ಅಂಕಣ ಬರಹ

ನಾಗರಾಜ ಎಂ ಹುಡೇದ

      ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಂಗೋಡ ಹುಟ್ಟೂರು. ಬಡತನದಲ್ಲಿ ಬೆಳೆದು, ಪರಿಶ್ರಮದಿಂದ ಶಿಕ್ಷಣವನ್ನು ಪಡೆದು ೨೦೦೪ ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೈಲಂದೂರು ಗೌಳಿವಾಡದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹದಿನೇಳು ವರ್ಷಗಳಿಂದ ಅದೇ ಕುಗ್ರಾಮದಲ್ಲಿ ಅಚ್ಚುಮೆಚ್ಚಿನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಗುಣಮಟ್ಟದ ಉತ್ತಮ ಶಾಲೆಯನ್ನಾಗಿಸಿದ್ದಾರೆ.

     ಬೋಧನೆಯನ್ನು ವೃತ್ತಿಯಾಗಿಸಿಕೊಂಡು ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡು ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ನಿರಂತರ ಅಭ್ಯಾಸ, ಸಾಹಿತ್ಯಿಕ ಕಾರ್ಯಕ್ರಮಗಳ ಸಂಘಟನೆ ಮಾಡುವ ಮೂಲಕ ಹಿಂದುಳಿದ ಪ್ರದೇಶದಲ್ಲಿಯೂ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಿದ್ದಾರೆ.

    ಮಕ್ಕಳಿಗಾಗಿ ‘ಅರಳುವ ಮೊಗ್ಗು’ ದೈಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದ್ದಾರೆ. ಶಿಕ್ಷಕರ ತಂಡವನ್ನು ಕಟ್ಟಿಕೊಂಡು ಉತ್ಸವ, ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಹಲವಾರು ಸಂಘಟನೆಗಳ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿ, ಪುರಸ್ಕಾರ:

•          ವಾ.ಕ.ರ.ಸಾ ಸಂಸ್ಥೆ ಯಲ್ಲಾಪುರ ಘಟಕದ ಕನ್ನಡ ಕ್ರಿಯಾ ಸಮಿತಿಯವರ ಅಭಿನಂದನಾ ಸನ್ಮಾನ.

•          ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ ನೀಡುವ ‘ರಾಜ್ಯೋತ್ಸವ ಯುವ ಕೃತಿ’ ಪುರಸ್ಕಾರ.

•          ಜಿಲ್ಲಾ, ರಾಜ್ಯಮಟ್ಟದ ಹಲವಾರು ಕವಿಗೋಷ್ಠಿ, ಕಾವ್ಯ ಕಮ್ಮಟಗಳಲ್ಲಿ ಭಾಗವಹಿಸಿ ಸನ್ಮಾನ ಪುರಸ್ಕಾರಗಳನ್ನು ಪಡೆದಿದ್ದಾರೆ.

ಪ್ರಕಟಿತ ಕೃತಿಗಳು:

•          ನಗುವ ತುಟಿಗಳಲ್ಲಿ – ಕವನ ಸಂಕಲನ

•          ಸುವರ್ಣ ಜ್ಞಾನ – ಕರ್ನಾಟಕ ಸಂಬAಧಿತ ರಸಪ್ರಶ್ನೆಗಳು.

•          ಕಿರುಗೊಂಚಲು – ಸಂಪಾದಿತ.

•          ಸೇಡಿನ ಹುಲಿಗಳು – ಸಾಮಾಜಿಕ ನಾಟಕ.

•          ಭರವಸೆ    – ಕವನ ಸಂಕಲನ.

•          ಶಬ್ದಕೋಶ   – ಕನ್ನಡ, ಗೌಳಿ,ಇಂಗ್ಲೀಷ ಭಾಷೆಯಲ್ಲಿ.

