ಪುಸ್ತಕ ಸಂಗಾತಿ
ಆಕಾಶಕ್ಕೆ ಹಲವು ಬಣ್ಣಗಳು
ಗಜಲ್ ಪ್ರೇಮಿಗಳ ಭಾವಬಾಂದಳದಿ ಮಾಸದ ಬಣ್ಣಗಳ ಮೂಡಿಸಿದ ಕೃತಿ
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡಿರುವ ಶಹಾಪುರದ ಹಿರಿಯ ಲೇಖಕರಾದ ಶ್ರೀ. ಸಿದ್ಧರಾಮ ಹೊನ್ಕಲ್ ಅವರು ಮೈಸೂರಿಗರಿಗೆ ಪರಿಚಿತರೇನೂ ಅಲ್ಲ. ಮೈಸೂರಿನಲ್ಲೇ ಹುಟ್ಟಿ, ಬೆಳೆದು ಕಳೆದ ಹದಿನೇಳು ವರ್ಷಗಳಿಂದ ಸಂಘಟನೆ ಹಾಗೂ ಕವನ ರಚನೆಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಹೊನ್ಕಲ್ ಅವರ ಪರಿಚಯವಾದುದು ಗಜಲ್ ಗಳಿಗೆಂದೇ ಮೀಸಲಾದ ಗುಂಪೊಂದರಲ್ಲಿ. ಕಳೆದ ಒಂದೂವರೆ ವರ್ಷಗಳಿಂದ ಗಜಲ್ ಗುರುಗಳಾದ ಡಾ. ಗೋವಿಂದ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಗಜಲ್ ರಚನೆಯನ್ನು ಕಲಿಯುತ್ತಿರುವ ನಾನು ಕೆಲವು ತಿಂಗಳುಗಳ ಹಿಂದೆ ‘ಗಜಲ್ ತೊರೆ ‘ ಗುಂಪಿಗೆ ಸೇರ್ಪಡೆಗೊಂಡ ನಂತರ ಮತ್ತೆ ಕಲಿಕಾರ್ಥಿಯಾಗಿ ಇತರ ಸದಸ್ಯರೊಡನೆ ಕಲಿಯುವ ಪ್ರಕ್ರಿಯೆ ಆರಂಭವಾಯಿತು. ಈ ಗುಂಪಿನಲ್ಲಿನ ಇತರೆಲ್ಲರ ಗಜಲ್ ಗಳನ್ನು ಓದಿ ಖುಷಿಪಡುವುದರ ಜೊತೆಗೆ ಪ್ರತಿದಿನವೂ ಗಜಲ್ ನ ವಿವಿಧ ರೀತಿಯ ರಚನೆಗಳ ಬಗ್ಗೆ ತಿಳಿಯುವ ಅವಕಾಶ ದೊರಕಿತು. ಕಾಲ ಕಳೆದಂತೆ ನನ್ನ ರಚನೆಗಳೂ ಸೇರಿದಂತೆ ಇತರರ ಗಜಲ್ ಗಳನ್ನೂ ಪರಿಷ್ಕರಿಸುವ ಕೆಲಸದಲ್ಲಿ ನಿತ್ಯ ತೊಡಗಿಸಿಕೊಳ್ಳಲು ಆರಂಭಿಸಿದೆ.ಈ ನನ್ನ ಕಾಯಕ ಗುಂಪಿನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇಂಥಹ ಸಂದರ್ಭದಲ್ಲೇ ನನಗೆ ಹೊನ್ಕಲ್ ಅವರ ಪರಿಚಯವಾದದ್ದು…..ಅದೂ ವಿಚಿತ್ರ ಸನ್ನಿವೇಶವೊಂದರಲ್ಲಿ!
