ಪುಸ್ತಕ ಸಂಗಾತಿ
ಲೋಹದ ಹಕ್ಕಿಯೊಳು ತಣ್ಣನೆ
ಪ್ರವೇಶ
ಶಿವಪುತ್ರ ಅಜಮನಿಯವರು ಕಾವ್ಯ ಕ್ಷೇತ್ರದಲ್ಲಿ ಗುರುತಿಸಿ ಕೊಳ್ಳುತ್ತಲೇ ಸಮಾಜ ಚಿಂತಕರಾಗಿ ಹೊರಹೊಮ್ಮಿದವರು. ಕ್ರಿಯಾಶೀಲ ಬರಹಗಾರರು. ಸಿಂಗಾಪುರ,ಅಬುದಾಬಿಗಳಂತಹ ವಿಶ್ವಕನ್ನಡ ಸಮ್ಮೇಳನ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನವನ್ನು ವಾಚನ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ. ಯಾವುದೇ ಕೀರ್ತಿ. ಸನ್ಮಾನಕ್ಕೆ ಎಂದು ಆಸೆ ಪಟ್ಟವರಲ್ಲ ತುಂಬ ಸರಳ ಜೀವಿ. ಬಡತನದಲ್ಲೆ ಬೆಳೆದರೂ ಅವರ ಸಾಧನೆಗೆ ಅವರ ವಿದ್ವತ್ತಿಗೆ ಬಡತನ ಎಂದು ಅಡ್ಡಿಯಾಗಿಲ್ಲದಂತೆ ಸಾಹಿತ್ಯ ಲೋಕಕ್ಕೆ ತಮ್ಮ ಕೊಡುಗೆಯನ್ನು ನೀಡಿದವರು ಶಿವಪುತ್ರ ಅಜಮನಿ. ವಿಜಯಪುರ ಜಿಲ್ಲೆ ಮುದ್ದೇಬಿಹಾಳದವರು. ಕಾವ್ಯ, ಕತೆ, ನಾಟಕಗಳನ್ನು ಬರೆದಿದ್ದಾರೆ. ಕೆಲವು ತಮ್ಮ ಬರಹಗಳನ್ನೇ ಕಿರುಚಿತ್ರವನ್ನಾಗಿಸಿ ಸ್ವತಃ ತಾವೇ ಅಭಿನಯಿಸಿದ್ದಾರೆ. ಇಂತಹ ಚಿತ್ರಗಳು ಯಶಸ್ಸನ್ನು ಕೂಡಾ ಪಡೆದುಕೊಂಡಿವೆ. ಅಪರೂಪದಲ್ಲಿ ಅಪರೂಪವಾಗಿ ಕಾಣಿಸಿಕೊಂಡ ಬರಹ ಅವರ ಆತ್ಮಕಥೆ “ ಹೊಲಗೇರಿಯಿಂದ ಹೊರದೇಶಕ್ಕೆ” ಕಥನದ ಶಿರ್ಷಿಕೆಯೇ ಹೇಳುವ ಹಾಗೆ ಇಲ್ಲಿ ದಲಿತ ಸಂವೇದನೆಯನ್ನು ಅನಾವರಣಗೊಳಿಸಿದ್ದಾರೆ. ಕಾವ್ಯ ಬರಹದಿಂದ ಗದ್ಯದ ಕಡೆ ತಮ್ಮ ಒಲವನ್ನು ತೋರಿಸಿ ಆತ್ಮ ಕಥನ ಲೋಕಕ್ಕೆ ಪ್ರವೇಶ ಪಡೆದುಕೊಂಡ ಲೇಖಕ ಶಿವಪುತ್ರ ಅಜಮನಿ. ಹೊಲಗೇರಿಯಿಂದ ಹೊರದೇಶಕ್ಕೆ ಕೃತಿಯು ತುಂಬ ವಿಶಿಷ್ಟ ಮತ್ತು ಮಹತ್ವದ ಕೃತಿಯಾಗಿದೆ. ಶಿವಪುತ್ರ ಅಜಮನಿಯವರ ಇಡೀ ಜೀವನ ವೃತ್ತಾಂತವನ್ನೇ ತೆರೆದಿಟ್ಟಿದ್ದಾರೆ. ಇಂತಹ ಕೃತಿ ಒಬ್ಬ ಲೇಖಕನದ್ದು ಮಾತ್ರವಾಗದೇ ಎಲ್ಲ ದಲಿತರ ಜೀವನವೇ ಆಗಿದೆ.
