ್ಟ ಮಾತು ಮರೆತು ಮೂಕವಾದೀತು
(ಗಾಳಿಗೊಂದು ವಿನಂತಿ) ಎಂಬಲ್ಲಿ ಮನಸು ಎಷ್ಟು ಸೂಕ್ಷ್ಮಗ್ರಾಹಿ. ಗಾಳಿಗೆ ವಿನಂತಿ ಮಾಡುವ ವಿನಯ ಕವಿಗೆ ಮಾತ್ರ ದಕ್ಕುವಂತಹದ್ದು.
ಧರೆಯೊಡಲ ಧ್ಯಾನದಲ್ಲಿ ಇಳೆಗೆ ಮಳೆ ಕರೆಯುವ ಧ್ಯಾನವಿದೆ. ಬೆತ್ತಲಿನ ಇಳೆಯ ಕಣ್ಣ ಪಾಪೆಯ ಕನಸ ತಣಿಸುವ ಹಂಬಲ ಎದ್ದು ಕಾಣುತ್ತದೆ. ಮೈ ಬಿರಿದ ಅವನಿಯಲಿ ಕಳೆ ಕಳೆದು ಕೂಡುವ ,ಕೂಡುವಿಕೆ ಮೀರಿದ; ತೀರಿದರೂ ತೀರದ ಹಂಬಲವಿದೆ. ಸಾಂಗತ್ಯದ ಬಾಯಾರಿಕೆ ಇದು ಎನ್ನುವ ಕವಯಿತ್ರಿ, ನಾನೊಂದು ದೀಪ, ನಾನೊಂದು ಮರ, ಹೂ, ನದಿ, ಮೊಡ ಎಂದು ಸಾರುತ್ತಾಳೆ. ತಡೆಯಲಾರಿರಿ , ತೊರೆದು ನಡೆದಿರುವೆ ದೇಶ ಭಾಷೆಯ ಹಂಗನು ; ಅಳಿಯಬೇಕಿಲ್ಲಿ ಉಳಿಯಬೇಕೆಂದರೆ ಎನ್ನುತ್ತಾ ,ಬದುಕಿನ ತತ್ವ ಸಾರುತ್ತಾಳೆ.
ಹೀಗೆ ಸರಹದ್ದುಗಳಿಲ್ಲದ ಭೂಮಿಯಲ್ಲಿ ಬುದ್ಧ, ಬಸವ ,ಗಾಂಧಿ ಸಹ ಬಂದು ನಿಂತು ಮಾತಾಡುತ್ತಾರೆ, ಕವಯಿತ್ರಿಯು ಮಗನೊಡನೆ ಮುಖಾಮುಖಿಯಾಗುತ್ತಾರೆ.
ಹೀಗೆ ತನ್ನ ಸುತ್ತಣ ಜಗತ್ತಿನ ಜೊತೆ ಕವಯಿತ್ರಿ ನಿರ್ಮಲಾ ಮುಖಾಮುಖಿಯಾಗಿ, ಅಂತರ್ಮುಖಿಯಾಗಿ, ಪ್ರಶ್ನಿಸಿಕೊಳ್ಳುತ್ತಾ, ಪ್ರಶ್ನಿಸುತ್ತಾ ಹೊಸ ನೋಟ ಸಮಾಜದ ಮುಂದಿಡುತ್ತಾರೆ. ಹೊಸ ಬದುಕಿನಲ್ಲಿ ಬೇಲಿಗಳಿಲ್ಲ ; ‘ಅಹಂ’ ಅಳಿದು ಮನುಷ್ಯರಾಗುವ ಹೊಸ ಅನುಸಂಧಾನವನ್ನು ಕಾವ್ಯ ಜಗತ್ತಿನ ಮುಂದಿಟ್ಟಿದ್ದಾರೆ. ಧ್ಯಾನದಿಂದ, ಧ್ಯಾನಿಸಿದ ಮೇಲೆಯೂ ಉಳಿಯುವ ಹೊಸತನದ ಹಂಬಲ,ಮನುಷ್ಯತ್ವದ ಹುಡುಕಾಟ ಇಲ್ಲಿ ಅನನ್ಯವಾಗಿ , ಅಂರ್ತಧ್ವನಿಯಾಗಿ, ಗಂಗೆಯಾಗಿ ಹರಿದಿದೆ. ಧ್ಯಾನಿಸದೆ ಕವಿತೆ ದಕ್ಕದು, ಪ್ರೀತಿಯ ಬದುಕೂ ದಕ್ಕದು ಎಂಬ ಒಳದನಿ ಇಲ್ಲಿದೆ.
**********************************
ನಾಗರಾಜ ಹರಪನಹಳ್ಳಿ