•          ಅವತಾರ್ ಮತ್ತು ಹಾರುವ ಕುದುರೆ – ಮಕ್ಕಳ ಕಥಾ ಸಂಕಲನ


 ಈ ವಾರದ ಮುಖಾಮುಖಿಯಲ್ಲಿ ಶಿಕ್ಷಕ, ಕವಿ ನಾಗರಾಜ ಹುಡೇದ ಅವರನ್ನು ಮಾತಾಡಿಸಿದ್ದಾರೆ ನಾಗರಾಜ ಹರಪನಹಳ್ಳಿ

” ದೇವರನ್ನು ಪೂಜಿಸಲು ಯಾರೂ ಯಾರ ಮೇಲೂ ಒತ್ತಡ ಹೇರಬಾರದು “

            ಕವಿತೆಗಳನ್ನು ಯಾಕೆ ಬರೆಯುತ್ತೀರಿ?

ಮನದ ಭಾವನೆಗಳನ್ನು ಮಲ್ಲಿಗೆಯಾಗಿಸಿ ನನಗೆ ನಾನು ಹಗುರಾಗಲು ಬರೆಯುವುದು ಒಂದು ಕಾರಣವಾದರೆ, ಸಮಾಜದ ಸಂಕಟ, ಸಮಸ್ಯೆಗಳಿಗೆ ಸ್ಪಂಧಿಸುವ ಒಬ್ಬ ಜವಾಬ್ಧಾರಿಯುತ  ವ್ಯಕ್ತಿಯಾಗಿ ಕವನಗಳನ್ನು ಬರೆಯುತ್ತೇನೆ.

ಕವಿತೆ ಹುಟ್ಟುವುದು ಯಾವಾಗ?

ಯಾವುದೋ ಒಂದು ವಿಷಯ ಮನಸ್ಸಿಗೆ ತಾಗಿ ಸಂತೋಷ, ಸಂಕಟ, ದುಃಖ ದುಮ್ಮಾನ, ಪ್ರೀತಿ , ಪ್ರಕೃತಿ ಸೌಂದರ್ಯ ಮುಂತಾದ ವಿಷಯಗಳ ಮನಸ್ಸಿನಲ್ಲಿ ಒಂದು ರೀತಿಯ ತುಡಿತ ಹೆಚ್ಚಾಗಿ ಕವಿತೆ ಹುಟ್ಟುತ್ತದೆ. ಆ ಸಮಯದಲ್ಲಿ ಏಕಾಂತ ಮತ್ತು ಪ್ರಶಾಂತವಾದ ಸ್ಥಳ ಬೇಕೆನಿಸುತ್ತದೆ.

            ನಿಮ್ಮ ಕವಿತೆಗಳಲ್ಲಿ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು?

ಪ್ರೀತಿ ಮತ್ತು ಪ್ರಕೃತಿ,  ಸೌಂದರ್ಯ ಗಳಿಂದ ನಾನು ಹೆಚ್ಚು ಪ್ರಭಾವಿತನಾಗಿದ್ದೇನೆ. ವಯೋ ಸಹಜವಾಗಿ ಮತ್ತು ಸರ್ವಕಾಲಕ್ಕೂ ಪ್ರೀತಿ- ಪ್ರೇಮ ಎವರ್ ಗ್ರೀನ್. ಈ ಮಲೆನಾಡಿನ ಮಳೆ – ಹಸಿರ ಕಾಡು ಹೆಚ್ಚು ಪ್ರಭಾವಿಸಿವೆ ಮತ್ತು ಕವನವಾಗಿವೆ. ದೇಶಪ್ರೇಮ, ನಾಡು-ನುಡಿ ಬಗ್ಗೆಯೂ ಅಗಾಧ ಪ್ರೀತಿ ಇದೆ.

     ನಾನು ನಮ್ಮ ವ್ಯಕ್ತಿಗಳ ಸ್ವಭಾವಗಳನ್ನು ಬಹಳ ಕುತೂಹಲದಿಂದ ನೋಡುತ್ತೇನೆ. ಕೆಲವರಿಗೆ ನಿಜ-ಸುಳ್ಳುಗಳನ್ನು ನಿರ್ಧರಿಸುವಷ್ಟು ಬುದ್ಧಿವಂತರಿಲ್ಲದೆ ಇರೋದು. ದ್ವೇಷ , ಸ್ವಾರ್ಥ, ಭ್ರಷ್ಟಾಚಾರಗಳಂಥ ವಿಷಯಗಳು ಬಹಳ ಕಾಡುವಂತವುಗಳಾಗಿವೆ.

ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ?

ಬಾಲ್ಯ ಎಲ್ಲರ ಜೀವನದಲ್ಲಿಯೂ ಬಹಳ ಪ್ರಭಾವ ಬೀರುವಂತದು. ಆ ಬಾಲ್ಯದ ಘಟನೆಗಳು ನೆನಪಾದಾಗ ಮತ್ತೆ ಮತ್ತೆ ಬಾಲ್ಯಕ್ಕೀಳಿಯುತ್ತೇವೆ. ಗೆಳೆಯರೆಲ್ಲ ಕೂಡಿ ಆಡಂಭರವಿಲ್ಲದ ಅಂದಿನ ಆಟಗಳು ಈಗಲೂ ನೆನಪಾಗುತ್ತವೆ. ನಾನು ಸಾಕಿದ್ದ ಪಾರಿವಾಳಗಳನ್ನು ಬೆಕ್ಕೊಂದು ಕದ್ದೊಯ್ದಿತ್ತು. ಆಗ ನಾನು ಅತ್ತಿದ್ದೇನೆ. ಅದೇ ಕವನವೂ ಆಯಿತು.

“ಪ್ರೀತಿಯ ಹಕ್ಕಿ

ನನ್ನೆದೆಯ ಕುಕ್ಕಿ

ಅಳುತಿದೆ ಬಿಕ್ಕಿ.”

ನಾನು ನನ್ನ ಗೆಳೆಯ ಸುಮ್ಮನೆ ಮಾತು ಬಿಟ್ಟಾಗಿನ ಸಂದರ್ಭವನ್ನು ಪಾಕಿಸ್ತಾನ ಮತ್ತು ಭಾರತದ ಬಾಂಧವ್ಯ ವೃದ್ಧಿಸುವಂತೆ ಬರೆದೆ. ಅದೊಂದು ಪ್ರಸಿದ್ಧ ಕವನವೂ ಆಯಿತು. ಬಾಲ್ಯದ ಕ್ಷಣಗಳನ್ನು ನೆನಪಿಸಿ ಅನೇಕ ಮಕ್ಕಳ ಕವನಗಳನ್ನೂ ರಚಿಸಿದ್ದೇನೆ.

ಹರೆಯವಂತೂ ಕಲ್ಪನೆ, ಕನಸುಗಳಿಂದ ತುಂಬಿರುತ್ತದೆ. ಯಾವಾಗಬೇಕಾದರೂ ಕವನವಾಗಿ ಬಿಡುತ್ತೆ.

ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು?

 ಮಹಾಕವಿ ಪಂಪ ಅವರ ಹೇಳಿಕೆಯಂತೆ ‘ಮಾನವ ಕುಲಂ ತಾನೊಂದೇ ವಲಂ’ ಎಂಬ ನಿಲುವು ನನ್ನದು. ಅವರವರ ಧರ್ಮ, ದೇವರನ್ನು ಪೂಜಿಸಲು ಯಾರೂ ಯಾರ ಮೇಲೂ ಒತ್ತಡ ಹೇರಬಾರದು. ಒಬ್ಬರನ್ನೊಬ್ಬರು ಪ್ರೀತಿ ಗೌರವಿಸಬೇಕು. ಅದು ಎಲ್ಲ ಧರ್ಮ ,ಜಾತಿಗಳಿಂದಲೂ ಆಗಬೇಕು. ನಮ್ಮ ನಮ್ಮ ಜಾತಿ, ಧರ್ಮದಲ್ಲಿ ನಂಬಿಕೆ, ಅಭಿಮಾನವಿರಲಿ. ಅಂಧಾನುಕರಣೆ, ದುರಭಿಮಾನ ಬೇಡ ಎಂಬುದು ನನ್ನ ವಿಚಾರ. ದಯವೇ ಧರ್ಮದ ಮೂಲ.

ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತದೆ?

