ಮಾಜಿ ಪ್ರದಾನಿಯವರ ಅನುವಾದಿತ ಕಥೆ

ಅನುವಾದಿತ ಕಥೆ

ಗೊಲ್ಲರ ರಾಮವ್ವ

(ಭಾಗ- ಎರಡು)

ಮಾಜೀ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್ ಅವರ

ಕಥೆಯ ಕನ್ನಡಾನುವಾದ

                                                                ಭಾಗ – ೨

“ಅದೆಲ್ಲ ಬಿಡವ್ವಾ ! ಅದೊಂದು ಕಥೆ. ಸ್ವಲ್ಪ ಹೊತ್ತು ನನ್ನನ್ನ ಇಲ್ಲಿ ಅಡಗಿಸಿಡು. ಮತ್ತೆ ನಾನು ಹೊರಟುಹೋಗ್ತೀನಿ” ಅಂತ ಅತಿ ಕಷ್ಟದಲ್ಲಿ ನುಡಿದನಾತ.

“ಆ! ಹೋಗ್ತಾನಂತೆ ಹೋಗ್ತಾನೆ.. ! ಒಂದೇ ಸಲ ಸ್ವರ್ಗಕ್ಕೆ ಹೋಗ್ತೀಯಾ …! ಒಳ್ಳೆ ಬುದ್ಧಿವಂತನೇ ನೀನು… ಹೋಗು..! ಹು ! ಹೋಗ್ತಾನಂತೆ ಎಲ್ಲಿಗೋ !”

ಹೊಸಬ ಮಾತಾಡಲಿಲ್ಲ. ಮುದುಕಮ್ಮ ತಕ್ಷಣ ಮೊಮ್ಮಗಳನ್ನ ಕರೆದಳು. ” ಮಲ್ಲೀ ! ಮಲ್ಲಿಮುಂಡೇ ! ದೀಪ ಹಚ್ಚು ಬೇಗ ! ಏನು ಆಗ್ಲೇ ನಿದ್ರೇನಾ ಹುಡುಗೀ”

ದೀಪದ ಮಾತು ಕೇಳಿದ ತಕ್ಷಣ ಹೊಸಬ ಬೆಚ್ಚಿಬಿದ್ದು ಅಂದ. “ಬೇಡ ಬೇಡವ್ವಾ ! ದೀಪ ಹಚ್ಚಬೇಡ ನಿನ್ ಪುಣ್ಯ. ಪೋಲೀಸರು ನನ್ಹಿಂದಿದ್ದಾರೆ. ಹಿಡಿದು ಬಿಡ್ತಾರೆ “

“ಸಾಕು ಸುಮ್ನಿರು ! ಪೋಲೀಸರಿಗಿಂತ ಮುಂಚೆ ಸಾವಿನ ದೇವತೆ ನಿನ್ನ ಹಿಡಿದಾಳೆ ಅಂತ ಕಾಣ್ತದೆ” ಅಂತ ಗದರಿಸಿದಳು.

ಮಲ್ಲಮ್ಮ ದೀಪ ಹಚ್ಚಿದಳು. ಮುದುಕಮ್ಮ ಒಂದು ಕಂಬಳಿ ಹಾಸಿದಳು. ದೀಪದ ಬೆಳದಿನಲ್ಲಿ ಬಂದವನನ್ನು ಪರೀಕ್ಷೆಯಾಗಿ ನೋಡಿದಳು. ಬಡಕಲು ಮೈಯ ಯುವಕ… ಹದಿನೆಂಟು ವರ್ಷಕ್ಕಿಂತ ಜಾಸ್ತಿ ಇರಲಿಕ್ಕಿಲ್ಲ… ಎಳೇ ಮೀಸೆ… ಗಂಭೀರತೆ ಸೂಚಿಸುವ ಕಣ್ಣು….ಸುಕುಮಾರವಾದರೂ ಸುನಾಯಾಸವಾಗಿ ಬಗ್ಗಬಲ್ಲ ದೇಹ…. ಸೌಮ್ಯ ಸೌಜನ್ಯದ ಮುಖಮಂಡಲ..

ಇದೆಲ್ಲ ನೋಡಿದ ಮುದುಕಮ್ಮನ ಮೊಗದಲ್ಲಿ ಸೋಜಿಗ ಕಂಡಿತು.