ಮರಾಠಿ ಮೂಲದಿಂದ ಬಂದ ದಲಿತ ಆತ್ಮಕಥನ ಪರಂಪರೆಯನ್ನು ಕನ್ನಡ ಸಾಹಿತ್ಯದ ಪರಪಂಪರೆಯಲ್ಲಿ ಕಂಡಾಗ, ಮರಾಠಿ ಮೂಲವೇ ಇಲ್ಲಿ ಪ್ರಭಾವನ್ನು ಬೀರಿದ್ದು ಎಂದರೆ ಸುಳ್ಳಲ್ಲ. ಅಲ್ಲಿನ ದಲಿತ ಸಂವೇದನೆ, ನೋವು, ನಲಿವು, ಹತಾಶೆ, ಅವಮಾನ, ಕಿತ್ತು ತಿನ್ನುವ ಬಡತನ, ತುತ್ತು ಕೂಳಿಗಾಗಿ ಸಹಿಸಿದ ಅವಮಾನಗಳೆಲ್ಲವೂ ಕೂಡಾ ಇಂದು ನಿನ್ನೆಯದಲ್ಲಾ. ಅರವತ್ತು ಎಪ್ಪತ್ತರ ದಶಕದಿಂದ ಇಲ್ಲಿಯ ವರೆಗೆ ಅದೇ ಹತಾಶೆ ಬದುಕು ಕಣ್ಣೆದುರಿಗೆ ಹಾಗೇ ಇದೆ. ಅದನ್ನು ಶಿವಪುತ್ರ ಅಜಮನಿಯವರ ಆತ್ಮಕತೆ ಮತ್ತೆ ಅನಾವರಣಗೊಳಿಸುತ್ತದೆ. ತನ್ನೊಳಗೆ ತಾನು ಇಣುಕಿನೊಡಿಕೊಳ್ಳುವ ತನ್ನ ಆತ್ಮಸಾಕ್ಷಿ ಪ್ರಜ್ಞೆಯನ್ನು ಸದಾ ಜಾಗೃತಗೊಳಿಸಿಕೊಳ್ಳುತ್ತಲೇ, ಏನಾದರೂ ಸಾಧಿಸಬೇಕೆಂಬ ಛಲ ಹೊತ್ತ ನಾಯಕನನ್ನು ಈ ಆತ್ಮಕಥನದಲ್ಲಿ ಕಾಣುತ್ತೇವೆ. ಶಿವಪುತ್ರ ಅಜಮನಿಯವರು ಹೇಳುವ ಹಾಗೇ ತಮ್ಮ ಜೀವನದಲ್ಲಿ ನಡೆದ ಸತ್ಯಘಟನೆಗಳನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. ಯಾವುದೇ ಒಂದು ಕೃತಿ ಹೊರಬರಬೇಕಾದರೆ ಆ ಲೇಖಕನಿಗೆ ಸತ್ಯ ಹೇಳುವ ದೈರ್ಯ ಮುಖ್ಯವಾಗುತ್ತದೆ. ಯಾರ ಮುಲಾಜಿಗೂ ಒಳಗಾಗದೇ, ತಮ್ಮ ಮೇಲೆ ಹಾಗೂ ಇಡೀ ಸಮುದಾಯದ ಮೇಲೆ ಆದಂತಹ ಅಸ್ಪ್ರಷ್ಯತೆ, ನಿಂದನೆ, ಅವಮಾನವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಶಿವಪುತ್ರ ಅಜಮನಿ ಅವರಿಗೆ ತುಡಿತವಿದೆ. ಅವಮಾನದ ವಿರುದ್ಧ ಸಿಟ್ಟು ಸೆಡವು ಇದೆ.