ಕಲೆ, ಸಾಹಿತ್ಯ, ಜನಪದ ಕಲೆಗಳು ಆಧುನಿಕ ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಬರುತ್ತಿರುವುದು ಖುಷಿಯ ವಿಚಾರ. ಅವಕಾಶಗಳು ಸಾಕಷ್ಟಿವೆ. ಭರಾಟೆಯ ಮಧ್ಯ ಜೊಳ್ಳು ಹೆಚ್ಚು ವಿಜೃಂಭಿಸುವ ಸಾಧ್ಯತೆಯಿದೆ. ಸತ್ವಯುತವಾದ ಸಾಹಿತ್ಯ, ಸಾಂಸ್ಕೃತಿಕ  ವಾತಾವರಣ ನಿರ್ಮಾಣವಾಗಬೇಕಿದೆ.

          ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?

ಪ್ರದೇಶವಾರು ಬೇಧಭಾವವನ್ನು ನಮ್ಮ ಸಾಹಿತಿಗಳು ಮಾಡತ್ತಾರೆ. ಮೊದಲು ನಮ್ಮ ಹಿರಿಯರು ನಾಡು-ನುಡಿ ಮೇಲಿನ ಅಭಿಮಾನದಿಂದ ಸಾಹಿತ್ಯ ರಚಿಸಿ ತಲೆಮೇಲೆ ಹೊತ್ತು ಮಾರುತ್ತಿದ್ದರು. ಸರ್ಕಾರಗಳು ಅನುದಾನ ನೀಡೊದು ಶುರುಮಾಡಿದಾಗಿನಿಂದ ಏನೂ ಗಂಧವಿಲ್ಲದವರು,  ರಾಜಕಾರಣ ಬಳಸಿ ಚುಕ್ಕಾಣಿ ಹಿಡಿಯಲಿಕ್ಕೆ ಬರುತ್ತಿದ್ದಾರೆ. ಅವರಿಗೆ ಸಾಹಿತ್ಯ ತಿಳಿದಿಲ್ಲ, ಸಾಹಿತಿಗಳ ಮೇಲಂತೂ ಗೌರವವೇ ಇಲ್ಲ. ಹಣ ಚೆಲ್ಲಿ ಹಣ ಮಾಡೋ ಕಾಯಕಕ್ಕಿಳಿದಿದ್ದಾರೆ. ಬಂಡಾಯ ಸಾಹಿತ್ಯ ಪ್ರಾರಂಭವಾದಾಗಿನಿಂದ ಎಲ್ಲ ಜನಾಂಗದವರಿಗೂ ಅವಕಾಶಗಳು ದೊರೆಯುತ್ತಿರುವುದು ಸಮಾಧಾನ ತಂದಿದೆ.

        ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?

ದೇಶ ಅಂದ್ರೆ ನಾವೂ. ಪ್ರತಿಯೊಬ್ಬ ಪ್ರಜೆಯ ಮನಸ್ಥಿತಿಯೂ ಬದಲಾಗಬೇಕಿದೆ. ಪ್ರಾಮಾಣಿಕತೆ, ಮಾನವೀಯತೆಯತ್ತ ನಮ್ಮ ಮನಸ್ಸು ತುಡಿಯಬೇಕಿದೆ. ತುಳಿತಕ್ಕೊಳಗಾದ, ಹಿಂದುಳಿದವರನ್ನು ಮೇಲೆತ್ತುವ ಕಾರ್ಯಯೋಜನೆಗಳು ಜಾರಿಯಾಗಬೇಕಿದೆ.

        ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಕನ್ನಡ ಹಾಗೂ ಆಂಗ್ಲಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ ಯಾರು?

ಸಾಹಿತ್ಯ ಪ್ರತಿ ಭಾಷೆಗೂ ಜೀವ ಇದ್ದಂತೆ. ಆ ಭಾಷೆಯ ಮೌಲ್ಯವು ಹೆಚ್ಚಾಗಬೇಕಾದರೆ ಭಾಷೆಯಲ್ಲಿ ವಿಭಿನ್ನ ಪ್ರಯೋಗವುಳ್ಳ ಸಾಹಿತ್ಯ ಕೃಷಿಯಾಗಬೇಕು. ನಮ್ಮ ಕನ್ನಡ ಭಾಷೆಯೂ ಸಹಿತ ಸಾವಿರಾರು ವರ್ಷಗಳ ಇತಿಹಾಸವುಳ್ಳ ಭಾಷೆಯಾಗಿದೆ. ಸಂಪದ್ಭರಿತವಾದ ಭಾಷೆಯಾಗಿರುವುದು ನಾವೆಲ್ಲ ಹೆಮ್ಮೆಪಡುವಂತೆ ಮಾಡಿದೆ.