“ಒಳ್ಳೆ ರಾಜಕುಮಾರನ ತರ ಐದೀಯಲ್ಲ ಮಗಾ ! ನಿನಗ್ಯಾಕ್ ಬಂತೋ ಈ ಕಷ್ಟ ? ಮಲಗು.. ಮಲಗು… ಈ ಕಂಬಳಿ ಮೇಲೆ ಮಲಗು… ಭಯ ಬೀಳ್ತೀಯಾ ಯಾಕೆ ? ಮಲಗು.. ! ಆ! ಹಾಗೇ.. ಮಲ್ಲಿ ಹುಡುಗೀ ! ಒಲೆಮೇಲೆ ಒಂದು ಗಡಿಗೆಯಲ್ಲಿ ನೀರಿಕ್ಕು. ಏ ಇದೇನೇ ಅಷ್ಟು ಮೆಲ್ಲಗೆ ಕದುಲ್ತಾ ಇದೀಯಾ ? ಇಲ್ಲಿ ಹುಡುಗನ ಜೀವ ಹೋಗ್ತಿದ್ರೆ ಇವಳಿಗಿನ್ನೂ ನಿದ್ರೆ ಮಬ್ಬೇ ಹೋಗ್ಲಿಲ್ಲ. ಊ ! ಇಕ್ಕೀದೀಯಾ ಗಡಿಗೆ ? ಆ ! ಇಲ್ಲಿ ಬಾ… ದೀಪ ಹುಡುಗನ ಹತ್ತಿರ ತಕ್ಕಂಬಾ.. ದೀಪಕ್ಕೂ ನನಗೂ ನಡುವೆ ಆ ದೊಡ್ಡ ಕಟ್ಟಿಗೆ ನಿಲ್ಲಿಸು. ಅದಕ್ಕೆ ಕಂಬಳಿ ಹೊದಿಸು. ಹೊದಿಸಿದೆಯಾ ? ಆ ! ಈಗ ಸ್ವಲ್ಪ ಹುಶಾರಾಗಿದಿಯಾ ಹುಡುಗಿ ! ಗಂಡ ಒಂದು ನಾಲ್ಕು ಸಲ ಮೈ ಮುರಿಯುವಹಾಗೆ ಮಾಡಿದರೇ ಇನ್ನೂ ಚುರುಕಾಗ್ತೀಯಾ ! ಸ್ವಲ್ಪ ಸಂದು ಬಿಟ್ಟು ಒಂದು ಮುಚ್ಚಳ ಕವುಚಿ ಹಾಕು ದೀಪದ ಮೇಲೆ. ಈ ಹುಡುಗನ ಮೇಲೆ ಬೆಳಕು ಇರಬೇಕು. ಮತ್ತೆಲ್ಲಾ ಕತ್ತಲು. ಅದು ಉಪಾಯ ! ಆ ! ಹಾಗೇ ! ಐತೆ ನಿನ್ಹತ್ರ ಜಾಣತನ ! ಗಂಡನ ಹತ್ರ ಒಳ್ಳೆ ಸಂಸಾರ ಮಾಡ್ತಿ ಬಿಡು.. ! ಆಯ್ತಾ ! ಈಗ ಅವನ ಹತ್ರ ಕುತ್ಕೋ ! ಅವನ ಮೈಮೇಲಿನ ಮುಳ್ಳೆಲ್ಲಾ ಮೆಲ್ಲಕ್ಕೆ ತೆಗಿ… ಅದೇನೇ ನಾಚಿಕೆ ನಿಂದು ಅವನ್ನ ಮುಟ್ಲಿಕ್ಕೆ.  ಭಾರೀ ಮಾನವತಿ ಬಿಡು ನೀನು. ನಿನ್ ನಾಚಿಕೆಗಿಷ್ಟ್ ಬೆಂಕಿಹಾಕ್ತು ! ನಿನ್ ನಾಚಿಕೆಯಿಂದ ಅವನ ಜೀವ ತೆಗಿತಿಯೋ ಹೆಂಗೆ ? ನಾಚ್ಕೆ ಅಂತೆ ನಾಚ್ಕೆ ! ಊ ! ಹೇಳಿದ ಕೆಲಸ ಮಾಡೇ ! ಪಾಪ ! ಹೆಣದ ತರ ಬಿದ್ದಿದಾನೆ ! ಅವನ್ನ ನೋಡಿದ್ರೆ ಅಯ್ಯೋ ಪಾಪ ಅನಿಸಲ್ಲಾ ನಿಂಗೆ ಕಳ್ಳಮುಂಡೆ ? ಆ ! ಹಾಗೇ! ನೋವು ಮಾಡ್ಬೇಡ ಅವನಿಗೆ ….!”