ಅಂತೆಲೇ ಅವರು ಬಂಡಾಯ ಏಳುತ್ತಾರೆ. ದಲಿತ ಕೇರಿಯ ಚಿತ್ರಣವು ಇಲ್ಲಿ ಹಾಸುಹೊಕ್ಕಾಗಿದೆ. ಒಂದು ಕಡೆ ಸೂರು ಇಲ್ಲದ ದಲಿತ ಜನಾಂಗಕ್ಕೆ ಶಾಲೆ, ಬೀದಿ ಪಕ್ಕದ ರಸ್ತೆ ,ಗುಡಿ ಗೋಪುರಗಳೇ ಗತಿ. ಇಂತಹ ಸೂರಿಲ್ಲದ ಅವರ ಬದುಕಿನ ಚಿತ್ರಣವನ್ನು ಹೇಳುತ್ತಾರೆ. ಮಳೆಗಾಲದ ಸಂಧರ್ಭದಲ್ಲಿ ಪಟ್ಟ ಪಾಡನ್ನು ಅನಾವರಣಗೋಳಿಸುತ್ತಲೆ ಆತ್ಮ ಕಥೆ ಪ್ರವೇಶವನ್ನು ಪಡೆದುಕೊಳ್ಳುತ್ತದೆ. ಶಾಲೆಯಲ್ಲಿಯೇ ಅವರ ತಾಯಿ ಮತ್ತು ಇನ್ನಿತರೆ ಮಕ್ಕಳೊಂದಿಗೆ ಬದುಕು ಸಾಗಿಸುವದು ಎಂತವರನ್ನಾದರು ಘಾಸಿಗೊಳಿಸುತ್ತದೆ. ಹಸಿದ ಹೊಟ್ಟೆಗೆ ಹಿಡಿ ಹಿಟ್ಟು ಹುಡುಕುವದು ಕೂಡಾ ಕಡು ಕಷ್ಟವೇ ಆದಂತಹ ಸಂದರ್ಭವನ್ನು “ಸತ್ತ ದನದ ಮಾಂಸಕ್ಕಾಗಿ ಹಗಲಿರುಳು ಕಾಯುವದು, ಸಿಕ್ಕ ಸತ್ತ ದನದ ಮಾಂಸವನ್ನು ಮೃಷ್ಟಾನ್ನವನ್ನಾಗಿ ಹೊಟ್ಟೆ ತುಂಬಿಸಿಕೊಳ್ಳುವ ದಾರುಣ ಚಿತ್ರಣವನ್ನು ಎಂತಹ ಗಟ್ಟಿಗರನ್ನಾದರೂ ಘಾಸಿಗೊಳಿಸದೆ ಇರಲಾರದು. ಒಂದು ಹೊಸ ಬಟ್ಟೆ ಗೊಸ್ಕರ ಸತ್ತ ದನದ ಎಲುಬು(ಮೂಳೆ)ಯನ್ನು ಆಯ್ದು, ಮಾರಾಟ ಮಾಡಿ ಹೊಸ ಬಟ್ಟೆ ಹಾಕಿಕೊಂಡು ತನ್ನ ಆಶೆಯನ್ನು ತೀರಿಸಿಕೊಳ್ಳುವ ಬಗೆ ಮನಸ್ಸನ್ನು ಕಲಕಿ ಬಿಡುತ್ತದೆ. ರಮಜಾನ ಹಬ್ಬದ ಸಂಧರ್ಭದಲ್ಲಿ ಬಿರಿಯಾನಿ ತಿನ್ನಲೇಬೇಕು ಎಂದು ಮಸೀದಿ ಮುಂದೆ ಚಪ್ಪಲಿಗಳನ್ನು ಕಾಯ್ದು ಬಿರಿಯಾನಿ ತಿಂದದ್ದು, ಊರಲ್ಲಿ ಯಾರಾದರೂ ಸತ್ತರೇ ಖುಷಿ ಇಮ್ಮಡಿಯಾಗುವ ಪ್ರಸಂಗ, ಗೋರಿ ಮೇಲಿನ ಗೋಧಿ ಮತ್ತು ಉಪ್ಪು ಸ್ವಲ್ಪ ದಿನಗಳಾದರೂ ಹಸಿವನ್ನು ಹೋಗಲಾಡಿಸಬಲ್ಲದು ಎಂಬ ಇರಾದೆಯಲ್ಲಿಯೇ ಸತ್ತ ಸುದ್ದಿಗಾಗಿ ಕಾಯುವದು, ಹೊಲಗೇರಿಯಿಂದ ಹೊರದೇಶಕ್ಕೆ ಆತ್ಮಕಥೆಯಲ್ಲಿ ಹೇಳಲೇಬೇಕಾದ ಮಹತ್ವದ ವಿಷಯವೆಂದರೆ, ಲೇಖಕನ ತಾಯಿ ನಿಂಬೆವ್ವನ ಪಾತ್ರ ತುಂಬಾ ಗಮನ ಸೆಳೆಯುತ್ತದೆ. ಎಂತಹ ಕಷ್ಟ ಬಂದರು ಮಕ್ಕಳಿಗೆ ಅದರ ಗಾಢ ಅರಿವು ಆಗದಂತೆ, ತನ್ನ ಕುಟುಂಬದ ಜವಾಬ್ದಾರಿ ಹೊತ್ತ ನಿಂಬೆವ್ವಾ ಇಲ್ಲಿ ಮುಖ್ಯವಾಗುತ್ತಾಳೆ. ತಪ್ಪಾದಾಗ ತಿದ್ದುವ ಕಷ್ಟಕ್ಕೆ ಎದೆಗುಂದದ ದಿಟ್ಟ ಮಹಿಳೆಯಾಗಿದ್ದಾಳೆ.
ಕೇರಿಯಲ್ಲಿ ಬದುಕನ್ನು ಸಾಗಿಸುವ, ದೇವದಾಸಿಯರೆಂದು ಹಣೆಪಟ್ಟಿ ಕಟ್ಟಿಕೊಂಡು ಅವಮಾನಿತರಾದ ದೇವದಾಸಿಯರ ಮನಸ್ಸನ್ನು ಪರಿವರ್ತಿಸಿ ಅವರನ್ನು ಸರಿದಾರಿಗೆ ತಂದು ಸಮಾಜದಲ್ಲಿ ಒಂದಾಗಿ ಬದುಕುವಂತೆ ಮಾಡಿದ್ದು ಹೀಗೆ ಅನೇಕ ಘಟನೆಗಳನ್ನು ಒಡಮೂಡಿಸಿದ್ದಾರೆ. ಹೊಲಗೇರಿಯಿಂದ ಹೊರದೇಶಕ್ಕೆ ಆತ್ಮಕಥೆಯಲ್ಲಿ ಇಪ್ಪತ್ತಮೂರು ಅಧ್ಯಾಯಗಳನ್ನು ಒಳಗೊಂಡ ಆತ್ಮಚರಿತ್ರೆಯಾಗಿದೆ. ಶಿವಪುತ್ರ ಅಜಮನಿ ಅವರು ಸಮಾಜದಲ್ಲಿ ನಡೆಯುವ ಜಾತಿ ಪಿಡುಗಿನ ಬಗ್ಗೆ ದ್ವನಿ ಎತ್ತಿದ್ದಾರೆ. ಸಮಾಜದಲ್ಲಿ ನಡೆಯುವ ಅನ್ಯಾಯ, ಅಚಾತುರ್ಯ, ಅವಮಾನಗಳ ವಿರುದ್ಧ ಧ್ವನಿಯಾಗಿ ಸಮಾಜದಲ್ಲಿ ಎಲ್ಲರೂ ಒಂದೇ ಎಂದು ಹೇಳುವ ಉದ್ದೇಶ ಇಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ.
