ಅಂಕಣ ಬರಹ

ಪರಿಚಯ:


ಪ್ರಕಟಿತ ಕೃತಿಗಳು : ಕಲ್ಯಾಣಿಯಲ್ಲಿ ಮಳೆ ( ಕವನ ಸಂಕಲನ )
ಅವರೆಲ್ಲಾ ದೇವರಾಗಿದ್ದರೆ (ಕಥಾ ಸಂಕಲನ )
ಪ್ರಶಸ್ತಿ :
ಅವರೆಲ್ಲಾ ದೇವರಾಗಿದ್ದರೆ ಕಥಾ ಸಂಕಲನಕ್ಕೆ ಭಾರತರತ್ನ ಸರ್. ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಬೆಂಗಳೂರು ಇವರ ವತಿಯಿಂದ ( ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ೨೦೧೯

ಕನ್ನಡ ಸಾಹಿತ್ಯ ಪರಿಷತ್ತು – ಗಜೇಂದ್ರ ಗಡ್ ಘಟಕದ ಸಾಹಿತ್ಯ ಚಿಗುರು ಪ್ರಶಸ್ತಿ ೨೦೧೯ ಕಲ್ಯಾಣಿಯಲ್ಲಿ ಮಳೆ ಕವನಸಂಕಲನಕ್ಕೆ ದಕ್ಕಿದೆ

ಈ ಸಲದ ಮುಖಾಮುಖಿಯಲ್ಲಿ  ಮುಂಬಯಿನ ಕಥೆಗಾರ್ತಿ ಹೇಮಾ ಸದಾನಂದ ಅಮೀನ್ ಅವರನ್ನು ಮಾತಾಡಿಸಿದ್ದಾರೆ ನಾಗರಾಜ್ ಹರಪನಹಳ್ಳಿ

” ರಾಜಕಾರಣ ಎಂದರೆ  ಸಮುದಾಯ, ಧರ್ಮಗಳ ಮಧ್ಯ ಯಾವುದೇ  ದ್ವೇಷ ಹುಟ್ಟದಂತಿರಬೇಕು “

 ಪ್ರಶ್ನೆ :   ಕವಿತೆ – ಕಥೆಗಳನ್ನು ಯಾಕೆ ಬರೆಯುತ್ತೀರಿ?

ಉತ್ತರ :  ಮನವನ್ನು ಕಾಡಿದ ಚಿತ್ತವನು ಕೆಣಕಿದ ‌ಸನ್ನಿವೇಶ ಹೃದ್ಯವಾದಾಗ ಪ್ರಜ್ಞೆ ತಾನೇ ತೂದಲು ತೊದಲಾಗಿ  ಅಕ್ಷರದ ಅಭಿವ್ಯಕ್ತಿ ತಾಳುವುದು.

ನಂತರ ಅದು ನನ್ನದೇ ರೀತಿಯಲ್ಲಿ  ಜೋಡಿಸಿ ಅದಕ್ಕೊಂದು ರೂಪ ಕೊಡಲು ಪ್ರಯತ್ನಿಸುತ್ತೇನೆ.  ಒಂದು ಭಾವನೆ ಕವಿತೆ ರೂಪ ಪಡೆದರೆ   ಘಟನೆ ಕತೆಯಾಗಿ ಮಾರ್ಪಡುತ್ತದೆ.

 ಪ್ರಶ್ನೆ :  ಕತೆ ಹುಟ್ಟುವ ಕ್ಷಣ ಯಾವುದು ?

 ಉತ್ತರ : ಕತೆ ಹುಟ್ಟಲು ನಿರ್ದಿಷ್ಟ  ಕ್ಷಣ  ಅಂತಿಲ್ಲ . ನನ್ನೆದುರು ಯಾರಾದರೂ ಮಾತಾಡುತ್ತಿದ್ದರೆ ಆ ಘಟನೆಯ ಒಂದು ಸಣ್ಣ ಅಂಶ ತಾನಾಗಿಯೇ ನನ್ನ  ಕಥೆಯ ಮೈಯಾಗುವುದು.  ಒಂದು ಕಥೆಯ  ಓದಿನಲ್ಲೂ  ಹೊಸ ಕಥೆಯ  ಆಶಯ ಅಡಗಿರುತ್ತದೆ.  ಹಾಂ, ಅದನ್ನು  ಒಂದು ಓಘದಲ್ಲಿ ಬರೀತಾ ಇದ್ದರೆ  ಪೂರ್ತಿಯಾಗಬಹುದು.  ಮಧ್ಯ ತಡೆಯಾದರೆ ಮುಂದೆ ದಿನಗಳೇ ಬೇಕು.  ಯಾರದೋ  ಬದುಕಿನ ಘಟನೆ ನೆನಪಾದರೂ ಇಷ್ಟೆ . ಕಥೆ ಬರೆಯಲೇ ಬೇಕೆಂದು  ಕುಳಿತಾಗ ಸ್ವಲ್ಪ ಕೃತಜ್ಞತೆ  ಸಹಜವಾಗಿ ಆವರಿಸುವುದು.  ಸಾಮಾನ್ಯವಾಗಿ ನಾನು

