ಅಂಕಣ ಬರಹ

ಕಗ್ಗಗಳ ಲೋಕ

ಮುಕ್ತಕ – ೨೯೨


ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ |
ತಿದ್ದಿಕೆಗವೊಂದು ಮಿತಿಯುಂಟು ಮರೆಯದಿರು ||
ಉದ್ದ ನೀಂ ಬೆರಳನಿತು ಬೆಳೆದೇಯೆ ಸಾಮಿಂದ|
ಸ್ಪರ್ಧಿಯೇ ತ್ರಿವಿಕ್ರಮಗೆ? ಮಂಕುತಿಮ್ಮ ||


ಭಾವಾರ್ಥ: ನೂರಾರು ದೋಷ ತಮ್ಮಲ್ಲಿದ್ದರೂ , ಇತರರ ತಪ್ಪುಗಳನ್ನು ಎತ್ತಿ ಹಿಡಿದು, ಹೀಯಾಳಿಸಿ , ಪುಕ್ಕಟೆ ಸಲಹೆ ಕೊಡುವುದು ಮನುಷ್ಯರಿಗಿರೋ ದುರಭ್ಯಾಸ.ಇತರರನ್ನು ತಿದ್ದುವ ಮೊದಲು ನನ್ನಲ್ಲೇನಾದರೂ ಲೋಪವಿದೆಯೇ , ತಿದ್ದಲು ನಾನು ಅರ್ಹನೇ ಎಂದು ಮೊದಲು ಯೋಚಿಸಬೇಕು. ಅದಕ್ಕಾಗಿ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತಾ , ಆಂತರಿಕವಾಗಿ ಬೆಳೆಯಬೇಕು.ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ಗುರುತಿಸಿ, ತಿದ್ದಿಕೊಂಡು ಹೊಸದಾದ ಒಳ್ಳೆಯ ಗುಣಗಳನ್ನು ಬೆಳೆಸಿ ಬೆಳೆಯಬೇಕು. ಆದರೆ ಎಷ್ಟು ಬೆಳೆದರೂ ನಮ್ಮ ಬೆಳವಣಿಗೆಗೆ ಒಂದು ಮಿತಿಯಿದೆ. ಮಹಾವಿಷ್ಣುವು ವಾಮನಾವತಾರದಲ್ಲಿ ಆಕಾಶದೆತ್ತರಕ್ಕೆ ಬೆಳೆದಂತೆ ನಾವು ಬೆಳೆಯಲು ಸಾಧ್ಯವಿಲ್ಲ . ಹಾಗಾಗಿ ಲೋಕದ ಡೊಂಕನ್ನು ತಿದ್ದುವ ಬದಲು , ನಾವು ಸಜ್ಜನರಾಗಲು ಪ್ರಯತ್ನಿಸೋಣ ಎನ್ನುವುದು ಈ ಮುಕ್ತಕದ ಆಶಯವಾಗಿದೆ.


ಮುಕ್ತಕ – ೨೯೫


ತಪ್ಪನಿನಿತುಂ ಸೈಸದಪ್ಪಟದ ಗುಣಶಾಲಿ|
ಕಪ್ಪ ಕಂಡು ಕನಲ್ವ ಕೆಂಡ ಗುಲಗಂಜಿ||
ಉಪ್ಪೋ ಸಪ್ಪೆಯೋ ನಿನ್ನ ಮೈಬೆವರು ನೆಕ್ಕಿ ತಿಳಿ |
ಒಪ್ಪಿಹೆಯ ನೀನಜನ ಮಂಕುತಿಮ್ಮ||


ಭಾವಾರ್ಥ: ಪ್ರಪಂಚದಲ್ಲಿ ಬಹುಶಃ ತಪ್ಪೇ ಮಾಡದಿರುವ ಒಬ್ಬನೇ ಒಬ್ಬ ವ್ಯಕ್ತಿ ಇರಲಿಕ್ಕಿಲ್ಲ. ಯಾವುದಾದರೂ ಒಂದು ಸಂದರ್ಭದಲ್ಲಿ ಏನಾದರೂ ಒಂದು ತಪ್ಪನ್ನು ಮಾಡಿರಲೇ ಬೇಕು. ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ , ತಾನು ಯಾವಾಗಲೂ ಸರಿ ಎಂಬ ವರ್ತನೆಯನ್ನು ತೋರಿಸುವ ಬಹಳಷ್ಟು ಮಂದಿಯಿದ್ದಾರೆ. ಗುಲಗಂಜಿಯೂ ಕೂಡ ತನ್ನಲ್ಲಿರುವ ಕಪ್ಪು ಚುಕ್ಕೆಯನ್ನು ಮರೆತು , ಪರರ ದೋಷವನ್ನು ಹುಡುಕಲು ಹೋಗುತ್ತದೆಯಂತೆ. ಭಗವಂತನು ನಮ್ಮನ್ನು ಸೃಷ್ಟಿಸುವಾಗ ಪ್ರತಿಯೊಬ್ಬರಿಗೂ ಅವರದೇ ಆದ ಒಂದೊಂದು ಸ್ವಭಾವವನ್ನು ಕೊಟ್ಟಿದ್ದಾನೆ. ಆ ಸ್ವಭಾವಗಳಿಗೆ ಅನುಗುಣವಾಗಿ ಅವರು ವರ್ತಿಸುತ್ತಿರುವಾಗ ನಾವು ತಪ್ಪು ಕಂಡುಹುಡುಕಿದರೆ , ಭಗವಂತನ ಸೃಷ್ಟಿಯನ್ನು ಪ್ರಶ್ನಿಸಿದಂತೆ ಆಗುವುದಿಲ್ಲವೇ? ಆದ್ದರಿಂದ ಆದಷ್ಟು ಮಟ್ಟಿಗೆ ನಮ್ಮ ತಪ್ಪುಗಳನ್ನು ತಿದ್ದಿ, ಹೊಂದಿಕೊಂಡು ಬದುಕೋಣ ಎಂದು ದಾರಿತೋರುವ ದಿವ್ಯಚೇತನ ಪೂಜ್ಯ ಡಿವಿಜಿಯವರಿಗೆ ನಮನಗಳು.

*****************************************

ವಾಣಿ ಸುರೇಶ್ ಕಾಮತ್

ವಾಣಿ ಸುರೇಶ್ ಕಾಮತ್ , ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಬೆಂಗಳೂರು ವಾಸಿ. ಓದು ಮತ್ತು ತೋಟಗಾರಿಕೆ ಇವರ ಹವ್ಯಾಸ.

Leave a Reply

Back To Top