ಶಿವಪುತ್ರ ಅಜಮನಿಯವರು ದಲಿತ ಸಂವೇದನೆಯನ್ನು ಬಿಡಿ ಬಿಡಿಯಾಗಿ ಅಕ್ಷರಗಳ ಮೂಲಕ ಉಣಬಡಿಸುತ್ತಾರೆ. ಇಡೀ ಆತ್ಮಕಥನದ ಉದ್ದಕ್ಕೂ, ಶಿವಪುತ್ರ ಅಜಮನಿಯವರು ನಿರೂಪಕರಾಗಿ ತಮ್ಮದೇ ಶೈಲಿಯ ಉತ್ತರ ಕರ್ನಾಟಕದ ದೇಶಿಯ ಭಾಷೆಯ ಸೊಗಡನ್ನು ಕಟ್ಟಿಕೊಡುತ್ತಾರೆ. ಉತ್ತರ ಕರ್ನಾಟಕದ ಜವಾರಿ ಭಾಷೆಯನ್ನು ನೇರಾ ನೇರವಾಗಿ ಬಳಸಿಕೊಂಡು ಓದುಗರಿಗೆ ಹತ್ತಿರವಾಗುತ್ತಾರೆ. ಇಲ್ಲಿನ ಬರಹ ಲೋಹದ ಹಕ್ಕಿಯೊಳಗೆ ತಣ್ಣಗೆ ಪ್ರವೇಶ ಬಯಸಿ ಅಂತರ್ಯದ ಒಳಬೇಗುದಿಗೆ ತಂಪೆರೆಯುವ ಕೆಲಸ ಮಾಡುತ್ತದೆ.
**********************************************
ಡಾ.ಸುಜಾತಾ ಸಿ.
ಮೇಡಮ್ ತುಂಬಾ ಚೆನ್ನಾಗಿ ಬರೆದಿದ್ದೀರಿ.ಇಡಿ ಪುಸ್ತಕ ನಾನು ಓದಬೇಕು ಅನಸತಿದೆ. ಲೋಹದ ಹಕ್ಕಿಯೊಳಗೆ ತಣ್ಣಗೆ ಪ್ರವೇಶ ಎಂಬ ಟೈಟಲ್ ತುಂಬಾ ಚೆನ್ನಾಗಿದೆ. ಬುಕ್ಸ್ ಬಗ್ಗೆ ನಿಮ್ಮ ಅಭಿಪ್ರಾಯ ನಿಜಕ್ಕೂ ಚೆನ್ನಾಗಿದೆ ಮೇಡಮ್.ದಲಿತರ ನೋವು ಕೆಲವೊಂದು ಕಡೆ ಕೆಲವೊಂದು ರೀತಿಯಲ್ಲಿವೆ. ಬುಕ್ಸ್ ಓದಬೇಕು ಅನಸ್ತೀದೆ
Thank you mam
ಅಜಮನಿಯವರ ಹೊಲಗೇರಿ ಯಿಂದ ವಿದೇಶ ದವರೆಗೆ ಕ್ರೃತಿಯ ವಾಸ್ತವ ಚಿತ್ರಣವನ್ನು ಬಿಚ್ಚಿಡುತ್ತ ಬಹಳ ಸೂಕ್ಷ್ಮವಾಗಿ ವಿಮರ್ಶೆ ಮಾಡಿದ್ದಕ್ಕೆ ಧನ್ಯವಾದಗಳು.ಪ್ರೊ.ದೊಡ್ಡಣ್ಣ ಬಜಂತ್ರಿ
Kindly touchable matter. nice tought
Super