 ” ಮಿ ಟೈಮ್ ” ಎಂದು ಬೆಳಗಿನ ಸಮಯವನ್ನು  ಓದು ಬರಹಕ್ಕಾಗಿ ಮೀಸಲಾಗಿಟ್ಟಿದ್ದೇನೆ. ಆ ಕ್ಷಣದಲ್ಲಿ  ಕತೆ ಕವನಗಳ ಕುಸುರಿ ಕೆಲಸ ನಡೆಯುತ್ತಿರುತ್ತದೆ .

ಪ್ರಶ್ನೆ :  ಕತೆಗಳಲ್ಲಿ ಬಾಲ್ಯ,  ಹರೆಯ  ಇಣುಕಿದೆಯೇ ?

ಉತ್ತರ :  ನಾನು ಇಷ್ಟರ ವರೆಗೆ ಬರೆದ ಕತೆಗಳಲ್ಲಿ  ನನ್ನ ಬಾಲ್ಯದ ಆ ಜನಪದ ಹುಡುಗಾಟಿಕೆ ಆಟೋಟಗಳು ಇಣುಕಿಲ್ಲ. ಆದರೆ ಮನದ ಮೂಲೆಯಲ್ಲಿ  ಬಾಲ್ಯದ  ಕೆಲವು ವಿಷಯಗಳು ಕಾಡುತಿದ್ದು, ಅವುಗಳನ್ನು  ಹೊರ ಹಾಕಲು ನಾನು ಉದಾಸೀನ ತೋರಿಸುತ್ತಿದ್ದೆನಾ ?  ಅಥವಾ ಇನ್ನೂ ಸ್ವಲ್ಪ ಗಟ್ಟಿಯಾಗಿ ಅವುಗಳಿಂದ ಬಿಡುಗಡೆ ಹೊಂದಬಹುದೇ  ಗೊತ್ತಿಲ್ಲ .   ಒಟ್ಟಾರೆ ಮುಕ್ತ ವಾತಾವರಣಕ್ಕೆ ಹೆಚ್ಚಿನ ಆಸ್ಪದ ದಕ್ಕಲಿಲ್ಲ.

ಪ್ರಶ್ನೆ :  ನಿಮ್ಮ ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ?

ಉತ್ತರ:   ಇದು ನನಗೆ  ತುಂಬಾ ಆಪ್ತವಾದ ಪ್ರಶ್ನೆ .  ಮುಂಬಯಿ ನನ್ನ ಕಥೆಗಳ ಕೇಂದ್ರ ಬಿಂದುವಾಗಿದ್ದು . ಇಲ್ಲಿಯ ಭಾಷೆ,   ಬದುಕು,  ಸುಖ   ದುಃಖಗಳಿಗೆ ದೀರ್ಘ ಬಾಳಿಕೆ ಕೊಡದೆ ಸಣ್ಣ ಸಣ್ಣ ತುಣುಕುಗಳಲ್ಲಿ ಅನುಭವಿಸುವ  ಅಭ್ಯಾಸ , ನನ್ನ ಕಥೆಗಳ ವ್ಯಾಪ್ತಿಯಾಗಿರುವುದು.  ಮುಂಬಯಿಯ ಮೂಲೆ  ಮೂಲೆಗಳನ್ನು ತಿಕ್ಕಿದರೂ ಅಲ್ಲಾದೀನನ ಚಿರಾಗ್ ” ಡಾಂಟೆ ಒಂದು ಹೊಸ ಕಥೆ ಪ್ರತ್ಯಕ್ಷವಾಗುತ್ತದೆ.   , ನಾನು ವಾಸ್ತವ ಬದುಕಿಗೆ ಹೆಚ್ಚಿನ ಒತ್ತು ನೀಡುತ್ತೇನೆ.

