ಅಂಕಣ ಬರಹ
ಕಗ್ಗಗಳ ಲೋಕ
ಆದರಣೀಯ ಡಾII ಡಿ. ವಿ. ಗುಂಡಪ್ಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ಒಂದು ಮೇರುಕೃತಿ. ಅವರ ಒಂದೊಂದು ಮುಕ್ತಕವೂ ಕೂಡ ಸಾರ್ವಕಾಲಿಕ ಸತ್ಯ! ಜೀವನದಲ್ಲಿ ಎದುರಾಗುವ ಸಾವಿರಾರು ಪ್ರಶ್ನೆಗಳಿಗೆ ತತ್ವಶಾಸ್ತ್ರ,ಸ್ವಾನುಭವ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಉತ್ತರ ನೀಡುವ ಕಗ್ಗಗಳು ಓದುಗರಿಗೆ ಆಪ್ತವಾಗಿ ಬಿಡುತ್ತವೆ. ಒಬ್ಬ ಸಾಮಾನ್ಯ ಮನುಷ್ಯನಂತೆ ಮೈತ್ರಿಭಾವದಿಂದ ಬರೆದ ಈ ಕಗ್ಗಗಳು ಅಸಂಖ್ಯ ಮಂದಿಗೆ ಸಾಂತ್ವನ ನೀಡುತ್ತವೆ. “ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯದನ್ನೇ ಕಂಡು , ಜೀವನದ ಸೊಬಗನ್ನು ಸವಿಯಬೇಕು” ಎಂದು ದಾರಿತೋರುವ ದಿವ್ಯಚೇತನ ನಮ್ಮ ಗುಂಡಪ್ಪನವರು. ಹೊಸ ಪೀಳಿಗೆಯ ಓದುಗರಿಗೆ ಡಿ.ವಿ.ಜಿ.ಯವರ ಕಗ್ಗಗಳ ಪರಿಚಯಿಸುವುದು ನನ್ನೀ ಬರಹಗಳ ಉದ್ದೇಶವಾಗಿದೆ.
ಮುಕ್ತಕ- 239
ಸಮವಿಲ್ಲ ಸೃಷ್ಟಿಯಲಿ ನರನಂತೆ ನರನಿಲ್ಲ I
ಕ್ಷಮೆಯುಮವಳೊಳಗಿಲ್ಲ , ಕರ್ಮದಂತೆ ಫಲII
ಕ್ರಮವೊಂದ ನೀಮಾಗಿಸಿರಿ ನೋಳ್ಪೆನಾನೆನುತI
ನಮಗವಳ್ ಪ್ರಸ್ಪರ್ಧಿ ಮಂಕುತಿಮ್ಮII
ಭಾವಾರ್ಥ: ಈ ಸೃಷ್ಟಿಯನ್ನೊಮ್ಮೆ ಗಮನಿಸಿ. ಎಷ್ಟೊಂದು ಭಿನ್ನತೆಗಳಿವೆ ಇಲ್ಲಿ!! ಒಬ್ಬ ಮನುಷ್ಯನಂತೆ ಇನ್ನೊಬ್ಬನಿಲ್ಲ. ಪ್ರತಿಯೊಂದು ಪ್ರಾಣಿ, ಪಕ್ಷಿ, ವಸ್ತುವಿನ ರೂಪ, ಯೋಚನೆ, ಗುಣ ಸ್ವಭಾವ – ಇವೆಲ್ಲಾ ಒಂದಕ್ಕಿಂತ ಒಂದು ಭಿನ್ನವಾಗಿವೆ. ಈ ಅಸಮತೆ ಭಗವಂತನ ಲೀಲೆ! ‘ಏಕ’ನಾಗಿದ್ದ ಭಗವಂತನು ಪ್ರಾಣಿ, ಪಕ್ಷಿ , ಗಿಡಮರಗಳು ಹೀಗೆ ಎಲ್ಲದರ ರೂಪ ಪಡೆದು ‘ಅನೇಕ’ ನಾಗಿದ್ದಾನೆ. ಅವನದೇ ಆದ ನಿಯಮವನ್ನು ಅವನು ರೂಪಿಸಿಕೊಂಡಿದ್ದಾನೆ. ಪ್ರಕೃತಿಯ ಆ ನಿಯಮಗಳನ್ನು ನಾವು ಕಡ್ಡಾಯವಾಗಿ ಪಾಲಿಸಲೇ ಬೇಕು. ನಾವು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಕರ್ಮಫಲವನ್ನು ಅನುಭವಿಸಲೇ ಬೇಕು. ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ಹೋದರೆ , ಪ್ರಕೃತಿಯೇ ನಮಗೆ ಬುದ್ದಿ ಕಲಿಸುತ್ತದೆ ಎನ್ನುವುದು ಈ ಮುಕ್ತಕದ ಆಶಯವಾಗಿದೆ.