ಮುದುಕಮ್ಮನ ಗೊಣಗಾಟ ಮಹಾ ಪ್ರವಾಹದ ತರ ಸಾಗಿ ಹೋಗುತ್ತಿತ್ತು. ಅದರಲ್ಲೇ ಬೈಗುಳ. ಅದರಲ್ಲೇ ಹಾಸ್ಯ. ಅದರಲ್ಲೇ ಆಜ್ಞೆ.. ಅವಳ ಆಜ್ಞೆಗಳೆಲ್ಲಾ ಚಕಚಕ ಅಮಲಾಗುತ್ತಿದ್ದವು. ಆ ಯುವಕನು ನಿಜವಾಗಿ ಅರ್ಧ ಪ್ರಾಣನಾಗಿ ಬಿದ್ದಿದ್ದಾನೆ. ಅವನ ಮೈಮೇಲಿನ ಮುಳ್ಳುಗಳನ್ನು ಒಂದೊಂದಾಗಿ ಮಲ್ಲಮ್ಮ ತೆಗೀತಿದ್ದಾಳೆ. ಅವನಿಗೆ ಯಾವುದೋ ಹೊಸ ಲೋಕಕ್ಕೆ ಬಂದು ಬಿದ್ದಂತಿದೆ.

ಮತ್ತೆ ಮುದುಕಮ್ಮ ವರಾತ ಹಚ್ಚಿದಳು.

” ಎಲ್ಲಾ ಮುಳ್ಳೂ ಬಂದ್ವಾ? ಭಾರೀ ಕಷ್ಟ ಪಟ್ಟೀಯಾ ಬಿಡು ! ಪುಣ್ಯ ಬಂತು ಬಿಡು ! ನಿನ್ಗೆ ಮುಂದಿನ ವರ್ಷ ಒಂದು ಗಂಡು ಕೂಸು ಹುಟ್ಟುತ್ತೆ ಬಿಡು. ಸರಿ ! ಇಲ್ಲಿ ಹಿಡಿ ! ನೀರು ಬಿಸಿಯಾಗಿದೆ. ಈ ಬಟ್ಟೆ ತೊಗೊಂಡು ಅವನ ಗಾಯ ಎಲ್ಲ ಕಾಸು. ರಕ್ತದ ಕಲೆ, ಮಣ್ಣು ಹೇಂಟೆ ಎಲ್ಲ ತೆಗೆದು ಹಾಕು. ಸ್ನಾನ ಮಾಡಿದ ಹಾಗೆ ಇರಬೇಕು ನೋಡು… ಪಾಪ ! ಎಂಥಾ ಸುಕುಮಾರ ಶರೀರನೇ ಇವಂದು?  ಮುಟ್ಟಿದರೇ ಒಳ್ಳೆ ಅರಳೆ ತರ ತಗುಲ್ತಾ ಐತೆ. ಎಂಥವನಿಗೆ ಎಂಥ ಗತಿ ಬಂತೋ ಪಾಪ !”

ನೋಡ್ತಾ ನೋಡ್ತಾ ಮಲ್ಲಮ್ಮನ ಆರೈಕೆಯಿಂದ ಯುವಕ ಚೇತರಿಸಿಕೊಂಡ. ಅವನ ಗಾಯಗಳ ನೋವು ಕಡಿಮೆಯಾಯಿತು. ಮೈಯೆಲ್ಲಾ ಸ್ವಚ್ಛವಾಯಿತು.

ಇಷ್ಟರಲ್ಲಿ ಮುದುಕಮ್ಮ ಏನೋ ತಂದಳು. ಯುವಕನ ತಲೆ ದೆಸೆಯಲ್ಲಿ ಕೂತು ಅವನ ತಲೆ ಸವರುತ್ತಾ ಮತ್ತೆ ಗೊಣಗಾಟ ಹಚ್ಚಿದಳು.