ಬದುಕನ್ನು ಬಂದಂತೇ ಸ್ವೀಕರಿಸುವ ಮಧ್ಯಮ ಕುಟುಂಬ .

ಅವುಗಳಲ್ಲಿ ನ ನೋವು ನಲಿವುಗಳು .

ಪ್ರಶ್ನೆ :  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?

ರಾಜಕೀಯ ವಿಷಯದಲ್ಲಿ ನನಗೆ ಹೆಚ್ಚು ಆಸಕ್ತಿಯಿಲ್ಲ .  ಆದರೆ ಮಹಿಳೆಗೆ ಅವಳ ಯೊಗ್ಯತೆಗೆ ತಕ್ಕಸ್ಥಾನ ಮಾನ ಎಲ್ಲೆಡೆ ದೊರಕಬೇಕು .

ರಾಜಕಾರಣ ಎಂದರೆ ವ್ಯಕ್ತಿ, ಸಮುದಾಯ, ಧರ್ಮಾದಿಗಳ ಮಧ್ಯ ಯಾವುದೇ  ದ್ವೇಷಭಾವ ಹುಟ್ಟದಂತೆ ಇರಬೇಕು  ಅಷ್ಟೆ .

ಪ್ರಶ್ನೆ :  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು  ಏನು ಹೇಳುತ್ತಿದೆ?

ಉತ್ತರ :  ದೇಶದ ಸುಭದ್ರತೆ ಇರುವುದು ಅಯಾದೇಶದ ಆರ್ಥಿಕ ವ್ಯವಸ್ಥೆ ಯ ಮೇಲೆ, ಸಂಪನ್ಮೂಲ ವ್ಯವಸ್ಥೆ , ದೇಶ ರಕ್ಷಣೆ, ರೈತ ಪೋಷಣೆ

ಮಹಾಳಾ ಸಬಲತೆಗಳ ಮೇಲೆ ಹೆಚ್ಚಿನ ಒತ್ತುಕೊಡುವ ಹಾಗೂ ಅಪರಾಧ ,ಅತ್ಯಾಚಾರ, ಭೃಷ್ಟತೆಮುಕ್ತ ಸ್ವಾವಲಂಬೀ ಬದುಕಿನ ದೇಶ ನಿರ್ಮಾಣಕ್ಕೆ ನಾವು ಕಟಿಬದ್ಧರಾಗಿ  ಎಲ್ಲದಕ್ಕೂ ಸರ್ಕಾರವನ್ನೇ  ದೂಷಿಸದೆ , ಅವಲಂಬಿಸದೇ‌, ನಮ್ಮ ಯೊಗ್ಯತೆಗೆ ತಕ್ಕಂತೆ ನಾಗರಿಕ ಕರ್ತವ್ಯ ಹಾಗೂ ಪ್ರಜ್ಞೆಯಿಂದ ದೇಶ ಮುನ್ನಡೆಸ ಬೇಕು.

ನಾನು ನನ್ನ ದೇಶಕ್ಕೆ ಏನಾದರೂ ಕೊಡುಗೆ ನೀಡುವ ಪ್ರಯತ್ನದಲ್ಲಿರಬೇಕು. ಯಾಚನಾ ಪ್ರವೃತ್ತಿ ದೂರವಾಗಬೇಕು.

ಪ್ರಶ್ನೆ :   ಧರ್ಮ , ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?

ಉತ್ತರ:  ‘ ದೇವರು’  ಇದೊಂದು ನಂಬುಗೆಯ ಮೇಲೆ ಅವಲಂಬಿತ:

ಮನಸ್ಸಿಗೆ ನೆಮ್ಮದಿ ಸಿಗುವ ಸ್ಥಳ, ಕಾರ್ಯ, ಪ್ರಾಮಾಣಿಕ ಜನ ಸೇವೆ, ದೇಶಹಿತ,  ಆರೋಗ್ಯ ರಕ್ಷಣೆ,  ಇತರರಿಗೆ ನೋವು ನೀಡದ ಮಾತು ,ಆಚರಣೆ, ಮನಸ್ಸು