ಕನ್ನಡದಲ್ಲಿ ಕಾವ್ಯಕ್ಕೆ  ದ.ರಾ.ಬೇಂದ್ರೆಯವರು ನನ್ನಿಷ್ಟದ ಕವಿ. ಕಾವ್ಯವು ಎಷ್ಟು ಸಾರಿ ಓದಿದರೂ ಹೊಸ ಹೊಳಹನ್ನುಂಟು ಮಾಡುತ್ತದೆ. ಹಾಗೆಯೇ ಕುವೆಂಪು, ದಿನಕರ ದೇಸಾಯಿ, ಬರಗೂರು ರಾಮಚಂದ್ರಪ್ಪ ಅವರು ಇಷ್ಟವಾಗುತ್ತಾರೆ.

         ಈಚೆಗೆ ಓದಿದ ಕೃತಿಗಳು ಯಾವುವು?

ಗಂಗಾಧರ ನಾಯ್ಕ ಅವರ ‘ಡೋಂಟ್ ಗಿವ್ ಅಫ್ ಮುಂದಕ್ಕೆ ಸಾಗೋಣ’, ನಾಗರಾಜ ಹರಪನಹಳ್ಳಿಯವರ ‘ವಿರಹಿ ದಂಡೆ’, ಗಂಗಾಧರ ಎಸ್.ಎಲ್ ಅವರ ‘ನಮ್ಮ ಪಯಣ’

ನಿಮಗೆ ಇಷ್ಟವಾದ ಕೆಲಸ ಯಾವುದು?

ಮಕ್ಕಳಿಗೆ ಪಾಠ ಹೇಳಿಕೊಡೋದು ನನಗೆ ಬಹಳ ಇಷ್ಟ.

ನಿಮ್ಮ ಪ್ರೀತಿಯ , ತುಂಬಾ ಇಷ್ಟಪಡುವ ಸಿನೇಮಾ ಯಾವುದು?

ನಾನು ವಿಷ್ಣುವರ್ಧನ್ ಅವರ ಅಭಿಮಾನಿ. ‘ಅವರ ಯಜಮಾನ’ ಸಿನೆಮಾ ನನಗೆ ಬಹಳ ಇಷ್ಟ.

ನೀವು ಮರೆಯಲಾರದ ಘಟನೆ ಯಾವುದು?

ಮರೆಯಲಾರದ ಅನೇಕ ಘಟನೆಗಳಿವೆ. ಅದರಲ್ಲಿ ಸಿಹಿ-ಕಹಿಗಳಿವೆ. ಬಡತನದಲ್ಲಿ ಬೆಳೆದು ಕವನ ಸಂಕಲನ ಬಿಡುಗಡೆಯ ಕ್ಷಣ. ರಾಜ್ಯಮಟ್ಟದ ಉತ್ತಮ ಪ್ರಶಸ್ತಿ ಪಡೆದು ನಮ್ಮ ಗೌಳಿವಾಡದ ಜನ ಸನ್ಮಾನಿಸಿದ್ದು, ಮತ್ತು ನನ್ನ ತಾಯಿ ತೀರಿಕೊಂಡಾಗಿನ ದುಃಖದ ಘಟನೆ ಮರೆಯಲಾಗದು.

   ತೀರಾ ಕಡು ಬಡತನದಲ್ಲಿ ನಮ್ಮನ್ನು ಓದಿಸಿ ಬೆಳೆಸಿದ ನನ್ನ ತಂದೆ-ತಾಯಿಗಳನ್ನು, ನನ್ನ ಸಹೋದರರನ್ನು ಸ್ಮರಿಸುವೆ.

********************************************************

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Leave a Reply

Back To Top