“ಇನ್ನ ಏಳು ಮಗಾ ! ಕೊಂಚ ಗಂಜಿ ತಣ್ಣನ ಮಜ್ಜಿಗೆಯಲ್ಲಿ ಹಿಸುಕಿ ತಂದೀನಿ…. ಹೊಟ್ಟೆಗೆ ಹಾಕ್ಕೋ…. ಯಾವಾಗಾದ್ರೂ ಕುಡಿದಿದೆಯಾ ಗಂಜಿ? ನೀವೆಲ್ಲ ಅಕ್ಕಿ ತಿನ್ನುವ ಜನ ಅಂತ ಕಾಣತ್ತೆ ! ಆದರೇ ಗೊಲ್ಲರ ರಾಮಿ ಗಂಜಿ ಅಂದ್ರೆ ಏನಂತ ತಿಳಿದೀ? ಹೋಗೋ ಪ್ರಾಣ ಮರಳಿ ಬರ್ತೈತೆ. ನೋಡು ಮತ್ತೆ ! ಜಾತಿ ಕೆಟ್ಹೋಗ್ತದೆ ಅಂತ ಭಯಾನಾ ? ನೀನು ಬ್ರಾಹ್ಮಣನಾದ್ರೂ, ಜಂಗಮನಾದ್ರೂ ಯಾವ ಜಾತಿಯವನಾದ್ರೂ ಸರಿ… ಮುಂಚೆ ಪ್ರಾಣ ಉಳಿಸಿಕೋ… ಅಷ್ಟು ಬೇಕಾದ್ರೇ ಅದೇನೋ ನಾಲಿಗೆ ಮೇಲೆ ಬಂಗಾರದ ಕಡ್ಡಿಯಿಂದ ಸುಡಿಸಿಕೊಂಡ್ರೆ ಮತ್ತೆ ಜಾತಿ ಬರುತ್ತಂತಲ್ಲ.. ಆ ! ಇನ್ನ ಕುಡಿದ್ಬಿಡು ಗಟಗಟ….”

ಯುವಕ ಎದ್ದು ಕೂತ. ಮುದುಕಮ್ಮನ ಮಾತುಗಳಿಗೆ ಅವನಿಗೆ ನಗೆ ಬಂತೆನ್ನುವುದಕ್ಕೆ ಅವನ ಮುಖದ ಮೇಲೆ ಕಿರುನಗೆ ಕಾಣಿಸಿಕೊಂಡಿತು. ಅವಳನ್ನ ನೋಡ್ತಾ ಪಾತ್ರೆ ತೊಗೊಂಡ. ಅದರಲ್ಲಿ ನವಜೀವನ ಸಾರವಿರುವ ಹಾಗೆ ಗಟಗಟ ಕುಡಿದ. ಮುದುಕಮ್ಮನ ಮಾತು ಅಕ್ಷರಶಃ ಸತ್ಯವಾಯಿತು…. ಅವನಿಗೆ ಅರ್ಧಪ್ರಾಣ ಬಂದ ಹಾಗಾಯಿತು. ಅವನ ಮುಖ ಅರಳತೊಡಗಿತು. ಕಣ್ಣಲ್ಲಿ ಜೋವನ ಜ್ಯೋತಿ ಬೆಳಗತೊಡಗಿತು.

ಮುದುಕಮ್ಮನಿಗೂ ಪೂರ್ತಿ ಸಮಾಧಾನವಾಯಿತು.  ಅವನಕಡೆ ನೋಡ್ತಾ ನೆರಿಗೆ ಬಿದ್ದ ಮೊಗದಿಂದ ನಗ್ತಿದ್ರೆ ನೆರಿಗೆ ಯೆಲ್ಲಾ ಮಾಯವಾದ ಹಾಗೆ ಅನಿಸಿತು. ಕೆಲ ನಿಮಿಷ ಹಾಗೇ ಇದ್ದರು ಆ ಮುವ್ವರೂ…..