ಆಗ ತಾನೇ ಗಜಲ್ ರಚನೆಯಲ್ಲಿ ತೊಡಗಿದ್ದ ಹೊನ್ಕಲ್ ಅವರ ಗಜಲ್ ಒಂದರಲ್ಲಿ ಕಾಫಿಯಾಗಳ ಜೋಡಣೆ ತಪ್ಪಾಗಿದ್ದುದು ನನ್ನ ಗಮನಕ್ಕೆ ಬಂತು.’ ಹೇಳಲೋ ಬೇಡವೋ ‘ ಎಂಬ ದ್ವಂದ್ವದಲ್ಲಿ ಇದ್ದ ನಾನು ಕೊನೆಗೆ ಅವರ ತಪ್ಪು ಜೋಡಣೆಯ ಬಗ್ಗೆ ಗುಂಪಿನಲ್ಲಿ ತಿಳಿಸಿದೆ. ತಕ್ಷಣವೇ ಹೊನ್ಕಲ್ ಅವರಿಂದ ಬಂದ ಖಾರವಾದ ಉತ್ತರ ” ಎಲ್ಲಾ ಸರಿಯಿದೆ. ಐ ನೋ ಬೆಟರ್ ದ್ಯಾನ್ ಯೂ….!”. ಹೆದರಿದ ನಾನು ನನ್ನ ವಿಶ್ಲೇಷಣೆ ಸರಿಯಿದ್ದರೂ ” ನನಗೆ ತಿಳಿದದ್ದನ್ನು ತಿಳಿಸಿದ್ದೇನೆ ಸರ್. ತಪ್ಪೆಂದೆನಿಸಿದರೆ ಕ್ಷಮಿಸಿ ” ಎಂದು ನೊಂದುಕೊಂಡೇ ಸಂದೇಶ ಕಳಿಸಿದೆ. ಆದರೆ ಗುಂಪಿನಲ್ಲಿ ನಮ್ಮೆಲ್ಲರಿಗೂ ಮಾತೃ ಸಮಾನರಾದ ಖ್ಯಾತ , ಹಿರಿಯ ಗಜಲ್ ಕಾರ್ತಿ ಶ್ರೀಮತಿ. ಪ್ರಭಾವತಿ ದೇಸಾಯಿ ಮೇಡಂ ಅವರು ನನ್ನ ನಿಲುವನ್ನು ಸಮರ್ಥಿಸಿ ಹೊನ್ಕಲ್ ಅವರಿಗೆ ಅವರ ರಚನೆಯ ತಪ್ಪುಗಳ ಬಗ್ಗೆ ಅರಿವು ಮೂಡಿಸಿದರು. ತಕ್ಷಣವೇ ಸೂಕ್ತ ತಿದ್ದುಪಡಿಗಳನ್ನು ಮಾಡಿದ ಹೊನ್ಕಲ್ ಅವರು ” ನೀವೇನೂ ಕ್ಷಮೆ ಕೇಳಬೇಕಿರಲಿಲ್ಲ ” ಎಂದು ಹೇಳಿ ನನ್ನ ಮನಸ್ಸಿನ ಉದ್ವೇಗವನ್ನು ಶಮನಗೊಳಿಸಿದರು. ಅಂದು ”ತಾನೇ ಸರಿಯೆಂ’ದು ದುಡುಕಿ ಗದರಿದವರೇ ಮುಂದೆ ಸಹೋದರ ಸಮಾನರಾದುದು ವಿಪರ್ಯಾಸ ! ಈ ಘಟನೆಯನ್ನು ಈಗಲೂ ಒಮ್ಮೊಮ್ಮೆ ನಾನು ನೆನೆದಾಗ ಮೊಗದಲ್ಲಿ ನಗು ಸುಳಿಯದೇ ಇರದು.
ಇಲ್ಲಿಯವರೆಗೆ ಪ್ರವಾಸ ಕಥನಗಳು, ಕವನ ಸಂಕಲನಗಳೂ ಸೇರಿದಂತೆ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಸಿದ್ಧರಾಮ ಹೊನ್ಕಲ್ ಅವರ ಮೊದಲ ಗಜಲ್ ಸಂಕಲನ ” ಆಕಾಶಕ್ಕೆ ಹಲವು ಬಣ್ಣಗಳು” . ಆಕರ್ಷಕ ಮುಖಪುಟವನ್ನು ಹೊತ್ತಿರುವ ಈ ಸಂಕಲನದಲ್ಲಿ ಒಟ್ಟು ಐವತ್ತು ಗಜಲ್ ಗಳಿವೆ. ಪ್ರತೀ ಗಜಲ್ ನ ಆಶಯಕ್ಕೆ ಪೂರಕವಾದ ಚಿತ್ರವಿದೆ. ಅಚ್ಚುಕಟ್ಟಾದ ಮುದ್ರಣದಿಂದ ಇದು ಸಂಗ್ರಹಯೋಗ್ಯ ಕೃತಿಯಾಗಿದೆ.