ಅನಸೂಯೆ ಪ್ರವೃತ್ತಿ,  ಹಿರಿ – ಕಿರಿಯರಿಗೆ ಅವರವರ ಯೊಗ್ಯತೆಗೆ ತಕ್ಕಂತೆ ಗೌರವ   ನೀಡುವಿಕೆ ಅದೇ ತರಹದ ಬರವಣಿಗೆ ….ಇವೇ ಮೊದಲಾವುದಗಳಲ್ಲಿ ದೇವರ ವಾಸ :ಎಂದು ನಂಬಿದ್ದೇನೆ . ಇವೆಲ್ಲವೂ  ನೆಮ್ಮದಿಯ  ತಾಣ.  ಇವೇ ದೇವರ ಪ್ರತಿರೂಪ ಅಂತ ನನ್ನ ನಂಬುಗೆ

ಪ್ರಶ್ನೆ :  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?

ಉತ್ತರ : ನಾವು ಈ ಜಾಗತೀಕರಣ ಭರಾಟೆಯಲ್ಲಿ  ತಾಂತ್ರಿಕ  ಯುಗದಲ್ಲಿ ಬಹುಶಃ ನಮ್ಮ ಮೂಲ ಅಸ್ತಿತ್ವವನ್ನೇ ಮರೆಯುತ್ತ ವಿದೇಶಿಕರಣದತ್ತ ವಾಲುತ್ತಿದ್ದೇವೆ ಅಂತ ಅನಿಸುತ್ತದೆ.

ವಿದೇಶಿಯರು ಭಾರತೀಯ ಸಂಸ್ಕೃತಿ, ಆಚಾರ, ವಿಚಾರಗಳನ್ನು ಅಳವಡಿಸಿ ಕೊಂಡು,ಭಾರತದತ್ತ ತಮ್ಮ ಗೌರವ ದೃಷ್ಟಿ ಬೀರುತ್ತಾರೆ.

ನಮ್ಮ ಮನಸ್ಥಿತಿ ಈ ರೀತಿ ಬದಲಾಗಲು, ಆಧುನೀಕರಣದೊಂದಿಗೆ  ನಮ್ಮ ಮೂಲ ಸಂಸ್ಕೃತಿ ಉಳಿಯಲು ಅಭಿಯಾನ ಒಂದು ಆರಂಭ ವಾಗಬೇಕು.

ಒಟ್ಟಾರೆ ನಮ್ಮ ಸಂಸ್ಕೃತಿ ಬದಲಾಗುತ್ತಿದೆ ..ಇದಂತೂ ಸತ್ಯ. ಕಾಲಕ್ಕೆ ತಕ್ಕಂತೆ ಬದಲಾಗುವುದ್ದಕ್ಕೂ  ಸಂಸ್ಕೃತಿ ಬದಲಾಗುವುದಕ್ಕೂ ತುಂಬಾ ವ್ಯತ್ಯಾಸವಿದೆ.

ಪ್ರಶ್ನೆ:   ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ?

ಉತ್ತರ: ಜನಪರವಾದ ಸಾಧ್ಯವಾದಷ್ಟೂ ಉತ್ತಮ ಸಾಹಿತ್ಯ ನಿರ್ಮಿತಿ ಅಳವಡಿಸಿಕೊಳ್ಳಬಹುದಾದ ನೀತಿ ಸಂದೇಶಾತ್ಮಕ: ಸೃಜನಾತ್ಮಕ ಕೃತಿ ರಚನೆ., ಪೂರ್ವಾಗ್ರಹ ಹಾಗೂ ಪೈಪೋಟಿ ರಹಿತ , ಸೌಹಾರ್ದಯುತ ಸಾಹಿತ್ಯ ನಿರ್ಮಿತಿಯ ಕನಸುಗಳು ವಾಸ್ತವಿಕ ನೆಲೆಗಟ್ಟಿನಲಿ ಇರಬೇಕು. ಆದರೆ ಇದೆಲ್ಲ ಮೊದಲ ಹಂತದಲ್ಲಿ ದಕ್ಕುವಂತದಲ್ಲ . ನಿರಂತರ  ಓದು  ಬರಹ ಗಳಿಂದ  ಸಾಧ್ಯವೆನ್ನುವುದನ್ನೂ ಮನಗಂಡಿದ್ದೇನೆ.

ಪ್ರಶ್ನೆ : ಕನ್ನಡ  ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ  ಯಾರು ?