ಹೊಸಬನ ದೇಹವನ್ನು ಪ್ರೀತಿಯಿಂದ ತಡವುತ್ತಿದ್ದ ಮುದುಕಮ್ಮನ ಕೈ ಆತನ ಚಡ್ಡಿಯ ಕಿಸೆಯ ಹತ್ತಿರ ಹಠಾತ್ತಾಗಿ ನಿಂತುಹೋಯಿತು.  ತಕ್ಷಣ “ಇದೇನೋ ಇದು” ಎನ್ನುತ್ತ ಅವನ ಕಿಸೆಗೆ ಕೈಹಾಕಿ ಒಂದು ಉಕ್ಕಿನ ವಸ್ತು ಹೊರತೆಗೆದಳು.

” ಅದು ರಿವಲ್ವಾರ್ ಅವ್ವಾ ! ಗುಂಡಿನ ತುಪಾಕಿ…” ಅಂದ ಆ ಯುವಕ.

” ಯಾಕ್ಮಗಾ ಈ ತುಪಾಕಿ ? ನಮ್ಮನ್ನ ಕೊಲ್ತೀಯ ಏನು? ” ಅಂದಳು ಮುದುಕಮ್ಮ.

” ಇಲ್ಲವ್ವಾ ! ನಿಮ್ಮನ್ನ ಕೊಲ್ಲೋರ್ನ ಕೊಲ್ಲೋದಕ್ಕೆ ಅದು. ಈ ರಾತ್ರಿ ಇಬ್ಬರು ಪೋಲೀಸರನ್ನ ಕೊಂದೀನಿ. ಮೊನ್ನೆ ನಿಮ್ಮ ಊರಿನಲ್ಲಿ ನಾಲಕ್ಕು ಮಂದಿ ನಿರ್ದೋಷಿಗಳನ್ನ ಕೊಂದಿದ್ದು ಈ ಪೋಲೀಸಿನೋರೇ !”

ಮುದುಕಮ್ಮನ ಮುಖಚರ್ಯೆ ವರ್ಣನಾತೀತವಾಗಿ ಬದಲಾದವು. ಮುಂಚೆ ಸ್ವಲ್ಪ ಹೆದರಿಕೆ… ಮತ್ತೆ ಸ್ವಲ್ಪ ಧೈರ್ಯ… ನಂತರ ಉತ್ಸಾಹ… ಅದರ ಬೆನ್ನಿಗೆ ವಿಜಯೋತ್ಸಾಹ.. ಸಾಲಾಗಿ ಕಂಡುಬಂದವು.

ಯುವಕ ಮುದುಕಮ್ಮನ ಮುಖವನ್ನ ಸೂಕ್ಷ್ಮವಾಗಿ ನೋಡುತ್ತಿದ್ದ. ಭಾವ ಪರಿವರ್ತನೆ ಆದ ಹಾಗೆಲ್ಲಾ ಅವನ ಮನಸು ಪರಿಪರಿಯಾಗಿ ತರ್ಕಿಸುತ್ತಿತ್ತು. ಈ ವಿಷಯ ಯಾಕಾದ್ರೂ ಹೇಳಿದ್ನಾ? ಎನ್ನುವ ಪಶ್ಚಾತ್ತಾಪ ರೇಖೆ ಸಹ ಅವನ ಮನಸನ್ನು ಒಮ್ಮೆ ಸ್ಪರ್ಶಿಸಿ ಹೋಯಿತು. ಏನನ್ನುತ್ತಾಳೋ ಈ ಮುದುಕಮ್ಮ ? ಶತಾಬ್ದಗಳ ಕಾಲ ದಾಸ್ಯವನುಭವಿಸಿದ ಈ ಗ್ರಾಮೀಣ ದಲಿತರಲ್ಲಿ ತೇಜವೆಲ್ಲಿ ಉಳಿದಿದೆ ? ಇನ್ನು ಈ ಗುಡಿಸಲಿನ ಆಶ್ರಮದಿಂದ ತನಗೆ ಉದ್ವಾಸನೆ ತಪ್ಪಿದ್ದಲ್ಲ ಎಂದು ಅವನಿಗೆ ಅನಿಸಿತು. ಇಬ್ಬರು ಪೋಲೀಸರನ್ನ ಕೊಂದ ಕೊಲೆಗಾರನನ್ನು ಯಾರು ಇಟ್ಟುಕೊಳ್ಳುತ್ತಾರೆ? ಎಷ್ಟು ಜನ ತನ ಜೊತೆಗಾರ ಕಾರ್ಯಕರ್ತರು ಈ ಗ್ರಾಮಸ್ತರ ಪುಕ್ಕಲುತನದಿಂದಾಗಿ ಸಿಕ್ಕಿ ಹಾಕಿಕೊಳ್ಳಲಿಲ್ಲ ? ಯುವಕನ ಮನಸು ಪರಿಪರಿವಿಧವಾದ ವಿತರ್ಕಕ್ಕೆ ಒಳಗಾಗುತ್ತಿತ್ತು.