ಪ್ರೀತಿ ,ಪ್ರೇಮ , ವಿರಹ , ನೋವು …ಈ ಎಲ್ಲ ಅಂಶಗಳನ್ನೊಳಗೊಂಡ ಗಜಲ್ ಗಳಷ್ಟೇ ಅಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲವು ಗಜಲ್ ಗಳೂ ಇದರಲ್ಲಿವೆ. ಉದಾಹರಣೆಗೆ :
ಜಂಜಡದ ಬದುಕಿನಲಿ ಯಾರೂ ಕೈ ಹಿಡಿಯದಿರಬಹುದು
ಸೋತೆನೆಂದು ಎಂದೆಂದಿಗೂ ನೀ ಹಿಂಜರಿಯಬೇಡ ಗೆಳೆಯ
ಮತ್ತೊಂದು ಗಜಲ್ :
ಮನಸ್ಸಿದ್ದಲ್ಲಿ ಮಾರ್ಗವಿರುತ್ತದಂತೆ ಮೊದಲು ಮನಸ್ಸಿಡುವುದು ನೀ ಕಲಿ ಗೆಳೆಯಾ
ಭಾವನೆಗಳಿದ್ದಲ್ಲಿ ಮಾತ್ರ ಪ್ರೀತಿ ಹುಟ್ಟುವುದಂತೆ ಪ್ರೀತಿಸುವುದು ನೀ ಕಲಿ ಗೆಳೆಯಾ
ಬಲಿತ ಪ್ರೀತಿ ಫಲಿಸದಿದ್ದರೂ, ಒಡನಾಟ ವ್ಯರ್ಥವಾದರೂ ಮತ್ತು ಅಗಲುವಿಕೆಯ ಸಂಕಟವಿದ್ದರೂ ಬಾಳಿನಲ್ಲಿ ಮುನ್ನಡೆಯಲೇಬೇಕೆಂಬ ಆಶಾಭಾವವಿರುವ ಗಜಲ್ ಓದುಗರ ಮನಗಳನ್ನು ತೇವಗೊಳಿಸುತ್ತದೆ. ಅದರ ಸಾಲುಗಳು ಇಂತಿವೆ :
ಕೂಡುವ ಮಾತಿಗಿಂತ ಅಗಲುವ ಮಾತುಗಳೇ ಪದೇ ಪದೇ ಆಡುತ್ತಿಯೆಂದರೆ ನಿನಗೆ ಸಾಕೆನಿಸಿರಬಹುದು
ಇನ್ನು ಮುಂದುವರಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಕಾರ್ಯಕಾರಣವಿಲ್ಲ ನೀ ನಡೆದುಬಿಡು
ಇಷ್ಟು ದಿನ ನೀ ಕೊಟ್ಟ ಪ್ರೀತಿ ಪ್ರೇಮವ ಹಂಚಿಕೊಂಡ ಮಧುರ ಭಾವಗಳನೆಂದೂ ಮರೆಯಲಾರ
‘ಹೊನ್ನಸಿರಿಯು ಋಣ ಮುಗಿಯಿತೆಂದು ಮಸಣದಲ್ಲೇನೂ ಕೂಡುವುದಿಲ್ಲ ನೀ ಕಣ್ಮರೆಯಾಗಿಬಿಡು
ಈ ಗಜಲ್ ನಲ್ಲಿ ‘ ಅವನ ‘ ಎಂಬುದರ ಬದಲು ‘ ನನ್ನ’ ಎಂದಿದ್ದರೆ ಸೂಕ್ತವಾಗಿತ್ತೆಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಕಾರಣ, ‘ ನಮ್ಮೀ ಬಾಂಧವ್ಯದಲಿ ‘ , ‘ ಮೈತ್ರಿಯಲಿ ಒಂದಾದೆವು’ ….ಎಂಬ ಪದಗಳ ಬಳಕೆ ಕೆಲವು ಸಾಲುಗಳಲ್ಲಿ ಇದೆ.