ಉತ್ತರ : ಮುಂಬಯಿಯನ್ನು ಕೇಂದ್ರವಾಗಿತ್ತು ಬರೆಯುವುದರಿಂದಾಗಲಿ  ಕನ್ನಡದ ಜಯಂತ್  ಕಾಯ್ಕಿಣಿ,  ಮುಂಬಯಿ  ವಿಶ್ವ ವಿದ್ಯಾಲಯ ಕನ್ನಡ ವಿಭಾಗದ  ಮುಖ್ಯಸ್ಥರಾದ  ಡಾ. ಜಿ. ಏನ್ ಉಪಾಧ್ಯ .   ಶ್ರೀನಿವಾಸ ಜೋಕಟ್ಟೆ , ಕಥೆಗಾರ ರಾಜೀವ ನಾಯಕ್,      ಡಾ. ಸುನೀತಾ ಶೆಟ್ಟಿ , ಮಿತ್ರ ವೆಂಕಟ್ರಾಜ್ ,   ಸುನಂದಾ  ಕಡಮೆ ,  ಸ್ಮಿತಾ ಅಮೃತ್ ರಾಜ್ .

ಪ್ರಶ್ನೆ :  ಈಚೆಗೆ ಓದಿದ ಕೃತಿಗಳಾವವು?

ಉತ್ತರ : All the light we cannot see by Anthony Deoerr , ಸುಧಾ ಮೂರ್ತಿ ಅವರ ಕೆಲವು ಪುಸ್ತಕಗಳನ್ನು ಓದಿದ್ದೇನೆ. ”  ಡಾಲರ್ ಬಹು” , ಹೌಸ್ ಆಫ್  ಕಾರ್ಡ್ಸ್ .

ಪ್ರಶ್ನೆ :  ನಿಮಗೆ ಇಷ್ಟವಾದ ಕೆಲಸ ಯಾವುದು?

ಉತ್ತರ :  ಯಾವುದೇ ಕೆಲಸವನ್ನೂ  ಮಾಡದಿರುವುದು . ಅಂದರೆ ಫಲಿತಾಂಶವನ್ನು ನಿರೀಕ್ಷಿಸುವ ಕೆಲಸಗಳನ್ನೂ ಬಲಪೂರ್ವಕವಾಗಿ ಮಾಡುತ್ತೇನೆ  .  ಮೈಲ್ಡ್ ಸಂಗೀತದೊಂದಿಗೆ ಇಷ್ಟವಾದ ಪುಸ್ತಕವನ್ನೋದುವುದು ,   ಧ್ಯಾನಕ್ಕೆ ಕೂತಿರುವದು, ಗಂಟೆಗಟ್ಟಲೆ  ಕಥೆ ಕೇಳುತ್ತಿರುವುದು.  ನಾನು ಆಗಾಗ ಮುಂಸಿ  ಪ್ರೇಮಚಂದರ , ಸದಾಫ್ ಹುಶೆನ್ ಅವರ ಕತೆಗಳನ್ನು ಕೇಳುತ್ತಿರುತ್ತೇನೆ.  ಕಥೆ ಕೇಳುತ್ತಾ ಮಾಡುವ ಎಲ್ಲಾ ಕೆಲಸಗಳು ನನಗಿಷ್ಟ .

ಪ್ರಶ್ನೆ : ನಿಮಗೆ ಇಷ್ಟವಾದ ಸ್ಥಳ ಯಾವುದು ?

ಉತ್ತರ:  ಕಡಲ ತೀರ  , ತೆಂಗಿನ ಮರಗಳ ತೋಟ , ಹರಿಯುತ್ತಿರುವ ನದಿ, ತೊರೆ , ಜಲಪಾತ , ಸರೋವರ  ಒಟ್ಟಾರೆ ನೀರೆಂದರೆ ನನಗೆ ತುಮ ಇಷ್ಟ ಆದ್ದರಿಂದ ನೀರಿರುವ ಯಾವುದೇ ಜಾಗ ನನಗೆ ಬಲು ಆಪ್ತವಾಗುತ್ತದೆ.

* ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ  ಸಿನಿಮಾ ಯಾವುದು?