ಮುಕ್ತಕ – 241
ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು I
ಅಸಮಂಜಸದಿ ಸಮನ್ವಯ ಸೂತ್ರನಯವ II
ವೆಸನಮಯ ಸಂಸಾರದಲಿ ವಿನೋದವ ಕಾಣ್ಬ I
ರಸಿಕತೆಯೇ ಯೋಗವೆಲೋ ಮಂಕುತಿಮ್ಮ II
ಭಾವಾರ್ಥ: ಈ ಮುಕ್ತಕದಲ್ಲಿ ನಿಜವಾದ ಯೋಗಿ ಎಂದರೆ ಯಾರು ಎಂದು ಪೂಜ್ಯ ಗುಂಡಪ್ಪನವರು ತಿಳಿಸಿದ್ದಾರೆ. ಯೋಗಿಯಾಗಲು ಪಾಲಿಸಬೇಕಾದ ಆ ನಾಲ್ಕು ಯೋಗಗಳು ಹೀಗಿವೆ:
೧) ಮೊದಲನೆಯದಾಗಿ , ಅಸಮದಲಿ ಸಮತೆಯನು ಕಾಣುವುದು. ಭಗವಂತನ ಈ ಸೃಷ್ಟಿಯಲ್ಲಿ ಒಬ್ಬರಂತೆ ಇನ್ನೊಬ್ಬರಿಲ್ಲ . ಎಲ್ಲಾ ಮನುಷ್ಯರು, ಪ್ರಾಣಿ, ಪಕ್ಷಿ, ಹೂ, ಹಣ್ಣುಗಳು ಒಂದೇ ರೀತಿ ಇದ್ದಿದ್ದರೆ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ಭಗವಂತನು ಸೃಷ್ಟಿಸಿದ ಈ ವೈವಿಧ್ಯತೆಯನ್ನು ಗೌರವಿಸಿ ಆನಂದಿಸಬೇಕು ಎನ್ನುವುದು ಇದರ ಅರ್ಥ.
೨) ಎರಡನೆಯದು, ವಿಷಮದಲಿ ಮೈತ್ರಿಯನು ಕಾಣುವುದು. ಅಂದರೆ ನಮ್ಮ ಶತ್ರುಗಳನ್ನು ಕೂಡ ದ್ವೇಷಿಸದೆ ಅವರನ್ನು ಸ್ನೇಹದಿಂದ ಕಾಣುವುದು.
೩) ಒಂದಕ್ಕೊಂದು ಹೊಂದಿಕೊಳ್ಳದ ವಿಷಯಗಳನ್ನು ತಮ್ಮ ಭಿನ್ನತೆ ಮರೆತು ಹೊಂದಿಕೊಂಡು ಹೋಗುವಂತೆ ಮಾಡುವುದು.
೪) ನಾಲ್ಕನೆಯದು: ನಮ್ಮ ಕಷ್ಟ ನೋವುಗಳನ್ನು ನಮ್ಮ ಮನಸ್ಸಿನಲ್ಲಿಯೇ ಇರಿಸಿ ಇತರರೊಂದಿಗೆ ನಗುನಗುತ್ತಾ ಬಾಳುವುದು.
ಈ ನಾಲ್ಕು ಗುಣಗಳನ್ನು ಹೊಂದಿದವನೇ ನಿಜವಾದ ಯೋಗಿ. ಎಲ್ಲರಲ್ಲೂ , ಎಲ್ಲದರಲ್ಲೂ ಒಳ್ಳೆಯದನ್ನೇ ನೋಡುವ ಪ್ರಯತ್ನ ಮಾಡಬೇಕು ಎನ್ನುವುದು ಈ ಮುಕ್ತಕದ ಆಶಯ.
****************************************
ವಾಣಿ ಸುರೇಶ್ ಕಾಮತ್
ವಾಣಿ ಸುರೇಶ್ ಕಾಮತ್ , ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಬೆಂಗಳೂರು ವಾಸಿ. ಓದು ಮತ್ತು ತೋಟಗಾರಿಕೆ ಇವರ ಹವ್ಯಾಸ.
ತುಂಬಾ ಸ್ಪಸ್ಟವಾದ ವಿವರಣೆ ಧನ್ಯವಾದಗಳು