ಸ್ವಲ್ಪ ಹೊತ್ತು ಯೋಚಿಸಿದ ಯುವಕನ ಮನಸು ಧಸಕ್ಕೆಂದಿತು.

” ಇಬ್ಬರ್ನಾ ಕೊಂದಿದ್ದು ? ಮತ್ತೆ ಇನ್ನಿಬ್ಬರು ಉಳಿದರಲ್ಲ ಮಗಾ ! ಅರ್ಧ ಕೆಲಸನೇ ಮಾಡಿದಿ…”

ಯುವಕ ಆಶ್ಚರ್ಯಪಟ್ಟ.  ಆತನ ಸುಸಂಪನ್ನ ಮನಸು ಗರ್ವದಿಂದ ಕಲ್ಪನಾಕಾಶದಲ್ಲಿ ಭ್ರಮಣ ಮಾಡಹತ್ತಿತು. ಅವನ ತಾರುಣ್ಯದ ಭಾವುಕತೆ ಆತನನ್ನ ಮೈಮರೆಸಿತು. ಶ್ರೀರಾಮನ ಸ್ಮರಣೆಯಿಂದ ಉಕ್ಕಿ ಏರುವ ಆಂಜನೇಯನ ಮೈ ತರಹ ತನ್ನ ದೇಹ ಸಹ ಏರಿದಂತೆನಿಸಿತು. ರಿವಾಲ್ವಾರ್ ಗಾಗಿ ಕೈ ಚಾಚುತ್ತಾ ..” ಉಳಿದವರ ಕತೆ ಸಹ ಮುಗಿಸ್ತೀನಿ ಕೊಡವ್ವ ” ಅಂದುಬಿಟ್ಟ.

ಮುದುಕಮ್ಮ ರಿವಾಲ್ವಾರ್ ತನ್ನ ಹತ್ತಿರ ಇಟ್ಟುಕೊಂಡು ಮಾತು ಪ್ರಾರಂಭಿಸಿದಳು.

“ಸಾಕು ಬಿಡು ಇಲ್ಲಿಯವರೆಗೆ ! ಭಾರೀ ಬಹದೂರ್ ನೀನು ! ತಿಂದುಂಡು ಇರಲಿಕ್ಕೆ ಮನಸಾಗದೆ ಪೋಲೀಸರ ಜೊತೆಗೆ ವೈರ ಇಟ್ಕೊಂಡಿದಾನೆ ನೋಡು ತುಂಟ ಹುಡುಗ ! ಯಾಕೆ ನಿಂಗೆ ಈ ಪೋಲೀಸ್ ನೋರ ಜತೆ ಕಾದಾಟ ?”

ಯುವಕನೆಂದ ” ನಾನು ಕಾಂಗ್ರೆಸ್ ವಾಲಂಟೀರ್ ಅವ್ವಾ!  ನೈಜಾಮ್ ರಾಜನ ಜೊತೆ ಕಾಂಗ್ರೆಸ್ ನವರು ಹೋರಾಡ್ತಾ ಇದಾರೆ. ಜನತೆ ಎಲ್ಲಾ ಹೋರಾಡ್ತಾ ಇದೆ. “

ಯುವಕನು ಯಾವುದೋ ರಾಜಕೀಯ ಸಿದ್ಧಾಂತದ ಬೋಧನೆ ಶುರುಮಾಡುವ ತರಾ ಇತ್ತು. ಮುದುಕಮ್ಮ ನಡುವಿನಲ್ಲೇ ಬಾಯಿ ಹಾಕಿ ” ಎಲ್ಲಿದೆ ನಿನ್ನ ಹೋರಾಟ ? ಇಲ್ಲಿ ದೊಡ್ಡೋರೆಲ್ಲಾ ಆ ಪೋಲೀಸರನ್ನ ತಮ್ಮ ಮನೆಗಳಲ್ಲೇ ಮಲಗಿಸಿಕೊಳ್ತಾರೆ . ಬಡವರು ಹೋರಾಡಿದ್ರೆ ಏನಾಗ್ತದೋ ?”