ನನಗೆ ಆರ್ಟ್ ಮೂವೀಸ್ ಗಳು ಹೆಚ್ಚು ಇಷ್ಟ ಅವುಗಳಲ್ಲಿ ಡಾ.  ಶಿವರಾಮ ಕಾರಂತರ  ಕಾದಂಬರಿ ಆಧಾರಿತ ಚಿತ್ರ ಬೆಟ್ಟದ ಜೀವಿ ,  ಕಥೆಯೊಂದಿಗೆ ( ಸುಚಿದ್ರ ಪ್ರಸಾದ್ ಅವರ ಭಾಷೆಯ ಸ್ಪಷ್ಟತೆ  ಗಮನಾರ್ಹವಾದದ್ದು ) ರಾಷ್ಟ್ರಕವಿ ಡಾ. ಕುವೆಂಪು ಅವರ ಕಾನೂರ ಹೆಗ್ಗಡತಿ , ಹಿಂದಿಯ ತಾರೆ  ಜಮೀನ್ ಪರ್  , ತ್ರೀ  ಈಡಿಯಟ್ಸ್  , ಇಂತಹ ಪ್ರಾಕ್ಟಿಕಲ್ ವಿಚಾರವುಳ್ಳ ಸಿನೆಮಾಗಳು ಇಷ್ಟ.   ಕಾಮಿಡಿ ಸಿನೆಮಾಗಳಲ್ಲಿ ಅರ್ . ಬಿ. ಶೆಟ್ಟಿ ಅವರ ಚಿತ್ರಗಳು ಬಹಳ ಇಷ್ಟವಾಗುತ್ತವೆ.

ಪ್ರಶ್ನೆ :    ನೀವು ಮರೆಯಲಾರದ‌ ಘಟನೆ‌ ಯಾವುದು?

ಉತ್ತರ : ನಾನು ಹುಟ್ಟಿ ಬೆಳೆದು ನಗರ  ಮುಂಬಯಿ.  ಇಲ್ಲಿ  ಹೆಚ್ಚು ಕಡಿಮೆ ತಿಂಗಳಿಗೆ ಎರಡು ತಿಂಗಳಿಗೊಮ್ಮೆ  ವಿಶೇಷವೆನ್ನುವಂತಹ  ಘಟನೆಗಳು ನಡೆಯುತ್ತಲೇ ಇರುತ್ತವೆ.  ಮುಂಬಯಿಯ ಮೇಲೆಯೇ ಒಂದು ರೀತಿಯ ಥ್ರಿಲ್ . ಇನ್ನೂ ಭಯೋತ್ಪಾದಕರ ದಾಳಿಯಾಗಲಿ ,   ಕೋಮು  ಗಲಭೆಗಳಾಗಲಿ ,  ರಾಜಕೀಯ   ಸಮಸ್ಯೆಗಳಾಗಲಿ ಇನ್ನಿತರ  ಸಮಸ್ಯೆಗಳಿಂದ ಈಗಾಗಲೇ ಮುಂಬಯಿ ತತ್ತರಿಸಿಕೊಂಡಿದೆ.   ಈ ಒಂದೊಂದು ದಾಖಲೆಗಳು ನನ್ನ ಚಿತ್ತ ಬಿತ್ತಿಯ್ಲಲೂ  ಅಚ್ಚಾಗಿ ಉಳಿದಿವೆ. ಅದರಲ್ಲೂ ಮುಖ್ಯವಾಗಲಿ ೧೯೯೧ ರ  ಹಿಂದೂ ಮುಸ್ಲಿಂ ಕೋಮು ಗಲಭೆ ಹಾಗೂ   ೨೬ ಜುಲೈ  ೨೦೦೫ ರ ಭೀಕರ ಮಳೆ .  ಇದೀಗ ಈ ಕೋವಿಡ್ ೧೯ ಲಾಕ್ಡೌನಿನ್ನಿಂದ ಅಸ್ತವ್ಯಸ್ತವಾದ ಬದುಕು ಸಹ  ಇಂದಿಗೂ ಮರೆಯಾಲಾಗದ ಘಟನೆ.  ವೈಯಕ್ತಿಕವಾಗಿ ನಾನು ವೈಷ್ಣವಿ ದೇವಿ ದರುಶನಕ್ಕೆ ಹೋದಾಗ ಕಾಣೆಯಾದ  ಪ್ರಸಂಗ ಇಂದಿಗೂ ಮೈಯಲ್ಲಿ  goose  bumps  ಎಬ್ಬಿಸುತ್ತವೆ.

**************************************************************

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Leave a Reply

Back To Top