ಈ ಭೂಮಿಯಲ್ಲಿ ಗೀತೆ ಕುರಾನ್ ಬೈಬಲ್ ಗುರುವಾಣಿ ಹೀಗೆ ಏನೆಲ್ಲಾ ಒಳ್ಳೆಯದು ಬಿತ್ತಿಹರು
‘ಹೊನ್ನಸಿರಿ ‘ ಈ ಸಾಮರಸ್ಯ ಸಮಾನತೆಯ ಹೊಸ ಹೂವು ಏಕೆ ಮತ್ತೆ ಮತ್ತೆ ಅರಳುತ್ತಿಲ್ಲ ಸಾಕಿ
ಜಾತಿ ವೈಷಮ್ಯವನ್ನು ಸಾಧಿಸುತ ‘ ತಾನೇ ಮೇಲೆಂ’ದು ಬೀಗುವ ಮನುಜರ ಮನದ ತೋಟದಲ್ಲಿ ಎಂದು ಸಮಾನತೆಯ ಹೂವು ಅರಳುತ್ತದೆಂಬ ಪ್ರಶ್ನೆ ಓದುಗರನ್ನು ಕಾಡುವುದು ಮಾತ್ರ ಸುಳ್ಳಲ್ಲ. ವಾಸ್ತವದ ಕಟುಸತ್ಯಕ್ಕೆ ಕನ್ನಡಿ ಹಿಡಿದ ಗಜಲ್ ಇದಾಗಿದೆ.
ಹತ್ತಿರವಿದ್ದೂ ಅಪರಿಚಿತರಂತೆ ದೂರವಾದವರ ಬಗ್ಗೆ ಕೇಳಿದ್ದೆ
ದೂರವಿದ್ದೂ ಹತ್ತಿರವಾಗಿ ನಿನ್ನ ಸೇರುವಷ್ಟರಲಿ ನೀ ಕನಸಾದೆ
ಈ ಪ್ರೀತಿ ಪ್ರೇಮ ವಿರಹ ಕಾಮದ ಬಗ್ಗೆ ಅನೇಕ ಕಥೆಗಳು ಗೊತ್ತು
‘ಹೊನ್ನಸಿರಿ’ಯ ಈ ಅಲೌಕಿಕ ಪ್ರೀತಿ ಅರಿವಾಗುವಷ್ಟರಲಿ ನೀ ನಕ್ಷತ್ರವಾದೆ
ಪ್ರೀತಿಸಿದ ಜೀವ ದೂರವಾದಾಗ, ಮರೆಯಾದಾಗ, ಕಾಣದಾದಾಗ, ಮಾಯವಾದಾಗ, ಕನಸಾದಾಗ, ಕೊನೆಗೆ ನಕ್ಷತ್ರವಾದಾಗ ಅಸಹಾಯಕತೆಯಲಿ ಬಳಲುವ ನೊಂದ ಮನದ ಭಾವಗಳು ಸ್ವಗತದಂತೆ ಈ ಗಜಲ್ ನಲ್ಲಿ ಮೂಡಿವೆ.
ಸಹೋದರ ಸಿದ್ಧರಾಮ ಹೊನ್ಕಲ್ ಅವರ ‘ ಆಕಾಶಕ್ಕೆ ಹಲವು ಬಣ್ಣಗಳು ‘ ಗಜಲ್ ಸಂಕಲನವನ್ನು ಇಡಿಯಾಗಿ ಓದಿ ಮುಗಿಸುತ್ತಿದ್ದಂತೆ ಕೆಲವು ಗಜಲ್ ಗಳ ರಚನೆಗೆ ಶರಣರ ವಚನಗಳ ಪ್ರಭಾವವಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಗಜಲ್ ಗಳು ಅಷ್ಟೇ ಪರಿಣಾಮಕಾರಿಯಾಗಿ ಓದುಗರ ಮೇಲೆ ಪ್ರಭಾವ ಬೀರಿ ಅವರನ್ನು ಚಿಂತನೆಗೆ ಹಚ್ಚಲು ಕಾರಣವಾಗುತ್ತವೆ. ಮುಂಬರುವ ದಿನಗಳಲ್ಲಿ ಅವರ ಲೇಖನಿಯಿಂದ ಇನ್ನಷ್ಟು ಸತ್ವಯುತ ಹಾಗೂ ಮೌಲ್ಯಯುತ ಗಜಲ್ ಗಳು ಮೂಡಿ ಬರಲಿ. ಸರ್ವಶಕ್ತನಾದ ಆ ಭಗವಂತನ ಆಶೀರ್ವಾದದಿಂದ ಅವರೆಲ್ಲಾ ಆಶೋತ್ತರಗಳು ಈಡೇರಲಿ ಎಂದು ಪ್ರಾರ್ಥಿಸುತ್ತೇನೆ.
*********
ಎ . ಹೇಮಗಂಗಾ