” ಬಡವರಿಂದಲೇ ಸಾಗ್ತಾ ಇದೆ ಅವ್ವಾ ಕಾಂಗ್ರೆಸಿನ ಹೋರಾಟ ” ಅಂದ ಯುವಕ.

” ಸರಿ ಹಾಗಾದ್ರೇ ನಿಮ್ಮ ಅದೇನು ಕಾಂಗಿರಿಜೋ ಗೀಂಗಿರಿಜೋ ಅದರಲ್ಲಿ ಯಾರೂ ವಯಸಾದವರೇ ಇಲ್ಲಾ? ಗಡ್ಡ ಮೀಸೆ ನೆರೆತೋರೆಲ್ಲಾ ಎಲ್ಲಿ ಹಾಳಾಗಿದಾರೆ?”

“ಅವರೆಲ್ಲಾ ಶಹರಿನಲ್ಲಿರ್ತಾರೆ. ರಾಜನ ಹತ್ತಿರ ಮಾತಾಡ್ತಾರೆ. ಪ್ರಜೆಗಳ ಕಡೆಯಿಂದ ವಾದ ಮಾಡ್ತಾರೆ.. ಅಧಿಕಾರ ಕೊಡುಸ್ತಾರೆ.. ನಾಯಕತ್ವ ಮಾಡ್ತಾರೆ.”

ಮುದುಕಮ್ಮ ಬೇಸರದಿಂದ ನಡುವಲ್ಲೇ ” ಏಹೇ ! ಇದೆಲ್ಲ ನನ್ಗೆ ಹಿಡಿಸ್ತಾ ಇಲ್ಲ. ಅಲ್ಲ. ದೊಡ್ಡ ದೊಡ್ಡವರೆಲ್ಲ ಬರೀ ಮಾತಾಡ್ತಾ ಕೂತ್ಕೋತಾರಾ! ಹಸು ಕೂಸುಗಳ್ನ ಪೋಲೀಸರ ಮೇಲಕ್ಕೆ ಕಳುಸ್ತಾರಾ ! ನಿಮ್ಮಂಥವರೇನೋ ನೀವು ಮದುವೆಮಾಡಿಕೊಂಡ ಹೆಂಡಂದರ್ನ ಮುಂಡಾಮೋಚಿಸಲಿಕ್ಕೆ ತುಪಾಕಿ ಹೆಗಲಿಗೆ ಹಾಕಿಕೊಂಡು ತಿರುಗ್ತೀರಾ ? ಎಷ್ಟು ಅನ್ಯಾಯದ ದಿನ ಬಂತು !  ಹಾಳಾಗ್ಹೋಗ್ಲಿ !”

ಹಾಗೇ ಸ್ವಲ್ಪ ಹೊತ್ತು ಗೊಣಗಿ ಕೊಂಡು ಶಾಸಿಸಿದಳು. ” ಇಲ್ನೋಡು ! ಇನ್ನು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಮಲಗು. ಇನ್ನು ಒಂದು ಸರಿಹೊತ್ತು ಇದೆ. ಸ್ವಲ್ಪ ನಿದ್ರೆ ಮಾಡಿದ್ರೆ ಬದುಕ್ತಿಯ. ಏನೇ ಮಲ್ಲೀ ! ನೋಡು. ನಾನು ನೀನು ಈ ರಾತ್ರಿಎಲ್ಲಾ ಕಾವಲಾಗಿರಬೇಕು. ನೀನು ಆ ಕೊನೆಗೆ. ನಾನು ಈ ಕೊನೆಗೆ. ತೂಕಡಿಕೆ ಬಂದರೇ ಜೋಕೆ. ಒಂದು ಕೊಟ್ಟೆ ಅಂದರೇ ದೆವ್ವ ಬಿಡತ್ತೆ. ಆ !”                                     

                                                                                                                                                                (ಮುಂದುವರೆಯುತ್ತದೆ)

********************************************************************

ಅನುವಾದಕರು-

ರಮೇಶ್ ಬಾಬು ಚಂದಕ ಚರ್ಲ

Leave a Reply

Back To Top