ಕವಿತೆ
ಮುನ್ನಡೆಗೆ ಹಿಂಬಾಗಿ
ಹರೀಶ ಕೋಳಗುಂದ
ಕಣ್ಣ ಪರದೆಯ ಮೇಲೆ ಓಡುವ
ಬಣ್ಣ ಬಣ್ಣದ ಚಿತ್ರಗಳು
ಉರುಳುವ ಗಾಲಿಚಕ್ರದ ಪರಿಧಿಯಲಿ
ಸರಿದು ಮರೆಯಾಗುವ ಮೈಲುಗಲ್ಲುಗಳು
ದೂರ ತೀರದಲ್ಲೆಲ್ಲೋ ಇಳಿಬಿದ್ದು ನೆಲಕಚ್ಚಿದಾಕಾಶ
ಕಾಗಜದೋಣಿಯ ಬಟ್ಟಲಿಗೆ ತೊಟ್ಟಿಕ್ಕುವ ಪಾತಾಳಗಂಗೆ
ಭೂಮಧ್ಯರೇಖೆಗೂ ಭ್ರಮಣದ ನಶೆ
ಇರುಳು ಬೆಳಕಿನಾಟ
ಗೇಲಿ ನಗುವ ಕತ್ತಲು
ಬೆಂಕಿಯುಗುಳುವ ಮುಗಿಲು
ತಣ್ಣಗೆ ಸುಡುವ ಹಸಿವ ಜ್ವಾಲೆ
ಕುದಿವ ಮೌನ
ತುಮುಲಗಳ ಅದುಮಿಟ್ಟಂತೆಲ್ಲಾ
ರೆಕ್ಕೆ ಬಡಿವ ತವಕ
ಮಂಜು ಹೊದ್ದು ಮಲಗಿದ ಬೂದಿಯೊಳಗೂ
ಹೆಪ್ಪುಗಟ್ಟಿ ಕುಳಿತ ಅಗ್ನಿಶಿಲ್ಪ
ಜೀವದುಸಿರಿನ ಕಾತರ
ಉರಿವ ಮಂದಾಗ್ನಿಯ ಬುತ್ತಿಗೆ ಕೈಯಿಕ್ಕುವ ತುಡಿತ
ದೊಂದಿಯಾಗದ ಕಟ್ಟಿಗೆಯ ನಿರಾಶಾಭಾವ
ನೋಯುವ ಕರುಳ ಕಣ್ಣ ಹನಿಗೆ
ಚಿಗುರೊಡೆವ ಸಾಂತ್ವನದ ಬೆರಳು
ಒಂದೋ ಎರಡೋ
ಒಡಕಲು ಬಿಂಬಕ್ಕೆ ಕೈ ಚಾಚಿ ಕುಳಿತ ಮನ
ದಕ್ಕಿಸಿಕೊಂಡದ್ದು ಏನನ್ನೋ
ಬೆನ್ ತಿರುಗಿಸಲು ಸೋಲಿನ ಭಯ
ಅಮೆ ನಡಿಗೆಯೋ
ಬಸವನ ಹುಳುವಿನೋಟವೋ
ಮುನ್ನಡೆಗೆ ಹಿಂಬಾಗಿ
ದಾರಿ ಸಾಗಲೇಬೇಕು
ಪಯಣ ಮತ್ತೆ ಶುರುವಾಗಲೇಬೇಕು
ಹೆಜ್ಜೆ ಇಟ್ಟಲ್ಲೆಲ್ಲಾ ಬೇರೂರಬೇಕು
ಕತ್ತರಿಸಿದಷ್ಟೂ ಮತ್ತೆ ಮತ್ತೆ ಹಬ್ಬುವ
ಲಂಟಾನಾ ಜಿಗ್ಗಿನ ಹಾಗೆ
*******************************
.